ಸಮಾಜಸೇವೆಯ ಅಪೂರ್ವ ದಾಖಲೆ

ಉದಯಕುಮಾರ ಹಬ್ಬು

**

ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ಟರ ಕೃತಿ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’.

ಈ ಕೃತಿಯನ್ನು ‘ಬಹುರೂಪಿ’ ಪ್ರಕಟಿಸಿದೆ.

ಉದಯಕುಮಾರ ಹಬ್ಬು ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

ಡಾ ಪ್ರಕಾಶ ಭಟ್ಟ ಇವರು ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಎಂಬ ಅತ್ಯಮೂಲ್ಯ ಸಮಾಜಮುಖಿಯಾದ ಈ ಕೃತಿಯನ್ನು ನನ್ನ ಓದಿಗೆ ಕಳಿಸಿದ್ದಾರೆ‌. ಈ ಪುಸ್ತಕದ ಪ್ರಕಾಶಕರು ‘ಬಹುರೂಪಿ’ . ಈ ಗ್ರಂಥವು ಭಾರತದ ಅತಿ ಹಿಂದುಳಿದ ಕಡು ಬಡವರೆ ಬಡತನದ ರೇಖೆಗಿಂತ ತೀರಾ ಕೆಳಗಿರುವ ಜನಸ್ತೋಮವುಳ್ಳ 49 ಹಳ್ಳಿಗಳಲ್ಲಿ ಡಾ ಪ್ರಕಾಶ ಭಟ್ಟರು ಮತ್ತು ಅವರ ಕಾರ್ಯಕರ್ತರು ನಡೆಸಿದ ಸಮಾಜಸೇವೆಯ ಅಪೂರ್ವ ದಾಖಲೆಯಾಗಿದೆ‌. ಅಂತಹ ಹಳ್ಳಿಗಳ ಜನರನ್ನು ಬಡತನದ ರೇಖೆಗಿಂತ ಎಷ್ಟೋ ಪಟ್ಟು ಮೇಲೆ ತಂದು ಇಂದು ಆ ಜನರು ಕೂಲಿ ಕೆಲಸ ಮಾಡಲು ನಗರಕ್ಕೆ ಹೋಗದೆ ತಮ್ಮದೆ ಭೂಮಿಯಲ್ಲಿ ಚಿನ್ನವನ್ನೇ ಬೆಳೆದಂತಹ ನೆಮ್ಮದಿಯ, ಆರೋಗ್ಯದ, ಆರ್ಥಿಕ ಸ್ವಾವಲಂಬನೆಯ ಎಲ್ಲಕ್ಕಿಂತ ಹೆಚ್ಚಾಗಿ ಬರಗಾಲದಲ್ಲೂ ಆತ್ಮವಿಶ್ವಾಸದಿಂದ ಬದುಕುವ ಬದುಕುಗಳನ್ನು ಕಟ್ಟಲು ದಾರಿದೀಪವಾಗಿದ್ದುದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಿದೆ.

ಡಾ ಪ್ರಕಾಶ ಭಟ್ಟರು ಪಶು ವೈದ್ಯರು‌. ಹಸುವಿನ ಕೃತಕ ಗರ್ಭಧಾರಣೆಯನ್ನೆ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡ ಡಾ ಪ್ರಕಾಶರಿಗೆ ಹಾಲನ್ನು ಮಾರಿ ಬಡವರು ಆರ್ಥಿಕ ಸ್ವಾವಲಂಬಿಗಳಾಗಬೇಕೆಂಬುದೆ ಕನಸು. ಗಾಂಧೀಜಿ ಅವರ ಪಟ್ಟ ಶಿಷ್ಯರಾದ ಮಣಿಭಾಯಿ. ಮಣಿಭಾಯಿ ಅವರಲ್ಲಿ ಗಾಂಧೀಜಿ “ಭಾರತ ಏಕೆ ಬಡವಾಗಿದೆ?” ಎಂದು ಪ್ರಶ್ನಿಸುತ್ತಾರೆ‌. ಗಾಂಧೀಜಿಯ ಭೇಟಿಗೆ ಹೋಗುವ ಮೊದಲೇ ಮಣಿಭಾಯಿಗೆ ಯಾರೋ ಹೇಳಿದ್ದರಂತೆ. ಗಾಂಧೀಜಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಹೋಗಬೇಡ. ಅವರೇ ತಮ್ಮ ಪ್ರಶ್ನೆಗೆ ಉತ್ತರ ಹೇಳುತ್ತಾರೆ‌. ತಾವೇ ಉತ್ತರ‌‌ ಹೇಳುವುದು ಅವರ ಶೈಲಿ.” ಎಂದು.ಮಣಿಭಾಯಿ ಉತ್ತರಿಸಲಿಲ್ಲ. ಗಾಂಧೀಜಿಯವರೆ ಉತ್ತರಿಸುತ್ತಾರೆ‌: “ಯಾಕೆಂದರೆ ‌ಭಾರತದ ಹಳ್ಳಿಗಳು ಬಡವಾಗಿವೆ‌” ಮತ್ತೆ ಪ್ರಶ್ನೆ: ಭಾರತದ ಹಳ್ಳಿಗಳು ಏಕೆ ಬಡವಾಗಿವೆ?’ “ಯಾಕೆಂದರೆ ಹಳ್ಳಿಗರು ಅರೆಕಾಲಿಕ ಉದ್ಯೋಗಿಗಳು, ಅರೆಕಾಲಿಕ ಉದ್ಯೋಗದ ಸಮಸ್ಯೆ ‌ನಿರುದ್ಯೋಗದ ಸಮಸ್ಯೆಗಿಂತ ಸಂಕೀರ್ಣವಾದದ್ದು. ಗಾಂಧಿಯವರು ಆಶ್ರಮದ ಪಾಯಿಖಾನೆ ಸ್ವಚ್ಛತೆಗೆ ಮಣಿಭಾಯಿ ಇವರನ್ನು ನೇಮಿಸಿದರು‌. ಗಾಂಧೀಜಿ ಪುಣೆಯ ಸಮೀಪ ಉರುಳಿಕಾಂಚನ್ ಎಂಬಲ್ಲಿ ನಿಸರ್ಗೋಪಚಾರ ಕೇಂದ್ರವನ್ನು ಸ್ಥಾಪಿಸುತ್ತಾರೆ‌. ನಿಸರ್ಗ ಚಿಕಿತ್ಸೆಯ ಪ್ರಯೋಜನವನ್ನು ಬಲವಾಗಿ ಪ್ರತಿಪಾದಿಸಿದವರು ಗಾಂಧಿ‌.‌ ನಿಸರ್ಗೋಪಚಾರ ಕೇಂದ್ರವನ್ನು ಸ್ಥಾಪಿಸಿ ತರುಣ ಮಣಿಭಾಯಿಯನ್ನು ಕೇಂದ್ರದ ಕೆಲಸಕ್ಕೆ ನಿಯೋಜಿಸುತ್ತಾರೆ‌‌‌.‌ ಮಣಿಭಾಯಿ ಉರುಳಿಯಲ್ಲಿ ಸಾಧಿಸಿದ್ದು ದೇಶದ ಗ್ರಾಮೀಣಾಭಿವೃದ್ಧಿ ಕೆಲಸದ ಐತಿಹಾಸಿಕ ಮಾದರಿಯಾಗಿದೆ‌‌.

ಮಣಿಭಾಯಿ ಉರುಳಿಯಲ್ಲಿ ಬೈಫ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮಣಿಭಾಯಿ ಅವರು ಸಂದರ್ಶನ ಮಾಡಿ ೨೬ ಯುವಕರನ್ನು ಆಯ್ಕೆ ಮಾಡಿದರು. ಅವರಲ್ಲಿ ಒಬ್ಬರು‌ ಡಾ‌ ಪ್ರಕಾಶ ಭಟ್ಟರು‌. ೧೯೯೦ ಎಪ್ರಿಲ್ ೧ರಂದು ಉರುಳಿಕಾಂಚನದಲ್ಲಿದ್ದ ‘ಬೈಫ್” ಕ್ಯಾಂಪಸ್ಸಿನಲ್ಲಿ ತರಬೇತಿಗೆ ಹಾಜರಾಗುತ್ತಾರೆ. ತರಬೇತಿಯ ನಂತರ ಅವರು ಜಾನುವಾರು ಸಂದರ್ಶನ ಕೇಂದ್ರಗಳಲ್ಲಿ ದ.ಕ. ದ ಪುತ್ತೂರಿನಲ್ಲಿ ಉತ್ತರ ಕನ್ನಡದ ಶಿರಸಿ, ಯಲ್ಲಾಪುರ, ಉಮ್ಮಚ್ಚಿಯಂತಹ ಹಲವಾರು ಊರುಗಳಲ್ಲಿ ಜಾನುವಾರು ಸಂವರ್ಧನೆಯ ಹಾಗೂ ಕಾರ್ಯಕ್ರಮದ ಉಸ್ತುವಾರಿ ಕೆಲಸ ಮಾಡಿದರು. ಇವರ ಜೊತೆಯಲ್ಲಿ ‘ಬೈಫ್’ ಸೇರಿದ್ದ ಸಹಪಾಠಿಗಳೆಲ್ಲ ಒಂದೆರಡು ವರ್ಷಗಳಲ್ಲಿ ಕರ್ನಾಟಕ ಸರಕಾರದ ಕೆಲಸ‌ ಸಿಗುತ್ತಿದ್ದಂತೆಯೆ ಅದನ್ನು ತೊರೆದರು. ‘ನಾನು ಸರಕಾರಿ ನೌಕರಿ ಬೇಡವೆಂದೂ, ಗ್ರಾಮೀಣಾಭಿವೃದ್ಧಿಯಲ್ಲೇ ಮುಂದುವರಿಯಬೇಕೆಂದೂ ನಿರ್ಧರಿಸಿದ್ದೆ‌. ಈಗ ತಿರುಗಿ ನೋಡಿದರೆ ಅದೊಂದು ದೈವಿಕ ನಿರ್ಣಯವೆನಿಸುತ್ತದೆ‌. ನಾನು ಪ್ರಾಮಾಣಿಕನಾಗಿರಬೇಕು. ನನ್ನಿಂದ ಸಮಾಜಕ್ಕೆ ಒಳಿತಾಗಬೇಕು ಎನ್ನುವ ವಿಚಾರ ನನ್ನ ಕಾಲೇಜು ದಿನಗಳಲ್ಲೇ ಮನಸ್ಸಿನಲ್ಲಿ ಹರಳಗಟ್ಟಿತ್ತು‌‌.‌ ಮಣಿಭಾಯಿಯವರ ‌ನಿಸ್ವಾರ್ಥ ಮಾದರಿ ಅದನ್ನು ಇನ್ನಷ್ಟು ಗಟ್ಟಿ ಮಾಡಿತು.” ಎನ್ನುತ್ತಾರೆ ಡಾ ಪ್ರಕಾಶ‌ ಭಟ್ಟರು. ಇಸವಿ ೧೯೯೦ ನನ್ನ ಜೀವನದಲ್ಲಿ ಮಹತ್ವದ ತಿರುವಿಗೆ ಕಾರಣವಾದ ವರ್ಷ ಎಂದೂ ಎನ್ನುತ್ತಾರೆ ಅದಕ್ಕೆ ಕಾರಣವಿಲ್ಲದಿಲ್ಲ‌.

ಲೇಖಕ ಡಾ ಪ್ರಕಾಶ ಭಟ್

‘ಬೈಫ್’ ತನ್ನ ಕೆಲಸಗಳ ಹಲವು ಅನುಭವಗಳನ್ನು ಕ್ರೋಢೀಕರಿಸಿ ಸಮಗ್ರ ಅಭಿವೃದ್ಧಿಯ ಯೋಜನೆಯೊಂದನ್ನು ಯೋಚಿಸಲಾರಂಭಿಸಿತು‌. ಯೋಜನಾ ವರದಿಗಳು ವಿವಿಧ ತಾಂತ್ರಿಕ ಕ್ಷೇತ್ರಗಳಿಗೆ ಭೂ ಆಧಾರಿತ ಹಾಗೂ ಕೃಷಿಯೇತರ ಜೀವನೋಪಾಯ, ಮಹಿಳೆಯರ ಅಭಿವೃದ್ಧಿ, ಸಮುದಾಯ ಆರೋಗ್ಯ, ಜಲಾನಯನ ಅಭಿವೃದ್ಧಿ, ಜಾನುವಾರು ಆಧಾರಿತ ಉದ್ಯೋಗ, ನೀರು ನೈರ್ಮಲ್ಯ, ಜನಸಂಘಟನೆ ಇವುಗಳಿಗೆಲ್ಲ ಬೇರೆ ಬೇರೆಯಾಗಿ ವರದಿಗಳು ಬರೆಯಲ್ಪಟ್ಟಿದ್ದವು. ಅವನ್ನೆಲ್ಲಾ ಸೇರಿಸಿ ‘ಸುಸ್ಥಿರ ಅಭಿವೃದ್ಧಿಗಾಗಿ ತಂತ್ರಜ್ಞಾನ‌ ವರ್ಗಾವಣೆ’ ಎಂಬ ಹೆಸರಿನ ಯೋಜನೆಯ ಪ್ರಸ್ತಾವನೆಯನ್ನು“ಕಮಿಶನ್ ಆಫ್ ಯುರೋಪಿಯನ್ ಕಮ್ಯುನಿಟಿ” ಗೆ ಸಲ್ಲಿಸಲಾಗಿತ್ತು‌‌. ಹಲವು ವರ್ಷಗಳು ಕಳೆದ ನಂತರ ಅವರದನ್ನು ಕ್ಷೇತ್ರ ಭೇಟಿಯ ಮೂಲಕ ಮೌಲ್ಯಮಾಪನ ಮಾಡಿ, ಪ್ರಸ್ತಾವನೆಯ ಒಪ್ಪಿದರು. ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಎರಡು ಕ್ಲಸ್ಟರ್ ಗಳು ಹಾಗೂ ಕರ್ನಾಟಕದಲ್ಲಿ ಮೂರು ಕ್ಲಸ್ಟರ್ ಎಂದು ನಿರ್ಣಯವಾಯ್ತು‌. ಪ್ರತಿಯೊಂದು ಕ್ಲಸ್ಟರ್ ನಾಲ್ಕರಿಂದ ಐದು ಸಾವಿರ ಕುಟುಂಬಗಳಿರುವ ೨೦-೩೦ ಹಳ್ಳಿಗಳ ಸಮೂಹ‌. ಸಂಸ್ಥೆ ಪ್ರತಿಯೊಂದು ರಾಜ್ಯಕ್ಕೆ ಒಬ್ಬ ಸಂಯೋಕನನ್ನು ನೇಮಿಸಿತು‌. ಕರ್ನಾಟಕದಲ್ಲಿ ಆ ಜವಾಬ್ದಾರಿಯನ್ನು ನನಗೆ ಕೊಟ್ಟರು‌ ನನ್ನ ಕೆಲಸ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಹಳ್ಳಿಗಳ ಸಮೂಹವನ್ನು ಆರಿಸುವುದರಿಂದ ಪ್ರಾರಂಭವಾಯ್ತು.” ಎನ್ನುತ್ತಾರೆ ಡಾ ಪ್ರಕಾಶ ಭಟ್ಟರು. ‌

ಅವರು ಸ್ಥಿರ ಗ್ರಾಮೀಣಾಭಿವೃದ್ಧಿಗೆ ಶಿರಸಿ ತಾಲೂಕಿನ ಪೂರ್ವ ಹಾಗೂ ಮುಂಡುಗೋಡು ತಾಲೂಕಿನ ಪಶ್ಚಿಮ ಪ್ರದೇಶವನ್ನು ಆರಿಸಿಕೊಂಡರು‌. ಅಲ್ಲಿಯ ಹಳ್ಳಿಗಳ ಸಮೂಹದ ಹೆಡ್ ಕ್ವಾರ್ಟರ್ ಆಗಿ ದಾಸಕೊಪ್ಪ ಎಂದು ನಿರ್ಣಯಿಸಿದರು‌. ಎರಡನೆಯ ಕ್ಲಸ್ಟರ್ ಆಗಿ ಹುಬ್ಬಳ್ಳಿ ಹತ್ತಿರದ ಸೂರಶೆಟ್ಟಿಕೊಪ್ಪವನ್ನು ಆರಿಸಿಕೊಂಡರು‌. ಜನರೊಡನೆ ಚರ್ಚಿಸಿ ಸಭೆ ಮುಗಿಸಿ ಹೊರಡುತ್ತಿದ್ದಂತೆ ಸಭಿಕರಲ್ಲಿ ಒಬ್ಬರು “ಇಲ್ಲಿ ನಮ್ಮ ಸಂಗ್ಡ ಹಿಂಗ್ ಕುಂತು, ನಮ್ಮ ಕಷ್ಟ ಸುಖ ಯಾರೂ ಮಾತಾಡಿರಲಿಲ್ಲ ಬಿಡ್ರಿ” ಎಂದನು. ಇವು ವಿಕಾಸದ ಮುಖ್ಯವಾಹಿನಿಯ ಹೊರಗಿರುವ ಹಳ್ಳಿಗಳಾಗಿದ್ದವು‌. ಸೂರಶೆಟ್ಟಿ ಕೊಪ್ಪದ ರಸ್ತೆ ಧೂಳುಮಯವಾಗಿತ್ತು. ಹುಬ್ಬಳ್ಳಿಯಿಂದ ದಿವಸಕ್ಕೊಮ್ಮೆ ಮಾತ್ರ ಬಸ್ಸು ಬರುತ್ತಿತ್ತು. ಜನರು ನಡೆದುಕೊಂಡೆ ಹುಬ್ಬಳ್ಳಿಗೆ ಹೋಗುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯ ದಾಸರಕೊಪ್ಪ, ಹಾಗೂ ಧಾರವಾಡದ ಸೂರಿಶೆಟ್ಟಿ ಕೊಪ್ಪ ಎರಡು ಕ್ಲಸ್ಟರ್ ಗಳ ಹೆಡ್ ಕ್ವಾಟ್ರಸ್ ಆದವು. “ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ಎರಡು ಅರ್ಹತೆಗಳು ಬೇಕು, ಸಮಾಜಕ್ಕಾಗಿ ದುಡಿಯುವ ತುಡಿತ, ಹಾಗೂ ಏನು ಮಾಡಬೇಕೆಂಬ ಜ್ಞಾನ” ಎಂಬ ಮಾತುಗಳನ್ನು ಮಣಿಭಾಯಿಯವರು ಯಾವಾಗಲೂ ಹೇಳುತ್ತಿದ್ದರು.

ಸಮಾಜ ಸೇವೆ ಎಂದರೆ ಹೂವಿನ ಹಾಸಿಗೆಯಲ್ಲ. ಅದನ್ನು ಮಾಡಲು ಸಾಕಷ್ಟು ತಾಳ್ಮೆ, ತ್ಯಾಗ, ನಿಸ್ವಾರ್ಥ ಮನೋಭಾವ, ಕಷ್ಟ ಸಹಿಷ್ಣುತೆ, ಇವೆಲ್ಲವುದರ ಜೊತೆಗೆ “ನಾನು” ಎಂಬುದನ್ನು ಬಿಟ್ಡು ‘ನಾವು’ ಎಂಬ ಪದ ಪ್ರಯೋಗ ನಮೃತೆ, ನಮ್ಯತೆ ಇನ್ನೂ ಅನೇಕ ಗುಣಗಳಿರಬೇಕು‌‌. ನಮಗೆಲ್ಲ ಗೊತ್ತು. ಇವರು ನಮ್ಮ ಉಪಕಾರಕ್ಕೆ ಕಾಯುತ್ತಿದ್ದಾರೆ. ಹಾಗಾಗಿ ನಮ್ಮನ್ನು ಗೌರವಿಸಬೇಕು ಎಂಬ ಧೋರಣೆಯು ಸಮಾಜಸೇವಕನಲ್ಲಿದ್ದರೆ ಅವನಿಂದ ಯಾವ ಕೆಲಸವೂ ಆಗದು. ಜನರು ಅಂಥವರನ್ನು ತಿರಸ್ಕರಿಸುತ್ತಾರೆ. ಸಮಾಜಸೇವಕರು ಹಳ್ಳಿಯವರೊಂದಿಗೆ ಹಳ್ಳಿಯವರಾಗಿ ಅವರಿಂದ ಸಾಕಷ್ಟು ಕಲಿಯುವ ವಿಷಯಗಳಿರುತ್ತವೆ. ಉದಾಹರಣೆಗೆ ಡಾ ಪ್ರಕಾಶ ಭಟ್ಟರು ಹಳ್ಳಿಯವರಿಂದ ಗಿಡಕ್ಕೆ ಕಸಿ ಮಾಡುವುದನ್ನು ಕಲಿತರು. ಹಳ್ಳಿಯವರು ಹೆಡ್ಡರಲ್ಲ. ನಮ್ಮಲ್ಲಿದ್ದ ಪೂರ್ವಾಗ್ರಹಗಳನ್ನು ತೊಲಗಿಸಿಕೊಂಡು ಹಳ್ಳಿಯವರನ್ನು ನಮ್ಮ ಕುಟುಂಬದವರಂತೆ ನೋಡಿಕೊಂಡಾಗ ಮಾತ್ರ ನಮಗೆ ಸಮಾಜ ಸೇವೆ ಮಾಡಲು ಸಾಧ್ಯ‌. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು‌ ಕದಾಚನ’ ಎಂದು ಗೀತೆಯಲ್ಲಿ ಹೇಳಿದಂತೆ ನಾವು ಕರ್ಮ ಮಾಡಲಿಕ್ಕೆ ಮಾತ್ರ ಬಾಧ್ಯರು. ಜನರು ನಮ್ಮ ಕೆಲಸಗಳನ್ನು ನೋಡಿ ಗೌರವಿಸಬೇಕು ಎಂಬ ಅಹಂಕಾರವನ್ನು ತೊರೆಯಬೇಕು‌. ಜನರನ್ನು ಕಡುಬಡತನದಿಂದ ಪಾರು ಮಾಡಿ ಅವರನ್ನು  ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದಲ್ಲದೆ, ಅವರ ಅನಾರೋಗ್ಯ, ಸ್ಬಚ್ಛತೆ, ನೈರ್ಮಲ್ಯ, ಮಕ್ಕಳಲ್ಲಿರುವ ಅಪೌಷ್ಟಿಕತೆ, ಹೆಣ್ಮಕ್ಕಳಲ್ಲಿ ಕಂಡು ಬರುವ ವಿಶಿಷ್ಠವಾದ ಅಸೌಖ್ಯ, ಉದಾಹರಣೆಗಾಗಿ ಇಲ್ಲಿನ ಹೆಚ್ಚಿನ ಹೆಂಗಸರಲ್ಲಿ ಗರ್ಭಕೋಶದ ಜಾರುವಿಕೆ ಈ ಮುಂತಾದವುಗಳ ಬಗ್ಗೆ ಸಮಾಜ ಸೇವಕರಿಗೆ ಅರಿವು ಇರಬೇಕು‌.

ಬಡಜನರು ಸ್ಥಿರ ಅಭಿವೃದ್ಧಿಯನ್ನು ಕಂಡುಕೊಂಡಾಗ ಕಾರ್ಯಕರ್ತರಿಗೆ ಆಗುವ ಆನಂದಕ್ಕೆ ಮಿತಿಯೆ ಇಲ್ಲ‌. ಡಾ ಪ್ರಕಾಶ ಭಟ್ಟರು ಯಾವುದೇ ಕಾರ್ಯಕ್ರಮವನ್ನು ಕೈಗೊಳ್ಳುವಾಗ ಅದು ಜನರಿಂದಲೆ ಬರುವ ಯೋಜನೆಯ ಪ್ರಸ್ತಾವನೆ ಇದ್ದರೆ ಕಾರ್ಯಗತಗೊಳ್ಳಲು ಜನರ ಸಹಕಾರವಿರುತ್ತದೆ‌ ಎಂದು ನಂಬಿದ್ದರು. ಹಾಗಾಗಿ ಅವರು ಸಮುದಾಯದ ಜನರಲ್ಲಿ ಸ್ವ ಸಹಾಯ ಪದ್ಧತಿಯ ಬಗ್ಗೆ ಮಾಹಿತಿ ನೀಡಿ ಎಷ್ಟೋ ಸಾರ್ವಜನಿಕ ಸೇವಾ ಕೆಲಸಗಳನ್ನು ಮಾಡಲು ಸಾಧ್ಯವಾಯಿತು‌. ಸ್ವ ಸಹಾಯ ಸಂಘವು ತಳಮಟ್ಟದಲ್ಲಿ ಹತ್ತು ಜನರಿಂದ ಮೊದಲುಗೊಂಡು ಅದು ಮಹಾಸಂಘವಾಗಿ ಬೆಳೆದು ನಿಂತು ಹಳ್ಳಿಯವರ ಸಮಗ್ರ ಆರ್ಥಿಕ-ಸಾಮಾಜಿಕ ಅಭಿವೃದ್ಧಿಗೆ ಪವಾಡದ ರೀತಿಯಲ್ಲಿ ಸಹಾಯಕಾರಿಯಾಗಿದ್ದುದು ಡಾ ಪ್ರಕಾಶ ಭಟ್ಟರಿಗೆ ನೆಮ್ಮದಿಯನ್ನು ತಂದಿದೆ. ಸಾವಿರಾರು ಹಳ್ಳಿಯ ಜನರು ಸ್ವ ಸಹಾಯ ಪದ್ಧತಿಯಿಂದ ಬದುಕಿನಲ್ಲಿ ನೆಮ್ಮದಿಯನ್ನು ಪಡೆದುಕೊಂಡಿದ್ದಾರೆ. ಭಟ್ಟರ ಹೆಂಡತಿ ಹಾಗೂ ಮಕ್ಕಳೂ ಕೂಡ ಇವರ ಸೇವಾವೃತ್ತಿಗೆ ಕೈ ಜೋಡಿಸಿದ್ದಾರೆ‌. ಗಾಂಧಿ ಈಗ ಎಲ್ಲಿದ್ದಾರೆ? ಎಂದುಕೇಳುವ ಜನರಿಗೆ ಗಾಂಧೀಜಿಯವರ ಶಿಷ್ಯರಾದ ಮಣಿಭಾಯಿ ಅವರ ಶಿಷ್ಯ ಡಾ ಪ್ರಕಾಶ ಭಟ್ಟರನ್ನು ತೋರಿಸಬೇಕು. ಗಾಂಧಿವಾದವನ್ನು ಮೈಗೂಡಿಸಿಕೊಂಡ ಇವರು ಇನ್ನೋರ್ವ ಗಾಂಧಿಜೀಯೆ ಆಗಿದ್ದಾರೆ. ಇಂತಹ ಶ್ರಮ, ತ್ಯಾಗ, ನಿಸ್ವಾರ್ಥ ಇರುವ ಪ್ರಾಮಾಣಿಕ ಕಾರ್ಯಕರ್ತರೆ ಸಮಾಜ ಸೇವೆಯ ಯಶಸ್ಸಿಗೆ ಕಾರಣಕರ್ತರಾಗುತ್ತಾರೆ. ಈಗ ಇಂತಹ ನಿಸ್ಪ್ರಹ ಪ್ರಾಮಾಣಿಕ ಕಾರ್ಯಕರ್ತರು ಮಾಯವಾಗಿದ್ದಾರೆ. ಹಣ ಮಾತ್ರ ಯಶಸ್ಸಿನ ಮಾನದಂಡವಾಗಿದೆ. ನಾವು ಮಾಡುವ ಎಲ್ಲ ಕೆಲಸಗಳನ್ನು ಕೇವಲ ಹಣದಿಂದ ಅಳೆಯಲಾಗದು. ನಾವು ಮಾಡಿದ ಕೆಲಸ ನಮಗೆ ತೃಪ್ತಿ ಸಂತೋಷ ಕೊಡದಿದ್ದರೆ ಇಂತಹ ಕೆಲಸಗಳಿಂದ ಸಿಗುವ ಹಣ ಎಷ್ಟೇ ಇರಲಿ. ಅದಕ್ಕೆ ಬೆಲೆಯಿಲ್ಲ‌.

ಡಾ ಪ್ರಕಾಶ ಭಟ್ಟರು ಸಾಧಿಸಿದ ಸಾಧನೆಗಳು ಅನೇಕ. ಸ್ನೇಹ ಜಾತ್ರೆ ಮಾಡಿದರು. ಸ್ವ ಸಹಾಯ ಸಂಘಗಳು ಒಬ್ಬರಿಗಿನ್ನಬ್ಬರು ಆಶ್ರಯಿಸಿ ಬೆಳೆಯುವ ತತ್ವಾದರ್ಶವನ್ನು ಜನರಲ್ಲಿ ಮೂಡಿಸಿದವು‌. ಹಳ್ಳಿಯ ಸ್ವ ಸಹಾಯದ ಕೆಲವರಿಗೆ ಕೃಷಿ ಸಂಬಂಧಿತ ಪ್ರವಾಸಗಳನ್ನು ಏರ್ಪಡಿಸಿ ಅಲ್ಲಿನ ಜನರಿಂದ ಹೊಸ ಪಾಠಗಳನ್ನು ಕಲಿತು ಬರುತ್ತಿದ್ದರು. ಕೆಲವೆ ವರ್ಷಗಳಲ್ಲಿ ಆ ಹಳ್ಳಿಯವರು ಮೂರು ಮಾಳಿಗೆಗಳ ಸ್ವ ಸಹಾಯ ಕಟ್ಟಡವನ್ನು ಕಟ್ಟಿದರು‌. ಜನರು ಸಾಮೂಹಿಕವಾಗಿ ಬದುಗಳನ್ನು ಕಟ್ಟಿದರು.‌ ಕೆರೆಯನ್ನು ಸ್ವಚ್ಛಗೊಳಿಸಿದರು.‌ಬಂಜರು ಬಿದ್ದ ಬೆಟ್ಟದಲ್ಲಿ ಗಿಡಗಳನ್ನು ನೆಟ್ಟಿದ್ದಲ್ಲದೆ ಅಲ್ಲಿ ಕೃಷಿ ಮಾಡಿ ಮನೆಗಳನ್ನು ಕಟ್ಟಿಕೊಂಡರು. ಹೀಗೆ ಹಳ್ಳಿಯ ಸ್ವ ಸಹಾಯಕ ಸಂಘಗಳು ಸಾಮೂಹಿಕ ಮದುವೆಗಳನ್ನೂ ಮಾಡಿ, ಹಣದ ಉಳಿತಾಯ ಮಾಡಿದರು. ಕುಡಿತದ ವಿರುದ್ಧ ಆಂದೋಲನವನ್ನು ಜನರೆ ಸಂಘಟಿಸಿ ಮಾಡಿದರು. “ಲೋಕವನ್ನು ಉದ್ಧರಿಸುತ್ತೇನೆ ಎಂದುಕೊಳ್ಳಬೇಡ. ಅದು ಎಂದೂ ಹೀಗೆಯೇ ಇರುತ್ತದೆ‌ ಆತ್ಮೋದ್ಧಾರಕ್ಕೆ ಇರುವ ಒಂದೇ ದಾರಿ ಸೇವೆ‌. ಅದಕ್ಕಾಗಿ ಕೆಲಸ ಮಾಡು” ಇದು ಡಾ ಪ್ರಕಾಶ ಭಟ್ಟರು ಕಂಡುಕೊಂಡ ಅಧ್ಯಾತ್ಮ.

“ಪರಸ್ಪರ ಪ್ರೀತಿ, ತ್ಯಾಗ, ಸಹಕಾರ, ಪ್ರಾಮಾಣಿಕತೆ, ಪರೋಪಕಾರ ಬುದ್ಧಿ, ಸ್ವಾರ್ಥತ್ಯಾಗ, ಪರಿಶ್ರಮ ಇವೆಲ್ಲವೂ ನಮ್ಮೊಡನೆ ಯೋಜನೆಯಲ್ಲಿ ಪಾಲ್ಗೊಳ್ಳುವ ಜನರಲ್ಲಿ ನಾವು ನಿರೀಕ್ಷಿಸುವ ಗುಣಗಳು‌. ಹಾಗೆ ನಿರೀಕ್ಷಿಸುವ ನೈತಿಕ ಹಕ್ಕು ನಮಗೆ ಬರಬೇಕಿದ್ದಲ್ಲಿ ಸ್ವತಃ ನಾವು ಅದನ್ನು ಆಚರಿಸುತ್ತಿರಬೇಕು. ಹಾಗಿಲ್ಲದಿದ್ದಾಗ ಅದು ಹಿಪೋಕ್ರಸಿ’ ಎನ್ನುತ್ತಾರೆ ಡಾ ಪ್ರಕಾಶ ಭಟ್ಟರು. ಮುಂದೆ ಇಂತಹ ತಂಡ ನಮಗೆ ಸಿಕ್ಕೀತೆ? ಯುವಕರು ತ್ಯಾಗಕ್ಕೆ ತಯಾರಿದ್ದಾರೆಯೆ? ಡಾ ಪ್ರಕಾಶ ಭಟ್ಟರಂತಹ ಅಪ್ಪಟ ಗಾಂಧಿವಾದಿ ನಮಗೆಲ್ಲಿ ಸಿಕ್ಕಾರು? ಪ್ರಕಾಶ ಭಟ್ಟರಿಗೆ ಆ ಹಳ್ಳಿಯ ಜನರು ದೇವರ ಮೇಲಿನ‌ ಶ್ರದ್ಧಾ ಭಕ್ತಿಗಿಂತ ಹೆಚ್ಚಿನ ಪ್ರೀತಿಯನ್ನು ತೋರಿಸಿದ್ದಾರೆ. ಎಂಬುದು ಇವರು ಮಾಡಿದ ಜನಸಮೂಹ ಕ್ರಾಂತಿಗೆ ಹಿಡಿದ ಕನ್ನಡಿ‌. ಈ ಪುಸ್ತಕದಲ್ಲಿ ಅನೇಕ ಫಲಾನುಭವಿಗಳ ಧನ್ಯತೆಯ ಮಾತುಗಳಿವೆ‌  ಓದಿರಿ. ಡಾ ಪ್ರಕಾಶ ಭಟ್ಟರಂತಹ ಗಾಂಧಿಜೀಯ ಮೊಮ್ಮಗನನ್ನು ಪರಿಚಯಿಸಿಕೊಳ್ಳಿ.

‍ಲೇಖಕರು Admin MM

September 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: