ಸದಾಶಿವ್ ಸೊರಟೂರು ಕಥಾ ಅಂಕಣ- ಚಾಟಿಂಗ್ ಚಾಟಿಂಗ್…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

8

ಅವಳು ಬೆಡ್ ರೂಮಿನಲ್ಲಿ ಮಲಗಿ ಮೊಬೈಲ್ ಹಿಡಿದಿದ್ದಳು.

ಇವನು ಮ್ಯಾಚ್‌ ನೋಡುತ್ತಾ ಮೊಬೈಲ್ ನಲ್ಲಿ‌ ಮುಳುಗಿ ಹೋಗಿದ್ದ.‌

ಅವರಿಬ್ಬರ ನಡುವೆ ಮಗುವೊಂದು ಬರದೆ ಹಲವು ವರ್ಷಗಳೇ ಆಗಿದ್ದವು.‌

ಅವಳು ಮೊಬೈಲ್ ಬಳಸಿ ಬಳಸಿ ಸಾಕಾಗಿ ಮಲಗುತ್ತಿದ್ದಳು, ಇವನು ಕೂತು ಕೂತು ಬೋರಾಗಿ ನೆಟ್ ಪ್ಯಾಕು ಮುಗಿದ ಮೇಲೆ ಹೋಗಿ‌ ಮಲಗುತ್ತಿದ್ದ.

ಒಟ್ಟಿಗೆ ಮಲಗಿದಾಗ ಕೈ ಕಾಲು ಒಮ್ಮೊಮ್ಮೆ ತಾಕಿ ತಬ್ಬಿಕೊಂಡಿದ್ದೆ ಹೆಚ್ಚು.

ಬೆಳಗ್ಗೆ ಎದ್ದು ಅವನು ರೆಡಿಯಾಗಿ ಕೆಲಸಕ್ಕೆ ಹೋಗುತ್ತಿದ್ದ, ಇವಳು ಅವನಿಗೆ ತಿಂಡಿ ಮಾಡಿಟ್ಟು ಬಡಿಸಿ ಅವನನ್ನು ಕಳುಹಿಸಿ ಮನೆಗೆಲಸ ಮುಗಿಸಿ ನಿದ್ದೆ ಮೊಬೈಲ್ ನಲ್ಲಿ ಲೀನ.‌ ಮತ್ತೆ ಸಂಜೆ, ರಾತ್ರಿಗಳು ಡೆಟಾ ಪ್ಯಾಕಿನಂತೆ ಖಾಲಿಯಾಗುತ್ತಿದ್ದವು.

ಇವಳು ಕೂತು ಕೂತು ಬೋರಾಗಿ ಒಂದು ಮಧ್ಯಾಹ್ನ ಫೇಸ್ಬುಕಿನಲ್ಲಿ ಒಂದು ನಕಲಿ ಖಾತೆ ಕ್ರಿಯೆಟ್ ಮಾಡಿ ಒಂದು ನವಿಲು ಗರಿಯನ್ನು ಡಿಪಿ‌ಗೆ ಹಾಕಿ  ಸುಮ್ಮನಾದಳು. ಅದರಲ್ಲಿ ಏನು ಪೋಸ್ಟ್ ಮಾಡಬೇಕು ಎಂದು ಯೋಚಿಸಿ ತನ್ನ ಒಂಟಿತನವನ್ನೆ ಎರಡು ಸಾಲುಗಳಲಿ ಬರೆದು ಹಾಕಿ ಮೊಬೈಲ್ ಎತ್ತಿಟ್ಟು ಹಾಗೆ ನಿದ್ದೆ ಹೋದಳು.

ಗಂಡ ಕೆಲಸ ಬಂದ. ಪ್ರಶ್ ಆಗಿ ಕಾಫಿ‌ ಕುಡಿದು ಮೊಬೈಲ್ ಹಿಡಿದು ಟಿವಿ ಮುಂದೆ ಕೂತ.‌ ಅವಳು ಅಡುಗೆ ಮುಗಿಸಿ ಇವನಿಗೂ ಬಡಿಸಿ ಬೆಡ್ ರೂಮು ಸೇರಿದಳು.‌

ತನ್ನ ನಕಲಿ ಖಾತೆ ತೆರೆದಳು. ಅದಾಗಲೇ ಅದಕ್ಕೊಂದು ರಿಕ್ವೆಜ್ಟ್ ಬಂದಿತ್ತು. ತನ್ನ ಮೂಲ ಹೆಸರಿಲ್ಲದ ಖಾತೆಗೆ ಬಂದ ವಿನಂತಿಯಿಂದ ಪುಳಕಿತಳಾಗಿ ವಿನಂತಿ ಓಕೆ ಮಾಡಿದಳು. ತಕ್ಷಣ ಇನ್ಬಾಕ್ಷಿ ಮಸೇಜ್ ಬಂತು..‌

ಹಾಯ್..

ಇವಳು ತುಸು ಹೊತ್ತು ತಡೆದು ಹಲೋ ಅಂದಳು.

ಮತ್ತೆ ಆ ಕಡೆಯಿಂದ ಮಸೇಜ್

ಇತ್ತ ಇವಳ ಕಡೆಯಿಂದ ಉತ್ತರ..

ಸಣ್ಣಗೆ ಸಂದೇಶಗಳ ಸೋನೆ ಸುರುವಾಯಿತು.

ಗಂಡ ರೂಮಿಗೆ ಬರುವುದಕ್ಕೂ ಅತ್ತ ಕಡೆಯಿಂದ ಗುಡ್ ನೈಟ್ ಮಸೇಜ್ ಬರುವುದಕ್ಕೂ ಸರಿಯಾಯಿತು.

ಇದು ದಿನೇ ದಿನೇ ಸಾಗಿತು.

ಈ ನಡುವೆ ಅವನೂ ಇನ್ನೂ ಹೆಚ್ಚು ಮೊಬೈಲ್ ನಲ್ಲಿ ಇರತೊಡಗಿದೆ. ಸದಾ ಏನನ್ನೊ ಟೈಪಿಸುತ್ತಿದ್ದ.‌

ಇವಳದು ಇತ್ತ ಕಡೆ ಚಾಟಿಂಗ್.. ಅವನು ಎಷ್ಟೊಂದು ಒಳ್ಳೆಯವನು ಅನಿಸತೊಡಗಿತು. ಅವನ ಭಾವನೆಗಳು ಎಷ್ಟೊಂದು ಹಿತವಾಗಿವೆ ಅನಿಸಿತು. ಅತ್ತ ಆ ಕಡೆಯವನು ನಿನಗೆ ನನ್ನ ಮೇಲೆ ಎಷ್ಟೊಂದು ಅಕ್ಕರೆ ಅನ್ನತೊಡಗಿದ. ಇಬ್ಬರಿಗೂ ತಾವು ಅದೆಷ್ಟು ಜನ್ಮಗಳಿಂದ ಪರಿಚಿತರು, ಹಿತೈಸಿಗಳು ಅನಿತೊಡಗಿತು.

ಮನೆಯಲ್ಲಿ ಪೂರ್ತಿ ಮೌನ.‌ ಎರಡೇ ಮಾತು. ಆದರೂ ಇಬ್ಬರೂ ಖುಷಿ. ಇವನು ಇವನ ಮೊಬೈಲ್ ನಲ್ಲಿ, ಅವಳು ಅವಳ ಮೊಬೈಲ್ ನಲ್ಲಿ. ಆದರೆ ಇಬ್ಬರೂ ಗೊತ್ತಾಗದೆ ಹಾಗೆ ಎಚ್ಚರವಹಿಸಿದ್ದರು.‌

ಒಟ್ಟಿಗೆ ಇರುವುದು ಇಬ್ಬರಿಗೂ ವ್ಯರ್ಥವೆನಿಸಿತು. ಅವಳು ತನ್ನ ಚಾಟಿಂಗ್ ಪ್ರೆಂಡ್ ನನ್ನು ಕೇಳಿದಳು. ಏನು ಮಾಡಲಿ? ಅಂತ ಅವನು ಮುಲಾಜಿಲ್ಲದೆ ಹೇಳಿದ ಬಿಟ್ಟು ಬಂದು ಬಿಡು ಅಂದ.

ಇವನು ತನ್ನ ಚಾಟಿಂಗ್ ಪ್ರೆಂಡ್ ಬಳಿಯೂ ಅದನ್ನೆ ಕೇಳಿದ ಏನು ಮಾಡಲಿ ‘ನಾನು ಇದೀನಿ ಬಿಟ್ಟು ಬನ್ನಿ..’ ಅಂದಿತ್ತು ಆ ಕಡೆಯ ಸಂದೇಶ.

ಒಂದು ಸಂಜೆ ಇಬ್ಬರೂ ಕೂತು ಮಾತಾಡಿದರು. ಇಬ್ಬರೂ ಖುಷಿಯಿಂದ ಒಪ್ಪಿಕೊಂಡರು. ಹೌದು ಸತ್ತು ಹೋದ ಸಂಬಂಧ ಮುಂದುವರೆಸುವುದು ಬೇಡ ಅನಿಸಿತು.

ಒಂದು ದಿನ ವಿಚ್ಚೇದನಕ್ಕೆ ಅರ್ಜಿ ಹಾಕುವ ತೀರ್ಮಾನ ಮಾಡಿದರು.‌

ಇತ್ತ ಇವಳು ಫೇಸ್ಬುಕ್ ಗೆಳೆಯನಿಗೆ ತಿಳಿಸಿದಳು. ಅತ್ತ ಅವನೂ ಕೂಡ ತಿಳಿಸಿದ.

ಅವಳು ಅವನನ್ನು ಮೀಟು ಮಾಡಲು ಬಯಸಿದಳು. ಅವನು ಒಪ್ಪಿಕೊಂಡು ಒಂದು ದಿನ ಫಿಕ್ಸ್ ಮಾಡಿ ಸ್ಥಳ ಸಮಯ ತಿಳಿಸಿದ.

ಇವಳು ಆ ದಿನಕ್ಕಾಗಿ ಕಾದು ಸಿದ್ದವಾದಳು.‌ ಗಂಡನಿಗೆ ಹೇಳುವಷ್ಟರಲ್ಲೆ ಅವನು ತನಗೆ ಏನೊ‌ ಮುಖ್ಯವಾದ ಕೆಲಸ ಇದೆ ಎಂದು ಹೊರಟು ಹೋದ.‌

ಫೇಸ್ಬುಕ್ ಪ್ರೆಂಡ್ ಹೇಳಿದ ಕಾಫಿ ಡೇ ನ‌ ಮೂಲೆಯ ಜಾಗವನ್ನು ಸೇರುವ ಆತುರಭರಿತ ಕುತೂಹಲದಲ್ಲಿ ಇವಳು ಚೆನ್ನಾಗಿ ಅಲಂಕರಿಸಿಕೊಂಡು ಹೊರಟಳು. ಅವನು ಲೋಕೆಷನ್ ಕಳುಹಿಸಿದ.‌ ಅದರ ಅನುಸರಿಸಿ ಇವಳು ಹೊರಟಳು.

ಕಾಫಿ ಡೇ ನ ಒಳ ಹೊಕ್ಕಳು. ಅವನು ಹೇಳಿದ ಸೀಟು ಹುಡುಕಿ ಬಂದಳು. ಅಲ್ಲಿ ಕತ್ತು ಬಗ್ಗಿಸಿ‌ ಕೂತವನನ್ನು ನೋಡಿ ಅನುಮಾನಿಸಿದಳು. ಅರೇ ಇವ್ನು ತನ್ನ ಗಂಡ ಇವನೇಕೆ ಇಲ್ಲಿ? ಅಂದು ಮರೆಗೆ ಸರಿದು ನಿಂತು. ಮಸೇಂಜರ್ ಲ್ಲಿ ತನ್ನ ಗೆಳೆಯನಿಗೆ ಕಾಲ್ ಮಾಡಿದಳು.‌ ಆದರೆ ಅಲ್ಲಿ ಕೂತಿದ್ದ ಅವನ ಗಂಡನ ಪೋನ್ ರಿಂಗಾಯಿತು.

ತಡಬಡಿಸಿದ ಅವನು ರಿಸಿವ್ ಮಾಡ್ಬೇಕು ಅನ್ನುವಷ್ಟರಲ್ಲಿ‌ ಕಟ್ ಆಯ್ತು. ಅವನು ತಿರುಗಿಸಿ ಮಾಡಿದ. ಇತ್ತ ಇವಳ ಪೋನ್ ರಿಂಗಾಯ್ತು. ಅರೇ ಇವಳು ಇಲ್ಲೆ ಇದ್ದಾಳೆ ಅನಿಸಿ ಎದ್ದು ಎರಡು ಹೆಜ್ಜೆ ಕದಲಿಸಿದ. ರಿಂಗಾಗುತ್ತಿದ್ದ ಮೊಬೈಲ್ ‌ಹಿಡಿದ ಅವನ ಹೆಂಡತಿ ನಿಂತಿದ್ದಳು.

ಇಬ್ಬರ ಕಣ್ಣು ಸಂಧಿಸಿದವು..

ವಾಪಸ್ಸು ಬರುವಾಗ ಅವರ ಕೈಗಳಲ್ಲಿ  ಮೊಬೈಲ್ ಇರಲಿಲ್ಲ

ಅವನ ಕೈಯೊಳಗೆ ಅವಳ ಕೈ ಬೆಚ್ಚಗಿತ್ತು..

‍ಲೇಖಕರು Admin

September 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: