ಸದಾಶಿವ ಸೊರಟೂರು
**
ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರ ಹೊಸ ಕೃತಿ ‘ಅಕ್ಕಡಿ’.
ಈ ಕೃತಿಯ ಕುರಿತು ಕವಿ ಸದಾಶಿವ ಸೊರಟೂರು ಅವರು ಬರೆದ ಬರಹ ಇಲ್ಲಿದೆ.
**
ನಾನು ಶೇಂಗಾ ಕೀಳುತ್ತಾ ಮುಂಬು ತಲುಪುವ ಹೊತ್ತಿಗೆ ಅತ್ತ ತುದಿಯ ಜಮೀನಲ್ಲಿ ರಾಗಿ ಕೊಯ್ಯುತ್ತಾ ಬರುವ ಅಣ್ಣಪ್ಪ ಎದುರಾಗುತ್ತಿದ್ದ. ನನ್ನ ಮತ್ತು ಅವನ ಊರಿನ ಮಧ್ಯೆ ಒಂದು ಡಾಂಬರು ರಸ್ತೆ ಬಿದ್ದುಕೊಂಡಿತ್ತು. ಕಾರು-ಬಸ್ಸುಗಳು ಆ ರಸ್ತೆಯ ಮೇಲೆ ಛಂಗನೆ ಜಿಗಿದು ಹೋಗುತ್ತಿದ್ದವು. ಅವುಗಳನ್ನು ನೋಡುತ್ತಾ ನಿಂತ ನಮಗೆ ನಮ್ಮ ಪಾಲಿನ ಜಗತ್ತು ಇಲ್ಲೇ ನಿಂತು ಹೋಗಿದೆಯೇನೊ ಅನಿಸುತ್ತಿತ್ತು. ಅವನು ಆ ಕಡೆ ಬಿಸಿಲು ಉಂಡರೆ, ನಾನು ಇಲ್ಲಿ ಬೆವರು ಕುಡಿಯುತ್ತಿದ್ದೆ. ಅಕ್ಕಡಿ ಸಾಲಿನ ಪುಡಿ ನೆರಳಿನಲ್ಲಿ ನಾವು ನಮ್ಮ ನಮ್ಮ ದಣಿವುಗಳನ್ನು ಕಳೆದುಕೊಂಡು ನಿರಾಳವಾಗುತ್ತಿದ್ದೆವು. ಹೊನ್ನಾಳಿ ಸೀಮೆಯ ಒಂದು ವಿಲಕ್ಷಣ ಗಾಳಿ ನಮ್ಮನ್ನು ಪೊರೆಯುತ್ತಿತ್ತು. ಅಣ್ಣಪ್ಪನ ಊರಿನ ದಿನಗಳನ್ನು ಜೆರಾಕ್ಸ್ ಮಿಷನ್ ನ ಮೇಲಿಟ್ಟು ಬಟನ್ ಒತ್ತಿದರೆ ಮುದ್ರಿತವಾಗಿ ಹೊರಬರುವ ದಿನಗಳು ಅವು ನನ್ನವಾಗಿರುತ್ತವೆ.
ನಂತರ ಇಬ್ಬರ ಹಾದಿ ಬದಲಾದವು, ಊರು ಬದಲಾದವು. ನಮ್ಮನ್ನು ಗಾಳಿಪಟದಂತೆ ನಮ್ಮ ನಮ್ಮ ಇಚ್ಛೆಗೆ ಹಾರಲು ಬಿಟ್ಟರೂ ಅಕ್ಕಡಿ ಸಾಲಿನ ಆ ಪುಡಿ ನೆರಳು ಈಗಲೂ ನಮ್ಮನ್ನು ಗಾಳಿಪಟದ ಸೂತ್ರದಂತೆ ಬಂಧಿಸಿಟ್ಟಿದೆ. ನನ್ನ ಗುರುಗಳೊಬ್ಬರು ಹೇಳುತ್ತಿದ್ದರು ‘ತಲೆನೋವು’ ಬಂದಾಗ ಮಾತ್ರೆ ತೆಗೆದುಕೊಳ್ಳುವ ಮೊದಲು ಆ ನೋವನ್ನು ಚೆನ್ನಾಗಿ ಅನುಭವಿಸು ಅಂತ. ಅಣ್ಣಪ್ಪನಲ್ಲಿ ಅಂತಹ ಗುಣವೊಂದಿದೆ. ಉಂಡ ಬಿಸಿಲು ಕೂಡ ಎಷ್ಟೊಂದು ಸವಿ ಅನ್ನುತ್ತಿದ್ದವನು ಅವನು. ಅಣ್ಣಪ್ಪ ತಾನು ಬದುಕಿನೊಂದಿಗೆ ಮುಖಾಮುಖಿಯಾದ ಅನೇಕ ಅನುಭವಗಳನ್ನು ನಾನು ಧ್ಯಾನದಂತೆ ಕೂತು ಕೇಳಿದ್ದೇನೆ. ಅವನ ಅನುಭವಗಳು ಕೇವಲ ಕ್ರಿಕೇಟ್ ಕಾಮೆಂಟರಿಯಂತಹ ನಿರೂಪಣೆಗಳಲ್ಲ.
ತನ್ನ ಅನುಭವನ್ನು ಸುಮ್ಮನೆ ಮುಂದಿಟ್ಟಂತೆ ಕಂಡರೂ ಎಲ್ಲರ ಬದುಕಿಗೆ ಬೇಕಾದ ಒಂದು ಒಳನೋಟ ಹೊಮ್ಮಿಸುತ್ತಾರೆ. ತರ್ಕಿಸುತ್ತಾರೆ. ಸಂವಾದಿಸುತ್ತಾರೆ. ಇದು ನನ್ನದೂ ಹೌದು ಎಂಬಂತೆ ಜಾದೂ ಮಾಡುತ್ತಾರೆ. ಕವಿತೆಯಾಗಿ ಕಾಡುತ್ತಾರೆ. ಕಥೆಯಂತೆ ಇಷ್ಟವಾಗುತ್ತಾರೆ. ಬಾಲ್ಯದಲ್ಲಿ ಕಷ್ಟವಿತ್ತಂತೆ, ಆಗ ಅದು ಕಷ್ಟವೆಂದು ಗೊತ್ತಿರಲಿಲ್ಲ. ಈಗ ಹಿಡಿ ಸುಖವಿದೆಯಂತೆ ಇದು ಸುಖವೆಂದೂ ಕೂಡ ಗೊತ್ತಿಲ್ಲ. ಕಷ್ಟಸುಖಗಳ ಅರಿವೇ ಇಲ್ಲದೆ ಬದುಕೋದು ಇದೆಯಲ್ಲ ಅದು ದೊಡ್ಡದು. ಇದು ನಾನು ಅಣ್ಣಪ್ಪನ ಬರಹದಲ್ಲಿ ಕಂಡುಕೊಂಡ ಸತ್ಯ. ಈ ಪುಸ್ತಕದ ಬರಹಗಳನ್ನು ಓದುತ್ತಾ ಹೋದ ಹಾಗೆ ನಿಮಗೆ ಅಣ್ಣಪ್ಪ ಸಿಗುತ್ತಾರೆ. ಆದರೆ ವಿಚಾರ ಅದಲ್ಲ. ಪುಸ್ತಕ ಮುಗಿಸಿ ಒಂದು ಕ್ಷಣ ಕಣ್ಮುಚ್ಚಿ ಕೂತುಕೊಳ್ಳಿ. ಖಂಡಿತ ನಿಮಗೆ ನೀವೇ ಸಿಗುತ್ತೀರಿ. ಇಲ್ಲಿನ ಬರಹದಲ್ಲಿ ಅಂಥದೊಂದು ಮ್ಯಾಜಿಕ್ ಇದೆ. ಇದು ಅವರ ಬರೀ ಬರಹದ ಮ್ಯಾಜಿಕ್ ಅಲ್ಲ ಅವರ ಬದುಕಿನ ಮ್ಯಾಜಿಕ್ ಕೂಡ ಹೌದು.
0 ಪ್ರತಿಕ್ರಿಯೆಗಳು