ಗುಂಡುರಾವ್ ದೇಸಾಯಿ
**
“ಸಮ್ಮು, ನಾಳೆ ನೆನಪಿದೆಯಲ್ಲ. ಗಣೇಶನ ಹಬ್ಬ..” ಎಂದಳು ಅನು. “ನೆನಪಿದ್ದುದಕ್ಕೆ ಇಷ್ಟೆಲ್ಲ ಅಲಂಕಾರ ಮಾಡತಿರೋದು. ಅಪ್ಪನಿಗೆ ಹೇಳಿ ಈ ಸಾರಿ ಮಣ್ಣಿನಿಂದ ಮಾಡಿದ ಪರಿಸರ ಗಣಪತಿನ ಬುಕ್ ಮಾಡಿರೋದು” ಎಂದ ಸಮ್ಮು. “ಅಲ್ಲಲೋ, ನಾಳೆ ಸಂಜೆ ಹೊರಗೆ ಹೋದಾಗ ಚಂದ್ರನ್ನ ನೋಡಬ್ಯಾಡ. ನೋಡಿದ್ರ ಅಪವಾದ ಬರುತ್ತದ” “ನೀನು ಯಾವಾಗಲೂ ಹೀಗೆ. ಬೇಕಂತ ನೆನಪು ಮಾಡಿ ಚಂದ್ರನ ನೋಡುವ ಹಾಗೆ ಮಾಡ್ತಿ. ಗಟ್ಟಿ ಮನಸ್ಸು ಮಾಡಿನಿ. ನಾನು ನಾಳೆ ಚಂದ್ರನ ನೋಡಂಗೆ ಇಲ್ಲ..”ಎಂದು ಸಮ್ಮು ಚಾಲೆಂಜ್ ಮಾಡಿದ. ಮರುದಿನ ಪೂಜಾ ಸಂಭ್ರಮದಲ್ಲಿ ಮುಳುಗಿ ಹೋಗಿದ್ದ. ಸಂಜೆ ಗೆಳೆಯರು ಮನೆಗೆ ಬಂದರು. ಸಮ್ಮುನ ಮನೆಯ ಗಣಪತಿಗೆ ಅಕ್ಕಿ ಕಾಳು ಹಾಕಿ, ಕಿವಿ ಹಿಡಿದು ಅಣ್ಣಿ ಕುಳಿತು ಪ್ರಸಾದ ಸೇವಿಸಿದ ಮೇಲೆ “ಸಮ್ಮು, ಊರಾಗಿನ ಎಲ್ಲಾ ಗಣಪಗಳನ್ನು ನೋಡಾಕ ಹೋಗೋಣ ಬಾರಲೇ” ಎಂದು ಕರೆದರು. ನೋಡುವ ಆಸೆ ಉಕ್ಕಿ “ಅವರ ಜೊತೆ ನಾನು ಹೋಗಿ ಬರಲಾ?” ಎಂದು ಅಪ್ಪ ಅಮ್ಮನ್ನು ಕೇಳಿದ. “ಹುಷಾರು ಎಲ್ಲಾ ಕಡೆ ವಿದ್ಯುತ್ ದೀಪದ ಅಲಂಕಾರ ಮಾಡಿರುತಾರೆ. ವೈರ್‌ಗಳನ್ನ ಬೇಕಾಬಿಟ್ಟಿಯಾಗಿ ಇಳಿಬಿಟ್ಟಿರತಾರೆ, ಜೋಪಾನ. ಬೇಗ ಬರಬೇಕು” ಎಂದು ಎಚ್ಚರಿಸಿದರು ಅಪ್ಪ.
“ಇಲ್ಲ ಅಂಕಲ್ ಹತ್ತು ಗಣಪತಿಗಳನ್ನು ನೋಡಿ, ಬೇಗ ಬರತೀವಿ” ಎಂದ ಸಮ್ಮುನ ಗೆಳೆಯ ಸೀನ. “ಬರತೀನಿ ಅಮ್ಮ, ಅಪ್ಪಾ” ಎಂದು ಹೇಳಿ ಸಮ್ಮು ಹೊರಟ. “ಲೋ, ಸಮ್ಮು ಇಲ್ಲಿ ಬಾ” ಎಂದು ಕರೆದಳು ಅನು. ಏನೊ ತಿನ್ನಲು ಕೊಡುತ್ತಾಳೆ ಎಂದು ಒಳಗೆ ಬಂದ ಸಮ್ಮುವಿಗೆ “ಮಗನ, ನನಗೂ ಹೇಳಲಾರದ ಹೊಂಟಿ. ಇರಲಿ ಬಿಡು. ಚಂದ್ರನ್ನ ನೋಡಿ ಬಿಟ್ಟಿಯಾ ಹುಷಾರು” ಎಂದು ಅನು ಮರೆತದ್ದನ್ನು ನೆನೆಪಿಸಿ ನಕ್ಕಳು. “ಅಪ್ಪ, ಅಮ್ಮಾ ನೋಡಮ್ಮ ಅಕ್ಕ ಮತ್ತೆ ನೆನಪು ಮಾಡಿ ನೋಡುವ ಹಾಗೆ ಮಾಡತಾಳ.” ಎಂದು ಬಯ್ಯಕೋತ ಗಣಪತಿಗೆ ನೋಡಲಿಕ್ಕೆ ಗೆಳೆಯರೊಂದಿಗೆ ಹೊರಟ. ಎಲ್ಲರೂ ನಾನಾ ಬಗೆಯ ಗಣಪನ ನೋಡೋದು. ಅಲ್ಲಿ ಕೊಡುವ ಬಗೆ ಬಗೆಯ ಪ್ರಸಾದವನ್ನು ತಿನ್ನುತ್ತಾ ಸಂಭ್ರಮಿಸುತ್ತಾ ಇರಬೇಕಾದ್ರ ಸಮ್ಮು ಮಾತ್ರ ಆತಂಕದಲ್ಲಿ ಇದ್ದ. ಒಂದೆರಡು ಕಡೆ ಎಡವಿದ. ಗಮನಿಸಿದ ಗೆಳೆಯರು “ಯಾಕೊ, ಹೀಗೆ ತಲೆ ತಗ್ಗಿಸಿಕೊಂಡ ಬರುತ್ತಿರುವೆ. ತಪ್ಪು ಮಾಡಿದವರ ಹಾಗೆ” ಎಂದು ಕೇಳಿದರು. ಸಮ್ಮು ಮಾತನಾಡದೆ ಹಾಗೆ ತಲೆ ತಗ್ಗಿಸಿಕೊಂಡು ಹೊರಟಾಗ ಎಲ್ಲರೂ ನಿಲ್ಲಿಸಿ ಅವನನ್ನು ಹಿಡಿದು ತಲೆ ಎತ್ತಿದರು. “ಬ್ಯಾಡ್ರೊ, ಪ್ಲೀಜ್” ಎಂದು ಕೂಗಲಿಕ್ಕೂ ತಲೆ ಎತ್ತುವುದಕ್ಕೂ ಶುಭ್ರ ಆಕಾಶದಲ್ಲಿ ಗುಡ್ಡಗಳ ಮಧ್ಯ ಚಂದ್ರ ಕಾಣಿಸುವದಕ್ಕೂ ಸರಿ ಹೋಯ್ತು. ಸಮ್ಮು “ಹೋ, ಎಲ್ಲಾ ಕೆಟ್ಟು ಹೋಯ್ತು” ಎಂದು ಅಳತೊಡಗಿದ.
“ಯಾಕಲೆ ಏನಾಯ್ತು?” ಎಂದ ಸೀನ. “ಇವತ್ತು ಗಣೇಶ ಚೌತಿ ಅಲ್ಲವೇನ್ರೋ, ಚಂದ್ರನ್ನ ನೋಡಬಾರದಂತನ ತಲೆತಗ್ಗಿಸಿದ್ದೆ. ನೋಡಿಸಿಬಿಟ್ರಿ…” ಎಂದು ಮತ್ತೆ ಅಳತೊಡಗಿದ. ಸಮ್ಮು ಹೇಳಿದ ಕೂಡಲೇ ಆಕಾಶದಲ್ಲಿ ಹೊಳೆಯುತ್ತಿದ್ದ ಚಂದ್ರನ್ನ ಎಲ್ಲರೂ ನೋಡಿ ‘ಅಯ್ಯೊ ನೀನು ನಮ್ಮನ್ನ
ನೋಡುವ ಹಾಗೆ ಮಾಡಿಬಿಟ್ಟಿ’ ಎಂದು ಸಮ್ಮುವಿಗೆ ಬೈಯತೊಡಗಿದರು. “ನೀನು ಕೆಡೊದಲ್ಲದ ನಮ್ಮನ್ನು ಕೆಡಿಸಿದಿ” ಎಂದ ಸೀನ, “ನನ್ನ ಪಾಡಿಗೆ ನಾನು ಇದ್ದೆ. ನೆನಪಿಸಬಾರದು ಅಂತ. ಎಲ್ಲಾ ನೀವ ಮಾಡಿದ್ದು” ಎಂದ ಸಮ್ಮು. “ಮಕ್ಕಳ ನೆಚ್ಚಿನ ಗಣೇಶ ಶಾಪ ಯಾಕ ಕೊಟ್ಟ? ಇಲಿ ಮೇಲೆ ಕುಳಿತು ಹೋಗುವುದನ್ನು ನೋಡಿ ಚಂದ್ರ ನಕ್ಕನಂತೆ. ಚಂದ್ರ ನಕ್ಕಿದ್ರಲ್ಲಿ ತಪ್ಪೇನಿದೆ.”ಎಂದ ಮಲ್ಲ. “ಹೌದಲ್ಲ! ಏನು ತಪ್ಪಿದೆ. ಪಾಪ ಸಣ್ಣ ಇಲಿ, ಭಾರ ಹೋರಲು ಸಾಧ್ಯನ…!”ಎಂದ ಗಿರಿ, “ದೊಡ್ಡವರ ಬಗ್ಗೆ ನಗೆ ಆಡಿದ್ರೆ ಹೀಗೆ ಆಗೋದು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾರಲ್ಲ ಹಾಗೆ ಎಂದ” ಸತೀಶ. “ಆದರೂ ನೀನು ಹೇಳೊ ಮಾತು ನಾನು ಒಪ್ಪೋದಿಲ್ಲ. ಏನೊ ರಹಸ್ಯ ಇರಬೇಕು ಚೌತಿ ಚಂದ್ರನನ್ನು ನೋಡಬಾರದು ಎನ್ನುವ ವಿಷಯದ ಹಿಂದೆ” ಎಂದ ಸೀನ ವೇದಾಂತಿ ತರಹ.
“ರಹಸ್ಯನ ಆಮೇಲೆ ಬೇಧಿಸುವಂತೆ. ಇನ್ನೂ ಒಂದೆರಡು ಗಣೇಶ ಅವಾ ನೋಡೋದು. ನೋಡೋಣ ನಡಿರಿ” ಎಂದ ಗಿರಿ. “ಹೌದಪ್ಪ, ಅಳೋದನ್ನ ನಿಲ್ಲಿಸು ಸಮ್ಮು, ಗಣಪತಿ ನೋಡೋದು ಮುಗಿದ ಮೇಲೆ ಸೀದಾ ನಿಮ್ಮ ಮನೆಗೆ ಹೋಗಿ ನಿಮ್ಮ ಅಪ್ಪನ ಹತ್ರನ ಕೇಳೋಣ” ಎಂದ ಮಲ್ಲ. ಎಲ್ಲರೂ ಸಮ್ಮತಿಸಿದರು. ನೋಡುವ ಗಣಪ್ಪನನ್ನೆಲ್ಲಾ ನೋಡಿದ ಮೇಲೆ ಅಂದುಕೊಂಡಂತೆ ಸಮ್ಮುನ ಮನೆಗೆ ಬಂದರು. ಸಮ್ಮು ನಡೆದ ಎಲ್ಲ ವಿಷಯ ಅಪ್ಪನಿಗೆ ಹೇಳಿದ. “ಅಂಕಲ್ ನಮಗೇನಾದ್ರೂ ಆಗುತ್ತ. ನಾವು ಚಂದ್ರನ ನೋಡಿವಿ” ಎಂದ ಮಲ್ಲ. “ನಾವು ಈ ವರ್ಷ ಫೇಲ್ ಆಗತಿವಾ?” ಅಂದ ಗಿರಿ. “ರೀ, ನಮ್ಮ ಮೇಲೆ ಏನಾದ್ರೂ ಅಪವಾದ ಬರುತ್ತದ” ಎಂದ ಸತೀಶ. ಅವರು ಹೇಳೊದನ್ನ ಕೇಳಿ ನಕ್ಕರು ಸಮ್ಮುನ ತಂದೆ. “ನಗತಾ ಇದ್ದೀಯಲ್ಲ ಅಪ್ಪ ನಮ್ಮನ್ನ ನೋಡಿ” ಎಂದ ಸಮ್ಮು ಅಳು ಮುಖದಿಂದ. “ಏನು ಮಾಡೋದು? ನೀವಿಷ್ಟು ಭಯ ಬಿದ್ದುದ್ದನ್ನು ನೋಡಿ” ಎಂದ್ರು ಸಮ್ಮುನ ಅಪ್ಪ. “ಯಾವುದೇ ಸಮಸ್ಯೆಗೂ ಒಂದು ಪರಿಹಾರ ಅಂತ ಇರುತ್ತಲ್ಲ ಸರ್” ಎಂದ ವೇದಾಂತಿ ತರಹ ಮಾತಾಡೋ ಸೀನ. “ನೋಡಿದ ಪಾಪದ ಪ್ರಾಯಶ್ಚಿತ್ತವಾಗಿ ಅದೇನೊ ಕತೆ ಇದೆಯಂತಲ್ಲ. ಹೇಳಿಬಿಡಪ” ಎಂದ ಸಮ್ಮು.
“ಶಾಂತಾ ಮಣಿ ಕತೆನಾ” ಎಂದ ಗಿರಿ. “ಶಾಂತಾ ಮಣಿ ನಮ್ಮ ಕ್ಲಾಸ್‌ಮೇಟು. ಆಕಿದೇನು ಅದಲೇ ಕತಿ. ನೆಟ್ಟಗ ಓದಾಕ ಬರಲ್ಲ. ಬರಿ ಧಿಮಾಕು ಬಡಿತಾಳ. ಚಾಡ ಹೇಳತಾಳ. ಆಕಿದು ತೆಗೆದುಕೊಂಡು ನೀನು ಏನು ಮಾಡವ?” ಎಂದು ಸತೀಶ ನಕ್ಕ. ಉಳಿದವರೆಲ್ಲರೂ ನಕ್ಕರು, “ಶಮಂತಕ ಮಣಿ ಕತೆನಾ?” ಎಂದರು ಸಮ್ಮುನ ಅಪ್ಪ. “ಹಾಂ ಅಂಕಲ್. ಏನೋ ಪೆಲಿಂಗ್ ಮಿಟೇಕ್ ಅಂಕಲ್. ಎಷ್ಟು ನಗುತಾರೆ ನೋಡಿ” ಎಂದ ಗಿರಿ ಸ್ಪೆಲಿಂಗ್ ಮಿಸ್ಟೇಕ್ ಮಾಡಿ. “ಇರಲಿ, ನಿಮ್ಮ ಭಯವನ್ನು ಪರಿಹರಿಸುವ ಇಲ್ಲವೇ ನೀವು ಭಾವಿಸಿರುವ ಆ ದೃಷ್ಟಿಯಲ್ಲಿ ಹೇಳಲ್ಲ. ಆದರೆ ಅಲ್ಲಿಯೂ ಕೂಡ ಕಲಿಕೆ ಇದೆ. ಕೇಳಿ” ಎಂದು ಪೂರ್ಣ ಕಥೆ ಹೇಳಿ “ಈಗ ಸಮಾಧಾನವಾಯ್ತಾ?” ಎಂದ್ರು ಸಮ್ಮುನ ಅಪ್ಪ. “ಸರ್. ನಾನು ಈ ವರ್ಷ ಪಾಸ್ ಆಗತಿನ್ರಿ” ಎಂದ ಮಲ್ಲ. “ಹೌದ್ರಿ ನನಗೂ ಏನು ಆಗಲ್ಲ..” ಎಂದ ಗಿರಿ. “ಅಂದುಕೊಂಡಿದ್ದೆ ಸಾರ್. ಏನೊ ಒಂದು ಅರ್ಥ ಇರುತ್ತದೆ ಅಂತ” ಎಂದ ಸೀನ. ಮತ್ತೆ ನಕ್ಕು ಸಮ್ಮುನ ಅಪ್ಪ “ಅಲ್ಲ ನಮ್ಮ ಹಿರಿಯರು ಏನೇ ಮಾಡಲಿ ಒಂದು ಮಹತ್ವದ ಕಾರಣ ಇದ್ದೆ ಇರುತ್ತದೆ. ವಿಘ್ನನಿವಾರಕ ಅಂತ ಗಣೇಶನ ಕರಿತೀವಿ. ಅಂಥ ಮಕ್ಕಳ ಪ್ರೀತಿಯ ಗಣೇಶ ಕೆಟ್ಟದು ಮಾಡೋಕೆ ಸಾಧ್ಯನ?” ಎಂದು ಪ್ರಶ್ನೆ ಹಾಕಿದ್ರು. “ಹೌದು ಅಂಕಲ್. ಎಲ್ಲ ಪೂಜೆಯಲ್ಲೂ ಮೊದಲು ಗಣೇಶನ ಪೂಜೆ ಮಾಡೋದು…” ಎಂದು ಬಾಯಿ ಹಾಕಿದ ಮಲ್ಲ. “ಹೌದು. ಪ್ರಥಮ ವಂದಿತ ಅನಿಸಿಕೊಳ್ಳುವ ಗಣಪ ನಿಮ್ಮೆಲ್ಲರ ಮಿತ್ರ” “ಮತ್ತೇಕೆ ಚಂದ್ರನ್ನ ನೋಡಿದ್ರ ಅಪವಾದ ತಪ್ಪದು ಅಂತಾರೆ” ಎಂದ ಸತೀಶ.
“ಹಿಂದಕ್ಕೆಲ್ಲ ಮನೆಯಲ್ಲಿಯೆ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರು. ಸಾರ್ವಜನಿಕ ಗಣೇಶ ಇರಲಿಲ್ಲ. ಮನೆಯಲ್ಲಿ ಭಜನೆ ಚಿಂತನೆ ಧ್ಯಾನ ಓದು ನಡೆಸಬೇಕು. ಮನೆಯವರಿಗೆ ಸಹಾಯ ಮಾಡಬೇಕು. ಆ ಗದ್ದಲದಲ್ಲಿದ್ದರೆ ಚಂದ್ರನನ್ನು ನೋಡುವ ಅವಶ್ಯಕತೆನೆ ಬರಲ್ಲ. ಮನೆಗೆ ಬರುವವರು ಹೋಗುವವರು ಇರುವಾಗ ಖಾಲಿ ಅಡ್ಡಾಡ ಬಾರದೆಂದು ಈ ಮಾತು ಚಾಲ್ತಿಯಲ್ಲಿರಬಹುದು. ಎಂದರು. “ಹೌದಾ ಅಪ್ಪಾ?” ಎಂದ ಸಮ್ಮು. “ಮತ್ತೆ ಚಂದ್ರ ಗಣೇಶನನ್ನು ನೋಡಿ ನಕ್ಕ. ಯಾರನ್ನೂ ನೋಡಿ ಅಪಹಾಸ್ಯ ಮಾಡಬಾರದೆಂಬುದು ಇದರ ಸಂದೇಶ. ಅಲ್ಲದೆ ಶಮಂತಕೋಪಖ್ಯಾನದಿಂದ ಹೊಸ ವಿಷಯಗಳು ತಿಳಿಯಲಿ. ಕತೆಗಳು ಇರುವುದೇ ಹೊಸದನ್ನು ಕಲಿಯಲಿಕ್ಕೆ, ನಮ್ಮನ್ನು ತಿದ್ದೋಕೆ ” ಎಂದು ಹೇಳಿದರು. “ಖುಷಿಯಾಯ್ತು ಸರ್ ನಮಗೇನು ಆಗಲ್ಲ” ಎಂದ ಸೀನ. “ಹೌದು ಯಾರಿಗೂ ಏನೂ ಆಗಲ್ಲ. ಸರಿಯಾದ ದಾರಿಯಲ್ಲಿ ನಡೆದರೆ”
ಎಂದರು. “ಅಬ್ಬಾ. ನಾನು ಫೇಲ್ ಆಗಲ್ಲಲ್ಲ ಅಷ್ಟು ಸಾಕು” ಎಂದ ಗಿರಿ. “ಸರಿಯಾಗಿ ಓದಿದರೆ ಫೇಲ್ ಆಗಲ್ಲ. ಇಲ್ಲಂದ್ರೆ ಗಣಪ್ಪ ಕಾಡ್ತಾನೆ” ಎಂದು ಸಮ್ಮು ಅಪ್ಪ ಹೇಳಿದಾಗ ಎಲ್ಲರೂ ನಕ್ಕರು.“ನಾನು ಇವತ್ತು ಚಂದ್ರನ್ನ ನೋಡಿದೆ.” ಎಂದ್ರು ಸಮ್ಮುನ ಅಪ್ಪ. “ನೀವೇನು ಮಾಡ್ತೀರಿ. ಅಂಕಲ್” ಎಂದ ಗಿರಿ. “ಇಂದಿನ ಘಟನೆಯನ್ನು ಕತೆ ಮಾಡಿ ಬರಿತಿನಿ” ಎಂದ್ರು.
“ಅಯ್ಯೊ ಸರ್, ಮುಗಿತು ನಮ್ಮ ಕತೆ” ಎಂದ ಮಲ್ಲ.. “ಯಾಕೋ?” “ಈ ಕತೆ ನೆನಪು ನಮಗೆ ಶಾಶ್ವತವಾಗಿ ಉಳಿತಾದ ಸರ್. ಪ್ರತಿ ಸಾರಿ ಗಣೇಶ ಚೌತಿ ದಿನ ನಿಮ್ಮ ಕತೆ ನೆನಪು ಬಂದು ಚಂದ್ರನ ನೋಡೆ ನೋಡ್ತಿವಿ. ನಮಗೆ ಅಪವಾದ ತಪ್ಪಿದ್ದಲ್ಲ ಸರ್. ಬರಿಬ್ಯಾಡರಿ ಸರ್..” ಎಂದ ಸತೀಶ “ಹೌದಪ್ಪ, ಪ್ಲೀಜ್.” ಎಂದ ಸಮ್ಮು. “ಹ್ಹಹ್ಹಹ್ಹ…. ಆಯ್ತು ನೀವು ಚೆನ್ನಾಗಿ, ಶ್ರಮಪಟ್ಟು ಓದಿ. ನಿಮ್ಮ ಓದಿಗೆ ಯಾವಾಗಲೂ ಆಶೀರ್ವಾದ ಮಾಡ್ತಾನೆ” ಅಂದಾಗ “ಅಯ್ಯೋ! ಓದೋದಾ…? ನೀವು ಮೇಷ್ಟ್ರು ಹಾಗೆ ಆಗಿಬಿಟ್ಟಿರಿ ಸಾರ್…” ಎಂದ ಸೀನ. “ಅಲ್ರೋ, ನಮ್ಮ ವಿಜ್ಞಾನಿಗಳು. ಚಂದ್ರನ ಮೇಲೆ ರೋವರ್ ಕಳಿಸಿ ಯಶಸ್ವಿಯಾದರೂ ನೀವು ಆ ಬಗ್ಗೆ ಚಿಂತಿಸುತ್ತಿಲ್ಲವಲ್ಲ. ಯಾವ್ಯಾವೊ ಹಳೆ ನಂಬಿಕೆಗಳನ್ನು ಇಟ್ಟುಕೊಂಡು ಭಯದಿಂದ ಒದ್ದಾಡುತ್ತಾ ಇದ್ದೀರಿ.” ಎಂದು ಸಮ್ಮುನ ಅಪ್ಪ ಎಂದಾಗ “ಹೌದಲ್ಲ ಸರ್. ನಮ್ಮ ವಿಜ್ಞಾನಿಗಳು ಚಂದ್ರಯಾನ-೩ ಅನ್ನು ಯಶಸ್ವಿ ಮಾಡಿ ನಾವೇನೂ ಕಡಿಮೆ ಇಲ್ಲ ಅಂತ ಜಗತ್ತಿಗೆ ತೋರಿಸ್ಯಾರ. ಆದರೆ ಆ ಬಗ್ಗೆ ನಾವು ಯೋಚಿಸಲೇ ಇಲ್ಲ” ಎಂದ ಸತೀಶ. “ಬರ‍್ರೋ, ಚಂದ್ರನ ಮೇಲೆ ಲ್ಯಾಂಡಿಂಗ್ ಆಗೋ ಇಸ್ರೋ ವಿಡಿಯೋ ನೋಡೋಣ. ಮನಸ್ಸು ಗಟ್ಟಿ ಮಾಡಿಕೊಳ್ಳೋಣ” ಎಂದು ಸಮ್ಮು ಗೆಳೆಯರನ್ನು ಒಳಗಡೆ ಕರೆದುಕೊಂಡು ಹೋದ.
0 ಪ್ರತಿಕ್ರಿಯೆಗಳು