‘ಸಪ್ತ ಸಾಗರದಾಚೆಯೆಲ್ಲೋ’ ಭಾವ ತೇರಯಾತ್ರೆ…

ರಾಮ್ ಪ್ರಕಾಶ್ ರೈ ಕೆ 

—-

ಅದೊಂದು ಪ್ರಪಂಚ. ದೊಡ್ಡ ಕನಸುಗಳ ಸಾಗರದೊಳಗೆ ಸಂಭ್ರಮಿಸೋ ಮನು ಮತ್ತು ಪ್ರಿಯಾರ ಪುಟ್ಟ ಪ್ರಪಂಚ. ಮನು ನಾಳೆಯ ಹುಡುಕಾಟದಲ್ಲಿದ್ದರೆ, ಪ್ರಿಯಾ ಈ ಕ್ಷಣವ ಕಾಣುವ ಹುಡುಗಿ. ಕತ್ತೆ ಮತ್ತು ಪುಟ್ಟಿ- ಇದು ಈರ್ವರ ನಡುವಿನ ಮಧುರ ಪ್ರೇಮ ಸಂಧಿಸುವ ವಿಳಾಸ. ಮಳೆಗೆ ಕಾಯುವ ಹಸಿರಮನ, ಅಲೆಗಳಿಗೆ ಕಾಯುವ ಮೌನ ತೀರದಂತೆ ಕಾತರಿಸುವ, ಕಾಡುವ ಒಲವ ಹಚ್ಚಿದ ಕಣ್ಣುಗಳವರದು. ಇಂತಿರುವ ಬೆಸುಗೆಗೊಂಡ ಬೆರಳುಗಳ ಪಯಣ, ಕಾಲ ಗುಜರಿಯಾಗುತ್ತಿದ್ದಂತೆಯೇ, ಸ್ವರ್ಣ ಮಾರೀಚನ ರೂಪದ ಆಸೆಯ ಪಾಶಕ್ಕೆ ಸಿಲುಕುತ್ತದೆ. ಪರಿಣಾಮ ವಂಚನೆ, ಕ್ರೌರ್ಯ,ನೋವುಗಳ ಹೊಡೆತಕ್ಕೆ ಸಿಲುಕಿ  ತತ್ತರಿಸುವ ಬದುಕ ಬಂಡಿ, ಕೊನೆಗೆ ಅಪರಿಚಿತ, ನಿರ್ಜನ ಸ್ಟೇಷನೊಂದಕ್ಕೆ ಸರ್ವವನ್ನೂ ಕಳೆದುಕೊಂಡು ಭಾವಶೂನ್ಯವಾಗಿ ಬಂದು ಬೀಳುತ್ತದೆ.

ಬಿಳಿ ಬಟ್ಟೆಯಂತಿದ್ದ ಬಾಳಿನ ತುಂಬೆಲ್ಲಾ ಅಳಿಸಲಾಗದ ಕಲೆಗಳು, ಥೇಟು ಬಿರುಗಾಳಿಯ ಅಬ್ಬರಕ್ಕೆ ಸಿಲುಕಿ ಹೊಯ್ದಾಡುವ ಹಡಗಿನಂತೆ.ಹೀಗೆ, ಪ್ರೇಮವೆಂಬ ಬಂಧಿಸಲಾಗದ ರಂಗೊಂದನ್ನು ನೂಲುಗಳಿಗೆ ಎರಚಿ, ಸದ್ದು ಗದ್ದಲಗಳೇ ತುಂಬಿದ ಮಗ್ಗದೊಳಗೆ ಪೂರೈಸಿ, ಕಡು ಮೌನಿಯಾಗಿ ಸಾಗುವ ಅವು ಅಂತಿಮವಾಗಿ ಅಪ್ಪಿಕೊಂಡವೋ, ಬಿಡಿಸಿಕೊಂಡವೋ ಎಂಬ ಪ್ರಶ್ನೆಗಳಿಗೆ ಕನ್ನಡಿ ಹಿಡಿಯುವ ಒಂದು ಭಾವುಕ ಕಲಾಕೃತಿಯೇ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆಯೆಲ್ಲೋ ಸೈಡ್-A’.

