ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ‘ಹಲವು ನಾಡು ಹೆಜ್ಜೆ ಹಾಡು’

 ಕೆ.ಎನ್.ಲಾವಣ್ಯ ಪ್ರಭಾ

**

ಫೇಸ್‌ಬುಕ್‌ ಮೂಲಕ ಪರಿಚಯವಾದ ಪ್ರಸಿದ್ಧ ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆ ಅವರ  “ಹಲವು ನಾಡು ಹೆಜ್ಜೆ ಹಾಡು”- ಯೂರೋಪ್ ಅಮೆರಿಕ ಏಷ್ಯಾ ಖಂಡಗಳ ಅನೇಕ ದೇಶಗಳ ಪ್ರವಾಸ ಕಥನ. 2023-24 ನೇ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಡಾ.ಸಾರಾ ಅಬೂಬಕರ್  ಪ್ರಶಸ್ತಿ ಪುರಸ್ಕೃತ ಕೃತಿ. 

ಲೇಖಕಿ ಜಯಶ್ರೀ ದೇಶಪಾಂಡೆ ಅವರ ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ ಅನೇಕ ದೇಶಗಳನ್ನು ಪ್ರವಾಸ ಮಾಡುವ ಅವಕಾಶ ಅವರಿಗೆ ಒದಗಿ ಅಲ್ಲಿನ ತಮ್ಮೆಲ್ಲಾ ಅನುಭವಗಳ ಜೊತೆ ಭೌಗೋಳಿಕ ಐತಿಹಾಸಿಕ ಮೊದಲಾದ ಮಾಹಿತಿಗಳ ಜೊತೆ ಸಂಪನ್ನವಾದ ಈ ಕೃತಿ ಓದುತ್ತಾ ನಾನೂ ಲೇಖಕಿಯ ಜೊತೆ ಅಷ್ಟೂ ದೇಶಗಳ ಪ್ರವಾಸವನ್ನು ಕಣ್ತುಂಬಿಕೊಂಡೆ. ಮನಸ್ಸೂ ತುಂಬಿ ತುಳುಕಿತು ಎಂದರೆ ಉತ್ರೇಕ್ಷೆಯಾಗಲಾರದು. ಸರಳವಾದ ಆಡು ಭಾಷೆಯಿಂದ ಓದು ಸರಾಗವಾದರೂ ಅಗತ್ಯವಿದ್ದೆಡೆಗೆ ನಿಖರವಾದ ಮಾಹಿತಿ ಮತ್ತು ಕವಿಹೃದಯದ ಮನೋಹರ ರಮ್ಯ ಕಾವ್ಯಾತ್ಮಕ ವರ್ಣನೆಗಳು ಸುಂದರ ಚಿತ್ರಗಳ ಜೊತೆಗೆ ನಮಗೆ ಗಾಢವಾದ ಅನುಭವಗಳನ್ನು ನೀಡುವಂತಹದ್ದು. 

ಫಿನ್ಲೆಂಡ್ ನಲ್ಲಿ ಅವರ ಮಗಳು ವಾಸವಿದ್ದುದರಿಂದ ಅಲ್ಲಿಗೆ ಲೇಖಕಿ ಹಲವಾರು ಬಾರಿ ಹೋಗಿಬಂದ ಅನುಭವಗಳಿಂದ ಈ ಕೃತಿಯ 4 ಲೇಖನಗಳು ಫಿನ್ಲೆಂಡ್ ಕುರಿತಾಗಿಯೇ ಇವೆ. ಕೇವಲ 65 ಲಕ್ಷ ಜನಸಂಖ್ಯೆ ಇರುವ ಫಿನ್ಲೆಂಡ್ ನ ಭೂಮಿ ಕಾಡುಗಳು ಮತ್ತು ನೀರಿನಿಂದಲೇ ತುಂಬಿವೆ. ಇಲ್ಲಿ 1,88,000 ಸರೋವರಗಳಿವೆ! ಹಾಗಾಗಿಯೇ ಫಿನ್ಲೆಂಡ್ ನ್ನು Land of Lake ಎನ್ನುತ್ತಾರೆ. ಬೇಸಿಗೆ ಹೊರತು ಪಡಿಸಿ ಮಿಕ್ಕೆಲ್ಲಾ ಸಮಯ ಮೈನಸ್ ನಲ್ವತ್ತು ಡಿಗ್ರಿಗೆ ಹೋಗುವ ಹಿಮದ ಸಾಮ್ರಾಜ್ಯ. ಇತ್ತೀಚಿಗೆ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತಿರುವುದರ ಪರಿಣಾಮ ಧ್ರುವಗಳ ಬಳಿಯ ಇಂತಹ ದೇಶಗಳು ಮುಂದೆ ಹೆಚ್ಚು ಕಷ್ಟವನ್ನು ಅನುಭವಿಸಬೇಕಾಗುವುದೇನೋ ಎನಿಸಿತು. ಹಾಗಾದಿರಲಿ ಎಂಬ ಹಾರೈಕೆ ನನ್ನದು. ಆಸಕ್ತಿಕರ ಸಂಗತಿಯೆಂದರೆ ಇಲ್ಲಿನ ಜನಕ್ಕೆ ಹೊಲ ಗದ್ದೆ ಮನೆ ಇವರ ಆಸ್ತಿಯಲ್ಲ ಬದಲಿಗೆ ಇಂತಿಷ್ಟು ಎಕರೆ ಅರಣ್ಯವೇ ಆಸ್ತಿ. ಮರಗಳನ್ನು ದೈನಂದಿನ ಉಪಯೋಗಕ್ಕೆ ಕಡಿದರೂ ಅದನ್ನು ಮತ್ತೆ ಬೆಳೆಸುವ ಹೊಣೆಗಾರಿಕೆಯೂ ಅವರದೇ. ಲೇಖಕಿಯ ಮೊಮ್ಮಗಳು ಪೂರ್ವಿಯ ಕೇರ್ ಟೇಕರ್ ಅರವತ್ತರ ಈರ್ಯಾ ರೇತುಳ ಬೇಸಿಗೆ ಮನೆಯ ” ಸೌನಾ “ದ ವಿಶಿಷ್ಟ ಹಬೆಯ ಸ್ನಾನದ ಅನುಭವ… ಆಹಾ! ದಿನಕ್ಕೆ ಹಲವಾರು ಬಾರಿ ಮಾಡ್ತರಂತೆ. ಲೇಖಕಿ ಇದನ್ನು ಸ್ನಾನದ ಹಬ್ಬ ಎಂದು ಕರೆದಿರುವುದರಲ್ಲಿ ಉತ್ಪೇಕ್ಷೆಯಿಲ್ಲ. ಫಿನ್ಲೆಂಡ್ ನಲ್ಲಾಗುವ ಜೂನ್ 21  ಅಥವಾ 23 ರ ಮಧ್ಯರಾತ್ರಿಯಲ್ಲಾಗುವ ಸೂರ್ಯೋದಯ ” ಮಿಡ್ ಸಮ್ಮರ್ ಡೇ ” ಯಲ್ಲಿ ಸೂರ್ಯ ಉದಯಿಸುವ ಆ ಸಮಯದಲ್ಲಿ  “ಸುವೊಮಿ” ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಜನರ ಆಚರಣೆಗಳು ಸಂಭ್ರಮವನ್ನು ರಮ್ಯ ಮನೋಹರ ಕಾವ್ಯಾತ್ಮಕ ವರ್ಣನೆಗಳು ನಮ್ಮ ಕಣ್ಮುಂದೆ ಹೊಸಲೋಕವೇ ಸೃಷ್ಟಿಸಿಬಿಡುತ್ತವೆ. ಅತ್ಯಂತ ಅದ್ಭುತ! ಈ ಎಲ್ಲವನ್ನೂ ನೀವು ಓದಿಯೇ ಅನುಭವಿಸಬೇಕು. ಫಿನ್ಲೆಂಡ್ ನೋಡಬೇಕೆನಿಸುವ ಆಸೆ ಹುಟ್ಟಿದ್ದು ಸುಳ್ಳಲ್ಲ. 

