
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
1
ಜೀವನ ಪ್ರೀತಿ…
ನೌಕರಿಯ ಕಾರಣಕ್ಕೆ ಮನೆಯಿಂದ ತುಂಬಾ ದೂರದಲ್ಲಿದ್ದೇನೆ. ಒಂದು ರೂಂ ಮಾಡಿಕೊಂಡು ವಾಸ. ಹೋಟೆಲ್ ನಲ್ಲಿ ಊಟ, ರೂಮಿನಲ್ಲಿ ನಿದ್ದೆ. ಹೀಗೆ ಸಾಗಿದ್ದವು ದಿನಗಳು. ಊಟ, ತಿಂಡಿಗೆ ನಿಕ್ಕಿ ಮಾಡಿಕೊಂಡಿದ್ದ ಹೋಟೆಲ್ ನಲ್ಲಿ ಕೆಲಸಕ್ಕೆ ಬರುವ ಹುಡುಗರ ಬಗ್ಗೆ ನನಗೊಂದು ಕನಿಕರವಿರುತ್ತಿತ್ತು. ಯಾವ ಹುಡುಗರು ಮೂರು ತಿಂಗಳಿಗಿಂತ ಹೆಚ್ಚು ಅಲ್ಲಿರುತ್ತಿರಲಿಲ್ಲ, ಬಿಟ್ಟು ಹೋಗುತ್ತಿದ್ದರು.
ದೂರದ ವಿಜಾಪುರದಿಂದ ಒಬ್ಬ ಸುಮೂರು ಮೂವತ್ತು ವಯಸ್ಸಿನವನೊಬ್ಬ ಬಂದಿದ್ದ. ಅವನು ಒಂದು ವರ್ಷವಾದರೂ ಹೋಟೆಲ್ ಬಿಟ್ಟು ಹೋಗಿರಲಿಲ್ಲ. ಯಾಕಿರಬಹುದು? ಅವನಿಗೆ ಇಲ್ಲೇನು ತೃಪ್ತಿ ಸಿಕ್ಕಿರಬಹುದು ಅಂತ ಯೋಚಿಸುತ್ತಿದ್ದೆ. ಒಂದಿನ ಅವನನ್ನು ಕೇಳಿಯೇ ಬಿಟ್ಟೆ “ಎಲ್ಲಾ ಚೆನ್ನಾಗಿದೆಯೆನೊ ಇಲ್ಲಿ? ಎಷ್ಟು ಕೊಡ್ತಾರೆ ದುಡ್ಡು?” ಅಂತ ಕೇಳಿದೆ. “ಹ್ಞಂ ಸರ್ ಎಲ್ಲಾ ಚೆನ್ನಾಗಿದೆ, ಖುಷಿಯಾಗಿದ್ದೀನಿ. ಮೂರು ಐದು ಸಾವಿರ ಕೊಡ್ತಾರೆ. ಅಷ್ಟನ್ನೂ ಮನೆಗೆ ಕಳ್ಸತೀನಿ. ಊಟ ವಸತಿ ಹೋಟೆಲ್ನಲೇ ಮತ್ತೇನು ಬೇಕು ಸಾರ್?” ಅಂದ.

ಹೋಟೆಲ್ ನಲ್ಲಿ ಇದೀನಿ ಅನ್ನುವ ಕೀಳರಿಮೆ, ಎಲ್ಲಾದರೂ ದೊಡ್ಡ ಕೆಲಸ ಹುಡುಕಬೇಕು ಆಸೆ ಇಲ್ವ ಅಂದೆ. ” ನೋಡಿ ಸರ್ ನೀವು ಬೆಳಗ್ಗೆ ಇಲ್ಲಿ ತಿಂಡಿ ತಿಂತೀರಿ ನಾನು ಅದನ್ನೇ ತಿನ್ನೋದು, ನೀವು ರಾತ್ರಿ ಇಲ್ಲೇ ಊಟ ಮಾಡೋದು ನಾನು ಕೂಡ ಅದನ್ನೇ ತಿನ್ನೋದು, ನೀವು ರೂಮಿನಲ್ಲಿ ಮಲಗ್ತೀರಿ ನಾನು ಇಲ್ಲೇ ಮಲಗ್ತೀನಿ, ನೀವು ಊರಿಗೆ ಐವತ್ತು ಸಾವಿರ ಕಳ್ಸಬಹುದು, ನಾನು ಐದು ಸಾವಿರ ಕಳ್ಸತೀನಿ. ಅದನ್ನು ಪಡೆದ ನಿಮ್ಮ ಮನೆಯವರಿಗೆ ಅದಷ್ಟೇಖುಷಿಯಾಗುತ್ತೊ ಅಷ್ಟೇ ನಮ್ಮ ಮನೆಯವರಿಗೂ ಆಗುತ್ತೆ.
ಊರಿಗೆ ನೀವು ಬಸ್ಸಲ್ಲಿಹೋಗ್ತೀರಿ ನಾನು ಬಸ್ಸಲೇ ಹೋಗ್ತೀನಿ. ನೀವು ದೊಡ್ಡ ನೌಕರಿಯವರು, ನಾನು ಸಣ್ಣ ಕೆಲಸಗಾರ. ಊಟ ತಿಂಡಿ ನಿದ್ದೆಯ ವಿಚಾರದಲ್ಲಿ ಎಲ್ಲರ ಬದುಕು ಒಂದೇ ಆದರೆ ಖುಷಿಯುಒಂದೇನಾ? ನೀವು ಇನ್ನೂ ದೊಡ್ಡ ನೌಕರಿಯಲ್ಲಿ ಖುಷಿ ಹುಡುಕುತ್ತಿದ್ದೀರಿ ಆದರೆ ನನಗೆ ಅದು ಇದರಲ್ಲೇ ಸಿಕ್ಕಿದೆ” ಅಂದು ಯಾರೊ ಗಿರಾಕಿ ಕರೆದರು ಅಂತ ಎದ್ದು ಹೋದ. ನನಗೆ ದೊಡ್ಡ ದೊಡ್ಡ ಪುಸ್ತಕದಲ್ಲಿ ಸಿಗದ ಬದುಕಿನ ಪಾಠವೊಂದು ಸಿಕ್ಕಿತು.
| ಇನ್ನು ಮುಂದಿನ ವಾರಕ್ಕೆ |
0 ಪ್ರತಿಕ್ರಿಯೆಗಳು