ಸದಾಶಿವ ಸೊರಟೂರು
**
ಆಚೆ ಈಚೆಯ ದಡಗಳು
ಹೀಗೆ ನದಿಯನ್ನು ಲೆಕ್ಕಿಸದೆ
ಕಿತ್ತಾಡಿಕೊಳ್ಳುವಾಗ
ಪಾಪ, ನಡುವೆ ಹರಿಯುತ್ತಿದ್ದ
ನದಿಯೂ ತುಸು ಗಾಯಗೊಂಡಿದೆ.
ಯಾರ ಬಳಿ ಹೇಳಿಕೊಳ್ಳಬೇಕು
ಅದು ತನ್ನ ದುಮ್ಮಾನಗಳನು?
ಕಣ್ಣೀರನ್ನು
ತನ್ನ ಡೈರಿಯ ಯಾವುದೊ
ಪುಟವೊಂದನ್ನು ಕಿತ್ತು
ಅದರಲ್ಲಿ ಕಟ್ಟಿ ದಡಕ್ಕೆ ಎಸೆದು ಹೊಯಿತು.
ನದಿಯ ಜುಳುಜುಳುವನ್ನು
ಅದರ ಬಿಕ್ಕಳಿಕೆಯೆಂದು ಈ ಲೋಕ
ಭಾವಿಸಿದ್ದೆಲ್ಲಿ?
ನೋಡು ನೋಡು ನದಿ ಹೇಗೆ
ನಗುತ್ತದೆ ಎನ್ನುತ್ತಾರೆ!
ಮತ್ತೆ ಎಸೆಯುತ್ತಾರೆ ಒಂದೊಂದೆ
ಕಲ್ಲುಗಳನು ಅಲೆ ಎಬ್ಬಿಸುವ ಉಮೇದಿಗೆ;
ನದಿಯ ಬೆನ್ನಿಗೂ ತರಚುಗಾಯ.
ದಡಕ್ಕೆ ಬಂದು ಹೋಗುವ ಜನ
ನೆನಪುಗಳನ್ನು ನದಿಗೆ ಎಸೆದು
ಹೋಗುತ್ತಾರೆ
ಅದರದ್ದೆ ಅದಕ್ಕಾಗಿರುವಾಗ
ನೆನಪಿನ ಭಾರ ಹೇಗೆ ಹೊತ್ತು ಓಡಬೇಕು
ನದಿಗೆ ಬಿದ್ದ ಕನಸಿನಲ್ಲಿ
ಆ ಕಡಲೂ ಮುನಿಸಿಕೊಂಡಿದೆ
ಈ ದಡಗಳೂ ಕೈ ಬಿಟ್ಟಿವೆ
ದಡಕ್ಕೆ ಎಸೆಯಲ್ಪಟ್ಟ ಕಣ್ಣೀರು
ಮುಗಿಲ ಸಖ್ಯ ಬೆಳೆಸಿ
ನೆಲಕ್ಕೆ ಧೋ ಎಂದು ಸುರಿಯುತಿದೆ
ಈ ಮಳೆಯನ್ನು ನದಿಯ ಕಣ್ಣೀರೆಂದು
ಯಾರು ಹೇಳುತ್ತಾರೆ?
ನದಿ ಕಡಲಿಗೆ ಸೇರುವುದು ಆತ್ಮಹತ್ಯೆ ಎಂದು
ಯಾರಿಗೆ ಗೊತ್ತಾಗುತ್ತದೆ?
ಪಾಪ, ನದಿಗೆ ಸಾವಿನಲ್ಲೂ ಸುಖವಿಲ್ಲ!
0 ಪ್ರತಿಕ್ರಿಯೆಗಳು