ಸದಾಶಿವ ಸೊರಟೂರು
—
ಟ್ರಯಲ್ ರೂಮಿನಲ್ಲಿ
ಈಗಷ್ಟೇ ಬಿಚ್ಚಿ ಹ್ಯಾಂಗರ್ ಗೆ ಹಾಕಿದ
ಅಮಾಯಕ ಅಂಗಿ
ನನ್ನನ್ನೆ ಮಿಕಮಿಕ ನೋಡುತಿದೆ..
ಕೈಯಲ್ಲಿ ಹೊಸದು ನಿರುಪಾಯವಾಗಿ
ಕಾಯುತಿದೆ
ನನಗಾಗಿ
ಯಾರಿಗೊ ಬೇಡದ್ದು
ಇನ್ಯಾರಿಗೊ ಪ್ರಿಯವಾಗುವಂತೆ
ಈಗಾಗಲೇ ಯಾರೊ ತೊಟ್ಟು
ಅಳತೆ ಬಣ್ಣ ಚೆಂದ ನೋಡಿ
ಬಿಟ್ಟು ಹೋಗಿದ್ದಾರೊ ಏನೊ..
ಅಂಗಡಿಯ ಗೂಡಿನಲಿ
ಕಣ್ ಪಿಳಿ ಪಿಳಿ ಬಿಡುತ್ತಾ
ಈ ಬಟ್ಟೆಗಳು ಕಾಯುತ್ತವೆ
ತಮ್ಮ ಶಾಪ ವಿಮೋಚನೆಗೆ..
ಹಳೇದು ಬಿಚ್ಚಿ
ಹೊಸದು ತೊಡುವ ಈ ಅರೆಕ್ಷಣದ
ಮಾಯಕದ ಹೊತ್ತಿನಲ್ಲಿ
ಕನ್ನಡಿಯಲ್ಲಿ ಕಾಣುವ ನನ್ನ ಬೆತ್ತಲೆಯೇ
ನನ್ನನ್ನು ಅಣಕಿಸುತ್ತದೆ..
ಪಾಪ.. ಹ್ಯಾಂಗರ್ ನಲ್ಲಿ ಜೋತಾಡುವ
ಹಳೆಯ ಅಂಗಿಯಲ್ಲಿ
ಕಂಬನಿ ಬೆವರು ಹರಿದ ಕಿಸೆ
ತೊಟ್ಟ ನಿದ್ದೆ ಹಸಿದ ಕನಸು
ಚಿತ್ತು ಚಿಹ್ನೆ ಅಕಾಲ ಕಲೆಗಳು
ಆರ್ತವಾಗಿ
ನನ್ನನ್ನೇ ನೋಡುತ್ತಿವೆ..
ಹೊಸದು ಸುಲಭಕ್ಕೆ ಹೊಂದುವುದಿಲ್ಲ
ಹಳೆಯದು
ಅಷ್ಟೆ ಸುಲಭಕ್ಕೆ ನಮ್ಮನ್ನು
ತೊರೆಯುವುದಿಲ್ಲ..
ಗುಂಡಿ ಕೂರುವುದು ಇನ್ನೂ ಸಲೀಸಾಗಿಲ್ಲ
ಕಂಕುಳಲ್ಲಿ ದೊಗಳೆ ದೊಗಳೆ
ಚೂರು ತುಂಡಾಯ್ತೆನೊ
ಇಲ್ಲವೆ ಉದ್ದವೊ
ಒಳಗೊಳಗೆ ದ್ವಂದ್ವ
ಬಣ್ಣ ಚೆಂದ ಬಟ್ಟೆ ಚೆಂದ
ಬದುಕನ್ನು ಅಳತೆಗೆ ಹೊಂದಿಸಬೇಕೊ
ಅಳತೆಯನ್ನು ಬದುಕಿಗೆ ಹೊಂದಿಸಬೇಕೊ?
ಅಪ್ಪ,
ಅಳತೆಕೊಟ್ಟು ಹೊಲಿಸುತ್ತಿದ್ದ
ನಾನು ಇರುವ ಅಳತೆಗೆ
ಹೊಂದಲು ನೋಡುತ್ತಿದ್ದೇನೆ..!
ಟ್ರಯಲ್ ನೋಡಿ ಕಳಚಿದ
ಮೇಲೆ
ಹಳೆಯ ಅಂಗಿಯಲ್ಲೇನೊ
ಇನ್ನೂ ಉಳಿದಿದೆ ಸುಖ
ಅಂಗಡಿಯವ ಬ್ಯಾಗಿನಲ್ಲಿ ತುರುಕಿಕೊಟ್ಟ
ಹೊಸ ಅಂಗಿಯಲ್ಲಿ ಇನ್ನೂ ಬೇಕಿದೆ
ಸಮಾಧಾನ..
ಹೊಸ ಅಂಗಿಗೆ ಮತ್ತೆ ಬೆವರು ಬಳಿಯುತ್ತಾ
ಅಚಾನಕ್ ಕಾಫಿ ಜಾರಿಸುತ್ತಾ
ಯಾರದೊ ನೆನಪು ಸವರುತ್ತಾ
ಮತ್ತೆ
ಮತ್ತೆ
ನನ್ನದಾಗಿ ಮಾಡಿಕೊಳ್ಳುವುದು..
ಹಳೆಯದನು ಕೌದಿ
ಮಾಡಿಕೊಂಡು ಎದೆ ತುಂಬಾ
ಹೊದ್ದುಕೊಳ್ಳುವುದು..
ಹೇಳಿ ಬದುಕೆಂದರೆ
ಕಳಚಿ ತೊಡುವುದೊ?
ತೊಟ್ಟು ಕಳಚುವುದೊ?
ಅಥವಾ ಎರಡರ ಮಧ್ಯೆ
ಇಷ್ಟೆಷ್ಟೆ ಬೆತ್ತಲಾಗುವುದೊ..!?
0 ಪ್ರತಿಕ್ರಿಯೆಗಳು