ರಷ್ಯಾ ಭೇಟಿಯಲ್ಲಿ ಸೇಂಟ್ ಪೀಟರ್ಸ್ ಬರ್ಗ್ ನ ಅತ್ಯದ್ಭುತ ಪ್ರೇಕ್ಷಣೀಯ ಅಸಂಖ್ಯ ವಾಸ್ತುಶಿಲ್ಪದ ಭವನಗಳಿಂದಾಗಿ ಯುನೆಸ್ಕೋದಿಂದ World Heritage Center ಎಂದು ಗುರುತಿಸಿಕೊಂಡಿರುವ  ವಸ್ತುಭಂಡಾರ ಜಗತ್ತಿನಲ್ಲೇ 4ನೆಯ ಮತ್ತು ರಷ್ಯಾದ ಅತಿದೊಡ್ಡ ಕೆಥಡ್ರಲ್ ” ಸಂತ ಇಸಾಕ್ ಕೆಥಡ್ರಲ್” , ರಾಣಿ ಕ್ಯಾಥರೀನ್ ತನ್ನ ಚಳಿಗಾಲದ ಅರಮನೆಯನ್ನೇ ವಸ್ತು ಸಂಹ್ರಹಾಲಯವಾಗಿಸಿರುವ ಸುಂದರ ಹರ್ಮಿಟೇಜ್ ನಲ್ಲಿ ದೇಶ ವಿದೇಶಗಳ ಪ್ರಾಚೀನ ಪರಂಪರೆಗೆ ಸಂಬಂಧಿಸಿದ ಅನೇಕ‌ ಕಲಾಕೃತಿಗಳು, ಮೂರ್ತಿಗಳು, ಪುಸ್ತಕಗಳು ಮೊದಲಾದವುಗಳಿವೆ. ರಷ್ಯಾದ ಜನಪದ ಕಲೆಯ ಬೊಂಬೆಗಳಾದ ಮಾತ್ರೋಷ್ಕಾ ಮತ್ತು ಬಾಬೋಷ್ಕಾ , ಸಪ್ತ ಮಾತೃಕೆಗಳ ಬೊಂಬೆಗಳ ವರ್ಣನೆ ಮನ ಸೆಳೆಯಿತು. ಅವರ  “ಮಾತ್ರೋಷ್ಕಾ” ಪದ ನಮ್ಮ ಸಂಸ್ಕೃತದ “ಮಾತೃ” ಪದಕ್ಕೆ ಇರುವ ಸಾಮ್ಯತೆ ಹೊಸಚಿಂತನೆಗೆ ಒಡ್ಡುತ್ತದೆ. ಇಂತಹ ಸ್ಥಳಗಳಲ್ಲಿ ಪ್ರವಾಸಿಗರನ್ನು ವಂಚಿಸಿ ಹಣ ವಸೂಲಿ ಮಾಡುವ ನಕಲಿ ಕಾಪ್ ಗಳ ಭೇಟಿಯನ್ನೂ ಮಾಡಿಸಿ ಜಾಗರೂಕರಾಗಿರಬೇಕೆಂದು ಎಚ್ಚರಿಸುತ್ತಾರೆ. 

ಸ್ವೀಡನ್ ಭೇಟಿಯಲ್ಲಿ ಹೇಳುವ “ನೊಬೆಲ್ ವೆನ್ಯೂ” ಜಗತ್ತಿನ ಅಪ್ರತಿಮ ಮೇಧಾವಿಗಳು ಸಾಧಕರು ನೊಬೆಲ್ ಪ್ರಶಸ್ತಿ ಸ್ವೀಕರಿಸುವ ಸ್ಥಳ. ಲೇಖನ ಓದುತ್ತಾ ಮೈ ರೋಮಾಂಚನವಾಯ್ತು.

ಉತ್ತರ ಜೆಕ್ ರಿಪಬ್ಲಿಕನ್ ದೇಶದ ರಾಜಧಾನಿ ಪ್ರಾಗ್ ನಗರದ ” ಓಲ್ಡ್ ಟೌನ್ ಸಿಟಿ ಹಾಲ್” ನ ಪ್ರಪಂಚದ 3ನೇ ಪ್ರಾಚೀನ ಹಾಗೂ ನಿರ್ಮಾಣವಾದಾಗಿನಿಂದ ಕಾರ್ಯೋನ್ಮುಖವಾಗಿರುವ ಖಗೋಳ ಗಡಿಯಾರಗಳ ಇತಿಹಾಸ ಕುರಿತು ವಿಸ್ತೃತವಾದ ಐದಾರು ಪುಟಗಳ ಲೇಖನವೇ ಅದರ ಮಹತ್ವವನ್ನು ಹೇಳುತ್ತದೆ.

ಬುಡಾಪೆಸ್ಟ್ ಹಂಗೇರಿ ಸ್ಲೊವಾಕಿಯಾ ದೇಶಗಳ ಹೆಸರುಗಳ ಹಿಂದಿರುವ ವೈಶಿಷ್ಟ್ಯತೆ ಗಮನ ಸೆಳೆಯಿತು.

ಯೂರೋಪಿನ ಆಸ್ಟ್ರಿಯ ದೇಶದ ಹಿಮಚ್ಛಾದಿತ ರಮ್ಯ ಪರ್ವತಗಳ ವಿವರಣೆಯನ್ನು ಒಂದೇ ಸಾಲಿನಲ್ಲಿ  “ಹುಚ್ಚು ಹಿಡಿಸುವ ನಯನ‌ಮನೋಹರ ರಮ್ಯ ಪರ್ವತಾವಳಿ” ಎಂದು ಹೇಳುತ್ತಲೇ ಇದೊಂದೇ ಪದವೂ ಕಡಿಮೆಯೇ ಎನ್ನುತ್ತಾ ಪರ್ವತಗಳ ಚೆಲುವನ್ನು ವರ್ಣಿಸುವ ಲೇಖನ ಓದಿ ಈ ಹುಚ್ಚು ನಾನೂ ಹಿಡಿಸಿಕೊಳ್ಳಬೇಕೆನಿಸುವುದು ನನಗಷ್ಟೇ ಅಲ್ಲ ಪ್ರತಿ ಓದುಗನಿಗೂ ಅನಿಸಬಲ್ಲದು. ಡೋ..ರೆ..ಮಿ..ಪಾ..ಸೊ..ಲಾ..ಟಿ…ಡೋ…ಎಂಬ ಪಾಶ್ಚಿಮಾತ್ಯರ ಸರೆಗಮಾ ಪದನಿಸಾದಲ್ಲಿ ” ದಿ ಸೌಂಡ್ ಆಫ್ ಮ್ಯೂಸಿಕ್ ” ಚಲನಚಿತ್ರದಲ್ಲಿ ಮರಿಯಾ ಮತ್ತು ಕ್ಯಾಪ್ಟನ್ ವಾನ್ ಟ್ರಾಡ್ ರ ಪ್ರೇಮಕಥನ ಇಡೀ ಸಾಲ್ಸ್ ಬರ್ಗ್ ನಗರವನ್ನೇ ರಮ್ಯ ಪ್ರೇಮ ಕಥಾನಕವಾಗಿಸಿದ ಸಂಗತಿ ಓದಿ ಚಲನಚಿತ್ರ ಮತ್ತು ಅದರ ಕಥೆಯ ಬಗ್ಗೆ ಕುತೂಹಲವಾಯಿತು.

ಸಾಲ್ಜ್ ನದೀ ಕ್ರೂಸ್ ಬ್ರಿಜ್ ಮೇಲೆ ಅಸಂಖ್ಯಾತ ಜನರು ತಮ್ಮ ತಮ್ಮ ಇಚ್ಛೆಗಳನ್ನು ಹೇಳಿಕೊಂಡು ಕಟ್ಟಿರುವ ಸಾವಿರಾರು ಬೀಗಗಳು ಕತೆಗಳನ್ನೇ ಹೇಳುತ್ತವೆ. ಕಥೆಗಳ ಬಗ್ಗೆ ನನಗೆಷ್ಟೋ ಕಲ್ಪನೆಗಳು ಹುಟ್ಟಿಕೊಂಡವು.

ಜರ್ಮನಿಯ ಬರ್ಲಿನ್ ಪ್ರವಾಸದಲ್ಲಿ ಸಿಕ್ಕ ಚಾರ್ಲ್ಸ್ ಎಂಬ ವಾಹನದ ಡ್ರೈವರ್ ಮತ್ತು ಆತನ ಪ್ರೇಯಸಿಯ ಪ್ರೇಮಕಥೆ ಬರ್ಲಿನ್ ಗೋಡೆಯೊಂದಿಗೆ ಬೆಸೆದುಕೊಂಡಿರುವುದನ್ನು ಓದಿ…ಹೀಗೆ ಅದೆಷ್ಟೋ ಜನರ ಎಷ್ಟು ಕಥೆಗಳಿರಬಹುದು ಎನಿಸಿತು. ಚಾರ್ಲ್ಸ್ ಕಥೆಯಂತೂ…ವಿಭಿನ್ನ ಲವ್ ಸ್ಟೋರಿ…ಚಂದದ ಸಿನಿಮಾ ಆಗುವ ಕಥೆ. ಇನ್ನು ಜರ್ಮನಿಯ  “ಜ್ಯೂಯಿಷ್ ಹೋಲೋಕಾಸ್ಟ್ ಮೆಮೊರಿಯಲ್ ” ಹಿಟ್ಲರ್ ನ ಪೈಶಾಚಿಕ ಕೃತ್ಯಕ್ಕೆ ಕನ್ನಡಿ ಹಿಡಿದು ನಿಂತ ಸ್ಥಳ. ನೇಮಿಚಂದ್ರರ ಕೃತಿ ನೆನಪಾಯಿತು.

ಪ್ಯಾರಿಸ್ ನ ಭೂಗತ ಸಮಾಧಿಗಳ ಕ್ರಿಪ್ಟ್ ಲೂವ್ರ್ ನಲ್ಲಿ ವಿಕ್ಟರ್ ಹ್ಯೂಗೋನ ಡಾವಿಂಚಿ ಕೋಡ್ ಕಥೆ ಮತ್ತು ಅದರ ಸಿನಿಮಾ ಚಿತ್ರೀಕರಣ ನೆನಪಿಸಿಕೊಳ್ಳುವ ಲೇಖಕಿ ಬಾಲ್ಯದಲ್ಲೇ ನಾನು ಮೊದಲ ಬಾರಿಗೆ ಓದಿದ ಕಾದಂಬರಿ ಡಾವಿಂಚಿ ಕೋಡ್ ನ ಕನ್ನಡ ಅನುವಾದ ಕಾದಂಬರಿ ನನ್ನ ಮನಸ್ಸಿನ ಮೇಲೆ ಬೀರಿದ್ದ ಅಗಾಧ ಪ್ರಭಾವವನ್ನು ನೆನಪಿಸಿದರು. ಪ್ಯಾರಿಸ್ ನ‌ ಪ್ರಸಿದ್ಧ “ಲಾ ಲೂವ್ರ ” ಮ್ಯೂಸಿಯಂ ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯ. ಇಲ್ಲೇ ಜಗತ್ತಿನ ಲಿಯೋನಾರ್ಡ್ ಡಾವಿಂಚಿಯ  ಅತಿ ಸುಂದರ ಕಲಾಕೃತಿ ಹುಬ್ಬಿಲ್ಲದ ಸುಂದರಿ ” ಮೊನಾಲಿಸಾ” ಇರುವುದು. ( ಹರೆಯದಲ್ಲಿ ನಾನು ಮೊನಾಲಿಸಾ ಎಂಬ ಅತ್ಯಂತ ಸುಂದರ ಕವಿತೆ ಬರೆದಿದ್ದೆ ಕ್ರಮೇಣ ಎಲ್ಲೋ ಕಳೆದುಹೋಗಿದ್ದು ನೆನಪಾಯಿತು.) ತನ್ನೊಳಗಿನ ಸಕಲ ಆತ್ಮವಿಶ್ವಾಸವನ್ನು ತನ್ನ ಕಣ್ಣುಗಳ ತಣ್ಣನೆಯ ನೋಟ ಮತ್ತು ನಕ್ಕೂ ನಗದಿರುವಂತಿರುವ ತುಟಿಗಳ ಮೇಲಿನ ಮೃದು ಮಂದಹಾಸದಿಂದಲೇ ಜಗತ್ತಿನ ಶ್ರೇಷ್ಠ ಕಲಾಕೃತಿಯಾದದ್ದು ಇತಿಹಾಸ. ಆದರೆ ಈ ಕಲಾಕೃತಿ‌ ಮುಂದೆ ನಿಂತರೆ ಇಷ್ಟೆನಾ ಎನಿಸುವ ಸಾಮಾನ್ಯ ಸುಂದರಿಯನ್ನು ಹಲವಾರು ಕೋನದಲ್ಲಿ ನೋಡುವ ಬಗೆಯೂ ಬೇರೆ ತರವೇ ಇದೆಯಂತೆ. ಇದು ಲೇಖಕಿಯ ಅನುಭವವೂ ಹೌದು. 

ಇನ್ನು ಆ ಕಾಲದ ಮಹಾನ್ ಮೆಕ್ಯಾನಿಕಲ್ ಎಂಜಿನಿಯರ್ ಅಥವಾ ಶಿಲ್ಪಿ “ಗುಸ್ತಾವ್ ಐಫೆಲ್”  ನಿರ್ಮಿಸಿದ ಪ್ಯಾರಿಸ್ ನ  ಜಗತ್ಪ್ರಸಿದ್ಧ  ಐಫೆಲ್ ಟವರ್” ನ ಸೊಬಗು ಆಹಾ!….ಒಳಗಿನ ಲಿಫ್ಟ್ ಮೂಲಕ ಐಫೆಲ್ ಟವರ್ ನ ತುತ್ತ ತುದಿಗೇರಿದಾಗ ಕಾಣುವ ಸುತ್ತಮುತ್ತಲಿನ ಭವ್ಯ ದಿವ್ಯ ನೋಟದ ವರ್ಣನೆಗೆ ಸೋತೆ..‌

ದಿ ಹಂಚ್ ಬ್ಯಾಕ್ ಆಫ್ ನೋತ್ರದೋಮ್ ಕಾದಂಬರಿಯಲ್ಲಿ ಚರ್ಚಿನ ಗಂಟೆ ಬಾರಿಸುವ ಗೂನ ಕ್ವಾಸಿಮಡೋ ನ ದುರಂತ ಬದುಕಿನ ಚಿತ್ರ ಕಟ್ಟಿಕೊಡುವ ನೋತ್ರದೋಮ್ ಕೆಥೆಡ್ರಲ್ ಬಗ್ಗೆ ಬರೆಯುತ್ತಾ ಕಾದಂಬರಿಯ ಪಾತ್ರದ ಗೂನ ಕ್ವಾಸಿಮಾಡೋ ಇಲ್ಲಿ ಹೀಗೆ ನಿಂತು ಗಂಟೆ ಬಾರಿಸುತ್ತಿದ್ದನೇ ಎಂಬ ಕಲ್ಪನೆಗೆ ಜಾರುವ ಸಮಯದಲ್ಲಿ ಒಂದು ಕಾದಂಬರಿ ಮತ್ತು ಪಾತ್ರ ಓದುಗರ ಮನಸ್ಸಿನಾಳಕ್ಕೆ ಇಳಿಯುವ ಬಗೆಯನ್ನು ಕಟ್ಟಿಕೊಡುತ್ತದೆ.

ಆಶ್ವಿಚ್ ನ ನರಮೇಧದ ಭೀಕರ ತಿಳಿಸುವ ಪ್ರಪಂಚಕ್ಕೆ ತಿಳಿಸುವ ಸಂಗತಿಗಳನ್ನು ಡೈರಿಯಲ್ಲಿ ಬರೆದಿಟ್ಟು ತೀರಿಕೊಂಡ ಎಳೆ ಹುಡುಗಿಯರಾದ ಜ್ಯೂಯಿಷ್ ನ  “ಆನ್ನೆ ಫ್ರಾಂಕ್ ” ಮತ್ತು  “ಐರೀನ್ ಫಾಗೆಲ್” ನಾಝಿ ಆಡಳಿತದ ಜರ್ಮನಿ ಹೇಗೆ ಹಿಟ್ಲರನ ನರಮೇಧಕ್ಕೆ ಬಲಿಯಾದ ರಕ್ತಸಿಕ್ತ ಕಥೆ ನೆನಪಿಸುತ್ತಲೇ ಅಂತಹ ರಾಕ್ಷಸ ಕೇವಲ ಒಂದೇ ಒಂದು ಗುಂಡೇಟಿಗೆ ಸತ್ತದ್ದನ್ನು ಹೇಳುತ್ತಾ ಅವನಿಗೆ ಅದಕ್ಕಿಂತಲೂ ಕ್ರೂರ ಶಿಕ್ಷೆ ಆಗಬೇಕಿತ್ತು ಎನ್ನುವ ಲೇಖಕಿಯ ಆಲೋಚನೆ ನನ್ನದೂ ಹೌದು. 

ಆಸ್ಟ್ರೀಯದ ಹದಿನಾರನೇ ವಯಸ್ಸಿಗೆ ಸಾಮ್ರಾಟ ಫ್ರಾನ್ಸ್ ಜೋಸೆಫ್ ನ್ನು ವಿವಾಹವಾಗಿ ಸಾಮ್ರಾಜ್ಞಿ ಎನಿಸಿಕೊಂಡ ” ಸಿಸ್ಸಿ” ಎಂದೇ ಕರೆಯಲ್ಪಡುವ ಎಲಿಸಬೆತ್ ಳ ಭವ್ಯ ಅರಮನೆಯೇ ಇಂದಿನ ಎಲಿಸಬೇತ್ ಮ್ಯೂಸಿಯಂ. ಎಲಿಸಬೇತ್ ಳ ನೆಲಮುಟ್ಟುವ ಕೇಶರಾಶಿಯ ಸೌಂದರ್ಯದ ಜೊತೆ ಅವಳ ಯೋಚನಾ ಧಾಟಿ ಆಸಕ್ತಿ ಭಾವನಾತ್ಮಕ ಕರುಣೆ ತುಂಬಿದ ಮನಸ್ಸು , ರಾಜಕೀಯದ ಚಾಣಾಕ್ಷತೆ , ಶಾಂತಿ ಒಪ್ಪಂದಗಳು ಅವಳನ್ನು ನಿಜವಾದ ಸುಂದರಿಯಾಗಿಸಿದ ಬಗೆ ಅನನ್ಯ. ರಾಜ ಮನೆತನದ ವೈಷಮ್ಯಗಳು ಕುತಂತ್ರಗಳಿಂದ ನೊಂದಿದ್ದ ಕವಿಹೃದಯಿ ಒಬ್ಬ ಸಾಮಾನ್ಯನ ಚಾಕು ಇರಿತಕ್ಕೆ ಬಲಿಯಾದ ದುರಂತ ಮನ ಕಲಕುತ್ತದೆ. ಸಿಸ್ಸಿಯ ಕುರಿತು ಹಲವಾರು ಚಲನಚಿತ್ರಗಳು ಟಿವಿ ಸೀರಿಯಲ್ ಗಳು ಅಲ್ಲಿ ಪ್ರಸಿದ್ಧವಂತೆ.

ಅರಮನೆಯನ್ನೇ ತೊರೆದ ವಿರಾಗಿ ಬುದ್ಧನನ್ನು ಚಿನ್ನ ವೈಢೂರ್ಯಗಳಿಂದ ಅಲಂಕರಿಸಿ ಪೂಜಿಸುವ  ಸಿಂಗಪುರದ ಬುದ್ಧ ದೇವಾಲಯದ ಬಗ್ಗೆ ಓದುವಾಗ  ಶಾಂತ ನಾಗರಾಜ್ ಅವರ ಪ್ರವಾಸ ಕಥನ ನೆನಪಾಯಿತು.

ಈಗಾಗಲೇ 274 ನೇ ಹುಟ್ಟಿದ ಹಬ್ಬ ಆಚರಿಸಿಕೊಂಡ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ” ವೈಟ್ ಹೌಸ್” ದ ಇತಿಹಾಸ ಮತ್ತು ಭವ್ಯತೆಗಳ ಜೊತೆ ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಪ್ರೇತವು ಅನೇಕ ವರ್ಷಗಳವರೆಗೆ ಅಲ್ಲಿಯೇ ತಿರುಗಾಡುತ್ತಾ ಅನೇಕರಿಗೆ ಕಾಣಿಸಿಕೊಂಡಿದೆಯಂತೆ ಎಂಬ ವಿಸ್ಮಯದ ಸಂಗತಿ ಓದಿ ಈ ದೆವ್ವದ ಕಾಟಗಳು ನಮ್ಮ ದೇಶಕ್ಕಿಂತ ಹೆಚ್ಚು ಅಮೆರಿಕದಲ್ಲೇ ಇರಬಹುದಾ ಎನಿಸಿತು. ಅದಕ್ಕೆ ಅವರು ಪ್ರೇತಗಳ ಹಬ್ಬವನ್ನೂ ಮಾಡುವುದು ನೆನಪಾಯಿತು. ನಗಬೇಕೋ ಅಳಬೇಕೋ ತಿಳಿಯದಾದೆ.

ಅಮೆರಿಕದ ಅನೇಕ ನಾಸಾ ಕೇಂದ್ರಗಳಲ್ಲಿ ಫ್ಲೋರಿಡಾ ರಾಜ್ಯದ ಓರ್ಲಾಂಡೋ ಬಳಿಯಿರುವ ಜಾನ್ ಎಫ್ ಕೆನಡಿ ಉಪಗ್ರಹ ಉಡ್ಡಯನ ಕೇಂದ್ರ ಮತ್ತು ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಲ್ಲಿನ ಸ್ಪೇಸ್ ಶಟಲ್ ಮಾನಿಟಿಂಗ್ ಸೆಂಟರ್ ಎರಡಕ್ಕೂ ಲೇಖಕಿ ಭೇಟಿ ಕೊಟ್ಟ ಸಂದರ್ಭದಲ್ಲೇ ಹ್ಯೂಸ್ಟನ್ ನ ನಾಸಾ ಸೆಂಟರ್ ನಲ್ಲಿ ತರಬೇತಿಯಲ್ಲಿದ್ದ ನಮ್ಮ ಭಾರತದ ಹರ್ಯಾಣದ ಹುಡುಗಿ ಕಲ್ಪನಾ ಚಾವ್ಲಾ ಳನ್ನು ನೋಡಿದ್ದು ಕೇಳಿ ಮೈ ರೋಮಾಂಚನವಾಯ್ತು. ಆಕೆ ನಂತರ ಕೊಲಂಬಿಯಾ ಸ್ಪೇಸ್ ನೌಕೆ ಏರಿ ಬಾಹ್ಯಾಕಾಶಕ್ಕೆ  ತೆರಳಿ ಮರಳಿಬಾರದೆ ಹೋದ ನೆನಪಿಗೆ ಲೇಖಕಿಯ ಜೊತೆ ನಾನೂ ಹನಿಗಣ್ಣಾದೆ. ನಾಸಾ ಕೇಂದ್ರಗಳಲ್ಲಿರುವ ಸೌಲಭ್ಯಗಳು ಮತ್ತು ತರಬೇತಿಗೊಳ್ಳುವ ಮಂದಿಯ ಬಗ್ಗೆ ಇನ್ನೂ ಅನೇಕ ಮಾಹಿತಿಗಳಿಲ್ಲಿವೆ. ಅಮೆರಿಕದ ಒಲಂಪಿಕ್ಸ್ ತರಬೇತಿಯ ಸ್ಥಳ ಕೊಲೊರಾಡೋ ಸ್ಟ್ರಿಂಗ್ಸ್ ಬಗ್ಗೆ ಹೇಳುತ್ತಾ ನಮ್ಮ ದೇಶದಲ್ಲೂ ಮುಂದಿನ ದಿನಗಳಲ್ಲಿ ಇಂತಹ ಸೌಲಭ್ಯಗಳು ಕ್ರೀಡಾಳುಗಳಿಗೆ ಸಿಗಲಿ ಎಂದು ಹಾರೈಸುತ್ತಾರೆ.

ನ್ಯೂಯಾರ್ಕ್ ನ ಲಿಬರ್ಟಿ ದ್ವೀಪದ Statue of Liberty ಅಥವಾ ಅಮೆರಿಕದ ಸ್ವಾತಂತ್ರ್ಯ ದೇವಿ ರಮಣೀಯ ಹಸಿರುಡುಗೆಯಲ್ಲಿ ಗಗನದೆತ್ತರಕ್ಕೆ ಸ್ವಾತಂತ್ರ್ಯದ ಪಂಜನ್ನು ಒಂದು ಕೈಲಿ ಮತ್ತೊಂದು ಕೈಲಿ ಅಮೆರಿಕದ ಸ್ವಾತಂತ್ರ್ಯ ದಿನದ ತಾರೀಖು , ವಿವರಗಳು ಜುಲೈ ನಾಲ್ಕರ ಸಂಭ್ರಮದ ವರ್ಣನೆಯೊಂದಿಗೆ ನಮೂದಿಸಿದ ಫಲಕ ಹಿಡಿದು ನಿಂತು ಇಡೀ ವಿಶ್ವದ ಮನ ಸೆಳೆದ ಈ ಪ್ರತಿಮೆ ಫ್ರೆಂಚ್ ಶಿಲ್ಪಿ ಫೆಡ್ರಿಕ್ ಆಗಸ್ಟ್ ಬಾರ್ಥೋಲ್ಡಿಯ ನ ನಿರ್ಮಿತಿಯಂತೆ. ಈ ಪ್ರತಿಮೆಯ ಮುಖಾಕೃತಿ ಶಿಲ್ಪಿ ಬಾರ್ಥೋಲ್ಡಿಯನ ತಾಯಿ ಶಾರ್ಲಟ್ ಳ ಮುಖವನ್ನು ಹೋಲುವುದಂತೆ. ಮಗನ ಮೇಲೆ ತಾಯಿ ಬೀರಿದ ಪ್ರಭಾವ ಅಥವಾ ತಾಯಿಯೇ ತನ್ನ ದೇವರು ಎಂಬರಿತ ಮಗನ ಮಾತೃ ಪ್ರೇಮವಿರಬಹುದು. ತಾಯಿ‌ ಮತ್ತು ಮಕ್ಕಳ ಕರುಳಬಳ್ಳಿ ಸಂಬಂಧದ ರೂಪ ಇಲ್ಲಿ ಅಮೆರಿಕದ ಸ್ವಾತಂತ್ರ್ಯ ದೇವಿಯ ಪ್ರತಿಮೆಯಾಗಿ ನಿಂತಿದೆ ಎನಿಸಿತು. ಸ್ಟಾಚ್ಯೂ ಒಳಗಿನ ಲಿಫ್ಟ್ ಅಥವಾ 377 ಮೆಟ್ಟಿಲೇರಿ ಹೋಗಿ ಮೇಲಿನ ತುದಿಯಲ್ಲಿ ಕಾಣುವ ಅಸೀಮ ಅಲೌಕಿಕ ದೃಶ್ಯಗಳನ್ನು ಓದಿಯೇ ಅನುಭವಿಸಿದೆ.

ಅಮೆರಿಕದ ಜಾರ್ಜಿಯಾ ರಾಜ್ಯದ ಊರು ” ಮೋಸ್ಟ್ ಹಾಂಟೆಡ್ ಸಿಟಿ ” ಸವಾನ” ದ ಅತ್ಯಂತ ಸುಂದರ ಸ್ಮಶಾನದ ಭೇಟಿಯಲ್ಲಿ” ನಿಮ್ಮ‌ ಗಲಾಟೆಯಿಂದ ಇಲ್ಲಿ ಚಿರಶಾಂತಿಯಲ್ಲಿ ನಿದ್ರಿಸಿರುವ ಜನರ ಶಾಂತಿ ಭಂಗ ಮಾಡದಿರಿ” ಎಂಬ ಫಲಕವಿರುವ  Bonaventure Cemetery ( ಬೋನಾವೆಂಚರ್ ಅಂದ್ರೆ ಇಟಾಲಿಕ್ ನಲ್ಲಿ ಸುದೈವ ಎಂಬ ಅರ್ಥವಿದೆಯಂತೆ) ಇಲ್ಲಿ ಸ್ಮಶಾನವೂ ಒಂದು ಪ್ರವಾಸಿ ತಾಣ. ಹಸುರುಹುಲ್ಲಿನ ಹಾಸು ದಟ್ಟವಾಗಿ ಬೆಳೆದ ಗಿಡಮರಗಳ ನಡುವೆ ಮೃತರ ಸಮಾಧಿಗಳನ್ನು ಗೌರವಯುತವಾಗಿ ಅವರು ಕಾಪಿಟ್ಟು ಜನರನ್ನು ಸೆಳೆಯುವಾಗಲೂ ಅಲ್ಲಿರುವ ಶಾಂತಿಗೆ ಭಂಗ ಬರದಿರುವಂತೆ ನೋಡಿಕೊಂಡಿದ್ದಾರೆ. ಅಲ್ಲಿದ್ದ ಅನೇಕ ಕಥೆಗಳನ್ನು ಹೇಳುವ ಸಮಾಧಿಗಳಲ್ಲಿ ಅಮೃತಶಿಲೆಯ  ” ಲಿಟಲ್ ಗ್ರೇಸಿ” ಎಂಬ ಪುಟ್ಟ ಹುಡುಗಿಯ ಸಮಾಧಿ ಬಗ್ಗೆ ಹೇಳುತ್ತಾ ರಾತ್ರಿ ಹೊತ್ತು ಅವಳ ರೋದನ ಕೇಳುವುದಂತೆ ಮತ್ತು ಅವಳ ಕಣ್ಣುಗಳಲ್ಲಿ ರಕ್ತದ ಕಣ್ಣೀರು ಒಸರುವ ಕಥೆ ಅಲ್ಲಿನವರು ಹೇಳುವರಂತೆ! ಅಲ್ಲಿನ ” ಬರ್ಡ್ ಗರ್ಲ್ ” ಸಮಾಧಿಯ ಕಥೆಯಿಂದ ಬಂದ ಪುಸ್ತಕ “Midnight in the Garden” ಬಹು ಜನಪ್ರಿಯವಂತೆ.ಅನೇಕ ಸ್ವಾರಸ್ಯಕರ ಸಂಗತಿಗಳಿಲ್ಲಿವೆ.

ಅಮೆರಿಕದ ವಯೋಮಿಂಗ್ ರಾಜ್ಯದ  Yellowstone National Park ನಲ್ಲಿ 500 ಕ್ಕೂ ಹೆಚ್ಚು ಬಿಸಿನೀರ ಕಾರಂಜಿಗಳಿವೆ. ಪ್ರತಿ ಸಲವೂ ತನ್ನ ನಿಗದಿಯಾದ ಸಮಯಕ್ಕಿಂತ ಒಮ್ಮೆಯೂ ಆಚೀಚೆ ಚಿಮ್ಮದೆ ನಿಗದಿತ ಸಮಯದಲ್ಲಿ ಚಿಮ್ಮುವ ಈ ಕಾರಂಜಿಗಳು ಪ್ರವಾಸಿಗಳ ಆಕರ್ಷಣೆ. ಸುಮಾರು ಹತ್ತು ಸಾವಿರದಷ್ಟು ಬಿಸಿಬೀರ ಕೊಳಗಳಿವೆಯಂತೆ. ಇಲ್ಲೆಲ್ಲಾ ಮೊದಲು ಜ್ವಾಲಾಮುಖಿಗಳಿದ್ದವಂತೆ. ಈಗಲೂ ಅವು ಮಲಗಿರಬಹುದೇನೋ…

ಲೇಖಕಿ Grand Canyon ನಲ್ಲಿ ಶಿವ ವಿಷ್ಣು ಬ್ರಹ್ಮ ರಾಮ ಕೃಷ್ಣನನ್ನು ಹುಡುಕಿಕೊಂಡು ಹೋಗಿ ನಮಗೂ ಅವರ ದರ್ಶನ ಮಾಡಿಸಿಬಿಡುತ್ತಾರೆ.  ಮಾನವನ ಕಲ್ಪನೆಯ ಆಳ ಅಗಾಧತೆ ಮೀರಿದ ಭಯಾನಕ ಕಮರಿಗಳ ಬಗ್ಗೆ ಹೇಳುತ್ತಾ ಭೂರಮೆಯ ವಿಗಡ ವಿಲಾಸದ ಆ ರುದ್ರ ಗಾಂಭೀರ್ಯದ ಕಿರುಅಂಶವನ್ನೂ ಸಹ ಮನಸ್ಸು ಬುದ್ಧಿ ಹಿಡಿಯಲು ಅಸಾಧ್ಯವಾಗಿತ್ತು ಎನ್ನುತ್ತಾ ಅಲ್ಲಿ ಭಯಂಕರವಾಗಿ ಕಾಣುವ ದೈತ್ಯ ಶಿಲಾ ಕಂದರಗಳಿಗೆ ಎರಡು ಸಾವಿರ ವರ್ಷಗಳಂತೆ. ಗ್ರಾಂಡ್ ಕ್ಯಾನಿಯನ್ ಅದ್ಭುತ ರೋಮಾಂಚಕ ಸೃಷ್ಟಿ. ಅಲ್ಲಿನ ಪ್ರತಿ ಶಿಲಾಪದರಗಳು ಕೆಂಪು ಹಳದೀ ಕೇಸರಿ ಬಂಗಾರ ವರ್ಣ ಲೇಪಿತಗೊಂಡಿವೆ.  ಕಣಿವೆ ಬೆಟ್ಟಗಳು ಗಾಢ ತಪಸ್ಸಿನಲ್ಲಿ ಮೌನವಾಗಿ ಅನೇಕ ಶತಮಾನಗಳಿಂದ ಮುಳುಗಿದಂತಿವೆಯಂತೆ. ಅನೇಕ ಶಿಲಾಖಂಡಗಳಿಗೆ ಶಿವ ,ಬ್ರಹ್ಮ , ವಿಷ್ಣು , ರಾಮ, ಕೃಷ್ಣ ಹೆಸರಲ್ಲದೇ ಬುದ್ಧ ಝರಾತುಷ್ಟ್ರ, ಥಾರ್, ವೀನಸ್ ,ಅಪೋಲೋ ಎಂಬ ಮೊದಲಾದ ಹೆಸರುಗಳಿಟ್ಟಿರುವುದು ನಮ್ಮನ್ನು ಪ್ರಮುಖವಾಗಿ ಆಕರ್ಷಿಸಬಲ್ಲದು ಎನಿಸಿತು. ಅಚ್ಚರಿಯೂ ಆಯಿತು. ಆರು ನೂರು ಮಿಲಿಯ ವರ್ಷಗಳ ಹಿಂದೆ ಸಾಗರವು ಉಕ್ಕಿ ಬಂದು ಎರಡು ತಲೆಮಾರುಗಳ ಪಳೆಯುಳಿಕೆಗಳು ಅಂತರಾಳದಲ್ಲಿ ಸಮಾಧಿಗೊಂಡು ಕ್ರಮೇಣ ಪ್ರಕೃತಿಯ ಕಾಲಕಾಲದ ರಾಸಾಯನಿಕ ಪರಿವರ್ತನೆಗೊಳಪಟ್ಟು ವಿವಿಧ ಗಾತ್ರ ರೂಪ ವಿನ್ಯಾಸಗಳ ಪಡೆದು ತಲೆಯೆತ್ತಿ ನಿಂತ ಶಿಲಾಭಿತ್ತಿಗಳು ಇಲ್ಲಿನ ನದೀಪಾತ್ರದಲ್ಲಿವೆ. ಇನ್ನೂ ಅನೇಕ ವಿವರಗಳು ಓದಿ ಮೈ ಝುಮ್ಮೆಂದಿತು.

ಲೇಖಕಿ ಚಿಕ್ಕಂದಿನಲ್ಲಿ ಪುಲಿಟ್ಜೆರ್ ಪ್ರಶಸ್ತಿ ವಿಜೇತ ಕೃತಿ ಓದಿ ಪ್ರಭಾವಿತರಾಗಿದ್ದನ್ನು ಹೇಳುತ್ತಾ ಅಟ್ಲಾಂಟಾದಲ್ಲಿರುವ ಅದರ ಲೇಖಕಿ ಮಾರ್ಗರೆಟ್ ಮಿಶೆಲ್ ಮನೆಗೆ ಭೇಟಿ ನೀಡಿ ಕಥೆಯಲ್ಲಿ 18 ನೇ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಅಮೆರಿಕದ  Civil War ಮತ್ತು Reconstruction of the Nation ನ ಸುಂಟರಗಾಳಿಯಲ್ಲಿ ಸಿಲುಕಿದ ಜೀವಗಳ ಕಥನದ ಸ್ಕಾರ್ಲೆಟ್ ಓ ಹಾರಾ ಗಮನ ಸೆಳೆಯುತ್ತಾಳೆ.

ಅತ್ಯಂತ ನಿಗೂಢಮಯವೆನಿಸಿದ ಬರ್ಮುಡಾ ಟ್ರಯಾಂಗಲ್ ನಲ್ಲಿ ವಿಮಾನಗಳು ಹಡಗುಗಳು ಕಣ್ಮರೆಯಾಗುತ್ತಿದ್ದದ್ದು ಕೇವಲ ಕೆಲವು ಹವಾಮಾನದ ತೊಂದರೆಗಳಿಂದ ಎಂಬ ಸತ್ಯ ಜಗತ್ತಿಗೆ ತಿಳಿದದ್ದು ಹಳೆಯ ವಿಷಯ. ಅಟ್ಲಾಂಟಿಕ್ ಸಮುದ್ರದ ನಡುವಿರುವ ಬರ್ಮುಡಾ ಟ್ರಯಾಂಗಲ್ ಬಗ್ಗೆ ಮತ್ತು ಅಲ್ಲಿನ ಕ್ರೂಸ್ ಪ್ರಯಾಣದ ರಮ್ಯತೆಗೆ ನಿಜಕ್ಕೂ ಮನ ಸೋ…ತೆ…ಮಾರ್ರೆ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿ ಬಂದು ಕ್ರೂಸ್ ಪ್ರಯಾಣ ಮಾಡಲೇ ಬೇಕೆನಿಸಿದ್ದಂತೂ ಸತ್ಯ. ಇನ್ನೂ ಅನೇಕ ದೇಶಗಳು ಅವುಗಳ ವೈಶಿಷ್ಟ್ಯಗಳು ಈ ಕೃತಿಯಲ್ಲಿದ್ದು ಓದುಗರನ್ನು ವಿಶ್ವ ದರ್ಶನ ಮಾಡಿಸುತ್ತದೆ.

ಒಳ್ಳೆಯ ಆರೋಗ್ಯವಿದ್ದು ಹಣಕಾಸಿನ ಸೌಲಭ್ಯ ಚೆನ್ನಾಗಿದ್ದರೆ ಸಾಮಾನ್ಯ ಜನರು ರಜೆಯನ್ನು ಎಂಜಾಯ್ ಮಾಡಲು ಪ್ರವಾಸ ಹೋಗಿ ಎಲ್ಲಾ ಕಡೆ ನಿಂತು ಫೋಟೋ ವಿಡಿಯೋವನ್ನು ತೆಗೆದುಕೊಂಡು ಸ್ನೇಹಿತರಲ್ಲಿ ಹಂಚಿಕೊಂಡು ಖುಷಿಯಾಗುತ್ತಾರೆ. ಆದರೆ ಒಬ್ಬ ಬರಹಗಾರ ಇಂತಹ ಪ್ರವಾಸಗಳಿಗೆ ಹೋಗಿ ಬಂದಾಗ ಬರಹರೂಪಕ್ಕಿಳಿಸಿ ಪುಸ್ತಕದ ಮೂಲಕ ಕೋಟ್ಯಾಂತರ ಓದುಗರಿಗೂ ಪ್ರವಾಸದ ಸಂಪೂರ್ಣ ಮಾಹಿತಿಯನ್ನು ತನ್ನ ಅನುಭವಗಳನ್ನು ಹಂಚಿಕೊಂಡು ಖುಷಿಯಾಗುತ್ತಾ ಇತರರಿಗೆ ಜ್ಞಾನವನ್ನೂ ಆನಂದವನ್ನೂ ಉಂಟು ಮಾಡಬಲ್ಲ. (ಅನೇಕ ಲೇಖಕರ ಪ್ರವಾಸ ಕಥನಗಳನ್ನು ಓದುವಾಗ ನನಗೆ ಅನಿಸಿದ ಅನಿಸಿಕೆ.) ಇದೇ ಕೆಲಸ ಇಲ್ಲಿ ಪ್ರೀತಿಯ ಅಮ್ಮ ಪ್ರಸಿದ್ಧ ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆ ಅವರಿಂದ ಆಗಿದೆ. ಬಹು ಪ್ರೀತಿಯಿಂದ ಪುಸ್ತಕ ಕಳಿಸಿ ಕುಳಿತಲ್ಲೇ ನನಗೆ ಇಷ್ಟೊಂದು ದೇಶಗಳನ್ನು ತೋರಿಸಿದ ಋಣ ಹೇಗೆ ತೀರಿಸಲಿ ಜಯಶ್ರೀ ಅಮ್ಮ? ಕೃತಜ್ಞಳು. ಬೆಚ್ಚಗಿನ ನನ್ನೊಲವಿನ ಅಪ್ಪುಗೆ ನಿಮಗೆ.

                 

                         

‍ಲೇಖಕರು avadhi

June 5, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: