ಸರೋಜಿನಿ ಪಡಸಲಗಿ ಅಂಕಣ- ಕೊರಿಯೂ ಹುಳದ್ದ ಸದ್ದs ಇರ್ಲಿಲ್ಲ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

26

ಈ  ಜೀವನ  ಅಂಬೂದರೇ ಎಷ್ಟ ವಿಲಕ್ಷಣ  ಅಂತೀನಿ!  ಒಂದರೇ  ಸರಳ ರೇಖಾ  ಅಂಬೂದ ಇಲ್ಲs  ಇಲ್ಲ ಇಲ್ಲಿ! ದಿನದ  ಪ್ರತಿ ಗಳಿಗಿಗೂ  ಒಂದ ಘಟನಾ  ಘಡಾಸಲಿಕ್ಕೇ ಬೇಕು ಮತ್ತ  ಹಂಗೇ ಏನ ಅಸಿಮಿಸಿ  ಇಲ್ಲದs ಘಡಾಸೇತದ. ಆದರ  ಪ್ರತಿ ಒಂದಕನೂ  ಪ್ರತ್ಯೇಕ  ಘಡಣನs  ಇರತದ. ಒಂದರಗತೆ  ಮತ್ತೊಂದಿರಂಗಿಲ್ಲ. ಹಂಗs  ಒಂದ- ಕೊಂದ  ಸಂಬಂಧ ಇದ್ದೂ ಇಲಧಂಗ  ಇದ್ರೂ ಎಲ್ಲಾ  ಅಂಟಗೊಂಡೇ  ಇರತಾವ. ಆಗನs ಆ ದಿನಾ   ಪೂರಾ  ಆಧಂಗ,  ಮುಂದಕ  ಸರಧಂಗ ಲೆಕ್ಕ. ಎಷ್ಟೋ ಸರ್ತೆ ನನಗ  ನಾನs  ಅನಕೋತೀನಿ  ಎಂಥಾ  ಅಸಂಗತ  ವಿಚಾರ ಇದು  ಅಂತ. ಖರೇ  ಹಂಗಂತ  ಅದೇನ  ಸುಳ್ಳಂತೂ  ಅಲ್ಲಾ. ಈಗ ಇಲ್ಲೆ ಅಂದ್ರ ನಮ್ಮ ಅವ್ವಾ  ಹೋದಾಗನೂ ಹಂಗs  ಅನಸತಿತ್ತು ನಂಗ. ತಿಂತಿದ್ವಿ, ಉಣ್ತೀದ್ವಿ, ನಗೀನೂ ಏನ ಪುಟ್ಟ ಪೂರಾ  ಮರತಿದ್ದಿಲ್ಲ. ಆದರ ನೋವು, ದು:ಖ, ಅಳು  ಇರೂದೇ  ಅವೆಲ್ಲದರ  ಆಸಪಾಸಿನ್ಯಾಗನs ಏನ ಅಗದಿ  ತಮ್ಮ ಹಕ್ಕಿನ ಮಾಲ್ಕಿ ಇದ್ಧಂಗ. ಅವಕೆಲ್ಲಾ ಏನ ಸಂಬಂಧ ಇದ್ದೂ ಇಲಧಂಗನs  ಆದ್ರೂ ಇದ್ದದ್ದಂತೂ  ಖರೆ. ಹಿಂಗs  ದಿನದ  ಮ್ಯಾಲ  ದಿನಾ ಹೊಂಟಿದ್ದು.

ಆ  ಹತ್ತ ದಿನದಾಗ  ಯಾರ ಮಾತಾಡಸ್ಲಿಕ್ಕೆ ಬರಾವ್ರು – ಹೋಗಾವ್ರು  ಇಲ್ಲೇನ  ಹುಕ್ಕೇರಿಗತೆ ಆ ಪ್ರಮಾಣದಾಗ  ಏನ ಇದ್ದಿದ್ದಿಲ್ಲ. ಅಷ್ಟ ಒಂಚೂರ – ಚಾರ  ಹಾಲಚಾಲ  ಅಂದ್ರ ಯಾವಾಗರೆ ಯಾರರೆ  ಬರೂದು – ಹೋಗೂದು  ನಡದಿರತಿತ್ತು. ಹಿಂಗಾಗಿ ಖಾಲಿ ತಲಿ,  ಖಾಲಿ ಮನಸು ಅದರ ಜೋಡಿ  ಅವ್ವಾ ಇಲ್ಲದs  ಆಕಿ ನಳ್ಳಾಟದ  ಸಪ್ಪಳಾನೂ ಇಲ್ಲದ ಮನಿ ತುಂಬ ಆಕಿ ನೆಳ್ಳs  ಆದ  ಮಕ್ಕಳು ಸೊಸೆಯಂದಿರು -ಮೊಮ್ಮಕ್ಕಳಿಂದ  ತುಂಬಿದ್ರೂ  ಪೂರಾ  ಖಾಲಿ ಖಾಲಿ ಅನಸೂ ಮನಿ! ಸಾಕಲಾ ಇಷ್ಟ ಜಾಗ  ಆ ಅಸಂಗತ  ವಿಚಾರಗಳ  ಠಾಂವ ಠಿಕಾಣಕ್ಕ ! ಆದ್ರೂ  ಇಂಥಾದ್ರಾಗನೂ  ಮನಸು ಹಿಂದ ಹಿಂದಕ  ಸರಕೋತ  ಏಕಾ  ಹೋದಾಗಿಂದನ್ನ  ನೆನಪಿಸಿ ಕೊಂಡು  ಅದರಾಗ  ಏನೋ ಹುಡಕ್ತಿತ್ತು. ಅದೂ ಅಸಹನೀಯ ನೋವು, ದು;ಖದ್ದೇ,  ಸಂಗತಿ. ಈಗ ಇಲ್ಲೂ , ಇದೂ ಒಂದು  ಅಂತ. ಆಳ‌  ಇಲ್ಲದ ಯಾತನಾಮಯ ಘಟನಾ. ಆದ್ರೂ  ಸುದ್ಧಾ  ನನಗ  ಅದಕೂ, ಇದಕೂ ಒಂದ  ಸಣ್ಣ ಫರಕ ಕಂಡೇ ಕಾಣಸ್ತಿತ್ತು. ಏಕಾ  ಹೋದಾಗ  ಅವ್ವಾ, ಅಣ್ಣಾ  ಇಬ್ರೂ  ಇದ್ರನೂ  ಒಂದ  ಖಾಲೀತನಾ  ಅಂಬೂದು  ಎದ್ದೆದ್ದ  ಬಡೀತಿತ್ತು. ಈಗ  ಇಲ್ಲಿ ಇರೂದು  ಬರೀ ಖಾಲಿತನಾ  ಅಲ್ಲಾ. ನಿರ್ವಾತದ್ದು ಒಂದ  ದೊಡ್ಡ  ಗೋಳ ಠಿಕಾಣಿ  ಹೂಡಿ  ಬಿಟ್ಟಿತ್ತು. ಖಾಲಿತನಕ್ಕೂ,  ನಿರ್ವಾತಕ್ಕೂ ಇರೂ  ಫರಕನs  ಏಕಾಂದು  ಮತ್ತ  ಅವ್ವಾನ  ಸಾವಿನ  ನಡುವನೂ ಇದ್ದದ್ದು  ಅಂಬೂದರ  ಕಲ್ಪನಾ  ಸಣ್ಣ ಹಂಗೆ  ಹಣಕಿ ಹಾಕ್ಲಿಕ್ಹತ್ತಿತ್ತು. ಹಂಗೇ ಅದು  ಪಟಾಸ್ಯೂ ಬಿಟ್ತು  ಒಂದ  ಸಣ್ಣ ಘಟನಾ ಘಟಿಸಿ.

ನಮ್ಮ ಅವ್ವಾ  ಹೋಗಿ  ಆರೇಳ  ದಿನಾ  ಆಗಿದ್ದೀತು. ಅಣ್ಣಾ ಇದ್ರು; ನನ್ನ  ಅಣ್ಣತಮ್ಮಂದ್ರು, ತಂಗಿ, ವೈನಿಗಳು, ಅವರ  ಮಕ್ಕಳು ಎಲ್ಲಾ  ಇದ್ರೂ  ನನಗ್ಯಾಕೋ ಏನೋ  ಖಾಲಿ  ಬಯಲೋ, ದಟ್ಟ ಕಾಡೋ ಗೊತ್ತs  ಆಗದ  ಸ್ಥಿತಿಯೊಳಗ ಇದ್ದ  ನನ್ನ  ಕಣ್ಣ ಕಟ್ಟಿ  ಬಿಟ್ಹಂಗ ಆಗಿತ್ತು. ನನಗ  ಬಾಳಾ ಅಂತ  ಅನಿಸಗೋಳು ಇಚ್ಛಾ ಭಾಳ  ಪ್ರಬಲ  ಆಗಿತ್ತು. ಯಾಕೋ ನಾ ಹಿರ್ಯಾಳು  ಅಂತ  ಅನೂದ ಕೇಳ್ಳಿಕ್ಕನs  ಒಂಥರಾ ಅನಸ್ತಿತ್ತು. ಖರೆ ನಾನs  ಹಿರ್ಯಾಳ  ಆಗಿ ಏಕದಂ  ಪೋಕ್ತ ಆಗಿ ಬಿಟ್ಟಿದ್ದೆ. ಎಷ್ಟ್ರ ಮಟ್ಟಿಗೆ  ಖರೆನ ಹಂಗ ಆಗಿದ್ದೆ  ಅಂಬೂದ  ನನಗs  ಇನ್ನೂ ಲೆಕ್ಕ ಹತ್ತಿಲ್ಲ. 

ಆ ದಿನ ಬಹುತೇಕ  ಏಳನೇ  ದಿನಾ ಇತ್ತು  ಅನಸ್ತದ. ಹೊರಗ  ಆ ಮನಿ, ಅದs  ಅವ್ವಾ ಇಲ್ಲದ  ಆ ಮನಿ  ಹಾಲ್ ನ್ಯಾಗ  ನಾವs  ಎಲ್ಲಾರೂ ಏನೋ ಸುದ್ದಿ  ಮಾತಾಡಕೋತ  ಕೂತಿದ್ವಿ. ನನಗs  ಗೊತ್ತ ಆಗಧಂಗ  ಒಮ್ಮೆಲೆ  ಅಳು ಬಲೆ  ಜೋರಲೇ ನುಗ್ಗಿ ಬಂತು; ಥೇಟ್  ಜಾತ್ರ್ಯಾಗ  ತಪ್ಪಿಸಿಕೊಂಡ ಪೋರಿ ಅಳ್ತದಲಾ  ಹಂಗ. ಇಷ್ಟ ದಿನಾ  ಘಟ್ಟಿ  ಹಿಡದ  ಇಟ್ಟದ್ದು  ನನ್ನ  ಹತೋಟಿ  ತಪ್ಪಿಧಂಗಾಗಿತ್ತು. ಬಿಕ್ಕಿ ಬಿಕ್ಕಿ ಅಳ್ಳಿಕ್ಹತ್ತಿದ್ದ  ನನ್ನ ನೋಡಿ  ಎಲ್ಲಾರೂ  ಘಾಬರಾಸಿ  ನನ್ನ ನೋಡ್ಲಿಕ್ಹತ್ರು. ಅಣ್ಣಾ ” ಯಾಕ ಅಕ್ಕವ್ವಾ, ಏನಾತು? ಹಿಂಗ್ಯಾಕ ” ಅಂದ್ರು. ಖರೆ ಅಂದ್ರ ನಾ  ಆಗ ಏನೂ ಮಾತಾಡಬಾರದು ಅಂತ  ಅನ್ಕೊಂಡಾಕಿ  ಬಾಯಿಂದಲೇ ಮಾತು ಹೊರಗ ಬಂದs  ಬಿಟ್ತು. ” ಅಣ್ಣಾ, ಶೋಭಾ  ಮಾವಶಿಯರೆ  ಬರಬಾರದೇನ್ರೀ?  ಮನ್ಯಾಗ ಯಾರೂ  ದೊಡ್ಡಾವರ  ಇಲಧಂಗ ಆಗೇದ. ಏನೂ ಸುತಾಸಧಂಗ ಆಗೇದ.”  ಅಂದೆ. ಆಗ ನಮಗೆ  ಇಬ್ರು  ಮಾವಶಿಗೋಳ ಇದ್ರು, ಸುಧಾ ಮಾವಶಿ  ಹೋದ ಮ್ಯಾಲ. ನಮ್ಮ ಪ್ರಭಾ  ಮಾವಶಿಗೆ ಬರೂದು, ಇರೂದು ಅದೇನ ಅಕಿಗೆ  ಜಮಾಸ್ತಿದ್ದಿಲ್ಲ. ನಮಗ ನಮ್ಮ ಸಣ್ಣ ಮಾವಶಿ, ಶೋಭಾ ಮಾವಶಿ ಮ್ಯಾಲ   ಸತ್ತಾ ಸಲಿಗಿ ಎಲ್ಲಾ ಒಂಚೂರ  ಜಾಸ್ತಿನೇ ಏನು  ಭಾಳೇ ಇತ್ತು. ಈಗೂ ಅದು ಹಂಗೇ ಅದ. ನನ್ನ  ಅಳಬುರಕ ಮಾತಿಗೆ ಅಣ್ಣಾ , ” ಯಾಕ  ಬರಬೇಕ ಅಕ್ಕವ್ವಾ? ಬರಲಿ ಬಿಡು  ಅವರಿಗೆ  ಅನುಕೂಲ ಆದಾಗ. ನಾ ಇಲ್ಲೇನ  ದೊಡ್ಡಾಂವಾ” ಅಂದ್ರು. ನಾ ಕಣ್ಣ ಒರಸಿಗೊಂಡು  ಅಣ್ಣಾನ  ಕಡೆ  ನೋಡ್ದೆ. ಹೌದು, ಅಣ್ಣಾ ದೊಡ್ಡಾವ್ರು, ಹಿರ್ಯಾರು  ಅಲ್ಲಿದ್ರು. ಖರೆ . ಆದರ  ನನಗ್ಯಾಕೋ  ಆ ನಿರ್ವಾತ ಅಲ್ಲೇ  ಅವರ ಸುತ್ತಮುತ್ತ  ಗುಂಥಾಸಿಕೋತ  ಬಂದದ್ದು  ಎಲ್ಲಾರ ಮ್ಯಾಲ  ಒಂದು ಪದರ ಪಸರಿಸಿಧಂಗ ಕಂಡ್ತು. ಅದಕ  ಬ್ಯಾರೆ ಯಾವ ವ್ಯಾಖ್ಯಾನೂ  ಇಲ್ಲ. ಅದು ನಿರ್ವಾತ  ಅಷ್ಟೇ.ಇದು  ಕಾಯಂ ನಮ್ಮ ಸೋಬತಿ ಇರೂದೇ ಅಂತ ಎದ್ದ ಅವ್ವಾನ ಖೋಲ್ಯಾಗ ಹೋಗಿ  ಅಲ್ಲೆ  ಮೂಲ್ಯಾಗ ಇಟ್ಟ ದೀಪಾ ನೋಡಿ ದೊಡ್ಡ  ಉಸರ ಎಳಕೊಂಡೆ.

ಅವ್ವಾಂದ  ದಿನ – ಕರ್ಮ ಎಲ್ಲಾ  ಮುಗದು. ಊರಿಂದ ಬಂದ  ಮಾವಶೆಂದ್ರು, ಮಾಮಾ, ಮಾಮಿಗೋಳೆಲ್ಲಾ  ವಾಪಸ್ಸು ಹೋದ್ರು. ನಾನು ವಿದ್ಯಾನೂ ಹೊಂಟ್ವಿ  ಊರಿಗೆ  ಅಂದ್ರ ನಾ ಧಾರವಾಡಕ್ಕ, ವಿದ್ಯಾ ಗೋಕಾಕಕ್ಕ. ಅಣ್ಣಾನ್ನ  ನಾ ನಂಜೋಡಿ  ಧಾರವಾಡಕ್ಕ ಕರಕೊಂಡ ಬಂದೆ ಆಗ. 

ಈ  ಬದುಕಿನ್ಯಾಗ  ಏನರೇ  ಅಗದಿ ಅಸ್ಸಲ ಪಾಠ  ಕಲಸೂ, ಹಾದಿ  ತೋರಸಾವರ  ಯಾರರೆ ಇದ್ರ  ಅದು ಈ  ಕಾಲ, ವ್ಯಾಳ್ಯಾ ಅಷ್ಟs. ಅದನ ಬಿಟ್ರ ಇನ್ಯಾರಿಗೂ  ಶಕ್ಯನs  ಇಲ್ಲ  ಆ  ಕೆಲಸ. ಅಪ್ಪ ಅಂದ್ರ ಏನ ಅಂತ ಗೊತ್ತಿಲ್ಲದ  ವಯಸಿನ್ಯಾಗಿಂದನ ಅಪ್ಪ ಇಲ್ಲದ  ಹೆಂಗ  ಬದುಕಬೇಕು  ಅಂತ ಅದು ಕಲಿಸ್ತು  ನಮ್ಮ  ಅಣ್ಣಾಗ. ಇದ್ದ ಅವ್ವ ಸೋನವ್ವನ್ನs  ಎಲ್ಲಾ ಅಂತ ಹೆಂಗ  ಅನಕೋಬೇಕು  ಅಂಬೂದನ್ನ ಕಲಿಸ್ತು. ಎಲ್ಲಿತನಕಾ  ಅಂದ್ರ ಹೆಚ್ಚು ಕಡಿಮಿ  ಆಕೀ ಮ್ಯಾಲನs  ಸಂಪೂರ್ಣ ಅವಲಂಬಿತ  ಆಗೂ ಅಷ್ಟು. ಆ ಮ್ಯಾಲ  ಅವ್ವಾ ಬಂದ ಮ್ಯಾಲ  ಸುದ್ಧಾ  ಏಕಾನ  ಜಾಗಾ ಹಂಗೇ ಘಟ್ಟಿಮುಟ್ಟ  ಇತ್ತು. ಹಂಗs  ಅದs  ವ್ಯಾಳ್ಯಾಕ್ಕ  ಅಣ್ಣಾನ  ಬದುಕು  ವಿಶಾಲ  ಆಗಲಿಕ್ಹತ್ತು. ಸುತ್ತೂ ಕಡೆ  ಟೊಂಗಿ  ಠಿಸಲ  ಒಡೀಲಿಕ್ಹತ್ತು. ದಿನ ದಿನಕ್ಕ  ಬೆಳದು  ಇಷ್ಟುದ್ದ, ಅಷ್ಟಗಲ  ಹಬ್ಬಿ ಪಸರಾಸಲಿಕ್ಕ ಚಾಲು ಆಗಿ  ಹೆಚ್ಚು ಹಸರ ತುಂಬಕೊಂಡ  ಬಲೆ ಛಂದ  ಕಳೆ  ಬಂತು, ದೃಷ್ಟಿ ತಾಕೂ ಹಂಗನ ಅಗದಿ. ಅವ್ವಾನ  ಸುತ್ತ  ಅವರ  ಆ ಹೊಸಾ ಪ್ರಪಂಚ  ನಿರ್ಮಾಣ  ಆತು. ಏಕಾನ  ಸುತ್ತ ತಿರಗೂ ವಿಷಯಗಳ  ಹರಿವs  ಬ್ಯಾರೆ, ಪ್ರಪಂಚನ  ಬ್ಯಾರೆ;

ಈ ಹೊಸಾ  ಪ್ರಪಂಚದ  ರೂಪನs ಬ್ಯಾರೆ. ಈಗ ಆ  ವ್ಯಾಳ್ಯಾ ಅಂದ್ರ ಕಾಲ  ಇವೆರಡರ ನಡಬರಕ  ಹೆಂಗ ಮೇಳ  ಸಾಧಸಬೇಕು  ಅಂಬೂದನ ಕಲಿಸ್ತು   ಅಣ್ಣಾಗ. ಹಗರಕ ಅವಲಂಬನದ ಪರ್ಲ ಹರಕೊಂಡು ಸ್ವಂತ  ಭಾರಾ ಹೊರೂಹಂಗ ಎದ್ದ ನಿಂತ್ರು ಅಣ್ಣಾ. ಮುಗಿಲಿನ್ಹಾಂಗ  ಇಷ್ಟಗಲ ಹರಡಿ ದೊಡ್ಡ ಛತ್ರ ಛಾಯಾ ಆದ್ರು ಈ ಹೊಸಾ  ಪ್ರಪಂಚಕ್ಕ ಅವ್ವಾನ  ಸೋಬತಿ. ಹಿಂಗಾಗಿ  ಏಕಾ ಹೋದಾಗ ಅಣ್ಣಾ  ವಿಚಲಿತ  ನಕ್ಕಿ ಆದ್ರು; ಆದ್ರ ಪೂರಾ ಮುರದ ಬೀಳಲಿಲ್ಲ. ವ್ಯಾಳ್ಯಾ  ಅದನ್ನ ರಿಪೇರಿ ಮಾಡಿ  ಆ ಖಾಲಿತನಾನೂ  ತುಂಬ್ಕೊಂಡ  ನಡಿಲಿಕ್ಕೆ  ಕಲಿಸ್ತು. ಅವ್ವಾಂದ  ದೊಡ್ಡ  ಸಾಥ ಇತ್ತು ಅವರಿಗೆ. ಇದಕ ಯಾವ  ವ್ಯಾಖ್ಯಾನೂ  ಇಲ್ಲ ಮತ್ತ  ಬಹುತೇಕ  ಬೇಕೂ  ಆಗಿಲ್ಲಾ. ಇದು ಬದುಕು.

ಈಗ  ಆ  ಸಾಥನs  ಕಡದ  ಹೋತು ಕಾಯಂ ತರೀಕ. ಈ  ವಯಸ್ಸಿನ್ಯಾಗ  ಅಣ್ಣಾಗ  ಅದನ್ನ  ತಗೋಳೂದು  ಭಾಳ ಕಷ್ಟ ಆತು. ಅವ್ವಾ ಬರೋಬ್ಬರಿ ಅರವತ್ತನಾಲ್ಕು ವರ್ಷದಾಕಿ ಆಕಿ ಹೋದಾಗ  ಮತ್ತ ನಮ್ಮ ಅಣ್ಣಾ ಅರವತ್ತೇಳು ವರ್ಷದಾವ್ರು. ಆದರ ಅನಿವಾರ್ಯತೆ ಅಂಬೂದ ಏನದಲಾ,  ಅದು ಆ ವ್ಯಾಳ್ಯಾದ್ದ ಭರೋಸಮಂದ ಸಹಾಯಕ  ಇದ್ಧಾಂಗ. ಎರಡೂ  ಕೈಜೋಡಿಸಿ ಮತ್ತ ತಿರಗಿ  ಅಣ್ಣಾನ ದಿನ ನಿತ್ಯದ  ಜೀವನಾನ  ಒಂದು ಶೂನ್ಯತಾದ  ಜೋಡೀನs  ಒಂದ ಹೊಂದ ಹಿಡದ ನಡ್ಯೂ ಹಾಂಗ  ಬೇಜಮಿ  ಮಾಡ್ದು. ಅಣ್ಣಾನ  ಜೀವನದಾಗಿನ  ನಿಯಮಿತತನ, ಆ ಶಿಸ್ತು, ಪ್ರತಿ ಗಳಿಗಿಗೂ  ಕಿಮ್ಮತ್ತ  ಕೊಡು ರೀತಿ ಎಲ್ಲಾ ಇಲ್ಲಿ ಈಗ  ಭಾಳ ಮದತಕ್ಕ ನಿಂತು ಅಣ್ಣಾಗ. 

ಮುಂಜಾನೆ  ಚಹಾ ಕುಡದು  ಯುನಿವರ್ಸಿಟಿ ಕಡೆ  ವಾಕಿಂಗು,  ಅಲ್ಲೇ  ಬಯಲಾಗ , ಸ್ವಚ್ಛ ಹವಾದಾಗ  ಒಂದ ಗಿಡದ ಬುಡಕ  ತಮ್ಮದು ನೇಹಮಿ ಪ್ರಮಾಣೆ  ಪ್ರಾಣಾಯಾಮ, ಧ್ಯಾನ,  ವ್ಯಾಯಾಮ  ಎಲ್ಲಾ ಮುಗಿಸಿ  ಮನಿಗೆ ಬರೂದು. ತಮ್ಮ ಟೈಂ ಗೆ  ಬರೋಬ್ಬರಿ ಸ್ನಾನಾ – ಪೂಜಾ, ತಿಂಡಿ  ಮುಗಿಸಿ ಲೈಬ್ರರಿ. ಹೀಂಗ ವ್ಯವಸ್ಥಿತ ನಡೀತು. ಅವರ ಆ  ನೋವಿಗೆ ಒಂಚೂರ ಮುಲಾಮ  ಹಚ್ಚಿ ಮ್ಯಾಲೆ  ತ್ಯಾಪಿ  ಹಚ್ಚಿಧಂಗ ಆಗಿ  ಸ್ವಲ್ಪ ಮಟ್ಟಿಗೆ ಠೀಕ  ಅನೂ ಹಾಂಗ ಆತು. ಆ ಮ್ಯಾಲ  ಇಲ್ಲಿಂದ  ಅಣ್ಣಾ  ವಿದ್ಯಾನ  ಕಡೆ ಗೋಕಾಕಕ್ಕ  ಹೋದ್ರು.

ಅಣ್ಣಾ ಖರೇ ಅಂದ್ರ  ಭಾಳ  ವ್ಯವಸ್ಥಿತ  ಮತ್ತ ಪ್ರತಿಯೊಂದರಾಗೂ  ಅಗದೀ ಚೊಕ್ಕ  ಇರೂ ಸರಳ  ವ್ಯವಹಾರದ  ಮನಶ್ಯಾ. ಏನೇನ ವಿಚಾರ ಮಾಡಿದ್ರೋ, ಹೆಂಗ ಹೆಂಗ  ಠರಾಸಿದ್ರೋ  ಆ ಹೊಲಾ, ಮನಿದು  ಪೂರಾ ವ್ಯವಹಾರದ ಬೇಜಮಿ  ಮಾಡೂದನ್ನ! ಇಲ್ಲೆ  ನನ್ನ ಅಣ್ಣ ತಮ್ಮಂದಿರೂ  ಎಲ್ಲಾ ತಮ್ಮ ತಮ್ಮ  ವ್ಯವಹಾರ ಉದ್ಯೋಗದಾಗ  ಭಾಳ ಮುಂದ  ಬಂದಿದ್ರು. ಪ್ರಕಾಶ ಮತ್ತ ಆನಂದ ತಮ್ಮ ತಮ್ಮ ಸ್ವಂತ  ಕಂಪನಿಗಳ ಮಾಲೀಕರಾಗಿ  ಬುಡಮುಟ್ಟ ಅದರಾಗನs  ಮುಳುಗಿ ಹೋಗಿದ್ರು. ಅದನ ಸಂಭಾಳಸೂದ್ರಾಗನ  ವ್ಯಸ್ತರು  ಅವರು. ಪ್ರಮೋದ, ಪ್ರದೀಪನೂ  ತಮ್ಮ ತಮ್ಮ ಕೆಲಸದಾಗ ಹಿಂದಕ  ಬರಲಾಲದಷ್ಟ  ಮುಂದಕ ಹೋಗಿದ್ರು.  ಅಣ್ಣಾಗ  ಈಗ  ಖಾತ್ರಿ ಆಗಿ ಬಿಟ್ಟಿತ್ತು-  ಇವರು  ಯಾರೂ  ಬೆಳವಿ, ಹುಕ್ಕೇರಿ ಹೊಲಾ- ಮನಿ  ನೊಡಕೋಳೂದು  ಸಾಧ್ಯ ಇಲ್ಲ ಅಂತ. ಅವರಿಗೂ  ಬೆಂಗಳೂರಾಗ  ಇದ್ದು ಅದನ್ನೆಲ್ಲಾ  ಸಂಭಾಳಸೂದು  ಅಸಾಧ್ಯ ಇತ್ತು. ಅದಕ ತಾವ ಇರೂದ್ರಾಗನs  ಎಲ್ಲಾ  ವ್ಯವಸ್ಥಶೀರ  ಹೊಂದಿಕಿ ಮಾಡಬೇಕು ಅಂತ  ಮತ್ತ ಮತ್ತ ಅವ್ವಾನ ಜೋಡಿ, ತಮ್ಮ ಮಕ್ಕಳ ಜೋಡಿ  ಮಾತಾಡಿ ಆ ಹೊಲಾ- ಮನಿ  ಎಲ್ಲಾ ಮಾರೂದು  ಅಂತ ಠರಾವ  ಮಾಡಿದ್ರು. ಮತ್ತ ಎಲ್ಲಾ ಮಾರಿ  ಬಿಟ್ರು. ತಾವು  ಆ ಉದ್ದಕೂ  ನಡದ ಬಂದ ಹಾದಿ ಬಾಗಲಾ  ಬಂದ ಮಾಡಿದ್ರು ಹೆಚ್ಚು ಕಡಿಮಿ ಅಲೀಗಢ ಕೀಲಿ  ಹಾಕಿಧಂಗನs  ಆತು. ಹಿಂಗಾಗಿ ಹುಕ್ಕೇರಿ, ಬೆಳವಿಗೆ ಹೋಗೂ  ಪ್ರಶ್ನ  ಇದ್ದಿದ್ದಿಲ್ಲ. ಧಾರವಾಡದಿಂದ  ಥೇಟ  ಗೋಕಾಕಕ್ಕ ವಿದ್ಯಾನ  ಕಡೆ  ಹೋದ್ರು.

ಗೋಕಾಕದಿಂದ  ಹುಕ್ಕೇರಿ  ಭಾಳ  ಹತ್ರ. ಆದರ  ಈ ಸರ್ತೆ ಮಾತ್ರ  ಅಣ್ಣಾ  ಎಲ್ಲೂ ಹೋಗಲಿಲ್ಲಂತ. ಅಲ್ಲೂ  ಒಂದ  ಸ್ವಲ್ಪ  ದಿನಾ  ನಿಂತು  ಅಣ್ಣಾ ತಿರಗಿ  ಬೆಂಗಳೂರಿಗೆ  ಹೋದ್ರು. ಎಲ್ಲಿ  ಹೋದ್ರನೂ  ಅವರನ  ಮುಚ್ಚಿ  ಹಾಕಿದ್ದ  ಒಂಟಿತನಾ, ಖಾಲಿತನಾ,  ಆ  ನಿರ್ವಾತದ  ಆವರಣ  ದಾಟಿ  ಹೊರಗ ಬರೂದು  ತ್ರಾಸನs  ಇತ್ತು. ಮೊದಲs  ಭಾಳ  ಭಾವುಕ  ನಮ್ಮ ಅಣ್ಣಾ. ಈಗ  ಇನ್ನೂ ಹೆಚ್ಚಾತು ಅದು. ಆದರ ನಮ್ಮ ಅಣ್ಣಾಂದು  ಇಚ್ಛಾ ಶಕ್ತಿ  ಭಾಳ  ಪ್ರಬಲ ಇತ್ತು. ಅದೂ  ಭಾಳ  ಲೆಕ್ಕಕ್ಕ  ಬಂತು ಈಗ. ಅದರ ಬಲ ಬೂತೀಲೇನ  ದಿನಮೇಕ  ಎಲ್ಲಾ  ಒಂದ  ಹದಕ್ಕ ಬಂಧಂಗ  ನಮಗೆಲ್ಲಾ ಅನಸ್ತಿತ್ತು. ಅಣ್ಣಾ ಈಗ  ಎತ್ತಿದವರ ಕೈಕೂಸ   ಆಧಂಗ ಆಗಿದ್ರು. ಇಷ್ಟ ದೊಡ್ಡ ಸಂಸಾರ  ಅವರದು ಇದ್ರೂ ಒಬ್ರs ಆಧಂಗ  ಆಗಿದ್ದ ಆ  ಪರಿಸ್ಥಿತಿನ  ಅಣ್ಣಾ ಭಾಳ ನಾಜೂಕತನದ್ಲೆ  ನಿಭಾಸಿದ್ರು.

ಹೌದು ನಿಭಾಸಿದ್ರು. ಅದೆಲ್ಲಾ ಖರೆ. ಆದರ ಎಷ್ಟಂತ  ಒಳಗ ಆ ಕುದಿ  ಇಟಗೊಂಡ ಮ್ಯಾಲ ಒಂದ  ಬೆಸಗಿ  ಹಾಕಲಿಕ್ಕಾದೀತು? ಒಮ್ಮೆ ಆ ಕಾವಿಗೆ ಬೆಸಗಿ  ಕರಗಿ  ಬಾಯಿ ಬಿಚ್ಚಿ ಕುದಿ ಹೊರ ಚಲ್ತು. ಅಣ್ಣಾಗ  ಅವ್ವಾ  ಹೋದ ಐದಾರ  ತಿಂಗಳಿಗೆ  ಹಾರ್ಟ್ ಅಟ್ಯಾಕ್ ಆತು. ಭಾಳ ಹೈರಾಣಾದ್ರು. ಒಂಚೂರು ನೆನಪೂ  ಆಕಡೀಕಡೆ  ಆಗಿತ್ತು. ಯಾಕೋ ಏನೋ ಸದಾಕಾಲ ನನ್ನ ಮಗಳ ಅಂದ್ರ  ತಮ್ಮ ಮೊಮ್ಮಗಳ ಮದವಿ  ವಿಚಾರನs  ಮಾತಾಡ್ತಿದ್ರು. ಧಾರವಾಡಕ್ಕ ಬಂದಾಗ ಆಕಿ  ಕುಂಡಲಿ  ನೋಡಿ  ಆಕಿ ಮದವಿ ನಡಿಯೂ ತಾರೀಖು, ತಿಂಗಳಾ, ವರ್ಷಾ ಎಲ್ಲಾ ಬರದಿಟ್ಟಿದ್ರು  ಅಣ್ಣಾ  ನಾ  ಹಿಂದ  ಬರಧಾಂಗ. ಅದನ ಏನರೆ   ತಲ್ಯಾಗ  ಇಟ್ಕೊಂಡಿದ್ರೋ  ಏನೊ!  ಆಗ ನನ್ನ ದೊಡ್ಡ ಮಗನ  ಬಿ. ಇ. ಮುಗಿದು  ಅವನೂ  ಇಲ್ಲೆ ಬೆಂಗಳೂರಿಗೆ ಬಂದಿದ್ದ ನೌಕರಿಗೆ ಹಂಗ ಮುಂದ  ಕಲಿಯೂದರ ವಿಚಾರ ಮಾಡ್ಲಿಕ್ಕೆ. ಈಗ  ಅಜ್ಜಾ – ಮೊಮ್ಮಗ  ಮತ್ತ  ಜತ್ತ ಆಗಿದ್ರು.  ಅಣ್ಣಾ  ದವಾಖಾನಿಂದ  ಡಿಸ್ಚಾರ್ಜ್  ಆಗಿ  ಪ್ರಮೋದನ  ಮನಿಗೇ  ಹೋದ್ರು. ಅಣ್ಣಾನ ಪರಿಸ್ಥಿತಿ  ಭಾಳ  ಸೂಕ್ಷ್ಮ ಆಗಿತ್ತು. ಆಗ  ಅವ್ವಾ ಹೋದ ಕೂಡಲೆ  ತಮ್ಮ ಸುತ್ತ  ತಾವs  ಒಂದ  ಕಟ್ಟ ಕಟ್ಟಿಧಂಗ  ಇದ್ರು.  ನಮ್ಮನ್ನೆಲ್ಲ ಸಂಭಾಳಸಲಿಕ್ಕೆ ಧೈರ್ಯಾ ತಗೊಂಡ  ಹಾಕಿದ  ಆ  ಕಟ್ಟ ಒಡದ ಬಿಟ್ಟಿತ್ತ   ಈಗ.

ಹಾರ್ಟ್ ಅಟ್ಯಾಕ್ ದಲೆ  ಬಿಗಡಾಸಿದ  ತಬ್ಬೇತ  ಅಣ್ಣಾಂದು‌  ಸ್ವಲ್ಪ ಸುಧಾರಿಸಿ  ಒಂದ  ಮೆಟ್ಟಿಗೆ  ಬಂದ ನಿಂತು. ಅಣ್ಣಾ ಆರಾಮ ಆದ್ರು. ಆದ್ರ  ಅಷ್ಪ್ರಾಗ  ಅಣ್ಣಾಗ  ಹರ್ಪಿಸ್  ಆತು. ಅದೂ ಅಣ್ಣಾನ್ನ  ಭಾಳ ಹಣ್ಣ ಮಾಡ್ತು. ಅಣ್ಣಾ ಒಳಗೊಳಗs  ಪೋಕಳ ಆಗಿದ್ರು ನಕ್ಕೀನೇ.  ಅವ್ವಾನ್ನ ಕಳಕೊಂಡ  ದು:ಖ , ಆಕಿ  ಅನುಭೋಗಿಸಿದ್ದು  ಅವರನ್ನ ಭಾಳ  ಕೊರೀತಿತ್ತು ಸಣ್ಣಹಂಗೆ  ಗೆದ್ಲಗತೆ. ಅವರ ಇಚ್ಛಾ ಶಕ್ತಿ ಒಂಚೂರ ಕೈ ಊರಿತ್ತ  ಅನಸತ್ತಿತ್ತು.  ಆ ಹೊತ್ತಿನ್ಯಾಗ  ಅವರ ಎಲ್ಲಾ ಮಕ್ಕಳು -ಸೊಸೆಂದ್ರು ಅಣ್ಣಾನ್ನ  ಸಣ್ಣ ಕೂಸಿನಗತೆ  ಜ್ವಾಕೀಲೆ ಸಂಭಾಳಿಸಿದ್ರು. ಪ್ರಮೋದನ ಮನ್ಯಾಗನs  ಇದ್ದದ್ದಕ್ಕ ಒಂದ ತೂಕ ಹೆಚ್ಚೇ  ಅಂವಂದು. ಖರೆ ಇಷ್ಟ ಮಾತ್ರ ಖರೆ – ಎಲ್ಲಾರೂ  ಒಂದೊಂದ  ರೀತಿಲೆ  ಅಗದಿ ಏಕೋ ಭಾವದಲೆ  ಅಣ್ಣಾನ್ನ  ಆಗ  ನೋಡ್ಕೊಂಡ್ರು. ಹವುರಗ  ಅಣ್ಣಾ  ಸುಧಾರಿಸಿ ಕೊಂಡ್ರು ಅವ್ವಾಂದ  ವರ್ಷದ್ದ  ಶ್ರಾದ್ಧ ಬರೂದ್ರಾಗ.

ದಿನಾ  ಏನ  ಒಂಚೂರು ನಿಲ್ಲದ  ಹೊಂಟs ಬಿಟ್ಟಿದ್ದು  ತಮ್ಮ  ಕೆಲಸಾನs  ಅದು ಅನಾವ್ರಗತೆ. ಅಣ್ಣಾನ  ಮಕ್ಕಳದು  ಎಲ್ಲಾರದೂ  ಭರ್ತಿ ಛಂದ ಸಂಸಾರ  ನಡದಿತ್ತು. ಅಗದೀ  ಗರ್ವ ಅನಸೂ ಹಂಗ  ಅವರ ಕೆಲಸಾ, ಸಾಧನಾ ಎಲ್ಲಾ. ನಮ್ಮ ಅಜ್ಜಾ ಹೇಳಿಧಂಗ  ಅಣ್ಣಾಸಾಹೇಬನಿಂದ, ಅದಕಿಂತಲೂ  ಒಂದು ಕೈ ಮ್ಯಾಲ  ಅವರ  ಮಕ್ಕಳಿಂದ  ನಂದಿಕುರಳಿ ಮುತಾಲೀಕ ದೇಸಾಯರ  ಮನಿತನಾ ಉಜಾಳ ಆಗಿತ್ತು ಒಂದ ಮೆರಗಲೆ.1997 ರಾಗ  ನನ್ನ ‌‌ತಮ್ಮ ಆನಂದ  ಮುತಾಲಿಕ  ಇನ್ನಿಬ್ಬರ  ಜೋಡಿ ” ಕ್ಷೇಮಾ ಟೆಕ್ನಾಲಜಿಸ” ಕಂಪನಿ  ಸುರು ಮಾಡಿದ್ರಲಾ ಅದರ  ಮೊದಲ  ವಾರ್ಷಿಕೋತ್ಸವದ ದಿನ ಅಣ್ಣಾನ  ಕೈಲೇ  ದೀಪಾ ಬೆಳಗಿಸಿ ಕಾರ್ಯಕ್ರಮ ಸುರು  ಮಾಡಿಸಿದ್ರು. ಅಣ್ಣಾ ಮಾತೂ ಆಡಿದ್ರು. ಹೆಮ್ಮೆಯಿಂದ  ಅಣ್ಣಾನ  ಎದಿ ಉಬ್ಬಿತ್ತು. ಅವ್ವಾ ಇದನೆಲ್ಲಾ  ನೋಡ್ಲಿಲ್ಲ  ಅಂತ  ಕಣ್ಣ  ತುಂಬಿದ್ದು. ನನ್ನ ಅಣ್ಣ  ಡಾ.  ಪ್ರಕಾಶ  ಮುತಾಲಿಕ  ತನ್ನ  ಮೊದಲನೇ  ಕಂಪನಿಗೆ  ಏಕಾನ ಹೆಸರಿಟ್ಟಾಗನೂ ಅಣ್ಣಾ  ಹಿಂಗs  ಭಾವುಕ ಆಗಿದ್ರು. ಆದರ ಆಗ ಅವ್ವಾ ಇದ್ಲು. ಅವನೂ ಈಗ ಇನ್ನೊಂದ ಕಂಪನಿ RelQ Software ಕಂಪನಿ ಸುರು ಮಾಡೂ  ತಯಾರಿಯೊಳಗಿದ್ದ, ಸುರುನೂ ಆತು 1999ದಾಗ. 

ನನ್ನ  ದೊಡ್ಡ ತಮ್ಮ ಪ್ರಮೋದ ಮುತಾಲಿಕ ‌‌ ಆಗ ಎರಡು ಭಾಷಾಂತರಿತ  ಕಥಾಸಂಕಲನ  ತಯಾರ ಮಾಡಿ “ಕಳಚಿದ ಕೊಂಡಿ” ಹೊರಗ ತಂದಿದ್ದ ” ಕುಸುಮ ಪ್ರಕಾಶನ” ದಲೆ. ಅಂದ್ರ ನಮ್ಮ  ಅವ್ವಾನ  ಹೆಸರಲೆ. ಸಣ್ಣ ತಮ್ಮ ಪ್ರದೀಪ ಮುತಾಲಿಕ  TCS ಒಳಗ ಛಲೋ ಪೋಸ್ಟ್ ನ್ಯಾಗ  ಇದ್ದ. ಇಬ್ರೂ ಹೆಣ್ಮಕ್ಕಳದೂ  ಅರ್ಭಾಟ ನಡದಿತ್ತು. ಅಣ್ಣಾನ ತೃಪ್ತಿಯ  ಕೊಡಾ ತುಂಬಿತ್ತು. ಎಲ್ಲಾ ಖರೆ  ಆದ್ರ ಅವ್ವಾ  ಒಬ್ಬಾಕಿ ಇದ್ದಿದ್ದಿಲ್ಲಾ.

ಅಣ್ಣಾ  ನನ್ನ ಮಗಳ ಮದವಿಯೊಳಗ ಖುಷಿ, ಸಂಭ್ರಮದಲೆ ಓಡಾಡಿ 1999 ರೊಳಗ  ಮರಿಮೊಮ್ಮಗಳನ್ನ ನೋಡಿ ಅದಕ್ಕಿಂತಾ ಸಂಭ್ರಮಪಟ್ರು.  ಅದs  ವರ್ಷ ನಾ ಪಂಚಮಿಗೆ ಬೆಂಗಳೂರಿಗೆ  ಬಂದಿದ್ದೆ. ಅಣ್ಣಾ ನಾವು ಆರೂ ಮಂದಿ- ಇಬ್ರೂ ಹೆಣ್ಮಕ್ಕಳು, ನಾಕೂ ಮಂದಿ ಸೊಸೆಂದ್ರಿಗೆ  ಸೀರಿ  ಕೊಡಸಿದ್ರು. ಅಣ್ಣಾ ಕೊಡಸಿದ  ಆ ಸೀರಿ ಇಂದೂ  ನನ್ನ ಕಪಾಟಿನ್ಯಾಗ ನಾ ಅಗದಿ  ಜ್ವಾಕಿಲೆ ಇಟ್ಟುಕೊಂಡೀನು. ಹೌದು – ಅದು ನಮ್ಮ ಅಣ್ಣಾ ಕೊಟ್ಟ ಕಡೀ ಸೀರಿ!

ಈಗೀಗ  ನಂಗ ಅಣ್ಣಾನ  ವರ್ತುಣಕಿ  ಒಳಗ, ಅವರೊಳಗ  ಏನೋ  ಬದಲಾವಣಿ  ಕಾಣ್ಲಿಕ್ಹತ್ತಿತ್ತು; ಗೊತ್ತಾಗದಂಥಾ  ಸೂಕ್ಷ್ಮ ಬದಲಾವಣಿ  ಅದು. ಒಟ್ಟ ಅವರಿಗೆ ಏನೋ ಸುಳವ ಸಿಕ್ಕಿತ್ತು ಅನಸ್ತಿತ್ತು  ನಂಗ. ಎಲ್ಲಾತಕೂ  ಭಾಳ ಗಡಿಬಿಡಿ  ನಡಸಿದ್ರು; ಏನೋ ಒಂಥರಾ ಕೆಲಸಾ  ಮುಗಿಸಿ  ಹೊಂಡಾವ್ರಗತೆ.  ನನಗ ಯಾಕೋ ಎದಿ ಝಲ್  ಅಂತು. ಹಂಗೇ  ಸಂಭಾಳಿಸಿಕೊಂಡೆ . ಯಾರ ಮುಂದೂ ಹೇಳ್ಳಿಕ್ಕೂ ಘಾಬರಿ ಘಾಬರಿ ಅನಿಸಿ ಗಪ್ಪ ಕೂತಿದ್ದ ನಾ.

ಇದ್ದಕ್ಕದ್ದ ಹಂಗ  ಸೆಪ್ಟೆಂಬರ್ ದಾಗ  ಅಣ್ಣಾಂದು  ಫೋನ್ ಬಂತು. ” ಅಕ್ಕವ್ವಾ  ಅಕ್ಟೋಬರ್ 20ನೇ ತಾರೀಖಿಗೆ  ಪ್ರದೀಪನ ಮಗಾ  ಶಶಾಂಕನ  ಮುಂಜಿವಿ ಠರಾಸೀವ ನೋಡವಾ”  ಅಂದ್ರು. ನನಗ ಯಾಕೋ  ಇದ ಬಲೆ  ಗೂಢ  ಆತು. ಈಗ್ಯಾಕ  ಮುಂಜಿವಿ ಈ ದಕ್ಷಿಣಾಯಣದಾಗ , ಅದೂ  ದಸರಾ  ಆದ ಮರು ದಿವಸ , ಗೊಡ್ಡದಶಮಿ ದಿವಸ!  ಏನಾಗೇದ ಎಲ್ಲಾ ತಿಳ್ಕೊಂಡ  ಜ್ಯೋತಿಷ್ಯ  ಬಲ್ಲ  ಅಣ್ಣಾಗ! ಒಂದ  ನಮೂನಿ  ಹುರು ಹುರು ಅನಿಸ್ತು  ಮನಸಿಗೆ. ಗಪ್ಪ ಕೂಡ್ಲಿಕ್ಕ ಆಗಲಿಲ್ಲ  ನಂಗ. ಅಣ್ಣಾನ್ನ  ಕೇಳಿದ್ರ  ಅದೇನೋ  ಹಾರಿಕಿ  ಉತ್ರಾ ಕೊಟ್ರು. ಎಲ್ಲಾ  ಅಯೋಮಯ  ಅನಸ್ಲಿಕ್ಹತ್ತಿತ್ತು. ಸಮಾಧಾನ  ಆಗಲಿಲ್ಲ. ಸುರೇಶ  ಅವರ  ಮುಂದ  ಅಂದ್ರ ಅವರು ” ಅಣ್ಣಾಗ  ಗೊತ್ತಿರಾಂಗಿಲ್ಲೇನು? ಭಾಳ ಏನೇನ್ರೆ  ವಿಚಾರ  ಮಾಡಬ್ಯಾಡ” ಅಂದ್ರು. ಏನ ಮಾಡ್ಲಿ  ತಿಳೀಲಿಲ್ಲ. ಗಪ್ಪಗಾರ ಕೂತೆ ಆತು.

ಅಣ್ಣಾ, ನಮ್ಮ ತಮ್ಮನ ಹೆಂಡತಿ ಸುಮಾ ಫೋನ್ ನ್ಯಾಗ  ಎಲ್ಲಾ ಕೇಳಿ ಕೇಳಿ  ಸಜ್ಜಿಗಿ ಮೂಹೂರ್ತ  ಮಾಡಿ  ಮುಂಜಿವಿ ತಯಾರಿ  ಸುರು ಮಾಡಿದ್ರು. ನನಗ ” ಅಕ್ಕವ್ವಾ ಒಂದ ಎಂಟ – ಹತ್ತ  ದಿವಸರೇ  ಮೊದಲೇ ಬಾ. ನೀನs  ಹಿರ್ಯಾಳತಿ ಈಗ” ಅಂತ ಹೇಳಿದ್ರು ಅಣ್ಣಾ. ಹೂಂ  ಅಂದಿದ್ದ ನಾ. ಹಂಗs  ಅಣ್ಣಾ  ಇನ್ನೊಂದ ದೊಡ್ಡ  ಕೆಲಸಾ  ಹಚ್ಚಿದ್ರು ನಂಗ. ಅದನ್ನ ಹೇಳ ಬೇಕಾದ್ರ ಅದೆಷ್ಟ ತ್ರಾಸ  ಆಗಿತ್ತೋ ಅವರಿಗೆ! 

“ಅಕ್ಕವ್ವಾ, ಈಗ ಶಶಾಂಕಗಂತೂ  ಚೈನು  ಮಾಡಸ್ತೀನವಾ. ಇನ್ನ ಉಳದ ಮೊಮ್ಮಕ್ಕಳ ಮದವಿ- ಮುಂಜಿವಿಗೇನ  ನಾ ಇರೂದಿಲ್ಲ ಏನವಾ. ಅದಕs ಅವರ ಅಜ್ಜಿ  ಭಂಗಾರದಾಗ  ಎಲ್ಲಾ  ಹುಡುಗೂರಿಗೂ  ಚೈನ  ಮಾಡಿಸಿಕೊಂಡ ಬಂದ ಬಿಡವಾ” ಅಂತ ‌‌ಹೇಳಿ  ಅವ್ವಾನ  ಭಂಗಾರ ಕೊಟ್ಟ ಹೋಗಿದ್ರು  ನಂಕಡೆ. ಅವೂ ತಯಾರ ಆಗಿದ್ದು. ಆದ್ರೂ  ನನಗೇನೋ ಒಂಥರಾ ಅಭರೋಸ  ಮನ: ಸ್ಥಿತಿ ಕಾಡ್ಲಿಕ್ಹತ್ತಿತ್ತು.

ಆಗs  ನಮ್ಮ ನಾಲ್ಕನೇ ನಂಬರ್ ಭಾವನ ಮಗಳ  ಮದವಿ  ಬೆಂಗಳೂರಿನ್ಯಾಗನs  ಇತ್ತು ಮುಂಜಿವಿ  ಆಗಿ ಒಂದ ವಾರಕ್ಕ ಅಂದ್ರ ಅಕ್ಟೋಬರ್ 27 ,1999ಕ್ಕ. ನಮ್ಮ ಭಾವ- ನೆಗೆಣ್ಣಿ ಧಾರವಾಡಕ್ಕಮದವಿದs  ಏನೋ ಕೆಲಸ ಇತ್ತಂತ  ಬಂದಿದ್ರು. ನಾನೂ ಅವರ ಜೋಡೀನ  ಬೆಂಗಳೂರಿಗೆ  ಬರಲಿಕ್ಹತ್ತಿದ್ದೆ – ಮುಂಜಿವಿ, ಆಮ್ಯಾಲ ಮದವಿ  ಎರಡಕ್ಕೂ. ಆ ದಿನ ನವರಾತ್ರಿ ಬಿದಿಗಿ, ಅಕ್ಟೋಬರ್ 10ನೇ ತಾರೀಖು. ಅಂದ ರಾತ್ರಿ ಹುಬ್ಬಳ್ಳಿ ಭಾವನ ಮನ್ಯಾಗ  ವಸ್ತಿ ಮಾಡಿ ಮರುದಿನ ಮುಂಜಾನೆ ಐದೂವರಿಗಿದ್ದ  ಇಂಟರ್ ಸಿಟಿ ರೈಲಿಗೆ  ಬೆಂಗಳೂರಿಗೆ  ಹೊಂಡೂದಿತ್ತು. ಎಲ್ಲಾರೂ  ಮಲಗಿದ್ರು. ನಾ ಏನೋ ಗೊಂದಲದಾಗ  ಇದ್ದು, ಅರ್ಧಾನಿದ್ದಿ – ಎಚ್ಚರದ ಮಬ್ಬಿನ್ಯಾಗ  ಇದ್ದೆ. ರಾತ್ರಿ ಬರೋಬ್ಬರಿ ಎರಡು ಗಂಟೆಕ್ಕ  ಫೋನ್ ಬಂತು. ನಮ್ಮ ಭಾವ ಫೋನ್ ತಗೊಂಡು, ನನ್ನ ಎಬ್ಬಿಸಿ, ” ಸುರೇಶನ ಫೋನ್ ಅದ ನೋಡು” ಅಂತ ಹೇಳಿದ್ರು. ಮಬ್ಬಗಣ್ಣ ನಂಗ.ಆ ಕಡೆ ಸುರೇಶ ಹೇಳ್ಳಿಕ್ಹತ್ಯಾರ -” ಅಣ್ಣಾಗ ಮತ್ತೊಮ್ಮೆ  ಹಾರ್ಟ್ ಅಟ್ಯಾಕ್ ಆಗೇದಂತ. ತ್ರಾಸ ಜಾಸ್ತೀನೇ ಅದ ಅಂತ. ನಾ ಈಗ ಹುಬ್ಬಳ್ಳಿಗೆ ಬರಲಿಕ್ಹತ್ತೀನಿ. ಸಿಕ್ಕದ್ದ ಬಸ್ಸು ಹಿಡದ ಬೆಂಗಳೂರಿಗ ಹೋಗೂಣು” ಅಂದ್ರು. ನಾ ” ಏನಾಗೇದ ನಿಮಗೆ? ಹಿಂಗ್ಯಾಕ ಮಾತಾಡ್ಲಿಕ್ಹತ್ತೀರಿ” ಅಂದೆ.” ಎಚ್ಚರಾಗು. ಅಣ್ಣಾಗ ಆರಾಮ ಇಲ್ಲ.ನಾ ಬರಲಿಕ್ಹತ್ತೀನಿ. ಬೆಂಗಳೂರಿಗೆ ಹೋಗೂಣು” ಅಂತ ಒತ್ತಿ ಒತ್ತಿ ಹೇಳಿದ್ರು ಸುರೇಶ. ಝೋಲಿ ಹೋದ ಹಂಗಾತು ನಂಗ. ನಮ್ಮ ನೆಗೆಣ್ಣಿ ಹಿಡ್ಕೊಂಡ್ರು. ಏನೂ ತಿಳೀದ ಹುಚ್ಚರಗತೆ  ಕೂತ ಬಿಟ್ಟೆ. ಒಂದs ಮಾತು ಸುಳೀತು  ತಲ್ಯಾಗ; ” ನನ್ನ ಮನಸಿನ್ಯಾಗ ಹೊಕ್ಕ ಆ  ಹುಳದ  ಕೊರತಾ ಖರೇ ಏನ ಮತ್ತ!”   ಆ ಹುಳದ್ದ ಕೊರೆತದ್ದ ಸಪ್ಪಳನs  ಇದ್ದಿದ್ದಿಲ್ಲ ಈಗ!  ಅದು ಕೊರ್ಯೂದನ  ಮುಗಿಸಿ  ಗಪ್ಪ ಕೂತಿತ್ತು ಈಗ. ಬಹುತೇಕ  ಅದರ  ಕೆಲಸ  ಮುಗಿದಿತ್ತು ಅನಸ್ತದ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. ಶೀಲಾ ಪಾಟೀಲ

  “ಅಣ್ಣಾನ  ಬದುಕು  ವಿಶಾಲ  ಆಗಲಿಕ್ಹತ್ತು. ಸುತ್ತೂ ಕಡೆ  ಟೊಂಗಿ  ಠಿಸಲ  ಒಡೀಲಿಕ್ಹತ್ತು. ದಿನ ದಿನಕ್ಕ  ಬೆಳದು  ಇಷ್ಟುದ್ದ, ಅಷ್ಟಗಲ  ಹಬ್ಬಿ ಪಸರಾಸಲಿಕ್ಕ ಚಾಲು ಆಗಿ  ಹೆಚ್ಚು ಹಸರ ತುಂಬಕೊಂಡ  ಬಲೆ ಛಂದ  ಕಳೆ  ಬಂತು, ….” ಈ ವರ್ಣನೆಯಂತೆ ಕುಟುಂಬದ ಎಲ್ಲ ಕಿರಿಯರು ಹಿರಿಯರಾಗಿ ಜೀವನದಲ್ಲಿ ಒಳ್ಳೆಯ ಸಾಧನೆಮಾಡಿದ್ದನ್ನು ನೋಡಿದ ಸಾರ್ಥಕ ಹಣ್ಣೆಲೆಗಳು ಉದುರುತ್ತಾ ಹೋಗುವಾಗಿನ ನಿಮ್ಮ ಮನದ ತಾಕಲಾಟ ಓದುಗನಿಗೂ ಕೊರೆಯೋ ಹುಳ ಕೆಲಸ ಮುಗಿಸಿ ಗಪ್ಪಕೂತಂತಹ ಅನುಭವ….

  ಪ್ರತಿಕ್ರಿಯೆ
  • Sarojini Padasalgi

   ಶೀಲಾ ತುಂಬ ಸುಂದರ ರೆಸ್ಪಾನ್ಸ್ ನಿಮ್ಮದು. ಪ್ರತಿ ಶಬ್ದ ವಾಸ್ತವಿಕ. ಭಾವುಕರಾಗಿ ವಿಚಾರ ಮಾಡಿದ್ರೆ ಎದೆ ತುಂಬಿ ಮಾತು ಮರೆಸುವಂಥದು.
   ತುಂಬ ಧನ್ಯವಾದಗಳು ಶೀಲಾ.

   ಪ್ರತಿಕ್ರಿಯೆ
 2. Shrivatsa Desai

  ಈ ವಾರದ ಅಂಕಣ ‘ದೋಸೆ ತೂತಿನ’ಘಟ್ಟ ಮುಟ್ಟಿದೆ. ಅಂದರೆ ಎಲ್ಲರ ಮನೆಯ ಕಥೆಯೂ ಅದೇ . ಮೂರು ತಲೆಮಾರುಗಳ ಜೀವನ ಒಂದಕ್ಕೊಂದು ಹತ್ತಿ ಸಾಗುವಾಗ ಹುಟ್ಟು- ಮದುವೆ – ಸಾವು , ಕೆಲವೇ ಅನಿರೀಕ್ಷಿತ, ಅವುಗಲೆಬ್ಬಿಸುವ ಅಲೆಗಳನ್ನು ಎಲ್ಲ ಅವಿಭಕ್ತ ಕುಟುಂಬಗಳು ಅನುಭವಗಳಲ್ಲಿ ಸಾಮ್ಯತೆಯನ್ನು ಇಲ್ಲಿ ತೆರೆದಿಟ್ಟಿದೆ. Moving finger writes and moves on ಅನ್ನುವಂತೆ ಕೊರೆಯುವ ಹುಳವೂ ಅದನ್ನೇ ಮಾಡುತ್ತಿದೆಯೇನೋ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: