
ಸರೋಜಿನಿ ಪಡಸಲಗಿ
1
ಇರಬೇಕು ಮರೆವಿನ ಆಳಿಕೆ
ಇರಬೇಕು ಆಗಾಗ ಇರಬೇಕು
ಅಲ್ಲಿ ಇಲ್ಲಿ ಆಕಡೆ ಈಕಡೆ ಸುತ್ತ
ಏನೂ ಕಾಣದಂತೆ ಮತ್ತೆ ಸಿಗದಂತೆ
ನಿಶ್ಚಿಂತ ನಿರಾಳತೆಲಿ ಮೈಮರೆವಂತೆ
ಮರೆವಿನ ಆಳಿಕೆ ಇರಬೇಕು ಆಗಾಗ
ಅಲ್ಲಿ ಚೆಲ್ಲಿ ಹೋಗಿರಬಹುದು
ಇಲ್ಲಿ ಸುರಿದು ಹೋಗಿರಬಹುದು
ಚುಕ್ಕಿ ಹೂವು ತಿಂಗಳನ ಮಿಂಚು
ಕೆದರಿ ಹಾರಿ ಬುದ್ಧಿ ಮಂಕಾಗದಂತೆ
ಮರೆವು ಮುಸುಕು ಹಾಸಬೇಕು ಆಗಾಗ
ಉದ್ದಕ್ಕೂ ಮೆತ್ತಿ ಕೆತ್ತಿ ಬಲೆ ಒಪ್ಪ ಓರಣ
ಬಣ್ಣ ಬಣ್ಣದ ಚಿತ್ತಾರ ಚಿತ್ರಣದ ದಾರಿ
ಎಣಿಸಿ ಗುಣಿಸಿ ಹೆಜ್ಜೆ ಹಾಕಿ ಎದೆಯುಬ್ಬಿ
ಮೆರವಣಿಗೆ ಜೋರಿನಲಿ ಏನೋ ಕುಟುಕಿ
ಕಾಡದಂತೆ ಮರೆವು ಹಣಕಬೇಕು ಆಗಾಗ
ಅಂಗಳದ ರಂಗು ತಂಗಾಳಿ ತಂಪು
ಮುಂಬೆಳಗ ಕಾಂತಿ ಮುಸ್ಸಂಜೆ ಹಾಯಿ
ಚರಗ ಚೆಲ್ಲಿ ಅಡ್ಡಡ್ಡ ಉದ್ದುದ್ದ ತುಂಬಿ
ಸಂದು ಗೊಂದಿನ ಹುದಲು ಕಾಣದಂತೆ
ಮರೆವಿನ ಜಾತ್ರೆ ನೆರೆಯ ಬೇಕು ಆಗಾಗ
ಬಲೆ ಜೋರು ಇರಾದೆ ಯಾಕೀ ತಗಾದೆ
ಮರುಳೆ ಸಾಗಿ ಬಂದ ದಾರಿ ತುಂಬ
ಅಡ್ಡಾ ದಿಡ್ಡಿ ಕಾರುಭಾರು ದರ್ಬಾರು
ದಿಕ್ಕು ತಪ್ಪಿ ಮರುಳು ರಾಜ್ಯವಾಳದಂತೆ
ಬೇಕು ಮರೆವಿನ ಆಳಿಕೆ ಇರಬೇಕು ಆಗಾಗ

2
ಮನಕಿಲ್ಲ ಏಚುಪೇಚು
ಚೊಕ್ಕವಾಗಿ ಹಾಕಿ ಅಪ್ಪಾಳೆ ಚಪ್ಪಾಳೆ
ಮೊಳಕೈ ಆಸರೆಲಿ ಕೆನ್ನೆ ಅಂಗೈಯಲ್ಲಿ
ಹಣೆ ತುಂಬ ಸುಕ್ಕು ನೂರೆಂಟು ಗಂಟು
ಕಣ್ಮಿಟುಕಿಸದೆ ಗಚ್ಚನೆ ಕೂತ ಮೌನ ಮನ
ಅಲ್ಲಾಡದೆ ತಪ ಮಾಡೊ ಯೋಗಿ ಹಾಗೆ
ಏನಾಯ್ತಂತ ನೇರಾನೇರ ಕೂತು ಬುದ್ಧಿ
ಏನಿದು ನಿನ್ನ ಹೊಸ ರೀತಿ ವ್ಯವಹಾರ
ಅದೇನು ಆ ಪರಿ ಗಾಢ ಯೋಚನೆ
ನನಗೇ ತಿಳಿಯದ ಹಾಗೆ ಗುಟ್ಟು ಗುಟ್ಟು
ಸಾಧಿಸಿತಾ ನಿನಗೂ ತಿವಿತು ಬಿಡದೆ
ಊಂ ಹೂಂ ಒಂದಿಲ್ಲ ಎರಡಿಲ್ಲ ಸದ್ದಿಲ್ಲ
ಮಿಸುಕಲಿಲ್ಲ ಮನ ನೋಟ ಹೊರಳಲಿಲ್ಲ
ಚುರ್ ಅಂತು ಬುದ್ಧಿಗೆ ಜೀವ ಕಳಕ್ ಅಂತ
ಗದ್ದ ಗಲ್ಲ ನೇವರಿಸಿ ನೆಟಿಕೆ ತೆಗೆದು ಕೇಳಿತು
ಹೇಳು ಮತ್ತೇನು ಮಾಡಿದೆ ಎಪರ ತಪರ
ದಿಕ್ಕು ತೋಚದ ಮನ ಮೊಗ ಮೇಲೆತ್ತದೆ
ತಬ್ಬಿ ಬುದ್ಧಿಯನು ಕಣ್ತುಂಬಿ ಬಿಕ್ಕಳಿಸಿ
ಏನು ಹೇಗೆ ಹೇಳಲಿ ಮಂಕು ನಾನೊಂದು
ರಾಶಿ ರಾಶಿ ಕಾಪಿಟ್ಟದ್ದು ವ್ಯರ್ಥ ಎಲ್ಲ ವ್ಯರ್ಥ
ಎದೆ ಗೂಡು ಸೋರುತಿದೆ ಎರ್ರಾ ಬಿರ್ರಿ
ಕಿಸಕ್ಕನೆ ನಕ್ಕ ಬುದ್ಧಿ ಅಯ್ಯೋ ಪೆದ್ದೆ ಗೊತ್ತು
ಅದೇನು ಹೊಸದು ತೋರದನ ಮೆತ್ತಿ ಸಾರಿಸಿ
ಸುಣ್ಣ ಬಳಿದು ಒಪ್ಪ ಮಾಡಿ ಬಿಡೋದಷ್ಟೇ
ನನಗೇನು ಬೇರೆ ಕೆಲಸ ಹೇಳು ನಿನ್ನ ಐಬು
ತಿದ್ದಿ ತೀಡಿ ಚೊಕ್ಕ ಮಾಡೋದ ಬಿಟ್ಟು ಅಲ್ವೆ
ಕಿಸಕ್ಕೆಂತು ಮನ ಈಗ ಅದಕಿಲ್ಲ ಏಚುಪೇಚು
ಸರೋಜಿನಿ ಪಡಸಲಗಿ
ಬೆಂಗಳೂರು
0 ಪ್ರತಿಕ್ರಿಯೆಗಳು