ಸಮುದಾಯದ ‘ತುಘಲಕ್’ ಹೀಗೆ ಸಿದ್ಧವಾಯ್ತು..

ಶ್ರೀಪಾದ ಭಟ್

—–
ಉತ್ತಮ ಸಾಹಿತ್ಯಕೃತಿಗಳು ಯಾವತ್ತೂ ವರ್ತಮಾನದ ಅಗತ್ಯಕ್ಕೆ ಅನುವಾಗುವಂತೆ ರೂಪಾಂತರಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತವೆ. ತುಘಲಕ್ ಅದಕ್ಕೆ ಒಂದು ಉತ್ತಮ ಸಾಕ್ಷಿ. ರಂಗಶಂಕರ ಯುವ ರಂಗನಿರ್ದೇಶಕರುಗಳಿಂದ ಕಾರ್ನಾಡರನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಮರುನಿರೂಪಿಸಲು ಅಗತ್ಯವೇದಿಕೆಯಾಗಿ ರಂಗೋತ್ಸವ ಏರ್ಪಡಿಸಿದ ಸಂದರ್ಭದಲ್ಲಿ ‘ಸಮುದಾಯ’ದ ಪಾಲಿಗೆ ತುಘಲಕ್ ದೊರಕಿದ್ದ. ತುಘಲಕ್ ನನ್ನು ಹೊಸದಾಗಿ ಕಟ್ಟಹೊರಟಾಗ ಅದೊಂದು ಥ್ರಿಲ್ ಕೂಡ ಇತ್ತು.

ನರಸಿಂಹಮೂರ್ತಿ, ಸಿ.ಆರ್.ಸಿಂಹರಿಂದ ಒಂದು ಕಾಲದಲ್ಲಿ ಕನ್ನಡ ರಂಗಭೂಮಿಯ ಮನೆಮಾತಾಗಿದ್ದ ತುಘಲಕ್ ಇತ್ತೀಚಿನ ಯುವಕರಿಂದ ದೂರವೇ ಉಳಿದಿದ್ದ. ಈ ಕಾಲಕ್ಕೆ ಅವನನ್ನು ಮರು ರೂಪಿಸುವ ಜತೆ ಇಂದಿನ ಯುವಪೀಳಿಗೆಗೆ ತುಘಲಕ್ ನನ್ನು ಕಾಣಿಸುವ ಸಾಧ್ಯತೆಯಾಗಿಯೂ ತಂಡ ಉತ್ಸುಕವಾಗಿತ್ತು.

ಈ ನಾಟಕದಲ್ಲಿ ಧರ್ಮ – ರಾಜಕೀಯದ ಜುಗಲ್ ಬಂದಿ, ಪಾತ್ರಗಳ ರೋಚಕ ರೂಪಣೆ, ಇತಿಹಾಸದ ಗತಿತಾರ್ಕಿಕತೆಯನ್ನು ಮೀರಿದ
ನಡೆ, ಕಂಪನಿ ನಾಟಕದ ಮೆಲೊಡ್ರಾಮಿಕ್ ರಸಾಯನ, ಶೇಕ್ಸ್ ಪಿಯರ್ ನಾಟಕಗಳ ನೆಳಲು, ಕಾವ್ಯದ ಹೊಳಪು ಎಲ್ಲವೂ ಇದೆ. ಒಟ್ಟಿನಲ್ಲಿ
ಸರ್ವಾಂಗಸುಂದರ ವ್ಯಾಯಾಮದಂತೆ. ನಾವು ಅದನ್ನು ಈ ಕಾಲದ ಅಪ್ಪಟ ರಾಜಕೀಯ ನಾಟಕವನ್ನಾಗಿ ಕಟ್ಟಲು ತೀರ್ಮಾನಿಸಿದ್ದೆವು;
ಆಶಯದಲ್ಲಿ ಮಾತ್ರವಲ್ಲ ಆಕೃತಿಯಲ್ಲಿಯೂ.

ನಾಟಕದಲ್ಲಿ ಮತ್ತೆ ಮತ್ತೆ ಕಾಣುವ ವಾಚ್ಯ ಪ್ರತಿಮೆಯಂತಿರುವ ಚದುರಂಗದಾಟವನ್ನು ಕೇವಲ ಅಲಂಕಾರಿಕವಾಗಿ ಮಾತ್ರವಲ್ಲ ಬದಲಾಗಿ ನಾಟಕದ ನಡೆಯನ್ನು ರೂಪಿಸಲು ಬಳಸಿದೆವು. ಪಾತ್ರಗಳ ಚಲನೆ, ಮೂಡ್, ಚಹರೆಗಳನ್ನೆಲ್ಲ ರಂಗದ ಚದುರಂಗದ ಮೇಲೆ ರೂಪಿಸಲಾಯ್ತು. ಚದುರಂಗದ ಪ್ರತಿ ಮನೆಯೂ ಬಲಿಯನ್ನು ಕೇಳುವ, ವೈರಿಯನ್ನು ಇರಿಯುವ ಹಾದಿಗಳು. ಅರಮನೆಯ ಕಿಟಕಿಗಳ ಆಚೆ ಹಸಿದ ಕಂಗಳು, ಕ್ರೌರ್ಯದ ನೋಟಗಳು ಎಲ್ಲವನ್ನೂ ಕಾಣಿಸಲು ಈ ಹಾಸುಗಳು ನೆರವಾದವು.

ಹೀಗೆ ಚದುರಂಗದ ಹಾಸು ಪ್ರತಿಮೆಯಾಗಿ ರೂಪುಗೊಳ್ಳುತ್ತ ಸಾಗಿತು. ಪಾತ್ರಗಳೆಲ್ಲ ದಾಳಗಳಾಗಿ ರೂಪುಗೊಂಡ ಮೇಲೆ ತುಘಲಕ್ ಪಾತ್ರದ ಉಳಿದ ಭಾವ ಮತ್ತು ಆವೇಶಗಳು ಕೋರಸ್ ಆಗಿ ರೂಪುಗೊಂಡವು. ಅವು ಪಾತ್ರದ ಬಹಿರಂಗ ಆಟಗಳು, ಆಟಾಟೋಪಗಳಿಗೆ ರೂಪುಗೊಟ್ಟವು. ಆತ ಒಂಟಿಯಾದಾಗ, ಮನದ ಮಾತನಾಡುವ ಸಂದರ್ಭದಲ್ಲಿ ಮರೆಯಾಗುತ್ತಿದ್ದವು. ಒಳಗೂ ಬೆತ್ತಲಾದಾಗ ತಾನೆ ಮನುಷ್ಯ ನಿಜವನ್ನು ನುಡಿಯತೊಡಗುವದು; ಬಹಿರಂಗದ ಆವರಣಗಳು ಕಳಚಿಕೊಳ್ಳುವದು! ಕೋರಸ್‌ ಗಳು ಈ ಕೆಲಸ ಮಾಡಿದವು.

ಪಾತ್ರ ಸಂಯೋಜನೆಗಳಲ್ಲಿ ಶೇಕ್ಸ್‌ ಪಿಯರ್‌ ಮಾತ್ರವಲ್ಲ ಮಹಾಭಾರತದ ಸನ್ನಿವೇಶಗಳ ಪ್ರತಿಫಲನಗಳೂ ಇದ್ದವು. ಉದಾ: ಶಿಹಾಬುದ್ದೀನನನ್ನು ತುಘಲಕ್ ನ ವಿರುದ್ಧದ ಸಂಚಿಗೆ ಸಿದ್ಧಗೊಳಿಸುವ ಸಂದರ್ಭದ ಬ್ಲಾಕಿಂಗ್‌ ಅನ್ನು ನೆನಪಿಸಿಕೊಳ್ಳಬಹುದು. ಅಭಿಮನ್ಯುವನ್ನು ಕೊಲ್ಲುವ ಚಕ್ರವ್ಯೂಹದ ಸಂಚಿನಂತೆಯೇ ಇತ್ತದು. ಎಲ್ಲರೂ ಮತ್ತೆ ಮತ್ತೆ ಸುತ್ತುವರಿದು ಶಿಹಾಬನನ್ನು ಖೆಡ್ಡಾಗೆ ಕೆಡಹುವ ಯತ್ನವದು.
ಹೀಗೆ ಜಾಗತಿಕ ರಂಗಭೂಮಿಯ ಪರಂಪರೆ ಮತ್ತು ಪ್ರಯೋಗಗಳೆರಡೂ ಮಿಳಿತಗೊಂಡ ಯತ್ನವದು.

ಅಸಲಿಗೆ ಈ ನಾಟಕವನ್ನು ನಿರ್ದೇಶಿಸಲು ವೆಂಕಟೇಶ ಪ್ರಸಾದ್‌ ನನ್ನನ್ನು ಕೇಳಿದ್ದರು. ನೌಕರಿಯ ಕಾರಣಕ್ಕಾಗಿ ಅಷ್ಟೆಲ್ಲ ದಿನಗಳು ರಜಾ ಹಾಕಲು ನನಗೆ ಸಾಧ್ಯವಿಲ್ಲವೆಂದು ನಾನು ಸ್ಯಾಮಕುಟ್ಟಿಯನ್ನು ಸೂಚಿಸಿದೆ. ಸ್ಯಾಮ್‌ ನನಗೆ ಕೆ.ಜಿ. ಕೃಷ್ಣಮೂರ್ತಿಯವರ ತುಮರಿ ಕ್ಯಾಂಪಿನಲ್ಲಿ ಸಿಕ್ಕವರು. ಪ್ರತಿವರ್ಷ ಒಂದು ವಾರ ನಾವಲ್ಲಿ ಸೇರುತ್ತಿದ್ದೆವು. ಅವರಿಗೆ ಕನ್ನಡ ಬರುವುದಿಲ್ಲ. ನನಗೆ ಕನ್ನಡ ಬಿಟ್ಟರೆ ಬೇರಾವ ಭಾಷೆಯೂ ಬರುವುದಿಲ್ಲ. ಆದರೆ ನಮ್ಮಿಬ್ಬರಿಗೂ ಅರ್ಥವಾಗುವ ರಂಗಭಾಷೆಯಲ್ಲಿ ಮೈಕೈ ತಿರುವುತ್ತ ನಾವಿಬ್ಬರೂ ರಾತ್ರಿಯಿಂದ ಬೆಳಗಿನ ತನಕ ಹರಟುತ್ತಿದ್ದೆವು. ರಂಗಭೂಮಿಯ ಕುರಿತು ದಿನಬೆಳಗು ಚರ್ಚಿಸುವ ನಮ್ಮ ಮಾತುಗಳನ್ನು ಕೇಳಲು ಅಲ್ಲೊಂದು ಅಭಿಮಾನಿ ಬಳಗವೇ ಸಿದ್ಧಗೊಂಡಿತ್ತು.

ಮೂಲತಃ ಸ್ಯಾಮ್‌ ಉತ್ತಮ ಪೇಂಟರ್.‌ ಚಿತ್ರಭಾಷೆ ಅವರಿಗೆ ಅದ್ಭುತವಾಗಿ ಒಲಿದಿದೆ. ಕಂಪ್ಯೂಟರಿನಲ್ಲಿ ಅವರು ನಿರಂತರವಾಗಿ ಸೃಷ್ಟಿಸುತ್ತಿದ್ದ ಪೇಂಟಿಂಗ್‌ಗಳು ನನಗೆ ಹುಚ್ಚು ಹತ್ತಿಸುತ್ತಿದ್ದವು. ಅವರು ನಿರ್ದೇಶಿಸಿದ ಎಲ್ಲ ನಾಟಕಗಳೂ ಆರ್ಟ್‌ ಗ್ಯಾಲರಿಯಿಂದ ಎದ್ದುಬಂದಂತೆ ಕಾಣುತ್ತಿದ್ದವು. ತುಘಲಕ್ ನಿರ್ದೇಶಿಸುವ ಪ್ರಸ್ತಾವಕ್ಕೆ ಸ್ಯಾಮ್‌ ಖುಷಿಯಿಂದಲೇ ಒಪ್ಪಿಕೊಂಡರು ಆದರೆ ನಾನು ಜತೆಯಲ್ಲಿರಬೇಕೆಂದು ಶರತ್ತನ್ನೂ ವಿಧಿಸಿದರು. ಅನಿವಾರ್ಯವಾಗಿ ನಾನು ಸಂಬಳ ರಹಿತ ರಜೆ ಹಾಕಿ ಜತೆಯಲ್ಲಿರಬೇಕಾಯ್ತು.

ಸುರೇಂದ್ರ ಮತ್ತು ವಿಮಲಾರ ಮನೆಯಲ್ಲಿ ನಮ್ಮ ವಾಸ್ತವ್ಯ. ನನಗೋ ರಾತ್ರಿ ನಿದ್ದೆ ಎಂಬುದು ಬಲು ಸೂಕ್ಷ್ಮ. ಗಡಿಯಾರದ ಸದ್ದೂ ನನ್ನ ಎಚ್ಚರಿಸುತ್ತದೆ. ಈ ಸ್ಯಾಮನಿಗೋ ಹಗಲು ರಾತ್ರಿಯ ಪರಿವೆಯೇ ಇರಲಿಲ್ಲ. ಸದಾ ನಾಟಕದ ಯಾವುದೋ ಕ್ಯಾರೆಕ್ಟರನ್ನು ಲ್ಯಾಪ್‌ ಟಾಪಿನಲ್ಲಿ ಚಿತ್ರಿಸುತ್ತಿದ್ದವ ಇದ್ದಕ್ಕಿದ್ದಂತೆ ಅದನ್ನು ನೋಡಿ ಮೋಹಿತನಾದವನಂತೆ ನಗುತ್ತ ಕಿರುಚುತ್ತಿದ್ದ. ಮಧ್ಯರಾತ್ರಿ ಎಷ್ಟೋ ಹೊತ್ತಿಗೆ ಆತ ಬಿಡಿಸಿದ ಚಿತ್ರವನ್ನು ನನ್ನನೆಬ್ಬಿಸಿ ತೋರಿಸಿ ‘ಹೇಗಿದೆ ನೋಡು ಶ್ರೀಪಾದ’ ಎಂದು ಕೂಗುತ್ತಿದ್ದ. ನಾನು ಕಣ್ಣುಜ್ಜಿಕೊಂಡು ಅದನ್ನು ಕೂಲಂಕಶವಾಗಿ ನೋಡುತ್ತಿದ್ದಂತೆ ಅವನ ಗೊರಕೆ ಸದ್ದು ಕೇಳುತ್ತಿತ್ತು. ಅವನು ಅದಾಗಲೇ ಗಾಢನಿದ್ದೆಯಲಿರುತ್ತಿದ್ದ. ಮತ್ತೆರಡು ಗಂಟೆ ಗಾಢನಿದ್ದೆಯಲಿದ್ದವನು
ಮತ್ತೆ ಎದ್ದು ಇನ್ನೇನೋ ಕೆಲಸ ಮಾಡುತ್ತಿದ್ದ. ನಾನು ತಿಂಗಳುಗಟ್ಟಲೆ ನಿದ್ದೆಯಿಲ್ಲದೇ ಮರುಳನಂತಾಗಿದ್ದೆ.

ಸಮಾಜದ ಕುರಿತ ನಮ್ಮಿಬ್ಬರ ಲೋಕಗ್ರಹಿಕೆಗಳು ಸಮಾನವಾಗಿದ್ದವು. ನಾಟಕದ ಆಶಯ ಆಕೃತಿಗಳ ವಿಷಯದಲ್ಲಿ ಒಂದು ದಿನವೂ ನಮ್ಮ ಮಧ್ಯ ತಕರಾರಾಗಿದ್ದು ನನಗೆ ನೆನಪಿಲ್ಲ. ನಟರ ಮೆದುಳು ಅವರ ಪಾದಗಳಲ್ಲಿರುತ್ತದೆ ಎಂಬುದು ನಮ್ಮ ನಂಬಿಕೆ. ನಟರ ಚಿಂತನೆ ಅವರ
ಚಲನೆಯಲ್ಲಿ ವ್ಯಕ್ತವಾಗುತ್ತದೆ.

ನಾಟಕ ತಯಾರಿಯ ಮೊದಲು ಕೇರಳದ ಶ್ರೀಜಿತ್‌ ಬಂದು ‘ತಾಯ್‌ಚಿ’ ಅಭ್ಯಾಸದ ಮೂಲಕ ನಟರನ್ನು ದೈಹಿಕವಾಗಿ ಅವರು ಪಠ್ಯದ ಶಬ್ಧಗಳಲ್ಲಿಯ ಚಿತ್ರಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುವಂತೆ ಚಲನೆಗಳ ಪಾಠ ನಡೆಸಿದ್ದರು. ಒಟ್ಟಂದದಲ್ಲಿ ತುಘಲಕ್ ಸೃಷ್ಟಿಯ ಆ ದಿನಗಳೆಂದರೆ ಹಬ್ಬದ ಸಂಭ್ರಮ ಮತ್ತು ಸಮರಾಭ್ಯಾಸದ ತೀವ್ರತೆಗಳೆರಡರ ಸಂಗಮದಂತಿತ್ತು.
ಇದಕ್ಕೆ ಕಾರಣರಾದ ಎಲ್ಲರಿಗೂ ನಾನು ಋಣಿ.

‍ಲೇಖಕರು avadhi

November 7, 2023

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

1 Comment

  1. SUDHA ADUKALA

    ಉಡುಪಿಯಿಂದ ಶಿರಸಿಗೆ ಹೋಗಿ ತುಘಲಕ್ ನೋಡಿದ ನೆನಪಾಯಿತು

    Reply

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This