ಸರೋಜಿನಿ ಪಡಸಲಗಿ ಅಂಕಣ- ಏಕಾನ ನೈಪುಣ್ಯತೆ ಸೀಮಾ ಇಲ್ಲದ್ದು…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

10

ಏಕಾನ ಜೀವನದ ಏರಿಳಿತಗಳನ್ನು ಕಲ್ಪನಾ ಮಾಡ್ಕೊಂಡ್ರನs ಆಗಲೂ ಅಂದ್ರ ಸ್ವಲ್ಪ ತಿಳುವಳಿಕೆ ಬಂದಮ್ಯಾಲ ಕಸಿವಿಸಿ ಆಗೋದು; ಈಗಲೂ ನೆನಸಿಕೊಂಡ್ರ ಸಾಕು ಒಂಥರಾ ತಳಮಳ ಇದ್ದದ್ದ! ಆದರ ಏಕಾ ಏನ ಒಮ್ಮಿ ಸುದ್ಧಾ  ಹುಶ್ ಅಂತ ಉಸಗಾರಿ ಹಾಕಿದ್ದು ನಾ ಕೇಳಿಲ್ಲ. ಯಾವಾಗರೇ ಒಮ್ಮೊಮ್ಮೆ ನಾಜೂಕ ಪರಿಸ್ಥಿತಿಯೊಳಗ  ಮೆತ್ತಗಾಗ್ತಿದ್ಲು. ಆದರ ಹಂಗs ಮತ್ತ ಪಟಕ್ಕನ ತನ್ನ ತಾ ಸಂಭಾಳಿಸಿಕೊಂಡು ಎಲ್ಲಾರಿಗೂ ಧೈರ್ಯಾ ಹೇಳೂ  ಮಾನಸಿಕ ಧೃಡತಾ ಆಕಿಗಿತ್ತು. ಆಕಿ ವ್ಯಕ್ತಿತ್ವರೇ ಎಂಥಾದಿತ್ತು, ಅದರ ಘಡಣರೇ (ರೂಪುಗೊಂಡಿತ್ತು) ಹೆಂಗ  ಆಗಿದ್ದೀತು ಅಂತ ಅನಸ್ತದ ನಂಗ. ಹೌದಪಾ ಬರೀ ಕಷ್ಟದ್ದ ‌‌‌‌‌‌‌‌ವ್ಯಾಳ್ಯಾದಾಗ ಅಂತ ಅನೂ ಹಾಂಗ ಇದ್ದಿದ್ದಿಲ್ಲ ಆಕೀ ನಡೆ ; ಅಸರಂತ ಪ್ರತಿ ಗಳಿಗೆ, ಪ್ರತಿ ವಿಷಯದಾಗೂ ಏಕಾಂದು ದೊಡ್ಡ ‌‌ಆಸರ ಇತ್ತು, ಒಂಥರಾ  ಧೈರ್ಯಾ ಇತ್ತು. ಅದ ಹೆಂಗ ಏನು ಅಂಬೋ ಅಂದಾಜು ಸಿಗೋದು ಭಾಳ  ಕಷ್ಟ.

ಹಂಗs  ನಮ್ಮ ಏಕಾಂದು ಪ್ರತಿಯೊಂದ ಕೆಲಸದಾಗೂ  ಒಂದು  ವಿಶಿಷ್ಟ  ಛಾಪ  ಇರ್ತಿತ್ತು. ಆಕೀ ಅಡಿಗಿ ವೇಗ  ಅದೆಷ್ಟು ‌‌ಜೋರ  ಇರ್ತಿತ್ತು ಅಂಬೋದ್ರ  ಬಗ್ಗೆ  ಹಿಂದ  ಬರದೀನಿ. ಹಿಂಗಾಗಿ ದಿನದ್ದು,  ಹಬ್ಬಾ ಹುಣ್ಣಿಮೆದಂತೂ  ಸರೀನೇ    ಮತ್ತೇನರೆ  ವಿಶೇಷ  ಸಂದರ್ಭದಾಗ  ಸುದ್ದಾ  60-70  ಮಂದಿದು  ಹಬ್ಬದ ‌‌‌‌‌‌‌‌‌‌‌‌‌‌‌‌‌‌‌‌ ಅಡಿಗಿನ  ಆಗದೀ ವ್ಯವಸ್ಥಿತ  ಸಂಭಾಳಸ್ತಿದ್ಲು  ನಮ್ಮ ಏಕಾ. ಹುಕ್ಕೇರಿಯೊಳಗ  ಅಡಿಗಿಯವ್ರು  ಸಿಕ್ತಿದ್ದಿಲ್ಲ. ಚಿಕ್ಕೋಡಿ  ಇಲ್ಲಾ  ಬೆಳಗಾವಿಂದನs  ಕರಸಬೇಕಾಗ್ತಿತ್ತು. ಆದರ  ಅವರು  ಇಷ್ಟೇ, 70-80  ಮಂದಿ  ಅಡಗಿಗೆ  ಅವರು  ಬರತಿದ್ದಿಲ್ಲ. ಅವರದೂ  ಬರೋಬ್ಬರಿ. ಅವರಿಗೆ  ಪರವಡಸ್ತಿದ್ದಿಲ್ಲ  ಅದು.  ಇನ್ನೂ ಸ್ಪಷ್ಟ  ಹೇಳಬೇಕಂದ್ರ work out ‌‌ಆಗ್ತಿದ್ದಿಲ್ಲ. ಆಗ  ನಮ್ಮ ಏಕಾನೇ  ನೋಡ್ಕೋತಿದ್ಲು  ಅದನ್ನ. ನಮ್ಮ ಮನಿ ಪುರೋಹಿತರು ರಾಮಾಚಾರ್ಯರ  ಹೆಂಡತಿ ಜೀವೂತಾಯಿ  ನಮ್ಮ ಏಕಾಗ  ಬಲಗೈ ಇದ್ಧಾಂಗ. ಇಬ್ರೂ ಕೂಡಿ  ಹವೂರಗ  ಸದ್ದು ಗದ್ದಲಾ ಇಲ್ಲಧಾಂಗ  ಮಾಡಿ ಕೆಲಸಾ ಬಗೀಹರಿಸಿ ಬಿಡ್ತಿದ್ರು. ಯಾವಾಗರೇ ಒಮ್ಮೊಮ್ಮೆ ಬಾಳಕ್ಕ ಅಂತ ಅವರೂ  ಅಗದೀ ಮನೀಗತೆ  ವೈವಾಟ (ವಹಿವಾಟು)  ಇದ್ದಾವ್ರು ಅವರೂ ಬರ್ತಿದ್ರು. ಹಿರೇಗಡತಿ  ನಮ್ಮ ಏಕಾನೇ. ಇದರಾಗೇನೂ  ಯಾರದೂ ಮಾನ ಮುಕ್ಕಾಗುದು, ಕಿಮ್ಮತ್ತು ಕಡಿಮಿ ಆಗೂ ಪ್ರಶ್ನೆನs  ಇರತಿದ್ದಿಲ್ಲ. ಅಡಿಗಿ ಎಲ್ಲಾ  ಮಡೀಲೇನ  ಆಗ್ಬೇಕಾಗಿತ್ತು. ಹಿಂಗಾಗಿ  ಬ್ಯಾರೆ  ಹಾದಿನs  ಇರಲಿಲ್ಲ. ಅವರ ಮನ್ಯಾಗ  ಏನರೇ ಸಣ್ಣಪುಟ್ಟ  ಕಾರ್ಯಕಟ್ಟಳೆ , ಅದೂ ಇದೂ ಕಾರ್ಯಕ್ರಮ ಇದ್ದು  ಅಂದ್ರ ಏಕಾನೂ  ಮದತಿಗೆ  ಹೋಗೇ ಹೋಗ್ತಿದ್ಲು. ಹೀಂಗ ಕಷ್ಟ -ಸುಖಕ್ಕ,  ಕೆಲಸ  ಅಡಗಾಣಿಸಿದಾಗ  ಒಬ್ಬರಿಗೊಬ್ಬರು ಆಗೂ ಅಷ್ಟು ಹತ್ತಿರದ  ಸಂಬಂಧ  ನೆರಿಹೊರಿಯವರ  ಜೋಡಿ ಇದ್ದು ಆಗ. ಅಂಥಾ ವಿಶೇಷ ವಿಷಯನೂ ಅನಸ್ತಿದ್ದಿಲ್ಲ  ಅದು.

ನಮ್ಮನಿಯೊಳಗ ಅನಂತ ಚತುರ್ದಶಿ ವ್ರತಾ ಇತ್ತು. ಅನಂತನ ಹಬ್ಬ ಬಂತಂದ್ರ ನೋಡಬೇಕ; ಆ  ತಯಾರಿ ಕಳೇನs  ಬ್ಯಾರೆ. ಮದವಿ ಮನಿಯೊಳಗೂ  ಇರಲಿಕ್ಕಿಲ್ಲ ಆ ಖದರು. ಆ ದಿನ ಸುಮಾರು 70-75  ಮಂದಿ ಊಟ ಆಗ್ತಿತ್ತು. ಅನಂತನ ಹಬ್ಬದ ಮರುದಿನ ಹುಣ್ಣಿಮೆ ದಿನ  ಸತ್ಯನಾರಾಯಣ ಪೂಜೆ; ಅಷ್ಟೇ ಮನಿಪೂರ್ತೆ ಅಂದ್ರನೂ 25-30 ಮಂದಿ ಇರ್ತಿತ್ತು. ಅನಂತನ  ನೈವೇದ್ಯಕ್ಕ ಐದು ಪಕ್ವಾನ್ನ ಆಗಬೇಕಿತ್ತು. ಅಲ್ಲಿ ನಮ್ಮೂರಾಗ ಒಬ್ರು ಉಡುಪಿ  ಹೊಟೇಲ್ ನ  ಭಟ್ರು ಇದ್ರು; ಅವರೇ ಆ ಹೊಟೆಲ್ ಮಾಲೀಕ್ರೂ  ಹೌದು. ಅವರು ಅನಂತನ ಹಬ್ಬದ ಹಿಂದಿನ ದಿನ  ಮುಂಜಾನಿಂದ ಉಪವಾಸ ಇದ್ದು ಸಂಜೆ ಮುಂದ ಬಂದು ಮಡಿ ಸ್ನಾನ ಮಾಡಿ ಬುಂದೆ ಉಂಡಿ ಮಾಡಿ ಇಡ್ತಿದ್ರು. ಅವರಿಗೆ ನಮ್ಮ ದೊಡ್ಡ ಹಿತ್ತಲದಾಗ ಒಂದು ಪ್ರಶಸ್ತ ಜಾಗ, ಒಂದು ದೊಡ್ಡ ಲೈಟ್ ನ ವ್ಯವಸ್ಥಾ ಮಾಡಿ ಕೊಟ್ರ ಸಾಕು. ಅಲ್ಲೆ ಒಂದ ದೊಡ್ಡ ಒಲಿ ಹೂಡಿ ಬುಂದೆ  ಕಾಳ ಕಡ್ಯೂದು ಸುರು ಆಗ್ತಿತ್ತು ಭಟ್ರದು. ಈ ಕಡೆ ಒಳಗ ಅಡಿಗಿ  ಮನ್ಯಾಗ ನಮ್ಮ ಏಕಾಂದು ಬೇಸನ್ ಉಂಡಿ ತಯಾರಿ ನಡದಿರತಿತ್ತು. ನಾವು  ಹುಡಗೂರೆಲ್ಲಾ ಆಗs ಹಬ್ಬದ  ಸಂಭ್ರಮದಾಗ  ಗರಕ ಆಗಿ ಹೊಸಾ ಅರವಿ ಹಾಕೊಂಡು ಒಳಗ ಹೊರಗ ಓಡಾಡ್ತಿದ್ವಿ. ನಡನಡುವ  ಅಗದೀ  ದೊಡ್ಡ ಗತ್ತಿನ್ಯಾಗ  ಏನರೇ ಸಣ್ಣಪುಟ್ಟ ಕೆಲಸ ಮಾಡು ಹುಕಿ  ಬ್ಯಾರೆ  ಭರ್ತಿ ಇರ್ತಿತ್ತು. ಆ  ಮಜಾನೇ ಬ್ಯಾರೆ.

ಅನಂತನ  ಹಬ್ಬದ್ದು  ವಿಶೇಷತಾನೂ  ಭಾಳ ಇದ್ವು, ಇರ್ತಾವ.  ಪೂಜಾಕ್ಕ ಹದಿನಾರು ಥರದ ಪತ್ರಿ; ಪ್ರತಿಯೊಂದೂ ಹದಿನಾರು ದಳಗಳು , ಹದಿನಾರು ಥರದ  ಹೂವು,  ಹದಿನಾರು ಎಸಳು ಕರಿಕೆ (ಗರಿಕೆ) ಬೇಕಾಗ್ತಿತ್ತು. ನಾ ಸುಮಾರು ನಾಲ್ಕು- ಐದನೇ  ಕ್ಲಾಸ್ ಗೆ  ಬಂದಾಗಿಂದನೂ  ಆ ಕರಿಕೆ, ಪತ್ರಿ, ಹೂವು  ಜೋಡಣಾ ಮಾಡೂ  ಕೆಲಸ  ನಂದು. ಕಮಲದ ಹೂವು, ಇನ್ನೊಂದು ವಿಶಿಷ್ಟ ಪತ್ರಿ – ವಿಷ್ಣು ಕ್ರಾಂತ  ಪತ್ರಿ  ಇವೆರಡದರ  ವ್ಯವಸ್ಥೆ ಅಣ್ಣಾನ  ಖಾತೇದ್ದ ಕೆಲಸ.  ಕ್ಯಾದಿಗಿ  ಅಂತೂ ಬೇಕೇ ಬೇಕು. ಅದನ್ನ ದಾಸರಿಗೆ  ಹೇಳಿ  ತರಸೂ ಕೆಲಸಾ  ಏಕಾಂದು. ಇದಿಷ್ಟು ಮೊದಲನೇ ದಿನದ ತಯಾರಿ. ಇದರ  ಜೋಡಿ  ಮರುದಿನ  ಊಟಕ್ಕ ಬರಾವ್ರಿಗೆ  ಆಮಂತ್ರಣ  ಕೊಡೂ  ಕೆಲಸಾನೂ  ಇರ್ತಿತ್ತು. ಅದು  ಅವ್ವಾನ  ಜವಾಬ್ದಾರಿ.

ಮರುದಿನ  ಅನಂತನ ವ್ರತದ ದಿನ. ಆ ಹೊತ್ತು ಎಲ್ಲಾರೂ  ಲಗೂನ  ಎದ್ದು  ಅಭ್ಯಂಗ ಸ್ನಾನ ಮುಗಿಸಿ  ಬೆಳಗಾಗೂದ್ರಾಗ  ತಯಾರ  ಆಗಬೇಕಾಗ್ತಿತ್ತು.  ಎಲ್ಲಾರೂ ಅಗದೀ  ವ್ಯಾಳ್ಯಾಶೀರ  ತಯಾರಾಗಿ ನಿಲ್ತಿದ್ವಿ. ಬಾಳಿಕಂಬ, ಮಾವಿನ  ತೋರಣ ಕಟ್ಟಿ ಪೂಜಾ ಮಂಟಪ  ತಯಾರಾಗಿರೋದು. ನಮ್ಮನಿ ಪುರೋಹಿತರು ರಾಮಾಚಾರ್ಯರು  ಪೂಜೆಗೆ ಬರೋರು. ಅವರು ಎಲ್ಲಾ ವಿಧಿ – ವಿಧಾನ ಸಾಂಗವಾಗಿ  ಹೇಳಾವ್ರು; ಅವ್ವಾ – ಅಣ್ಣಾ ಮಡೀಲೇ ಪಾಂಕ್ತಾಗಿ ಪೂಜಾ  ಮಾಡಾವ್ರು. ನಾವು  ಕೈ ಮುಕ್ಕೊಂಡು ನೋಡ್ಕೋತ  ಕೂಡ್ತಿದ್ವಿ. ಆ ದೃಶ್ಯಗಳು ರೀಲು ಬಿಚ್ಚಿಧಾಂಗ  ಕಣ್ಣಮುಂದೆ  ಓಡ್ತಾವ  ಈಗೂ; ಅದರ ಜೋಡಿ  ಮನಸು ಜಿಕ್ಕೋತ  ಹುಕ್ಕೇರಿ  ಮನಿಯೊಳಗ  ಗಿರಕಿ  ಹೊಡೀತದ.

ಆಕಡೆ  ಪೂಜಾ  ಸಂಭ್ರಮ, ಮಂತ್ರ, ಗಂಟೆ ಜಾಗಟಿಗಳ  ಭರಭರಾಟಿ  ನಡೆದಿದ್ದು, ಈ ಕಡೆ  ಏಕಾ, ಜೀವೂತಾಯಿ  ಅಡಿಗಿ  ಭರದಾಂಡ  ನಡದಿರತಿತ್ತು. ಹಿಂದಿನ ದಿನಾ ಮಡೀಲೆ  ಭಟ್ರ ಬುಂದೆ ಉಂಡಿ, ಏಕಾಂದು  ಬೇಸನ್ ಉಂಡಿ ಅಂತೂ ತಯಾರಾಗಿರತಿದ್ದು. ಈಗ  ಅಡಿಗಿಯೊಳಗ  ಪಾಕದಾಗಿನ ಚಿರೋಟಿ, ಕರಿಗಡಬು, ತಾಜಾ ಶ್ಯಾವಿಗೆ ಖೀರು, ಸಾಕರ ಭಾತು  ಇಷ್ಟ ಪಕ್ವಾನ್ನ. ಅನಂತಗ  ಶ್ಯಾವಿಗೆ  ತಾಜಾನೇ  ಆಗಬೇಕು. ಅದಕ್ಕ ಏಕಾ  ಆಗೇ ತಾಜಾ ಶ್ಯಾವಿಗೆ ಮಾಡಿ , ಆ  ಹಸಿ ಶ್ಯಾವಿಗೆ  ತುಪ್ಪದಾಗ  ಕರದು  ಹಾಲ ಅಟ್ಟಿಸಿ  ಖೀರು ಮಾಡ್ತಿದ್ಲು. ಏನ ಹೇಳಲಿ  ಆ ರುಚಿ! ಅಸ್ಸಲ  ಇರ್ತಿತ್ತು. ಅನಂತ ಸಂತೃಪ್ತ ಆಗ್ತಿದ್ದ. ಹಂಗs  ಉದ್ದಿನ  ಹಪ್ಪಳಾನೂ ತಾಜಾನೇ; ಹಸಿ ಇದ್ದಾಗಲೇನ ಕರೀಯೂದ  ಅವನ್ನ. ಆ ಹಪ್ಪಳದ ರುಚಿನೂ ಹಂಗೇ; ಭಾರೀ ಮಸ್ತ್! ಇವೆಲ್ಲಾದ್ರಾಗನೂ  ನಮ್ಮ ಏಕಾಂದು  ಎತ್ತಿದ ಕೈ.

ಈ ಪದಾರ್ಥಗಳ  ಜೋಡಿ ಇನ್ನುಳಿದದ್ದು ಪಲ್ಯಗಳು, ಚಟ್ನಿ, ಕೋಸಂಬ್ರಿ, ಕಾಯರಸ (ಗೊಜ್ಜು), ಅನ್ನ, ತೊವ್ವೆ, ಕಟ್ಟಿನ ಸಾರು, ಕಾಳಾಭಾತು, ಆಂಬೊಡೆ, ತರಗು ; ಒಟ್ಟಲ್ಲಿ ಭರ್ಜರಿ  ಇರೋದು ಎಲ್ಲಾ. 

ನನಗ ಇಂದಿಗೂ ಅಗಾಧ  ಅನಸೂದ  ಅಂದ್ರ ಇಷ್ಟೆಲ್ಲಾ  ಅಡಿಗಿ  ಅವರು  ಆಡಾಡಿಕೋತ  ಮುಗಸ್ತಿದ್ರು. ನೈವೇದ್ಯ, ಆರತಿ, ಮಂಗಳಾರತಿ  ಆತಂದ್ರ  ಊಟದ  ತಯಾರಿ. ಅಷ್ಟ ಮಂದಿ ಊಟಾ  ಚೂರೂ  ಗಡಬಡ  ಗದ್ದಲ ಇಲ್ಲಧಾಂಗ ಪದ್ಧತಶೀರ,  ಅಗದೀ  ವ್ಯವಸ್ಥಿತ  ಆಗಿ  ಹೋಗ್ತಿತ್ತು.ಇಷ್ಟ ನೈಪುಣ್ಯತಾ  ನಮ್ಮ ಏಕಾಗ  ಪ್ರತಿಯೊಂದ  ಬಾಬ್ತಿಯೊಳಗ  ಹೆಂಗ  ಸಾಧಿಸಿತ್ತು ಅಂಬೂದು  ನನಗ ಈಗ  ಸುದ್ಧಾ ಗೂಢೇ ಆಗೇದ.

ಆಮ್ಯಾಲೆ  ಮೂರೂ ಸಂಜಿ  ಎಲ್ಲಾ ಕಡೆ ದೀಪಾ ಹಚ್ಚಿ  ತಯಾರ  ಆಗೂದ್ರಾಗ  ರಾಮಾಚಾರ್ಯರು ಅನಂತನ  ಕಥಿ  ಹೇಳಲಿಕ್ಕೆ  ಪೋತಿ(ಪುರಾಣದ್ದ ಒಂದು ವಿಶಿಷ್ಟ ರೀತಿಯ ಪುಸ್ತಕ)  ಸಮೇತ ‌‌ ಬರ್ತಿದ್ರು. ಅನಂತನ  ಕಥಿ ಪುರಾಣ  ಹೇಳಿ  ಮಂಗಳಾರತಿ ಆತಂದ್ರ  ಅಣ್ಣಾ, ಅವ್ವಾ  ಕಟಗೊಂಡ  ಅನಂತನ  ದಾರ  ಬಿಚ್ಚಿದ್ರು ಅಂದ್ರ  ಅಂದಿನ ಅನಂತನ ವ್ರತಾ  ಸಂಪನ್ನ ಆದ ಹಾಂಗ.  ಅಲ್ಲೀತನಕಾ  ಅವ್ವಾ ಮತ್ತು ಅಣ್ಣಾನೂ  ಇನ್ನೂ  ಮಡೀಲೇನ  ಇರತಿದ್ರು. ಆ ಪೂಜಾ ವೈಭವ , ಸಂಭ್ರಮ  ಇಂದಿಗೂ ಮನಸಿನ್ಯಾಗ  ಏನೋ ಒಂದು   ಪುಳಕ, ಹರ್ಷದ ಬುಗ್ಗಿ  ಪುಟಸ್ತದ. 

ಇಷ್ಟೆಲ್ಲಾ  ಆಗ್ತಿತ್ತು ಖರೇ ನಮ್ಮ ಏಕಾಗ  ಮಂಡಿಗಿ  ಮಾತ್ರ  ಸಾಧಸಲಿಲ್ಲ ಯಾಕೋ. ಸಾಖರಪೋಳಿ  ಅಗದೀ ದೃಷ್ಟಿ ಆಗೂ ಹಂಗ ಮಾಡ್ತಿದ್ಲು; ಆದರ  ಮಂಡಿಗಿ ಕೈ ಮ್ಯಾಲೆ ತಗೋಳೋದು  ಆಕೀಗೆ ಅಷ್ಟ ಜಮಾಸಲಿಲ್ಲ. ನಮ್ಮ ಅಂಬಕ್ಕಜ್ಜಿ  ಮಂಡಿಗಿ  ನಿಂತ ನೋಡಬೇಕು ಹಂಗ ಮಾಡ್ತಿದ್ಲು. ನಾವು ಐನಾಪೂರಕ್ಕ ಸೂಟಿಗೆ  ಹೋದಾಗ  ಈ  ಮಂಡಿಗಿ ಔತಣ  ಆಗೂದೇ. ಕೃಷ್ಣಾ ತೀರದ ಅಸ್ಸಲ  ತುಪ್ಪದಾಗ  ಮಾಡಿದ  ಮಂಡಿಗಿ  ಬಾಯಾಗಿಟ್ರ  ಕರಗೂ  ಹಂಗ.  ಆ  ಎಲ್ಲಾ  ನೆನಪುಗಳೂ ಹಂಗೇ  ಅಗದೀ  ಸರಳ  ರಕ್ತದಾಗ ಕರಗಿ ಈ  ಜೀವದಾಗ ಒಂದಾಗಿ  ಬಿಟ್ಟಾವ. ಅಷ್ಟs ಸರಳ ಯಾವಾಗ ಅಂದ್ರ ಆವಾಗ  ತಾಜಾ ಆಗಿ  ನುಗ್ಗಿ ಬರ್ತಾವ  ಹಡಬಡಿಸಿಗೋತ.

ಈಗ ಇಲ್ಲೆ ನನಗ ಒಂದ ಮಾತ ಹೇಳಲಿಕ್ಕೇ  ಬೇಕು  ಅನಸ್ತದ.ಈ ನನ್ನ  ಇಬ್ರೂ  ಅಜ್ಜೀರಿಗೆ  ದಣಿವು ಅಂಬೂದು  ಗೊತ್ತೇ ಇರಲಿಲ್ಲ  ಅನಸ್ತದ. ಪಕ್ಕಾ ನಕ್ಕೀನೇ  ಅದು. ನಮ್ಮ ತಂಗಿ  ಮದವಿ  ನಿಶ್ಚಿತಾರ್ಥದ  ದಿವಸ  ಮಸ್ತ್  ಪಟಾಸ್ತು ಅದು. ಗೊತ್ತಿದ್ದದ್ದೇ ಆದರೂ ಅಗದೀ ಗಟ್ಟ್ಯಾಗಿ  ಕೂತಬಿಟ್ತು ಮನಸಿನ್ಯಾಗ.  ಇಬ್ಬರೂ  ಬೀಗಿತ್ತಿಯರು  ಒಂದೇ ಊರಿನವ್ರು. ಹಿಂಗಾಗಿ  ಮೊದಲಿಂದನೂ  ಪರಿಚಿತರೇ ಇಬ್ರೂ. ಇಬ್ಬರ ಜೋಡಿ  ಅಗದೀ ಮಸ್ತ್  ಜಮಾಸೂದು. ನಮ್ಮ ಅಣ್ಣಾನ ಮಾತಿನ್ಯಾಗ  ಹೇಳ್ಬೇಕಂದ್ರ  ” ಕಿಲಾರಿ  ಜೋಡಿ”  ಇದ್ಧಾಂಗ.

ನಮ್ಮ ತಂಗಿ  ನಿಶ್ಚಿತಾರ್ಥದ ಕಾರ್ಯಕ್ರಮ  ಮನೀಯೊಳಗs  ಹೂಡಿ ಕೊಂಡಿದ್ವಿ.ಆಗೆಲ್ಲಾ  ಈ ಪಾರ್ಟಿ ಹಾಲ್ ಗಳ  ಗದ್ದಲ ಇರಲಿಲ್ಲ. ಮಂದೀನೂ ಏನ  ಭಾಳ ಇರಲಿಲ್ಲ; ಬೀಗರೂ ಸೇರಿ  ಒಂದೈವತ್ತ ಮಂದಿ  ಇತ್ತು. ಮತ್ತ ಯಥಾಪ್ರಕಾರ ಅಡಿಗಿ ಊಟದ ಸಾರಥ್ಯ ನಮ್ಮ  ಏಕಾಂದೇ ಅಂಬಕ್ಕಜ್ಜಿ  ಸಾಥದೊಡನೆ. ಆ  ಹೊತ್ತಿನ  ಸ್ಪೇಷಲ್  ಪಕ್ವಾನ್ನ ಅಂದ್ರ ನಮ್ಮ ಏಕಾನ  ತಾಜಾ ಶ್ಯಾವಿಗೆ ಖೀರು; ಥೇಟ್  ಬಾಸುಂದಿ  ರುಚಿ  ಅಷ್ಟs ಏನು ಅದು ಝಕ್ಕಸೂ ಅಂಥಾ  ರುಚಿ ಆ ಖೀರು; ಅದರ ಜೊತೆಗೆ  ನಮ್ಮ ಅಂಬಕ್ಕಜ್ಜಿ ಮಂಡಿಗಿ. ನಮ್ಮ ಅಣ್ಣಾ ಹೇಳೂ ಹಂಗ  ಉತ್ಕೃಷ್ಟ  ಅಡಿಗಿ. ಊಟಾ ಮಾಡಿ  ಬೀಗರು   ವಿಶ್ರಮಿಸಿ  ಎದ್ರು. ಸಂಜಿ  ಐದು ಗಂಟೆಗೆ  ನಿಶ್ಚಿತಾರ್ಥದ ಕಾರ್ಯಕ್ರಮ  ಇತ್ತು.ಆಗ  ವರನ ಸ್ನೇಹಿತರು  15-20  ಜನ  ಬರೋವ್ರಿದ್ರು. ಅಡಿಗಿ  ಊಟಾ  ಬಗೀಹರಿಸಿದ  ಬೀಗಿತ್ತಿಯರು  ಈಗ  ಒಂದ  ದೊಡ್ಡ  ಪಾತೇಲಿ  ಉಪ್ಪಿಟ್ಟು ಇಳಿಸಿದ್ರು. ತಯಾರಿ  ಎಲ್ಲಾ ಹೆಚ್ಚೂದು, ಕೊಚ್ಚೂದು  ನಾವು  ಸಣ್ಣಾವ್ರು  ಮಾಡಿ  ಕೊಟ್ಟಿದ್ವಿ. ನಮ್ಮ ಏಕಾಂದು  ಇನ್ನೊಂದು ಸ್ಪೇಷಲ್ ಟಾಚಣಿ ಬೇಸನ್ ಉಂಡಿ,  ಉಪ್ಪಿಟ್ಟು ಅದರ ಜೋಡಿ  ನನ್ನ  ಗಂಡ ಸುರೇಶ ತಗೊಂಡು ಬಂದ ಸವಣೂರಿನ  ಶಿವಲಾಲನ ಖಾರಾ, ಚಹಾ ಕಾಫಿ ಫರಾಳ  ಆತು. ಎಲ್ಲಾ ಕಾರ್ಯಕ್ರಮ ಮುಗಿದು ಬಂದ ಜನಾ ಎಲ್ಲಾ, ಬೀಗರು ಸಹಿತ  ತಮ್ಮ ಊರಿಗೆ ಹೋದ್ರು.

ಜನಾ ಎಲ್ಲಾ ಹೋದ್ರು; ಆದರ ಮನಿ ಒಳಗಿನ ರಂದಿ  ನೋಡೂ  ಹಂಗಿತ್ತು.ನಮ್ಮ ಕೆಲಸದ  ಹುಡುಗಿ  ಕಾದು ಕಾದು ಹೋಗಿ ಬಿಟ್ಟಿದ್ಲು. ಕಾರ್ಯಕ್ರಮ  ಮುಗಿಯೂದು  ತಡಾ ಆತು. ನಾವೆಲ್ಲಾ  ಇದು  ಹೆಂಗಪಾ  ಈ  ರಂದಿ  ಕಿತ್ತೂದು, ಮನಿ  ಹೆಂಗಪಾ  ಮೊದಲಿನ  ಆಕಾರಕ್ಕ  ಬರೂದು  ಅಂತ  ಥಂಡಾ ಹೊಡದ  ಕೂತ  ಬಿಟ್ವಿ. ಎದ್ಲ  ನೋಡ್ರಿ  ನಮ್ಮ ಏಕಾ. ಕಚ್ಚಿ ಚುಂಗ  ಹಿಡದ ಎತ್ತಿ  ಕಟ್ಟಿ, ಎಲ್ಲಾ ಕಡೆ  ಹರಡಿದ್ದ  ಪ್ಲೇಟು , ಚಮಚಾ,  ಕಪ್ಪು-  ಬಸಿ, ಲೋಟಾ, ತಂಬಿಗೆ – ಒಂದs ಎರಡs ; ಪಡಸಾಲಿ, ನಡಮನಿ, ಅಡಿಗಿಮನಿ  ಎಲ್ಲಾ ತುಂಬಿ ಹೋಗಿತ್ತು. ಎಲ್ಲಾ ಪಟಾಪಟಾ  ಎತ್ತಿ ಹಿತ್ತಲದಾಗ  ಹಾಕಿದ್ಲು. ನಿಶ್ಚಿತಾರ್ಥದ ಕಾರ್ಯಕ್ರಮಕ್ಕ  ಬಂದ ರೈತ ಮಕ್ಕಳು ಹರಟಿ ಹೊಡಕೋತ ಕೂತಾವ್ರನ  ಕರೆದು ಎಬ್ಬಿಸಿ ಪಡಸಾಲಿ ನಡಮನಿ ಎಲ್ಲಾ ಸ್ವಚ್ಛ ಮಾಡಿಸಿದ್ಲು. ರಾಯಪ್ಪನ ಹೆಂಡತಿ ತಂಗೆವ್ವ  ಭಾಂಡಿ ಎಲ್ಲಾ ಸ್ವಚ್ಛ ಮಾಡಿ ಒರೆಸಿಟ್ಲು. ಏಕಾ ತಾನೇ ನಿಂತು ಅಡಿಗೆ ಮನಿ  ಆಕಾರದಾಗ  ತಂದ್ಲು. ಅರ್ಧಾ ತಾಸಿನ್ಯಾಗ  ಮನಿ ಲಕಾ ಲಕಾ ಕನಡಿ ಹಂಗ  ಹೊಳೀಲಿಕ್ಹತ್ತು.

ನಮ್ಮ ಏಕಾನ ಕೆಲಸs ಹಂಗ. ಆಕೀ ಸಂಘಟನಾ  ಚಾತುರ್ಯ ಮೆಚ್ಚೂಹಂಗೇ  ಇತ್ತು. ಬಹುಶಃ ಅದರ  ಆಸರದೊಳಗ  ಹರದು ಆಕಾರ ಕಳದ ಹೋಗಿದ್ದ  ಬಾಳನ್ನ ಅಷ್ಟ ಛಂದಾಗಿ  ಹೆಣೆದು  ನೇಯ್ದದ್ದು. ಎಂದೂ ಯಾವ ಕೆಲಸನೂ  ಆಗದ್ದಿದು  ಅಂತ ಕೈ ಬಿಟ್ಟ ಕೂತಾಕೀನ  ಅಲ್ಲ ಆಕಿ. ಹಂಗs ತಾ ಮಾಡಿದ್ದು  ಅನ್ನೂ ಹೆಗ್ಗಳಿಕೆಯ ಭಾವ, ದೊಡ್ಡಿಸ್ತನಾ  ತೋರಸೂದು  ಇವೆಲ್ಲಾ  ಆಕಿಂದ  ಭಾಳ ದೂರ. ಅದಕೆಲ್ಲಾ  ಅಕಿಗೆ ಪುರಸೊತ್ತೂ ಇರಲಿಲ್ಲ. ಅದಕ್ಕs  ನಮ್ಮ ಅಂಬಕ್ಕಜ್ಜಿ ಅಸರಂತ  ಅನ್ನಾಕಿ -” ಸೋನಾ, ಸೋನವ್ವ ಅಂದ್ರ  ಪಕ್ಕಾ ಸೋಳಾಆಣೆ  ಸತ್ರಾಪೈ  ಸೋನಾನs  ನೋಡ” ಅಂತ.

ನಮ್ಮ ಏಕಾ  ಯಾತರಾಗೂ  ಹೈಗೈ  ಮಾಡಾಕ್ಯನs  ಅಲ್ಲ. ಹಿಂಗೇನರs ದೊಡ್ಡ ದೊಡ್ಡ ಕಾರ್ಯ  ಆದೂ  ಅಂದ್ರ, ದೀಪಾವಳಿ, ಯುಗಾದಿ ಅಂಥಾ  ದೊಡ್ಡ  ಹಬ್ಬದ  ದಿನಾ  ಅಣ್ಣಾನ್ನ  ಮೊದಲ  ಮಾಡ್ಕೊಂಡ  ನನ್ನ  ಸಣ್ಣ  ತಂಗಿ ತನಕಾ   ಎಲ್ಲಾರದೂ  ದೃಷ್ಟಿ  ತಗಿಯೂದನ್ನ ಒಂದ   ಸಲಾನೂ  ತಪ್ಪಸ್ತಿದ್ದಿಲ್ಲಾ. ಏಕಾಂದು  ದೃಷ್ಟಿ ತಗ್ಯೂ ಪದ್ಧತಿ  ಅಗದೀ  ಜಬರ್ದಸ್ತ್ ಇತ್ತು; ಪರಿಣಾಮನೂ  ಅಷ್ಟs  ಅಚೂಕ ಇರ್ತಿತ್ತು. ಆಕಿ ದೃಷ್ಟಿ ತಗದ  ಛಲ್ಲಿದ್ಲಂದ್ರ  ದೃಷ್ಟಿ  ತಗಿಸಿಕೊಂಡಾವ್ರ ಏಕದಂ  ತಾಜಾ ಆಗಿ ಬಿಡ್ತಿದ್ರು. ಎಡಗೈಯಾಗಿಷ್ಟ ಹಳ್ಳುಪ್ಪ  ತಗೊಂಡು ಏನೋ ಮಣಾಮಣಾ  ಅನಕೋತ  ಮಾರಿ  ಮ್ಯಾಲಿಂದ  ಇಳಿಸಿ ಥೂ ಥೂ ಅಂದು  ಮೂಕಲೇ  ಬಚ್ಚಲ ಮನಿ ಮೋರಿಯೊಳಗ  ಛಲ್ಲಿ ಕೈಕಾಲ ತೊಳ್ಕೊಂಡು  ಬಂದ್ಲಂದ್ಗ  ಈ ಕಡೆ  ನಾವೆಲ್ಲಾ ಜಿಗರ  ಆಗಿರತಿದ್ವಿ. ದಣಿವು, ಸುಸ್ತು ಮಟಾಮಾಯ.

ನಾ ಏಕಾನ್ನ ಕೇಳಿದ್ದೆ ” ಏಕಾ  ಏನ ಮಂತ್ರಾ  ಅಂತೀ ನೀ” ಅಂತ. ಅದಕ್ಕ ಆಕಿ “ಎಲ್ಲೀ ಮಂತ್ರs ಅಕ್ಕವ್ವಾ; ಏನೋ ನಾಕ  ಸಾಲ ನನಗ ತಿಳಧಾಂಗ ಹೇಳ್ತೀನಿ ಅಷ್ಟs. ಬಾ ಇಲ್ಲಿ  ನಿನಗೂ  ಹೇಳ್ಕೊಡ್ತೀನಿ”  ಅಂತ ಕಿಂವ್ಯಾಗ  ಹೇಳಿ  ದೃಷ್ಟಿ ತಗಿಯೂದನ್ನ  ಕಲಿಸಿದ್ಲು. ಜೋರಲೆ  ಹೇಳಬಾರದಂತ  ಅದನ. ಎಷ್ಟ ಛಂದ ಸಾಲ ಅವು! ” ಆ ದೃಷ್ಟಿ ಈ ದೃಷ್ಟಿ, ಆಯಿ ದೃಷ್ಟಿ ತಾಯಿ ದೃಷ್ಟಿ  ನಾಯಿ  ದೃಷ್ಟಿ. ಮಂದಿ  ದೃಷ್ಟಿ  ಹಂದಿ  ದೃಷ್ಟಿ. ನನ್ನ  ಕೂಸಿಗೆ  ದೃಷ್ಟಿ ಬಿಟ್ಟಾವ್ರ ದೃಷ್ಟಿ ಹಾರಿ ಹೋಗಲಿ  ಕ್ಯಾರ  ಬಡದು ಥೂ ಥೂ “; ಅಂತ ಹೇಳಬೇಕು ಅಂದು  ಇನ್ನೊಂದ  ಮಾತು  ಹೇಳಿದ್ಲು ” ನೋಡ  ಅಕ್ಕವ್ವಾ ಮುಕಾಟ್ಲೆ  ದೃಷ್ಟಿ ತಗದ  ಛಲ್ಲಬೇಕು. ಎಲ್ಯರೇ  ಹೋದಲ್ಲೆ  ಬಂದಲ್ಲೆ ಹಳ್ಳುಪ್ಪ  ತಗೋಳ್ಳೊ  ಭಾನಗಡಿ  ಬ್ಯಾಡ.  ಒಂದ ಪಾವಲಿ (ನಾಲ್ಕಾಣೆ ನಾಣ್ಯ) ತಗೊಂಡ  ಇಳಿಸಿ  ಎಡಗೈಲೆ  ದೂರ  ಹಾದಿ ಮ್ಯಾಲೆ  ಛಲ್ಲಿ ಬಿಡಬೇಕು”  ಅಂತ  ಹೇಳಿದ್ಲು. ನನಗೂ  ಭಾಳ ಛಲೋ ಜಮಾಸೇದ  ದೃಷ್ಟಿ ತಗಿಯೂದು. ಆದರೆ ನನ್ನ  ಕಡೆ ಏಕಾನಗತೆ  ದೃಷ್ಟಿ  ತಗಿಸಿಕೊಳ್ಳಿಕ್ಕೆ ಯಾರೂ  ಬರೂದಿಲ್ಲ. ನಾವು  ಹುಡುಗರು  ಬರೀ  ಹುಡಗರೇನು  ತನ್ನ ಮಗಾ ಸೊಸಿನೂ  ಏನರೇ  ಒಂತುತ್ತ  ಕಡಿಮಿ  ತಿಂದ್ರ  ಉಂಡ್ರ  ಪಕ್ಕಾ ಹಿಡದ  ಬಿಡ್ತಿದ್ಲು  ಏಕಾ  ಅದು  ನಕ್ಕಿ ಕಾಲಧೂಳಿ  ಆಗೇದ ಅಂತ. ಕಾಲಧೂಳೀ  ಮಂತ್ರಾ  ಮಾತ್ರ  ಆಕಿ ” ಅಕ್ಕಾ” ನ ಕಡೇನs  ಹಾಕಿಸಿ  ಕರಕೊಂಡ ಬರತಿದ್ಲು.ನಮ್ಮ ಅಣ್ಣಾ  ಹುಕ್ಕೇರಿಗೆ  ಬಂದ  ಹೊಸದ್ರಾಗ  ಗಣಪತರಾವ   ಅವರ  ಮನ್ಯಾಗ  ಬಾಡಿಗೆಗೆ  ಇದ್ರು. ಅವರ  ಅವ್ವ  ” ಅಕ್ಕಾ”; ಊರಾವ್ರಿಗೆಲ್ಲಾ  ಅವರು  ಅಕ್ಕಾನೇ. ” ಅಕ್ಕಾ  ಹಾಕೂ  ಕಾಲಧೂಳೀ  ಮಂತ್ರಾ  ಅಗದೀ  ಠೀಕ  ನಾಟ್ತದ” ಆಂತ  ಅಂತಿದ್ಲು  ಏಕಾ.

ನಾವು  ಸಣ್ಣಾವ್ರಿದ್ದಾಗ  ಏಕಾ  ಒಂಚೂರ  ಉಪ್ಪು ಅಥವಾ  ಸಕ್ರಿ  ತಗೊಂಡು ನಮ್ಮನ್ನೂ ಕರಕೊಂಡು ಅಕ್ಕಾನ ಕಡೆ ಹೋಗಾಕಿ. ಅವರು ಅದೇನೋ  ನಮಗೂ  ಮಂತ್ರಾ ಹಾಕಿ,  ಆ  ಸಕ್ರಿ, ಉಪ್ಪನೂ  ಮಂತ್ರಿಸಿ , ಅದಕ್ಕೂ ನಮಗೂ ಉಫ್ ಉಫ್ ಅಂತ  ಊದಿ  ಗಾಳಿ  ಹಾಕಿ ಕೊಡ್ತಿದ್ರು. ಅದನ್ನ ನೆಲದ  ಮ್ಯಾಲ  ಇಡೋಹಾಂಗಿಲ್ಲಾ. ಅಂತರಾಳೇನs  ಇಡಬೇಕು. ನಮ್ಮ ಊಟಕ್ಕ, ಹಾಲಿಗೆ ಅದೇ  ಉಪ್ಪು ಸಕ್ಕರೆ  ಬಳಸಬೇಕು. ಎರಡ ದಿನದಾಗ  ಎಲ್ಲಾ  ಬರೋಬ್ಬರಿ  ಆಗ್ದಿದ್ರ ಕೇಳ್ರಿ. ಅಷ್ಟ  ಅಸರದಾರ  ಅವರ  ಕಾಲಧೂಳೀ ಮಂತ್ರ. ದೊಡ್ಡಾವ್ರಿಗಾದ್ರ  ಬರೀ ಉಪ್ಪು, ಸಕ್ಕರೆ ಮಂತ್ರಿಸಿ  ತಗೊಂಡು ಬರತಿದ್ಲು. ನಾ  ಕೇಳೇ ಬಿಟ್ಟಿದ್ದೆ  ಏಕಾನ್ನ  ಒಂದ ಸಲಾ.” ಏಕಾ ನೀ  ಯಾಕ  ಕಾಲಧೂಳೀ  ಮಂತ್ರಾ ಕಲೀಲಿಲ್ಲಾ ” ಆಂತ. ಅದಕ್ಕ ಆಕೀ  ಉತ್ತರ  ಭಾಳ ಛಂದ ಇತ್ತು. ” ಅಕ್ಕವ್ವಾ  ಒಬ್ಬೊಬ್ರಿಗೆ  ಒಂದೊಂದು  ಮಂತ್ರಾ, ವಿದ್ಯಾ ಸಾಧಿಸಿರತಾವ. ಅವರ  ತಾಬಾದಾಗ  ಅವು  ಇದ್ಧಾಂಗ  ಲೆಕ್ಕ. ಅವರ  ಸಿದ್ಧಿ ಅದು” ಅಂತ ಹೇಳ್ತಿದ್ಲು. ಎಷ್ಟ ತಿಳಿತೋ  ಗೊತ್ತಿಲ್ಲ ಹೂಂ ಅಂದೆ. ನಮ್ಮ ಏಕಾ  ಹೇಳಿದ್ದು  ಅಂದ್ರೆ  ಮುಗೀತು. ಅದೇ  ಬರೋಬ್ಬರಿ; ಇದು ನನ್ನ ತರ್ಕ. ಹಂಗಿತ್ತು  ನಮ್ಮ ಏಕಾ  ಸಮಝೂತಿ  ಹೇಳೂ ರೀತಿ.

ಎಷ್ಟ ಹೇಳಲಿ, ಏನೇನ ಹೇಳಲಿ  ಹೆಂಗ ಹೇಳಲಿ ನಮ್ಮ ಏಕಾನ  ವಿಷಯ  ಅಂಬೂದು ಖರೆನ ಹೊಳ್ಯೂದಿಲ್ಲ .ನನ್ನ  ಪೆನ್ನು  ಸೋಲಬೇಕು  ಬರೆದು; ಹಂಗ ಇದ್ಲು ಆಕಿ. 

ಅದ್ಭುತ  ವ್ಯಕ್ತಿ  ನಮ್ಮ ಏಕಾ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. Shrivatsa Desai

  ಈ ಸರಣಿ ಓದುತ್ತಿದ್ದಂತೆ ನನಗೆ ಅನಿಸಿದ್ದು ನಾವು ಕೆಲವರು ಇಂಥದೆಲ್ಲ ಸರಳ ಸುಸಂಸ್ಕೃತ ಜೀವನದ ವೈಭವ ಅನುಭವಿಸಲಿಲ್ಲವಲ್ಲ ಅಂತ. ಈ ಸರಣಿಯ ಇನ್ನೆರಡು byproduct ಆಗಬಹುದು ಎರಡು ಕಿರುಪುಸ್ತಕಗಳು: ಹುಕ್ಕೇರಿ ಕಡೆಯ ರೆಸಿಪಿಗಳು ಮತ್ತು ಅಲ್ಲಿಯ ಭಾಷೆಯ ಪದಗಳ ನಿಘಂಟು. ನನಗೆ “ವೈವಾಟ” ಇರದ ಅನೇಕ ವರ್ಣಮಯ ಪದಗಳ್ನು ಅರಿತೆ. ಮತ್ತು ಅಲ್ಲಿಯ ಆಗಿನ ಕಾಲದ ಸಂಪ್ರದಾಯಗಳನ್ನು . ಶ್ರೀವತ್ಸ ದೇಸಾಯಿ

  ಪ್ರತಿಕ್ರಿಯೆ
  • Sarojini Padasalgi

   ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ನಿಜಕ್ಕೂ ಆ ದಿನಗಳಲ್ಲಿ ಮುಳುಗಿ ಹೋಗ್ತೀನಿ ನನಗೇ ಗೊತ್ತಿಲ್ಲದಂತೆ. ನೀವು ಹೇಳೋದು ಸರಿ; ಪದಗಳ ಅರ್ಥ ಇನ್ನೂ ಸ್ವಲ್ಪ ವಿವರವಾಗಿ ಕೊಡೋ ಪ್ರಯತ್ನ ಮಾಡ್ತೀನಿ. ನಿಘಂಟು ಬೇಕಂದ್ರೆ ಅದೇನೂ ಕೊಡಬಹುದು!

   ಪ್ರತಿಕ್ರಿಯೆ
 2. ramesh pattan

  ಚಟ್ನಿ, ಕೋಸಂಬ್ರಿ, ಕಾಯರಸ (ಗೊಜ್ಜು), ಅನ್ನ, ತೊವ್ವೆ, ಕಟ್ಟಿನ ಸಾರು, ಕಾಳಾಭಾತು, ಆಂಬೊಡೆ, ತರಗು
  ಈ ಸಾಂಪ್ರದಾಯಕ ವಿಶಿಷ್ಟ ತಿನಿಸುಗಳನ್ನು ನಮ್ಮ ಊರಿನ ನನ್ನ ಆತ್ಮೀಯ ಮಿತ್ರರ ಮನೆಯಲ್ಲಿ ಊಟ ಮಾಡಿದ್ದೇನೆ.ಅವರು ಪ್ರತಿ ವರ್ಷ ಶ್ರಾವಣ ಶುಕ್ರವಾರದಂದು ನನಗೆ ಆಹ್ವಾನ ನೀಡುತ್ತಿದ್ದರು.ಈಗ ಆ ಕುಟುಂಬ ಹಳ್ಳಿ ತೊರೆದು ಪಟ್ಟಣ ಸೇರಿದೆ.ಅವರು ಪ್ರತಿ ವರ್ಷ ಜಾತ್ರೆಗೊಮ್ಮೆ ಊರಿಗೆ ಬಂದಾಗ ಇಂತಹ ಅಪರೂಪದ ಊಟದ ಸೌಭಾಗ್ಯ ನನಗೆ ಸಿಗುತ್ತದೆ.ಈ ಲೇಖನ ಓದಿ ಅದೆಲ್ಲ ನೆನಪಾಯಿತು.
  ರಮೇಶ ಪಟ್ಟಣ
  ಕಲಬುರ್ಗಿ

  ಪ್ರತಿಕ್ರಿಯೆ
  • Sarojini Padasalgi

   ತುಂಬ ಖುಷಿ ಅನಿಸ್ತು ಸರ್ ನಿಮ್ಮ ರೆಸ್ಪಾನ್ಸ್ ಓದಿ. ನಮ್ಮ ಏಕಾನ ಅಡಿಗೆ ಭಾಳ ವಿಶಿಷ್ಟ ಇರ್ತಿತ್ತು. ಅದನ್ನೆಲ್ಲಾ ನಾನೂ ನೋಡಿ ಕಲತೀನಿ.
   ನಿಮಗೆ ನನ್ನ ಬರಹ ನಿಮ್ಮ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದು ಛಲೋ ಅನಿಸ್ತು.ಧನ್ಯವಾದಗಳು ಸರ್ ನೀವು ತಪ್ಪದೇ ಆಸಕ್ತಿಯಿಂದ ಓದುವುದಕ್ಕೆ.

   ಪ್ರತಿಕ್ರಿಯೆ
 3. ramesh pattan

  ಚಟ್ನಿ, ಕೋಸಂಬ್ರಿ, ಕಾಯರಸ (ಗೊಜ್ಜು), ಅನ್ನ, ತೊವ್ವೆ, ಕಟ್ಟಿನ ಈ ಸಾಂಪ್ರದಾಯಕ ವಿಶಿಷ್ಟ ತಿನಿಸುಗಳನ್ನು ನಮ್ಮ ಊರಿನ ನನ್ನ ಆತ್ಮೀಯ ಮಿತ್ರರ ಮನೆಯಲ್ಲಿ ಊಟ ಮಾಡಿದ್ದೇನೆ.ಅವರು ಪ್ರತಿ ವರ್ಷ ಶ್ರಾವಣ ಶುಕ್ರವಾರದಂದು ನನಗೆ ಆಹ್ವಾನ ನೀಡುತ್ತಿದ್ದರು.ಈಗ ಆ ಕುಟುಂಬ ಹಳ್ಳಿ ತೊರೆದು ಪಟ್ಟಣ ಸೇರಿದೆ.ಅವರು ಪ್ರತಿ ವರ್ಷ ಜಾತ್ರೆಗೊಮ್ಮೆ ಊರಿಗೆ ಬಂದಾಗ ಇಂತಹ ಅಪರೂಪದ ಊಟದ ಸೌಭಾಗ್ಯ ನನಗೆ ಸಿಗುತ್ತದೆ.ಈ ಲೇಖನ ಓದಿ ಅದೆಲ್ಲ ನೆನಪಾಯಿತು.
  ರಮೇಶ ಪಟ್ಟಣ
  ಕಲಬುರ್ಗಿ

  ಪ್ರತಿಕ್ರಿಯೆ
 4. ramesh pattan

  ಚಟ್ನಿ, ಕೋಸಂಬ್ರಿ, ಕಾಯರಸ (ಗೊಜ್ಜು), ಅನ್ನ, ತೊವ್ವೆ, ಕಟ್ಟಿನ ಈ ಸಾಂಪ್ರದಾಯಕ ವಿಶಿಷ್ಟ ತಿನಿಸುಗಳನ್ನು ನಮ್ಮ ಊರಿನ ನನ್ನ ಆತ್ಮೀಯ ಮಿತ್ರರ ಮನೆಯಲ್ಲಿ ಊಟ ಮಾಡಿದ್ದೇನೆ.ಅವರು ಪ್ರತಿ ವರ್ಷ ಶ್ರಾವಣ ಶುಕ್ರವಾರದಂದು ನನಗೆ ಆಹ್ವಾನ ನೀಡುತ್ತಿದ್ದರು.ಈಗ ಆ ಕುಟುಂಬ ಹಳ್ಳಿ ತೊರೆದು ಪಟ್ಟಣ ಸೇರಿದೆ.ಅವರು ಪ್ರತಿ ವರ್ಷ ಜಾತ್ರೆಗೊಮ್ಮೆ ಊರಿಗೆ ಬಂದಾಗ ಇಂತಹ ಅಪರೂಪದ ಊಟದ ಸೌಭಾಗ್ಯ ನನಗೆ ಸಿಗುತ್ತದೆ.ಈ ಲೇಖನ ಓದಿ ಅದೆಲ್ಲ ನೆನಪಾಯಿತು.
  ರಮೇಶ ಪಟ್ಟಣ
  ಕಲಬುರ್ಗಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: