ಸದಾಶಿವ್ ಸೊರಟೂರು ‘ಹಲೋ..’

ಸದಾಶಿವ್ ಸೊರಟೂರು

ನಡು ಇರಳಲಿ ದಾರಿ ಮರೆತ ಕರೆಯೊಂದು
ಮೊಬೈಲ್ ಪರದೆ ಮೇಲೆ ಜನಿಸಿ
ಉಸಿರು ಬಿಗಿ ಹಿಡಿದು ಅತ್ತಿತ್ತು

ಮೆಲ್ಲಗೆ ಎದೆ ನೇವರಿಸಿ
ಎತ್ತಿಕೊಂಡು ಕಿವಿಗಿಡಿದೆ
ಪುಟ ಪುಟಗಳಲಿ ಮೈಚೆಲ್ಲಿದ್ದ ನಾನು
ಹಲೊ.. ಅನ್ನೊ ಲಾಲಿಯನ್ನೂ ಮರೆತೆ

ಅತ್ತ‌ ಕಡೆಯಿಂದ ಮಾತಿಲ್ಲ
ಇತ್ತ ಕಡೆಯಿಂದಲೂ ಇಲ್ಲ
ಮಾತನ್ನು ಮಾರಿಕೊಂಡು ಬಂದ ಹಣದಿಂದಲೇ
ಅಕ್ಕಿ ರಾಗಿ ಜೀರಿಗೆ ಮೆಣಸು ಕೊಂಡು ಬದುಕುವ ವಿಚಿತ್ರಸಂಸಾರಿಗಳಾದೆವು..

ಲೋಕಲ್ ರೈಲಿನ ಸಂಕಟ, ಅಳುತ್ತಾ ಓಡುವ ಲಾರಿ
ದುಃಖ ಬಿಗಿ ಹಿಡಿದು ತಿರುಗುವ ಫ್ಯಾನಿನ
ನಡುವೆ ಒಂದು ತುಂಡು ಬಿಕ್ಕಳಿಗೆ ಇರಬಹುದಾ
ಬಾಳ ಕಾಳಜಿ ಮಾಡಿದೆ
ಹಸಿದ ಕಪ್ಪೆಯ ಕೂಗು, ಹನಿ ರಕ್ತಕೆ ನನ್ನೊಂದಿಗೆ
ಜಗಳಕ್ಕಿಳಿದ ಸೊಳ್ಳೆ, ಪುಟಗಳ ಅನಾಥ ಫಡಫಡ
ಸದ್ದು ಅತ್ತ ಕೇಳಿಸದಂತೆ ಅವುಗಳ
ಬಾಯಿಡಿದೆ..

ಶತಮಾನದಿಂದ ಮೌನಕ್ಕೆ ಹಸಿದವರಂತೆ
ನಿತ್ಯ ಉಣ್ಣತೊಡಗಿದವು;
ಕರೆಯ ಎರಡೂ ದಡಗಳಲಿ ಅನಂತ ಮೌನ

ಮೌನದ ಭಾಷೆ ಇನ್ನೊಂದು ಮೌನಕ್ಕೆ ಅಷ್ಟೇ
ತಿಳಿದೀತು; ಮಾತುಗಳ ಸಂತೆಯಲಿ
ಆತ್ಮಹತ್ಯೆ ಮಾಡಿಕೊಂಡ ಮೌನಗಳ ಕಳೇಬರ
ಅದೆಷ್ಟು ತುಟ್ಟಿ

ಮೌನದೊಳಗೊಂದು ಮಾತಿದೆ
ಮಾತಿನೊಳಗೊಂದು ಮೌನವಿದೆ
ತಿಳಿಯುವ ವ್ಯವಧಾನ ನಮಗೆಲ್ಲಿದೆ?

ಮೌನದೊಳಗಿಂದ ಅವಳ ದನಿ ಮೂಡಿ,
ದನಿ ರೂಪವಾಗಿ, ರೂಪ ಜೀವವಾಗಿ
ಬಂದು ಮೈ-ಮನ ತಾಗಿ ಮುತ್ತಿಟ್ಟು
ದೇಹ ಬಳಸಿ ಬಳಸಿ ಯಾವ ಹೊತ್ತಿಗೊ ಕಣ್ಮರೆ..

ಸಾರಿಗೇಕೆ ಇಷ್ಟು ಕಾರ, ನೋಡು ಅಂಗಿಯ ತೊಳಲ್ಲಿ
ಇನ್ನು ಕಲೆ ಉಳಿದಿದೆ ಎಂಬೊ ಸಂಸಾರಿಯ
ಅಸಹನೆಯಲಿ ಒಂದು ದಿನ ಮೌನಧ್ಯಾನ ಭೇದಿಸಿ
‘ಹಲೋ..’ ಎಂದೆ
ಚಹಾಕ್ಕೆ ಹಾಲಿಲ್ಲ, ಸೀರಿಗೆ ಪಾಲ್ಸ್ ಸರಿ ಬಂದಿಲ್ಲ
ಅನ್ನುವ ತುಸು ಮುನಿಸಲಿ ಅವಳೂ
‘ಹಲೋ..’ ಎಂದಳು..

ನಮ್ಮ ನಮ್ಮ ಅಭದ್ರತೆಯಲ್ಲೇ ಕರೆ ಬಂದಾಯ್ತು
ಎರಡೂ ದಡಗಳು
ಅಲ್ಲಲ್ಲೆ ಉಳಿದವು..

ಮತ್ತೆಂದೂ ಕರೆ ಬರಲಿಲ್ಲ
ನನ್ನಿಂದಲೂ ಹೋಗಲಿಲ್ಲ

ಕರೆಗಳು‌ ಕೂಡಲಿಲ್ಲ ದಡಗಳು ಸೇರಲಿಲ್ಲ
ಎರಡೂ ತುದಿಯಲಿ‌ ಕಡು ರಾತ್ರಿ ಹಾಗೆ ಉಳಿದಿದೆ..

‍ಲೇಖಕರು Admin

May 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prathibha nandakumar

    ಅಭದ್ರತೆ, ಮೌನಧ್ಯಾನ ಭೇದಿಸಿ, ಅನಂತ, ಶತಮಾನ, ವಿಚಿತ್ರಸಂಸಾರಿ, ದುಃಖ ಇತ್ಯಾದಿ ಇತ್ಯಾದಿ ಸಂಸ್ಕೃತ ಪದಗಳ ಬಳಕೆ ಇರುವಾಗ ಸುಮ್ಮನೆ ಕೊಸರಿಗೆ “ಬಾಳ”, “ಬಾಯಿಡಿದೆ”, “ಕಾರ” ಅನ್ನುವ ಅಪಪ್ರಯೋಗಗಳು ಒಂದು ಉತ್ತಮ ಕವಿತೆಯಲ್ಲಿ ಪಾಯಸದಲ್ಲಿ ನೊಣ ಸಿಕ್ಕ ಹಾಗೆ ರಸಭಂಗ ಮಾಡಿತು. ಒಳ್ಳೆಯ ಕವಿ ನೀವು, ಯಾಕೆ ಭಾಷೆಯ ಬಗ್ಗೆ ಅಲಕ್ಷ್ಯ?

    ಪ್ರತಿಭಾ ನಂದಕುಮಾರ್

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ prathibha nandakumarCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: