ಸರೋಜಿನಿ ಪಡಸಲಗಿ ಅಂಕಣ- ಅಜ್ಜಿ ಬೇಕು ಏಕಾನಂಥಾಕಿ….

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

11

ಮನಿಗೊಬ್ಬಾಕಿ  ಅಜ್ಜಿ ಏಕಾನಂಥಾಕಿ  ಬೇಕು.ನಮ್ಮ ಏಕಾನ  ಪ್ರತಿ ಕೆಲಸ ಅಥವಾ ಆಕೀದು ಯಾವುದೇ ವಿಷಯದ  ಬಗ್ಗೆ  ಮಾತಾಡಿದಾಗ  ಸಣ್ಣ ಕುಸುರಿ ನೇಯ್ಗಿ  ಕಣ್ಮುಂದ  ಬರ್ತದ. ಕುಸರಿ ಕೆಲಸಕ್ಕ ಅದೆಷ್ಟ  ತಲ್ಲೀನತಾ  ಬೇಕು;  ಅದೆಷ್ಟ ಹುರಪ ಬೇಕು! ಬೇಕಾಬಿಟ್ಟಿ  ಮಾಡೂಹಂಗs  ಇಲ್ಲ; ಅಗದೀ  ಎಚ್ಚರಕಿಂದ ಮಾಡೂ  ಕೆಲಸ  ಅದು. ಅದs  ಧಾಟಿಯೊಳಗ ಪ್ರತೀ ಕೆಲಸ  ನಮ್ಮ ಏಕಾಂದು. ಅದೇ ತಲ್ಲೀನತಾ, ಉಮ್ಮೇದಿ,  ಹುರುಪು  ಅಲ್ಲಿ , ಪ್ರತಿಯೊಂದು ವಿಷಯದಾಗ ಮೇಳೈಸಿರತಿತ್ತು.   ಅಗದೀ  ರಾಸ್ತ  ಆಗಿ ಮಾಡಿ  ಮುಗಸ್ತಿದ್ಲು. ಆಕಿ  ಕೆಲಸದ  ವಳಣನs ( ರೀತಿ ) ಹಂಗಿತ್ತು. ಮಕಮಲ್ಲಿನ   ಹಾಸಿನ ಹಿತಾ ಎದಿ ತುಂಬೂ ಹಂಗ;  ಒಂದು ಹಿತವಾದ ತಂದ್ರಿಯೊಳಗ  ಮುಳಗಸೂ  ಹಾಂಗ.

    ಅದs ರೀತಿ  ಆಕಿ ತನ್ನ ಜೀವನದ ಎಳಿ ಎಳಿ  ತಗದು  ತನ್ನ ಮಗ ಅಣ್ಣಾ ಸಾಹೇಬನ ಜೀವನದಾಗ  ಏಕಜೀವ  ಮಾಡಿ ಬಿಟ್ಲು.   ಅಣ್ಣಾ ಸಾಹೇಬನ ಭವಿಷ್ಯದ ವಿಚಾರ   ಬಿಟ್ಟು ಬ್ಯಾರೆ     ಅದರೇ  ಏನು ಅನೂ ಹಾಂಗನs  ಆಕೀ ವರ್ತುಣಕಾ  ಇದ್ರನೂ ಪ್ರತಿ  ವಿಷಯದಾಗೂ  ಏಕಾಗೀರೂ  ಆಸ್ಥೆ, ಆಸಕ್ತಿ  ಆಕಿನ್ನ ಅಷ್ಟಕ್ಕs  ಬಿಡಲಿಲ್ಲ; ಅಷ್ಟೇ ಚೌಕಟ್ಟಿನ್ಯಾಗ  ಇರಗೊಡಲಿಲ್ಲ ಆಕಿನ್ನ. ಹಿಂಗಾಗಿ  ಇಂಥಾದರ  ಬಗ್ಗೆ  ಏಕಾಗ  ಮಾಹಿತಿ ಇಲ್ಲ ಅಂಬೂ ಹಾಂಗ  ಇರಲಿಲ್ಲ. ಅದು  ನನಗ  ಒಂಥರಾ  ಅಗಾಧ ಅನಸ್ತದ, ಅದರಕಿಂತಾ ಹೆಚ್ಚು ಕೌತುಕ ಅನಸ್ತದ. ಆಕೀ ಆಟಪದೊಳಗ ಇದ್ದ ವಿಷಯಾದಾಗಿಂದು   ಒಂದು —  ತರಹೇವಾರಿ    ಮನಿಔಷಧಗಳು , ಆಗಿನ ಕಾಲಕ್ಕ ಅವುಗಳದು ಭಾಳ  ಅವಶ್ಯಕತಾ ಇತ್ತು. ಆದರ ಈಗೂ  ಇಷ್ಟೆಲ್ಲಾ  ಥಂಡಾ ಥಂಡ  ಔಷಧ ಇದ್ರನೂ ಅವೂ  ಬೇಕಾಗೂವೇ ಅನಸ್ತದ ನಂಗ.

ಹಂಗೊಮ್ಮೆ ನೋಡಿದ್ರ ಈ  ಘರಗುತಿ  ಔಷಧಿಗಳ  ಬಗ್ಗೆ  ರಗಡ  ಮಾಹಿತಿ ಇತ್ತು  ಏಕಾಗ. ಈಗ  ಮೆಡಿಕಲ್  ಸೌಲಭ್ಯಗಳು  ಭಾಳ  ಅವ; ಇಷ್ಟ  ಮುಂದುವರೆದ  ಈಗಿನ  ಪೀಢಿಗೆ ,  ಈ ಕಾಲದಾಗ  ಇದೆಲ್ಲಾ  ಅರ್ಥವಿಲ್ಲದ  ಕಥಿ  ಅನಸೀತು. ಆದರ  ಆಗ  ಪರಿಸ್ಥಿತಿ  ಹಂಗಿದ್ದಿಲ್ಲ. ಡಾಕ್ಟರ್  ಇಂಗ್ಲಿಷ್  ಔಷಧ  ಜೋಡಿ ಜೋಡೀನs ಘರಗುತಿ  ಔಷಧಗಳೂ ನಡದಿರತಿದ್ವು. ಅವಕೂ ಒಂದು ಮಹತ್ವದ  ಜಾಗ  ಇತ್ತು. ಹಿಂಗಾಗಿ ನಮ್ಮ ಏಕಾಗೂ  ಸಹಜವಾಗೀನ  ಅದರಾಗ ಆಸಕ್ತಿ ಇತ್ತು;  ಅಷ್ಟ  ಸಹಜನs  ಸಾಧಿಸ್ತು.

ನಮ್ಮ ಏಕಾನ  ಮನೀ  ಔಷಧ  ಭಾಳ  ಅಸರದಾರ  ಇರತಿದ್ವು. ಡಾಕ್ಟರ್ ಕೊಡೂ  ಔಷಧಿ ಬದ್ದಲ್  ಎಂದೂ ಎರಡ  ಮಾತ ಇರಲಿಲ್ಲ ಆಕೀ ಹತ್ರ ; ಅಷ್ಟು ವಿಶ್ವಾಸ. ಆದರ ಅದರ ಜೋಡೀನs ತನ್ನು ಛುಟುಪುಟು  ಮನಿ  ಔಷಧ ಮಾಡಾಕಿ. ಆಕಿ  ಅದರ ಬಗ್ಗೆ  ಹೇಳೂ  ಮಾತೂ  ಹಂಗs  ಇರೋದು -” ಅದೇನ  ಅಪಾಯ  ಅಲ್ಲಾ, ಉಪಾಯ  ಅಲ್ಲಾ. ತಗೊಂಡ ನೋಡ್ರಿ. ನಿಮಗೇ ತಿಳೀತದ, ಪಟಾಸ್ತದ” ಅನ್ನಾಕಿ. ಅದಕ ನಮ್ಮಣ್ಣ ಏಕಾನ್ನ ಕಾಡ್ತಿದ್ದ -” ಏಕಾ ಅದೇನ ಉಪಾಯ ಅಲ್ಲಾ  ಅಂದ್ರ ಅಷ್ಟ ತ್ರಾಸಬಟ್ಟ ಕೊಡ್ತೀ ಯಾಕ? “ಅನ್ನಾಂವಾ. ನಕ್ಕ ಬಿಡ್ತಿದ್ಲು ಏಕಾ.

ಏಕಾನ್ನ ನಾ ಭಾಳ ಹತ್ತರದಲೇ ಪರಖಿಸಿ ನೋಡೇನಿ. ಸೋಲ ಒಪ್ಪೂ ಗುಣಾ ಅಲ್ಲ ಆಕೀದು. ಗದ್ದಲ ಇಲ್ಲದೇ  ಸಾಧಿಸಿ ತೋರಸ್ತಿದ್ಲು ಅಗದೀ ಬರೋಬ್ಬರಿ ಅದ ತಾ ಹೇಳೂ ವಿಷಯ ಅಂತ. ಇದs  ಗುಣಾನೇ, ಹಿಡದದ್ದನ್ನ ಕೈ ಬಿಡದಂಥ  ಉಡದ ಹಿಡತದ ಗುಣಾನೇ ಆಕೀನ್ನ ವ್ಯವಸ್ಥಿತವಾಗಿ ಒಂದ ಹೊಂದ ಹಿಡದ ನಡಸಿ ಅಷ್ಟs ಛಂದ ಹಂಗ  ಪಾರಗಾಣಿಸ್ತು. ಆಕಿ ನಿಭಾಯಿಸೂ ರೀತಿನs ಹಂಗ ಇತ್ತು, ಅದಕs ಆಕಿ ನಮ್ಮಣ್ಣಗ ಅಷ್ಟs ಸಮಾಧಾನಲೇ  ಹೇಳಾಕಿ “ಆ ಔಷಧ ಉಪಾಯ  ಹೌದೋ ಅಲ್ಲೋ  ನೀನs  ಹೇಳಾಕ್ಯಂತ. ಈಗ ಮೊದಲ ತಗೋ” ಅಂದು ಮತ್ತ ಹೇಳ್ತಿದ್ಲು ; “ಒಟ್ಟ ಆರಾಮ ಆಗ್ರಿ; ಆರಾಮ ಇರ್ರಿ ಬಾಳಾ” ಅನ್ನಾಕಿ ಕಡೀಕ.

ನಮ್ಮ ಏಕಾನ ಮನಿ  ಔಷಧಿಗಳ  ಪಟ್ಟಿ  ಭಾಳ  ದೊಡ್ಡದಿತ್ತು. ಸ್ಟಲ್ಪದರಾಗ  ಬರೀತೀನಿ ಇಲ್ಲಿ.

ಏಕಾ ಕೆಮ್ಮಿಗೆ ಮಸ್ತ್ ಔಷಧ  ಕೊಡ್ತಿದ್ಲು. ಸಾಮಾನ್ಯ ಕೆಮ್ಮಿಗೆ ಜ್ಯೇಷ್ಠ ಮಧು ಪುಡಿ, ಜೇನುತುಪ್ಪ, ಚಿಟಿಕಿ  ಅರಿಶಿನ ಪುಡಿ ಕಲಸಿ ಕೊಟ್ಟು “ಇದನ  ನೆಕ್ಕಿ ಮ್ಯಾಲೆ ಅರ್ಧಾ ವಾಟಗಾ ಬಿಸಿ ನೀರು ಕುಡಿ. ಕೆಮ್ಮು ಗಕ್ಕನs ನಿಂದರತದ” ಅಂತ  ಹೇಳ್ತಿದ್ಲು; ಒಂಚೂರ ಕಫಾ ಹೆಚ್ಚು ಇತ್ತಂದ್ರ, ಒಂದ ಅರ್ಧಾ ಚಮಚ ಒಣಾಶುಂಠಿ ಪೌಡರನೂ ಅದರಾಗ ಕೂಡಿಸಿ ಕಲಿಸಿ ಕೊಟ್ಟು ಅದನ ನೆಕ್ಕಿ ಮ್ಯಾಲೆ ಅರ್ಧಾ ವಾಟಗಾ ಬಿಸಿ ನೀರು ಕುಡಿಲಿಕ್ಕೆ ಹೇಳಾಕಿ. ಭಾರೀ ಭರೋಸಮಂದ  ಔಷಧ  ಇದು. ಒಣಾ ಢಾಸ  ಹತ್ತಿಧಾಂಗ  ಕೆಮ್ಮು ಬರಲೀಕ್ಹತ್ತೆಂದ್ರ  “ನಿಂದ್ರ ನಿಂದ್ರ ಬಾಳಾ. ಈಗ ಕಡಿಮಿ ಆಗೇ ಹೋಗ್ತದ ನಿಂದ್ರ” ಅಂತ ಹೇಳಿ ಒಲಿ ಮ್ಯಾಲೆ  ಕಬ್ಬಿಣದ ಬುಟ್ಟಿ ಇಲ್ಲಾ ಹಂಚು ಇಟ್ಟು ಅದರಾಗ ಒಂದೆರಡ  ಚಮಚಾ  ಜೀರಿಗಿ  ಹಾಕಿ  ಅವು ಹೊತ್ತಿ  ಕರ್ರಗ  ಆಗೂ  ಹಂಗ ಹುರದು ತಗದು, ಆಮ್ಯಾಲೆ ಆ ಹೊತ್ತಿಸಿದ ಜೀರಿಗಿ, ಕೆಂಪ ಕಲ್ಲಸಕ್ರಿ(ಇದ್ರ ಭಾಳ ಛಲೋ) ಅಥವಾ  ಸಾದಾ ಕಲ್ಲಸಕ್ರಿ, ಚಿಟಿಕಿ  ಅರಿಶಿನ ಪುಡಿ ಹಾಕಿ  ದೊಡ್ಡ ವಾಟಗಾ ನೀರು  ಪೌಣ  ವಾಟಗಾ( ಮುಕ್ಕಾಲು) ಆಗೂ ತನಕಾ ಕುದಿಸಿ  ಸೋಸಿ ಎರಡು ಮೂರು ಬಾರಿ ಕುಡಸ್ತಿದ್ಲು. ಅಷ್ಟ್ರಾಗ ಆ  ಢಾಸ  ಮಾಯ  ಆಧಂಗನ  ಲೆಕ್ಕ!  “ಬಾಯಾಗ ಒಂಚೂರು ಜ್ಯೇಷ್ಠ ಮಧು ತುಂಡು, ಕಲ್ಲಸಕ್ರಿ ಇಟ್ಕೊಂಡ ಚೀಪ್ರಿ. ಒಣಾ ಕೆಮ್ಮ ಬಿಟ್ಟೂ ಬಿಡಧಾಂಗ ಬರೂದು ಗಪ್ಪ ಗಾರ ಆಗ್ತದ” ಅಂತ ಹೇಳ್ತಿದ್ಲು.

ಇವೆಲ್ಲಾ ಅಂತೂ ಆತು ; ಹಾಸಿಗ್ಗೆ ತಲಿ‌ ಇಡೂದೊಂದೇ ತಡಾ  ಖೊಸ್ ಖೊಸ್ ಕೆಮ್ಮು ಬರೋದು; ಒಮ್ಮೊಮ್ಮೆ  ಪೂರಾ ಗಂಟಲಾ ಕೆದರಿ, ಅದು ಹರದ ಹೋಗೋಹಂಗ ರುದ್ರರೂಪಿ ಕೆಮ್ಮು ಬರಲೀಕ್ಹತ್ತೆಂದ್ರ ಪಟ್ಟನ ಹೇಳ್ತಿದ್ಲ ಆಕಿ

“ಅಯ್ಯ, ನಕ್ಕಿ ಕಿರನಾಲಿಗಿ  ಬಿದ್ದದ  ನೋಡ” ‌‌ಅಂತ ಹೇಳಿ, ಒಂಚೂರು ಪುಡಿ  ಉಪ್ಪು, ಅರಿಶಿನ ಪುಡಿ ತಗೋಂಡು  ಬಲಗೈ ಹೆಬ್ಬೆರಳಿನಿಂದ ಆ ಉಪ್ಪು ಅರಿಶಿನ ಪುಡೀಲೆ ಗಂಟಲಿನ  ಕಿರನಾಲಿಗಿ ಒತ್ತೂದು  ಅದೂ ಒಂದು ಅದರದೇ ಆದ  ವಿಶಿಷ್ಟ ರೀತೀಲೆ. ಆಮ್ಯಾಲೆ ನೆತ್ತಿ  ಮ್ಯಾಲೆ  ಸ್ವಲ್ಪ ಸಾಸಿವೆ, ಔಡಲ ಎಣ್ಣೆ ಒತ್ತಿದರೆ ಆತು; ಎರಡೇ ಎರಡು ಸರ್ತೆ ಕಿರನಾಲಿಗಿ ಒತ್ತೂದ್ರಾಗ ಯಾವ ಔಷಧಕ್ಕೂ  ಹಣೀದ ಕೆಮ್ಮು ಇಳಿಥರಕ್ಕ ಬೀಳ್ತಿದ್ದದ್ದಂತೂ  ಖರೇ.

ಇನ್ನ  ಖೊಂಯ್ಯ್, ಖೊಂಯ್ಯ್  ಅಂತ ಕೆಮ್ಮಿ ಕೆಮ್ಮಿ ಮೂಗು ಮಾರಿ  ಕೆಂಪಾಗೂದು, ಒಮ್ಮೊಮ್ಮೆ  ವಾಂತಿ ಆಗೂದು  ಸುರು ಆತಂದ್ರ  ” ಅಯ್ಯ, ಇದ ಸುಡಗಾಡ   ಖ್ವಾಡಿಗ್ಗೆಮ್ಮ ನೋಡ.” ಅಂತ  ಅನಕೋತ  ಜ್ಯೇಷ್ಠ ಮಧು, ಸುಂಠಿ, ಮೆಣಸು, ಕಲ್ಲಸಕ್ರಿ ಒಂದೆರಡs ಗೌತಿಚಹಾದ  ತೊಪ್ಪಲಾ ಹಾಕಿ  ಕಾಢೆ  ಮಾಡಿ  ಕುಡಸ್ತಿದ್ಲು. ಅಗಸಿ(flaxseed) ಅರದು ಒಂದ ಅರಿವಿ ಪೊಟ್ಣಾ ಮಾಡಿ  ಬಿಸಿ ಹಂಚಿನ್ಯಾಗ  ಛಂದಂಗ  ಬಿಸಿ ಬಿಸಿ ಮಾಡಿ ಎದಿ, ಬೆನ್ನು, ಮೂಗು ಮಾರಿ ಎಲ್ಲಾ ಹಿತಾ ಅನಸೂ ಹಂಗ ಕಾಸಿದ ಕೂಡಲೇ ಕಫಾ  ಸಡಲಾಧಂಗಾಗ್ತಿತ್ತು; ಹಗರ ಆಗ್ತಿತ್ತು. ಆದರೂ ಏಕಾ  ಮತ್ತ ನಕ್ಕಿ ಹೇಳಾಕಿನೇ – “ಇದಕ ಡಾಕ್ಟರ್  ಔಷಧ  ಬೀಳಲಿಕ್ಕನ  ಬೇಕವಾ. ಈ ಕೆಮ್ಮು ಬಲೆ ಖೋಡಿ; ಅದನ ಅದರ ಹೆಸರೇ ಹೇಳ್ತದ ನೋಡ” ಅಂತಿದ್ಲು. ಆವಾಗೆಲ್ಲ DPT ವ್ಯಾಕ್ಸಿನೇಷನ್  ಇರಲಿಲ್ಲ ಇನ್ನೂ. ಆದರ  ನಾ ಅಗದೀ  ಮನಸ  ಮೋಕಳೀಕ  ಬಿಟ್ಟ ಹೇಳ್ತೀನಲಾ, ನಮ್ಮ ಏಕಾನ  ಕೆಮ್ಮಿನ  ಔಷಧ  ಜವಾಬಿಲ್ಲದ್ದು! ಅಂಧಾಂಗ  ಇಲ್ಲಿ ಹೇಳಿದ  ಅಗಸಿ ಅರೆದು ಕಾಸೋದು ಎಲ್ಲಾ ಥರದ  ಕೆಮ್ಮ ಬಂದಾಗ, ಎದಿ ಗಚ್ಚ ಆದಾಗ  ಭಾಳ ಉಪಯೋಗಕ್ಕ ಬರೂ ಅಂಥಾ ಉಪಾಯ. 

ಈ  ಕೆಮ್ಮಿನ ಔಷಧ  ಜೋಡೀನ  ನೆಗಡಿಗೂ ಆಕೀದ  ಒಂದು  ವಿಶೇಷ  ಔಷಧ  ಇತ್ತು. ನೆಗಡಿಗೆ ಮೂಗ  ಕಟ್ಟಿ  ಉಸರಾಡಸಲಿಕ್ಕೆ ತ್ರಾಸ  ಆಗಿ  ಹಲಾಕ  ಆದ  ಜೀವಕ್ಕ ಏಕದಂ  ಆರಾಮ , ಹಿತಾ ಅನಸೂ  ಉಪಚಾರ  ಅದು. ಶೇಗಡಿಯೊಳಗಿನ  ಸಣ್ಣ  ಕೆಂಡದ  ಮ್ಯಾಲೆ  ಚಿಟಿಕಿ  ಅರಿಶಿನ ಪುಡಿ  ಉದುರಿಸಿ,  ನಮ್ಮ ತಲಿ  ಹಗsರಕ  ಅದರ ಮ್ಯಾಲೆ  ಬಗ್ಗಿಸಿ  ಆ  ಹೊಗಿ  ಎಳಕೋಳಿಕ್ಕೆ ಹೇಳ್ತಿದ್ಲು.  ಒಂದೆರಡ ಸರ್ತಿ ಆ  ಹೊಗಿ ಎಳಕೊಳೂದ್ರಾಗ  ಛಟಾ ಛಟಾ  ಸೀನ ಬಂದು ಕಟ್ಟಿದ್ದ ಮೂಗ ಸಡ್ಲಾಗಿ ತಲಿ  ಹಗರಾಗಿ ಆರಾಮ ಅನಸೂದು. ಇನ್ಹೇಲೇಷನ್ ದ  ಅಸಲಿ ರೂಪ ಇದು ಏನೋ ಅನಸ್ತದ ನನಗ. ಹಂಗs  ಅರಿಶಿನ ಪುಡಿ  antibiotics ಥರಾ  ಕೆಲಸಾ ಮಾಡ್ತದ ಅನೂ ಕಲ್ಪನಾನೂ  ಇತ್ತು ಅನಕೋತೀನಿ.

ನಮ್ಮ ಏಕಾಂದು ಒಂದು ವಿಶಿಷ್ಟ ಗುಣಾ  ಅಂದ್ರ  ಪಟ್ಟನ  ಬದಲಾಗೂ  ವಾತಾವರಣಕ್ಕ ಸರಳ  ಹೊಂದಿಕೊಂಡ ಬಿಡೋದು; ಆ ದಿಕ್ಕಿನ್ಯಾಗ  ಹೊಸಾ ಹಾದಿ  ತನ್ನ ಹಾದಿಗೆ ಹೊಂದೂಹಾಂಗ  ಹುಡಕಿ  ಒಪ್ಕೊಂಡ ಬಿಡೂದು. ನಂದು ಮದವ್ಯಾಗಿ  ಮಕ್ಕಳು ಮರಿ ಅಂತ  ಆದ ಮ್ಯಾಲೆ  ನಾ  ಏಕಾಗ ಕೇಳ್ದೆ ” ಏಕಾ ನಿನ್ನ  ನೆಗಡಿ ಔಷಧಕ್ಕ  ನಾ  ಶೇಗಡಿ ಎಲ್ಲಿಂದ  ತರಲಿ”  ಅಂದಾಗ  ಒಂದೇ ಒಂದು ಸೆಕೆಂಡ್ ಕೂಡ  ಯೋಚಿಸದೇ  ಹೇಳೇಬಿಟ್ಲು  ನಮ್ಮ ಏಕಾ –

” ಅಯ್ಯs  ಅಕ್ಕವ್ವಾ ಅದೇನ  ಅಂಥಾ ದೊಡ್ಡ  ಮಾತsವಾ. ನೀ  ಅಡಿಗಿ  ಮಾಡೋ ಸ್ಟೌ  ಮ್ಯಾಲೆ ಭಕ್ರಿ ಚಪಾತಿ  ಮಾಡೂ  ಹಂಚ ಛಲೋತ್ನಾಗಿ  ಕಾಸಿ  ಅದರ ಮ್ಯಾಲೆ ಚಿಟಿಕಿ  ಅರಿಶಿನ ಪುಡಿ ಉದರಿಸಿದ್ರ ಆತವಾ. ಆ  ಹೊಗಿ  ಎಳಕೊಳೂದು. ಅಷ್ಟs!‌” ಅಂತ  ಸರಳ  ಹೇಳಿದ್ಲು. ಇದು ಅಂಥಾ ದೊಡ್ಡ  ವಿಷಯ ಖಂಡಿತಾ ಅಲ್ಲ. ಆದರ ಆಕಿ ವಿಷಯಗಳನ್ನ  ಎಷ್ಟ ಸಹಜಾ ಸಹಜೀ  ಸರಳ ಮಾಡಿ ಬಿಡ್ತಿದ್ಲು ಅಂತ  ತೋರಸ್ತದ ಇದು. ನಮ್ಮ ಏಕಾನ ಇಂಥ  ಮನೋಧರ್ಮ ನಮ್ಮ ಅಣ್ಣಾಗ ಅವರ  ಜೀವನದಾಗ  ಕೆಲವೊಂದು ಗಡಚ ವಿಷಯಗಳ ನಿರ್ಧಾರಕ್ಕ ಭಾಳ  ಸಹಾಯಕ  ಆಗ್ತಿತ್ತು. 

ಏಕಾಂದ  ಒಂದ ಮಾತ ಹೇಳಲಿಕ್ಕ ಹೊಂಟರ ಇನ್ನೊಂದು ವಿಷಯ ಎದ್ದ ಬರ್ತದ. ಹಿಂಗಾಗಿ ಆ ಔಷಧಗಳದು  ಅಲ್ಲೇ  ಉಳೀತು. ಸಾಮಾನ್ಯವಾಗಿ ಹಗಲೆಲ್ಲಾ ಕಾಡೂ ಇನ್ನೊಂದ ತಕರಾರ ಅಂದ್ರ ಹೊಟ್ಟೀದು. ಆ ಹೊಟ್ಟೀದ ಯಾವದs ತಕರಾರ ಇದ್ರೂ ಅದರ ಪರಿಹಾರಕ್ಕ ನಮ್ಮ ಏಕಾನ  ಔಷಧ, ಉಪಚಾರ ಭಾರೀ ಖಾಸ ಇರ್ತಿದ್ದು.

ಹೊಟ್ಟಿ ನೋವಿಗೆ ಅಜವಾನ  ಮುಕ್ಕಿ ನೀರು ಕುಡಿಯೋದು, ಅಜವಾನ, ಜೀರಿಗೆ, ಕರಿಬೇವು, ಇಂಗು ಹಾಕಿ ಕುದಿಸಿ ಸೋಸಿ ಅದಕ್ಕೊಂಚೂರು ನಿಂಬಿಹಣ್ಣಿನ ರಸಾ, ಒಂಚೂರು ಸೈಂದಲವಣ , ಪಾದೇ ಲವಣ ಹಾಕಿ ಕುಡಿಲಿಕ್ಕ ಕೊಡ್ತಿದ್ಲು. ಹಂಗs ಅಲ್ಲಾ(ಹಸಿ ಶುಂಠಿ)  ಹೆರದು ಅದಕೆ ಸಾದೇಲವಣ (ಸೈಂದಲವಣ), ಪಾದೇಲವಣ ( ಬಿಳಿ ಸ್ಪಟಿಕದಂತಹದೇ ಒಂದು ಲವಣ) ಹಾಕಿ ಅದಕ್ಕೆ ಒಂದು ಚೂರು ಇಂಗು ಕೂಡಿಸಿ ನಿಂಬೆಹಣ್ಣಿನ  ರಸ ಹಿಂಡಿ  ಪಾಚಕ  ಅಂತ  ಮಾಡಿ  ಇಟ್ಟಿರತಿದ್ಲು.  ಅದನ್ನ ಒಂದು ಅರ್ಧ ಚಮಚದಷ್ಟು ತಿಂದ ಬಿಟ್ರೆ ಎಂಥದೇ ಹೊಟ್ಟೆ ನೋವಿದ್ರೂ ಒಂದ  ಗಳಿಗ್ಯಾಗ ನಿಂತ ಬಿಡೋದು. ಅಸಿಡಿಟಿಗೂ  ಇದು ರಾಮಬಾಣ. ಪಾಚಕ ನಾ ಕಾಯಂ  ಇಟ್ಟಿರತೀನಿ ಮನ್ಯಾಗ. ಖರೇನ ನಮ್ಮ ಏಕಾ ಹೇಳೋ ಹಂಗ ಅಪಾಯ ಅಂತೂ ಇಲ್ಲ; ಉಪಾಯ ನಕ್ಕಿ ಅದ.

ಇನ್ನ ಆಂವಶೌಚಕ್ಕ  ಮೆಂಥ್ಯ ಮೊಸರು  ಕಲಸಿ ಒಂದ ಚಮಚದಷ್ಟು ತಿಂದು ಬಿಸಿ ನೀರು ಕುಡೀರಿ ಅಂತ  ಹೇಳಾಕಿ. ಹಂಗs ಭೇದಿ  ಆಗ್ತಿದ್ರ  ಸಾಸಿವೆ ಮುಕ್ಕಿ ನೀರು  ಕುಡೀರಿ ಅಂತಿದ್ಲು. ಬಿಸಿ  ಅನ್ನಕ್ಕ ಇಂಗು, ಮೆಂಥ್ಯ,  ತುಪ್ಪದ  ಒಗ್ಗರಣೆ ಮಾಡಿ  ಹಾಕಿ  ಮೊದಲು  ಮೂರು ತುತ್ತು ಬರೀ ಅದನ್ನಷ್ಟೇ  ತಿನ್ನಲಿಕ್ಕ ಹೇಳಿ  ಆ ಮ್ಯಾಲೆ ಒಂಚೂರು ಮೆತ್ತಗಿನ  ಅನ್ನ ತುಪ್ಪ, ಸಪ್ಪಗಿನ ತೊವ್ವೆ ತಿನ್ರಿ  ಅನ್ನಾಕಿ. 

ಇನ್ನ  ಶೌಚಕ್ಕ ಸಾಫ್  ಆಗದೇ  ಹೊಟ್ಟೆ ನೋವಿದ್ರೂ  ಆಕೀದು  ಸರಳ  ಔಷಧ ಇತ್ತು. ಪಕ್ಕಾ ಉಪಾಯ  ಅದು. ಒಂದ  ವಾಟಗಾ ಬಿಸಿ ನೀರಾಗ  ಒಂದು ಅರ್ಧ ಚಮಚ  ಗಟ್ಟಿ  ತುಪ್ಪಾ ಹಾಕಿ  ಕುಡದ್ರ  ಹೊಟ್ಟಿ ಸಾಫ್  ಆಗಿ  ಹೊಟ್ಟಿ ನೋವು  ಕಡಿಮಿ  ಆಗೂದು.

 ಇವ್ಯಾವೂ  ಇಲ್ಲದೇ  ಬರೀ  ಹೊಟ್ಟೆ ನೋವು ಅದೂ  ಹೊಕ್ಕುಳ ಸುತ್ತಾ  ಇತ್ತಂದ್ರ ಕೇಳಾಕಿ- 

“ಯಾಕ  ಏನರೇ  ಒಜ್ಜಾ  ಎತ್ತೀ  ಏನು? ಬಟ್ಟಿ  ಸರದಿರಬೇಕು” ಅಂತ ಹೇಳಿ  ಬಟ್ಟಿ  ತಿಕ್ಕತಿದ್ಲು. ಹೊಟ್ಟಿ ನೋವು ಗಪ್ಪಗಾರ. ಆಕೀ  ಔಷಧ ಎಲ್ಲಾ ಹೆಚ್ಚು ಕಡಿಮಿ  ಕರಗತ  ಆಗ್ಯಾವ  ನಂಗ. ಆದರೆ ಈ  ಬಟ್ಟಿ ತಿಕ್ಕೂದ  ಮಾತ್ರ  ಜಮಾಸಿಲ್ಲ ನಂಗ.

ಪಿತ್ತ, ಅಮಲ ಪಿತ್ತಕ್ಕನೂ  ಔಷಧ  ಬಾರಾಮಹಿನಾ, ಚೋವೀಸ ಘಂಟಾ ತಯಾರೇ. ( ಹನ್ನೆರಡೂ ತಿಂಗಳು, ದಿನದ  24 ತಾಸೂ) ಝಕಾಸ್   ಮೋರಳ , ಒಂದ  ವರ್ಷಕ್ಕ ಸಾಲೂ ಅಷ್ಟು ಭರಣಿಯೊಳಗ  ಕೂತs  ಇರ್ತಿತ್ತು ತಯಾರಾಗಿ.(ಮುರಾವಳ – ಮುರಲೇಲಾ ಆವಳ – ಅಂದ್ರ ಸಕ್ಕರಿ ಪಾಕದಾಗ  ಬೇಯ್ದು, ಅದರಾಗನೇ ನೆನೆದು ತಯಾರಾದದ್ದು – ಅದರ ಆಡುಮಾತಿನ ರೂಪ ಮೊರೋಳ). ಏಕಾ ಅದನ್ನ ಬೆಟ್ಟದ ನೆಲ್ಲಿಕಾಯಿ ಸುಗ್ಗಿ ಒಳಗ  ಮಾಡೇ  ಇಟ್ಟ ಬಿಡ್ತಿದ್ಲು. ಈಗಿನ ಹಂಗ ಆಗ  ನೆಲ್ಲಿಕಾಯಿ  ಯಾವಾಗಲೂ ಸಿಗ್ತಿದ್ದಿಲ್ಲ. ಮತ್ತ ಅದನ ಮಾಡೂದೂ  ಒಂಚೂರ  ಗಿಂಜ  ಕೆಲಸಾನೇ. ಅಗದೀ  ಸಂಕ್ಷಿಪ್ತದಾಗ  ಮೊರೋಳ  ಹೆಂಗ  ಮಾಡ್ತಿದ್ಲು  ನಮ್ಮ ಏಕಾ ಅದನ ಹೇಳ್ತೀನಿ- ನೆಲ್ಲಿಕಾಯಿ ಸುಗ್ಗಿಯೊಳಗ  ಇದ್ದದ್ರಾಗ  ಒಂಚೂರ ದೊಡ್ಡ  ನೆಲ್ಲಿಕಾಯಿ  ಆರಿಸಿ ಇಟಕೋತಿದ್ಲು. ಆಗೆಲ್ಲಾ ಈಗ ಬರೂ ಅಂಥಾ ದೊಡ್ಡ ಸೈಜಿನ ನೆಲ್ಲಿಕಾಯಿ ನಮ್ಮ ಕಡೆ ಸಿಗ್ತಿದ್ದಿಲ್ಲ. ಜವಾರಿ ಕಾಯಿ ಸ್ವಲ್ಪ ಸೈಜು ಸಣ್ಣದು,  ಅದಕs ಅದರಾಗನ  ದೊಡ್ಡವು ಬಲತದ್ದು ತಗೊಂಡು ಅವನ್ನ ಸ್ವಚ್ಛಂಗ  ತೊಳದು ಒರೆಸಿ  ಇಟ್ಕೊಂಡ  ಮ್ಯಾಲೆ ನೆಲ್ಲಿಕಾಯಿ  ಚುಚ್ಚು ಸಾಧನದಿಂದ  ಒಂದೊಂದೇ  ನೆಲ್ಲಿಕಾಯಿ ರಸಾ ಆಡೂಹಂಗ ಛಂಧಂಗ  ಚುಚ್ಚಿ ಇಟ್ಕೋತಿದ್ಲು. ನಮ್ಮದು ವೆಜಿಟೇಬಲ್ ಪೀಲರ್  ಇರತದಲಾ  ಆ  ಥರದ್ದೇ  ಆ  ಸಾಧನ; ಅದರಗತೇನ  ಕಟ್ಟಿಗಿ  ಹಿಡಿಕಿ  ಇದ್ದು ಅದಕ  ಮುಂದ  ಈಗಿನ ಫೋರ್ಕ್ ಗ  ಇರೂ ಹಾಂಗ ಚೂಪ ಮುಳ್ಳ ಮುಳ್ಳ ಇರತಿದ್ದು. ಅದರಲೇ  ಚುಚ್ಚಿ ತಯಾರ ಮಾಡಿದ  ನೆಲ್ಲಿಕಾಯಿಗಳನ  ಸಕ್ರಿ ಪಕ್ಕಾ ಪಾಕ  ಮಾಡಿ ಅದರಾಗ  ಹಾಕಿ  ಕುದಸೂದು. ನೆಲ್ಲಿಕಾಯಿ ಹಾಕಿದ ಮ್ಯಾಲೆ  ಪಾಕ  ಮತ್ತ ಚೂರ  ಇಳಿ  ಆಗ್ತದ. ಅದನ  ಮತ್ತ ತಿರಗಿ  ಪಕ್ಕಾ ಪಾಕ ಆಗೂ ಹಂಗ ಕುದಿಸಬೇಕು.  ಕುದಿಯೂ  ಮುಂದ  ಅದರಾಗ  ಲವಂಗ ಹಾಕಿ , ಪಾಕ  ಪಕ್ಕಾ ಆದ ಮ್ಯಾಲೆ ಕೇಶರ, ಸ್ವಲ್ಪ  ಯಾಲಕ್ಕಿ ಪುಡಿ ಹಾಕಿ  ಕೆಳಗಿಳಿಸಿ ತಣ್ಣಗಾದ ಕೂಡಲೇ  ಭರಣಿಯೊಳಗ ಹಾಕಿ  ಗಟ್ಟಿ ಬಾಯಿ  ಮುಚ್ಚಿ ಕಟ್ಟಿ ಇಡಬೇಕು. ಒಂದೆರಡ ದಿನದಾಗ  ಪಾಕ  ನೆಲ್ಲಿಕಾಯಿ ಒಳಗ  ಸೇರಿ ಮಸ್ತ್ ರಸದಾರ  ಮೋರಳ  ತಯಾರ! ಔಷಧಂತೂ  ಹೌದು; ಹಂಗs  ಬಟ್ಟಲದಾಗ  ಹಾಕೊಂಡ  ತಿನಲಿಕ್ಕೂ  ಭಾಳ ರುಚಿ.

ಈ  ಮೋರಳನ  ನೆಲ್ಲಿಕಾಯಿ  ಹೆರದೂ  ಮಾಡ್ತಾರ. ಆದ್ರ ಪಿತ್ತಕ್ಕ  ಭರೋಸಮಂದ  ಔಷಧ  ಅಂದ್ರ ಇಡೀ ನೆಲ್ಲಿಕಾಯಿ  ಮೋರೋಳ  ಆಂಬೂದು  ಏಕಾನ  ಅಂಬೋಣ.  ಪಿತ್ತಕ್ಕ  ಈ  ಮೋರೋಳ  ಅಲ್ಲದs  ಇನ್ನೊಂದು ಅಗದೀ  ಶಂಭರ್ ಟಕ್ಕೆ ಖಾತ್ರಿ  ಔಷಧ  ಒಂದು  ಏಕಾನ  ಕಡೆ  ಇತ್ತು. ಹಣ್ಣಾದ  ಹಳದೀ ಬಣ್ಣದ  ನಿಂಬೆ ಹಣ್ಣು  ಹೆಚ್ಚಿ  ಆ  ಹೊಳಿಕಿಗಳನ  ಶೇಗಡಿಯೊಳಗ  ಸಣ್ಣ ಕೆಂಡದ ಮೇಲೆ  ಇಟ್ಟು, ಅದರ  ಮೇಲೆ  ಅಂದ್ರ  ಅದರ  ಕುಸುಮಗಳ  ಮೇಲೆ  ಛಂಧಾಂಗಿ  ಸಕ್ಕರೆ ಉದುರಿಸ ಬೇಕು. ಆ  ಮಂದ  ಕಾವಿಗೆ   ಸಕ್ರಿ ಕೆಂಪಾಗಿ, ಕರಗಿ  ಸಣ್ಣಹಾಂಗ  ಕುದ್ದು  ಜೇನುತುಪ್ಪಧಾಂಗ  ಆತ ಆತು  ಅನೂದ್ರಾಗ  ಅದನ ತಗದು  ಚೂರು ಆರಿಸಿ   ಕೂಡಲೇ  ಅದನ  ನೆಕ್ಕಿ ಆಮ್ಯಾಲೆ  ಅದರ  ರಸಾ ಕುಡದಬಿಡ ಬೇಕು. ಅದರಾಗ ಸಕ್ರಿ  ಮುರೋಸಿ  ಮಸ್ತ್ ಆಗಿರೋದು. ಪಿತ್ತಕ್ಕ  ಒಳ್ಳೇ ಔಷಧಂತೂ  ಹೌದೇ ಹೌದು. ಇವೆಲ್ಲಾ ಈಗ ನನ್ನ  ತಿಜೋರಿಯೊಳಗ ಏಕದಂ ಭದ್ರ ಅವ; ಹಂಗs ಬೇಕಂದಾಗ  ಛಲೋ  ಉಪಯೋಗ  ಆಗ್ತಾವ.   ನಮ್ಮ ಏಕಾ  ಆಗ ನಂಗ  ನಕ್ಕೋತ  ಕೇಳಿಧಂಗ ಅನಸ್ತದ ” ಅಕ್ಕವ್ವಾ, ಗಂಡನs  ಡಾಕ್ಟರ್  ಇದ್ರೂ  ಏಕಾನ ಔಷಧ  ಬೇಕೇನ  ನಿನಗ” ಅಂತ. 

ನಮ್ಮ ಏಕಾನ  ಔಷಧ  ಭಂಡಾರ  ಹೇಳೂ  ಸೋಯಿ   ಇಲ್ಲದಷ್ಟ ದೊಡ್ಡದಿತ್ತು. ಅಗದೀ  ಉಪಯೋಗಿ,  ತಾಜಾ ಮಾಹಿತಿ  ಆಕಿ ಕಡೆ  ಸಿಗ್ತಿತ್ತು ಮತ್ತ ಎಲ್ಲಾ  ದೂಸ್ರಾ  ಮಾತಿಲ್ಲದಷ್ಟ  ಖಾತ್ರಿ ಇದ್ದು. ಖರೆ  ಎಂದೂ  ಈ  ಔಷಧಗಳನಷ್ಟೇ ಕೊಟ್ಟು ಕೂಡಸ್ತಿದ್ದಿಲ್ಲ ಆಕಿ. ಡಾಕ್ಟರ್ ಔಷಧನೂ ಬೇಕು ಅನ್ನಾಕಿ. ಆದರ  ನಾ ಈ ಘರಗುತಿ  ಅಂದ್ರ ಮನಿಔಷಧಗಳೂ  ಭಾಳ  ಪರಿಣಾಮಕಾರಿ  ಇರತಾವ  ಅಂಬೂದಕ  ಇಲ್ಲಾ ಅನಾಂಗಿಲ್ಲ.

ನಮ್ಮ ಏಕಾನ  ಒಂದೊಂದೇ  ಬಾಜು  ಉಲಗಡಾ  ಮಾಡಕೋತ  ಹೋಧಂಗ  ಒಂದೊಂದು  ಅಮೂಲ್ಯ ಖಜಾನಾ  ಸಿಗ್ತದ ಅಲ್ಲಿ. ಅದಕs  ಅಗದೀ  ಎದಿಯಾಳದಿಂದ  ಬರತದ ಈ  ಮಾತು  ನನಗ ಯಾವಾಗಲೂ; ನಮ್ಮ ಪುಣ್ಯಾ ಜಾಡ. ಇತ್ತಂತನs‌   ನಾವು ಏಕಾನ ನೆರಳಿನ್ಯಾಗ ಆಡಿ, ಓಡಿ, ಕಲತು  ಬೆಳದ್ವಿ. ಪ್ರತಿಯೊಬ್ಬರ  ಕಡೆಯಿಂದಲೂ  ಸೈ  ಅನಸ್ಕೊಂಡ ಜೀವ ಅದು; ಇದ್ರ ಹಿಂಗ ಇರಬೇಕು ಅನ್ನೂ ಹಂಗ  ಇದ್ಲು ಆಕಿ.

ಹೌದು  ಹಂಗ  ಇದ್ಲು  ನಮ್ಮ ಏಕಾ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ramesh pattan

    ಏಕಾ ಅಮ್ಮಾ ಅವರಿಗೆ ಮನೆ ಔಷಧಿಗಳ ಬಗ್ಗೆ ಇದ್ದ ಜ್ಞಾನ
    ಮತ್ತು ಔಷಧಿಗಳ ತಯಾರಿ ಬಗ್ಗೆ ಇದ್ದ ಆಸಕ್ತಿ ಅಚ್ಚರಿಗೊಳಿಸುತ್ತದೆ.
    ಈ ಸ್ಥಳಜನ್ಯ ಜ್ಞಾನ ಇಂದು ಮರೆಯಾಗುತ್ತಿದೆ
    ಎಂದು ವಿಷಾದದಿಂದ ಹೇಳಬೇಕಾಗಿದೆ.
    ಮೇಡಂ ಅವರೇ,ತಾವು ಈ ಅಂಕಣ ಬರಹದಲ್ಲಿ ಬಳಸುತ್ತಿರುವ
    ಉತ್ತರ ಕನರ್ಾಟಕದ ಅಪ್ಪಟ ದೇಸಿ ಶಬ್ದಗಳು
    ಮುದ ನೀಡುತ್ತಿವೆ.ನಮ್ಮ ತಾಯಿ ಸಹ ಇಂತಹ
    ಶಬ್ದಗಳನ್ನು ಬಳಸುತ್ತಿರುತ್ತಾರೆ.
    ರಮೇಶ ಪಟ್ಟಣ. kalburgi

    ಪ್ರತಿಕ್ರಿಯೆ
    • Sarojini Padasalgi

      ನಿಜ ರಮೇಶ ಸರ್ ಅವರೇ. ನೀವು ಆಸಕ್ತಿಯಿಂದ ಓದುವುದು ತುಂಬ ಖುಷಿ ತರತಿದೆ. ನಮ್ಮ ಉತ್ತರ ಕರ್ನಾಟಕದ ಭಾಷೆಯ ಸೊಗಡೇ ಹಂಗ; ಅಗದೀ ಆಪ್ತ ಅನಸೂ ಹಂಗ. ನಿಮ್ಮ ಅಮ್ಮನೂ ಓದ್ತಾರಾ ಈ ಅಂಕಣ?
      ತುಂಬ ಧನ್ಯವಾದಗಳು ಸರ್.ಈ ಅವಕಾಶ ನೀಡಿದ ಅವಧಿಗೆ ಅನೇಕ ಧನ್ಯವಾದಗಳು.

      ಪ್ರತಿಕ್ರಿಯೆ
      • ramesh pattan

        ಮೇಡಂ ಅವರೇ,70 ವರ್ಷ ದಾಟಿರುವ
        ನಮ್ಮ ತಾಯಿ ಅವರು ಕನ್ನಡ 7 ನೆಯ ತರಗತಿವರೆಗೆ
        ಕಲಿತಿದ್ದಾರೆ.ಮೊದಲೆಲ್ಲ ಕನ್ನಡ ಕಾದಂಬರಿ ಓದುತ್ತಿದ್ದರು.
        ಈಗ ಓದುವದನ್ನು ಬಿಟ್ಟು ಬಿಟ್ಟಿದ್ದಾರೆ.
        ನಾನೇ ಅವರಿಗೆ ಮೊಬೈಲ್ ಮೂಲಕ
        ಓದಿ ಹೇಳುತ್ತೇನೆ.
        ತಮ್ಮ ಈ ಅಂಕಣವನ್ನು ಆರಂಭದಿಂದಲೂ ಓದಿ ಹೇಳುತ್ತಿದ್ದೇನೆ.
        ತುಂಬಾ ಆಸಕ್ತಿಯಿಂದ ಕೇಳುತ್ತಾರೆ.ಕೆಲವು ಶಬ್ದಗಳ ಅರ್ಥವನ್ನು ಅವರೇ ಹೇಳುತ್ತಾರೆ
        ಅಂಕಣ ಓದುತ್ತಿದ್ದಾಗ ಭಾವನಾತ್ಮಕ ಸಾಲುಗಳು ಬಂದಾಗ
        ಮೌನವಾಗಿ ಕಣ್ಣೀರು ಹಾಕುತ್ತಾರೆ.
        ರಮೇಶಾ ” ಅಮ್ಮಾವರ ( ಏಕಾ ಅಮ್ಮನವರು) ಬಗ್ಗೆ
        ಹೊಸದಾಗಿ ಬರೆದದ್ದು ಓದಿ ಹೇಳೋ ” ಅನ್ನುತ್ತಾರೆ.
        ರಮೇಶ ಪಟ್ಟಣ.
        ಕಲಬುರ್ಗಿ

        ಪ್ರತಿಕ್ರಿಯೆ
        • Sarojini Padasalgi

          ರಮೇಶ ಸರ್ ನನ್ನ ಅನಂತ ಧನ್ಯವಾದಗಳು, ನಮಸ್ಕಾರಗಳನ್ನು ನಿಮ್ಮ ತಾಯಿಯವರಿಗೆ ದಯವಿಟ್ಟು ತಿಳಿಸಿ. ಅವರ ಆಸಕ್ತಿ ಕೆರಳಿಸಿದೆ ನನ್ನ ಬರಹ ಅಂದರೆ ನಮ್ಮ ಏಕಾನ ವ್ಯಕ್ತಿತ್ವವೇ ಕಾರಣ ಅದಕ್ಕೆ. ಇನ್ನೊಮ್ಮೆ ನಮಸ್ಕಾರ ನಿಮ್ಮ ತಾಯಿಯವರಿಗೆ.ಓದಿ ಹೇಳುತ್ತಿರುವ ನಿಮಗೆ ಧನ್ಯವಾದಗಳು ಸರ್.

          ಪ್ರತಿಕ್ರಿಯೆ
        • Shrivatsa Desai

          ಮನ ತಟ್ಟಿತು ರಮೇಶ್ ಅವರೇ. ಈ ಅಂಕಣವನ್ನು ಇಂಗ್ಲೆಂಡಿನಲ್ಲಿ ಕುಳಿತು ಪ್ರತಿವಾರ ತಪ್ಪದೇ ಓದಿ ಆನಂದಿಸಿ ಒರ್ತಿಕ್ರಿಯೆ ಬರೆಯುತ್ತೇನೆ. ನಿಮ್ಮ ತಾಯಿ ಅಲ್ಲಿ. ಈ ಅಂಕಣದ ವಸ್ತು ಸಾರ್ವಕಾಲಿಕ, ಅನುಸಂಧಾನ ಸಾರ್ವತ್ರಿಕ ಅಲ್ಲವೇ?

          ಪ್ರತಿಕ್ರಿಯೆ
  2. ಶೀಲಾ ಪಾಟೀಲ

    “ಏಕಾ” ಬಹುಮುಖ ಪ್ರತಿಭೆಯ ವ್ಯಕ್ತಿ. ಎಲ್ಲ ಸಂಭಾಳಿಸುವ ಸಾಮರ್ಥ್ಯ ಹೊಂದಿರುವ ವ್ಯಕ್ತಿತ್ವ. ಅವರ ” ಮನೆಮದ್ದಿ” ನ ವಿವರಣೆ ತುಂಬಾ ಉಪಯುಕ್ತವಾಗಿದೆ.
    ಎಲ್ಲರೂ ಅಜ್ಜಿಯ ಅಕ್ಕರತೆ ಅನುಭವಿಸಿರುತ್ತಾರೆ ಆದರೆ ನೆನಪಿನ ಸುರುಳಿಯನ್ನು ನಿಮ್ಮಂತೆ ಅಕ್ಷರರೂಪದಲ್ಲಿ ಸುಂದರ ರೀತಿಯಲ್ಲಿ ಬಿಚ್ಚುವದು ಅಪರೂಪ .
    ನಿಮ್ಮ ನೆನಪಿನ ಶಕ್ತಿ ಮತ್ತು ಬರೆಯುವ ಶೈಲಿ ಅಭಿನಂದನೀಯ.

    ಪ್ರತಿಕ್ರಿಯೆ
    • Sarojini Padasalgi

      ತುಂಬು ಹೃದಯದ ಧನ್ಯವಾದಗಳು ಶೀಲಾ. ನಮ್ಮ ಏಕಾನ ಇರಿಸರಿಕೆ ನನ್ನ ಎದೀಯೊಳಗ ಆಳ ಛಾಪು ಮೂಡಿಸಿದೆ. ಹೆಜ್ಜೆ ಹೆಜ್ಜೆಗೂ ಆಕೀ ನೆರಳು ಹಣಕ್ತದ. ಮರೀಲಾಗದ ಗುರುತು ಮೂಡಸಿದ ವ್ಯಕ್ತಿ ಆಕೀ.

      ಪ್ರತಿಕ್ರಿಯೆ
  3. Shrivatsa Desai

    “ಲಾಖ್ ದುಖೋಂಕಾ ಏಕ್ ದವಾ. ಹೈ ‘ಪ್ಯಾಸಾ’ ದಲ್ಲಿ ಹಿಂದಿ ಹಾಡಿನ ಸಾಲು . ಅಂದರೆ ಒಂದೇ ಔಷದಿ ಎಲ್ಲದಕ್ಕೂ. ರಾಮಬಾಣ ಅಂತ. ಈ. ವಾರ ಓದಿದ್ದು: ಲಕ್ಷ ಬೇನೆಗಳಿಗೂ ಎಕಾನ ಹತ್ತಿರ ಇದೆ ಮದ್ದುಗಳು ಅಂತ. ಕಂಪೌಂಡರ್ ನ ಬಾಟಲಿಗಳ ಸಾಲನ್ನು ನೋಡಿದಂತೆ ಆಕೆಯ ಉಪಾಯಗಳ ಸಂಗ್ರಹ, ಅಷ್ಟೇ ಬಣ್ಣ ಬಣ್ಣದ ಭಾಷೆಯಲ್ಲಿ ಕುಟ್ಟಿ, ತೇಯ್ದು, ‘ಹೊಗೆ’ ಎಬ್ಬಿಸಿದ ವೈಖರಿಗೆ ಶರಣು!

    ಪ್ರತಿಕ್ರಿಯೆ
    • Sarojini Padasalgi

      ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ನಿಮ್ಮ ರೆಸ್ಪಾನ್ಸ್ ಭಾರೀ ವಜನದಾರ ಅದ.ಖುಷಿ ಅನಿಸ್ತು ಓದಿ.ಶರಣು ಶರಣಾರ್ಥಿ ನಿಮಗೆ ,ಅವಧಿಯೊಂದಿಗೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: