‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.
ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.
ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.
ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…
6
ನಮ್ಮ ಏಕಾಂದು ದೊಡ್ಡ ಗುಣಾನೋ, ಸೂಕ್ಷ್ಮ ತಿಳುವಳಿಕೆನೋ, ಬದುಕಿನ ಜೋಡಿ ಆ ತಾದಾತ್ಮ್ಯ ಹೊಂದಾಣಿಕೆ ಭಾಳ ಅಪರೂಪದ್ದು. ಒಮ್ಮೆನೂ ಸೋತ ಧ್ವನಿ ಮಾತು ನಾ ಕೇಳಿಲ್ಲ, ಸೊಟ್ಟ ಮಾರಿ, ಬ್ಯಾಸರದ ನೆರಳು ಮಾರೀ ಮ್ಯಾಲೆ ಸುಳೀತಿರಲಿಲ್ಲ. ಹಿಂಗಾಗಿ ಏಕಾನ ಜೋಡಿ ನಾವು ಹೊಲದಾಗ ಇದ್ದಾಗ ಕೂಡ ಅಲ್ಲಿನ ಪ್ರತಿ ಕ್ಷಣವೂ ಉಲ್ಲಾಸದ ಹೊಳೆಯಲ್ಲಿ ಮುಳುಗಿನs ಕಳೀತಿತ್ತು. ಆ ಪ್ರತಿ ಗಳಿಗೆನೂ ಎದಿಯೊಳಗೆ ಅಚ್ಚೊತ್ತಿ, ಕೆತ್ತಿ ಕೂಡಿಸಿ ಬಿಟ್ಟ ಹಾಂಗ ಆಗೇದ.
ಶೇಂಗಾದ (ಕಡ್ಲೆಬೀಜ) ಸುಗ್ಗಿ ವೇಳೆಗೆ ಹೆಚ್ಚು ಕಡಿಮಿ ನಮ್ಮ ಶಾಲೆಗೆ ದಸರಾ ಸೂಟಿ ಶುರು ಆಗೇ ಇರ್ತಿತ್ತು. ದಸರಾ ಮುಗಿದ ಕೂಡಲೇ ಏಕಾನ ಪಯಣ ಬೆಳವಿಗೆ. ಆಕಿ ಹಿಂದನ ನಾವೂ. ಸಾಮಾನ್ಯವಾಗಿ ಯಾವ ಹಬ್ಬ ಹುಣ್ಣಿಮೆ ಹತ್ತರ ಇಲ್ಲದಾಗನs ಖಾಲಿ ದಿನದಾಗನ ಶೇಂಗಾ ತಗಿಯೂದನ ಇಟ್ಕೋತಿದ್ರು, ಎಲ್ಲರಿಗೂ ಅನುಕೂಲ ಆಗ್ತದ ಅಂತ.
ಶೇಂಗಾ ತಗೀಯೂ ಕೆಲಸಾನ ರೈತರು ಭಾರೀ ಸರಳ ಮಾಡ್ಕೊಂಡ ಬಿಡ್ತಿದ್ರು. ಎಲ್ಲಾದಕ್ಕೂ ಅದರದs ಒಂದು ಪದ್ಧತಶೀರ ವ್ಯವಸ್ಥಾ ಇದ್ದs ಇರತದ ಅನೂದು ಅಗದೀ ಖರೇ. ಅದನೇ ಇಲ್ಲಿ ಶೇಂಗಾ ತಗ್ಯೂ ಮುಂದೆ ನಾ ನೋಡ್ತಿದ್ದೆ. ತಮ್ಮ ತಮ್ಮ ಕೆಲಸಕ್ಕ ಒಂದೊಂದು ಅನುಕೂಲಕರ ಹಾದಿ ಹುಡ್ಕೋ ರೈತನ ಸಂಶೋಧಕ ಬುದ್ಧಿ ಮೆಚ್ಚುವಂಥಾದ್ದು. ಶೇಂಗಾದ ಬೆಳೆ ಇರೂ ಹೊಲಾ ಪೂರ್ತಿ ಒಂದು ಸಲ ಹವೂರಗ ಹರಗಿ ಬಿಡ್ತಿದ್ರು. ಆಗ ನೆಲಾ ಸಡ್ಲ ಆಗಿ ಶೇಂಗಾ ಬಳ್ಳಿ ಹಗೂರ ಮ್ಯಾಲೆ ಬಂದು ಬಿಡ್ತಿದ್ವು. ಆ ಮ್ಯಾಲೆ ಬಳ್ಳಿ ಚೂರು ಒಣಗಿಸಿ ಬಿಡಾವ್ರು ತ್ಯಾಂವ ಆರೂಹಂಗ. ಅಷ್ಟಾದ ಮ್ಯಾಲೆ ಬಳ್ಳಿಯೊಳಗಿಂದ ಶೇಂಗಾ ಬಿಡಿಸಿ ಆ ಮಣ್ಣು, ತೊಪ್ಪಲ, ಕಸಕಡ್ಡಿ ಬ್ಯಾರೆ ಮಾಡಿ ಸ್ವಚ್ಛ ಮಾಡೋದು ಆಳು ಮಕ್ಕಳ ಕೆಲಸ. ಯಾರ್ಯಾರು ಎಷ್ಟೆಷ್ಟು ಶೇಂಗಾ ಬಿಡಿಸಿರತಾರೋ ಅದರ ಮೇಲೆ ಅವರ ಆ ದಿನದ ಸಂಬಳ ನಕ್ಕಿ ಆಗೋದು.
ಆಗ ಹಳ್ಳಿಯೊಳಗ ಇನ್ನೂ ಬಾರ್ಟ್ ರ್ ಪದ್ಧತಿ ಅಂದರೆ ವಸ್ತುವಿಗೆ ವಸ್ತುವಿನ ವಿನಿಮಯ ಪದ್ಧತಿ ಚಾಲ್ತಿಯೊಳಗ ಇತ್ತು. ಶೇಂಗಾ ಎಷ್ಟ ಬಿಡಿಸಿರತಾರೋ ಅದರ ಒಂದು ಭಾಗ ಬಿಡಿಸಿದವರಿಗೆ; ನಾಲ್ಕು, ಆರು, ಎಂಟು ಭಾಗ ಮಾಲೀಕರಿಗೆ. ಕೂಲಿ ದರ ಹೇಗಿರತದೋ ಹಾಗೆ. ಆಳು ಮಕ್ಕಳಿಗೂ ವರ್ಷಪೂರ್ತಿ ಸಾಲುವಷ್ಟು ಶೇಂಗಾ ಸಂಗ್ರಹ ಆಗ್ತಿತ್ತು ಈ ಪದ್ಧತಿಯಿಂದ. ಈ ಕೂಲಿ ಲೆಕ್ಕ ಮಾಡೋ ಕೆಲಸ ಏಕಾಂದು. ಪಾಲು ಮಾಡಿ ಕೊಡೋದು ರೈತನ ಕೆಲಸ. ಒಮ್ಮೊಮ್ಮೆ ಏಕಾನೂ ಮಾಡ್ತಿದ್ಲು. ನಮ್ಮ ಏಕಾ ಅಲ್ಲೇ ನಿಟ್ಲ ಒಟ್ಟಿದ್ದ ಕಾಳಿನ ಚೀಲಗಳು ಇರತಿದ್ವಲಾ, ಅದರಾಗಿಂದನ ಒಂದು ಚೀಲಾ ಎಳಕೊಂಡು ಅದರ ಮ್ಯಾಲೆ ಕೂತು ಎಲ್ಲಾ ದೇಖರೇಖಿ ಮಾಡೂ ಥಾಟ ಮಸ್ತ್ ಇರ್ತಿತ್ತು. ನಮಗೆಲ್ಲ ಭಾರೀ ಮೋಜಿನ ಕೆಲಸ ಅನ್ನಿಸೋದು.
ಆಳು ಮಕ್ಕಳು ಶೇಂಗಾ ಬಿಡಸೂ ಮುಂದ, ತಗೀಯೂ ಮುಂದ ಆಕಡೆ ಈಕಡೆ ನೋಡದ, ಬಿಸಿಲು – ನೆರಳಿನ ಖಬರ ಇಲ್ಲದೇ ಅಜ್ಜಗಾವಲಾಗಿ ನಿಂತ ಬಿಡಾಕಿ ಏಕಾ. ಅವರ ನಡುವೆ ತಾನೂ ಒಬ್ಬಳಾಗಿ ಬೆರೆತು ಹೋಗಿ ಬಿಡ್ತಿದ್ಲು ಆಕಿ. ಈ ಗಟ್ಟಿತನ , ಹೊಂದಾಣಿಕೆ ಗುಣ ದೇವರ ದೇಣಿಗೆ ನಮ್ಮ ಏಕಾಗ!

ಆಕೀ ಆಳು ಮಕ್ಕಳಿಗೆ ಹೇಳಾಕಿ -” ತುಡಗ ಮಾಡಬ್ಯಾಡ್ರಿ ಶೇಂಗಾ. ನಿಮ್ಮ ಪಾಲಿಗೆ ಬರೋದು ನಿಮಗ ಕೊಟ್ಟು, ಮ್ಯಾಲೆ ಒಂದ ಬೊಗಸಿ ಹೆಚ್ಚs ಕೊಟ್ಟ ಕಳಸ್ತೀನಿ. ಮಕ್ಳು ಮರಿ ಇದ್ದಾವ್ರು ನೀವು. ಅವರ ಸಲವಾಗೇನ ಮಾಡ್ತೀರಿ ನೀವು. ಗೊತ್ತದ ನಂಗ. ನಾನೂ ಒಬ್ಬ ಅವ್ವನs ಇದ್ದೀನಿ.” ಮತ್ತ ಹಂಗs ಮಾಡ್ತಿದ್ಲು. ಅವರ ಪಾಲು ಮುಟ್ಟಿಸಿ, ಆ ಗಂಟ ಬಾಜೂಕ ಇಡಿಸಿ ಅವರ ಉಡಿ ತುಂಬ ಶೇಂಗಾ ಹಾಕಿ ಕಳಸ್ತಿದ್ಲು. “ಮಕ್ಳಿಗೆ ಹಂಗs ಕೊಡಬ್ಯಾಡ ತಂಗೆವ್ವಾ. ನೀ ಭಾಳ ಹುಂಬ ಇದ್ದೀ. ಅವನ್ನ ಉಪ್ಪ ಹಾಕಿ ಕುದಿಸಿ ಕೊಡು. ಅಂದ್ರ ಬಾಧಸೂದಿಲ್ಲ.” ಅಂತ ಎಲ್ಲಾ ಹೆಣ್ಣಾಳುಗಳಿಗೆ ಹೇಳೂದನ್ನ ಮರೀತಿದ್ದಿಲ್ಲ. ಒಂದ ಕಡೆ ಬೆಂಕಿ ಮಾಡಿ ಹಸಿ ಶೇಂಗಾ ಸುಡೂದ ನಡದೇ ಇರ್ತಿತ್ತು. ಅವನೂ ಅಷ್ಟ ಕೊಡೂದೇ, ಹುಡಗೂರಿಗೆ ಒಯ್ಯರಿ ಅಂತ.
ನಾ ಕೇಳಿದ್ದೆ ಒಮ್ಮೆ ಏಕಾಗ ;” ಏಕಾ ಆಕೀ ಗಂಟಿಗಿಂತಾ ನೀ ಆಕೀ ಉಡ್ಯಾಗ ಸುರವಿದ್ಯಲಾ ಅವೇ ಶೇಂಗಾ ಹೆಚ್ಚ ಇದ್ವು. ಅಷ್ಟು ನಮ್ಮ ಪಾಲಿನ್ಯಾಗ ಕಡಿಮಿ ಆಗೂದಿಲ್ಲೇನ ಏಕಾ” ಅಂತ. ಅದಕ್ಕ ಆಕಿ ” ಅಕ್ಕವ್ವಾ ಅದು ತಿನ್ನೂ ಸಾಮಾನು. ಅನ್ನ ಅದು. ಅದನ್ನ ಅಳೀಬಾರದು. ಅವರ ಕೂಲಿ ಕೊಡೂ ಮುಂದ ಸೈ. ಮಕ್ಳೀಗಂತ ತಿನಲಿಕ್ಕ ಕೊಡ್ತೀವಲಾ ಅದನ್ನೆಂದೂ ಅಳೀಬಾರದು. ಹಂಚಿ ತಿನ್ನಬೇಕು. ಅಂದ್ರ ನಮ್ಮ ಮನೀ ಅನ್ನ ಅಕ್ಷಯ ಆಗ್ತದ. ನಾವು ಕೈ ಎತ್ತಿ ಕೊಟ್ಟಿದ್ದು ಕಡಿಮಿ ಆಗೂದಿಲ್ಲ ನಮಗ; ಹತ್ತು ಪಾಲು ಹೆಚ್ಚಾಗ್ತದ ಅವರ ಹರಕೀಲೆ. ಹಸದವನ ಹರಕಿ, ಶಾಪ ಎರಡೂ ಭಾಳ ತಾಕತವರ ಇರತಾವ ಅಕ್ಕವ್ವಾ” ಅಂತ ಹೇಳಿದ್ಲು. ಯಾವ ವೇದಪಾಠಗಳ ಕಲಿಕೆ ಅಲ್ಲ ಇದು; ಜೀವನಾನುಭವದ ಖರೇ ಮಾತಿದು.
ಹಂಗs ಒಂದು ವ್ಯಾವಹಾರಿಕ ಮಾತೂ ಹೇಳಿದ್ಲು -” ನಾ ಇಂದ ಒಂದು ಬೊಗಸಿ ಹೆಚ್ಚು ಹಾಕಿದ್ರ ನಾಳೆ ಅವರು ಒಂದ ತಾಸ ಹೆಚ್ಚು ದುಡೀತಾರ. ಕೈ ಬಿಚ್ಚಿ ಕೊಟ್ರ ಅವರೂ ಮನಸ ಬಿಚ್ಚಿ ಕೆಲಸಾ ಮಾಡ್ತಾರ ಅಕ್ಕವ್ವಾ”
ಅದೂ ಪಕ್ಕಾ ಖರೇ ಅಂತ ಪಟಾಸಿಬಿಟ್ಟದ ಈಗ. ಆಳು ಏನರೇ ಕಡಿಮಿ ಇದ್ದೂ ಅಂದ್ರೆ, ತಾನೂ ನಿಂತ ಬಿಡ್ತಿದ್ಲು ಏಕಾ ಶೇಂಗಾ ಬಿಡಸಲಿಕ್ಕೆ. ಈ ಕೆಲಸ ಹೆಚ್ಚು, ಈ ಕೆಲಸ ಕಡಿಮಿ ಅನ್ನೂದು ಆಕೀಗೆ ಸಂಬಂಧ ಪಟ್ಟ ವಿಷಯ ಅಲ್ಲವೇ ಅಲ್ಲ. ಇಷ್ಟೆಲ್ಲಾ ಹೆಂಗ ಎಲ್ಲಿಂದ ಕಲ್ತು ತಯಾರಾಗಿದ್ದಾಳು ಏಕಾ ಅನಕೊಂಡ್ರೂ ನನಗೆ ಅನಸ್ತದ; ಯಾರ ಯಾತಕ್ಕ ಕಲಸೂದ ಬೇಕು ಅಂತ. ಜೀವನ, ಪರಿಸ್ಥಿತಿ ತಾನs ಕಲಸ್ತದ. ತೌರಿನ್ಯಾಗಿನ ಬಡತನ ಕಲಿಸ್ತು; ಗಂಡನ ಮನ್ಯಾಗ ಬಂದೆರಗಿದ ಅಸಹಾಯಕ, ಅನಿವಾರ್ಯ ಪರಿಸ್ಥಿತಿ ಇನ್ನೂ ಛಲೋ ಜಬರ್ದಸ್ತ್ ತಾಲೀಮು ಕೊಡ್ತು ಏಕಾಗ.
ಶೇಂಗಾ ಸುಗ್ಗಿ ಮುಗಿಸ್ಕೊಂಡು ಹುಕ್ಕೇರಿಗೆ ಅಂದ್ರ ಮನಿಗೆ ಬಂದು ದೀಪಾವಳಿ, ತುಳಸೀ ಲಗ್ನಾ ಮುಗಿಸಿ ಮತ್ತ ಏಕಾಂದು ಬೆಳವಿ ಪಯಣ. ಒಂದಿಲ್ಲೊಂದು ರಾಶಿ ಇದ್ದs ಇರೋವು ಹೊಲದಾಗ. ಅಕಡಿ ಕಾಳುಗಳ ರಾಶಿ ಈಗಿರೋದು ; ಅಂದ್ರ ಹೆಸರು, ಅಲಸಂದಿ, ಅವರಿ ಇವನ್ನೆಲ್ಲಾ ಕಿತ್ತು, ಒಣಗಿಸಿ ಬಡಿದು ಕಾಳು ಬೇರೆ ಮಾಡಿ ರಾಶಿ ಮಾಡ್ತಿದ್ರು.
ರಾಶಿ ಕಣಾ ಸ್ವಚ್ಛ ಸಾಪಾಗಿ ಮಾಡಿ ಸಾರಿಸಿ ಸ್ವಚ್ಛ ಮಾಡಿದ ಕಣದಾಗ ರಾಶಿ ಮಾಡಿದ್ರ ಕಣ್ಮುಚ್ಚಿ ಕಾಳು ಹಂಗs ಬೇಯಿಸಲಿಕ್ಕಿಡಬೇಕು. ಅಷ್ಟು ವ್ಯವಸ್ಥಿತ ಕೆಲಸ ಮಾಡಸೂ ಪದ್ಧತಿ, ರೂಢಿ ಏಕಾಂದು. ಜೋಳದ ಜೊತೆ ಅಡಸಾಲಿನ್ಯಾಗ ಬೆಳಸಿದ ತೊಗರಿ ಕೊಯ್ಲು ಜೋಳದ ರಾಶಿ ಆಸುಪಾಸಿನ್ಯಾಗ ನಡಿತಿತ್ತು. ಜೋಳದ ರಾಶಿದು ಸಂಭ್ರಮ ಭಾಳ ಜೋರ ಮತ್ತ ಛಂದ. ಅದನ್ನೆಲ್ಲಾ ನೆನೆಸಿಕೊಂಡ್ರ ಈಗ , ಓಡಿ ಬೆಳವಿಗೆ ಹೋಗಂಗ ಅನಸ್ತದ. ಆದರ ಈಗೆಲ್ಲಾ ಟ್ರ್ಯಾಕ್ಟರ್, ರಾಶಿ ಮಾಡೂ ಮಶೀನು ಬಂದ ಬಿಟ್ಟಾವ. ಆಗಿನ ಸಂಭ್ರಮ ಈಗಿಲ್ಲ, ಆ ಮಶೀನುಗಳಲ್ಲಿ; ಆಗಿದ್ದ ಏಕಾನೂ ಈಗಿಲ್ಲ .
ರಾಶಿ ತಯಾರಿ, ಓಡಾಟ, ಗಡಿಬಿಡಿ, ಸಂಭ್ರಮ ನೋಡಿದ್ರ ಮದವಿ ಮನಿ ಗದ್ದಲ ಗೌಜಿ ನೆನಪು ಬರೋದು.
ಜೋಳದ ಹಾಲು ತುಂಬಿದ ಕಾಳು ಬಲಿತು , ಗಟ್ಟಿಕಾಳಾಗಿ ಒಣಗಿ ಕೊಯ್ಲಿಗೆ ಬಂತಂದ್ರ ಜೋಳದ ತೆನೆ ಕತ್ತರಿಸಿ ಗೂಡು ಕಟ್ಟಿ ಬಿಡ್ತಿದ್ರು. ಆ ಮ್ಯಾಲೆ ವ್ಯವಸ್ಥಿತವಾಗಿ ಕಣಾ ತಯಾರಿ ಮಾಡ್ಕೊಂಡು ಅಲ್ಲಿ ಆ ಕಣದಾಗ ಗೂಡು ಕಟ್ಟಿದ ತೆನೆ ತಗೊಂಡು ಹರವಿ ಬಿಡಾವ್ರು. ಆ ಮ್ಯಾಲೆ ಹಂತಿ ಹೊಡೆಯೋ ಕೆಲಸ. ರಾತ್ರಿ ಪೂರ್ತಿ ಹಂತಿ ಹೊಡೀತಿದ್ರು. ಅಂದರೆ ಎತ್ತುಗಳನ್ನು ನೊಗಕ್ಕೆ ಕಟ್ಟಿ ಅವುಗಳಿಂದ ಆ ತೆನೆಗಳನ್ನು ತುಳಿಸುತ್ತಿದ್ರು. ಅದರ ಮ್ಯಾಲೆ ರೋಲರ್ ಕಲ್ಲು; ಸ್ವಚ್ಛ ನಮ್ಮ ಬೆಳಗಾವಿ ಜಿಲ್ಲೆಯ ಕನ್ನಡದಾಗ ಹೇಳ್ಬೇಕಂದ್ರ ರೂಳಗಲ್ಲು ಎತ್ತುಗಳ ಸಹಾಯ ತಗೋಂಡು ಆ ಹಂತಿ ಹೊಡೆದ ತೆನಿಗಳ ಮ್ಯಾಲೆ ಉರಳಿಸಿದ್ರಂದ್ರ ಜೋಳದ ಕಾಳು ಕಡೀಕ ಬಂದು ಬ್ಯಾರೆ ಆಗ್ತಿದ್ವು.
ಇಷ್ಟಾದ ಮೇಲೆ ಕಾಳು ತೂರಿ ರಾಶಿ ಮಾಡ್ಲಿಕ್ಕೆ ಅಟ್ಟಣಿಗೆ ಕಟ್ಟೋ ಕೆಲಸ. ಆ ತುಳಿಸಿದ ಕಾಳೆಲ್ಲಾ ಒಂದ ಕಡೆ ಒಟ್ಟಿ ನಾಲ್ಕು ಗಟ್ಟಿ ಕೋಲುಗಳನ್ನು ಆಸರೆಯಾಗಿ ಕಟ್ಟಿ ಅದರ ಮೇಲೆ ಪ್ಲಾಟ್ ಫಾರಂ ಥರಾ ಮಾಡಾವ್ರು. ಅದರ ಮೇಲೆ ನಿಂತು ಆ ಜೋಳದ ಕಾಳುಗಳನ್ನು ಬುಟ್ಟಿಗೆ ಹಾಕೊಂಡು ಮೂಡಗಾಳಿಗೆ ತೂರಿದಾಗ ಕಸಾ ಕಡ್ಡಿ,ತೊಪ್ಪಲು, ರವದಿ ಎಲ್ಲಾ ಹಾರಿ ಹೋಗಿ ಸ್ವಚ್ಛ ಕಾಳುಗಳ ರಾಶಿ ಕೆಳಗೆ ಕಣದಲ್ಲಿ ಗುಂಪಾಗಿ ಬೀಳೋದು. ಇಲ್ಲಿಗೆ ರಾಶಿಯ ಒಂದು ಹಂತ ಮುಗಧಾಂಗ ಲೆಕ್ಕ.
ಇಷ್ಟೆಲ್ಲಾ ಕೆಲಸ ಮೂಕಲೇ ನಡೀತಿದ್ದಿಲ್ಲ. ಬೆಳತನಕಾ ರಾಯಪ್ಪನ ಹಂತಿ ಹಾಡುಗಳು, ರಾಶಿ ಹಾಡು ನಡದೇ ಇರ್ತಿತ್ತು. ಅಣ್ಣಾನೂ ರಾಶಿ ಮುಂದ ಅಲ್ಲೇ ವಸತಿ ಉಳೀತಿದ್ರು.ಹಂತಿ ಹೊಡಿಯೂ ಮುಂದ ಹಾಡು ಹೇಳುತ್ತ ಎತ್ತುಗಳ ಬೆನ್ನು ತಟ್ಟಿ ಹುಲಿಗ್ಯೋ ಹುಲಗಿ ಅಂತ ಚಪ್ಪರಿಸಿದ್ರೆ ಸಾಕು; ಎತ್ತುಗಳ ಹುರುಪು ಹೆಚ್ಚಾಗಿ ಗೋಣ ಹಾಕೋತ ಜೋರ ಜೋರಲೇ ತುಳಿಯೋವು. ಎತ್ತುಗಳ ಕೊರಳ ಘಂಟಿ ಸಪ್ಪಳ ತಾಳ, ರಾಯಪ್ಪನ ಹಾಡು , ಬೆಳದಿಂಗಳ ಹಾಸಿಗೆ; ಸ್ವರ್ಗ ಸಮಾನ!
ಇನ್ನ ರಾಶಿಯ ಎರಡನೇ ಹಂತು – ರಾಶಿ ಬಾನ.
ಕಾಳೆಲ್ಲಾ ತೂರಿ ಸ್ವಚ್ಛ ಮಾಡೂದು ಮುಗೀತಂದ್ರ ಆ ಸಾರಿಸಿದ ಸ್ವಚ್ಛ ಮಾಡಿದ ಕಣದಾಗ ನಡುವ ನೆಟ್ಟ ಮೇಟಿ ಕಂಬದ ಸುತ್ತ ಆ ಜೋಳ ಏರಿಸಿ ರಾಶಿ ಹಾಕಿ ಒಟ್ಟತಿದ್ರು. ಅದರ ಮ್ಯಾಲೆ ಅಂದರ ಆ ರಾಶಿಯೊಳಗ ಪಾಂಡವರ ಚಿತ್ರ ಬರೀತಿದ್ರು . ಕಪ್ಪು ಹಚ್ಚಿಧಾಂಗ ಕಾಣೋದದು ; ಬಹುಶಃ ರಾಶಿಗೆ ದೃಷ್ಟಿ ಆಗಬಾರದಂತ ಕಪ್ಪು ಬಣ್ಣದ ಉಪಯೋಗ ಮಾಡ್ತಿರಬಹುದು. ಆಮೇಲೆ ರಾತ್ರಿ ಆ ರಾಶಿ ಪೂಜಾ ಮಾಡಿ , ನೈವೇದ್ಯ ಮಾಡಿ ಅಲ್ಲೇ ಕಣದಾಗನs ರಾಶಿ ಸುತ್ತಲೂ ಕೂತು ಊಟ ಆ ಹೊತ್ತು. ಈ ಊಟ, ಆ ದಿನದ ಅಡಿಗೆಗೆ “ರಾಶಿ ಬಾನ ” ಅಂತ ಹೆಸರು. ಆ ನೈವೇದ್ಯದ ಅಡಿಗಿ ಎಲ್ಲಾ ನಮ್ಮ ರೈತ ರಾಯಪ್ಪನ ಹೆಂಡತಿನ ಮಾಡ್ಕೊಂಡು ಬರ್ತಿದ್ಲು. ಆ ಅಡಿಗಿ ರುಚಿ ಭಾಳ ವಿಶಿಷ್ಟ; ಅಡಿಗೀನೂ ವಿಶೇಷ. ಎಣ್ಣೆ ಹೋಳಿಗೆ, ಗಜ್ಜರಿ ಪಲ್ಯ, ಬದನೆಕಾಯಿ ಹೋಳಪಲ್ಯಾ, ಹೊಸ ಜೋಳದ ಹಿಟ್ಟಿನ ಅಂಬಲಿ, ಹೊಸ ಜೋಳದ ಖಿಚಡಿ,ಅನ್ನ, ಸಾರು; ನಾನಾ ನಮೂನೀ ಪದಾರ್ಥಗಳು.
ನಮ್ಮವ್ವನೂ ಒಮ್ಮೊಮ್ಮೆ ಬಂದಿರತಿದ್ಲು. ಆಕಿ ರಾಶಿ ಪೂಜಾ ಮಾಡಿ ನೈವೇದ್ಯ ಮಾಡಿದ ಮೇಲೆ ಊಟ. ಅವ್ವಾ ಬಂದಿರಲಿಲ್ಲ ಅಂದ್ರೆ ಅಣ್ಣಾನೇ ಪೂಜಾ ಮಾಡ್ತಿದ್ರು. ಹೆಚ್ಚು ಕಡಿಮಿ ಹುಣ್ಣಿಮೆ ಮುಂದನ ರಾಶಿ ಆಗ್ತಿತ್ತು. ಹುಣ್ಣಿಮೆ ಮುಂದೆ ಗಾಳಿ ಛಲೋ ಬೀಸ್ತದ; ಕಾಳು ತೂರಲಿಕ್ಕೆ ಅನುಕೂಲ ಅಂತ ನಂಬಿಕೆ. ಹಿಂಗಾಗಿ ಬೆಳದಿಂಗಳೂಟ. ಏನ ಹೇಳಲಿ, ಹೆಂಗೆ ಹೇಳಲಿ ಆ ಮಜಾ! ಊಟಾ ಅಷ್ಟಕ್ಕಷ್ಟೇ ನಮದೆಲ್ಲ. ಆದರೆ ಆ ಓಡಾಟ, ಅವರ ಹಾಡು, ನಗೆಮಾತು, ಆ ಹಿತವಾದ ಗಾಳಿ, ಮಂದ ಬೆಳದಿಂಗಳು ; ಏನೋ ಒಂದು ಬಣ್ಣಿಸಲಾಗದ ಹಿತವಾದ ವಾತಾವರಣ; ಮುದ ನೀಡುವ ಅನುಭವ! ನನಗ ನೆನಪಿದ್ಧಾಂಗ ನಾ ಏಳನೇ ಕ್ಲಾಸ್ ವರೆಗಂತೂ ಒಮ್ಮೆನೂ ಈ ರಾಶಿ, ರಾಶಿ ಬಾನದ ಸಂಭ್ರಮ ತಪ್ಪಿಸಿಕೊಂಡಿಲ್ಲ. ಆ ಮೇಲೂ ನಮ್ಮ ಅಭ್ಯಾಸ, ಪರೀಕ್ಷೆ ನೋಡಿಕೊಂಡು ಬರತಿದ್ವಿ.
ಏಕಾಂದು ಮಡಿ ಇರ್ತಿತ್ತು. ಆಕಿ ಅಲ್ಲೇ ಕೂತು ಎಲ್ಲಾ ನೋಡಾಕಿ. ಒಂಚೂರೂ , ಯಾವುದೂ ಕಡಿಮಿ ಆಗಧಾಂಗ ನೋಡ್ಕೊಂಡು ಆ ಪ್ರಕಾರ ವ್ಯವಸ್ಥಾ ಮಾಡೂ ಜವಾಬ್ದಾರಿ ನಮ್ಮ ಏಕಾಂದೇ. ತಾ ಬರೀ ನೋಡೋದಷ್ಟೇ ಆದರೂ ನಮಗೆಂದೂ ರೈತರು ಮಾಡಿದ್ದು ತಿನ್ನೂದ ಬ್ಯಾಡ; ಆ ಮಕ್ಕಳ ಜೊತೆ ಕೂತು ಊಟಾ ಮಾಡೂದ ಬ್ಯಾಡ ಅಂತ ಅಂದಾವಳಲ್ಲ ಆಕಿ. ಅಗದೀ ಥೇಟ್ ಹಂಗೇ ನಮ್ಮ ಅವ್ವಾ ಮತ್ತು ಅಣ್ಣಾನೂ.
ಯಾವ ಸಂಪ್ರದಾಯಗಳನ್ನೂ, ದೇವತಾ ಕಾರ್ಯಗಳನ್ನೂ ಬಿಡದೇ ಪದ್ಧತಶೀರ ಮಾಡ್ಕೊಂಡ ಬರೂ ಶಿಷ್ಟ ಕುಟುಂಬ ನಮ್ಮದು; ಹಂಗೇ ಆ ಜಾತಿ, ಈ ಜಾತಿ, ಮೇಲು ಕೀಳು ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ವಿಶಿಷ್ಟ ಕುಟುಂಬ ನಮ್ಮದು. ಅದು ಹಾಗೇ ಈಗಲೂ ನನ್ನಲ್ಲಿ ಬೆಳೆದು ಬಂದಿದೆ. ಎಂದೂ, ಎಲ್ಲೂ ಆ ವಿಚಾರ ತಲೆಗೇ ಹೋಗೋದಿಲ್ಲ. ನಾವು ರೈತರು, ಅವರ ಮಕ್ಕಳು ಎಲ್ಲಾ ಒಟ್ಟಿಗೆ, ಆ ಬಯಲಲ್ಲಿ ಕೂತು ಊಟಾ ಮಾಡೂದ ನೋಡಿ ಸಂತೃಪ್ತ ನಗಿ ಬೀರೋಳು ನಮ್ಮ ಏಕಾ !
ನಮ್ಮ ಹೊಲದಾಗ ಒಂದು ಗಿಡದ ಕೆಳಗೆ ಕರೆವ್ವನ ಕಲ್ಲಿತ್ತು. ರಾಶಿ ಪೂಜೆಗಿಂತ ಮೊದಲು ನಮ್ಮವ್ವನ ಕೈಲಿ ಕರೆವ್ವನ ಪೂಜೆ ಮಾಡಿಸಿ ಕರೆವ್ವಗ ಸೀರೆ ಖಣ ಉಡಿ ತುಂಬುವ ಪದ್ಧತಿ. ಆ ಸೀರೆ ಕರೀಬಣ್ಣದ್ದೇ ಇರಬೇಕು. ಆ ಮ್ಯಾಲೆ ನಮ್ಮ ಅವ್ವ ಅದನ್ನು ಉಡ್ತಿದ್ಲು. ಅದು ಪದ್ಧತಿ. ನಮ್ಮ ಏಕಾ ಆ ಸೀರೆ ತುಂಬ ಕಸೂತಿ ಬಿಡಸ್ತಿದ್ಲು. ಸೀರೆ ಒಡಲ ತುಂಬ ನಕ್ಷತ್ರಗಳು; ಸೆರಗಿನ ತುಂಬ ಆನೆ, ರಥ, ತುಳಸೀ ಕಟ್ಟಿ ಬಿಡಸ್ತಿದ್ಲು ಏಕಾ.
ಹಗಲೆಲ್ಲ ಹೊಲದ ಓಡಾಟ, ಕೆಲಸ; ರಾತ್ರಿ ಕಂದೀಲ ಬೆಳಕಿನಲ್ಲಿ ಕಸೂತಿ ಕೆಲಸ. ನವ್ವಾರೀ ಸೀರೆ.(ಒಂಬತ್ತು ಗಜದ ಸೀರೆ) ಕೆಲಸ ಸೂಕ್ಷ್ಮ ಕಸೂತಿ ಕುಸುರಿ ಕೆಲಸ.ಲಗೂ ಆಗ್ತಿದ್ದಿಲ್ಲ. ಎರಡು- ಮೂರು ತಿಂಗಳಾದ್ರೂ ಬೇಕಾಗ್ತಿತ್ತು. ಬ್ಯಾಸರ ಅಂಬೂದು ನಮ್ಮ ಏಕಾಗ ಗೊತ್ತೇ ಇದ್ದಿದ್ದಿಲ್ಲೇನೋ ಅಂತ ಅನಸ್ತದ ನನಗ. ಹಗಲು- ರಾತ್ರಿ ಭೇದವಿಲ್ಲದೆ ಕೆಲಸ. ಇದರ ಜೊತೆಗೆ ಓದುವ ಹವ್ಯಾಸವೂ ಇತ್ತು ಆಕಿಗೆ. ಸಣ್ಣ ಹಾಂಗ ದೇವರ ಹಾಡನೂ ಹೇಳ್ತಿದ್ಲು.ಧ್ವನಿ ಅಷ್ಟ ಛಂದ ಇರಲಿಲ್ಲ, ಆದ್ರ ಹಾಡೂದೇನ ಬಿಡ್ತಿದ್ದಿಲ್ಲಾ.
ಜೋಳದ ರಾಶಿ ಮುಗೀತಿದ್ಹಾಂಗ ಹೆಚ್ಚು ಕಡಿಮಿ ಒಂದು , ಒಂದೂವರೆ ತಿಂಗಳಿಗೆ ಕಬ್ಬಿನ ಗಾಣ ಶುರು ಆಗೋದು. ಕಬ್ಬು ಹದಿನಾಲ್ಕು ತಿಂಗಳ ಬೆಳೆ.ಅಂದರ ಅಷ್ಟ ಅವಧಿ ನಂತರ ಗಾಣ ಮಾಡಿದ್ರನs ಬೆಲ್ಲಕ್ಕ ಹದವಾದ ರುಚಿ ಬರೋದು. ಹಿಂಗಾಗಿ ಗಾಣ ಶುರು ಆಗೋದು ಸ್ವಲ್ಪ ಹೆಚ್ಚು ಕಡಿಮೆ ಆಗ್ತಿತ್ತು. ಗಾಣ ಶುರು ಆತಂದ್ರ ಅದೊಂದು ದೊಡ್ಡ ಹಬ್ಬಾನೇ ; ಆ ಗಾಣದ ಮನೆಗೆ ಬರಾವ್ರು – ಹೋಗಾವ್ರು ಭಾಳ ಮಂದಿ. ಕಬ್ಬಿನ ಹಾಲು ಕುಡಿದು ಮ್ಯಾಲ ಇಷ್ಟು ಬಿಸಿಬೆಲ್ಲ ತಗೊಂಡ ಹೋಗಾವ್ರು. ಅದಕೇನೂ ಆ ಹಳ್ಳಿಗರು ಯಾವ ಭಿಡೆ ಇಲ್ಲದೆ , ಯಾತರದೂ ಎಗ್ಗಿಲ್ಲದೆ ಬರೋರು, ಹೋಗೋರು. ಅದೂ ಒಂಥರಾ ಖುಷಿ ಅನಸ್ತಿತ್ತು ಆ ಗಡಿಬಿಡಿ ಗದ್ದಲ ನೋಡೋದು; ದೊಡ್ಡ ಕೆಲಸ ಇದ್ದಾವರ ಹಂಗ ಒಳಗೆ ಹೊರಗ ತಿರಗಾಡೋದು!
ಜೋಳದ ರಾಶಿ ಮುಂದೆ ಕರೆವ್ವನ ಪೂಜಾ ಮಾಡಿದ್ಹಾಂಗ ಇಲ್ಲಿ ಗಾಣ ; ನಮ್ಮ ಆಡು ಭಾಷಾದಾಗ ಘಾಣ ಶುರು ಆಗೂ ಮುಂದೆ “ಘಾಣದೇವಿ” ಪೂಜಾ ಮಾಡ್ತಿದ್ರು ಘಾಣದ ಮನಿಯೊಳಗ. ಕಬ್ಬು ಕಡೀಯೋರು ಕಬ್ಬು ಕಡಿದು ತಂದು ಹಾಕೋರು; ಕಬ್ಬು ಅರಿಯೋ ಮಶೀನ್ ಮುಂದೆ ಒಬ್ಬ ಕೂತು ಕಬ್ಬು ಅದಕೆ ಹಾಕ್ತಿದ್ದ. ಈ ಕಡೆ ಒಬ್ಬಾತ ಆ ಹಾಲು ತೆಗೆದ ಕಬ್ಬಿನ ಸಿಪ್ಪೆಯಂಥಾದ್ದನ್ನು ತೆಗೆದು ಬಿಸಿಲಿಗೆ ಹಾಕೋ ಕೆಲಸ ಮಾಡ್ತಿದ್ದ. ಆ ಮಶೀನ್ ಕೆಳಗಿದ್ದ ದೊಡ್ಡ ದೊಡ್ಡ ಬುಟ್ಟಿ ಗಳಲ್ಲಿ ಕಬ್ಬಿನ ಹಾಲು ಸಂಗ್ರಹ ಆಗ್ತಿತ್ತು. ಅದನ್ನ ಒಂದು ದೊಡ್ಡ ಗಂಗಾಳದಾಗ (ಕೊಪ್ಪರಿಗೆ) ಸುರುವಿ ಕುದಿಸಿ ಬೆಲ್ಲ ಮಾಡ್ತಿದ್ರು. ಆ ಗಂಗಾಳಕ್ಕ ಒಲಿ ಎಂಥಾದಿರತಿತ್ತು ಅದನ್ನ ಹೇಳೋದು, ಅಂದಾಜು ಮಾಡೋದು ಎರಡೂ ಕಷ್ಟ. ಆ ಒಣಗಿದ ಕಬ್ಬಿನ ಸಿಪ್ಪೆಯಂಥಾದ್ದನ್ನು ಇಲ್ಲಿ ಉರಿ ಮಾಡ್ಲಿಕ್ಕೆ ಉಪಯೋಗಿಸೋ ರೂಢಿ ಇತ್ತು, ದೊಡ್ಡ ದೊಡ್ಡ ಕಟ್ಟಿಗೆ ಬೊಡ್ಡೆಗಳ ಜೊತೆಗೆ. ಆ ಕುದಿಯೋ ಕಬ್ಬಿನ ಹಾಲು ಗಟ್ಟಿಯಾಗಿ ಪಾಕದ ಹದಕ್ಕೆ ಬಂದಾಗ ಅದನ್ನು ಒಂದೆರಡು ಹರವಿ(ಮಣ್ಣಿನ ದೊಡ್ಡ ಮಡಿಕೆ) ತೆಗಿಸಿ ಇಡಸ್ತಿದ್ಲು ಏಕಾ. ಅದಕ್ಕೆ ನಾವು ಕಾಕ್ವಿ, ಕಾಕಂಬಿ ಅಂತೀವಿ. ಅದು ದೋಸೆ, ಚಪಾತಿ, ಪೂರಿ ಜೊತೆ ಮಸ್ತ್ ರುಚಿ ಕೊಡ್ತದ. ಆ ಮ್ಯಾಲೆ ಕಬ್ಬಿನ ಹಾಲು ಇನ್ನೂ ಗಟ್ಟಿಯಾಗಿ ಕೆನೆ ಗಟ್ಟಿ ಬೆಲ್ಲದ ರೂಪಕ್ಕೆ ಬರೂಮುಂದ ಅದನ್ನು ಬಿಸಿಬೆಲ್ಲ, ಕೆನೆಬೆಲ್ಲ ಅಂತ ತಗಿಸಿ ಇಡಸೋದು ಏಕಾ ಮರೀತಿದ್ದಿಲ್ಲ. ಅದಕ್ಕೊಂಚೂರ ತುಪ್ಪಾ ಹಾಕಿ ಅಥವಾ ಹಂಗೇ ತಿಂದ್ರೆ ನೂ; ಆಹಾ ಏನ ಹೇಳಲಿ ಅಂತೀನಿ ಆ ರುಚಿ! ಯಾವ ಕ್ಯಾಡಬರೀ ಚಾಕ್ಲೆಟ್, ಕ್ಯಾಂಡಿ, ಲಾಲಿಪಾಪ್ ನೆನಪಿಗೆ ಬರೋ ಸಾಧ್ಯತೆನs ಇಲ್ಲ!

ಬೆಲ್ಲ ತಯಾರಾಗಿ ಹದಕ್ಕ ಬಂದ ಕೂಡಲೇ ಆ ಗಂಗಾಳನ್ನ ಅದರ ಸುತ್ತಲೂ ಇರುವ ಬಳೆ ಥರದ ಹ್ಯಾಂಡಲ್ ಗಳನ್ನು ಹಿಡಿದು ಅಲ್ಲೇ ಕಟ್ಟಿದ್ದ ದೊಡ್ಡ ಕಟ್ಟೆಗೆ ಬಗ್ಗಿಸಿ ಬಿಡ್ತಿದ್ರು. ಆ ಮ್ಯಾಲೆ ಅಚ್ಚಿನಲ್ಲಿ ಹಾಕಿ ಪೆಂಟೆಗಳನ್ನು ಮಾಡೋರು. ಒಂದು ಗಂಗಾಳ ಇಳಿದ ಮೇಲೆ ಸ್ವಲ್ಪ ವಿಶ್ರಾಂತಿ. ಮತ್ತೆ ಗಂಗಾಳ ಒಲೆ ಮೇಲೆ ಏರೋದೇ. ಒಲಿ ಆರಸೋ ಹಂಗಿರೋದಿಲ್ಲ.
ಈ ಘಾಣ ಶುರು ಆತಂದ್ರ ಏಕಾ ಕೊಡಗಟ್ಲೆ ಕಬ್ಬಿನ ಹಾಲು ಹುಕ್ಕೇರಿ ಮನಿಗೆ ಕೊಟ್ಟು ಕಳಸಾಕಿ. ಅದಕ್ಕೆ ಹಸಿ ಶುಂಠಿ, ನಿಂಬೆಹಣ್ಣಿನ ರಸ ಹಾಕಿ ತಯಾರ ಮಾಡೋ ಹದ ನಮ್ಮ ಏಕಾಗ ಭಾಳ ಮಸ್ತ್ ಜಮಾಸ್ತಿತ್ತು. ಹುಕ್ಕೇರಿ ಮನಿಗೆ ಬಂದ ಆ ಕಬ್ಬಿನ ಹಾಲನ್ನು ಎಲ್ಲರ ಮನಿಗೆ ಹಂಚೋ ಕೆಲಸ ನಮ್ಮದು. ನಮ್ಮ ಅವ್ವ ಅದನ್ನು ಒಂದೊಂದು ಗುಂಡಿ, ಕೊಳಗ, ಪಾತೇಲಿ, ತಂಬಿಗೆ ತುಂಬಿ ಕೊಟ್ಟು ಎಲ್ಲಾರ ಮನಿಗೆ ಕಳಸಾಕಿ. ಅಂದ್ರ ಹತ್ತಿರದ, ನೆರೆಯವರ ಮನೆಗಳಿಗೆ. ಮನ್ಯಾಗ ನಮಗೆಲ್ಲ ಅದರ ಜೋಡಿ ನಮ್ಮ ಏಕಾ ಕಲಿಸಿದ ರೆಸಿಪಿ ಕೊಲ್ಲಾಪುರದ ಆಲೀಪಾಕ ಅವಲಕ್ಕಿ ಮಾಡಿ ಕೊಡ್ತಿದ್ಲು ನಮ್ಮವ್ವ.
ಈ ಗಾಣದ ಸಂಭ್ರಮದ ಕೊನೇ ಹಂತು ಕರದಂಟಿನೊಂದಿಗೆ ಮುಗೀತಿತ್ತು. ಕೊನೇ ಗಂಗಾಳ ಇಳಿದು ಆ ಬೆಲ್ಲ ಕಟ್ಟೆಗೆ ಸುರುವಿದ ಮ್ಯಾಲೆ ನಮ್ಮ ಏಕಾ ತಾ ತಯಾರ ಮಾಡಿ ಇಟ್ಕೊಂಡ ಹುರಿದ ಶೇಂಗಾ, ಪುಠಾಣಿ
( ಹುರಿಗಡ್ಲೆ), ಒಣಕೊಬ್ಬರಿ, ಗಸಗಸೆ ಎಲ್ಲಾ ರೈತರ ಕೈಯಲ್ಲಿ ಕೊಟ್ಟು ಆ ಗಂಗಾಳಕ್ಕೆ ಹಾಕಿಸಿ, ಕೈಯಾಡಿಸಿ ತೆಗೆಸಿ, ಅದನ್ನು ತಟ್ಟೆಗೆ ಒತ್ತಿ ದಪ್ಪ ದಪ್ಪ ಬರ್ಫಿ ಯಾಕಾರದ ಕರದಂಟು ಮಾಡ್ತಿದ್ರು.
ಆ ಸಂಭ್ರಮದ ನೆನಪಿನ್ಯಾಗ ಮೈಮರೆತು ಕೂತ ಬಿಡ್ತೀನಿ ಒಮ್ಮೊಮ್ಮೆ ಆ ಸಂಭ್ರಮಗಳ ಕೇಂದ್ರ ಬಿಂದು ಆದ ಏಕಾನ ನೆನಪಿನ್ಯಾಗ ಮುಳುಗಿ! ಆ ಮಾಟ ಹೆಂಗಸು ಬೆಟ್ಟದಷ್ಟ ಎತ್ತರಕ್ಕೇರಿ ನಿಂತಿದ್ರೂ ಆಕಿ ಕಾಲು ನೆಲದ ಮೇಲೆ ಗಟ್ಟಿ ಊರಿ ನಿಂತಿದ್ವು. ಆ ಕಾಲು ಒಂದೊಂದು ಹೆಜ್ಜೀನೂ ಎಣಿಸಿ ಎಣಿಸಿ ಲೆಕ್ಕಾ ಹಾಕಿ ಇಡೋವು. ಯಾವ ತಿರುವಿನ್ಯಾಗ ಹೊಳ್ಳ ಬೇಕಾದ್ರೂ ಅದರ ಉದ್ದಗಲ, ತೆಗ್ಗು- ದಿನ್ನಿ, ಕಲ್ಲು- ಮುಳ್ಳು ಎಲ್ಲಾದರ ಅಂದಾಜು ಇಲ್ಲೇ ನಿಂತು ಮಾಡೋ ಅಷ್ಟು ಚಾಣಾಕ್ಷಳು ನಮ್ಮ ಏಕಾ. ಜೀವನ, ಆ ಪರಿಸ್ಥಿತಿ ಆಕೀನ್ನ ಅಷ್ಟ ತಯಾರ ಮಾಡಿ ಬಿಟ್ಟಿತ್ತು. ಅಷ್ಟೇ ಅಂತ: ಕರುಣಿ ಆಕಿ. ಆ ರೈತರು, ಅವರ ಕುಟುಂಬ ಆಕೀಗೆ ಮಕ್ಕಳ ಥರಾನೇ. ಅವೇ ಗುಣಗಳು ಹಂಗೇ ಹೂಬೇಹೂಬ ನಮ್ಮ ಅಣ್ಣಾನಲ್ಲಿ ಬಂದಿದ್ವು. ಅದು ಪಿತ್ರಾರ್ಜಿತ ಆಸ್ತಿಯಾಗಿ ನಮ್ಮೆಲ್ಲರಿಗೂ ಆ ತಣ್ಣೆಳಲ ಹಾದಿಯಲ್ಲಿ ಸಾಗಿ ಬಂದ ಬಳುವಳಿ – ಅತ್ಯಮೂಲ್ಯ ಬಳುವಳಿ.
|ಇನ್ನು ಮುಂದಿನ ವಾರಕ್ಕೆ |
” ಏಕಾ” ಮಾದರಿಯ ವ್ಯಕ್ತಿ. ಹೊಲ,ಮನೆಯ ಕೆಲಸ ಗಳಲ್ಲದೇ ಕಸೂತಿ ಮಾಡುವದರಲ್ಲಿಯೂ ಪ್ರವೀಣರು. ಅವರ ಜೀವನದಲ್ಲಿ ಬೇಸರ ಎಂಬ ಶಬ್ದ ಕ್ಕೆ ಸ್ಥಾನವಿರಲಿಲ್ಲ ಎಂಬಂತಿದೆ ಅವರ ದಿನಚರಿ. ಸರೋಜಾ, ಹೊಲದ ಕೆಲಸ ನೋಡಿ ಎಷ್ಟೋದಿನಗಳು ಕಳೆದಿವೆಯಾದರೂ, ವಿವರಣೆ ಹೊಲದಲ್ಲಿ ನಿಂತು ಈಗ ನಡೆಯುತ್ತಿರುವ ಕೆಲಸವನ್ನು ವಿವರಿಸುವಂತಿದೆ. ನಿಮ್ಮ ಸುಂದರ ಬರವಣಿಗೆಗೆ ಅಭಿನಂದನೆಗಳು
ತುಂಬ ಧನ್ಯವಾದಗಳು ಶೀಲಾ ನೀವು ಓದಿದ್ದಕ್ಕೆ, ಬರೆದಿದ್ದಕ್ಕೆ. ಹೌದು ಶೀಲಾ ಅದೆಲ್ಲ ಇಂದು ಈ ಗಳಿಗೆಯಲ್ಲೇ ನನ್ನ ಕಣ್ಣೆದುರೇ ನಡೆದ ಹಾಗೆ ಅಚ್ಚೊತ್ತಿ ಬಿಟ್ಟಿದೆ. ಅವುಗಳ ಹೊರ ಹರಿವಿಗೆ ಈ ಅವಕಾಶ ನೀಡಿದ ಅವಧಿಗೆ ಧನ್ಯವಾದಗಳು.
“ಏಕಾ” ಅವರದು ಮಾದರಿಯ ವ್ಯಕ್ತಿತ್ವ. ಹೊಲ, ಮನೆಯ ಕೆಲಸಗಳಲ್ಲದೇ ಕಸೂತಿಯಲ್ಲೂ ಪ್ರವೀಣರು. ಅವರ ಜೀವನದಲ್ಲಿ ಬೇಸರ ಶಬ್ದಕ್ಕೆ ಸ್ಥಾನವಿರಲಿಲ್ಲ ಎಂಬಂತಿದೆ ಅವರ ದಿನಚರಿ. ಹೊಲದ ಕೆಲಸ ನೋಡಿ ಎಷ್ಟೋದಿನ ಕಳೆದರೂ ಅವುಗಳ ವಿವರಣೆ ಈಗ ನೋಡುತ್ತ ವಿವರಿಸುವಂತಿದೆ. ನಿಮ್ಮ ಸುಂದರ ಬರವಣಿಗೆಗೆ ಅಭಿನಂದನೆಗಳು
ಭಾರತ ಮುಖ್ಯವಾಗಿ ಹಳ್ಳಿಗಳ ದೇಶ. ಅನತಿ ಕಾಲದ ಹಿಂದೆಯಾದರೂ ಇತ್ತು. ಆ ಹಳ್ಳಿಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ‘ಎಕಾ’ ಇದ್ದರೂ ಸಾವಿರಾರು ಅಂಥ ಅಪರೂಪದ ವ್ಯಕ್ತಿಗಳು. ಅದನ್ನು ಈ ತರದಲ್ಲಿ ದಾಖಲಿಸುವದು ಬೇಕಿತ್ತು. ಓದಿ ಸವಿದವರೇ ಧನ್ಯ ಲೇಖಕಿಗೂ. ಅವಧಿಗೂ ಧನ್ಯವಾದಗಳು.
ಶ್ರೀವತ್ಸ ದೇಸಾಯಿ.
ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ನಿಜಕ್ಕೂ ಅಪರೂಪದ ವ್ಯಕ್ತಿತ್ವ ನಮ್ಮ ಏಕಾಂದು. ಆ ಕಾಲಘಟ್ಟದಲ್ಲಿ ಆಕೀ ಸಾಹಸ ಅಪ್ರತಿಮ ಅನಸೋ ಅಂಥದು.ನಿಜ ಇಂಥ ನೊಂದ ಹೃದಯಗಳು ಅದೆಷ್ಟು ಇದ್ದವೋ ಏನೋ!
ಹಳ್ಳಿಯ ನೆಲದ ಸೇಂಗಾದ ಸುಗ್ಗಿ,ಜೋಳದರಾಶಿ, ಕಬ್ಬಿನ ಗಾಣ ಮೊದಲಾದ
ತಾಜಾ ವಿವರಗಳನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಬರೆದ ಲೇಖಕಿ
ಶ್ರೀಮತಿ ಸರೋಜಿನಿ ಪಡಸಲಗಿ ಮೇಡಂ ಅವರಿಗೆ ಅನಂತ ಧನ್ಯವಾದಗಳು.
‘ಏಕಾ ಅಕ್ಕಾಗೋಳ’ ಅವರಂತಹ ಸದೃಢ ಮನಸ್ಸಿನ, ಉತ್ಸಾಹಿ ಹೆಣ್ಣುಮಗಳನ್ನು
ಕನ್ನಡ ಓದುಗರಿಗೆ ಪರಿಚಯಿಸಿದ್ದಕ್ಕೆ ಧನ್ಯೋಸ್ಮಿ.
ರಮೇಶ ಪಟ್ಟಣ ಕಲಬುರ್ಗಿ
ತುಂಬ ಧನ್ಯವಾದಗಳು ರಮೇಶ ಸರ್. ನಿಜ ಏಕಾನ ಪ್ರತಿ ಹೆಜ್ಜೆ ನನ್ನೆದೆಯಲ್ಲಿ ತನ್ನದೇ ಛಾಪು ಮೂಡಿಸಿ, ಒಮ್ಮೆ ನಗಿಸಿ, ಒಮ್ಮೆ ಕಣ್ತುಂಬಿ ಡಬಡಬಿಸಿ ಮಗದೊಮ್ಮೆ ಅಗಾಧತೆಯ ಹೊಳೆಯಲ್ಲಿ ಮುಳುಗಿಸಿ ಇಷ್ಟೆತ್ತರ ಬೆಳೆದು ನಿಂತದ್ದಂತೂ ಸತ್ಯ.
ಅದ್ಭುತ ವ್ಯಕ್ತಿ ಚಿತ್ರಣ.
ಅಪ್ಪಟ ಗ್ರಾಮೀಣ ಸೊಗಡಿನ ಬರವಣಿಗೆ
-ರವಿ ಪಾಟೀಲ.
ಚಿಟಗುಪ್ಪಿ (ಬೀದರ )
ಓದಿ ಸುಂದರ ಪ್ರತಿಕ್ರಿಯೆ ನೀಡಿರುವ ತಮಗೆ ಅನೇಕ ಧನ್ಯವಾದಗಳು ರವಿ ಪಾಟೀಲ ಸರ್. ಆ ಸೊಗಡು, ಸೊಗಸು , ನಮ್ಮ ಏಕಾನ ಆ ದೃಡ ಹೆಜ್ಜೆಗಳ ಮುನ್ನಡೆ ನನ್ನನ್ನು ಪೂರ್ಣ ಪ್ರಮಾಣದಲ್ಲಿ ಆವರಿಸಿ ಬಿಟ್ಟಿದೆ