ಇದು ಕೇವಲ ಚಿತ್ರಗಳ ಜೋಡಣೆಯಲ್ಲ. ದಾರದಲ್ಲಿ ಪೋಣಿಸಿದ ಹೂಗಳ ತೆರನಾದ ಬಹು ಭಾವನೆಗಳ ಸಂಕಲನ. ಇಲ್ಲಿ ವಿಷಾದವಿದೆ, ನೋವಿದೆ, ನಲಿವಿದೆ. ಸಣ್ಣ ಸ್ಟೇಷನ್ ನಲ್ಲಿ ನಿಲ್ಲದೆ ಓಟ ಕೀಳುವ, ವೇಗದ ರೈಲುಗಳ ಮೇಲಿನ ಊರ ಹೆಸರ ಓದಲಾಗದೆ ಚಡಪಡಿಸೋ ಗೊಂದಲದ ದೃಷ್ಟಿಯ ಅಭಿವ್ಯಕ್ತಿಯಿದೆ. ಇವೆಲ್ಲವುಗಳಿಗೆ ಆದಿಯಾಗಿ ತಂಗಾಳಿಯಂತೆ ಹೃದಯಕ್ಕೆ ಮುತ್ತಿಡುವ ಕತ್ತೆ ಮತ್ತು ಪುಟ್ಟಿಯ ನಡುವಿನ ಪರಿಣಯವಿದೆ. ಈ ಪ್ರೇಮದ ವಾಸ್ತವಿಕ ಅಭಿವ್ಯಕ್ತಿಯೇ ಇಡಿಯ ಚಿತ್ರ ಮನವನ್ನೇ ಅಪೋಶನಗೊಳಿಸಲು ಕಾರಣವಾಗುವ ಉಸಿರು,ಒಡಲು.’ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ’ ಎಂಬ ಜಯಂತ ಕಾಯ್ಕಿಣಿಯವರ ಕವಿತೆಯ ಸಾಲಿಗೆ ಸಾದೃಶ್ಯವೆಂಬಂತೆ, ಅನ್ವರ್ಥವೆಂಬಂತೆಯೇ ಸಾಗುತ್ತದೆ ಈ ಕಥಾನಕ.

ಈ ಕಲಾಕೃತಿ ಅನುಭವ ಮತ್ತು ಅನುಭಾವದ ದೃಷ್ಟಿಯಲ್ಲಿ ಒಂದು ಸುಂದರ ಕವಿತೆಯಂತೆ ಭಾಸವಾಗುತ್ತದೆ. ಸಾಗರ,ನೀಲಿಬಣ್ಣ,ಶಂಖ, ಟೇಪ್ ರೆಕಾರ್ಡರ್,ಜೈಲಿನ ಸಂದರ್ಶಕರ ಕೊಠಡಿ ಇವೆಲ್ಲವೂ ಇಲ್ಲಿ ರೂಪಕಗಳಾಗಿವೆ. ಶರಧಿಯ ಶಬ್ದ -ಮೌನಗಳೆಲ್ಲವನ್ನೂ ಎದೆಗವುಚಿಕೊಂಡ ಈ ಕವಿತೆ ಹೆಜ್ಜೆ ಹಾಕುವುದು ಹರಿವ ನದಿಯಂತೆಯೇ ಮತ್ತು ಅದೇ ಭಾವವನ್ನು ಕತ್ತಲೊಳಗೆ ಕಳೆದುಹೋದ ಕಣ್ಣುಗಳಿಗೂ ವರ್ಗಾಯಿಸಿ ಅಲ್ಲಿಯೇ ನೆಲೆಯಾಗುವುಂತೆ ಮಾಡುತ್ತದೆ. ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಳ್ಳಲು ಕಾರಣವಾಗುವ ಅಂಶವೇ ಇದು ಅಂದರೆ ಚಿತ್ರದ ಆತ್ಮದಲ್ಲಿ ಅಡಕವಾಗಿರುವ ಸೆಳೆತ. ರಿಯಲಿಸ್ಟಿಕ್ ಆದ ದೃಶ್ಯಗಳ ನೇಯ್ಗೆ. ಪ್ರಿಯಾ ವಿವಿಧ ಸನ್ನಿವೇಶಗಳಲ್ಲಿ ಭಾವ ತುಂಬಿದ ದನಿಯಲ್ಲಿ ‘ಕತ್ತೆ’ ಎಂದು ಮನುವನ್ನು ಕರೆಯುತ್ತಿದ್ದರೆ, ನಮ್ಮೆಲ್ಲರ ಹಳೆಯ ದಿನಗಳ, ಹರೆಯ ಕಾಲದ ಭಗ್ನ, ಅಲ್ಪಾಯುಷ್ಯ ಪ್ರೇಮಗಳು ನೆನಪಾಗಿ ಒಂದು ಸುದೀರ್ಘ ನಿಟ್ಟುಸಿರು ಹೊರ ಬೀಳುತ್ತದೆ.

ಮುಳ್ಳಿನ ಹಾದಿಯ ಪ್ರವೇಶವಾದಾಗ ಜೋಡಿ ಕಾಲುಗಳು ಬೇರೆಯಾಗದಿರಲಿ ಎಂದು ತೆರೆದ ಕಣ್ಣುಗಳಿಂದ ಪ್ರಾರ್ಥಿಸುತ್ತೇವೆ. ಜೈಲಿನ ಸಂದರ್ಶಕರ ಕೊಠಡಿಯಲ್ಲಿ ದೂರವಾಗುವ ಬೆರಳುಗಳು, ಹಿಂದಿರುಗಿ ನೋಡಿದಾಗ ಸಂಧಿಸುವ ನೋಟಗಳು, ಅವಳ ಅಪ್ಪುಗೆ, ಅವನ ಭರವಸೆ ಇತ್ಯಾದಿಗಳೆಲ್ಲವೂ ಪರದೆಯ ಮೇಲೆ ಸಾಗುತ್ತಿದ್ದಂತೆಯೇ ಹೃದಯದ ಸಪ್ಪಳ ಕಿವಿಗೆ ಕೇಳುತ್ತದೆ. ಕಣ್ಣ ಹನಿ ಕೆನ್ನೆಯ ಮೇಲೆ ಜಾರಿ ಬೀಳುತ್ತದೆ.ಆಷಾಢದ ಮಳೆಯಂತಿರುವ ಒಲವ ಪಯಣದಲ್ಲಿ, ಗುಡುಗು ಸಿಡಿಲಿನಂತೆ ಕ್ರೌರ್ಯದ, ಕರಾಳತೆಯ ಮುಖವಾಡ ಹೊತ್ತು ಬರುವ ಜೈಲು ಪರಮ ಗಟ್ಟಿಗರಿಗೂ ಅಳುಕು ಹುಟ್ಟಿಸುತ್ತದೆ.ಹೀಗೆ ಚಿತ್ರ ಅನಂತ ಮೈಲುಗಳವರೆಗೆ ಹರಡಿರುವ ವಿಶಾಲ ಕಾಡಿನಂತೆಯೇ ಕಾಡುತ್ತದೆ.

ಕಥೆ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಬದುಕಿನ ಸತ್ಯಗಳನ್ನು ಮಳೆ ಬಿಟ್ಟು ಹೋಗುವ ನೆನಪುಗಳಂತೆ, ಹನಿ ಹನಿಯಾಗಿ ಹೇಳುತ್ತದೆ. ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ”ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ.ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ  ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ. ಬದುಕೆಂಬ ಮಸೂರದ ಪೂರಾ ಧೂಳು ಆವರಿಸಿದಾಗ, ಎದುರಾಗುವ ಅಸ್ಪಷ್ಟತೆಯ ತಲ್ಲಣ, ತಳಮಳ, ಜಾತ್ರೆಯ ಜನ ಜಂಗುಳಿಯ ಮಧ್ಯೆ ಕಳೆದು ಹೋದ ಮಗುವಿನ ಕಣ್ಣೊಳಡಗಿರುವ ಭಾವದ ಅಭಿವ್ಯಕ್ತಿ ದ್ವಿತೀಯಾರ್ಧದ ಆತ್ಮವಾಗಿ ನೋಡುಗನನ್ನು ಸಂಪೂರ್ಣವಾಗಿ ಆವರಿಸುತ್ತದೆ.ಚಿತ್ರದ ಪ್ರತಿ ಹೆಜ್ಜೆಯೂ ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತೋ’ ಕವಿತೆಯಲ್ಲಿ ಬರುವ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಸಾಲಿನ ಸುತ್ತಲೂ ಧಿಗಿಣ ಹಾಕುತ್ತದೆ.

ಈ ಚಿತ್ರದ ಅಕ್ಷಿಗಳೆಂದರೆ ಮನು ಮತ್ತು ಪ್ರಿಯಾರನ್ನು ಧರಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್.ಭವಿಷ್ಯದ ಭಾಷೆಯ ಓದಲು ಕಾತರಿಸುವ, ಸಣ್ಣ ಮನದೊಳಗೆ ದೊಡ್ಡ ಆಸೆಗಳ ಆಲದಮರವ ಸದಾ ಪೋಷಿಸುವ ಕೆಳ ಮಧ್ಯಮ ವರ್ಗದ ಹುಡುಗನ ತಲ್ಲಣಗಳು, ತುಮುಲಗಳನ್ನು ರಕ್ಷಿತ್ ವಾಸ್ತವಿಕ ಸರಳತೆಯೊಂದಿಗೆ ಪ್ರಸ್ತುತ ಪಡಿಸಿದ್ದಾರೆ.ತರಹೇವಾರಿ ಬಣ್ಣಗಳಲ್ಲಿ ಅಭಿನಯಿಸಿರುವ ರಕ್ಷಿತ್ ರಿಗೆ ಈ ರಂಗನ್ನು ಹೊದ್ದುಕೊಳ್ಳುವುದು ಬಹು ಸುಲಭ. ಆದರೆ, ಪ್ರೇಕ್ಷಕರ ಆತ್ಮ, ಭಾವ, ಹೃದಯದ ಕಣ ಕಣಗಳಿಗೂ ತಲುಪಿ, ಸಾಗುವ ಬಸ್ಸಿನ ಕಂಗಳೆಲ್ಲವನ್ನೂ ಇಕ್ಕೆಲಗಳಲ್ಲಿ ಸೇರಿರುವ ಕಾನನವೊಂದು ಸೆಳೆಯುವ ರೀತಿ, ನೋವು, ನಲಿವು,ಪ್ರೇಮ,ದುಃಖ ಎಲ್ಲವನ್ನೂ ಹೊಳೆಯ ಸುಳಿಯಂತೆ ತನ್ನ ಮನೋಹರ ನಯನಗಳಲ್ಲೇ ಸರ್ವ ಭಾವಗಳ ಅಭಿವ್ಯಕ್ತಿಗೊಳಿಸಿ, ಪ್ರಿಯಾಳನ್ನು ಜಗ ಪ್ರಿಯಗೊಳಿಸಿದವರು ರುಕ್ಮಿಣಿ. ಅದೆಷ್ಟು ಒಗೆದರೂ ಮಾಸದ ಬಣ್ಣದಂತೆ ಅಚ್ಚಾಗುವ ರುಕ್ಮಿಣಿ ನೋಡುಗನನ್ನು ನೋಟೀಸೇ ನೀಡದೆ ಬಂಧಿಸುತ್ತಾರೆ.

ಒಬ್ಬ ಚಿತ್ರ ಪ್ರೇಮಿಯಾಗಿ ಘಂಟಾ ಘೋಷವಾಗಿ ಹೇಳಬಹುದು ಕನ್ನಡ ಚಿತ್ರ ಜಗತ್ತಿನ ಈ ತಲೆಮಾರಿನ ನಾಯಕಿಯರಿಗೆ ರುಕ್ಮಿಣಿಯವರ ಪ್ರಿಯಾಳ ಪಾತ್ರಪೋಷಣೆ ಒಂದು ಅಮೂಲ್ಯ ಕಲಿಕಾ ಅಧ್ಯಾಯವೆಂದು.ಮಲಯಾಳಂ ಚಿತ್ರಗಳ ಆತ್ಮ ವೆನಿಸಿಕೊಂಡಿರುವ ನೈಜತೆಯ ಪರಿಮಳವೇ ಮನು ಮತ್ತು ಪ್ರಿಯಾರ ಪಾತ್ರಗಳಲ್ಲಿ ಹಾಸುಹೊಕ್ಕಾಗಿ ನೋಡುಗರನ್ನು ಆವರಿಸುತ್ತದೆ, ಇನ್ನಿಲ್ಲದಂತೆ ಕಾಡಲು ಕಾರಣಕರ್ತವಾಗಿದೆ. ಇನ್ನು  ರಮೇಶ್ ಇಂದಿರಾ ಗೋಮುಖ ವ್ಯಾಘ್ರ ಕೈದಿ ಯಾಗಿ,ತಣ್ಣಗಿನ ಕ್ರೌರ್ಯದ ಪರಕಾಷ್ಟೆಯ ಪ್ರತ್ಯಕ್ಷೀಕರಿಸಿದ್ದಾರೆ. ಉಳಿದ ಪಾತ್ರಗಳು ಮನು ಮತ್ತು ಪ್ರಿಯಾರ ಹಿಡಿದು ಸಾಗುವ ರಥದ ಪಾಶವಾಗಿವೆ. ಚಿತ್ರದ ಕಥೆಯು ವರ್ಣಮಯ ಭಾವಗಳ ರೂಪಕದಲ್ಲಿ ಪ್ರಕಟಗೊಳ್ಳಲು ಅದ್ವೈತರ ಅನರ್ಘ್ಯ ಪ್ರಯತ್ನ ಕಾರಣವಾಗಿದೆ. ಚರಣರ ಸಂಗೀತಕ್ಕೆ ಕೇಳುಗ ಸಂಪೂರ್ಣವಾಗಿ ಶರಣಾಗುತ್ತಾನೆ. ‘ಕಣ್ಮರೆಯ ಕಾಡೇ’ ಹಾಡಿನ ಮಧ್ಯ ಬರುವ ವಯಲಿನ್ ಮಿಡಿತದಲ್ಲಿ ಹೃದಯವೇ ಹರಿದ ನೋವಿದೆ. ‘ಕಾಲ ಕಾಯಿಸೋ ಕಡೆ’, ‘ಸಾಗರದ ಆಚೆ’ ಇವು ಭಾವಗಳ ಬಳಗವೇ ಬಿಗಿದಪ್ಪಿ ಹಿಡಿದ ಸಂಯೋಜನೆ.

ಹೀಗೆ ಒಂದಕ್ಕೊಂದು ಕೈ ಹಿಡಿದು ನಿಂತ ರೈಲು ಸೇತುವೆಯ ಪಟ್ಟಿಗಳಿಗೆ ಆಧಾರ ಸ್ತoಭ, ಸೂತ್ರಧಾರ ಹೇಮಂತ್ ರಾವ್. ಒಂದು ಸರಳ ಕಥೆಯೂ ಕೂಡ ನಿರ್ದೇಶಕನ ನಿರೂಪಣೆಯ ಶೈಲಿಗೆ ಸಿಲುಕಿ ಅದೆಷ್ಟು ಸುಂದರ ಶಿಲ್ಪವಾಗಬಹುದು ಎಂಬುವುದಕ್ಕೆ ಈ ಚಿತ್ರವೇ ಸಾಕ್ಷಿ. ಹೇಮಂತರ ಪ್ರತಿ ಚಿತ್ರದಲ್ಲೂ ಒಂದು ಬೃಹತ್ ಸಾಗರದಷ್ಟೆ ಆಳವಾದ ಭಾವಗಳು ಅಡಕವಾಗಿರುತ್ತದೆ.ವಿಶೇಷತಃ ನಾಯಕಿ ಅಥವಾ ಸ್ತ್ರೀ ಪಾತ್ರ ಪೋಷಣೆ, ನಿಯಂತ್ರಿತ ವೇಗದಲ್ಲಿ ಭಾವನೆಗಳ ಸ್ಪಷ್ಟ ರವಾನೆ ಇವರ ಚಿತ್ರಕತೆಗಳ ಮನ ಮೆಚ್ಚುವ-ಮುಟ್ಟುವ ಸಂಗತಿ. ತಂದೆ ಮಗನ ಸಂಬಂಧ, ಜೊತೆಗೊಂದು ಪ್ರೇಮದ ಲೇಪನವಿರುವ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ಕ್ರೈಮ್ ಥ್ರಿಲ್ಲರಿನ ನಡುವಲ್ಲಿಯೂ ಮಾನವ ಬದುಕಿನ ಸಹಜ ಸಂಗತಿಗಳ ತೆರೆದಿಡುವ ‘ಕವಲುದಾರಿ’, ಪ್ರೇಮವೇ ಪ್ರಧಾನ ಭೂಮಿಕೆಯಲ್ಲಿರುವ ‘ಸಪ್ತ ಸಾಗರದಾಚೆ ಎಲ್ಲೋ ‘ ಹೀಗೆ ಈ ಎಲ್ಲಾ ಚಿತ್ರಗಳ ಮೂಲಕ ಹೇಮಂತ್ ತನ್ನದೇ ಆದ ಅನೂಹ್ಯ ಮತ್ತು ವಿಭಿನ್ನ ಕಥನ ಕಟ್ಟುವಿಕೆಯ ಶೈಲಿಯನ್ನು ಸ್ಥಾಪಿಸಿಕೊಂಡಿದ್ದಾರೆ. ಮಾತ್ರವಲ್ಲ,ಮಾತಿನ ಹಂಗಿಲ್ಲದೆ ಸಾಗುವ ದೃಶ್ಯಗಳು ಕಥೆಯನ್ನು ಕೊಂಡು ಹೋಗುವಂತೆ ಮಾಡುವ ಅನನ್ಯತೆ ಅವರಲ್ಲಿದೆ.

ಸಂತಸದ ಮೊದಲಾರ್ಧದಲ್ಲಿ ಅರಳಿದ ಹೂಗಳ ಗೊಂಚಲು, ದ್ವಿತೀಯಾರ್ಧದ ನೋವಿನ ಬೇಗೆಗೆ ಮುದುಡಿರಿವುದು,ಹಲವು ವರುಷಗಳ ಕಾಲ ಬದಲಾವಣೆಯ ತೋರಿಸುವ ದೋಣಿಯ ಅಂಚಿನ ಮಾಸಿದ ಹೆಸರು ಇತ್ಯಾದಿ ಅದೆಷ್ಟೋ ಚಿತ್ರದಲ್ಲಿರುವ ದೃಶ್ಯಗಳು ಇದಕ್ಕೆ ಉತ್ತಮ ಉದಾಹರಣೆ. ಇಂದು ವೈವಿಧ್ಯಮಯ ಜಾನರಿನ ಕಥಾನಕಗಳನ್ನು ಆಯ್ದು, ನೋಡುಗನ ಮನದೊಳಗೆ ಸದಾ ಕಾಲ ಉಳಿಯುವಂತೆ ಪ್ರಸ್ತುತಪಡಿಸುವ ವಿರಳ ನಿರ್ದೇಶಕರಲ್ಲಿ ಹೇಮಂತ್ ಅಗ್ರಗಣ್ಯರು. ಚಿತ್ರ ಜಗತ್ತಿನ ಈ ವಸಂತ ಕಾಲದಲ್ಲಿ ಕನ್ನಡ ಚಿತ್ರರಂಗಕ್ಕೊಬ್ಬ ‘ಮಣಿರತ್ನಮ್’ ಸಾಲಿಗೆ ಸೇರ್ಪಡೆಯಾಗುವ ಹೆಸರು ಸಿಕ್ಕಿದೆಯೆಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ.

ಹೀಗೆ ಒಂದು ಭಾವ ಚಕ್ರದ ಮೇಲೆ ಕುಳಿತು ಸಾಗುವ ಯಾನದ ಅನುಭವ ನೀಡುವ ಸಪ್ತ ಸಾಗರದಚೆಯಲ್ಲೋ ಚಿತ್ರದ ಕಥೆ ಇಲ್ಲಿಗೆ ಅಂತ್ಯಗೊಳ್ಳುವುದಿಲ್ಲ. ಬದಲಾಗಿ, ಅಲ್ಪವಿರಾಮವ ಬರೆಯುವ ಮೂಲಕ ಅಚ್ಚರಿ, ಕಾತರತೆಯ ಹಾದಿಗೆ ನಾಂದಿಯಾಗಿದೆ.ಸ್ಲೀಪರ್ ಬಸ್ಸುಗಳಲ್ಲಿ ಕಂಡಕ್ಟರ್ ‘ಹತ್ತು ನಿಮಿಷ ಟೈಮಿದೆ’ ನೋಡಿ ಎಂದಾಗ ಅಪ್ಪಿದ ನಿದ್ದೆಯ ಬಳಿ ಸರಿಸಿ, ಕಾದಿರುವ ತಿರುವಿನ ನಿಗೂಢತೆಗಳಿಗೆ ಸ್ವಾಗತ ಕೋರಲು ಮತ್ತೆ ತಯಾರಾಗುವಂತೆ, ಕೆಲವು ದಿನಗಳು ಹಳೆಯದಾಗುತ್ತಿದಂತೆಯೇ (ನಿನ್ನೆ, ನವೆಂಬರ್ 17) ಸಪ್ತ ಸಾಗರದ ಇನ್ನೊಂದು ತೀರದತ್ತ ಹುಟ್ಟು ಹಾಕಬೇಕಿದೆ.

ಅಂತಿಮ ಪೂರ್ಣ ವಿರಾಮದ ಮುನ್ನ :

ಚಿತ್ರದ ಕೊನೆಯಲ್ಲಿ ಪರದೆ ಕರಿಬಣ್ಣದ ಮೊರೆ ಹೋದಾಗ, ವಾಸುದೇವ ನಾಡಿಗರ ಕವಿತೆಯೊಂದು ಮನದಲ್ಲಿ ಹಾಗೆಯೇ ತೇಲಿ ಬರುತ್ತದೆ.

‘ಸರ್ವವೂ ಮುಗಿದೇ ಹೋದರೂ,

ಉಳಿಯುವ ಸರ್ವನಾಮವು ಒಂದೇ ಸಖಿ,

ಅದು ನೀನು’..

‍ಲೇಖಕರು avadhi

November 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: