ಸರೋಜಿನಿ ಪಡಸಲಗಿ ಅಂಕಣ- ಏಕಾ  ಅಂದ್ರ ಬೆಚ್ಚಗಿನ ರಕ್ಷಾಕವಚ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

12

“ಆಡು ಮುಟ್ಟದ ಗಿಡ  ಇಲ್ಲಾ” ಅನೂ  ಹೇಳಿಕೆ ನಮ್ಮ ಏಕಾಗ ಅಗದೀ ಬರೋಬ್ಬರಿ ಹೊಂದಿಕಿ ಆಗ್ತದ. ಇಂಥಾ  ವಿಷಯ  ಆಕೀಗೆ  ಗೊತ್ತಿಲ್ಲ ಅಂತ ಇದ್ದಿದ್ದಿಲ್ಲಾ. ಘರಗುತಿ ಔಷಧದೊಳಗಂತೂ ಪಳಗಿ ಬಿಟ್ಟಿದ್ದಳು. ಹಂಗs  ಅದರದೇ ಒಂದು ಭಾಗ ಅನಬಹುದು ಆಕಿ ಮಾಡೂ ಬಾಣಂತನ. ಆಕಿ ಹೆರಿಗಿ ಮಾಡಸ್ತಿದ್ದಿಲ್ಲ. ಆದರೆ ಒಮ್ಮೆ ಒಂದ ‌‌‌‌‌‌‌‌‌‌‌‌‌‌‌‌  ಜೀವ ಎರಡಾತಂದ್ರ ನಮ್ಮ ಏಕಾನ ಕೆಲಸ ಸುರೂನs. ಆಕೀ ಹಂಗ ಬಾಣಂತನ ಮಾಡಾವ್ರು ಮೂಡಲ್ಲಿ ಮುಳಗಲ್ಲಿ ಸಿಗೂ ಸಾಧ್ಯತಾ ಇಲ್ಲ ಅನಲಿಕ್ಕೆ ಅಡ್ಡಿಯಿಲ್ಲ. ತಾಯಿಯ ಆರ್ದೃ ಅಖಂಡ  ವಾತ್ಸಲ್ಯ,‌‌‌‌‌‌‌‌ ಮಮತಾ ಮೂರ್ತಿ ನಮ್ಮ ಏಕಾ. ಅಸರಂತ ಇನ್ನೊಬ್ರ ಸಲುವಾಗಿ ಬಡದಾಡೋ ಜೀವ ಅದು. ನಿರಪೇಕ್ಷ, ನಿಸ್ವಾರ್ಥ ಅಂತ:ಕರಣದಲೇ, ಅಗದೀ  ಸಾಲಸತನದಲೇ ಬಾಣಂತಿ, ಕೂಸಿನ ಆರೈಕಿ ಉಪಚಾರ ಮಾಡಾಕಿ. ಹೆರಿಗೆ ಅಂದ್ರ ಹೆಣ್ಣಿಗೆ ಪುನರ್ಜನ್ಮ ಅಂತಿದ್ಲು ಏಕಾ. 

ಏಕಾ ಇನ್ನೊಂದು  ವಿಷಯ  ಹೇಳ್ತಿದ್ಲು. “ಒಂದು  ಜೀವಾನ ಭೂಮಿಗೆ  ತರೂದಂದ್ರ  ಅದೇನ  ಸಾಮಾನ್ಯ ಕೆಲಸ ಅಲ್ಲಾ ಬಾಳಾ. ಅವು ಅಗದೀ  ಕಡೀಕ  ಕೂಸು ಕರಳಹುರಿ  ಸಮೇತನ ನಿನ್ನ ಬಿಡಲಾರದ ಬಿಟ್ಟು ಈ ಭೂಮಿ ಮ್ಯಾಲೆ ಬರೂ ಮುಂದಿನ ಮೂರು ಬ್ಯಾನಿಯೊಳಗ  ದೇವರು ನಿಮ್ಮ ಭಾನ ತಗದು  ಮೈಮರಸಿಬಿಟ್ಟಿರತಾನ. ನೀವು ನೀವಾಗಿರಾಂಗಿಲ್ಲ ಆಗ. ಅದಕಂತ ಆ ಇನ್ನೊಂದು ಜೀವಾನ ಭೂಮಿಗೆ ತರಲಿಕ್ಕಾಗತದ  ನಿಮಗ” ಅಂತಿದ್ಲು. ಇದ್ದೀತು  ಅನಸ್ತದ  ಒಮ್ಮೊಮ್ಮೆ ನಂಗೂ. “ನಿನ್ನ ಜೀವಾ  ಒತ್ತಿ ಇಟ್ಟು ಆ ಭಗವಂತಗ ಸಾಥ ಕೊಟ್ಟ ದೊಡ್ಡ ಜೀವ ನೀನು. ಅದಕವಾ ಹಡದವ್ವ ಅಂದ್ರ ದೇವರು ಅನೂದು” ಅನಾಕಿ ನಮ್ಮ ಏಕಾ. (ನೀನು ಅಂದ್ರ ಪ್ರತಿ ಹೆಣ್ಣಿನ ಪ್ರತೀಕ) ಅದಕs ಆಕೀಗೆ  ಬಾಣಂತಿಗೆ ಎಷ್ಟ ಉಪಚಾರ, ಆರೈಕಿ  ಮಾಡಿದ್ರೂ ಕಡಮೀನ s ಅನಸೂದು.

ನಾ ಹಿಂದೆ  ಹೇಳಿಧಾಂಗ ನಮ್ಮ ಏಕಾ ಭಾಳ ಬಾಣಂತನಾ  ಮಾಡ್ಯಾಳ. ತನ್ನ ಸೊಸೀವು ಅಂದ್ರ ನಮ್ಮ ಅವ್ವನ್ನು  ಅಂತೂ  ಸರೀನೇ; ಅದ ಅಲ್ಲದ  ತನ್ನ ತಂಗಿ, ತಂಗಿ  ಮಕ್ಕಳದು, ತನ್ನ ಸೊಸಿ  ತಂಗೀದು ಅಂದ್ರ ನನ್ನ  ಸಣ್ಣ ಮಾವಶಿದು ಆಮ್ಯಾಲೆ  ನಂದು ಮೂರು ಮಾಡಿ  ವಯಸ್ಸಾಗಿದ್ದರೂ ಆ ಕುಗ್ಗದ ಚೇತನ ನನ್ನ ತಂಗೀದೂ  ಬಾಣಂತನ  ಮಾಡ್ಯಾಳ. ಇಷ್ಟ ಪದ್ಧತಶೀರ,  ವ್ಯವಸ್ಥಶೀರ  ಆರೈಕಿ, ಕಾಳಜಿ  ಮಾಡಾಕಿ  ಕೂಸು – ಬಾಣಂತಿದು  ಹೇಳೂ ಸೋಯಿ ಇಲ್ಲದಷ್ಟ. ಕೂಸಿನ  ಕಾಳಜಿ  ಸುದ್ಧಾ  ಬಿಟ್ಟು ಬಾಣಂತಿ ತಾಯಿ ಅಗದೀ ನಿರ್ಧಾಸ್ತ  ಇರಬೇಕು  ಹಂಗಿತ್ತ  ನಮ್ಮ ಏಕಾನ ಕಾಳಜಿ ತಗೋಳು  ಧರ್ತಿ.

ಹೆರಿಗೆ  ಆದ  ಮ್ಯಾಲೆ ಹತ್ತ  ದಿನದಾಗ ಕೊಡೂ ಔಷಧಗಳು, ಮಾಡೂ  ಶಾಸ್ತ್ರ ಸಂಪ್ರದಾಯಗಳೆ ಬ್ಯಾರೆ. ಹೆರಿಗೆ ಆದ  ಮರುದಿನದಿಂದ  ಬಿಸಿ  ಅನ್ನ, ತುಪ್ಪ, ಕರಕಿನ ಪುಡಿ ಕೊಡೂದು, ಸಂಗಜೀರಿಗಿ ಪುಡಿ, ತುಪ್ಪ ಕಲಸಿ ವೀಳ್ಯದೆಲೆಯೊಳಗ ಹಾಕಿ ಮಡಚಿ ಕೊಡ್ತಿದ್ಲು. “ಇದನ್ನ ಮೂರ ದಿನಾ ತಿನ್ನು. ಅಗದೀ ತರತರೀತ ಆಗ್ತಿ” ಅಂತ ಹೇಳ್ತಿದ್ಲು ಏಕಾ. ಹೀಂಗ ಸುರು ಆಗ್ತಿತ್ತು.

ಹತ್ತು ದಿನ  ಆದ ಮ್ಯಾಲೆ ಬಾಣಂತಿ ಖಾರ, ಹಸಿ ಅಂಟಿನ ಉಂಡಿ, ಬಿಸಿ ಅಂಟಿನ ಉಂಡಿ, ಆಳವಿ ಉಂಡಿ, ಆಳವಿ ವಡಿ ( ಹಸಿಕೊಬ್ರಿ,‌‌ ಬೆಲ್ಲ ಹಾಕಿ ಮಾಡ್ತಿದ್ಲು) ಆಳವಿ ಪಾಯಸಾ ಅಂತ ನೂರಾರು ಔಷಧಗಳು, ಪಥ್ಯಗಳು! 

“ಇವೆಲ್ಲಾ ಯಾಕ  ಏಕಾ” ಅಂತ ನಾ ಕೇಳಿದ್ರ “ಇಲ್ನೋಡ  ಅಕ್ಕವ್ವಾ  ಕೂಸಿನ್ನ ಹೊತ್ತು ಹಡದು ಹೊಟ್ಟಿ ಅಳ್ಳ  ಆಗಿರತದ. ಹೊಟ್ಟಿ ಗಟ್ಟಿ ಆಗಬೇಕು; ಸೊಂಟದಾಗ  ಬಲಾ ಬರಬೇಕು; ನೋವು ಕಡಿಮಿ ಆಗಬೇಕು. ಅದಕ ಇವೆಲ್ಲಾ  ಔಷಧ  ಬೇಕು. ಇವು ಬಾಣಂತಿ  ಹೊಟ್ಟಿಗೂ ಹಿತಾ; ಮೈಗೆ  ಶಕ್ತಿ ತುಂಬೋ  ಪೌಷ್ಟಿಕ ಜೀನಸು, ಔಷಧ. ಇಂಗ್ಲಿಷ್ ಔಷಧಕಿಂತಾ ಒಂದು ಕೈ  ಮ್ಯಾಲೆ ಇವು  ಈ  ಬಾಬ್ತಿಯೊಳಗ” ಅಂತ ಹೇಳ್ತಿದ್ಲು. ಇನ್ನೊಂದು ಖಾಸ ಔಷಧ  ಆಕೀದು  ಗಸಗಸಿ ಪಾಯಸಾ. ಮುಂಜಾನೆ  ಸ್ನಾನ  ಆದ ಕೂಡಲೇ ಒಂದು ವಾಟಗಾ ಕೊಡ್ತಿದ್ಲು. ಗಸಗಸೆ ಪಾಯಸ ತಾಯಿ ಎದೆ ಹಾಲು  ಹೆಚ್ಚು  ಮಾಡ್ತದ ಅಂತ  ಹೇಳ್ತಿದ್ಲು. ಇದರ ಜೋಡಿ ಪಚನ ಸರಿ ಆಗಲಿ ಅಂಬೂದಕ್ಕ ಕೇರಡಿಕಿ, ಅಜವಾನಕ ಸೈಂದಲವಣ ನಿಂಬಿರಸ ಹಾಕಿ ಕಲಸಿ ನೆರಳಾಗ ಒಣಗಿಸಿ ಕೊಡ್ತಿದ್ಲು.

ಈಗೆಲ್ಲಾ ಡಾಕ್ಟರ್ ಔಷಧ, ಟಾನಿಕ್ಕು ಇರ್ತಾವ. ಖರೆ ಈ ಮನಿಔಷಧಗಳೂ ಬೇಕು ಅಂತೀನಿ ನಾ. ನನ್ನ ಬಾಣಂತನದ ‌‌‌ ಹೊತ್ತಿನ್ಯಾಗ  ನಾ ಈ ಪಥ್ಯಾ, ಔಷಧ ತಗೋತಿದ್ದದ್ದಂತೂ  ‌‌‌‌‌ಸರೀನೇ , ನನ್ನ ಮಗಳ ಬಾಣಂತನ ನಮ್ಮ ಏಕಾನ  ಖಾಲೋಖಾಲ ನಾ ಅಗದೀ  ಹಂಗೇ  ಪಾಂಕ್ತಾಗಿ  ಮಾಡೀನಿ, ನನ್ನ ಮಗಳು ಬಾಣಂತಿ ಇದ್ದಾಗ.

ನಾ ಮೊದಲ ಹೇಳಿಧಾಂಗ ನನ್ನೂ  ಮೂರೂ premature babies. ಅವನ್ನ ಹೆಂಗ  ಸಂಭಾಳಸ್ತಿದ್ಲು, ಆ ಗೇಣ ಕೂಸಿನ್ನ  ಎರೀಯೂದು,  ಎತ್ತೂದು- ಇಳಸೂದು! ಪ್ರತಿ ಒಂದರೊಳಗೂ  ಅಸೀಮ  ಹುಷಾರಕಿ,  ನಾಜೂಕತನಾ  ಏಕಾಂದು. ಅವಕ  ಪುಟ್ಟ ಪುಟ್ಟ ಅಂಗಿ, ಝಬಲಾ, ಕುಲಾವಿ, ಟೊಪ್ಪಿಗಿ  ಹೊಲೀತಿದ್ಲು. ಅಷ್ಟ ಸಣ್ಣ ಸೈಜು  ಆಗ ಸಿಕ್ಕತಿದ್ದಿಲ್ಲ. ಹಿಂಗಾಗಿ  ತಾನs  ಆ ಪುಟ್ಟ  ಕೂಸಿಗೆ  ಹಾಳತ  ಆಗೋ ಹಂಗ ಹೊಲಿತಿದ್ಲು. ಆಕೀ  ಸೂಕ್ಷ್ಮತನಕ್ಕ ಹೋಲಿಕೀನ  ಇಲ್ಲ. ಅದಕs  ನಮಗ  ನಮ್ಮ ಏಕಾ  ಒಬ್ಬಾಕಿ  ಇದ್ಲಂದ್ರ ಯಾವ  ಅಂಜಿಕಿ, ಕಾಳಜಿ  ನಮ್ಮ ಸಮೀಪ  ಸುದ್ಧಾ  ಬರತಿದ್ದಿಲ್ಲಾ. ಏಕಾ  ಅಂದ್ರ ಬೆಚ್ಚಗಿನ ರಕ್ಷಾಕವಚ  ನಮಗ.

ಮೂರೂಸಂಜಿ  ಆತಂದ್ರ ದೇವರ ಮುಂದೆ ದೀಪಾ ಹಚ್ಚಿ, ರಾಮರಕ್ಷಾ  ಅನಕೋತ  ಕೂಸಿಗೆ  ಗುಟಿ  ತೇಯ್ದು  ಹಾಕ್ತಿದ್ಲು. ಅದೊಂದು  ರಾಮಬಾಣ  ಔಷಧ  ಕೂಸುಗಳು ಮೈ  ಹಿಡಿಲಿಕ್ಕೆ. ಗುಟಿಯೊಳಗ   ಉಪಯೋಗ  ಮಾಡೂ  ಸಾಮಾನೆಲ್ಲಾ  ಮನಿಯೊಳಗಿನ್ನೂನೇ. ಒಳ್ಳೇ  ಪುಷ್ಟಿಕರ,  ಹಿತಕರ  ಔಷಧೀಯ  ಗುಣಗಳಿದ್ದದ್ದೇ. ಅವು – ಖಾರೀಕು (ಉತ್ತತ್ತಿ), ಬದಾಮು, ಕಲ್ಲಸಕ್ರಿ, ಜ್ಯೇಷ್ಠ ಮಧು, ಬಜೆಬೇರು, ಜಾಜೀಕಾಯಿ, ಹಿಪ್ಪಲಿ, ಮುರುಡಸಿಂಗಿ,(ಮುರಗಿಕಾಯಿ) ಅಳ್ಳೀಕಾಯಿ, ತಾರೀಕಾಯಿ, ಹುಣಿಸೆ ಬೀಜ, ಚಿಕಣಿ ಅಡಿಕೆ ಬೆಟ್ಟು, ಅರಿಷಿಣ ಕೊಂಬು. ಇವನ್ನೆಲ್ಲ  ಒಂದೊಂದೇ ತಗೊಂಡು  ಪುಟ್ಟ ಸಾಣಿಕಲ್ಲ ಮೇಲೆ  ಹಾಲಿನಲ್ಲಿ ಸ್ವಲ್ಪ ಸ್ವಲ್ಪ ತೇಯ್ದು  ನುಣ್ಣಗೆ ಗಂಧಧಾಂಗ  ಪೇಸ್ಟ್ ಮಾಡಿ  ಒಂದೆರಡ  ಚಮಚಾ  ಹಾಲಿನೊಳಗ (ತಾಯಿ ಎದೆ ಹಾಲಾದ್ರ ಭಾಳ ಛಲೋ) ಕದಡಿ  ಚೂರ  ಬಿಸಿ ಮಾಡಿ  ಕುಡಸ್ತಿದ್ಲು. ಖಾರೀಕು, ಬಾದಾಮು  ಜಾಸ್ತಿ ತೇಯ್ತಿದ್ಲು  ಅದಕ  ಕೂಸು  ಲಗೂ  ಮೈಹಿಡೀತದಂತ. ಕಲಸಕ್ರಿ ಸಿಹಿ; ಹಿಂಗಾಗಿ  ಕೂಸು  ಬಾಯಿ  ಚಪ್ಪರಿಸಿಗೋತ  ಕುಡೀಯೋದು. 

ಮಗು  ಹದಿನೈದು ದಿನಗಳದ್ದಾದ  ಮ್ಯಾಲೆ  ಗುಟಿ ಹಾಕೂದನ  ಸುರು ಮಾಡ್ತಿದ್ಲು  ಏಕಾ. ಮೂರ  ತಿಂಗಳನೂದ್ರಾಗ  ಕೂಸು  ಪುಟಿಚೆಂಡಿನಂಗ  ಆಗಿ  ತೊಟ್ಲ  ತುಂಬ  ಮಲಗ್ತಿತ್ತು  ದೃಷ್ಟಿ  ಆಗೂ ಹಂಗ.ಇವಿಷ್ಟೂ  ಗುಟಿ  ಸಾಮಾನು  ಬರೀ ಔಷಧ ಅಲ್ಲದ  ನಂಬರ್ ಒನ್  ಟಾನಿಕ್ಕುಗಳು. ಅವನ್ನೆಲ್ಲಾ  ಸವಿವರವಾಗಿ  ಬರಕೋತ  ಕೂತ್ರ ಇನ್ನೊಂದು  ಪುಸ್ತಕನ  ಆದೀತು. ಅಷ್ಟ  ಮಾಹಿತಿ  ಅವ  ಪ್ರತಿಯೊಂದರಾಗೂ ; ಬಾಣಂತಿಗೆ ಕೊಡೋ ತಿನಿಸು, ಔಷಧಿಗಳೊಳಗ, ಕೂಸಿನ  ಗುಟಿ  ಸಾಮಾನಗಳೊಳಗ,  ಅವನ್ನೆಲ್ಲಾ  ತಯಾರಸೂ  ವಿಶಿಷ್ಟ ಪದ್ಧತಿಯೊಳಗ,  ಅವನ್ನ ಕೊಡೋ  ರೀತಿಯಲ್ಲಿ ; ಹೀಂಗ  ಕೊನೆಯಿಲ್ಲದ್ದು  ಅದು.

ಕೂಸಿಗೆ  ಗುಟಿ ಹಾಕಿ , ರಕ್ಷಿ  ಇಟ್ಟು ಒಂಚೂರು ಕಾಸಿ ಮೈಕೈ  ಬೆಚ್ಚಗ  ಮಾಡಿ, ಮೆತ್ತಗಿನ  ದುಬಟಿ  ಸುತ್ತಿ  ಹೊಚ್ಚಿ  ಮಲಗಿಸಿದ್ರ  ಕಂಯ್ಯ ಕುಂಯ್ಯ ಅನದ ಆರಾಮ  ಮಲಗ್ತಿತ್ತು  ಕಂದ.

ನಮ್ಮ ಏಕಾಂದು  ಎಲ್ಲಾ ಕಡೆ  ಭಾಳ  ಲಕ್ಷ್ಯ. ಯಾವ  ವಿಷಯನೂ  ಅಕಿಗೆ  ನಿರ್ಲಕ್ಷ್ಯ ಮಾಡೂ ಅಂಥಾದ  ಅಲ್ಲೇ ಅಲ್ಲ. ಎರೀಯೂ ಮುಂದೆ    “ಅಕ್ಕವ್ವಾ ಯಾಕೋ  ಕೂದಲ ಥೆಳ್ಳಗ ಅನಸ್ತಾವಲ .” ಅಂದು ಕಾಡಿಗ್ಗರಲದು(ಕಾಡಿಗ್ಗರ, ಭೃಂಗರಾಜ) ಎಣ್ಣಿ ಮಾಡ್ತಿದ್ಲು. ಕಾಡಿಗ್ಗರಲ ತೊಪ್ಪಲ ರಾಯಪ್ಪನ  ಕಡಿಂದ  ಹೊಲದಾಗಿಂದ ತರಿಸಿ ಅದನ್ನ ಜಜ್ಜಿ ರಸಾ ತಗದು ಅದರ ಸರೀಕ ಸರಿ ಕೊಬ್ರಿ ಎಣ್ಣಿ ಕೂಡಿಸಿ ಸಣ್ಣ ಉರೀ ಮ್ಯಾಲೆ ಕುದಸತಿದ್ಲು. ನೀರ ಇಂಗಿ ಹೋಗಿ  ಕಾಡಿಗ್ಗರದ ಸಾರ ಇಳದು ಎಣ್ಣಿ ತಯಾರಾಗ್ತಿತ್ತು. ಹೀಂಗ ನೆಲ್ಲಿಕಾಯಿ ರಸಾ ತಗದು ಅದರ ಸರೀಕ ಸರಿ ಕೊಬ್ರಿ ಎಣ್ಣಿ ಕೂಡಿಸಿ ಸಣ್ಣ ಉರೀ ಮ್ಯಾಲೆ ಕುದಿಸಿ ನೆಲ್ಲಿಕಾಯಿ ಎಣ್ಣಿ ತಯಾರ ಮಾಡ್ತಿದ್ಲು. ಇವೆರಡೂ  ಕೂದಲ ವಾಢಾಸಲಿಕ್ಕೆ ಪಕ್ಕಾ ಖಾತ್ರಿ ರಿಸಲ್ಟ್  ಕೊಡೂ ಎಣ್ಣಿಗಳು.

ಇದಿಷ್ಟು  ಕೂಸು – ಬಾಣಂತಿಯ  ಉಪಚಾರ, ಆರೈಕಿದಾತು. ಆ ಮ್ಯಾಲೆ  ಮಡಿ ಅಡಿಗಿ, ಎಲ್ಲಾರ ಊಟಾ , ತನ್ನ ಊಟಾ ಮುಗಿಸಿ  ತನ್ನ ಕರ ಕುಶಲ ಕೆಲಸದ  ಸಂತಿ  ಹರವಿಕೊಂಡ  ಕೂಡಾಕಿ ಏಕಾ. ” ಏಕಾ  ದಣದಿದಿ  ಒಂಚೂರ  ಮಲಗು”  ಅಂದ್ರ ಊಂ ಹೂಂ; ಆ  ಮಾತs  ಇಲ್ಲಾ.” ನಾ ಏನ ಓಡಾಡ್ತನೇನು; ಒಂದೇ ಕಡೆ  ಕೂತ  ಮಾಡ್ತೀನು”  ಅನ್ನಾಕಿ. ಬಣ್ಣ ಬಣ್ಣದ ಅರಿವಿ  ತುಕಡಿ  ಸೇರಿಸಿ ಹೊಲಿದು ದಂಡಿಗೆ  ಛಂಧಂಗ ಬಾರ್ಡರ್  ಹಚ್ಚಿ ಕೆಳಗಿನ ಬಾಜೂ  ಒಂದು ‌‌‌  ಹಳಿ ಸೀರಿ ಅರವಿ  ಜೋಡಿಸಿ  ಅದರ ಕೆಳಗ  ಮತ್ತೊಂದು  ಹೊಸಾ ಅರವಿ ಜೋಡಿಸಿ  ಹೊಲದು  ಚಿಂದಿ ದುಬಟಿ  ಕೂಸಿನ  ಸಲುವಾಗಿ  ಮಾಡ್ತಿದ್ಲು. ಪುಟ್ಟ ಪುಟ್ಟ ಟೊಪ್ಪಿಗೆ, ಬಾನೆಟ್, ನಾನಾ ನಮೂನೀ  ಹೊಲಿತಿದ್ಲು  ಏಕಾ. ಮಾಲಿ ಟೊಪ್ಪಿಗೆ, ಸುರಕಿ ಝಬಲಾ, ಗೊಂಡೆ ಕುಂಚಿಗಿ, ಗುಬ್ಬಿ ಹಚ್ಚಿದ ,‌‌‌‌‌ ಕುಂಚಿಗಿ, ಹೀಂಗ ಛಂದ ಛಂದ  ಅರಿವಿ  ಹೊಲಿತಿದ್ಲು.ಮುತ್ತಿನ  ಕುಂಚಗಿ  ಆಕಿದು ಸ್ಪೇಷಲ್. 

ಇವಲ್ಲದೆ  ಮಾಟ ಮಾಟ  ಸ್ವೇಟರ್,  ಕಾಲುಚೀಲ, ತಲಿಗೊಂದ  ಉಲನ್  ಕುಲಾವಿ ಅಂತೂ ಬೇಕಾದಷ್ಟ ಹೊಲಿದು  ಇಡಾಕಿ. ಏಕಾಗ  ಕ್ರೋಷಾ  ಹೆಣಿಗೆ , ನಿಟ್ಟಿಂಗ್  ಎರಡೂ  ಬರ್ತಿತ್ತು. ಕ್ರೋಷಾ ಹೆಣಿಗೆಯ  ಚಿಕ್ಕ ಚಿಕ್ಕ ಅಂಗಿ ಹೆಣಿತಿದ್ಲು. ನಮ್ಮ ಏಕಾನ ಕುಶಲತೆಗೆ  ಏನ ಹೇಳಲಿ ತಿಳೀವಲ್ಲತು.

ಇವೆಲ್ಲಕ್ಕಿಂತಲೂ  ವಿಶೇಷ  ಕಲೆಯೊಂದು  ಇತ್ತು  ಆಕೀ ಹತ್ರ. ಭಾಳ ಛಂದ ಗುಬ್ಬಿ ಚೆಟ್ಟ ಮಾಡ್ತಿದ್ಲು ನಮ್ಮ ಏಕಾ. ಅದು ಎಲ್ಲರಿಗೂ  ಬರೂದಲ್ಲ. ಎಲ್ಲೋ  ಒಬ್ಬೊಬ್ರು ಭಾಳ  ಅಪರೂಪಕ್ಕ  ಮಾಡ್ತಿದ್ರು. ಆ ಕಲಾ  ಭಾಳ ವಿಶಿಷ್ಟ. ಆ ಗುಬ್ಬಿ ಚೆಟ್ಟನ್ನ  ತೊಟ್ಲ ಮ್ಯಾಲೆ  ಕಟ್ಟಿ ಕೂಸಿನ್ನ  ತೊಟ್ಲಾಗ  ಮಲಗಿಸಿದ್ರ, ಅದರಾಗ ಅಂದ್ರ  ಗುಬ್ಬಿಚೆಟ್ಟಿನ್ಯಾಗ  ತೂಗಾಡೋ  ಗುಬ್ಬಿ, ಮುತ್ತಿನ ಚೆಂಡು, ಅದೇ  ಮುತ್ತಿನ  ಝಾಲರಿ,  ಮಣಿಯ ಗೊಂಚಲು ಎಲ್ಲಾ ಅಲ್ಲಾಡೋದನ್ನ  ನೋಡಿ  ಕೂಸು ಕೈ ಕಾಲು  ಬಡಿದು, ಕೇಕೆ ಹಾಕಿ  ಆಡೋದನ್ನ  ನೋಡೋದೇ ಒಂದು ಛಂದ. ಅದು ನೋಡ್ಲಿಕ್ಕೆ  ಎಷ್ಟು ಛಂದ  ಕಾಣ್ತದೋ  ಅಷ್ಟೇ ಕಷ್ಟ ಕ್ಲಿಷ್ಟಕರ  ಕೆಲಸ ಅದನ್ನ ಮಾಡೂದು. ಆದರ  ನಮ್ಮ ಏಕಾನ  ಕೈಯಾಗ  ಅಗದೀ  ಹಗರಕ   ಛಂದ  ರೂಪ ತಾಳಿ  ನಿಂದರತಿತ್ತ ಅದು. 

ಈಗ  ಪ್ಯಾಟಿಯೊಳಗ  ನಾನಾ ನಮೂನೀ ಆಟಿಗಿ  ಸಿಗ್ತಾವ. ಆ  ಗದ್ದಲದೊಳಗ  ಈ ಗುಬ್ಬಿ ಚೆಟ್ಟು  ಅಡಗಿ  ಹೋಗಿ  ಆ  ಕಲಾ  ಮರತು ಹೋಧಾಂಗ  ಆಗೇದ. ಆದರ  ಅಂಥಾ  ಅಪರೂಪದ  ಕುಶಲತೆ  ಮರತ ಹೋಗಬಾರದು ಅನಸ್ತದ. ಅದಕ  ನಮ್ಮ ಏಕಾ  ಗುಬ್ಬಿ ಚೆಟ್ಟು ಹೆಂಗ  ಮಾಡ್ತಿದ್ಲು  ಅದನ  ಸ್ವಲ್ಪದರಾಗ  ಹೇಳ್ತೀನಿ. –

ಗುಬ್ಬಿ ಚೆಟ್ಟು  ಮಾಡೂ ರೀತಿ  ಹೆಂಗ ವಿಶೇಷ  ಇತ್ತೋ  ಹಂಗs  ಅದರ ಪೂರ್ವ ತಯಾರಿ,  ಸಾಮಾನುಗಳು  ಅವೂ  ವಿಶೇಷನs  ಅದ. ಅದಕ್ಕ ಮೊದಲು ಒಂದು  ಚಪ್ಪಟೆಯಾದ, ಸಮತಟ್ಟಾದ  ತೆಳ್ಳಗಿನ ಕಟ್ಟಿಗೆಯ  ಚೌಕಾಕಾರದ, ಅಥವಾ ಆಯತಾಕಾರದ ತುಂಡು ಬೇಕು, ಫ್ರೇಮ ತಯಾರಾಸಲಿಕ್ಕ. ಅದಕ್ಕ ಸ್ವಲ್ಪ ಹತ್ತಿ, ಹಳೆಬಟ್ಟೆ, ಒಂದು ಮಾಂಜರಪಾಟ ಅರಿವೆ, ಅದರ ಮ್ಯಾಲೆ ಹೊಲಿಲಿಕ್ಕೆ ಛಂದನ್ನ ಬಣ್ಣದ ಸ್ಯಾಟಿನ್ ಬಟ್ಟೆ, ಹಿಂದಿನ ಬಾಜೂಕ  ಹಚ್ಚಲಿಕ್ಕೆ ಡಿಸೈನ್ ದ ಅರಿವಿ ನೂಲಿಂದೇ ಬೇಕು. ಈ ಚೆಟ್ಟು ಅಥವಾ ಫ್ರೇಮು ನೀವು ಮಾಡೋ ಗುಬ್ಬಿ ಚೆಟ್ಟಿನ ಸೈಜಿಂದೇ ಇರ್ತದ. ನಮ್ಮ ಏಕಾ ಅದನ್ನ ಸುಮಾರು ಎರಡು, ಎರಡೂವರೆ ಫೂಟ್ ಉದ್ದ, ಎರಡು ಫೂಟ್ ಅಗಲ ಮಾಡ್ತಿದ್ಲು.ಆ ಫಳಿ ಮ್ಯಾಲೆ ಹತ್ತಿ, ಹಳಿಬಟ್ಟಿ ತುಂಡು ಎಲ್ಲಾ ಹರಡಿ ಛಂದ ಗಟ್ಟಿ ಮಾಡಿ ಅದರ ಮ್ಯಾಲೆ ಒಂದು ಪದರ ಅರವಿ ಇಟ್ಟು ಹೊಲಿದು ಅದರ ಮ್ಯಾಲೆ ಮಾಂಜರ ಪಾಟ ಅರಿವಿ ಇಟ್ಟ ಹೊಲಿತಿದ್ಲು. ಅಂದರ ಬರೋಬ್ಬರಿ  ತಲೆದಿಂಬಿನ ಚೀಲದಗತೆ  ಹೊಲದು  ಅಗದೀ  ಅಮಾತ ಆ  ಫಳಿ  ಅದರಾಗ  ಕೂಡಿಸಿ ಮ್ಯಾಲೆ  ಬಣ್ಣದ ಸ್ಯಾಟಿನ್ ಬಟ್ಟೆ, ಹಿಂದೆ  ಚಿತ್ರ ಚಿತ್ರದ  ಹತ್ತಿಅರಿವಿ ಹಚ್ಚಿ  ಎರಡನ್ನೂ  ಜೋಡಿಸಿ ಹೊಲದ್ರ ಚೆಟ್ಟು  ತಯಾರು. ಇದನ್ನ  ತಯಾರ  ಮಾಡೂ  ಹದಾ  ಸಾಧಿಸ್ತಂದ್ರ  ಗುಬ್ಬಿ ಚೆಟ್ಟು  ಅಗದೀ  ಠವಠವೀತ ಛಂಧಾಂಗ  ಬರ್ತದ.  ನಮ್ಮ ಏಕಾನ  ಕೈ  ನುರಿತ ಬಿಟ್ಟಿತ್ತ  ಇದರಾಗ. ಇನ್ನ ಇದಕ ಗುಬ್ಬಿ, ಮುತ್ತಿನ ಚೆಂಡು,ಮಣಿ ಗೊಂಚಲು, ಗಾಜಿನ ಬಣ್ಣ ಬಣ್ಣದ ಕೊಳಿವಿ ಎಲ್ಲಾ ಛಂಧಾಂಗಿ ಹೆಣೀಬೇಕು.

ಏಕಾ ಸ್ಯಾಟಿನ್ ಬಟ್ಟೆ, ರೇಶ್ಮೆ ಬಟ್ಟೆ, ಮೆತ್ತಗಿನ ಕಾಟನ್ನ್ ಅರವಿವು ಸಣ್ಣ ಸಣ್ಣ ತುಂಡು ತಗೋತಿದ್ಲು  ಬಣ್ಣ ಬಣ್ಣದ ಪುಟ್ಟ ಪುಟ್ಟ ಗುಬ್ಬಿ ಮಾಡ್ಲಿಕ್ಕೆ. ಆಮ್ಯಾಲೆ ಇನ್ನೊಂದು ಮುಖ್ಯ ಸಾಮಾನಂದ್ರ ಕಲ್ಮುತ್ತು. ಇದು ಕೆಂಪು ಹಳದಿ ಮಿಶ್ರಿತ ಬಣ್ಣದ ಹೊಳೆಯುವ  ಮುತ್ತು. ಇದಲ್ಲದೆ ಕಾಜಿನ್ನು ಬ್ಯಾರೆ ಬ್ಯಾರೆ ರಂಗಿನ ಕೊಳಿವೆ, ಬೆಲ್ಲದ ಮಣಿಗಳು ಇಷ್ಟ ತಯಾರ ಇಟ್ಕೊಂಡು ಸುರು ಮಾಡ್ತಿದ್ಲು ಏಕಾ.

 ಸಣ್ಣ ಸಣ್ಣ ಅರಿವಿ  ತುಂಡುಗಳಿಂದ  ಗುಬ್ಬಿ ಆಕಾರದ ಚೀಲಧಂಗ  ಹೊಲದು ಅದರಾಗ ಹತ್ತಿ ತುಂಬಿ  ಬಂದ ಮಾಡಿ ಒಂದ ಕಡೆ ಚುಂಚಿನ ಹಂಗ ಚೂಪು ಆಕಾರ ಕೊಡ್ತಿದ್ಲು; ಇನ್ನೊಂದ ಕಡೆ ಪುಚ್ಚ. ಆ  ಪುಚ್ಚ ಏನ ಅಸನರಿ  ಅಲ್ಲ ಮತ್ತ. ಒಂದ ಕಲ್ಮುತ್ತಿಗೆ ಐದು ಅಥವಾ ಏಳು ಬೆಲ್ಲದ ಮಣಿಗಳ ಗೊಂಚಲಾ ಪೋಣಿಸಿ ಅದನ್ನ ಪುಚ್ಚದಗತೆ  ಜೋಡಿಸಿದ್ರ  ಆ  ಗುಬ್ಬಿ  ಏನ ಈಗ ಹಾರಿ  ಬರತದೋ ಏನೋ  ಹಂಗ ಅನಸ್ತಿತ್ತು.ಹೀಂಗ ಗುಬ್ಬಿ  , ಮುತ್ತಿನ ಚೆಂಡು, ಬೆಲ್ಲದ ಮಣಿಗಳ ಗೊಂಚಲಾ, ಪೋಣಸಲಿಕ್ಕೆ ಕಾಜಿನ ಕೊಳವಿ  ಎಲ್ಲಾ  ಸಜ್ಜ ಮಾಡ್ಕೊಂಡು ಗುಬ್ಬಿಚೆಟ್ಟು  ಹೆಣಿಯೂ  ಕೆಲಸಕ್ಕ ಕೈ ಹಚ್ಚತಿದ್ಲು  ಏಕಾ.

ಈ  ಹೆಣಿಯೂ  ಕೆಲಸದ  ಕೌಶಲತಾ  ನೋಡಿ  ದಂಗ  ಆಗಿಬಿಡ್ತಿದ್ದ ನಾ. ಆ  ತಯಾರಾದ ಚೆಟ್ಟಿನ  ತುಂಬ  ಕಲ್ಮುತ್ತುಗಳನ್ನ  ಕುಸುರ ಕುಸುರಾಗಿ  ಡೈಮಂಡ್ ಆಕಾರದ್ದು  ಖಾನೆ  ಮಾಡ್ಕೋತ  ಹೆಣೀತಿದ್ಲು. ಇದು ಪೂರಾ  ಮುತ್ತಿನ  ಅಂಗಳ  ತಯಾರಾತಂದ್ರ  ನಡು ನಡುವೆ ಬೆಲ್ಲದ ಮಣಿಗಳ ಗೊಂಚಲಾ ತೂಗ ಬಿಡ್ತಿದ್ಲು, ಬಣ್ಣದ ಕಾಜಿನ ಕೊಳವಿಗೆ ಪೋಣಿಸಿ; ಸ್ವಲ್ಪ ಗೊಂಚಲಾ ಫ್ರೇಮಿನ ತಳಕ್ಕs ಹೊಲದ ಬಿಡ್ತಿದ್ಲು. ಆಮ್ಯಾಲೆ  ತಯಾರ ಮಾಡಿ ಇಟ್ಕೊಂಡ ಗುಬ್ಬಿಗಳನ್ನ ಆ ಕಾಜಿನ  ಕೊಳವಿಗೆ  ಪೋಣಿಸಿ ತೂಗ ಬಿಡ್ತಿದ್ಲು. ನಾಲ್ಕು ಐದು ಗುಬ್ಬಿಗಳ  ನಡುವ ಒಂದು ಮುತ್ತಿನ ಚೆಂಡು ಹೀಂಗ ಡಿಸೈನ್ ಮಾಡಾಕಿ. ಆ ಮ್ಯಾಲೆ ದಂಡಿಗುಂಟ  ಎರಡು ಗುಬ್ಬಿ, ಒಂದು ಮುತ್ತಿನ ಚೆಂಡು ಹೀಂಗ ಹೆಣಿತಿದ್ಲು. ನಟ್ಟ ನಡಬರಕ ಒಂದು  ದೊಡ್ಡ ಮುತ್ತಿನ ಚೆಂಡು. ಹೀಂಗ ತಯಾರಾದ ಗುಬ್ಬಿಚೆಟ್ಟಿನ  ಅಂಚಿಗೆ ಒಂದ ನಾಲ್ಕಬಟ್ಟ ಅಗಲದ  ಮುತ್ತಿನ ಝಾಲರಿ ನಾಲ್ಕೂ ಕಡೆ ಛಂಧಂಗ ಹೆಣದ್ಲಂದ್ರ ಗುಬ್ಬಿ ಚೆಟ್ಟು ತಯಾರು! 

ಇನ್ನ ಫೈನಲ್ ಟಚ್ ಗುಬ್ಬಿ ಚೆಟ್ಟಿಗೆ. ಹಿಂಭಾಗದ ನಾಲ್ಕೂ ಮೂಲಿಗೆ ಹೆಣದಿಟ್ಟ ಧಾರಗಳನ್ನ ಕಟ್ಟಿ ಅವನ ಹಿಡದು  ಮ್ಯಾಲೆ ಗಂಟ ಹಾಕಿ ಕೊಕ್ಕಿಯಂಥಾದ್ದನ್ನ  ಸಿಗಸಿದ್ರ ಆತು. ತೊಟ್ಲ ಮ್ಯಾಲೆ ತೂಗಹಾಕಬಹುದು ಅಥವಾ ಆ ನಾಲ್ಕೂ ದಾರಗಳನ್ನು ತೊಟ್ಲಮ್ಯಾಲೆ ನಾಲ್ಕ ಕಡೆ ಕಟ್ಟಿಬಿಡೂದು; ಆತು.

ಹೀಂಗ ತಯಾರಾದ ಗುಬ್ಬಿಚೆಟ್ಟ ನೋಡ್ಲಿಕ್ಕೆ ಎರಡು ಕಣ್ಣ ಸಾಲ್ತಿದ್ದಿಲ್ಲ; ನಮ್ಮ ಏಕಾನ ಮಾರಿ ಮ್ಯಾಲ ಮೂಡಿದ  ಆ  ಸಂತೃಪ್ತ ನಗಿ ನೋಡ್ಲಿಕ್ಕೆ ನಾಲ್ಕ ಕಣ್ಣು ಸಾಲ್ತಿದ್ದಿಲ್ಲಾ. ಇನ್ನ ಆ ಸಿಂಗಾರಗೊಂಡ ಗುಬ್ಬಿ ಚೆಟ್ಟ ಕಟ್ಟಿದ ತೊಟ್ಲಾಗ ಮಲಗಿದ  ಕೂಸು ಕೈಕಾಲು  ಬಡಕೋತ, ಕೇಕಿ ಹಾಕೋತ, ನಿಲುಕದ, ಕೈಗೆ ಸಿಕ್ಕದ ಆ ಗುಬ್ಬಿ, ಮುತ್ತಿನ ಚೆಂಡ ಕಡೆ ಕೈ ಚಾಚಿಗೋತ ಆಡೂ ಕೂಸಿನ್ನ ನೋಡ್ಲಿಕ್ಕೆ ಆದಿಶೇಷನ ಗತೆ ಸಾವಿರ ಕಣ್ಣಿದ್ರೂ ಸಾಲದು ಅನಸೂದು. ಅಷ್ಟ  ಹುರುಪು ಕೂಸಿನ ಮಾರಿ ಮ್ಯಾಲ ; ಸಾರ್ಥಕ್ಯದ ಭಾವ ನಮ್ಮ ಏಕಾನ ಮಾರಿ ಮ್ಯಾಲ. ಅಪೂರ್ವ ದೃಶ್ಯ ಅದು; ಆ ಗಳಿಗೆ!

ಇದೊಂದೇ ಅಲ್ಲ ಇಂಥಾ ಎಷ್ಟೋ ಕಲೆಗಳ ಒಡತಿ ನಮ್ಮ ಏಕಾ. ಆಕೀ ಮಾಡೂ ಹುಳಿ, ಭಕ್ರೀನೇ ಅಷ್ಟ ಮೆಚ್ಚತಿದ್ದ ತನ್ನ ಗಂಡನ ನೆನಪು ನಲಗಸ್ತಿರಬೇಕು  ಆಕಿನ್ನ. ಆದರೆ ತನ್ನ ನೋವು ಎಂದೂ ತೋರಸಲಿಲ್ಲಾ ಆಕಿ. ವಿರಾಗಿಣಿ  ಹಂಗ ಜೀವನಾ  ಸಾಗಿಸಿದ್ದು. ಒಂದೇ ಒಂದು ದಿನಾನೂ ಗಾದಿ ಮ್ಯಾಲ ಮಲಗಲಿಲ್ಲ ನಮ್ಮ ಏಕಾ. ಎಲೀ ಮರೀಯ ಕಾಯಿ ಹಂಗ ಇದ್ದ, unsung, unheard ಪ್ರತಿಭೆಯ ಅಮೂಲ್ಯ ಜೀವ ನಮ್ಮ ಏಕಾ! 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Shrivatsa Desai

  ಪ್ರತಿವಾರವೂ ಒಂದೊಂದು ಅನಿರೀಕ್ಷಿತ ಅಪೂರ್ವ ಅನುಭಾವವಿಜ್ನ್ನು ಕೊಡುವ ಸರಣಿ ಇದು. ಇವತ್ತಿನ್ಜ್ ಅಂಕಣದಲ್ಲಿ ನನ್ನನ್ನು ಹಿಡಿದಿಟ್ಟದ್ದು ಗುಬ್ಬಿ ಚೆಟ್ಟು ಮಾಡುವದು ಹೇಗೆ ಅಂತ ಹೇಳುವ step by step guide! ಇದೆಲ್ಲಾದರೂ ನೋಡಿರಾ ಅಥವಾ ಕೇಳೀರಾ? ಕೆಲವರು. ಗುಬ್ಬಿ ಚೆಟ್ಟು ನೋಡಿರಲಾರರು. ಅದರ ಆಕರ್ಷಣೆ ವಿಚಿತ್ರ. ಮಗುವಾಗಿ ನೋಡಿದ್ದು ದೊಡ್ಡವರಾದಾಗ ನೆನಪಿನಲ್ಲುಳಿದಿರುವದು ಅಸಾಧ್ಯ. ಮನೆಯಲ್ಲಿ ಏಕಾನಂಥ ಹಳೆಯಕಾಲದವರಿದ್ದಾರೆಂದರೆ ಅಷ್ಟೇ ಅದನ್ನು ‘ಕಟ್ಟುವ ‘ ಸೌಭಾಗ್ಯ ಒದಗಿರುತ್ತದೆ. ನಾನು ಮೊದಲ ಸಲ ಇದನ್ನೋದಿ ಅರಿತೆ ಅದರ ಹಿಂದಿನ ಪರಿಶ್ರಮ. ಮತ್ತು ಬೇಕಾದ ಸಾಮಾನುಗಳು. ಮುಂದಿನ ವಾರದ ಅಂಕಣದಲ್ಲೇನಿದೆಯೋ!

  ಪ್ರತಿಕ್ರಿಯೆ
 2. Sarojini Padasalgi

  ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ನಿಜ ನೀವು ಹೇಳೋದು. ಈಗೀಗ ಇದೊಂದು ಮರೆತ ಕಲೆಯಾಗ್ತಿದೆ. ಆ ಪರಿಶ್ರಮ ನೀಡುತ್ತಿದ್ದ ಛಂದದ ಗುಬ್ಬಿ ಚೆಟ್ಟು ಮತ್ತೆ ರೂಢ ಕಲೆಯಾಗಿ ಬರಲಿ ಎಂಬಾಸೆ. ಇಂದಿಗೂ ನನ್ನ ಕಣ್ಣಲ್ಲಿ ನಮ್ಮ ಏಕಾ ಆ ಮುತ್ತು ಸರಸರ ಪೋಣಿಸುತ್ತಿದ್ದ ರೀತಿ, ಆ ಪುಟ್ಟ ಪುಟ್ಟ ಗುಬ್ಬಿಗಳನ್ನ ಮಾಡುವ ಕುಶಲತೆ ಗೂಡುಗಟ್ಟಿದೆ. ನನ್ನ ದೊಡ್ಡ ಮಗನಿಗೆ ಕೊಟ್ಟ ಗುಬ್ಬಿ ಚೆಟ್ಟು ಕಾದಿಟ್ಟೀನಿ, ಸ್ವಲ್ಪ ಹೆಣಿಕೆ ಸಡಿಲಾಗಿದ್ರೂ.

  ಪ್ರತಿಕ್ರಿಯೆ
  • ಶೀಲಾ ಪಾಟೀಲ

   ” ಏಕಾ” ಅವರು ಮಾಡುತ್ತಿದ್ದ ಬಾಣಂತಿತನದ ಪದ್ಧತಿಯನ್ನು ಓದುತ್ತ ಹೋದಂತೆ ಹಿತವಾದ ಭಾವನೆ ಮೂಡುವುದು. ಅವರ ಆರೈಕೆ ಮಾಡಿಸಿಕೊಂಡ ತಾಯಿ ಮತ್ತು ಮಗು ಧನ್ಯವಂತರು
   ಬಾಣಂತನದ ವಿವರಣೆ ನಂತರದ ಅದಕ್ಕೆ ಪೂರಕವಾದ ” ಗುಬ್ಬಿಚಟ್ಟಿ” ನ ವಿವರಣೆ ಅದ್ಭುತ. ಮಗು ತೊಟ್ಟಿಲ ಮೇಲಿನ ಗುಬ್ಬಿಚಟ್ಟು ನೋಡುತ್ತ , ನಗುತ್ತ ಬೆಳೆಯುತ್ತಿರುವ ಮಗು ಕಣ್ಮುಂದೆ ಬರುವುದು ಸರೋಜಾ….

   ಪ್ರತಿಕ್ರಿಯೆ
   • Sarojini Padasalgi

    ನಿಜ ಶೀಲಾ ನೀವು ಹೇಳೋದು. ನಮ್ಮ ಏಕಾನ ಬಾಣಂತನ ಮಾಡೂಣಕಿ ಭಾಳ ಹಿತಕರ ಅನಸೋದು. ಕೂಸಿನ್ನ ಜೋಗರಸೂದಂತೂ ಆಕೀ ಹಾಂಗ ಸಾಧ್ಯವೇ ಇಲ್ಲ. ನಾವು ಭಾಳ ಪುಣ್ಯವಂತರು.ಶೀಲಾ ನೀವು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.ನಿಮ್ಮ ಮೆಚ್ಚುಗೆ ನನಗೆ ಸ್ಪೂರ್ತಿ ಶೀಲಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: