ಕನ್ನಡ ಸಾಹಿತ್ಯ ಪರಿಷತ್ತು ಇಷ್ಟೂ ಕಾಲ ಸ್ವಾಯತ್ತವಾಗಿತ್ತು. ಯಾವ ಅಧ್ಯಕ್ಷರೂ ಸರ್ಕಾರದೆದುರು ಮಂಡಿಯೂರಿರಲಿಲ್ಲ. ಸರ್ಕಾರ ಸಮ್ಮೇಳನಕ್ಕೆ ಕೊಡುವ ಹಣ ಜನರ ತೆರಿಗೆಯಿಂದ ಬಂದದ್ದು. ಜನತೆಗೆ ಋಣಿಯೇ ವಿನಾ ಪ್ರಭುತ್ವಕ್ಕಲ್ಲ.
ಆದರೆ ಇವತ್ತಿನ ಪತ್ರಿಕೆಯಲ್ಲಿ ಪರಿಷತ್ ಅಧ್ಯಕ್ಷರ ಹೇಳಿಕೆ ಅಚ್ಚರಿ ಹುಟ್ಟಿಸಿದೆ. ಮಂತ್ರಿಗಳ ದಾಸಾನುದಾಸನಂತೆ ವರ್ತಿಸಿದೆ. ಜಿಲ್ಲಾ ಪರಿಷತ್ತಿನ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡಿಲ್ಲ. ಕಾರಣ ಮಂತ್ರಿಗಳ ಆಜ್ಞೆ! ಸಮ್ಮೇಳನಾಧ್ಯಕ್ಷರ ಆಯ್ಕೆಯ ಬಗ್ಗೆ ಎದ್ದ ತಕರಾರು ಕಾರಣ.
ಇನ್ನು ಮುಂದೆ ಸಾಹಿತ್ಯಕ ಕಾರ್ಯಕ್ರಮಗಳನ್ನೂ ಸರ್ಕಾರ ಹೇಳಿದವರನ್ನಿಟ್ಟುಕೊಂಡು ಮಾಡಬೇಕೆ? ಈ ಹಿಂದೆ ಶಿವಮೊಗ್ಗೆಯ ಸಾಹಿತ್ಯ ಸಮ್ಮೇಳನದ ಒಂದು ಗೋಷ್ಠಿ ಗೆ ಗೌರಿಲಂಕೇಶ್ ಅವರನ್ನು ಕರೆಯಲಾಗಿತ್ತು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ತಕರಾರು ಮಾಡಿದರು .
ಆದರೆ ಆಗಿನ ಪರಿಷತ್ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲರು ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಅವರಂದುಕೊಂಡ ಹಾಗೆಯೇ ಸಮ್ಮೇಳನ ಮಾಡಿದರು. ಅದು ಸಾಹಿತ್ಯದ ಶಕ್ತಿ.ಆದರೆ ಈಗ???????
ಇದೇ ಜನವರಿ 10ಮತ್ತು 11ರಂದು ಶೃಂಗೇರಿಯಲ್ಲಿ ಹತ್ತನೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜನಪರ ಹೋರಾಟಗಾರ ಮತ್ತು ಸಾಹಿತಿ ಕಲ್ಕುಳಿ ವಿಠಲ ಹೆಗಡೆಯವರನ್ನು ಸಮ್ಮೇಳನಾದ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಈಗಾಗಲೆ ಎಲ್ಲರಿಗು ತಿಳಿದ ವಿಷಯ.
ಹೆಗಡೆಯವರ ಆಯ್ಕೆಯೀಗ ಜಿಲ್ಲೆಯಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದೆ. ಅವರ ಆಯ್ಕೆಯಾದಾಗ ಆರಂಭದಲ್ಲಿ ಕೇಳಿ ಬಂದಿದ್ದು ಪರಿಷತ್ತಿನ ಒಂದು ಗುಂಪು ಯಾರನ್ನೂ ಕೇಳದೆ ಏಕಮುಖಿಯಾಗಿ ತೀರ್ಮಾನ ತೆಗೆದುಕೊಂಡಿದೆಯೆಂಬುದಾಗಿತ್ತು. ಮತ್ತು ಈಬಗ್ಗೆ ಒಂದಷ್ಟು ವಾದ ಪ್ರತಿವಾದಗಳು ನಡೆದವು.ಮೊದಲಿನಿಂದಲೂ ಹೆಗಡೆಯವರ ಜನಪರ ಹೋರಾಟಗಳನ್ನು ವಿರೋಧಿಸುತ್ತ ಅಸಹನೆ ತೋರಿಸುತ್ತ ಬಂದಿದ್ದ ಬಲಪಂಥೀಯ ವಿಚಾರಧಾರೆಯ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಅಖಾಡಕ್ಕಿಳಿದು ಹೆಗಡೆಯವರ ಅದ್ಯಕ್ಷತೆಯನ್ನು ವಿರೋಧಿಸಿ ಹೇಳಿಕೆ ನೀಡ ತೊಡಗಿದವು.
ಇದೀಗ ಈ ವಿರೋಧ ಸಂಘಟನಾತ್ಮಕ ರೂಪ ಪಡೆದುಕೊಂಡು ಬಿ.ಜೆ.ಪಿ. ಭಜರಂಗದಳ, ಎ.ಬಿ.ವಿ.ಪಿ.ಗಳು ‘ಕಸಾಪ ಉಳಿಸಿ’ ಹಾಗು ‘ನಕ್ಸಲ್ ವಿರೋದಿ ಹೋರಾಟ ಸಮಿತಿ’ ಎಂಬ ಬ್ಯಾನರಿನ ಅಡಿಯಲ್ಲಿ ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಸಮಾವೇಶ ನಡೆಸಿವೆ. ಜೊತೆಗೆಸಮ್ಮೇಳನವನ್ನು ನಡೆಸಿದರೆ ರೌದ್ರಾವತಾರಕ್ಕೆ ಅವಕಾಶ ನೀಡಿದಂತಾಗುತ್ತದೆಯೆಂಬ ಎಚ್ಚರಿಕೆಯನ್ನೂ ನೀಡಿವೆ
ಜಿಲ್ಲೆಯ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಮತ್ತು ಪರಿಷತ್ತಿನ ಒಳರಾಜಕಾರಣಗಳಿಂದ ಇದುವರೆಗು ಹೆಗಡೆಯವರ ಕೈತಪ್ಪುತ್ತಿದ್ದ ಅದ್ಯಕ್ಷತೆಯ ಮನ್ನಣೆ ಈ ಬಾರಿ ಅವರಿಗೆ ದೊರಕಿದ್ದರಲ್ಲಿ ಅಚ್ಚರಿ ಪಡುವಂತಹುದೇನೂ ಇರಲಿಲ್ಲ. ಯಾಕೆಂದರೆ ಈಗ ಜಿಲ್ಲೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರ ಆಯ್ಕೆ ಅವರ ಅರ್ಹತೆಗೆ ಸಂದದ್ದಾಗಿತ್ತು.ಅಕಾಡೆಮಿ ಪ್ರಶಸ್ತಿ ಮಾತ್ರವಲ್ಲದೆ ಚದುರಂಗ ಪ್ರಶಸ್ತಿ ಸಹ ಹೆಗಡೆಯವರಿಗೆದೊರಕಿದೆ. ಇಷ್ಟೆಲ್ಲ ಅರ್ಹತೆಗಳ ನಡುವೆಯೂ ಯಾಕೆ ಹೆಗಡೆಯವರನ್ನು ವಿರೋಧಿಸಲಾಗುತ್ತಿದೆ ಎನ್ನುವುದನ್ನು ನೋಡಿದರೆ ಚಿಕ್ಕಮಗಳೂರು ಜಿಲ್ಲೆಯನ್ನು ಕಾಡುತ್ತಿರುವ ಮೂಲಭೂತವಾದ ಶಕ್ತಿಗಳ ವಿರಾಟ್ ಸ್ವರೂಪ ಪರಿಚಯವಾಗುತ್ತದೆ.
ಮೊದಲಿನಿಂದಲೂಹೆಗಡೆಯವರು ದಲಿತರ,ಬಡವರ, ಆದಿವಾಸಿಗಳ ಪರ ಹೋರಾಟ ಮಾಡಿಕೊಂಡೆ ಬದವರು. ಈ ಹೋರಾಟಗಳ ಕಾರಣದಿಂದ ಅವರಿಗೆ ಲಭ್ಯವಾಗುತ್ತಿದ್ದ ಜನಪ್ರಿಯತೆಯನ್ನು ಸಹಿಸದ ಮೇಲ್ವರ್ಗಗಳ ಭೂಮಾಲೀಕರು, ಬಂಡವಾಳಶಾಹಿ, ಕೋಮುವಾದಿ ಶಕ್ತಿಗಳು ಹಿಂದಿನಿಂದಲೂ ಹೆಗಡೆಯವರ ವಿರುದ್ದ ಕಿಡಿಕಾರುತ್ತಲೇ ಬಂದಿದ್ದಾರೆ. ಈ ಹಿಂದೆ ಇವರ ವಿರುದ್ದ ಅಟ್ರಾಸಿಟಿ ಸೇರಿದಂತೆ ಹತ್ತಾರು ಸುಳ್ಳು ಕೇಸುಗಳನ್ನು ಹಾಕಿಸಿ, ನಕ್ಸಲ್ ಎಂಬ ಹಣೆಪಟ್ಟಿಯನ್ನೂ ಕಟ್ಟಿ ಹೆಗಡೆಯವರನ್ನುಹಣಿಯಲು ಯತ್ನಿಸುತ್ತಲೇ ಬಂದಿದ್ದಾರೆ.
ಹೆಗಡೆಯವರ ಆಯ್ಕೆಯನ್ನು ವಿರೋಧಿಸುವ ಮತ್ತು ಅವರ ಸಿದ್ದಾಂತಗಳನ್ನು ಧಿಕ್ಕರಿಸಿ ಪ್ರತಿಭಟಿಸುವ ಎಲ್ಲ ಹಕ್ಕುಗಳು ಜನರಿಗೆ ಮತ್ತು ಸಂಘಟನೆಗಳಿಗೆ ಇವೆ. ಆದರೆ ಸಮಾವೇಶ ನಡೆಸಿ ಸಮ್ಮೇಳನ ನಡೆದರೆ ಉಗ್ರವಿರೋಧವನ್ನು ಎದುರಿಸಬೇಕಾಗುತ್ತದೆ, ಸಮ್ಮೇಳನರದ್ದು ಪಡಿಸಿ ಎಂದು ಪರೋಕ್ಷವಾಗಿ ಬೆದರಿಕೆ ಹಾಕುವ ಮೂಲಕ ಕೆಲವು ಸಂಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಅಣಕಿಸಲು ಹೊರಟು ನಿಂತಿವೆ.
ಇಂತಹ ಸಂದರ್ಭದಲ್ಲಿ ನಾಡಿನಸಾಹಿತಿಗಳು, ಪ್ರಗತಿಪರ ಚಿಂತಕರು ಕಲ್ಕುಳಿಯವರ ಪರ ಅಂದರೆ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ವಿರುದ್ದ ನಿಲ್ಲಬೇಕಾಗಿದೆ.
=============================
ಕು.ಸ.ಮಧುಸೂದನ
ಸಾಹಿತ್ಯ ಪರಿಷತ್ ಸಹಿತ.ಎಲ್ಲ ಸಾಹಿತ್ಯ ಸಂಸ್ಕೃತಿ ಸಂಬಂಧ ಸಂಸ್ಥೆ ಗಳು ಸರಕಾರದ ಕೈಗೊಂಬೆಗಳಾಗಿವೆ.ಸರಕಾರದ ಫಲಾಪೇಕ್ಷ ಅಪೇಕ್ಷೆ ಯಲ್ಲಿ ರುವವರ ಡೊಗ್ಗುಸಲಾಮ ಇಡೀ ಸಾಹಿತ್ಯ ಲೋಕವನ್ನು ನಾಚಿಕೆ ಗೀಡು ಮಾಡುತ್ತಿವೆ.. ಸರಕಾರದ ಹಂಗಿಲ್ಲದೆ ಇಂಥ ಕಾರ್ಯಕ್ರಮ ಗಳು ನಡೆಯುವಂತಾಗಬೇಕು.ದೊಡ್ಡ ಸಾಹಿತಿ ಗಳೆನಿಸಿ ಕೊಃಡವರೂ ಇಂಥ ಸಂದರ್ಭದಲ್ಲಿ ಉಸಿರು ಎತ್ತುವದಿಲ್ಲ್ಲ.
ದೊಡ್ಡದಲ್ಲ ಸಣ್ಣಪುಟ್ಟ ವಿಷಯಗಳಲ್ಲೂ ಪರಿಷತ್ತು ಸೋಲುತ್ತಿದೆ. ಪ್ರತಿಬಾರಿ ಶನಿವಾರ ಭಾನುವಾರಗಳಲ್ಲಿ ಸಮ್ಮೇಳನ ಮುಗಿಯುತ್ತಿತ್ತು. ಈ ಬಾರಿ ವಿರೋಧದ ನಡುವೆಯೂ ವಾರದ ಮಧ್ಯದಲ್ಲಿ ನಡೆಸಲಾಗುತ್ತಿದೆ. ಪುಸ್ತಕ ಮಳಿಗೆಗಳಿಗೆ ಜನ ಬರುತ್ತಿದ್ದುದೇ ಮುಖ್ಯವಾಗಿ ಭಾನುವಾರಗಳಂದು. ಆ ಮಟ್ಟಿಗೆ ಜನರನ್ನು ಸಮ್ಮೇಳನದಿಂದ ದೂರಯಿಟ್ಟ ಶ್ರೀಯ ಇವರದ್ದು.
ಇನ್ನು ಸಮ್ಮೇಳನದಲ್ಲಿ ಸನ್ಮಾನಿತರಾಗಲು ಮಾನದಂಡ ಪುಸ್ತಕ ಬರೆದಿರಬೇಕಂತೆ! ಇದೇನು ಸಾಹಿತ್ಯ ಪ್ರಶಸ್ತಿಯೇ! ಇದಕ್ಕೆ ಸಾಹಿತ್ಯಕ ಮಹತ್ವೇನಿಲ್ಲ, ಆದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನುಡಿಯ ನಾನಾ ಕ್ಷೇತ್ರಗಳಲ್ಲಿನ ಸಾಧಕರುಗಳಿಗೆ ಕನ್ನಡಿಗರ ಪರವಾಗಿ ತೋರುವ ಒಂದು ಗೌರವ ಅದು ಅಷ್ಟೇ. ಪುಸ್ತಕ ಬರೆದಿರಬೇಕು ಎಂಬ ಬುದ್ದಿಗೇಡಿ ನಿಯಮವಿಟ್ಟು ಸಾಹಸ, ಸೇವೆ, ಶಿಕ್ಷಣ ಹೀಗೆ ಅನೇಕ ಕ್ಷೇತ್ರದವರನ್ನು ದೂರಯಿಟ್ಟರು. ಇದರಿಂದ ನನಗೆ ಆಗಬೇಕಾದುದೇನಿಲ್ಲ. ಸನ್ಮಾನಿಸಿಕೊಳ್ಳುವಂತಹ ಸಾಧನೆ ನಾನು ಮಾಡಿಲ್ಲ ಜೊತೆಗೆ ಯಾರ ಪರವಾಗಿಯೂ ನಾನು ಲಾಬಿ ಮಾಡುತ್ತಿಲ್ಲ. ಆದರೆ ಸಣ್ಣ ವಿಷಯಗಳಲ್ಲೂ ಪರಿಷತ್ತು ಸೋಲುತ್ತಿರುವುದು ವಿಷಾದನೀಯ.
ಶುಭವಾಗಲಿ! ಪರಿಷತ್ತು ಕನ್ನಡಿಗರ, ಕನ್ನಡಕ್ಕಾಗಿರುವ ಹಾೂ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿಯಲಿ!