ಸಾಂತ್ವನದ ಚಿಲುಮೆಗಳು ಬತ್ತಿ ಬರಿದಾಗಿ ಹೋದವೆಲ್ಲಿ!?

ಕೇಶವರೆಡ್ಡಿ ಹಂದ್ರಾಳ

ನಾನು ನಾಲ್ಕನೆಯ ಕ್ಲಾಸಿನಲ್ಲಿ ಓದುತ್ತಿದ್ದಾಗ ವಿಪರೀತ ಜ್ವರ ಬಂದು, ಮಾದಿಗರ ಪಂದಿಕದ್ರಪ್ಪ ಹಾಕಿದ ಮಂತ್ರ, ಕಟ್ಟಿದ ಯಂತ್ರ ವಿಫಲವಾಗಿ, ಮನೆ ದೇವರುಗಳಾದ ಲಕ್ಷ್ಮೀನರಸಿಂಹ ಮತ್ತು ಆಂಜನೇಯ ಸ್ವಾಮಿಗಳಿಗೆ ನಮ್ಮಮ್ಮ ಹೊತ್ತ ಹರಕೆಯಯನ್ನು ಅವರೂ ಕಿವಿಗೆ ಹಾಕಿಕೊಳ್ಳದಿದ್ದಾಗ, ಗಾಡಿ ಕಟ್ಟಿಕೊಂಡು ನಮ್ಮಪ್ಪ ಮಧುಗಿರಿಯ ಡಾಕ್ಟರ್ ಗುಂಡೂರಾವ್ ಶಾಪಿಗೆ ಕರೆದುಕೊಂಡು ಹೋಗಿದ್ದ. ಸುಸ್ತಾಗಿದ್ದ ನನ್ನನ್ನು ನಮ್ಮ ಪುಟ್ಟನುಮಕ್ಕ ಚಿಗಮ್ಮನ ಮಗಳು ಭಾಗ್ಯಮ್ಮಕ್ಕಯ್ಯ ಮಡಲಿಗಾಕಿಕೊಂಡು ಬಂದಿದ್ದಳು.

ಆಗ ಡಾಕ್ಟರ್ ಗುಂಡೂರಾವ್ ಇಡೀ ನಮ್ಮ ಮಧುಗಿರಿ ತಾಲ್ಲೂಕಿನಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ಅವರ ಕೈಗುಣ ಚನ್ನಾಗಿದೆಯೆಂದು ಮನೆಮಾತಾಗಿತ್ತು. ಬಡವರಾದರೆ ಕೊಟ್ಟಷ್ಟು ಕಾಸನ್ನು ಇಸಿದುಕೊಳ್ಳುತ್ತಿದ್ದರಂತೆ. ನನ್ನ ಕೈ ನಾಡಿ ಹಿಡಿದು ನೋಡಿ ಎದೆ, ಹೊಟ್ಟೆ, ಬೆನ್ನಿನ ಮೇಲೆ ಸ್ಟೇತೋಸ್ಕೋಪ್ ಇಟ್ಟು, ನಾಲಿಗೆಯಡಿ ಥರ್ಮಾ ಮೀಟರ್ ಇಟ್ಟು ಐದು ನಿಮಿಷ ಪರೀಕ್ಷಿಸಿದ ಡಾಕ್ಟರು ನಗುತ್ತಾ ನಮ್ಮಪ್ಪನಿಗೆ ‘ಹುಡುಗನಿಗೆ ಟೈಫಾಯಿಡ್ ಬಂದೈತೆ ಕಣಯ್ಯ. ಸರಿಯಾದ ಟೈಮಿಗೆ ಕರ್ಕೊಂಡು ಬಂದಿದ್ದೀರಿ. ಭಯಪಡೋದೇನೂ ಬೇಕಿಲ್ಲ’ ಎಂದಾಗ ನಮ್ಮಪ್ಪ ಗಾಬರಿಯಿಂದ ಎದೆಗುಂದಿದವನಂತೆ ‘ಸ್ವಾಮಿ, ಯಡವಟ್ಟೇನು ಆಗಲ್ವಾ’ ಎಂದು ಮುಖ ಸಪ್ಪಗೆ ಮಾಡಿಕೊಂಡು ಕೇಳಿದ್ದ. ಏಕೆಂದರೆ ಆ ಟೈಮಿನಲ್ಲಿ ಟೈಫಾಯಿಡ್ ಭಯ ಹುಟ್ಟಿಸುವಂಥ ಜ್ವರ ಆಗಿತ್ತು.

ಬೇಸರ ಮಾಡಿಕೊಳ್ಳದೆ ಗುಂಡೂರಾವ್ ಡಾಕ್ಟರು ಮತ್ತೆ ನಗುತ್ತಾ ‘ನೋಡಯ್ಯ ನಾನು ಸ್ಟೆತೋಸ್ಕೋಪ್ ಇಟ್ಬ ಮೇಲೆ ಆ ಯಮ ಧರ್ಮರಾಯ ಅರ್ಧ ದಾರಿಗೆ ಬಂದಿದ್ರೂ ತಿಕ ಮುಚ್ಕಂಡು ತನ್ನ ಕೊಬ್ಬಿದ ಕೋಣನ ಹಿಂದಕ್ಕೆ ತಿರುಗಿಸಿಕೊಂಡು ಹೋಗ್ಬೇಕಾದ್ದೆ.’ ಎಂದು ಸಮಾಧಾನ ಮಾಡಿ ಎರಡು ದಿನ ಅಲ್ಲೇ ಇಟ್ಟುಕೊಂಡು ಕಳಿಸಿದ್ದರು. ಜ್ವರ ವಾಸಿಯಾಗಿ ನಾನು ಎದ್ದು ನೆಟ್ಟಗೆ ಓಡಾಡಲು ಇಪ್ಪತ್ತು ದಿನ ಹಿಡಿದಿತ್ತು. ಬಂದ ಎಲ್ಲಾ ರೋಗಿಗಳ ಬಳಿಯೂ ನಗುತ್ತಾ, ತಮಾಷೆ ಮಾಡುತ್ತಾ ಟ್ರೀಟ್ಮೆಂಟ್ ಕೊಡುತ್ತಿದ್ದ ಡಾಕ್ಟರ್ ಗುಂಡೂರಾವ್ ವಿಶಿಷ್ಟವಾಗಿ ಕಾಣಿಸುತ್ತಿದ್ದರು.

ಕಜ್ಜಿ ರೋಗಕ್ಕೆ, ಚೇಳು ಮಂಡರಗಪ್ಪೆ ಕಚ್ಚಿದ್ದಕ್ಕೆ, ಕಳ್ಳಬಸುರಿಗೆ ಮದ್ದು ಕೊಡುತ್ತಿದ್ದ ತಳವಾರ ಓಬಮ್ಮ ಕೋಪ ಮಾಡಿಕೊಂಡಿದ್ದನ್ನು ನಾನಂತೂ ಕಂಡಿರಲೇ ಇಲ್ಲ. ಯಾರು ಎಷ್ಟೇ ಹೊತ್ತಲ್ಲಿ ಬಂದರೂ ಬೇಸರಪಟ್ಟುಕೊಳ್ಳದೆ ಖುಷಿಯಿಂದ ಮದ್ದು ಕೊಡುತ್ತಿದ್ದಳು.

ಕಜ್ಜಿ ಹತ್ತಿಸಿಕೊಂಡವರಿಗೆ ‘ಕಜ್ಜಿ ಬರೋಕೆ ಪುಣ್ಯ ಮಾಡಿರ್ಬೇಕು ಸುಮ್ಕಿರ್ರಿ, ಕಜ್ಜಿ ಬಂದೋರ್ ಶರೀರ ವಜ್ರ ಆಗ್ತೈತೆ. ಇನ್ನೊಂದು ಮದ್ವೆ ಮಾಡಿದ್ರೂ ಸಂಬಾಳಿಸ್ಬೋದು’ ಎಂದೂ, ಚೇಳು ಕಚ್ಚಿದವರಿಗೆ ‘ಒಂದಪ ಚೇಳು ಕಚ್ಚಿದ್ರೆ ಇನ್ಯಾವ ಹುಳ, ಹುಪ್ಪಟೆ, ಹಾವು-ಗೀವು ಅಂಥ ಶರೀರನ ಮುಟ್ಕಂಬಲ್ಲ. ನಾವು ಗಟ್ಟಿ ಇದ್ದಿವೋ ಇಲ್ವೋ ಅನ್ನೋದನ್ನ ಪರೀಕ್ಷೆ ಮಾಡೋಕೆ ದೇವ್ರೆ ಬಂದು ಚೇಳಿನ ರೂಪದಲ್ಲಿ ಕಚ್ತಾನಂತೆ. ದೇವ್ರೇ ನಮ್ಮ ಶರೀರ ಮುಟ್ಟಿದ ಮೇಲೆ ಇನ್ನೇನೈತೆ’ ಎಂದೂ, ಕಳ್ಳ ಬಸಿರೊತ್ತು ಬಂದವರಿಗೆ’ ಅಯ್ಯೋ ಈ ಜಗತ್ನಾಗೆ ಯಾರ್ ನೆಟ್ಗವ್ರೆ ಹೇಳ್ರಿ, ಉಪ್ಪು ಖಾರ ತಿನ್ನೊ ಶರೀರ ಏನ್ಮಾಡಕಾಗ್ತೈತೆ‌. ಎಲ್ರ್ ಮನೆ ದೋಸೇನೂ ತೂತೆ,’ ಎಂದೂ ಸಮಾಧಾನ ಮಾಡುತ್ತಾ ಮದ್ದುಕೊಟ್ಟು ಕಳಿಸುತ್ತಿದ್ದಳು.

ಯಾರಾದರೂ ಕಾಸು ಕೊಡಲು ಬಂದರೆ ಬಿಲ್ಕುಲ್ ಬೇಡವೆಂದು ಎಲೆಡಿಕೆ ಇಸಿದುಕೊಂಡು ತಿತ್ತಿಗಿಳಿಸಿಕೊಳ್ಳುತ್ತಿದ್ದಳು. ಹಾಗಾಗಿ ಓಬಮ್ಮನ ತಿತ್ತಿಯಲ್ಲಿ ಎಲೆ ಅಡಿಕೆ ಸದಾ ಸ್ಟಾಕ್ ಇರುತ್ತಿತ್ತು. ಒಂದು ಸಾರಿ ನಮ್ಮ ಪಕ್ಕದ ಮನೆಯ ಮುದ್ದನುಕ್ಕೆ ಪಾಯಿಸ ಮಾಡಿ ಕೆಳಗೆ ಇಳಿಸಿ, ಅರ್ಧ ಸೌಟು ನೆಕ್ಕಿದ್ದಾಳೆ. ಮತ್ತೆ ಸೌಟು ಹಾಕಿ ತಿರುವಿದಾಗ ಪಲ್ಲಿ ತೇಲಿ ಬಂದಿದೆ. ಅದನ್ನು ನೋಡಿ ಮುದ್ದನುಮಕ್ಕ ಲಬೋ ಲಬೋ ಬಾಯಿಬಡಿದುಕೊಂಡು ಬೀದಿಗೆ ಬಂದು ಕೂಗಿಕೊಂಡಿದ್ದಳು.

ವಿಷಯ ತಿಳಿದು ಅಲ್ಲೆ ಬೆಂಚು ಬಂಡೆಯ ಮೇಲೆ ಕುಳಿತಿದ್ದ ನಮ್ಮ ದೊಡ್ಡಪ್ಪ ಹನುಮಂತರೆಡ್ಡಿ ‘ ಸುಮ್ಕರಮ್ಣೆ ಏನೂ ಆಗಲ್ಲ. ಪ್ರಾಣ ಕಳ್ಕಂಬೊಳಂಗೆ ಆಡ್ತಿದ್ದಿಯಲ್ಲ. ನಾನು ಹಲ್ಲಿ ಬಿದ್ದ ಸಾರಲ್ಲಿ ಎಷ್ಟೋ ಸಾರಿ ಉಂಡಿದ್ದೀನಿ ನನಗೇನೂ ದೆಂಗ್ಲಾಗ್ಲಿಲ್ಲ. ನಿರ್ವಾಕ್ವಿಲ್ದಂಗೆ ಆಡ್ಬೇಡ’ ಎಂದು ಅಲ್ಲೆ ಬಣವೆಯಲ್ಲಿದ್ದ ಬೇವಿನ ಮರದಿಂದ ಏಳೆಂಟು ಎಳೆಯ ಎಲೆಗಳನ್ನು ಕಿತ್ತು ಕೊಟ್ಟಿದ್ದ. ಮುದ್ದನುಕ್ಕ ಎಲೆ ತಿಂದು ನೀರು ಕುಡಿದ ನಿಮಿಷದಲ್ಲಿ ತಿಂದ ಪಾಯಿಸ ಕಕ್ಕಿಕೊಂಡು ನಿರಾಳವಾಗಿದ್ದಳು. ಹಾಗೆ ಮಾರಾಠಿಗರ ರಾಣೆಮ್ಮಜ್ಜಿ, ಗಯ್ಯಾಳಿ ತಿಮ್ಮಕ್ಕ, ಯಂತ್ರ ಕಟ್ಟುತ್ತಿದ್ದ ಪಂದಿಕದ್ರಪ್ಪ ಮಕ್ಕಳು ಮತ್ತು ತಾಯಂದಿರಲ್ಲಿ ಎಂಥ ಧೈರ್ಯ ತುಂಬುತ್ತಿದ್ದರು!

ನಾನು ಐದನೇ ಕ್ಲಾಸಿನಲ್ಲಿದ್ದಿರಬೇಕು. ಸಿಕ್ಕಾಪಟ್ಟೆ ಮಳೆ ಬಂದು ರಾಗಿ, ಭತ್ತ, ಕಡಲೆಕಾಯಿ ಎಲ್ಲವೂ ನೀರುಪಾಲಾಗಿದ್ದವು. ಮಧುಗಿರಿಯಿಂದ ತಹಶೀಲ್ದಾರ್ ಬಂದಿದ್ದರು. ಊರ ಮುಂದಿನ ಚಾವಡಿಯ ಹತ್ತಿರ ನೆರೆದಿದ್ದ ಊರ ಜನಗಳ ಮುಂದೆ ‘ನೋಡ್ರಪ್ಪ ದೇವ್ರು, ದಿಂಡ್ರು ಕೂಡಾ ನಮ್ಮಂಗೆ. ನಮಗೆ ಕೋಪ ಬಂದಂಗೆ ದೇವ್ರುಗೂ ಬರ್ತೈತೆ. ವರುಣ ದೇವನಿಗೆ ಹೆಂಡ್ತಿ ಜೊತೆ ಜಗಳ ಗಿಗ್ಳ ಆಗಿರ್ಬೇಕು. ಅದುನ್ನ ನಮ್ಮ ಮೇಲೆ ತೋರಿಸವ್ನೆ. ನಂದೂ ಎರಡೆಕ್ರೆ ರಾಗಿ ಹೊಲ ಹಾಳಾಯ್ತು. ಈ ಸಾರಿ ನಷ್ಟ ಆದ್ರೇನು ಇನ್ನೆರ್ಡೊರ್ಷ ನೀರಿಗೆ ಬರ ಇರಲ್ವಾ. ಇರೋರು ಇಲ್ದೋರ್ಗೆ ಕೊಟ್ಟು ಅನುಸರಿಸ್ಕಂಡೋಗ್ರಿ. ದೇವರು ದೊಡ್ಡೋನು’ ಎಂದು ತಮಾಷೆಯಾಗಿಯೇ ಧೈರ್ಯ ಹೇಳಿದ್ದರು.

ಅವೊತ್ತು ನಮ್ಮಪ್ಪ, ಕೊಂಡಪ್ಪ, ಸುಬ್ಬರೆಡ್ಡಿ ಸೇರಿದಂತೆ ಊರಿನಲ್ಲಿ ಹತ್ತನ್ನೆರಡು ಜನ ತಹಶೀಲ್ದಾರ್ ಎದುರಿನಲ್ಲಿಯೇ ಇಪ್ಪತ್ತು ಪಲ್ಲ ರಾಗಿ ಶೇಖರಿಸಿ ತಹಶೀಲ್ದಾರ್ ಕೈಯಲ್ಲೇ ಇಲ್ಲವರಿಗೆ ಕೊಡಿಸಿದ್ದರು. ಇಂಥ ಅನೇಕ ಉದಾಹರಣೆಗಳು ಅಂದಿನ ಬದುಕಿನಿಂದ ಹೆಕ್ಕಿ ತೆಗೆಯಬಹುದು.

ಇಂದಿನ ಕರೊನಾದ ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮಲ್ಲಿ ಧೈರ್ಯ ತುಂಬುವ, ಸಮಾಧಾನ ಪಡಿಸುವ, ಕಷ್ಟಗಳಿಗೆ ಹೆಗಲು ಕೊಡುವ ಆಡಳಿತ ಬೇಕು, ಸರ್ಕಾರ ಬೇಕು, ಜನಪ್ರತಿನಿಧಿಗಳು ಬೇಕು, ಸಮಾಜದ ಮುಂಚೂಣಿಯಲ್ಲಿರುವ ನಾಯಕರು ಬೇಕು. ಮಾಧ್ಯಮ ಜಗತ್ತು ಬೇಕು. ಒಟ್ಟಾರೆ ಕಿಲುಬು ಹಿಡಿದಿರುವ ಮಾನವೀಯತೆಯನ್ನು ತಿಕ್ಕಿ ತೊಳೆದು ಬೆಳಗುವಂಥ ಮನಸ್ಥಿತಿ ಸಾರ್ವತ್ರಿಕವಾಗಿ ಚಿಗುರೊಡೆಯಬೇಕು. ಅದು ಸಾಧ್ಯವಾದರೆ ಅದೇ ದೊಡ್ಡ ಸಾಮಾಜಿಕ ಕ್ರಾಂತಿ. ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸ ತುಂಬುವವನೆ ನಿಜವಾದ ನಾಯಕ.

1999ರಲ್ಲಿ ನಾನು ಮೈಸೂರಿನಲ್ಲಿ ಕೆಲಸ ಮಾಡುವಾಗ ಒಮ್ಮೆ ಗೆಳೆಯ ಸ್ವಾಮಿ ಆನಂದ್ ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆದುಕೊಂಡು ಹೋಗಿದ್ದರು. ಎಂಬತ್ತು ವರ್ಷ ಮೀರಿದ ವಯಸ್ಕರೊಬ್ಬರು ನನ್ನ ಹತ್ತಿರ ಬಂದು ‘ನಾನು ಡಾಕ್ಟರ್ ಗುಂಡೂರಾವ್ ಮಧುಗಿರಿಲಿ ಸುಮಾರು ವರ್ಷ ಪ್ರಾಕ್ಟೀಸ್ ಮಾಡಿದ್ದೆ. ನಿಮ್ಮದು ಮಧುಗಿರಿ ತಾಲೂಕಿನ ಹಂದ್ರಾಳವ’ ಎಂದು ಪರಿಚಯ ಮಾಡಿಕೊಂಡಿದ್ದರು!

ನಾನು ಎದ್ದು ಅವರ ಕಾಲಿಗೆ ಬಿದ್ದು, ಸಭೆಗೆ ಅವರನ್ನು ಪರಿಚಯ ಮಾಡಿಸಿದ್ದೆ. ಹಿಂದಿನ ಘಟನೆ ನೆನಪಿಸಿದ್ದೆ. ಅವರಿಗೆ ನೆನಪಿರಲಿಲ್ಲ. ನಾನು ಮೈಸೂರಿನಲ್ಲಿ ಇರುವವರೆಗೂ ತಿಂಗಳಿಗೊಮ್ಮೆಯಾದರೂ ಭೇಟಿಯಾಗುತ್ತಿದ್ದೆವು. ಮನೆಗೆ ಬಂದು ಉಪ್ಪಿಟ್ಟು ದೋಸೆ ತಿಂದು ಹೋಗುತ್ತಿದ್ದರು.

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: