ಸಾವು ವಸೂಲಿಯ ಪಾಸಿಟಿವ್ ಗೆರೆಗಳು…

ಸದಾಶಿವ್ ಸೊರಟೂರು

ಸಾಮೂಹಿಕವಾಗಿ ಉರಿಯುತ್ತಿದ್ದ
ಚಿತೆಯಲ್ಲಿ
ನನ್ನ ಸಾವಿನ ತಿಥಿಯ
ಪಾವು ಅಕ್ಕಿಯನ್ನಾದರೂ
ಬೇಯಿಸಿಕೊಳ್ಳುವ
ಆಸೆ
ಎಂದೂ
ಕಣ್ಣಿನಿಂದ ಆರಿರಲಿಲ್ಲ..

ನೀನೊಬ್ಬ ಕರೋನ ರೋಗಿ
ಎಂದು ಬರುವ
ಮೆಸೇಜನ್ನು ಇಹ ಲೋಕದಿಂದ
ಹೊರಡಲು
ಕೊಡುವ ವೀಸಾ ಎಂಬುದನೂ
ನಾನು
ಮರೆತಿರಲಿಲ್ಲ..

ದೂರ ನಿಂತ,
ಬರೀ ದಿನ ನೂಕುವ
ಆಯಸ್ಸಿನ ಆಸೆಬುರುಕರ
ನಡುವೆ
ನನಗೂ ಒಂದು ಹಾಟ್
ಸೀಟು ನೀಡಿ
ಬಾಯಿ ತೆರೆಯಲು ಹೇಳಿದ
ಅವನಿಗೊಂದು ಕೃತಜ್ಞತೆ
ಖಂಡಿತ ಸಲ್ಲುತ್ತದೆ..

ಕತ್ತನ್ನು ಮೇಲೆ ಮಾಡಿ
ಎಲ್ಲೋ
ದೂರದಲ್ಲಿ ಮೇಲೆ ಅವಿತು ಕೂತ
ವೀಸಾ
ದಯಪಾಲಿಕನೆಡೆಗೆ
ಕಣ್ಣು ಮಿಟುಗಿಸಿ
ಬಾಯಿ ತೆರೆದು ಕಣ್ಣು ಮುಚ್ಚಿದೆ…

ಊಟದ ಮಧ್ಯದಲ್ಲಿ ಎದ್ದು
ಹೋದಂತೆ ಸತ್ತು ಹೋಗುವುದು
ಎಷ್ಟು
ಚೆಂದ
ಬದುಕಷ್ಟೇ ಚೆಂದ ಎಂದವರು
ಸಾವನ್ನೂ ಹೊಗಳುವ
ಮನಸು ಮಾಡಲಿ,

ಆಡಿದ ಅಂಗಳದಲೇ
ದೇಹ ಮಲಗಿಸಿ
ಬಂದ ಜನರ ಎಣಿಸಿ
ನನ್ನ ಒಳ್ಳೆತನ ಗುಣಿಸುವ,
ಮಾಡಿಸಿದ ಪಾಲಿಸಿ
ಗಳಿಸಿದ ಆಸ್ತಿ ತರ್ಕಿಸಿ
ಲಾಯಕ್ಕಿಲ್ಲ ಬಿಡು ಮಕ್ಕಳಿಗಾದೀತು
ಎಂಬ ಷರಾ ಬರೆಯುವ,
ಗಂಧದ ಕಡ್ಡಿ ಹೊಗೆ
ತಂತ್ರ ಮಂತ್ರಗಳು
ಹೂ ವಗೈರೆ ಪೂಜೆ ಗೀಜೆ ಒಗ್ಗದ
ನನಗೆ ಅವುಗಳಲ್ಲೆ ಅದ್ದಿ ಮಲಗಿಸಿ
ಸತ್ತು ಮೇಲೂ ಹಿಂಸಿಸುವ
ಇವರುಗಳ ಮುಂದೆ ಮತ್ತೆ ಮತ್ತೆ ಸಾಯಲೇ!?

ಸಾವನ್ನು ಪ್ರೀತಿಸುತ್ತೇನೆ
ಅದರಿಂದಲೇ ನನಗೆ ಬದುಕಿಗೂ ಪ್ರೀತಿ,
‘ಜೀವನ ಪ್ರೀತಿ’ ಎನ್ನುವ ಸುಳ್ಳೆ ಸುಳ್ಳೆ
ಕತೆಗಳ ಕಾಗದ ಸುರಳಿಗಳನ್ನು ಸುಟ್ಟು
ಒಂದು ಖಡಕ್ ಚಹಾ ಕಾಯಿಸಿಕೊಂಡು
ಕುಡಿಯುವುದು
ಸಾವುಗೊಂದು ಘನತೆ ತರುತ್ತದೆ..
ಅಲ್ಲವೇ?

ಸಾವೊಂದು ದಕ್ಕಲಿ
ಅನಾಮಧೇಯವಾಗಿ
ಕಾಡಲಿ ಅರಳಿದ ಹೂವೊಂದು ನಕ್ಕು
ಸುಮ್ಮನೆ ಹೊರಟು ಹೋದಂತೆ
ಯಾರು?, ಯಾರಿದು? ಎಂಬುದು
ಹೂಳುವವನಿಗೂ ನಿಗೂಢವಾಗಲಿ..

… ಹಣೆಬರಹ ಬರೆಯುವ
ಕಡ್ಡಿಯೋ ಎಂಬಂತೆ
ಒಂದು ತುಣುಕು ಕಡ್ಡಿಯನು
ಬಾಯಿ ಮೂಗಿನಲಿ ಅಲ್ಲಾಡಿಸಿ
ಜನ್ಮಕ್ಕಂಟಿದ ಪಾಪದ ಪರೀಕ್ಷೆಗೆ
ಒಡ್ಡೊವವನಂತೆ
ಬದುಕಿನ ಜೀವದ್ರವದಲ್ಲಿ ಬೆರೆಸಿ
ಪರೀಕ್ಷಾ ಕಿಟ್ಟಿನ ಒಂದು ಬದಿಗೆ ಸುರಿದ
ಅದು ಇಷ್ಟಿಷ್ಟೆ ಹರಿದರಿದು
ಗೆರೆಗಳನು ಮೂಡಿಸುವತ್ತಾ ಹೊರಟಿತು
ಒಂದು ಗೆರೆ ನೆಗೆಟಿವ್
ಎರಡು ಗೆರೆ ಪಾಸಿಟಿವ್
ದ್ರವ ಹರಿಯುತ್ತಲೇ ಇತ್ತು..
ಗೆರೆ ಒಂದೊ ಎರಡೊ?
ಈ ಗೆರೆಗಳು ಎಷ್ಟು ಸಾವನ್ನು
ವಸೂಲಿ ಮಾಡಿಲ್ಲ
ಅನಾಮಧೇಯವಾಗಿ!

ಎದೆ ಮುಟ್ಟಿಕೊಂಡೆ
ಥೇಟು ನನ್ನಂತೆ ತಣ್ಣಗಿತ್ತು..

ಸಾವೂ ಸುಲಭವಲ್ಲ
ಅನಾಮಧೇಯ ಸಾವಂತೂ ಇನ್ನೂ..!

ಗೆರೆ ಒಂದೊ ಎರಡೊ
ಬಾಕಿ ಬದುಕು ಉತ್ತರಿಸಲಿ!!!

‍ಲೇಖಕರು Admin

January 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಂಬನಿ…

ಕಂಬನಿ…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: