ಸವಿತಾ ನಾಗಭೂಷಣ
—-
ನಿಮಗೆ ಮದುವೆ ಆಗಿದೆಯೆ?
ಇಲ್ಲ…
ಸಾರಿ!
ಪರವಾಗಿಲ್ಲ…
ಈ ಪ್ರಶ್ನೆ..
ಕೇಳಿರುವರು ಹಲವು ಬಾರಿ
ಅಷ್ಟೇ ಸಲ ಹೇಳಿರುವೆನು
ಸಾರಿ ಸಾರಿ….
ನೋಡಿ…
ನಾನು ಒಬ್ಬರನ್ನು ಇಷ್ಟಪಟ್ಟಿದ್ದೆ
ನನ್ನ ತಂದೆ ಅಂದರು….
ನೀನವರ ಮದುವೆಯಾದರೆ
ನಿನ್ನ ಮಕ್ಕಳು ಕಷ್ಟಕ್ಕೆ ಸಿಲುಕಿಕೊಳ್ಳುವರು
ಅವರನ್ನು ಬೇರೆಯವರು ಮುಟ್ಟಿಸಿಕೊಳ್ಳುವುದಿಲ್ಲ….
ನನ್ನನ್ನೊಬ್ಬರು ಇಷ್ಟಪಟ್ಟಿದ್ದರು
ಅವರ ತಾಯಿ ಅಂದರು…
ನಮಗೇನೋ ಒಪ್ಪಿಗೆ ಆದರೆ
ನೀನು ಕಷ್ಟಕ್ಕೆ ಸಿಲುಕಿಕೊಳ್ಳುತ್ತೀಯ
ನಮ್ಮ ಧರ್ಮ ದೇವರು ಊಟ ಬೇರೆ ಬೇರೆ!
ಹೆಜ್ಜೆ ಹೆಜ್ಜೆಗೂ ಭಿನ್ನ-ಭೇದ
“ಮನುಜ” ಇದೊಂದು ವಿಚಿತ್ರ ಪ್ರಭೇದ!
ಇವನಿಂದಾಗಿ ಮಿಕ್ಕ ಜೀವಸಂಕುಲಗಳಿಗೆ
ರೌರವ ನರಕ!
ಈ ಭೂಮಿ ಜೀವಿಸಲು
ಅಷ್ಟೇನೂ ಒಳ್ಳೆಯ ತಾವಲ್ಲ….
ಹಾಗೆ ನಾನು ಮದುವೆಯಾಗಲಿಲ್ಲ
ಮಕ್ಕಳನ್ನೂ ಹೆರಲಿಲ್ಲ!
ಇದು ವಿಪರೀತ!
ಅದು? ಅದು ವಿಪರೀತ ಅಲ್ಲವೇ?
ಶತಶತಮಾನಗಳಿಂದ
ಭುವಿಯನ್ನಾಳಿದ ದೋಷ
ನಿಮ್ಮನ್ನದು ಅಲುಗಾಡಿಸಿಯೇ ಇಲ್ಲವೆ?
…..ಮುಂದೆ?
ಮನುಷ್ಯ!
ಅಷ್ಟು ಸುಲಭವಾಗಿ ಅಳಿದು ಹೋಗುವ ಸಂತತಿಯೆ? ವಿಷಾದವಿಲ್ಲ
ತ್ಯಾಜ್ಯ ಬಿಟ್ಟು ಹೋಗುವುದಿಲ್ಲ! ನೆಮ್ಮದಿಯೆ….
ಇದೆಲ್ಲಾ ಹೀಗೇ ಇರುವುದೆ?
ಬದಲಾವಣೆ ಜಗದ ನಿಯಮ….
ಇಲ್ಲ …ಇಲ್ಲ… ಎಲ್ಲವೂ ವಿಷಮ
ಸಾವಿರ ಸೂರ್ಯರು ಬೆಳಗಿದರು
ಕರಗಿತೆ ತಮ?
ಭೀಕರ ಸತ್ಯ
ಕಾಣುವೆವು ನಿತ್ಯ
ಆಗುವುದೇ ಇದರಂತ್ಯ?
ಸಂದೇಹದಾಂತರ್ಯ!