ಸರೋಜಿನಿ ಪಡಸಲಗಿ ಅಂಕಣ- ಮನಶ್ಯಾನ ಲೆಕ್ಕನs ಬ್ಯಾರೆ….

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

21

ನಮ್ಮ ಅಣ್ಣಾಗ  ತಮ್ಮ ಮಕ್ಕಳ  ವಿಷಯದಾಗ  ಎಷ್ಟ  ಜವಾಬ್ದಾರಿ, ಪ್ರೀತಿ ಮೇಳೈಸಿದ ಕಾಳಜಿ  ಇತ್ತು, ಅದೆಷ್ಟ  ಅಸ್ಸಲ  ಅಂತ:ಕರಣ  ಇತ್ತಲಾ , ಅದರಕಿಂತಾ  ಒಂದ  ಗುಂಜಿ  ತೂಕ  ಹೆಚ್ಚs  ಕಾಳಜಿ,  ಪ್ರೀತಿ  ತಾಂವು  ಕೆಲಸಾ  ಮಾಡ್ತಿದ್ದ  ಹೈಸ್ಕೂಲ ಮ್ಯಾಲ; ಅವರು ಎಂ. ಎ. ಮುಗಿಸ್ಕೊಂಡ  ಬರೂದ್ರಾಗ ಅದು  ಕಾಂಪೋಸಿಟ್  ಜ್ಯೂನಿಯರ್ ಕಾಲೇಜು ಆಗಿದ್ದು ಅವರ  ಅಭಿಮಾನನೂ  ಹೆಚ್ಚ  ಮಾಡಿತ್ತು. ಇನ್ನ ವಿದ್ಯಾರ್ಥಿಗಳ  ಮ್ಯಾಲ  ಅಂತೂ ಅವರ  ಪ್ರೀತಿ, ಸತ್ತಾ  ಗುಂಜಿ  ಏನ  ಬಂತು,   ನಾಕಾಣೆ  ತೂಕನs  ಹೆಚ್ಚಿತ್ತು. ತಾಂವು  ತಗೋಳೋ  ಅರ್ಧಾ ಪಗಾರದ  ಸಲುವಾಗಿ  ಒಮ್ಮ್ಯರs  ಒಂದ  ಮಾತರs  ಅವರು  ಆಡಿದ್ರು  ಅಂತ  ನನಗ  ಅನಸೂದಿಲ್ಲ. ತುಕೋಳ  ಪೇ ಕಮಿಷನ್  ಬಂದ ಮ್ಯಾಲ  ಪಗಾರದ  ಪರಿಸ್ಥಿತಿಯೊಳಗ  ಒಂಚೂರ  ಸುಧಾರಣಾ  ಕಂಡ್ತು; ಖರೇ  ಅಂಥಾ  ಹೇಳಕೋಳೊ  ಪೈಕಿ  ಏನಲ್ಲಾ. ಅದ್ಯಾವದೂ ಏನೂ  ನಮ್ಮ ಅಣ್ಣಾಗಾಗಲಿ,  ಅವರ ಜೋಡಿ ಇದ್ದ  ಮಾಸ್ತರಗೋಳಿಗಾಗಲಿ  ಅದರದು  ವಿಶೇಷ ಪರಿಣಾಮ  ಆಗಿದ್ದಿಲ್ಲ.  ಅವರು ತಮ್ಮ ಈಗಿದ್ದ ಹಣಕಾಸಿನ  ಪರಿಸ್ಥಿತಿ, ಜೀವನದ ಪದ್ಧತಿ  ಹಿಂಗs ಅಂತ  ಪಥಕರಿಸಿಕೊಂಡ( ತಿಳ್ಕೊಂಡು ನಡದಬಿಟ್ಟಿದ್ರು)  ಬಿಟ್ಟಿದ್ರು. ಅದರ ಜೋಡಿ  ಅಸರಂತ  ತಮ್ಮ ಸಾಲಿ  ಬೆಳವಣಿಗಿ, ಸುಧಾರಣಾ  ಸಲುವಾಗಿ  ಮನಸಗೊಟ್ಟ  ದುಡೀತಿದ್ರು. ಖರೆ  ಅದರ ಬಗ್ಗೆ  ಯಾವದs ದರಕಾರನೂ ಇರತಿದ್ದಿಲ್ಲಾ;  ಯಾರಿಗೂ  ಗೊತ್ತೂ‌ ಆಗ್ತಿದ್ದಿಲ್ಲಾ. ಅದರ ಸಲುವಾಗಿ  ಕಳಕಳಿಯಿಂದ  ಮಾತಾಡಿ,  ಅಕ್ಕರತಿ  ಪಡಾವ್ರೂ‌ ‌‌ ಯಾರೂ  ಇರಲಿಲ್ಲ. ಹಂಗಿತ್ತು ಆಗಿನ  ವ್ಯವಸ್ಥಾ.

ನಮ್ಮ  ಹುಕ್ಕೇರಿ  ಹೈಸ್ಕೂಲ್  ಸುರು  ಆದಾಗ ಮೊದಲ ಅಲ್ಲೆ  ಊರ ತುದಿಗೆ, ಅಂದ್ರ  ಪ್ಯಾಟಿ ತುದಿಗೆ, ಒಂಚೂರ  ಊರ ಹೊರಗs ಇದ್ದ ಒಂದು  ದೊಡ್ಡ ಕಟ್ಟಡದಾಗ  ಸುರು ಆಗಿತ್ತು. ಅಲ್ಲೇ ನಡೀತಿತ್ತು. ಆದರ ಸಾಲಿ ಬೆಳಕೋತ ಹೋಧಂಗ, ವಿದ್ಯಾರ್ಥಿಗಳ  ಸಂಖ್ಯಾನೂ  ಹೆಚ್ಚ ಆಕೋತ ಹೋಧಂಗ  ಸಾಲಿಗೆ ತನ್ನದs ಒಂದು ಸ್ವಂತ  ಕಟ್ಟಡ  ಬೇಕೇ ಆತು ಮತ್ತ ಅದs  ವಾಜ್ಮಿ. ಎಲ್ಲಾರ  ಖಟಿಪಟಿಲೇ ಸಾಲಿ ಕಟಡಕ್ಕ ಊರ ಹೊರಗ  ಒಂದು  ಪ್ರಶಸ್ತ, ದೊಡ್ಡ  ಜಾಗಾ  ಸಿಕ್ತು. ಅದರ ಹಿಂದಿನ  ಬಾಜೂಕ  ಸರ್ಕಾರಿ  ದವಾಖಾನಿ ಇತ್ತು. ನಡುವ  ಒಂದು  ಬೇಲಿ ; ಈಕಡೆ  ಇರೂ ದೊಡ್ಡ ಅಂದ್ರ ಭರಪೂರ  ದೊಡ್ಡ ಜಾಗಾದಾಗ  ಸಾಲಿ  ಕಟ್ಟಡದ  ಕೆಲಸ ಭರದಾಂಡ  ನಡೀತು. ಮಕ್ಕಳಿಗೆ  ದೊಡ್ಡ  ಆಟದ ಬಯಲು; ಒಟ್ಟ ಎಲ್ಲಾ ಅಗದೀ ಶಿಸ್ತ ಇತ್ತು. ಆ ಜಾಗಾ ಎಷ್ಟ ಎಕರೆ  ಇದ್ದೀತು ಅಂಬೂದು ನನಗ ಇಂದಿಗೂ  ಅಂದಾಜ‌ ಸಿಕ್ಕಿಲ್ಲ.

ಸಾಲಿ ಕಟ್ಟಡ  ನಿರ್ಮಾಣ  ಸುರು ಆತು. ರೊಕ್ಕದ್ದೂ  ಹಂಗs  ಜರೂರತ  ಹೆಚ್ಚಾಕೋತ ನಡದಿತ್ತು. ಸುರುವಾತಿನಿಂದ  ಇದ್ದ ಎಲ್ಲಾ ಮಾಸ್ತರಗಳು ‌‌‌‌‌‌‌ಊರೂರ  ತಿರಗಾಡಿ  ಚಂದಾ  ಎತ್ತಲಿಕ್ಕೆ ಹೋಗ್ತಿದ್ರು ಸಾಲಿ  ವ್ಯಾಳ್ಯಾ ಬಿಟ್ಟು. ನಾಗರತ್ನಮ್ಮ ‌‌‌‌‌ಅವರ  ” ಸ್ತ್ರೀ ನಾಟಕ ಮಂಡಳಿ” ಕರಸಿ  ಅವರಿಂದ  ಮೂರು ದಿನಾ  ಮೂರು  ನಾಟಕ  ಇಡಸಿದ್ರು. ಆಗ ನಾ  ಭಾಳ  ಸಣ್ಣಾಕಿ ಇದ್ದೆ- ಆರೇಳು ವರ್ಷದಾಕಿ  ಇರಬೇಕು. ಆದರ  ನಾಟಕಗಳ  ಟಿಕೆಟ್  ಮಾರಲಿಕ್ಕೆ ಅಣ್ಣಾ  ಸುತ್ತ ಮುತ್ತಲಿನ  ಊರುಗಳಿಗೆ  ಹೋಗ್ತಿದ್ರು; ಅದ ಅಗದೀ  ಪಕ್ಕಾ ನೆನಪದ. ” ಸ್ತ್ರೀ  ನಾಟಕ ಮಂಡಳಿ” ಯವರು  ಶ್ರೀ ಕೃಷ್ಣ ಗಾರುಡಿ, ಶ್ರೀ ಕೃಷ್ಣ ಲೀಲಾ,  ಆಮ್ಯಾಲ  ಕಡಿ ‌‌ ದಿನಾ  ಒಂದು ಸಾಮಾಜಿಕ  ನಾಟಕ, ‘ ಸದಾರಮೆ ‘ ಆಡಿದ್ರು. ನಾಗರತ್ನಮ್ಮ ಅವರು ಶ್ರೀ ಕೃಷ್ಣ ಗಾರುಡಿಯೊಳಗ ಭೀಮ, ಶ್ರೀಕೃಷ್ಣ  ಲೀಲಾ ನಾಟಕದಾಗ  ಕಂಸ, ಸದಾರಮೆಯೊಳಗ  ಕಳ್ಳನ ಪಾತ್ರ  ಮಾಡಿದ್ರು. ಆ ಗಳಿಗೆಗಳೆಲ್ಲಾ  ಹಂಗs  ಅಚ್ಚವಳ  ಮನಸಿನ್ಯಾಗ  ಉಳಿದು ಅಲ್ಲೇ ಗಪ್ಪನ ಕೂಡು  ಅಂಥಾವು. ಗಂಡಸರದು, ಹೆಂಗಸರದು ಎಲ್ಲಾ ಪಾತ್ರಗಳನ್ನೂ ಹೆಣ್ಮಕ್ಕಳೇ ನಿಭಾಯಿಸೋರು; ಅಷ್ಟೇ ಪ್ರಭಾವೀ ರೀತಿಯೊಳಗ. 

ಈ ಎಲ್ಲರ  ಪ್ರಯತ್ನ, ಪ್ರಯಾಸ ಹುಸಿ  ಹೋಗಲಿಲ್ಲ. ಅಂಥಾ  ದೊಡ್ಡ  ಗ್ರೌಂಡ್  ಗಚ್ಚನ  ಬಿಗದಿರತಿತ್ತು. ಅಷ್ಟ ಮಂದಿ  ಬಳದ ಬಂದಿರಾವ್ರು. ಹಂಗ ಹೆಚ್ಚ ಹೆಚ್ಚ  ಮಂದಿ  ಜಮಾಸ್ಧಂಗ ನಮ್ಮ ಅಣ್ಣಾಗ  ಖುಷಿ  ಆಗೋದು. ನಮ್ಮನಿ  ಮಂದಿ ನಾವೆಲ್ಲಾರೂ  ಅಣ್ಣಾ ಅಂತೂ ಸರೀನೇ; ಅವ್ವಾ, ಏಕಾ, ಎಲ್ಲಾ ಹುಡಗೂರು  ಮೂರೂ ದಿನಾ ನಾಟಕ  ನೋಡಿದ್ದ ನೆನಪದ ನಂಗ. ಅದೂ ಅಗದೀ  ಹೆಚ್ಚಿನ  ದರದ್ದು  ಟಿಕೆಟ್ ದು  ರೊಕ್ಕಾ ಕೊಟ್ಟು. ಸಾಲಿ  ಕಟ್ಟಲಿಕ್ಕೆ  ಅದು ಒಂದು ನಮ್ಮ ತರಫೆ  ಕೈ ಜೋಡಿಸಿಧಂಗ  ಆಗ್ತದ ಅಂತ. ಉಳದವರ  ಪಾತ್ರಕ್ಕಿಂತ  ನಾಗರತ್ನಮ್ಮ ‌ಅವರ  ಪಾತ್ರ  ಪೂರಾ  ಅಚ್ಚೊತ್ತಿದ್ಹಂಗ ನೆನಪವ. ಅವರು  ಭೀಮನ  ಪಾತ್ರದಾಗ  ಮೀಸಿ  ತಿರುವೋ ಆ ಥಾಟು, ಆ  ಧೀಟು  ಮರೀಲಿಕ್ಕೇ  ಸಾಧ್ಯ ಇಲ್ಲ. ಪೂರಾ  ಸ್ಟೇಜನs  ಅಗಳ್ಯಾಡಿ  ಆ ಬಯಲ  ತುಂಬ  ಗುಡಗಿನಗತೆ  ಧ್ವನಿಸೋದು ಅವರ ಧ್ವನಿ. ಅವರ  ಆ  ಅಬ್ಬರದ ಅಟ್ಟಹಾಸಕ್ಕ ಸಣ್ಣ ಕೂಸೊಂದು  ಚೀರಿ ಚೀರಿ  ಅತ್ತದ್ದು  ನೆನಪದ. ನಾವು ಸ್ವಲ್ಪ  ದೊಡ್ಡಾವ್ರು ಸುಮ್ಮ ಕೂತಿದ್ವಿ ಅಷ್ಟs. ನನಗ  ಶ್ರೀಕೃಷ್ಣ ಲೀಲಾದ  ಕಂಸನ  ಪಾತ್ರಧಾರಿ ನಾಗರತ್ನಮ್ಮ  ಭಾಳ ಛಲೋ ನೆನಪಿದ್ದಾರ.  ಕೃಷ್ಣ ಕಂಸನ್ನ  ಕೊಲ್ಲೋ  ಹಿಂದಿನ  ದಿನಾ  ಕಂಸನ್ನ ಹೆಜ್ಜಿ ಹೆಜ್ಜಿಗೆ ನಡಗಸೋ  ಆ    ಅಕಾರಣ ಅಂಜಿಕಿ, ಆತನ  ದು:ಸ್ವಪ್ನದ ದೃಶ್ಯ ಭಾರೀ ಮಸ್ತ್  ಹೊಂದಿಸಿ  ತಯಾರ  ಮಾಡಿದ್ರು..  ಆ ರಾತ್ರಿ  ಕಂಸಗ  ತನ್ನ ರುಂಡ ಮ್ಯಾಲ ಹಾರಿ ಹೋಗಿ  ಮತ್ತ ತಿರಗಿ  ಕುತಿಗಿ ಮ್ಯಾಲ ಕೂತಹಂಗ  ಕನಸ ಬೀಳ್ತಿತ್ತು. ಆ ಮಬ್ಬುಗೆಂಪಿನ  ಬೆಳಕು;  ರುಂಡ ಕಂಸನ  ಕುತಿಗಿ ಬಿಟ್ಟು  ಮ್ಯಾಲಕ  ಹಾರೂದು; ಜುಂಯ್ಯಂತ ಚೆಂಡಿನಗತೆ  ಬಂದು ಕುತಿಗಿ  ಮ್ಯಾಲ ಕೂಡುದು! ಉಸಲ ಬಿಗಿ ಹಿಡಿದು, ಇಷ್ಟಗಲ ಕಣ್ಣ ತಗದು ನಮ್ಮ  ಗೋಣ  ಎತ್ತರಿಸಿ , ಎತ್ತರಿಸಿ ನೋಡ್ಲಿಕ್ಹತ್ತಿದ್ವಿ ನಾವು  ಅದನ್ನ. ಹೆಂಗ ರುಂಡ ಜಿಗದಾಡ್ತದ   ಅಂತ  ಅಗಾಧ ಅನಸೋದು. ಸದಾರಮೆಯ ಕಳ್ಳನೂ ಹಂಗs; ಆ ಖರ್ರಗಿನ ಬಣ್ಣಾ! ಅಬ್ಬಬ್ಬಾ! ಹಂಗs ಛಂದ ಹಾಡು. ಈ ಎಲ್ಲಾತರದೂ ಚರ್ಚಾ ನಮ್ಮ ಏಕಾನ ಜೋಡಿಯವರ  ಗುಂಪಿನ್ಯಾಗ ವಾರಗಟ್ಲೆ ನಡೆದಿತ್ತು.  ಒಂದs ಮಾತಿನ್ಯಾಗ  ಹೇಳಬೇಕಂದ್ರ  ನಮ್ಮ ಸಾಲಿ ಕಟ್ಟೂ ಮುಂದ  ಇಂಥಾ ಅಪರೂಪದ  ನಾಟಕ ನೋಡಿಧಂಗಾತು. ಆ ಗುಂಗಿನ್ಯಾಗ  ಇದ್ಧಾಗನs ನಮ್ಮ ಹೈಸ್ಕೂಲಿನ  ದೊಡ್ಡ  ಕಟ್ಟಡ  ತಯಾರಾತು.

ಆ ಸಾಲಿಯೊಳಗನs ಅಣ್ಣಾ  ಒಂಬತ್ತು, ಹತ್ತನೇ ಕ್ಲಾಸ್ ಗೆ  ಕನ್ನಡ ಕಲಸ್ತಿದ್ರು. ಅಣ್ಣಾಂದು ಎಂ. ಎ. ಮುಗದು  ಅವರು ವಾಪಸ್ಸ ಬರೂದ್ರಾಗ ನಮ್ಮ ಹೈಸ್ಕೂಲು ಕಾಂಪೋಸಿಟ್ ಜ್ಯೂನಿಯರ್  ಕಾಲೇಜ  ಆಗಿತ್ತು. ಅಣ್ಣಾ ಈಗ ಲೆಕ್ಚರರ್ ಆದ್ರು. ಹಂಗs  ಹತ್ತನೇ ಕ್ಲಾಸ್ ನ  ಒಂದ ಡಿವಿಜನ್ ಗೆ  ಕ್ಲಾಸ್  ತಗೋತಿದ್ರು. ಆವಾಗೇ  ನಾ  ಹೊಸಾ ಸೀರಿ ಉಟ್ಟು  ಎರಡs  ನಿಮಿಷ ತಡಾ ಆಗಿ  ಬಂದು  ಕ್ಲಾಸ್ ನಿಂದ  ಹೊರಗ ನಿಂತದ್ದು!  ಅಲ್ಲಿ ಕಲಿಯೂ ಹುಡಗೂರ  ಹಿತಾ, ಸಾಲಿ ಬೆಳವಣಿಗಿಯೊಳಗ  ಅಗದಿ  ನಿಸ್ವಾರ್ಥ ಬುದ್ಧಿಲೇ  ಅಸರಂತ ದುಡಿದು ತಮ್ಮ ಜೀವಾ, ಜೀವನಾ ಸವಿಸಿದ ನಮ್ಮ ತಂದಿಗೆ,  ಅಂದ್ರ   ಅಣ್ಣಾಗ  ಅವರ ಹೈಸ್ಕೂಲ್  ಕಮೀಟಿ  ಕೊಟ್ಟ ದೇಣಿಗಿ; ದೇಣಿಗೀನ ಅನಬೇಕು ಅದಕ, ಅದನ  ನೆನಿಸಿಧಾಂಗ  ಭಾರೀ  ವಿಚಿತ್ರ ಕಳವಳ  ಅನಸ್ತದ ನಂಗ.

ಸಾಲಿ  ಸುರುವಾತಿನಿಂದ  ಇದ್ದ ಹೆಡ್ ಮಾಸ್ತರು ರಿಟೈರ್  ಆದ ಮ್ಯಾಲ  ಹೊರಗಿನಿಂದ ಒಬ್ಬ ಹೆಡ್ ಮಾಸ್ತರು ಬಂದ್ರು. ಮುಂದ ಅವರೇ ಕಾಂಪೋಸಿಟ್ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರೂ  ಆಗಿ  ಮುಂದುವರದ್ರು. ಅವರ ತರುವಾಯ  ಸಿನೀಯಾರಿಟಿ  ಲಿಸ್ಟ್ ನ್ಯಾಗ ನಮ್ಮ ಅಣ್ಣಾ  ಅಂದ್ರ ಮುತಾಲಿಕ ಮಾಸ್ತರದೇ ಪಾಳಿ, ಹೆಸರು  ಇತ್ತು. ಆದರ ಕಮೀಟಿ ಅದೇನೋ ಹೆಂಗೋ ಏನೋ   ಮಾಡಿ, ಏನೋ ಕಾರಣಾ  ಹುಡಕಿ, ಅಣ್ಣಾನಕಿಂತಾ ಜ್ಯೂನಿಯರ್ ಇದ್ದ  ಮಾಸ್ತರ ಒಬ್ರನ್ನ ಮ್ಯಾಲ ತಂದು ಪ್ರಿನ್ಸಿಪಾಲ್  ಅಂತ ಮಾಡಿದ್ರು. ದೇಸಗತಿ  ಇರದಿದ್ರೂ  ಆ ರಕ್ತ, ಸ್ವಾಭಿಮಾನ  ಅಣ್ಣಾನ  ರಕ್ತದಾಗ  ಹರೀತಿತ್ತು. ಅಪಮಾನ, ಅನ್ಯಾಯ ಅಜೀಬಾತ  ಸಹನ ಆಗ್ತಿದ್ದಿಲ್ಲ ಅವರಿಗೆ. ತಾಂವಂತೂ  ಅದರ ನೆಳ್ಳಿನಿಂದನs ‌‌ ಅಷ್ಟ ದೂರ ಇರಾವ್ರು; ಅಂಥಾ ಕೆಲಸ  ಮತ್ತ ಯಾರ ಯಾಕ ಮಾಡವಲ್ರು, ಅದೂ ಅವರಿಗೆ  ಸಹನ ಆಗ್ತಿದ್ದಿಲ್ಲ. ಈಗ  ಆ ಮುತಾಲಿಕ ದೇಸಾಯರ ರಕ್ತ ಖವಳಿಸ್ತು! ( ಕಾವೇರ್ತು)!  ಅಣ್ಣಾ  ಕೋರ್ಟಿಗೆ ಹೋದ್ರು.

ನಮ್ಮಣ್ಣ  ಡಾ.ಪ್ರಕಾಶ  ಮುತಾಲಿಕ ಆಗ  HP  ಕಂಪನಿಯ (IT Company) ಜನರಲ್ ಮ್ಯಾನೇಜರ್ ಇದ್ದಾ. ತಮ್ಮ ಪ್ರಮೋದ ಮುತಾಲಿಕ ನ್ಯಾಷನಲ್ ಕಾಲೇಜಿನ್ಯಾಗ ಲೆಕ್ಚರರ್ ಇದ್ದಾ. ಇನ್ನೊಬ್ಬ ತಮ್ಮ ಆನಂದ ಮುತಾಲಿಕ  ಇನ್ನೊಂದ ಐಟಿ  ಕಂಪನಿಯೊಳಗ  ಸಾಫ್ಟವೇರ್ ಇಂಜಿನಿಯರ್  ಆಗಿದ್ದ. ಸಣ್ಣ ತಮ್ಮ ಪ್ರದೀಪಂದು ಇನ್ನೂ  ಇಂಜಿನೀಯರಿಂಗ್ ಕಲ್ಯೂದು  ನಡೆದಿತ್ತು. ವಿದ್ಯಾನೂ  ಇನ್ನೂ ಕಲೀತಿದ್ಲು. ನಾ ಮದವಿ ಆಗಿ ಬಂದಿದ್ದೆ. ನಮ್ಮದೆಲ್ಲಾರದೂ  ಸಂಪೂರ್ಣ ಬೆಂಬಲ ಇತ್ತು ನಮ್ಮ ಅಣ್ಣಾಗ. ಅವರ ಜೋಡಿ ಇದ್ವಿ. ಕಡೀ ಗಳಿಗಿ ತನಕಾನೂ  ನಮ್ಮ ಅಣ್ಣಾನ ಕಡೆನs   ಕೇಸು  ಅದ  ಅನ್ನೋ ಭರೋಸ ಇತ್ತು. ಆದರ ಮರುದಿನ   ಜಡ್ಜಮೆಂಟಿನ್ಯಾಗ ಕಮೀಟಿ  ತರಫೆ  ಆತು; ನಮ್ಮ ಅಣ್ಣಾ ಸೋತ್ರು. ಆ ಹೊತ್ತನs  ಬೆಂಗಳೂರಿನಿಂದ  ಹೊಂಟ ಅಣ್ಣಾ ಹುಕ್ಕೇರಿಗೆ  ಬಂದ್ರು. ಪ್ರಮೋದ ಮತ್ತ ಆನಂದ ಇಬ್ರೂ ಅವರ ಜೋಡಿ ಬಂದ್ರು. ಅಣ್ಣಾ ಹಂಗೇ ಸರsಳ  ತಮ್ಮ ಜೀವಾನೇ  ಆಗಿದ್ದ, ಅಲ್ಲೇ ಜೀವಾ ತೇಯ್ದಿದ್ದ  ಆ  ನಮ್ಮ ಹೈಸ್ಕೂಲ್ ಗೆ ಹೋಗಿ  ರಾಜೀನಾಮೆ ಕೊಟ್ಟೇ ಅಣ್ಣಾ ಮನಿಗೆ  ಬಂದ್ರು. ಅಣ್ಣಾನ  ಸರ್ವಿಸ್  ಇನ್ನೇನ  ಭಾಳ  ಇದ್ದಿದ್ದಿಲ್ಲ; ಆಗ ಇನ್ನೂ ರಿಟೈರ್ ಮೆಂಟ್  55  ವರ್ಷಕ್ಕನೇ ಇತ್ತು. ಆದರ ಅಣ್ಣಾಗ  ಒಂದು ನಿಮಿಷನೂ ಅಲ್ಲಿರೂದು ಸಾಧ್ಯ ಇರಲಿಲ್ಲ. ಇದು ನಮ್ಮ ಅಣ್ಣಾ!

ಆ ಮ್ಯಾಲ  ಮುಂದ ಎರಡ ದಿನಕ್ಕ ಪ್ರಮೋದ, ಆನಂದ  ವಾಪಸ್ಸು ಬೆಂಗಳೂರಿಗೆ  ಬರೂವಾಗ  ಅದೇ ಬಸ್ಸಿನಿಂದ  ಇಳೀಲಿಕ್ಹತ್ತಿದ್ದ ಕಮೀಟಿಯ  ಒಬ್ಬ ಮೆಂಬರ್ ನನ್ನ ತಮ್ಮಂದಿರನ  ನೋಡಿ, ” ಏನ್ರೆಪಾ  ಎಲ್ಲಿದ್ದಾನ ನಿಮ್ಮ ಅಪ್ಪಾ? ಇನ್ನೂ ಬೆಂಗಳೂರಾಗs  ಇದ್ದಾನೋ ಏನ ಬಂದಾನೋ ಹುಕ್ಕೇರಿಗೆ ”  ಅಂತ ಕೇಳಿದ್ರಂತ. ಆ ಇಬ್ರೂ ಆಣ್ಣಾನ  ಮಕ್ಕಳು ಬರೋಬ್ಬರಿ ಉತ್ತರಾ  ಕೊಟ್ರಂತ. ” ನಮ್ಮಪ್ಪಗ ನಾವು  ನಾಲ್ಕು ಮಂದಿ ಎದಿಯುದ್ದ ಬೆಳದ ಗಂಡಸಮಕ್ಕಳು ಇದ್ದೀವಿ; ಅಲ್ಲೇ ಅದೇ ಬೆಂಗಳೂರಾಗ” ಅಂತ ಹೇಳಿದ ಕೂಡಲೇ ಆತ ಗಪ್ ಚುಪ್  ಹೋದ್ರಂತ. ಇಂಥ ನ್ಯಾಯಕ್ಕ ಯಾವ  ಹೆಸರು ಅಂತ  ನಂಗ ಗೊತ್ತಿಲ್ಲ. ನಮ್ಮ ಅಣ್ಣಾ  ಆಮ್ಯಾಲ  ಆ ವಿಷಯದ ಬಗ್ಗೆ ಮಾತಾಡಲಿಲ್ಲ; ಹಂಗs ನಾವೂ ಯಾರೂ. ಆ ಮ್ಯಾಲ ಮತ್ತ ಕಮೀಟಿಯವರು ” ಸರ್ ನಿಮಗೂ ಅದೇ ಸ್ಕೇಲ್  ಕೊಡ್ತೀವಿ, ಬರ್ರಿ” ಅಂತ ವಿನಂತಿ ಮಾಡ್ಕೊಂಡ್ರೂ  ಅಣ್ಣಾ ಆ ಕಡೆ ಹೊಳ್ಳಿನೂ ನೋಡಲಿಲ್ಲ. ಆ ಅಧ್ಯಾಯ ಮುಗಿಯಿತು ಅಲ್ಲಿಗೆ.

ಅಣ್ಣಾ  ಆ ಮ್ಯಾಲ ಪೂರಾ ವ್ಯಾಳ್ಯಾ ತಮ್ಮ ಹೊಲಾ- ಮನಿ, ತಮ್ಮ ಹಸ್ತ ಸಾಮುದ್ರಿಕ, ಸಂಖ್ಯಾ ಶಾಸ್ತ್ರದ  ಅಧ್ಯಯನದಾಗ  ಹಾಕಿದ್ರು. ನಮ್ಮಣ್ಣಂದೂ  ಮದವಿ ಆಗಿತ್ತು ಆಗ. ಮುಂದ ಎರಡ  ವರ್ಷಕ್ಕ  ವಿದ್ಯಾಂದೂ ಮದವಿ ಆತು. ಆಮ್ಯಾಲ ಉಳದಾವರ  ಮದವಿ, ಅಲ್ಲೇ ಕಲಿಲೀಕ್ಕ ಹೋಗಿದ್ದ ನನ್ನ  ದೊಡ್ಡ ಮಗನ  ಕಾಳಜಿ  ಇದರಾಗ  ವ್ಯಸ್ತ ಆದ್ರು ನಮ್ಮ ಅಣ್ಣಾ.

1989ರೊಳಗ  ನಮ್ಮ ಏಕಾ  ಹೋದ ಮ್ಯಾಲ ಅಣ್ಣಾ  ಸ್ವಲ್ಪ  ಮೆತ್ತಗ ಆದ್ರು. ಆದ್ರ ಯಾವುದೂ ನಿಂದ್ರೋದಿಲ್ಲ. ನಮ್ಮ ಅವ್ವಾಂದು  ಜನ್ಮಭರದ  ದೊಡ್ಡ  ಸಾಥ ಇತ್ತು ಅವರಿಗೆ. ಅವರ ಪ್ರತಿ ಸುಖಾ – ದು:ಖದಾಗ, ಕಷ್ಟದಾಗ  ಯಾವ ಗದ್ದಲ ಇಲ್ಲದs ಸರಳ  ಹೊಂದಿಕೊಂಡ  ಹೋಗ್ತಿದ್ದ  ಸರಳ ಜೀವ ನಮ್ಮ ಅವ್ವಾ. ಎಂದೂ, ಯಾವದಕ್ಕೂ ತನಗಂತ ಏನೂ ಬೇಡದ, ಏನೂ ಮಾಡಿಕೊಳ್ಳದ  ನಿಸ್ವಾರ್ಥ ಜೀವ  ನಮ್ಮ ಅವ್ವಾ  ಈಗ  ಅಣ್ಣಾಗ  ನೆಳ್ಳ ಆಗಿ ನಿಂತ್ಲು. 

ಏಕಾಂದು ಒಂದು ನಮೂನಿ  ನಿಸ್ವಾರ್ಥತೆ  ಆದರ  ಅವ್ವಾಂದು  ಒಂದ ಬ್ಯಾರೆ  ನಮೂನಿ. ಕುಟುಂಬದ  ಬುನಾದೀನs ಯಾರ, ಯಾವ ಕಲ್ಪನಾಕ್ಕೂ  ನಿಲುಕದ, ಈ ಸದ್ದಿಲ್ಲದ ನಿಸ್ವಾರ್ಥತೆ ಏನೋ  ಅನಕೋತೀನಿ ನಾ. ನಮ್ಮ ಏಕಾ  ಒಬ್ಬs  ಮಗನ ಮ್ಯಾಲ ತಪಾ ತಗದು  ತನ್ನ ಜೀವದ  ಪರಿವಿನs ಇಲ್ಲದ  ಒಬ್ಬಂಟಿಯಾಗಿ  ಈಸಿ ತನ್ನದನೋದನ್ನ ಬಿಟ್ಟು ಮಗನ ಜೀವನಾ ರೂಪಿಸಿದ್ಲು. ಅವ್ವಾ  ಆರ ಮಂದಿ ಮಕ್ಕಳ  ನಡುವ  ತನ್ನ ಜೀವಾ  ಹರದ ಹಂಚಿ ಬಾಳಿದ್ಲು; ತನಗಂತ  ಮತ್ತೇನೂ  ತಗೊಳದಿದ್ರೂ ಜೀವನ ಪೂರ್ತಿ  ಅಣ್ಣಾನ ಬೋಝಾದಾಗ  ಪಾಲ ತಗೊಂಡ್ಲು; ಸಂಭಾಳಿಸಿದ್ಲು. ಎಲ್ಲೂ ಎಂದೂ ಹೊರಗ ಹೋಗು ಪುರಸೊತ್ತೇ ಇರತಿದ್ದಿಲ್ಲ ಈ  ದೊಡ್ಡ  ಸಂಸಾರ  ತೂಗಸೂದ್ರಾಗ, ಮತ್ತ ನಮ್ಮ ಅವ್ವಾಗ  ತನ್ನ ಮಕ್ಕಳು -ಮರಿ, ತನ್ನ ಸಂಸಾರ ಬಿಟ್ಟು ಅದ ಬೇಕೂ ಅನಸತಿದ್ದಿಲ್ಲಾ. ಈಗ ಎಲ್ಲಾ ಜವಾಬ್ದಾರಿ  ನಿಭಾಯಿಸಿ  ನಿಸೂರ ಆಧಂಗ ಅನಿಸಿರಬೇಕು; ಅಣ್ಣಾ, ಅವ್ವಾ ಕೂಡಿ  ಒಂಚೂರ  ಸಣ್ಣ ಪುಟ್ಟ ಯಾತ್ರಾ- ತೀರ್ಥ ಮಾಡ್ಲಿಕ್ಹತ್ತಿದ್ರು; ಮಕ್ಕಳ ಕಡೆ ಬೆಂಗಳೂರಿಗೆ ಹೋಗಿ  ಅವರ ಮನಿ, ಸಂಸಾರ  ಎಲ್ಲಾ ನೋಡಿ ಖುಷಿ ಪಡ್ತಿದ್ರು. ಅಸರಂತ ಹರತಾಟಕದಾಗ ಮುಳಗಿದ ನಮ್ಮ  ಅವ್ವಾ – ಅಣ್ಣಾ ಎಂದಿಗೂ ಸಂತೃಪ್ತರೇ; ಪ್ರತಿ ವಿಷಯದಾಗೂ  ಸಂತೋಷ ಹುಡುಕಿ ಖುಷಿ ಪಡೋ  ನಮ್ಮ ಅಣ್ಣಾನ ಧರತಿ  ನಮ್ಮ ಅವ್ವಾನ ಮನಸಿನ  ಮ್ಯಾಲ ತನ್ನ  ಗಾಢ  ಛಾಯಾ ಛಲ್ಲಿ ಬಿಟ್ಟಿತ್ತು. ಅಪರೂಪದ ಜೋಡಿ ಜೀವಗಳು! 

ಖರೆ  ಯಾವದು ಯಾರ ಕೈಯಾಗ ಅದ! ಮನಶ್ಯಾ ಒಂದ ಲೆಕ್ಕಾ ಹಾಕಿದ್ರ ಆತ, ಆ ಸುಖ- ದು:ಖ  ಕೊಡಾಂವನ  ಲೆಕ್ಕ ಬ್ಯಾರೇನs  ಇರ್ತದ. ಅದರಾಗ ಏನ ಸಂಶಯನs  ಇಲ್ಲ.

ನಾವೆಲ್ಲಾ  ಮಕ್ಕಳು  ಒಂದು ಪದ್ಧತಿ ಹಾಕೊಂಡಿದ್ವಿ  ಏನೂ ಮಾತು, ಚರ್ಚಾ ಇಲ್ಲದನ. ದೀಪಾವಳಿ ಹಬ್ಬಾ ಎಲ್ಲಾರೂ ಸೇರಿ ಅಂದ್ರ ನಾವು ಆರೂ ಮಂದಿ ಮಕ್ಕಳು ನಮ್ಮ ನಮ್ಮ ಸಂಸಾರ ಸಮೇತ  ಹುಕ್ಕೇರಿ ಮನಿಯೊಳಗನs  ಮಾಡೂದು ಅಂತ. ಹಂಗs ನಮ್ಮ ಏಕಾ ಹೋದ ಮ್ಯಾಲೂ  ಅವ್ವಾ – ಅಣ್ಣಾ  ಹುಕ್ಕೇರಿಯೊಳಗ  ಇರೂ ತನಕಾ  ಅಲ್ಲೇ ದೀಪಾವಳಿ  ಮಾಡ್ತಿದ್ವಿ. ಈಗನೂ ನಾವು ಎಲ್ಲಾರೂ ಬೆಂಗಳೂರಾಗೂ  ಅದನs  ಮುಂದುವರಿಸೀವಿ; ಅಂದ್ರ ಎಲ್ಲಾರೂ ಕೂಡೇ  ಹಬ್ಬಾ  ಮಾಡೂದು. ದಿನಾಲೂ ಒಬ್ಬೊಬ್ಬರ ಮನ್ಯಾಗ ಹಬ್ಬ ; ಅಂದ್ರ ಹಬ್ಬದೂಟ, ನಗಿ, ಚ್ಯಾಷ್ಟಿ, ಪಗಡಿ ಆಟಾ ಎಲ್ಲಾ ಅಗದೀ  ಹಂಗೇ ಹೂಬೇಹೂಬ ಹಂಗೇ ನಡಸೀವಿ.1991 ಜುಲೈದಾಗ  ನಮ್ಮ ಭಾವನ ಮಗಳ  ಮದುವೆ ಆತು. ಮುಂದ ನಾಕ ದಿನಕ್ಕ ನಮ್ಮ ಪ್ರಕಾಶನ ಮನಿ ವಾಸ್ತು ಆತು. ಅದs ವರ್ಷ ಎಪ್ರೀಲದಾಗ  ಆನಂದನ ಮನಿದು ವಾಸ್ತು ಆಗಿತ್ತು. ಒಟ್ಟ ಒಮ್ಮೊಮ್ಮೆ ವಿಚಾರ ಮಾಡಿದಾಗ ಈ 1991 ರಾಗ  ಭಾಳ ಭಾಳ ನಡದದ ಅನಿಸಿ ಗಪ್ಪ ಕೂತಿರತೀನಿ  ಸ್ವಲ್ಪ ಹೊತ್ತು. ಆತು ಇವೆಲ್ಲಾ ಮುಗ್ಯೂದ್ರಾಗ  ದಸರಾ – ದೀಪಾವಳಿ ಬಂದs ಬಿಟ್ಟು. ಆಗ ನಾವು ಗರಗದಾಗ ಇದ್ದದ್ದು. ನನಗ ಆ ವರ್ಷ ದೀಪಾವಳಿಗೆ  ಹುಕ್ಕೇರಿಗೆ  ಬರೂ ಸಾಧ್ಯತಾ ಇದ್ದಿದ್ದಿಲ್ಲ. ನನ್ನ ಭಾವನ ಮಗಳ ಮದುವೆ ಅದs ವರ್ಷ ಆಗಿತ್ತಲಾ ಆಕಿದು ಮೊದಲ ದೀಪಾವಳಿ, ಅಳ್ಯಾತನಾ  ಎಲ್ಲಾ ನಮ್ಮ ಕಡೆ ಗರಗದಾಗನs  ಇಟ್ಕೊಂಡಿದ್ವಿ. ಅದಕ ನಾನು, ಸುರೇಶ  ಮಕ್ಕಳನ ಕರಕೊಂಡು  ದಸರಾಕ್ಕನs  ಹುಕ್ಕೇರಿಗೆ  ಹೋಗಿ ಬರೂದಂತ  ಠರಾಸಿ  ಹಂಗs  ಮಾಡಿದ್ವಿ.  ಆಗ ನಮ್ಮ ಮುತ್ತ್ಯಾ ಅಂದ್ರ ನಮ್ಮ ಅವ್ವಾನ  ಅಪ್ಪ, ಐನಾಪುರ  ಅಜ್ಜಾಗ  ಆರಾಮ ಇದ್ದದ್ದಿಲ್ಲ; ವಯಸ್ಸೂ ಆಗಿತ್ತು. ಅವರನೂ  ಭೆಟ್ಟಿ ಆಗಿ  ಬರೂದಾತು. ನಮ್ಮ ಅಂಬಕ್ಕಜ್ಜಿಗೆ  ಖುಷಿನೋ ಖುಷಿ.  ಮಗಳು – ಅಳಿಯ, ಮೊಮ್ಮಕ್ಕಳು,ಮರಿಮಕ್ಕಳು ಎಲ್ಲಾರೂ ಬಂದಾರಂತ.  ನನಗ ಬ್ಯಾರೇನs  ಕಾಳಜಿ ಹತ್ತಿತ್ತು. ಯಾಕೋ ನಮ್ಮ ಅವ್ವಾ ಥಕಸಿದಗತೆ  ಅನಸಲಿಕ್ಹತ್ತಿತ್ತು  ನಂಗ. ಆಕಿ ಏನ  ಅಂಥಾ ದೊಡ್ಡ  ಆಳ ಅಲ್ಲಾ. ಆದರೂ ಭಾಳ ಸೊರಗಿದ್ಲು. ಬಣ್ಣನೂ  ಸುಟ್ಟಹಾಂಗ ಆಗಿತ್ತು. ಸೊಂಟ ನೋವು  ಬರ್ತಿತ್ತು; ಆಗಾಗ ಬೆನ್ನೂ ನೋಯ್ತಿತ್ತು. ಸುರೇಶ  ಟಾನಿಕ್ಕ ಅದು ತಂದು ಕೊಟ್ಟು ” ಭಾಳ ಶ್ರಮಾ  ಮಾಡ್ಕೋಬ್ಯಾಡ್ರಿ  ಅವ್ವಾ. ಸ್ವಲ್ಪ ಆರಾಮ ತಗೋರಿ” ಅಂತ ಹೇಳಿದ್ರು. ಆದರ ಹಂಗ ರೆಸ್ಟ್ ಮಾಡೂವಾಕೀನs ಆಕಿ.” ನನಗೇನಾಗೇದ್ರಿ, ಆರಾಮ ಇದ್ದೀನ ನಾ” ಅಂದ್ಲು. ಆ ಮಾತಿನ್ಯಾಗ ಏನ ದ್ರವಾನೇ  ಇರಲಿಲ್ಲ; ಹಂಗs ನಮ್ಮ ಅಣ್ಣಾನ ಮಾರಿ ಮ್ಯಾಲೂ. ಅಣ್ಣಾ  ಭಾಳ ಚಿಂತಿಯೊಳಗ ಬಿದ್ದಿದ್ರು.

ದಸರಾ ಮುಗಿಸಿ  ನಾವು ಗರಗಕ್ಕ ಹೊಂಟ್ವಿ. ದೇವರಿಗೆ ಅವ್ವಾ ಹಾಕಿಟ್ಟ ತುಪ್ಪದ ದೀಪ ಹಚ್ಚಿ ಇಟ್ಟು, ಅಣ್ಣಾಗ, ಅವ್ವಾಗ ನಮಸ್ಕಾರ ಮಾಡಿ, “ಹೋಗಿ ಬರ್ತೀನಿ” ಅಂತ ಹೇಳೂ ಮುಂದ ಗಂಟಲದಾಗ ಏನೋ ಸಿಕ್ಕಹಂಗಾತು. ಯಾಕೋ ಗೊತ್ತಿಲ್ಲಾ ಏನೋ ಒಂಥರಾ ಕಳವಳ, ತಳಮಳ. ಮತ್ತ ಒಂದ ಸರ್ತೆ  ಪೂರಾ ಮನಿ ತಿರಗ್ಯಾಡಿ ಬಂದೆ. ಅಟ್ಟದ ಮ್ಯಾಲ  ಹೋಗಿ ಬಂದು ಮತ್ತ ಮತ್ತ ಹಿತ್ಲಾಗ  ಹೋಗಿ ಬಂದೆ. ” ಯಾಕ ಅಕ್ಕವ್ವಾ, ಏನ ಹುಡಕಲಿಕ್ಹತ್ತಿ? ಎಲ್ಲಾ ಸಾಮಾನ ಹಾಕೊಂಡಿ?” ಅಂತ  ಅಣ್ಣಾ ಕೇಳಿದ್ರು.” ಹೂಂ ನ್ರೀ ಅಣ್ಣಾ  ಎಲ್ಲಾ ತಗೊಂಡೀನಿ. ಹಿತ್ತಲದಾಗಿನ್ನು ಒಂದ ನಾಕ ಹೂ ತಗೋತೀನಿ ” ಅಂತ ಹೇಳಿ, ಅವ್ವಾ ಕೊಟ್ಟ ಇಷ್ಟುದ್ದ ಮಲ್ಲಿಗಿ ಮಾಲಿ ಹಾಕೊಂಡ , ಹಿತ್ಲಾಗಿನ  ಹೂ ಇಷ್ಟ ಒಂದು ಕವರದಾಗ  ಹಾಕೊಂಡು ಹುಕ್ಕೇರಿ ಮನಿಂದ ಹೊರಗ ಬಂದೆ. ಹೌದು, ನಾ ಹೊರಗ ಬಿದ್ದೆ, ತಿರಗಿ ಅಲ್ಲಿ  ಕಾಲಿಡೂದಾಗಲೇ  ಇಲ್ಲ. ನಾವೆಲ್ಲಾ ಆಡಿ, ಜಗಳಾಡಿ, ಅತ್ತು, ನಕ್ಕು ಬೆಳೆದ ಆ ಮನೀದು ಋಣಾ  ಅಂದಿಗೇ ಮುಗೀತು.ಮತ್ತ ನಾ ಹುಕ್ಕೇರಿ ಮನಿ ಮಾರೀನs  ನೋಡಲಿಲ್ಲ; ಇಂದಿಗೂ ಆ ಕಡೆ ತಿರಗಿಲ್ಲಾ. ಹೌದು, ಅಣ್ಣಾ – ಅವ್ವಾ 1991 ಡಿಸೆಂಬರ್ 31 ಕ್ಕ ಬೆಂಗಳೂರಿಗೆ ಹೊರಟು , 1992 ಜನೇವರಿ ಒಂದನೇ ತಾರೀಖಿಗೆ ಬೆಂಗಳೂರಗೆ ಬಂದು, ಬೆಂಗಳೂರಾಗ  ಕಾಲಿಟ್ರು. ಶಾಶ್ವತವಾಗಿ ಬಂದ ಬಿಟ್ರು; ಹುಕ್ಕೇರಿ ಮನಿ ಕೀಲಿ ಹಾಕಿದ್ರು. ನಮ್ಮ ಅಣ್ಣ,ತಮ್ಮಂದಿರು ಠರಾಸಿದ್ರು  ಇನ್ನ ಅವ್ವಾ – ಆಣ್ಣಾನ್ನ ಹುಕ್ಕೇರಿಯೊಳಗ ಇಡಾಂಗಿಲ್ಲ ಅಂತ. ಪ್ರಮೋದ ಬಂದು ಅವರನ ಕರಕೊಂಡು ಬಂದಾ. ನಾವು  ಧಾರವಾಡ ಸ್ಟೇಷನ್ ದಾಗ ಟ್ರೇನ ಹತ್ತಿ ಹುಬ್ಬಳ್ಳಿ ತನಕಾ ಅವರ ಜೋಡಿ ಹೋಗಿ ವಾಪಸ್ಸ ಬಂದ್ವಿ. ಅವ್ವಾ ಭಾಳ ಸೋತಿದ್ಲು; ನಮ್ಮ ಅವ್ವಾಗ ‘ ಕ್ಯಾನ್ಸರ್ ‘ ಆಗಿತ್ತು! ನಮ್ಮ ಅಣ್ಣಾಂದು ಹರಣ ಹಾರಿಧಂಗ ಆಗಿತ್ತು. ಮೌನ ಆಗಿದ್ರು; ಬಹುಶಃ ಮುಂದಿಂದಕ್ಕ ತಮ್ಮನ್ನ ತಾವೇ ತಯಾರ ಮಾಡ್ಕೋಳಿಕ್ಹತ್ತಿದ್ರು ನಮ್ಮ ಅಣ್ಣಾ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Shrivatsa Desai

  ಈ ವಾರದ ಸ್ಪೆಷಲ್: ಬೀದಿನಾಟಕದ ಸೊಗಸೇ ಬೇರೆ ಯಾವ ದೇಶ, ಕಾಲ, genre ಇರಲಿ. ಅದರಲ್ಲೂ ಒಂದೇ ಜಾತಿಯವರೇ – ಯಕ್ಷಗಾನವೆ ಆಗಲಿ ಬಯಲಾಟವೇ ಆಗಲಿ- ಎರಡೂ ತರದ ಪಾತ್ರ ವಹಿಸುವಾಗ! ಇಲ್ಲಿ ಮೀಸೆ ತಿರುವ ನಾಗರತ್ನಮ್ಮನ ಥಾತು- ಧೀಟು. ಅವರ ನಟನೆಯ ಪ್ರಭಾವವನ್ನು ಓದಿ ನಗದವರು ಬಹಳ ಜನ ಇರಲಿಕ್ಕಿಲ್ಲ: “ಸ್ಟೇಜನs  ಅಗಳ್ಯಾಡಿ  ಆ ಬಯಲ  ತುಂಬ  ಗುಡಗಿನಗತೆ  ಧ್ವನಿಸೋದು ಅವರ ಧ್ವನಿ. ಅವರ  ಆ  ಅಬ್ಬರದ ಅಟ್ಟಹಾಸಕ್ಕ ಸಣ್ಣ ಕೂಸೊಂದು  ಚೀರಿ ಚೀರಿ  ಅತ್ತದ್ದು  ನೆನಪದ.” ಪೌರಾಣಿಕ ಸಾಮಾಜಿಕ ನಾಟಕ ದಾಟಿ Life imitates stage ಅನ್ನುವಂತೆ ರಾಜಕೀಯ ಮಸಲತ್ತು ‘ಅಣ್ಣಾ’ ನ ರಾಜೀನಾಮೆ ಮಾಡಿಸಿದ್ದು! ಅವರ ಸಂಸಾರದ ದು:ಖಾಂತದ ಸುಳುವು ಕೊಟ್ಟಂತೆ ಭಾಸ ಅಥವಾ ಇನ್ನೂ ತಿರುವು ಇದೆಯೋ ಮುಂದಿನ ವಾರ! ಶ್ರೀವತ್ಸ ದೇಸಾಯಿ

  ಪ್ರತಿಕ್ರಿಯೆ
  • Sarojini Padasalgi

   ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.
   ನಾಗರತ್ನಮ್ಮ ನವರ ಪಾತ್ರ ನಿರ್ವಹಣೆಯ ಥಾಟೇ ಹಾಗಿರತಿತ್ತು. ಆ ಒಂದು ಕ್ಷಣ ನಾವೂ ಆ ಪಾತ್ರದಲ್ಲಿ ಮುಳುಗಿ ಹೋಗಿ ಇದು ನಾಟಕ ಅಂಬೋದನ್ನೇ ಮರೆತು ಅವರ ಗದಗುಟ್ಟಿಸುವ ರೀತಿಯ ಅಬ್ಬರಕ್ಕೆ ನಡಗ್ತಿದ್ವಿ.
   ಅಣ್ಣಾ ರಾಜಿನಾಮೆ ಕೊಟ್ಟಿದ್ದಕ್ಕೆ ನಾವ್ಯಾರೂ ಹಳಹಳಿಸಲಿಲ್ಲ; ಅಭಿಮಾನದಿಂದ ಉಬ್ಬಿದ್ವಿ.ಆದರೆ ನಮ್ಮವ್ವನ ಜಡ್ಡು ಆ ಕಾಲನ ಅಟ್ಟಹಾಸ ನಮ್ಮನ್ನು ನಡುಗಿಸ್ತು. ಆಗಲೂ ನಮ್ಮನ್ನು ಗಟ್ಟಿಯಾಗಿ ನಿಲ್ಲಿಸಿದ್ದು ಕಹಿ ನುಂಗಿ ಜೀರ್ಣಿಸಿ ಕೊಂಡ ಅಣ್ಣಾನ ದೃಢತೆ.

   ಪ್ರತಿಕ್ರಿಯೆ
 2. ಶೀಲಾ ಪಾಟೀಲ

  ಅಣ್ಣಾ ಮತ್ತು ಅವ್ವಾ ಅವರ ಜೀವನ ಓದುತ್ತ ಹೋದಂತೆ ಅವರ ಪರಿಚಯವಾಗುತ್ತ ಹೋಗುವದು. ಅಣ್ಣಾ ಅವರು ಹೊಂದಾಣಿಕೆಯ ಜೀವನ ನಡೆಸಿ ತಮ್ಮ ಅಭ್ಯಾಸ, ಹೊಲ, ಮನೆ ಮತ್ತು ಮಕ್ಕಳ ಶಿಕ್ಷಣ ಎಲ್ಲ ನಿಭಾಯಿಸಿದ್ದನ್ನು ಓದಿ ಹೆಮ್ಮೆ ಮೂಡಿತು. ಅವರ ರಾಜೀನಾಮೆಯ ಪ್ರಸಂಗ ಮನಕಲುಕಿತು. ಭದ್ರ ಬುನಾದಿ ಹಾಕಿದ ತಂದೆ ಪಡೆದ ನೀವೆಲ್ಲ ಧನ್ಯರು. ಅವ್ವಾ ಅವರ ಅನಾರೋಗ್ಯ…..ಓದಿ ದೇವರ ಆಟ ಬಲ್ಲವರಾರು ಎನಿಸಿತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: