ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.
ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.
ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.
ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.
ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…
18
ನಾ ಹಿಂದ ಬರಧಾಂಗ ಅಣ್ಣಾ ಸರ್ಕಾರಿ ನೋಕ್ರಿ, ವಿಜಾಪುರ ಎರಡೂ ಬಿಟ್ಟು ಹುಕ್ಕೇರಿಗೆ ಬಂದ ಬಿಟ್ರು. ಹುಕ್ಕೇರಿಗೆ ಬಂದ ಕೂಡಲೆ ಬಾಡಿಗಿ ಮನ್ಯಾಗನs ಇರೂದಾತು ಮತ್ತ. ಅಲ್ಲೆ ಗಣಪತರಾವ ಕುಲಕರ್ಣಿ ಅವರ ಮನ್ಯಾಗ ಬಾಡಿಗಿ ಇದ್ರು. ಗಣಪತರಾವ ಎಲ್ಲಾರಿಗೂ ಮಾಮಾನೇ ಆಗಿದ್ರು.ಎಲ್ಲಾರೂ ಅವರನ ಹಂಗೇ ಕರೀತಿದ್ರು. ಮೂರ ನಾಲ್ಕ ವರ್ಷ ಅಲ್ಲಿದ್ರು. ಆಮ್ಯಾಲ ನಾ ಒಂದ ಆರ ತಿಂಗಳ ಕೂಸಿದ್ದಾಗ ಕಮ್ಮಕ್ಕಜ್ಜಿ ಅವರ ಮನಿಗೆ ಬಂದ್ವಿ. ನಮ್ಮದು, ಅವರದು ಏನ ಋಣಾನುಬಂಧನೋ ಏನೋ ಒಂದs ಮನಿಯವರಷ್ಟ ಹೊಂದಿಕಿ ಆಗಿ ಬಿಡ್ತು. ಅವರ ಮನ್ಯಾಗ ಹತ್ರ ಹತ್ರ ಐದ ವರ್ಷ ಇದ್ವಿ. ಅಲ್ಲಿದ್ದಾಗನ ಅಣ್ಣಾ ತಮ್ಮ ಸ್ವಂತದ ದೊಡ್ಡ ಮನಿ ಕಟ್ಟಿಸಿದ್ರು. ಅಲ್ಲೆ ಕಮ್ಮಕ್ಕ ಅವರ ಮನಿಂದ ಎರಡ ಮೂರ ನಿಮಿಷದ್ದ ಹಾದಿ ಅಷ್ಟs. ಮುಂದ ಹಣಮಪ್ಪನ ಗುಡಿ; ಅದರ ಹಿಂದಿನ ದೊಡ್ಡ ಜಾಗಾ ಪೂರಾ ಖರೀದಿ ಮಾಡಿ ಅಲ್ಲೆ ಮನಿ ಕಟ್ಟು ಕೆಲಸಾ ಸುರು ಆತು. ನಾ ಒಂದ ನಾಲ್ಕ ವರ್ಷದಾಕಿ ಇದ್ದ ಅನಸ್ತದ ಆಗ. ಹಣಮಪ್ಪನ ಗುಡಿ ಹಿಂದ ಸುರು ಆಗಿ ಹಿಂದಿನ ರಸ್ತೆಕ್ಕ ಹೋಗಿ ಹತ್ತಿತ್ತು ನಮ್ಮ ಮನಿ.
ಬೇಕಾದ್ದ ಕೆಲಸ ಇರಲಿ ಅದು, ಒಮ್ಮೆ ಹಿಡದ್ರಂದ್ರ ಪೂರಾ ಏಕಜೀವ ಆಗಿ ಬಿಡ್ತಿದ್ರು ಆ ಕೆಲಸದಾಗ ಅಣ್ಣಾನೂ , ಥೇಟ್ ಏಕಾಂದೇ ಧರತಿ ಅದು. ಈಗಾದ್ರೂ ಅದೇ ಯಥಾಪ್ರಕಾರ ಮುಂಜಾನೆ ಬೆಳವಿ ಓಡಾಟ; ಆದ್ರ ಸ್ವಲ್ಪ ಲಗೂ ಬಂದು ಕಟ್ಟಲಿಕ್ಹತ್ತಿದ್ದ ಮನಿ ಕೆಲಸದ ದೇಖರೇಖಿ. ಮತ್ತ ಒಂದ ನಿಮಿಷನೂ ತಡಾ ಆಗಧಾಂಗ ತಮ್ಮ ಸಾಲಿ ಕೆಲಸಾ. ಆದ್ರ ಈ ಮನಿ ಕೆಲಸಾ ಜೋರ ಆಧಂಗ ಒಂಚೂರ ಟೈಂ ಟೇಬಲ್ ಬದ್ಲಿ ಮಾಡಿದ್ರು. ಬೆಳವಿದು ಮುಂಜಾನಿ ಭೆಟ್ಟಿ ರಹಿತ ಮಾಡಿ ಅದನ್ನ ಸಂಜೀಕs ಕಾಯಂ ಮಾಡಿದ್ರು. ಮನೀ ಕೆಲಸದ ಕಡೇನ ಜಾಸ್ತಿ ವ್ಯಾಳ್ಯಾ ತಗೀತಿದ್ರು.
ನನಗ ಪೂರಾ ನೆನಪದ; ಅಲ್ಲೆ ಅಂದ್ರ ಮನಿ ಕಟ್ಟಲಿಕ್ಕೆ ಲಗೂನ ಪಾಯಾನs ಹತ್ತಲಿಲ್ಲ. ಎಷ್ಟ ಅಗದಿದ್ರು ಅಂದ್ರ ಅತೋನಾತ ಅದು. ಇಷ್ಟ ದೊಡ್ಡ ದೊಡ್ಡ ತೆಗ್ಗ ತಗದಿದ್ರು, ಒಂದೊಂದ ಖೋಲೀದೂ. ಅಂದಾಜ ಎರಡ ಆಳಿನ ತೆಗ್ಗ ಇದ್ದು ಅವು. ಅವನ್ನೆಲ್ಲಾ ಗಾಡಿ ಗಾಡಿ ಕಲ್ಲು ಮಣ್ಣು ಹಾಕಿ ಗಟ್ಟಿ ಮಾಡಿ ಮುಚ್ಚಿ, ಸುಮಾರು ಒಂದ ಆಳಿನಷ್ಟ ಎತ್ತರದ ಪೂರಾ ಕಲ್ಲಿಂದ ಗ್ವಾಡಿ ಕಟಗೊಂಡ ಬಂದು ಪಕಡದಸ್ತ ಪಾಯಾ ಹಾಕ್ಯಾರ ಆ ಮನಿಗೆ. ಅದ ಬಲೆ ಕೈ ಹಿಡಿಯೂ ಕೆಲಸ ಆಗಿ ಬಿಟ್ತು. ನಮ್ಮ ಅವ್ವಗ ಕಾಳಜಿ. “ಇದೇನ್ರಿ ಪಾಯಾದ್ದ ಕೆಲಸನs ಮುಗೀವಲ್ಲತ ಇನೂ” ಅನ್ನಾಕಿ. ನಮ್ಮ ಅಣ್ಣಾ ಆಕೀಗೆ ಅಗದೀ ನಿವಾಂತಪಣಲೆ ಸಮಾಧಾನ ಹೇಳಾವ್ರು ;
“ಪಾಯಾನs ಇಷ್ಟ ತಳಗಿಂದನs ಘಟ್ಟಿಮುಟ್ಟ ಕಟಗೊಂಡ ಬಂದ ಹಾಕೇದಂದ್ರ ಮನಿ ಹೆಂಗ ಆದೀತು ಅಂತ ಒಂಚೂರ ಅಂದಾಜ ಹಾಕ ನೋಡೂಣು” ಅಂತ. ಆಗ ಅವ್ವಾಗ ಒಂಚೂರ ಸಮಾಧಾನ ಆಗೂದು.
ಅಣ್ಣಾ ಅಲ್ಲೆ ಕೆಲಸಾ ಮಾಡೂ ಆಳಮಕ್ಕಳಿಗೆ ಮಧ್ಯಾಹ್ನ ಸುಮಾರು ಹನ್ನೊಂದೂವರಿ, ಹನ್ನೆರಡ ಗಂಟೆ ಅಷ್ಟೊತ್ತಿಗೆ ಒಂದ ದೊಡ್ಡ ಕೊಡದ ಪಾತೇಲಿ ತುಂಬ ಜ್ವಾಳದ ಹಿಟ್ಟಿನ ಅಂಬಲಿ ಕಳಸೂ ವ್ಯವಸ್ಥಾ ಮಾಡ್ರಿ ಅಂತ ಮನ್ಯಾಗ ಅವ್ವಾಗ, ಏಕಾಗ ಹೇಳಿ ಇಟ್ಟಿದ್ರು. ಎಷ್ಟರೇ ಆಳು ಇರವಲ್ರ್ಯಾಕ ಅಷ್ಟೂ ಮಂದಿಗೆ ಅಂಬಲಿ ಸರಬರಾಯಿ ಆಗೂದೇ. ಅವ್ವಾ ಅಥವಾ ಏಕಾ ಮಾಡಿ ಇಟ್ರ ಅಂದ್ರ ಒಬ್ಬ ಆಳ ಬಂದ ತಗೊಂಡ ಹೋಗ್ತಿದ್ದ. ಒಂದಿನಾರೇ ಅವ್ವಾ, ಏಕಾ ಬ್ಯಾಸರಾ ಮಾಡಕೊಂಡಾರೇನು? ಇಲ್ಲs ಇಲ್ಲ. ” ಅಂಬಲಿ ಕುಡದ ಅವರ ಹೊಟ್ಟಿ ತಂಪಾದ್ರ, ನಮ್ಮ ಮನಿ ಅಸರಂತ ಥಣ್ಣಗಿರತದ” ಅನಾವ್ರು ಅತ್ತಿ – ಸೊಸಿ ಇಬ್ರೂ. ಆ ಮಾತೇನ ಸುಳ್ಳಾಗಲಿಲ್ಲ ಮತ್ತ. ನಾ ಕ್ಯಾನ್ವಾಸ್ ಶೂಸ್ ಹಾಕೊಂಡ ಒಳ್ಳೆ ಜರ್ಬಲೆ ಆ ತೆಗ್ಗಿನ ತಳದ ತನಕಾ ಅಲ್ಲಿಟ್ಟಿದ್ದ ನಿಚ್ಚಣಿಕೆಲಿ ಇಳದ ಅಲ್ಲೆಲ್ಲಾ ಓಡಾಡಿ, ಆಟಾ ಆಡಿ ಮತ್ತ ಹತ್ತಿ ಮ್ಯಾಲ ಬಂದು ನಾನೂ ಆ ಆಳುಮಕ್ಕಳ ಜೋಡಿ ಕೂತ ಅಂಬಲಿ ಕುಡೀತಿದ್ದದ್ದು ಇನ್ನೂ ಈಗ ನಡದದ ಅನ್ನೋ ಅಷ್ಟ ಸ್ಪಷ್ಟ ಅದ ಈ ಕಣ್ಣಾಗ ಮತ್ತ ನನ್ನ ನೆನಪಿನ್ಯಾಗ. ನಾನs ಆ ಮಜಾ ಭರಪೂರ ಲುಟಾಸ್ದಾಕಿ ಅನಸ್ತದ. ನಮ್ಮಣ್ಣ ಸಾಲಿಗ ಹೋಗಾಂವಾ; ಪ್ರಮೋದ ಇನ್ನೂ ಸಣ್ಣಾಂವ ಇದ್ದಾ. ನಮ್ಮಣ್ಣ ಪ್ರಕಾಶ ಒಮ್ಮೊಮ್ಮೆ ಸಾಲಿಂದ ಬಂದು ಅಲ್ಲಿ ಆ ತಗ್ಗಿನ್ಯಾಗ ಇಳದ ಆಡ್ಲಿಕ್ಕೆ ಬರತಿದ್ದಾ. ಆದ್ರ ಅಂವಾ ಏನ ಅಂಬಲಿ ಉಸಾಬರಿಗ ಬರಾಂವ ಅಲ್ಲ.
1959ರ ಸುರುವಾತಿಗೆ ಮನೀ ಕೆಲಸಾ ಮುಗಧಂಗ ಆತು. ಆ ಮ್ಯಾಲ ಫೆಬ್ರುವರಿ ಒಳಗ ನಮ್ಮ ಹೊಸಾ ಮನಿದು ವಾಸ್ತು ಶಾಂತಿ ಮತ್ತ ಗೃಹ ಪ್ರವೇಶ ಆತು. ಮುಂದ ಎಪ್ರೀಲದಾಗ ನನ್ನ ಎರಡನೇ ತಮ್ಮ ಆನಂದ ಹುಟ್ಟಿದಾ. ನಮ್ಮ ಅಣ್ಣಾಗ ಆವಾಗ ಮೂವತ್ತೊಂದ ವರ್ಷ. ಆನಂದ ಹುಟ್ಟಿದ ಸ್ವಲ್ಪs ದಿನಕ್ಕ ಅಣ್ಣಾ ಹೊಸಾ ಮನಿಗೆ ಹೊಸಾ ಫಿಲಿಪ್ಸ್ ರೇಡಿಯೋ ತಗೊಂಡ ಬಂದ್ರು. ಅವರ ಆಗಿನ ಹುರುಪು, ಆ ನಗಿ, ಆ ಮಾತು ಈಗೂ ಕಿಂವ್ಯಾಗ ಧ್ವನಿಸಿಧಂಗ ಅನಸ್ತದ. ರೆಡಿಯೋ ಜೋರಲೇ ಹಚ್ಚಿ ಬಿಡಾವ್ರು. ಕೂಸಿನ್ನ ನೋಡಿ ಹೋಗಲಿಕ್ಕೆ ನಮ್ಮ ಅಂಬಕ್ಕಜ್ಜಿ ಬಂದಿದ್ಲು. ಆಕಿ ಅಣ್ಣಾಗ ಜೋರ ಮಾಡಿದ್ದ ನೆನಪದ – ” ಏನ ಅಣ್ಣಾಸಾಬ, ಅದೆಷ್ಟ ಜೋರ ಹಚ್ಚೀದಿ ಅದನ್ನ? ಅವ್ರಿಗೇನ ಊಟಾ ನಿದ್ದಿ ಏನಿಲ್ಲ ಏನ? ಅಸರಂತ ಒದರಕೋತ ಕೂತಿರತಾರ. ಸ್ವಲ್ಪ ಸಾವಕಾಶ ಒದರ ಅನ್ನ ಅವ್ರಿಗೆ. ಕೂಸು – ಬಾಣಂತಿ ಮಲಗ್ಯಾರ. ಅಷ್ಟೂ ತಿಳ್ಯೂದಿಲ್ಲೇನು ” ಅಂತ ಅಂದಿದ್ಲು ನಮ್ಮ ಅಣ್ಣಾಗ. ಅಣ್ಣಾ ಬಾಣಂತಿ ಖೋಲೀದು, ಪಡಸಾಲಿ, ನಡಮನಿ ನಡುವಿನ ಬಾಗಲಾ ಬಂದ ಮಾಡ್ತಿದ್ರು. ಆದರ ರೇಡಿಯೋ ಏನ ಬಂದ ಮಾಡ್ತಿದ್ದಿಲ್ಲ. ಅದs ಆ ಹಾಡಿನ ಹುಚ್ಚು ಹಂಗs ಥೇಟ್ ಎಲ್ಲಾ ಮಕ್ಕಳಿಗೂ ಇಳದ ಬಂದದ. ನಾನು, ಆನಂದಂತೂ ಆತು; ಈಗೀಗ ವಿದ್ಯಾನೂ ಹಾಡ್ತಾಳ. ಪ್ರಕಾಶ ಯಾಕೋ ಬಿಟ್ಟಾನ ಹಾಡೂದು. ಆದ್ರ ಎಲ್ಲಾರೂ ಸಂಗೀತ ಪ್ರಿಯರು, ಸಂಗೀತ ಜ್ಞಾನ ಇರಾವ್ರು ಮತ್ತ ಒಳ್ಳೇ ಕೇಳುಗರು.
ಅಣ್ಣಾಂದು ಹಿಂಗ ಮನಿ ಒಳಗಿಂದ ಸಜಾಸುದ್ರಾಗ ಹುರುಪು ಇದ್ರೆ, ಏಕಾ ಹಿಂದ ಹಿತ್ತಲಾ , ಮುಂದ ಅಂಗಳ ತುಂಬ ಛಂಧಾಂಗ ನಾನಾ ನಮೂನೀ ಹೂವಿನ ಗಿಡಾ, ಹಣ್ಣಿನ ಗಿಡಾ, ಕರಿಬೇವಿನ ಗಿಡಾ ಎಲ್ಲಾ ಹಚ್ಚಿದ್ಲು. ಹಿತ್ತಲದಾಗ ತುಳಸಿದಂತೂ ಬನಾನs ಆಗಿತ್ತು. ನಮ್ಮ ಅವ್ವಾ ಹ್ಯಾಂಡ್ ಎಂಬ್ರಾಯ್ಡರಿ, ಕ್ರೋಷಾ ಹೆಣಿಗಿ ಪಡದೆ, ಮ್ಯಾಟಿ ಅರಿವಿ ಮ್ಯಾಲ ಕ್ರಾಸ್ ಸ್ಟಿಚ್ ನ ಕರ್ಟನ್ ಮಾಡಿ ಹಾಕಿದ್ಲು. ಒಟ್ಟ ಹೊಸಾ ಮನಿ ಹೊಸಾ ಕಳೇ ತುಂಬಿ ಹೊಳೀತಿತ್ತು.
ಇಂಥಾ ತಂಪಿನ ಮನ್ಯಾಗ ಹಂಗs ತಂಪಾಗಿ ಹಿತಾ ಅನಸೂ ಅಂಥಾ ವಾತಾವರಣ. ಅಣ್ಣಾ ನಮಗೆಲ್ಲಾ ಐದನೇ ವರ್ಷದಿಂದನs ಲೈಬ್ರರಿಗೆ ಹೋಗೂ ರೂಢಿ ಮಾಡಸಿದ್ರು. ನನಗೂ ಹಂಗs. ಸ್ವಲ್ಪ ದಿನಾ ಸಂಜೀಕ ಸಾಲಿ ಬಿಟ್ಟ ಬಂದು, ಸ್ವಲ್ಪ ಆಟ ಆದಮ್ಯಾಲೆ ತಾಂವs ಕರಕೊಂಡ ಹೋಗ್ತಿದ್ರು ನನ್ನ. ಇರ ಇರತ ಪ್ರಕಾಶನ ಅಂದ್ರ ನಮ್ಮಣ್ಣನ ಸೋಬತಿ ಮಾಡಿ ಲೈಬ್ರರಿಗೆ ನನ್ನ ಕರಕೊಂಡ ಹೋಗೂ ಕೆಲಸಾ ಅಂವಗ ಹಚ್ಚಿದ್ರು. ಇಬ್ರೂ ಕೂಡಿ ಹೋಗ್ತಿದ್ವಿ. ನಾವಿಬ್ರೂ ಭಾಳ ಜತ್ತಲೇ ಇರಾವ್ರು; ಆಟಕ್ಕೂ , ಜಗಳಕ್ಕೂ! ಸ್ವಲ್ಪ ದಿನಾ ಹೋದ ಮ್ಯಾಲ ಪ್ರಮೋದನೂ ನಮ್ಮ ಜೋಡಿ ಬರಲಿಕ್ಕ ಸುರು ಮಾಡಿದ ಲೈಬ್ರರಿಗೆ. ನಾ ಮೊದಲನೇ ದಿನಾ ಲೈಬ್ರರಿ ಒಳಗ ಒಂದ ಕಥಿ ಪುಸ್ತಕ ತಗೊಂಡು ಸ್ಟೈಲಾಗಿ ಕೂತು ಜೋರ ಜೋರಲೆ ಓದ್ಲಿಕ್ಹತ್ತಿದೆ. ಅಲ್ಲೇ ತಾಂವೂ ಏನೋ ನೋಡ್ಕೋತ ಕೂತಿದ್ದ ಅಣ್ಣಾ ಗಡಬಡಿಸಿ ಬಂದು,” ಅಕ್ಕವ್ವಾ ಇಲ್ಲೆ ಹಂಗ ಜೋರ ಜೋರಲೆ ಓದಬಾರದು. ಬ್ಯಾರೆ ಮಂದಿನೂ ಓದ್ತಿರತಾರ; ಏನೋ ಬರಕೋತ ಅಭ್ಯಾಸ ಮಾಡ್ಕೋತ ಕೂತಿರ್ತಾರ. ಅವರಿಗೆ ತ್ರಾಸ ಆಗಧಂಗ ನೀನೂ ಅವರಗತೆ ಮನಸಿನ್ಯಾಗ ಓದಬೇಕು ” ಅಂತ ಹೇಳಿ ಹೆಂಗ ಮನಸಿನ್ಯಾಗ ಓದಬೇಕು ಅಂಬೂದ್ರ ಬಗ್ಗೆ ಹೇಳಿದ್ರು. ಲೈಬ್ರರಿ ಮೆಂಬರ್ ಆಗಿ ಆಗಿಂದನs ಪುಸ್ತಕಗಳನ ಓದೂ ಹುಚ್ಚು ಎಲ್ಲಾರಿಗೂ. ಅದಕ ಈಗ ನಾವು ಆರೂ ಮಂದಿ ಮನ್ಯಾಗ ತಮ್ಮ ತಮ್ಮದs ಒಂದು ಸಣ್ಣ ಸಣ್ಣೂ ಲೈಬ್ರರಿ ಮನೀಯೊಳಗ ಇಟ್ಕೊಂಡೀವಿ. ನಮ್ಮ ಅಣ್ಣಾಂದ ಅಂತೂ ಪುಸ್ತಕ ಸಂಗ್ರಹ ಭಾಳ ಛಲೋ ಅದ. ಅವೆಲ್ಲಾ ಹೆಂಗ ಇದ್ದು ಹಂಗs ಅವುತರ ಕಪಾಟ ಸಹಿತ ಹುಕ್ಕೇರಿಂದ ಇಲ್ಲಿ ಬೆಂಗಳೂರಿಗೆ ಬಂದಾವ, ನಮ್ಮ ಅವ್ವಾ – ಅಣ್ಣಾ 1992 ಜನೇವರಿಯೊಳಗ ಬೆಂಗಳೂರಿಗೆ ತಮ್ಮ ಮಕ್ಕಳ ಮನಿಗೆ ಶಿಫ್ಟ್ ಆದಾಗ.
ಈ ಓದೂ ಆಸಕ್ತಿ ನಮಗಷ್ಟs ಅಲ್ಲ, ನಮ್ಮ ಅವ್ವಾಗೂ ವಿಪರೀತ ಇತ್ತು. ಅಣ್ಣಾ ಅಗದಿ ನೇಮಲೆ ಆಕಿಗೂ ಲೈಬ್ರರಿ ಪುಸ್ತಕ ತಂದ ಕೊಟ್ಟ ಅದರ ರುಚಿ ಹಚ್ಚಿದ್ರು. ಎಲ್ಯರೇ ಒಂದ ಪೇಪರ್ ತುಂಡು ಕಸಾ ಉಡಗೂ ಮುಂದ ಕಸದಾಗ ಬಂತ ಅಂದ್ರ ಆತು; ನಮ್ಮವ್ವ ಕೈಯಾಗಿನ ಕಸಬರಿಗಿ ಅಲ್ಲೇ ಒಗದು ತಾ ಚಪ್ಪಾಳಿ ಹಾಕೊಂಡ ಕೂತು ಅದನ್ನ ಓದಿ ಮುಗಿಸಿ ಎದ್ದು ಆಮ್ಯಾಲ ಮತ್ತ ಕಸಾ ಉಡಗೂ ಕೆಲಸ ಮುಂದ ನಡಸ್ತಿದ್ಲು. ಹಂಗs ನಮ್ಮ ಏಕಾಂದು ಒಂದು ಪುಸ್ತಕದ ಟ್ರಂಕ್ ಇತ್ತು. ಆಕಿ ಕಡೆ ಇದ್ದ ಪುಸ್ತಕದಾಗ ನನ್ನ ಪ್ರೀತಿವು ಅಂದ್ರ ಮಾಧ್ವ ಮಂಜರಿ ಮತ್ತ ಒಂದ ಹಳೇದ ಪುರಂದರದಾಸರ ಕೀರ್ತನೆಗಳ ಪುಸ್ತಕ. ಅವೆರಡೂ ಜೀರ್ಣ ಆಗ್ಯಾವ, ಖರೇ ನಾ ನಮ್ಮ ಏಕಾ ಹೋದ ಮ್ಯಾಲ ಅವನ್ನ ತಂದ ನನ್ನ ಕಡೆ ಇಟ್ಕೊಂಡೀನಿ ಅವನ್ನ.
ಹಂಗs ನಮ್ಮ ಅಣ್ಣಾ ಎಂದೂ ನಮ್ಮ ಕಾದಂಬರಿ ಓದಿಗೆ ಅಡ್ಡಿ ಮಾಡಿ, ಓದಬ್ಯಾಡ್ರಿ ಅವನ್ನ ಅಂದಾವ್ರಲ್ಲ. ಹಿಂಗಾಗಿ ನಾ ಸುಮಾರು ಎಂಟು, ಒಂಬತ್ತನೇ ಕ್ಲಾಸ್ ಗೆ ಬರೂದ್ರಾಗ ತ.ರಾ.ಸು. ಅವರು ಬರೆದ ಚಿತ್ರದುರ್ಗ ಇತಿಹಾಸದ್ದು ಎಲ್ಲಾ ಕಾದಂಬರಿ ಓದಿ ಮುಗಿಸಿದ್ದೆ. ತ್ರಿವೇಣಿ ಕಾದಂಬರಿಗಳ ನಾಯಕಿಯರ ಜೊತೆ ಕಣ್ಣೀರು ಸುರಿಸಿದ್ದೆ; ಭೈರಪ್ಪನವರ ಕಾದಂಬರಿಗಳ ವಿಚಾರಗಳ ತಾಕಲಾಟದಾಗ ಸಿಕ್ಕಿಕೊಂಡದ್ದೂ ಆಗಿತ್ತು. ಶಿವರಾಂ ಕಾರಂತರು, ಕುವೆಂಪು ಅವರು, ಅನಕೃ ಅವರು ಹೀಗೇ ನಮ್ಮ ಓದಿನ ಹರಿವು ಅಳತಿ ಇಲ್ಲದಷ್ಟು ಬೆಳದಿತ್ತು. ಭರೇ ಕಾದಂಬರಿ ಅಷ್ಟs ಅಲ್ಲ ಸಾಮಾನ್ಯ ಜ್ಞಾನದ್ದು, ಕಥಿ – ಪ್ರಬಂಧಗಳು ಹೀಂಗ ದೊಡ್ಡ ಸಾಲೇ ಅದ ನನ್ನ ಗೆಳತೀರು ಕೇಳಾವ್ರು – ” ನಿಮ್ಮನಿ ಒಳಗ ಸಾಲಿ ಪುಸ್ತಕ , ಅಭ್ಯಾಸದ ಪುಸ್ತಕ ಬಿಟ್ಟು ಬ್ಯಾರೆ ಪುಸ್ತಕ ಓದಿದ್ರ ಏನನೂದಿಲ್ಲೇನ?” ಅಂತ. ಅದನ ಕೇಳಿ ಬಲೆ ಮಜಾ ಅನಸೂದ ನಂಗ.
ಓದಿನ ಸಲುವಾಗಿ ಹೀಂಗ ಆದ್ರ, ಅವರ ಕಟ್ಟುನಿಟ್ಟಿನ , ಕೆಲಸದಲ್ಲಿನ ನಿಯಮಿತತನ, ಇನ್ನೊಂದ ವಳಣ ರೂಢಿಸಿತು.
ನಾ ಹಿಂದ ಹೇಳಿಧಾಂಗ ನಮ್ಮ ಅಣ್ಣಾ ಭಾರೀ ಕಟ್ಟುನಿಟ್ಟಿನ್ಯಾವ್ರು, ಹಂಗs ಸಿಟ್ಟಿನ್ಯಾವ್ರು. ಪ್ರತಿಯೊಂದ್ರಾಗೂ ಒಂದ ನಿಯಮಿತತನಾ ಇರೂದು. ಎಲ್ಲಾರೂ ಹಂಗs ಇರಬೇಕು ಅನಾವ್ರ ಅವರು. ನಾವು ಸಾಲಿ ಮುಗಸ್ಕೊಂಡ ಬಂದು ಆಡ್ಲಿಕ್ಕ ಹೋದಾವ್ರು ಆರೂವರೆ ಠೋಕೆ ಬೀಳೂದ್ರಾಗ ಮನ್ಯಾಗ ಇರಬೇಕು. ಯಾರರೇ ಒಂದ ಐದ ನಿಮಿಷ ತಡಾ ಮಾಡಿದ್ರೂ ಮನೀ ಹೊರಗ ಅಂಗಳದಾಗ ಅರ್ಧಾ ತಾಸ ನಿಂದ್ರಬೇಕು; ಇದು ಅವರಿಗೆ ಅಣ್ಣಾ ಕೊಡೂ ಶಿಕ್ಷಾ. ಹಂಗs ರಾತ್ರಿ ಎಂಟೂವರಿ ಬಡೀತು ಅಂದ್ರ ಊಟದ ತಾಟ ಬೀಳಲಿಕ್ಕೇ ಬೇಕು. ಜsರ ಒಂದ ಐದ ಹತ್ತ ನಿಮಿಷ ತಡಾ ಆದ್ರೂ ಅಣ್ಣಾ ಕೇಳೂದ ಖಾತ್ರೀನೇ -‘ ಕುಸುಮಾ, ಈ ಹೊತ್ತ ರಾತ್ರಿ ಊಟ ಇಲ್ಲೇನು’ ಅಂತ. ಈ ಖಡಕ್ ಎಚ್ಚರಿಕೆ ನಮ್ಮೊಳಗೂ, ನಮ್ಮ ಜೀವನದಾಗೂ ಅಗದೀ ಹಂಗೇ ಉಳಕೊಂಡ ಬಂದದ. ಐದ ಅಂದ್ರ ಐದನs ಅದು; ಐದ ಹೊಡೀಲಿಕ್ಕೆ ಐದ ನಿಮಿಷನೂ ಅಲ್ಲಾ; ಐದ ಹೊಡದು ಐದ ನಿಮಿಷನೂ ಅಲ್ಲಾ. ಅದು ಐದ ಅಷ್ಟೇ. ನಮಗೆಲ್ಲಾ ಗೊತ್ತಿರೂದೂ ಅದs.ನಾ ಈಗಲೂ ಹೇಳ್ತೀನಿ – ಹನ್ನೊಂದು ಹತ್ತಕ್ಕ ಬರ್ತೀನಿ ಅಥವಾ ನಾಲ್ಕು ಐದಕ್ಕ ಅಲ್ಲೆ ಹೋಗಬೇಕು ಹಿಂಗ. ಅದಕ್ಕ ನನ್ನ ಫ್ರೆಂಡ್ಸ್ ಆಗಲೂ ಈಗಲೂ ಛೇಡಿಸ್ತಾರ; “ಅದೇನದು ಮುಂಬಯಿ ಲೋಕಲ್ ಟೈಂ ನ ಹಂಗ? ನಾಲ್ಕ ಅಂತ ಹೇಳು ಇಲ್ಲಾ ನಾಲ್ಕೂ ಹದಿನೈದು ಅಂತ ಹೇಳು” ಅಂತ. ಅದಕ್ಕ ನನ್ನ ಉತ್ತರ ಈಗೂ ಅದೇ – ಪ್ರತಿ ಸೆಕೆಂಡ್ ಗೆ ಅದರದೇ ಮಹತ್ವ ಅದ ‘ . ಇದು ನಮ್ಮ ಅಣ್ಣಾ ಕಲಿಸಿದ್ದು ನಮಗ.
ನಮ್ಮ ರಾತ್ರಿ ಊಟದ ಹೊತ್ತ ಅಂದ್ರ ನಮಗೆಲ್ಲಾ ಭಾಳ ಖುಷಿ; ಆ ಊಟದ ಸಲವಾಗಿ ಅಲ್ಲಾ; ಆಗ ನಡಿಯೂ ಚರ್ಚಾ, ಮಾತುಕತಿ ಸಲವಾಗಿ. ಯಾವದs ಒಂದು ವಿಷಯದ ಮಾತ ಅದ ಹೆಂಗೋ ಬಂದ ಬಿಡ್ತಿತ್ತು. ಮೂಕಲೇ ಊಟ ಗೊತ್ತs ಇಲ್ಲ ನಮಗ. ಎಲ್ಲಾರೂ ತಮ್ಮ ತಮ್ಮ ವಿಚಾರಾ, ಮಾತು ಹೇಳೋ ವ್ಯಾಳ್ಯಾ ಅದು. ಆಗ ಅಣ್ಣಾ ಇಷ್ಟ ಛಂದ ಆ ಮಾತಿನ್ಯಾಗ ಮುಣಗಾವ್ರಲಾ ದಿನಾ ಒಂದಿಂಚ ನಮ್ಮ ತಿಳವಳಿಕಿ ಹೆಚ್ಚಾಧಾಂಗ ಅನಸೂದು. ಈ ಥರದ ಚರ್ಚೆ, ಮಾತುಕತಿಂದ ನಮ್ಮೆಲ್ಲಾರ ವ್ಯಕ್ತಿತ್ವದ ಘಡಣದಾಗ ಒಂದು ಸ್ವಂತಿಕೆ, ಅನೂದು ಗೊತ್ತs ಆಗಧಾಂಗ ಗಟ್ಟಿ ಜಾಗಾ ಮಾಡ್ಕೊಂಡ ಕೂತದ ಅನಸ್ತದ.
ನಮ್ಮ ಅಣ್ಣಾನ ಈ ಥರದ ಪ್ರೋತ್ಸಾಹ, ಸ್ಪಷ್ಟ ವಾಚಾ, ನೇರ ಮಾತು ನಮಗೂ ಅದನ್ನs ಕಲಿಸ್ತು. ಅದು ಸರಿನೋ ತಪ್ಪೋ ಈಗ ಅಂತ ವಿಚಾರ ಮಾಡೋ ಸ್ಥಿತಿಗಳೂ ಭಾಳ ಬರತಾವ. ಆದರ ಅದು ನಮ್ಮಲ್ಲಿ ಬೆಳಸಿದ ಸ್ವಂತಿಕೆ, ನಮ್ಮದೇ ಆದ ಒಂದು ಅಭಿರುಚಿ ಬೆಳಸಿಕೊಳ್ಳಿಕ್ಕೆ ಹಚ್ತಂಬೂದಂತೂ ಶಂಭರ್ ಟಕ್ಕೆ ಖರೆ. ನಾವು ತಪ್ಪಿದ್ದನ್ನು ಹೌದು ಅಂತ ಬೇಷರತ್ತ ಆಗಿ ಒಪ್ಪೋದ್ರಾಗ ಖರೆ ಶಾಣ್ಯಾತನ ಅಂತ ಕಲಿಸ್ತು. ಓದೂ ರೂಢಿ ಶಬ್ದ ಸಂಗ್ರಹ ಹೆಚ್ಚಿಸ್ತು.
ನಮ್ಮ ಅಭ್ಯಾಸದ ಹಾದಿಯೊಳಗೂ ಇದು ಭಾಳ ಬೆಳಕು ಛಲ್ತು.ಕವಿತಾ ಅಷ್ಟ ಬಿಟ್ಟು ಇನ್ಯಾವುದs ಪ್ರಶ್ನೋತ್ತರಗಳನ್ನ, ಓದಿ ಉರು ಹೊಡದು ಬರೀಯೂದು ಹೀಂಗ ರೂಢಿ ಆಗದs ನಮ್ಮದೇ ಮಾತುಗಳಲ್ಲಿ ಶೈಲಿಯಲ್ಲಿ ಬರೀಲಿಕ್ಕೆ ಕಲಿಸ್ತು. ಈ ಒಂದ ವಳಣದಾರ ಘಡಣದಾಗ ನಮ್ಮ ಅವ್ವಾಂದೂ ಸರೀಕ ಸರಿ ದೇಣಿಗಿ ಅದ. ಈ ಶ್ರೀಮಂತಿಕಿ ನಮಗ ಅಖಂಡವಾಗಿ ಸಿಕ್ಕದ ಅಂತ ನಂದ ಪ್ರಾಮಾಣಿಕ ಅಂಬೋಣ.
ಏಕಾನಗತೆ ನಮ್ಮ ಅಣ್ಣಾನೂ ತುಳದದ್ದ ಕಷ್ಟದ ಹಾದೀನs. ಏಕಾನ ಜೀವನದ ಎಳಿ ಎಳಿ ಬಿಡಿಸಿ ನೋಡಿದಾಗ ಅಣ್ಣಾನ ಜೀವನ ಚಿತ್ರ ಮೂಡಿ ಬಿಟ್ಟಹಂಗನs ಅನಸ್ತದ ನಂಗ. ಹಂಗs ನಮ್ಮ ಅಣ್ಣಾನ ಜೀವನ ಅಗದಿ ಸರಳ, ಸುಂದರ ಅಂಬೂದ್ರಾಗ ಏನೂ ಸಂಶಯ ಇಲ್ಲ ಅಂತನೂ ಅನಸ್ತದ . ಆ ದಿಟ್ಟತನದ ಹೆಜ್ಜೆಗಳ ಅಚ್ಚು ಬಲು ಗಾಢ ಅವ ಮತ್ತ ಆಳ ಅವ ಅವರ ಮಕ್ಕಳ ಜೀವನದಾಗ. ಆ ಥರದ ಬದುಕು ಸಾಧಿಸಿದ ಆ ದಿಕ್ಕಿನ್ಯಾಗ ಅವರ ಹಿಂದ ಮೊದಲ ಏಕಾನ ಕಾಳಜಿ ನೆರಳು; ಆ ಮ್ಯಾಲ ಮದವಿ ಆದ ಮ್ಯಾಲ ನಮ್ಮ ಅವ್ವಾನ ಎರಡ ಮಾತೇ ಇಲ್ಲದ ಸಹಕಾರ, ಬಲು ಅಪರೂಪದ್ದ ಅದು, ಅದೂ ಸೇರ್ತು ಅದರ ಜೋಡಿ. ಇದರಿಂದ ಅಣ್ಣಾಗ ತಮ್ಮ ಕಷ್ಟಗಳ ಸಾಲಿನ ನಡುವೆ ಒಂದು ಛಂದ ಬದುಕು ಕಟ್ಟಿಕೊಳ್ಳಿಕ್ಕಾತು. ಮನಿಯೊಳಗಿನ ಆ ಆರೋಗ್ಯಕರ ವಾತಾವರಣದ ತಣ್ಣೆಳಲ ಹಾದಿಯಲ್ಲಿ ನಡೆದು ಬಂದು ಗುರುತಿಸಲ್ಪಡೋ ಹಾಂಗ ಬದುಕ್ತಿರೋ ಅವರ ಮಕ್ಕಳನ ನೋಡಿ ಹುಕ್ಕೇರಿಯೊಳಗ ಅಂದೂ, ಇಂದೂ ” ಇದ್ರ ಮುತಾಲೀಕ ಮಾಸ್ತರ ಮಕ್ಕಳ್ಹಾಂಗ ಇರಬೇಕು” ಅಂಬೋ ಮಾತು ಕೇಳಸ್ತದ. ನನಗ ಹೆಮ್ಮೆ ಅನಸ್ತದ ; ಹೇ ನಾವೆಲ್ಲಾ ಭಾಳ ಶಾಣ್ಯಾರ ಹಂಗಾರ ಅಂತ ಅಲ್ಲ. ಥೇಟ್ ನಮ್ಮ ಹುಕ್ಕೇರಿ ಮನಿಗತೆ ಗಟ್ಟಿಮುಟ್ಟಾದ ಪಾಯಾ ಹಾಕಿದ ಆ ತಣ್ಣೆಳಲ ಹಾದಿಯ ಹರಿಕಾರರ ಬಗ್ಗೆ, ಏಕಾ, ಅಣ್ಣಾ, ಅವ್ವಾನಂಥ ಸರಳ ಜೀವಿಗಳ ನೆರಳು ಒದಗಿಸಿದ ಆ ಕೊಡಾಂವನ ಆಟದ ಬಗ್ಗೆ! ಖಾತ್ರಿಲೇ ಹೇಳ್ತೀನಿ; ಆ ಕೊಡಾಂವನ ರೀತೀನs ಹಂಗ!
| ಇನ್ನು ಮುಂದಿನ ವಾರಕ್ಕೆ |
ತಮ್ಮ ಬಾಲ್ಯದ ಸುಂದರ ಅನುಭವಗಳನ್ನು ಹಂಚುತ್ತಾ “ತೆಗ್ಗಿನ ತಳದ ತನಕಾ ಅಲ್ಲಿಟ್ಟಿದ್ದ ನಿಚ್ಚಣಿಕೆಲಿ ಇಳದ ಅಲ್ಲೆಲ್ಲಾ ಓಡಾಡಿ, ಆಟಾ ಆಡಿ ಮತ್ತ ಹತ್ತಿ ಮ್ಯಾಲ ಬಂದು ನಾನೂ ಆ ಆಳುಮಕ್ಕಳ ಜೋಡಿ ಕೂತ ಅಂಬಲಿ ಕುಡೀತಿದ್ದೆ.” ಈ ಆಟಗಳನ್ನ್ನು ಈಗಿನವರು ಮೋಬೈಲಿನಲ್ಲಷ್ಟೇ ಆಡಬಹುದಂತೆ ಕಾಣುತ್ತದೆ! ಸಣ್ಣ ಊರಿನ ಬದುಕಿನ ಆತ್ಮೀಯ ವರ್ಣನೆ! ಅಭಿನಂದನೆಗಳು!
ನಿಜ ಶ್ರೀವತ್ಸ ದೇಸಾಯಿಯವರೇ. ಆ ಮಜಾನೇ ಬೇರೆ. ಹೆದರಿಕೆ, ಅಂಜಿಕೆ ಹರದಾರಿ ದೂರ ಆಗ. ಈಗ ಸ್ಟೂಲ್ ಮೇಲೆ ಹತ್ತಲು ಹತ್ತ ಸಲಾ ಯೋಚಿಸೋ ಹಾಗೆ ಪರಿಸ್ಥಿತಿ.
ಧನ್ಯವಾದಗಳು ಸರ್