ಅಂದಿನ ಬಾಯಾರಿಕೆ ಮತ್ತು ಇಂದಿನ ದಾಹ…

ಪಿ ಸಾಯಿನಾಥ್ ಅವರ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯನ್ನು ಬಿಡುಗಡೆ ಮಾಡಿದ ಮಾತು

ಅನುವಾದ ಜಿ ಎನ್ ಮೋಹನ್, ಪ್ರಕಾಶಕರು: ಅಭಿನವ

ನಾನು ಇಲ್ಲಿಗೆ ಬಂದದ್ದೇ ಸಾಯಿನಾಥ್ರನ್ನು ನೋಡಲು, ಅವರ ಮಾತು ಕೇಳಲು. ಹಾಗಾಗಿ ಕೆಲ ನಿಮಿಷಗಳಲ್ಲೆ ಮಾತು ಮುಗಿಸುತ್ತೇನೆ. ನಾನು ಈ ಪತ್ರಿಕಾ ಕ್ಷೇತ್ರದ ಕೌಂಟರ್ ಮೀಡಿಯಾ ಪ್ರಶಸ್ತಿ ಪ್ರದಾನ ಮಾಡಲು ಯಾವ ರೀತಿ ಅರ್ಹನೊ ಗೊತ್ತಿಲ್ಲ. ಪ್ರಜಾವಾಣಿಗೆ ನಾನು ಒಂದು ದಿನದ ಸಂಪಾದಕನಾಗಿದ್ದೇ ಕಾರಣವಾಗಿರಬಹುದು. ಆ ಸಂದರ್ಭದಲ್ಲಿ ದಿನೇಶ್ ಅಮೀನಮಟ್ಟು ಅವರಿಗೆ ಒಂದು ಪ್ರಶ್ನೆ ಕೇಳಿದ್ದೆ- ಪತ್ರಿಕೆಗಳು ಸಾಯಿನಾಥ್ ಪ್ರವೃತ್ತಿ ಇರುವಂಥಹ ಎಳೆಯರನ್ನು ಹುಡುಕಬೇಕಲ್ಲವೆ? ಅಂತ. ಆಗ ಒತ್ತಡದಲ್ಲಿ ಮಾತು ಮುಂದುವರಿಯಲಿಲ್ಲ. ತಮ್ಮ ಬರವಣಿಗೆಯೊಂದರಲ್ಲಿ, ಜಿ.ಎನ್. ಮೋಹನ್ ಅವರು ಸಾಯಿನಾಥ್ ಹೆಜ್ಜೆಯಲ್ಲೆ ಅಷ್ಟೊ ಇಷ್ಟೊ ಹೆಜ್ಜೆ ಇಡುತ್ತಿರುವ ಎಳೆಯ ಪತ್ರಕರ್ತರನ್ನು ಉದಾಹರಿಸುತ್ತಾರೆ. ಈಗ ಅಂಥವರಿಗೆ ಸಾಯಿನಾಥ್ ಕೌಂಟರ್ ಮೀಡಿಯಾ ಪ್ರಶಸ್ತಿ ಕೊಡುತ್ತಿರುವುದು ಪತ್ರಿಕಾ ಕ್ಷೇತ್ರದಲ್ಲಿ ಕನಸು ಬಿತ್ತುವ ಬಿತ್ತನೆ ಬೀಜದಂತೆ ಕಾಣಿಸುತ್ತದೆ.

ಪತ್ರಕರ್ತರು ವರ್ತಮಾನವನ್ನು ಹಿಡಿಯುವವರು. ಓಡುತ್ತಿರುವ ಕಾಲವನ್ನು ಒಂದು ಟೆಲಿವಿಷನ್ ಜಾಹೀರಾತು ತುಂಬಾ ಚೆನ್ನಾಗಿ ಕಟ್ಟಿಕೊಡುತ್ತದೆ. ಆ ಜಾಹೀರಾತು ಸ್ಪ್ರೈಟ್ ಡ್ರಿಂಕ್ಸು ಅಂತಾರಲ್ಲ ಆ ಕುಡಿತದ್ದು. ಆ ಜಾಹೀರಾತಿನ ಹೆಸರು ‘ಚತುರ ಕಾಗೆ’ ಅಂತ. ಮೊದಲು ನಾನು ಓದಿದ್ದ ತಿಳಿದಿದ್ದ ಕಾಗೆ ಪರದೆ ಮೇಲೆ ಬರುತ್ತದೆ. ಕಾಗೆಗೆ ಬಾಯಾರಿಕೆ. ಆದರೆ ಒಂದು ಬಾಟಲ್ನಲ್ಲಿ ಅರ್ಧದಷ್ಟು ನೀರು ಇರುತ್ತದೆ. ಅದು ಕೊಕ್ಕಿಗೆ ಎಟುಕುತ್ತಿರುವುದಿಲ್ಲ. ಅದು ಸುತ್ತಮುತ್ತಲಿದ್ದ ಕಲ್ಲುಗಳನ್ನು ಹೆಕ್ಕಿ ತಂದು ನೀರನ್ನು ಮೇಲಕ್ಕೆ ಬರಿಸಲು ಪ್ರಯತ್ನಿಸಿ ಸುಸ್ತಾಗಿ ಕೈಚೆಲ್ಲಿ ಕೂರುತ್ತದೆ. ಆಗ ಇನ್ನೊಂದು ಚಿನ್ನದ ಸರದ ಶ್ರೀಮಂತ ದೈತ್ಯ ಕಾಗೆ ಧೂಮಕೇತುವಿನಂತೆ ನೀರಿನ ಬಾಟಲಿ ಹತ್ತಿರ ಬರುತ್ತದೆ. ಅದಕ್ಕೋ ದಾಹ. ಅದು ಪಕ್ಕದಲ್ಲಿದ್ದ ಕಲ್ಲಲ್ಲಿ ಕೊಕ್ಕನ್ನು ಮಸೆದುಕೊಳ್ಳುತ್ತದೆ. ನಂತರ ಅಲ್ಲಿದ್ದ ಸ್ಪ್ರೈಟ್ ಬಾಟಲನ್ನೆ ಕುಕ್ಕಿ ತೂತು ಮಾಡಿ, ಚಿಮ್ಮಿದ ಆ ಡ್ರಿಂಕ್ಸ್ ಕುಡಿದು ಗರ್ವದಿಂದ ಹಾರಿ ಹೋಗುತ್ತದೆ. ಇದು ಈ ಕಾಲದ ಜಾಹೀರಾತು.

ನಾನು ಚಿಕ್ಕವನಾಗಿದ್ದಾಗ ಮೊದಲ ಕಾಗೆಯ ಪಾಠವಿತ್ತು. ಆ ಕಾಗೆಗೂ ನೀರು ಸಿಕ್ಕಿ ಅದು ಕಾಗೆಯ ಜಾಣತನ, ಕಾಗೆಯ ವಿವೇಕ ಎಂಬ ನೀತಿಗೆ ಆ ಕತೆ ಹೆಸರಾಗಿತ್ತು. ಇಂದು ಆ ಜಾಣತನ ವಿವೇಕ ಧ್ವಂಸಗೊಂಡಿವೆ. ಕಾರ್ಪೋರೇಟ್, ಖಾಸಗೀ ದೈತ್ಯ ಕಾಗೆಗಳ ದಾಹ, ನಾಳೆಗೆ ಉಳಿಯದಂತೆ ಯಾವುದನ್ನು ಧ್ವಂಸ ಮಾಡಿಲ್ಲ? ಭೂಮಿ, ಆ ಭೂಮಿಯ ಒಳ ಹೊರಗಿನ ನೀರು, ಕಾಡು, ಅದಿರು, ಬೆಳೆ ಬೆಳೆಯುವ ಹೊಲಗದ್ದೆ, ಕೊನೆಗೆ ಗಾಳಿ ಯಾವುದು ಉಳಿದಿದೆ? ಬಿಕ್ಷುಕರನ್ನು ಇಲ್ಲಿ ಮೇಲೆತ್ತಲಾಗಿದೆ, ಬಡತನ ರೇಖೆಯನ್ನೇ ಕೆಳಕ್ಕಿಳಿಸಿ ಭಿಕ್ಷುಕರನ್ನು ಇಲ್ಲಿ ಮೇಲೆತ್ತಲಾಗಿದೆ!

ಹೀಗಿದ್ದೂ ನಮ್ಮ ಉಳಿವಿಗೆ, ಇಂದು ಬಿಡುಗಡೆಯಾದ ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಸಾಯಿನಾಥ್ರವರು ಹೇಳಿರುವ ಭಾರತದ ಬಡತನದ ಸ್ಥಿತಿಯನ್ನು ಒಂದು ‘ಪ್ರಕರಣ’ವಾಗಲ್ಲ; ಬದಲಿಗೆ ಒಂದು ‘ಪ್ರಕ್ರಿಯೆ’ಯಾಗಿ ನೋಡಬೇಕು ಎಂಬ ಒಂದು ಮಾತೂ ದಾರಿ ತೋರಿಸಬಹುದು. ಈ ದೃಷ್ಟಿ ನಮ್ಮ ಕಣ್ಣಿಗೆ ಬಂದರೆ, ಮುಖ್ಯವಾಗಿ ಪತ್ರಿಕೋದ್ಯಮಕ್ಕೆ ಬಂದರೆ, ಉದ್ಯಮಕ್ಕೆ ಕಷ್ಟವೇನೋ ಆದರೆ ಒಂದಿಷ್ಟು ಪತ್ರಕರ್ತರಿಗಾದರೂ ಬಂದರೂ ಕೂಡ ಆಗುವ ಬದಲಾವಣೆ ಅಷ್ಟಿಷ್ಟಲ್ಲ. ಆಗ ಟಾಲ್ಸ್ಟಾಯ್ಗೆ ಕಂಡಂತೆ ನಮಗೂ ಕಾಣಿಸಬಹುದು. ಟಾಲ್ಸ್ಟಾಯ್ ಹೇಳಿದ್ದು: ಒಬ್ಬನ ಭುಜದ ಮೇಲೆ ಇನ್ನೊಬ್ಬ ಕೂತಿದ್ದಾನೆ. ಮೇಲೆ ಕೂತಿರುವವನು ತನ್ನನ್ನು ಹೊತ್ತವನ ಭಾರವನ್ನು ತಾನೇ ಹೊತ್ತಿರುವುದು ಎಂದು ಆ ಭಾರ ಹೊತ್ತವನಿಗೇ ನಂಬಿಸುತ್ತಿದ್ದಾನೆ! ದುರಂತವೆಂದರೆ ಅದನ್ನೆ ತಾನೂ ನಂಬುತ್ತಿದ್ದಾನೆ!! -ಹೀಗೆ ಟಾಲ್ಸ್ಟಾಯ್ ಕಂಡಂತೆ ಹೀಗೆ ನಮಗೂ ಸುಲಿಗೆಯ ಲಕ್ಷಣಗಳು ಗೋಚರಿಸಬಹುದು.

ಆಗ ಒಂದಿಷ್ಟು ದಾರಿಗಳೂ ಕಾಣಬಹುದು. ಇಂದು ಅಸಮಾನತೆಯ ಧಾಳಿಗೆ ಚುನಾವಣಾ ವ್ಯವಸ್ಥೆಯು ತನ್ನನ್ನು ಬಿಕರಿಗೆ ಇಟ್ಟುಕೊಂಡು ಅಳಿವಿನ ಅಂಚಿನಲ್ಲಿದೆ. ಇಲ್ಲಿ ಸರಿಯಾದ ಚುನಾವಣಾ ಪದ್ಧತಿಯೊಂದನ್ನು ರೂಪುಗೊಳಿಸುವುದನ್ನು ಪತ್ರಿಕೆಗಳು ತನ್ನ ಕೆಲಸ ಅಂದುಕೊಳ್ಳಬಹುದು, ಇದಾಗುವುದು ತಾನು ‘ಸ್ಥಿತಿಯ’ ವರದಿಗಾರ ಎಂದು ತನ್ನನ್ನು ಭಾವಿಸದೆ, ವಿದ್ಯಮಾನಗಳನ್ನು ‘ಪ್ರಕ್ರಿಯೆ’ ಎಂದು ನೋಡಿದಾಗ ಸಾಧ್ಯವಾಗಬಹುದು. ಹಾಗೆಯೇ ಭಾರತದ ಛಿದ್ರ ಸಮಾಜದಲ್ಲಿ ಎಲ್ಲಾ ಜಾತಿಮತ ಅಂತಸ್ತುಗಳ ಎಳೆಯ ಮಕ್ಕಳು ಒಂದು ಕಡೆ ಸೇರಿ ಒಡನಾಡಿ ಶಾಲೆಯಲ್ಲಿ ಕಲಿಯುವುದೇ, ಈ ಸೇರಿ ಒಡನಾಡುವ ಕ್ರಿಯೆಯೇ ಬಲುದೊಡ್ಡ ಶಿಕ್ಷಣ ಎಂದೂ ಕಾಣಿಸಬಹುದು. ಅದಕ್ಕಾಗಿ ಎಳೆಯ ಮಕ್ಕಳ ಶಿಕ್ಷಣದಲ್ಲಾದರೂ ತಾರತಮ್ಯ ಪಂಚವರ್ಣ ಶಿಕ್ಷಣ ಪದ್ಧತಿಯನ್ನು ಕೈಬಿಟ್ಟು ಏಕರೂಪ ಸಮಾನ ಶಿಕ್ಷಣಕ್ಕಾಗಿ ಇಡೀ ಸಮಾಜ ಹಾತೊರೆಯುವಂತೆ ಅದಕ್ಕಾಗಿ ಕೂಗುವಂತೆ ಪತ್ರಿಕೆಗಳು ಅಬಿಪ್ರಾಯ ರೂಪಿಸಬಹುದು. ನೋಡುವ ಕ್ರಮ ಬದಲಾಗುವುದಾದರೆ, ಬದಲಾವಣೆಯ ದಾರಿಗಳೂ ತಂತಾನೆ ತೆರೆದುಕೊಳ್ಳಬಹುದು. ಆಗ ಪತ್ರಿಕೆಗಳು ಜೀವಂತ ಪತ್ರಿಕೆ ಆಗಿಬಿಡುತ್ತದೆ. ಇದಾಗಲು, ಸಾಯಿನಾಥ್ ಸಂತಾನ ಇಂದು ಹೆಚ್ಚಬೇಕಾಗಿದೆ.

‍ಲೇಖಕರು G

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: