ಸವಿತಾ ನಾಗಭೂಷಣ
ಎಷ್ಟು ತಗ್ಗಬೇಕು ಎಷ್ಟು ಬಗ್ಗಬೇಕು
ಅವರೇ ಹೇಳುತ್ತಾರೆ…
ಎಷ್ಟು ಕುಗ್ಗಬೇಕು ಎಷ್ಟು ಹಿಗ್ಗಬೇಕು
ಅವರೇ ಹೇಳುತ್ತಾರೇ…
ಏನು ನೋಡಬೇಕು ಏನು ನುಡಿಯಬೇಕು
ಅವರೇ ಹೇಳುತ್ತಾರೆ….
ಏನು ಉಣ್ಣಬೇಕು ಏನು ತೊಡಬೇಕು?
ಅವರೇ ಹೇಳುತ್ತಾರೆ….
ಯಾರ ಕೂಡಬೇಕು ಎಷ್ಟು ಹಡೆಯಬೇಕು
ಅವರೇ ಹೇಳುತ್ತಾರೆ…
ಹೇಗೆ ಬೊಗಳಬೇಕು ಯಾರ ಸಿಗಿಯಬೇಕು
ಅವರೇ ಹೇಳುತ್ತಾರೆ…

ಏನ ಪೂಜಿಸಬೇಕು ಏನ ಭಂಜಿಸಬೇಕು?
ಅವರೇ ಹೇಳುತ್ತಾರೆ….
ಏನ ಖಂಡಿಸಬೇಕು?
ಯಾರದಂಡಿಸಬೇಕು?
ಅವರೇ ಹೇಳುತ್ತಾರೆ
ನೀನೊಂದು ಗೊಂಬೆ….
ಒಪ್ಪಿದರೆ ದೇವತೆ ಸಿಡಿದರೆ ರಕ್ಕಸಿ!
ಪಾಲಿಸಿದರೆ ಪಾಲು
ಸೋಲಿಸಿದರೆ ಕೋಲು!
ತಂಗಿ…
ತಿಳಿದಂತೆ ಮಾಡು….
ಹೊಳೆದಂತೆ ಹಾಡು….
ನಡೆದಂತೆ ಜಾಡು …
ಇರದಿರಲಿ ಸೇಡು-ಕೇಡು !
0 ಪ್ರತಿಕ್ರಿಯೆಗಳು