ಸಾಹಿತ್ಯಪರಿಷತ್ತಿನ ಗಂಡಾಳ್ವಿಕೆಗೆ ಮತ್ತೊಂದು ಪ್ರಾತ್ಯಕ್ಷಿಕೆ..

ನಾ ದಿವಾಕರ

ಸಾಹಿತ್ಯಪರಿಷತ್ತಿನ ಗಂಡಾಳ್ವಿಕೆಗೆ ಮತ್ತೊಂದು ಪ್ರಾತ್ಯಕ್ಷಿಕೆ –ಹಾವೇರಿ
ಪ್ರತಿಬಾರಿಯೂ ಮಹಿಳಾ ಪ್ರಾತಿನಿಧ್ಯ ಆಗ್ರಹದ-ಚರ್ಚಾಸ್ಪದ ವಿಷಯವಾಗುವುದು ದುರಂತವಲ್ಲವೇ ?

ಭಾರತದ ಗಂಡಾಳ್ವಿಕೆಯ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯಗಳು ಮತ್ತು ಅಸೂಕ್ಷ್ಮತೆಗಳನ್ನು ಶೋಧಿಸುತ್ತಾ ಹೋದರೆ ಶತಮಾನಗಳಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ದುರಂತ ಎಂದರೆ ಈ ಹಲವು ಶತಮಾನಗಳ ಸಾಮಾಜಿಕ ಅಭ್ಯುದಯ, ಸಾಂಸ್ಕೃತಿಕ ಮುನ್ನಡೆ ಮತ್ತು ರಾಜಕೀಯ ಸಬಲೀಕರಣದ ಹೊರತಾಗಿಯೂ ಗಂಡಾಳ್ವಿಕೆಯ ನೆಲೆಗಳು ನಮ್ಮ ಸಮಾಜದ ಎಲ್ಲ ವಲಯಗಳಲ್ಲೂ, ಎಲ್ಲ ಸ್ತರಗಳಲ್ಲೂ, ಎಲ್ಲ ಆಯಾಮಗಳಿಂದಲೂ ಜೀವಂತಿಕೆಯನ್ನು ಕಾಪಾಡಿಕೊಂಡೇ ಬಂದಿವೆ. ಇಂದಿಗೂ ಸಹ ಮಹಿಳಾ ಸಮಾನತೆ ತಳಮಟ್ಟದ ಮಹಿಳೆಯರ ಪಾಲಿಗೆ ಮರೀಚಿಕೆಯೇ ಆಗಿದ್ದು, ಮಹಿಳಾ ಪ್ರಾತಿನಿಧ್ಯ ಎನ್ನುವುದು ಪುರುಷ ಸಮಾಜದಿಂದ ಕೇಳಿಪಡೆಯಬೇಕಾದ ವಸ್ತುವಾಗಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಕೇಂದ್ರ ಸರ್ಕಾರದ ಕಡತಗಳಲ್ಲಿ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿಯ ಮಸೂದೆ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆ ಎನ್ನಬಹುದು.

ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಗಂಡಾಳ್ವಿಕೆಯ ಮೂಲ ಬೇರುಗಳು ಇನ್ನೂ ಗಟ್ಟಿಯಾಗಿರುವುದರಿಂದ ರಾಜಕೀಯ ಮತ್ತು ಸಾಮಾಜಿಕ ನೆಲೆಯಲ್ಲಿ ವ್ಯಕ್ತವಾಗದ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಸಾಹಿತ್ಯ ವಲಯದಲ್ಲಿ ಕಂಡುಕೊಳ್ಳುವ ಪ್ರಯತ್ನಗಳು ಚಾರಿತ್ರಿಕವಾಗಿ ನಡೆದುಬಂದಿವೆ. ಆದರೆ ಭಾರತ ಬದಲಾಗಿದೆ. ಒಂದು ಹಂತದವರೆಗಾದರೂ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಸ್ತ್ರೀವಾದಿ ಚಳುವಳಿ ಮತ್ತು ಮಹಿಳಾ ಸಮೂಹದ ಹಕ್ಕೊತ್ತಾಯದ ಆಂದೋಲನಗಳೇ ಹೊರತು, ಪುರುಷ ಸಮಾಜದ ಔದಾರ್ಯವಲ್ಲ. ಆದರೂ ಇತ್ತೀಚಿನವರೆಗೆ ನಡೆದ ಶಾಸನಸಭೆಗಳ ಚುನಾವಣೆಗಳನ್ನು ಗಮನಿಸಿದಾಗ, ಪಿತೃ ಪ್ರಧಾನ ವ್ಯವಸ್ಥೆಯ ಕಬಂಧ ಬಾಹುಗಳು ತಮ್ಮ ಆಧಿಪತ್ಯವನ್ನು ಕಾಪಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಕರ್ನಾಟಕದ ಮುಂಬರುವ ಚುನಾವಣೆಗಳಿಗಾಗಿ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.

ಉತ್ಪಾದನಾ ಸಂಬಂಧಗಳು, ಸಾಧನಗಳು ಮತ್ತು ಉತ್ಪಾದನಾ ವಲಯದ ಮೂಲದ ತಳಹದಿಯ ಮೇಲೆ ನಿರ್ಮಾಣವಾಗುವ ಸಮಾಜದಲ್ಲಿ ಸಹಜವಾಗಿಯೇ ಅಧಿಕಾರ ರಾಜಕಾರಣವೂ ಈ ಸಂಬಂಧಗಳನ್ನು ನಿಯಂತ್ರಿಸುವ ಶಕ್ತಿಗಳ ಹಿಡಿತದಲ್ಲಿರುತ್ತದೆ. ರಾಜಪ್ರಭುತ್ವ ಮತ್ತು ಅರೆ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಸಹಜವಾಗಿಯೇ ಗಂಡಾಳ್ವಿಕೆಯ ನೆಲೆಗಳು ಮತ್ತಷ್ಟು ಗಟ್ಟಿಯಾಗುತ್ತಿವೆ. ಈ ಗಟ್ಟಿ ನೆಲೆಗಳನ್ನು ಭೇದಿಸಿ, ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುವುದು ಹಾಗೂ ಲಿಂಗ ಸೂಕ್ಷ್ಮತೆಯನ್ನು ಬೆಳೆಸುವುದು ಕಲೆ, ಸಾಹಿತ್ಯ ಮತ್ತು ರಂಗಭೂಮಿಯ ಆದ್ಯತೆಯಾಗಿರಬೇಕು. ಕನ್ನಡ ಸಾಹಿತ್ಯ ಲೋಕದ ಪ್ರಾತಿನಿಧಿಕ ಸಂಸ್ಥೆಯಾಗಿ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತು ಈ ಆದ್ಯತೆಯೊಂದಿಗೇ ತನ್ನ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿ ಮಹಿಳಾ ಸಾಹಿತಿಗಳ ಅಕ್ಷರ ಕೃಷಿಯನ್ನು “ಮಹಿಳಾ ಸಾಹಿತ್ಯ” ಎಂದು ವಿಂಗಡಿಸುವುದರಲ್ಲೇ ಕೆಲವು ಅಸೂಕ್ಷ್ಮತೆಗಳು ಅಡಗಿರುವುದನ್ನು ಅಲಕ್ಷಿಸಲಾಗುವುದಿಲ್ಲ. ಈ ಗಂಡಾಳ್ವಿಕೆಯ ಧೋರಣೆಯಿಂದಲೇ ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳು ಪ್ರಧಾನ ಗೋಷ್ಟಿಗಳಿಂದ ತಪ್ಪಿಸಿಕೊಂಡು, ಮಹಿಳಾ ಗೋಷ್ಠಿಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ಈ ವೈಪರೀತ್ಯವನ್ನು ಸಾಹಿತ್ಯ ಸಮ್ಮೇಳನಗಳಲ್ಲೂ ಕಾಣಬಹುದು.

ಸಾಹಿತ್ಯ-ಪರಿಷತ್ತು ಮತ್ತು ಸಮ್ಮೇಳನ:

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ, ಕರ್ನಾಟಕದ ಉಪಭಾಷೆಗಳ ಮತ್ತು ಸಮಸ್ತ ಕನ್ನಡಿಗರ ಒಂದು ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಾರ್ಥಕತೆ ಪಡೆಯಲು ಸಾಧ್ಯ. ಹಾಗೆಯೇ ನಮ್ಮ ಸಮಾಜವನ್ನು ಬಾಧಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಅಸೂಕ್ಷ್ಮತೆಗಳನ್ನು ಗ್ರಹಿಸಿ, ಸಾಹಿತ್ಯ ವಲಯದ ಮೂಲಕ ಸೃಜನಶೀಲ ಸಂವೇದನೆಯನ್ನು ಉದ್ಧೀಪನಗೊಳಿಸುವ ಪ್ರಯತ್ನಗಳಿಗೆ ಒತ್ತಾಸೆಯಾಗಿ ನಿಲ್ಲುವುದೂ ಸಾಹಿತ್ಯ ಪರಿಷತ್ತಿನ ಆದ್ಯತೆಯಾಗಬೇಕು. ದುರದೃಷ್ಟವಶಾತ್‌ ಸರ್ಕಾರದ ಅನುದಾನವನ್ನೇ ಅವಲಂಬಿಸಿ ನಡೆಯುವ ಪರಿಷತ್ತು ತನ್ನ ಅಂತಃಸತ್ವವನ್ನು ಕಳೆದುಕೊಂಡು, ಅಧಿಕಾರ ರಾಜಕಾರಣದ ಸಾಹಿತ್ಯಕ ಪ್ರತಿನಿಧಿಯಾಗಿ ಬೆಳೆದುಬಂದಿದೆ. ಈ ಕೊರತೆಯನ್ನು ಬದಿಗಿಟ್ಟು ನೋಡಿದಾಗಲೂ, ಸಾಹಿತ್ಯ ಪರಿಷತ್ತು ತನ್ನ ಪ್ರಾತಿನಿಧಿಕ ಸ್ವರೂಪವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಆದರೂ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ, ಪರಿಷತ್ತು ತನ್ನ ಜವಾಬ್ದಾರಿಯಿಂದ ವಿಮುಖವಾಗಿರುವುದನ್ನು ಪ್ರತಿ ಸಮ್ಮೇಳನದಲ್ಲೂ ಗುರುತಿಸಬಹುದು. ಜನವರಿ 6 ರಿಂದ 8ರವರೆಗೆ ಹಾವೇರಿಯಲ್ಲಿ ನಡೆಯಲಿರುವ 86ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಇದು ಢಾಳಾಗಿ ಕಾಣುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ 107 ವರ್ಷಗಳ ಇತಿಹಾಸದಲ್ಲಿ ಮಹೇಶ್‌ ಜೋಷಿ ಬಹುಶಃ 26ನೆಯ ಅಧ್ಯಕ್ಷರು. ಈವರೆಗೂ ಒಬ್ಬ ಮಹಿಳೆಯೂ ಈ ಸ್ಥಾನವನ್ನು ಪಡೆಯದಿರುವುದು ಸೋಜಿಗವಲ್ಲವೇ ? ಈ 107 ವರ್ಷಗಳಲ್ಲಿ ನಡೆದಿರುವ 85 ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಅಧ್ಯಕ್ಷರನ್ನು ಕಂಡಿರುವುದು ಕೇವಲ ನಾಲ್ಕು ಬಾರಿ. ಪರಿಷತ್ತು ಸ್ಥಾಪನೆಯಾದ 59 ವರ್ಷಗಳ ನಂತರ 1974ರಲ್ಲಿ ಮಂಡ್ಯದಲ್ಲಿ ನಡೆದ ಸಮ್ಮೇಳನಕ್ಕೆ ಜಯದೇವಿತಾಯಿ ಲಿಗಾಡೆ ಅಧ್ಯಕ್ಷತೆ ವಹಿಸಿದ್ದರು. ತದನಂತರ 2000ದಲ್ಲಿ ಬಾಗಲಕೋಟೆಯಲ್ಲಿ ಶಾಂತಾದೇವಿ ಮಾಳವಾಡ, 2004ರ ಮೂಡುಬಿದರೆಯಲ್ಲಿ ಕಮಲ ಹಂಪನ ಮತ್ತು 2010ರ ಗದಗ ಸಮ್ಮೇಳನದಲ್ಲಿ ಗೀತಾ ನಾಗಭೂಷಣ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮೊದಲ ಆರು ದಶಕಗಳ ಅಂತರವನ್ನು ಹೊರಗಿಟ್ಟು ನೋಡಿದರೂ ಕಳೆದ 50 ವರ್ಷಗಳಲ್ಲಿ ಕೇವಲ ಮೂವರು ಮಹಿಳಾಧ್ಯಕ್ಷರನ್ನು ಹೊತ್ತು “ಅಖಿಲ ಭಾರತ ಸಮ್ಮೇಳನ”ಗಳು ನಡೆದಿವೆ. ಏಕೆ ಹೀಗೆ ?

ಹಾವೇರಿ ಸಮ್ಮೇಳನದಲ್ಲೂ ಇದೇ ತಾರತಮ್ಯ ಮತ್ತು ಅಲಕ್ಷ್ಯ ಎದ್ದುಕಾಣುವಂತಿದೆ. ಉದ್ಘಾಟನಾ ಸಮಾರಂಭದ ಪತ್ರಿಕೆಯನ್ನು ಗಮನಿಸಿದರೆ ಅಲ್ಲಿ ಸಾಹಿತ್ಯಕ್ಕಿಂತಲೂ ರಾಜಕಾರಣವೇ ಪ್ರಧಾನವಾಗಿರುವಂತೆ ಕಾಣುತ್ತದೆ. ಸ್ವಾಗತ ಸಮಿತಿಯಲ್ಲಿ ಏಕೈಕ ಮಹಿಳೆಗೆ ಅವಕಾಶ ನೀಡಲಾಗಿದೆ. ಅಧಿಕಾರ ರಾಜಕಾರಣದ ಸಾಂಸ್ಥಿಕ ಮತ್ತು ಸಾಂಘಿಕ ಪ್ರತಿನಿಧಿಗಳ ಪೈಕಿಯಾದರೂ ಒಬ್ಬಿಬ್ಬರು ಮಹಿಳೆಯರಿಗೆ ಅವಕಾಶ ನೀಡಬಹುದಿತ್ತಲ್ಲವೇ ? ಸಮ್ಮೇಳನದಲ್ಲಿ ಪ್ರಧಾನ ವಸ್ತು ವಿಷಯಗಳನ್ನೊಳಗೊಂಡ ಗೋಷ್ಠಿಗಳಲ್ಲಿ ಮಹಿಳಾ ಸಾಹಿತಿಗಳಿಗೆ, ಚಿಂತಕರಿಗೆ ದೊರೆತಿರುವ ಅವಕಾಶ ನಗಣ್ಯ ಎನ್ನಬಹುದು. ಸಾಮರಸ್ಯದ ಭಾವ, ಕನ್ನಡದಲ್ಲಿ ಕಾನೂನು ಸಾಹಿತ್ಯ, ಮಾಧ್ಯಮ : ಹೊಸತನ ಮತ್ತು ಅವಿಷ್ಕಾರಗಳು , ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ, ದಮನಿತ ಲೋಕದ ಸಬಲೀಕರಣ, ಕನ್ನಡಪರ-ಪ್ರಗತಿಪರ ವರದಿಗಳ ಅನುಷ್ಟಾನ, ಕನ್ನಡ ಸಾಹಿತ್ಯದಲ್ಲಿ ವಿಷಯ ವೈವಿಧ್ಯ, ಪುಸ್ತಕೋದ್ಯಮದ ಸವಾಲುಗಳು, ಗಡಿನಾಡು ಮತ್ತು ಹೊರನಾಡ ಕನ್ನಡಿಗರ ತಳಮಳಗಳು, ಕನ್ನಡ ಚಳುವಳಿ ಪರಿಣಾಮ ಈ ಎಲ್ಲ ಪ್ರಧಾನ ಗೋಷ್ಠಿಗಳಲ್ಲೂ ಮಂಡಿಸುವ ವಿಚಾರಗಳಲ್ಲಿ ಸ್ತ್ರೀ ಸಂವೇದನೆ, ಸೂಕ್ಷ್ಮತೆ ಮತ್ತು ಲಿಂಗ ತಾರತಮ್ಯಗಳು ಸಹ ಪ್ರಧಾನವಾಗಿ ಬಿಂಬಿತವಾಗುತ್ತವೆ. ಆದರೆ ಈ ಗೋಷ್ಠಿಗಳಲ್ಲಿ ಮಹಿಳೆಯ ಪ್ರಾತಿನಿಧ್ಯ ಮಾತ್ರ ಶೂನ್ಯ.

“ವರ್ತಮಾನದಲ್ಲಿ ಮಹಿಳೆ” ಎಂಬ ಗೋಷ್ಠಿ ಮಹಿಳಾ ಪ್ರಧಾನವೇ ಆಗಿದ್ದರೂ ಪುರುಷ ಸಮಾಜದಲ್ಲಿ ಈಗಲೂ ಢಾಳಾಗಿ ಕಾಣುತ್ತಿರುವ ಗಂಡಾಳ್ವಿಕೆಯ ಲಕ್ಷಣಗಳ ಹಿನ್ನೆಲೆಯಲ್ಲಿ ಪುರುಷ ಸಮಾಜ ಲಿಂಗ ಸೂಕ್ಷ್ಮತೆಯನ್ನು ಹೇಗೆ ನೋಡುತ್ತಿದೆ ಎಂದು ಪುರುಷ ಸಾಹಿತಿಯಿಂದಲೇ ಪ್ರಸ್ತುತಪಡಿಸಬಹುದಿತ್ತು. ಮೇಲೆ ಉಲ್ಲೇಖಿಸಿದ ಪ್ರಧಾನ ಗೋಷ್ಠಿಗಳಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರಾತಿನಿಧ್ಯವನ್ನೇ ನೀಡದೆ, ವಂದನಾರ್ಪಣೆ, ನಿರೂಪಣೆ, ಆಶಯ-ಸ್ವಾಗತ ಭಾಷಣಗಳಿಗೇ ಸೀಮಿತಗೊಳಿಸುವುದು ಪರಿಷತ್ತಿನಲ್ಲಿರುವ ಗಂಡಾಳ್ವಿಕೆಯ ಲಕ್ಷಣಗಳಿಗೆ ಕನ್ನಡಿ ಹಿಡಿದಂತಿದೆ. ಹಾಗಿದ್ದರೂ ಸಮ್ಮೇಳನಾಧ್ಯಕ್ಷರಿಗೆ ಪೂರ್ಣಕುಂಭ ಸ್ವಾಗತ ಕೋರುವ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುವುದು ಅಸೂಕ್ಷ್ಮ ಆತ್ಮರತಿಯ ಮತ್ತೊಂದು ಆಯಾಮವಷ್ಟೇ. ಇದು ಕೇವಲ ಪ್ರಾತಿನಿಧ್ಯ, ವಿಚಾರ ಮಂಡನೆ ಅಥವಾ ಅವಕಾಶದ ಪ್ರಶ್ನೆ ಅಲ್ಲ. ಸಾಹಿತ್ಯ ಪರಿಷತ್ತಿಗೆ ಸಾಮಾಜಿಕ ಜವಾಬ್ದಾರಿ ಇರುವಂತೆಯೇ ಅದರ ಮೇಲ್ವಿಚಾರಣೆಯಲ್ಲಿ ನಡೆಯುವ “ ಅಖಿಲ ಭಾರತ ಸಮ್ಮೇಳನ”ಕ್ಕೂ ಒಂದು ಜವಾಬ್ದಾರಿ ಇರುವುದೇ ಆದರೆ, ನಮ್ಮ ಸುತ್ತಲಿನ ವಿದ್ಯಮಾನಗಳತ್ತ ಒಮ್ಮೆ ಗಮನಹರಿಸಬೇಕಲ್ಲವೇ ?

ಸ್ತ್ರೀ ಸಂವೇದನೆಯ ಸಾಹಿತ್ಯಕ ಅಭಿವ್ಯಕ್ತಿ:

ನಿರ್ಭಯಾಳಿಂದ ಶ್ರದ್ಧಾವಾಲ್ಕರ್‌ವರೆಗೆ, ಮಥುರಾದಿಂದ ಪಾಂಡವಪುರದ ಹಾಸ್ಟೆಲ್‌ವರೆಗೆ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯ, ಅತ್ಯಾಚಾರ, ಕ್ರೌರ್ಯ ಮತ್ತು ಗಂಡಾಳ್ವಿಕೆಯ ದಬ್ಬಾಳಿಕೆಗಳ ಹಿನ್ನೆಲೆಯಲ್ಲಿ ಪ್ರಧಾನ ಗೋಷ್ಠಿಯಾಗಿಯೇ ಮಹಿಳೆಯರ ಸಮಸ್ಯೆಗಳು ಆದ್ಯತೆ ಪಡೆಯಬೇಕಿತ್ತಲ್ಲವೇ ? ಹೆಣ್ತನವನ್ನೇ ಅವಮಾನಿಸುವ ಧ್ವನಿಗಳು ಮತ್ತು ಕೃತ್ಯಗಳು ಅಧ್ಯಾತ್ಮ ಕೇಂದ್ರಗಳಿಂದ ಅಧಿಕಾರ ಕೇಂದ್ರಗಳವರೆಗೆ ವಿಸ್ತರಿಸುವ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಸ್ತ್ರೀ ಸಂವೇದನೆಯನ್ನು ಹೇಗೆ ಪರಿಭಾವಿಸುತ್ತಿದೆ, ಹೇಗೆ ವ್ಯಾಖ್ಯಾನಿಸುತ್ತಿದೆ ಎಂಬ ಚರ್ಚೆ ಇಂದು ಮುಖ್ಯವಾಗಬೇಕಿತ್ತು. ಹಾಗೆಯೇ ಆರ್ಥಿಕ ಸಬಲೀಕರಣ ಮತ್ತು ಶೈಕ್ಷಣಿಕ ಸಮಾನಾವಕಾಶಗಳ ಹೊರತಾಗಿಯೂ ಮಹಿಳಾ ಸಮೂಹ, ಅಪ್ರಾಪ್ತ ಬಾಲಕಿಯರನ್ನೂ ಸೇರಿದಂತೆ, ಏಕೆ ದೌರ್ಜನ್ಯ, ತಾರತಮ್ಯ ಎದುರಿಸುತ್ತಿದೆ ಎನ್ನುವುದು ಪ್ರಧಾನ ಚರ್ಚೆಯ ವಿಷಯವಾಗಬೇಕಿತ್ತು. ಹಾಗೆಯೇ ಮಹಿಳಾ ಸಾಹಿತಿಗಳು, ಬರಹಗಾರರು, ಹೋರಾಟಗಾರರು ಸ್ತ್ರೀವಾದದ ಚೌಕಟ್ಟಿನಿಂದಾಚೆಗೂ ನಮ್ಮ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಬಲ್ಲರು ಎನ್ನುವುದನ್ನು ಪ್ರಧಾನವಾಗಿ ಬಿಂಬಿಸಬಹುದಲ್ಲವೇ? ಪ್ರಧಾನ ಗೋಷ್ಠಿಗಳಲ್ಲಿ ಇದರ ಸುಳಿವೇ ಇಲ್ಲದಿರುವುದು ಸೋಜಿಗವೇ ಸರಿ.

ಕರ್ನಾಟಕದಲ್ಲೇ ಕಳೆದ ಎರಡು ವರ್ಷಗಳಲ್ಲಿ ಉಗಮಿಸಿರುವ ಹಿಜಾಬ್‌ ವಿವಾದ, ಮುರುಘಾಮಠದ ಪ್ರಕರಣ, ಶಾಲೆಗಳಲ್ಲಿ ಹಾಸ್ಟೆಲುಗಳಲ್ಲಿ ನಡೆದಿರುವ ಅತ್ಯಾಚಾರದ ಪ್ರಕರಣಗಳು ಮತ್ತು ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯಗಳು ಸಾಹಿತ್ಯ ಸಮ್ಮೇಳನವೊಂದರಲ್ಲಿ ಧ್ವನಿಸುವುದು ಅವಶ್ಯವಲ್ಲವೇ ? ಸಾಮಾಜಿಕ ಮಾಧ್ಯಮಗಳು ಮುಖ್ಯವಾಹಿನಿಗೆ ಬಂದಿರುವ ಪ್ರಸ್ತುತ ಕಾಲಘಟ್ಟದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ಹೊರಗೆಡಹುವ ಸಾಹಿತ್ಯ ಹೇರಳವಾಗಿ ಹೊರಬರುತ್ತಿವೆ. ಈ ಸಂದರ್ಭದಲ್ಲಿನ ಮಹಿಳಾ ಸಾಹಿತ್ಯದ ಮತ್ತು ಒಟ್ಟಾರೆ ಸಾಹಿತ್ಯದ ಒಳನೋಟಗಳನ್ನು ಸೂಕ್ಷ್ಮತೆಯಿಂದ ಗಮನಿಸಬೇಕಾದ್ದು ಸಾಹಿತ್ಯ ಪರಿಷತ್ತು ಅಥವಾ ಸಮ್ಮೇಳನದ ಆದ್ಯತೆಯಾಗಬೇಕಿದೆ.

ಇಲ್ಲಿ ಕೊಡುವ-ಪಡೆದುಕೊಳ್ಳುವ ಅಥವಾ ಅವಕಾಶ ಕಲ್ಪಿಸುವ ವಿಚಾರ ಮುಖ್ಯವಾಗುವುದಿಲ್ಲ. ಪ್ರಾತಿನಿಧ್ಯ ದೊರೆಯುವುದೆಂದರೆ ಅದು ಗಂಡಾಳ್ವಿಕೆಯ ಅಧಿಕಾರವಾಣಿಯ ಮುಖೇನ ಆಗಕೂಡದು. ಒಂದು ಸಹಜ ಪ್ರಕ್ರಿಯೆಯಾಗಿ, ಸಾರ್ವಜನಿಕ ಅಭಿವ್ಯಕ್ತಿಯಾಗಿ ಕಾಣಬೇಕು. ಕನ್ನಡ ಮತ್ತು ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯೊಂದು ಮಹಿಳೆಯರಿಗೆ ಸ್ಥಾನಮಾನ ನೀಡುವುದು ಔದಾರ್ಯದ ಪ್ರಶ್ನೆಯೂ ಆಗಬೇಕಿಲ್ಲ. ಅದು ಹಕ್ಕಿನ ಪ್ರಶ್ನೆಯಾದರೆ ಅಡ್ಡಿಯಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲದಲ್ಲೇ ಸ್ತ್ರೀವಾದಿ ನೆಲೆಯನ್ನು ಗುರುತಿಸಲು ಕಷ್ಟವಾಗಬಹುದು. ಮಹಿಳಾ ಸಾಹಿತಿಗಳನ್ನು ಸ್ತ್ರೀವಾದಿ ಚಿಂತನೆಗಳಿಗೇ ಸೀಮಿತಗೊಳಿಸುವ ಸಂಕುಚಿತ ಮನೋಭಾವದಿಂದ ಪರಿಷತ್ತು ಮತ್ತು ಸಮ್ಮೇಳನದ ಆಯೋಜಕರು ಹೊರಬರಬೇಕಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಅಥವಾ ಕನ್ನಡ ನಾಡು ಈ ಪದಗಳ ವಿಶಾಲಾರ್ಥದಲ್ಲಿ ದಲಿತ, ಅಸ್ಪೃಶ್ಯ, ಅಲ್ಪಸಂಖ್ಯಾತ, ಅರೆಭಾಷಿಕ ಅಸ್ಮಿತೆಗಳಿರುವಂತೆಯೇ ಮಹಿಳಾ ಅಸ್ಮಿತೆಯೂ ಇರಬೇಕಾದ್ದು ಈ ಕಾಲಘಟ್ಟದ ಅನಿವಾರ್ಯತೆ. ಏಕೆಂದರೆ ಸಾಮುದಾಯಿಕ ನೆಲೆಯಲ್ಲಿ ಈ ಅಸ್ಮಿತೆಗಳ ಚೌಕಟ್ಟಿನಲ್ಲೇ ಮಹಿಳೆಯೂ ತನ್ನದೇ ಆದ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ.

ಸರ್ಕಾರದ ಅನುದಾನ ಮತ್ತು ಆಡಳಿತಾರೂಢ ಸರ್ಕಾರಗಳ ಕೃಪಾಕಟಾಕ್ಷದಿಂದಲೇ ನಡೆಯುವ ಸಾಹಿತ್ಯ ಸಮ್ಮೇಳನಗಳೆಂಬ ಅಕ್ಷರ ಜಾತ್ರೆಗಳಿಗೆ ಒಂದು ಹೊಸ ಸ್ವರೂಪ ನೀಡುವ ಜವಾಬ್ದಾರಿ ಸಾಹಿತ್ಯ ಪರಿಷತ್ತಿನ ಮೇಲಿದೆ. ಅಧಿಕಾರ ರಾಜಕಾರಣದ ಸಿಕ್ಕುಗಳಲ್ಲಿ ಸಿಲುಕಿರುವ ಪರಿಷತ್ತು ಈ ನಿಟ್ಟಿನಲ್ಲಿ ವಿಫಲವಾಗುವುದೇ ಆದರೆ, ಈ ಜವಾಬ್ದಾರಿಯನ್ನು ಕನ್ನಡದ ಸಾರಸ್ವತ ಲೋಕ ಸ್ವತಃ ಹೊತ್ತುಕೊಳ್ಳುವುದು ಅನಿವಾರ್ಯವಾಗುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ಸಂಕೋಲೆಗಳಿಂದ ವಿಮೋಚನೆ ಪಡೆಯುವುದರೊಂದಿಗೇ ವರ್ತಮಾನದ ಗಂಡಾಳ್ವಿಕೆಯ ಧೋರಣೆಯ ವಿರುದ್ಧ ಜಾಗೃತಿ ಮೂಡಿಸುವುದೂ ಸಾಹಿತ್ಯಾಸಕ್ತರ, ಸಾಹಿತಿಗಳ ಮತ್ತು ಸಾಹಿತ್ಯ ಪರಿಚಾರಕರ ಆದ್ಯತೆಯಾಗಬೇಕಿದೆ.

‍ಲೇಖಕರು Admin

March 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: