ಸದಾಶಿವ್ ಸೊರಟೂರು ಕಥಾ ಅಂಕಣ -ಕೊನೆಯ ತುತ್ತು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

49

ಸ್ವೀಕಾರನಿಗೆ ಇತ್ತೀಚಿಗೆ ಅವನ್ನೊಳಗೊಂದು ಎಲೆ ಚಿಗುರಿದ ಅನುಭವವಾಗುತ್ತಿತ್ತು.‌ ಅದು ಗಾಳಿಗೆ ತೊನೆದಂತೆ, ಅದರ ಕಚಗುಳಿಗೆ ನಕ್ಕಂತೆ ಭಾಸವಾಗುತ್ತಿತ್ತು. ಎಲೆಯು ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುವಂತೆ; ಅವನು ತನ್ನ ಖುಷಿಯನ್ನು ತಾನೇ ಹುಡುಕಿಕೊಂಡಿದ್ದ. ಬಿಸಿಲು, ಗಾಳಿ, ನೆಲದ ಸತ್ವಕ್ಕೆ ಎಲೆ ಹಸಿರಾಗುವುದು ಸರಿ, ಆದರೆ ಯಾವ ಕಾರಣದಿಂದ ಈಗ ತನ್ನೊಳಗೆ ಹಸಿರು ಎಲೆಯಂತಹ ಖುಷಿಯೊಂದು ಮೂಡಿದೆ ಎಂಬುಂದು ಅವನಿಗೆ ಅಷ್ಟು ಸುಲಭಕ್ಕೆ ತಿಳಿದಿರಲಿಲ್ಲ. 

ಕೋಪವು ಕಡಿಮೆಯಾಗಿತ್ತು. ರಾತ್ರಿ ಸರಿಯಾದ ನಿದ್ದೆ ಬರುತ್ತಿತ್ತು. ಮುಂಜಾನೆ ಒಂದು ಸುಖದ ಕನಸು. ಕೇಳುವ ಹಾಡುಗಳಿಗೆ ಒಂದು ಎಕ್ಸಟ್ರಾ ಮಾಧುರ್ಯ. ಹೋದಲ್ಲಿ, ಬಂದಲ್ಲಿ ಹಾಡುವ ಎದೆ. ಮನಸು ಮುಂಜಾನೆಯ ಕಡಲನಂತೆ ಶಾಂತ. ಚಡಪಡಿಕೆಯನ್ನು, ದುಗುಡವನ್ನು ಯಾರೋ ಕಿತ್ತು ಬಿಸಾಕಿ ಹೋದಂತೆ ಭಾವ.‌ ಆತಂಕವನ್ನು ನಿರಾಂತಕ ಗೆದ್ದಿತ್ತು. ಎಲ್ಲವೂ ಹೊಸತಾಗಿತ್ತು. ಅವನು ಹೆಚ್ಚೇ ಸಂಭ್ರಮದಲ್ಲಿದ್ದ.‌ ಒಳಗಿನ ನೋವೆಲ್ಲಾ ತೊಳೆದುಕೊಂಡ ಮಳೆ ಬಿದ್ದ ಮರುದಿನದಂತಾದ. 

ಅವತ್ತು ಖುಷಿಯಿಂದ ಡ್ಯೂಟಿಗೆ ಹೊರಟಿದ್ದ ಸ್ವೀಕಾರ ಒಂದು ಆಸ್ಪತ್ರೆಯ ಮುಂದೆ ಗಕ್ಕನೇ ನಿಂತ; ಯಾರೋ ತಡೆದು ನಿಲ್ಲಿಸಿದಂತೆ. ಒಳಗೆ ಹೋಗುವವರನ್ನು ಆಚೆ ಬರುವವರನ್ನು ನೋಡುತ್ತಾ ನಿಂತ. ತುಂಬಾ ಹೊತ್ತು ಹಾಗೆಯೇ ನಿಂತಿದ್ದ. ಹೋಗಿ ಬರುವವರ ಮಾತುಗಳು ಅವನ ಕಿವಿ ಮೇಲೆ ಬೀಳುತ್ತಿದ್ದವು. “ಇಷ್ಟು‌ ದಿನ ಎಷ್ಟು ನೋವು ಅನುಭವಿಸಿದೆ, ಈ ಡಾಕ್ಟರ್ ಕೈಗುಣ ಚೆನ್ನಾಗಿದೆ. ನೋವು ಕಡಿಮೆ ಆಗಿದೆ”.  “ಡಾಕ್ಟರೇ ತೊಂದರೆಯಿಲ್ಲ ಅಂದಿದ್ದಾರೆ, ಯೋಚ್ನೆ ಮಾಡ್ಬೇಡ” “ನಾಲ್ಕು ದಿನ ಮಾತ್ರೆ ತಗೊಂಡ್ರಾಯ್ತು ಬಿಡು, ಸರಿ ಹೋಗುತ್ತೆ…” ಇಂಥದ್ದೇ ಮಾತುಗಳು ಅವನ ಕಿವಿ ಮೇಲೆ ಬೀಳುತ್ತಿದ್ದವು.‌

ಈ ಒಂದು ಕಟ್ಟಡಕ್ಕೆ, ಅಲ್ಲಿರುವ ಒಬ್ಬ ಬಿಳಿಯ ಕೋಟು ತೊಟ್ಟವನಿಗೆ ಇಷ್ಟೊಂದು ಜನರ ನೋವು ತೊಡೆಯುವ ಶಕ್ತಿ ಇದೆಯಾ? ಅವನು ಮೋಡಿಗಾರನಾ? ಬರೀ ಔಷಧಿಯಿಂದ ಜಾದು ಸಾಧ್ಯವಾ? ಅವನಲ್ಲಿ ಏನಿದೆ? ಜನ ಆಚೆಗೆ ಅದೆಷ್ಟು ಬಿಡುಗಡೆಯ ಭಾವದಲ್ಲಿ ಬರುತ್ತಾರೆ… ಹೀಗೆ ಯೋಚಿಸುತ್ತಾ ಯೋಚಿಸುತ್ತಲೇ ಎಷ್ಟೋ ಹೊತ್ತಿನ ಬಳಿಕ ಅವನು ಕಛೇರಿ‌ ತಲುಪಿದ. ಅವನೊಳಗೀಗ ಆಸ್ಪತ್ರೆಯಿಂದ ಆಚೆ ಬರುತ್ತಿದ್ದ ಜನರ ಭಾವಗಳೇ ಹೊಕ್ಕಿ ಕೂತಿದ್ದವು. 

ಒಂದು ಕಾಲದಲ್ಲಿ ತನಗೂ ಬದುಕ ದಯಪಾಲಿಸಿದ ನೋವಿತ್ತು. ಬೇಸರವಿತ್ತು. ಕೋಪ, ದುಃಖವಿತ್ತು. ಆದರೆ ಈಗೇಕೆ ಇಲ್ಲ? ತಾನು ಯಾವ ಆಸ್ಪತ್ರೆ ಹೊಕ್ಕು ಬಂದೆ? ಯಾವ ಬಿಳಿಯ ಕೋಟಿನವನ ಮುಂದೆ ತನ್ನ ಕಷ್ಟ ಹೇಳಿಕೊಂಡೆ? ಯಾವ ಔಷಧಿ ತಿಂದೆ? ಇದೇನೂ ಇಲ್ಲದೆ ತಾನೇಗೆ ಸರಿ ಹೋದೆ? ಎದೆಯೊಳಗೆ ಎಲೆಯೊಂದು ಹೇಗೆ ಗರಿ ಕಳಚಿತು? ಕಛೇರಿಗೆ ಬಂದು ಕೂತು ಗಂಟೆಗಟ್ಟಲೆ ಯೋಚಿಸಿದರೂ ಅವನಿಗೆ ಉತ್ತರ ಹೊಳೆಯಲಿಲ್ಲ. 

ಇನ್ನೂ ಎರಡು ದಿನ ಇದೆ. ಸ್ವೀಕೃತಿ ಸಿಗುವುದು ನಾಡಿದ್ದು.‌ ಸ್ವೀಕೃತಿ ಅವನ ಗೆಳತಿ. ಶನಿವಾರ ಬಿಟ್ಟರೆ ಅವಳು ಅವನಿಗೆ ಬೇರೆ ದಿನ ಸಿಗುವುದು ಅಪರೂಪ. ಅವರು ಶನಿವಾರಕ್ಕಾಗಿ ಹುಟ್ಟಿದ ಗೆಳೆಯರೋ ಎಂಬಂತಿದ್ದರು. ಅವರನ್ನು ಶನಿವಾರವೇ ಆಯ್ದುಕೊಂಡಿತೋ ಅಥವಾ ಉಳಿದ ದಿನಗಳು ಅವರನ್ನು ಕೈ ಬಿಟ್ಟು ಹೋಗಿದ್ದವೋ ಅಥವಾ ನಾಳೆ ಭಾನುವಾರ ಅನ್ನುವ ಕಾರಣಕ್ಕೆ ಶನಿವಾರಕ್ಕೆ ಒಂದು ವಿಶೇಷ ಸೊಬಗಿದೆ ಎಂದುಕೊಂಡು ಆ ವಾರವನ್ನು ಆಯ್ದುಕೊಂಡರೋ ಏನೋ, ಅವನಿಗೆ ಯಾವುದೂ ಸ್ಪಷ್ಟವಾಗಿ ನೆನಪಿಲ್ಲ. 

ಸ್ವೀಕೃತಿ ಅವನಿಗೆ ಸಿಕ್ಕಿದ್ದೆ ಆಕಸ್ಮಿಕ. ಆದರೆ ನಂತರದ್ದು ಯಾವುದೂ ಆಕಸ್ಮಿಕವಲ್ಲ. ಮತ್ತೆ ಅದು ಒಂದು ವ್ಯವಸ್ಥಿತ ಯೋಜನೆಯೂ ಅಲ್ಲ. ಸುಮ್ಮನೆ ನೀರು ಹರಿಯುವಂತೆ ಸ್ವಾಭಾವಿಕವಾಗಿ ತಮ್ಮತನವನ್ನೂ ಬಿಟ್ಟು ಎದುರಾಗಿದ್ದರು.‌ ಅವರು ಅಷ್ಟು ಹತ್ತಿರವಾಗಲೂ ಏನು ಕಾರಣಗಳಿರಬಹುದೆಂದು ಆಗಾಗ ಕೂತು ಅದರ ಬಗ್ಗೆಯೇ ಮಾತಾಡುತ್ತಿದ್ದರು. ಆದರೆ ಈಗ ಆಗಿರುವ ಆ ʻಹತ್ತಿರವುʼ ಅದೆಷ್ಟು ಹತ್ತಿರವೆಂಬುದು ಸ್ವತಃ ಅವರಿಗೇ ಗೊತ್ತಿರಲಿಲ್ಲ.‌

ಹೆಚ್ಚಿನ ಓದು, ನೌಕರಿ, ಮನೆಗೆಲಸ ಅಂತ ಅವಳದು ಸದಾ ಬಿಡುವಿಲ್ಲದ ಕೆಲಸ. ಇವನದೂ ಅವಳಿಷ್ಟಿಲ್ಲದಿದ್ದರೂ ಕೆಲಸಕ್ಕೆ ಬಾರದ ಕೆಲವು ಹವ್ಯಾಸಗಳನ್ನು ಮೈಮೇಲೆ ಎಳೆದುಕೊಂಡು ಅಲೆದಾಡುತ್ತಿದ್ದ. ಅವನ ಹವ್ಯಾಸದ ಮೇಲೆ ಅವಳಿಗೆ ತುಂಬಾ ಆಸಕ್ತಿ. ಅವಳ ಓದಿನ ಬಗ್ಗೆ ಅವನಿಗೆ ಸದಾ ಬೆರಗು. ಮಾತಿಂದ ಶುರುವಾಗಿ ಈಗ ಇಬ್ಬರೂ ಮನಸಿನಲ್ಲಿ ತಮ್ಮ ಕೈ ಕಾಲುಗಳನ್ನು ಚಾಚಿಕೊಂಡಿದ್ದರು. ಈ ಬಂಧಕ್ಕೇನು ಹೆಸರು ಎಂದು ಅವನು ಅವಳನ್ನು ಆಗಾಗ ಕೇಳುತಿದ್ದ. ಅವಳು ನಗುವನ್ನು ಉತ್ತರದಂತೆ ನೀಡುತ್ತಿದ್ದಳು.‌ ಅವಳ ಎಷ್ಟೋ ಪ್ರಶ್ನೆಗಳಿಗೂ ಅವನು ಹಾಗೆ ನಗುವನ್ನು ಉತ್ತರವಾಗಿಸಿದ್ದ. ಪ್ರಶ್ನೆಗಳನ್ನು ಪ್ರಶ್ನೆಗಳಂತೆ, ಉತ್ತರಗಳನ್ನು ಉತ್ತರಗಳಂತೆ ಅದರದರ ಪಾಡಿಗೆ ಬಿಟ್ಟು ಅವರು ಪರಸ್ಪರ ಮನಸುಗಳ ಒಳಗೆ ತಮ್ಮ ಸಂಬಂಧದ ಬಳ್ಳಿ ಹಬ್ಬಿಸಿಕೊಂಡಿದ್ದರು. 

ಈ ಬದುಕು ಇರೋದೇ ಬರೀ ಶನಿವಾರದ ಕಾಯುವಿಕೆಗೆ ಎನ್ನುವಂತೆ ಅವರಿಬ್ಬರೂ ಆ ದಿನಕ್ಕಾಗಿ ಹಂಬಲಿಸುತ್ತಿದ್ದರು.‌ ಅಂದೇನು ಇರುತ್ತಿರಲಿಲ್ಲ. ಸಂಪೂರ್ಣ ಎಂಬ ಹೋಟೆಲ್ ಅವರ ಶನಿವಾರದ ಅಡ್ಡ.‌ ಆ ಹೋಟೆಲ್ ಸಂಪೂರ್ಣದಲ್ಲಿ ಇಬ್ಬರೂ ಎದುರು ಬದುರು ಕೂರುತ್ತಿದ್ದರು. ಮಾತಾಡುತ್ತಿದ್ದರು. ಊಟ ತರಿಸಿಕೊಂಡು ಪರಸ್ಪರ ಹರಟುತ್ತಿದ್ದರು. ನಗುತ್ತಿದ್ದರು. ಮೌನವಾಗುತ್ತಿದ್ದರು. ಗಂಭೀರವಾಗುತ್ತಿದ್ದರು.‌ ಊಟ ಮುಗಿಸಿ ಎದ್ದು ಹೋಗುತ್ತಿದ್ದರು. ಮತ್ತೆ ಮುಂದಿನ ಶನಿವಾರದವರೆಗೂ ಚಡಪಡಿಸುತ್ತಾ ಕಾಯುತ್ತಿದ್ದರು. 

ಅವತ್ತೊಂದಿನ ಅದೇ ಹೋಟೆಲ್ ಸಂಪೂರ್ಣದಲ್ಲಿ ಊಟಕ್ಕೆ ಕೂತಿದ್ದಾಗ ಅವನು ಮಾತಾಡುತ್ತಾ‌, ʻಹೇ ನಿನಗೆ ಗೊತ್ತಾ, ಊಟದ ಕೊನೆಯ ತುತ್ತಿನಲ್ಲಿ ಅದೇನೊ‌ ಶಕ್ತಿ ಇದೆ ಅಂತಾರೆʼ ಅಂದ. ಅವಳಿಗೆ ಒಂದು ಊಟ, ಊಟವಷ್ಟೇ. ʻಅದರಲ್ಲಿ ಮೊದಲ ತುತ್ತು, ಕೊನೆಯ ತುತ್ತು ಅಂತ ಏನಿದೆ? ಯಾವ ತುತ್ತು ತಿಂದರೂ ಅದೇ ಅಲ್ವಾ? ಇಡೀ ಊಟದಲ್ಲಿ ಇಲ್ಲದೆ ಇರೋದು ಕೊನೆಯ ತುತ್ತಿಗೆ ಏನ್ ವಿಶೇಷ ಬರುತ್ತೆ?ʼ ಅಂತ ಹೇಳಬೇಕು ಅನಿಸಿತು. ಆದರೆ ಹೇಳಲಿಲ್ಲ. ಸುಮ್ಮನೆ ʻಹೂಂ…ʼ ಎಂದಳು. ಅವನೂ ಮತ್ತೆ ಅದೇ ಮಾತು ಮುಂದುವರೆಸಲು ಹೋಗಲಿಲ್ಲ. ಮಾತು ಬದಲಿಸಿದ. ಅವತ್ತಿನ ಊಟ ಮುಗಿದಿತ್ತು. 

ಮರುಶನಿವಾರ ಮತ್ತೆ ಭೇಟಿಯಾದರು. ಅದೇ ಹೋಟೆಲ್, ಅದೇ ಜಾಗ. ಮಾತು ಝರಿಝರಿಯಾಗಿ ಹರಿಯಿತು. ಊಟ ತರಿಸಿಕೊಂಡರು. ಊಟ ಮಾಡುವಾಗ ಅವಳಿಗೆ ಕೊನೆಯ ತುತ್ತಿನ ನೆನಪಾಯ್ತು.‌ ಇವನು ಕೊನೆಯ ತುತ್ತು ವಿಶೇಷ ಅಂತ ಹೇಳ್ತಿದಾನೆ ಅಂದರೆ ನನ್ನ ಊಟದ ಕೊನೆಯ ತುತ್ತು ಬಯಸಿರಬಹುದಾ? ಅನ್ನುವ ಅನುಮಾನವೊಂದು ಮೂಡಿತು.‌ ಕೊನೆಯ ತುತ್ತು ಕೊಟ್ಟು ಬಿಡಲೇ ಅವನಿಗೆ ಅನಿಸಿತು.‌ ಅವನು ಕೊನೆಯ ತುತ್ತು ವಿಶೇಷ ಅಂತ ಜನರಲ್ ಆಗಿ ಹೇಳಿರಬಹುದು. ನಿನ್ನ ಕೊನೆಯ ತುತ್ತು ಅಂತ ಕೇಳಿಲ್ಲವಲ್ಲ. ತಾನು ಕೇಳಿದರೆ ಅವನೇನೋ ಯೋಚಿಸಿಕೊಂಡು, ಮತ್ತೇನೋ ಆಗಿಬಿಡಬಾರದಲ್ಲ ಅಂತ ಸುಮ್ಮನಾದಳು. 

ಆದರೂ ಕೊನೆಯ ತುತ್ತು ಉಳಿದ ಹೊತ್ತಿಗೆ ಅದನ್ನು ತಿನ್ನಲು ಮನಸ್ಸಾಗಲಿಲ್ಲ.‌ ಇದು ಅವನ ಪಾಲು ಅನಿಸಿತು. ಹೇಗೆ ಕೊಡುವುದು? ಅವನು ಏನೆಂದು ಕೊಂಡಾನು? ಕೊಡುವುದನ್ನು ನೋಡಿದರೆ ಈ ಹೋಟೆಲ್‍ನ ಜನ ಏನೆಂದುಕೊಂಡಾರು? ಅದನ್ನು ತಿನ್ನಲು ಮನಸಾಗದೆ, ತಟ್ಟೆಯಲ್ಲಿ ಉಳಿಸಲಾಗದೆ ಒದ್ದಾಡಿದಳು. ಯೋಚಿಸಿ ಕೊನೆಯ ತುತ್ತನ್ನು ʻಇದು ಅವನಿಗೆʼ ಅಂತ ತನಗೇ ತಾನೇ ಹೇಳಿಕೊಂಡು ತಟ್ಟೆಯಲ್ಲಿ ಬಿಟ್ಟು, ʻಹೇ ನಾನು‌ ಹ್ಯಾಂಡ್‌ವಾಶ್ ಮಾಡಿ, ವಾಶ್‌ರೂಮಿಗೆ ಹೋಗಿ, ಬಿಲ್ ಕೌಂಟರ್ ಬಳಿ‌ ಇರ್ತೀನಿʼ ಅಂದು ಎದ್ದು ಹೋದಳು. 

ಅವಳು ಎಲ್ಲಾ ಮುಗಿಸಿ ಬರುವುದರೊಳಗೆ ಇವನು ಆಗಾಲೇ ಕೌಂಟರ್ ಬಳಿ ಬಂದಿದ್ದ. ಇವಳಿಗೆ ಕುತೂಹಲ, ʻಕೊನೆಯ ತುತ್ತು ತಿಂದನೋ… ಹಾಗೆ ಬಿಟ್ಟು ಬಂದನೋ… ಕೇಳುವುದಾ? ಹೇಗೆ ಕೇಳುವುದು? ಕೇಳುವುದಾಗಿದ್ದರೆ ನೇರವಾಗಿ ತಿನ್ನಸಬಹುದಿತ್ತಿಲ್ಲಾ… ತಿನ್ನಿಸಬಹುದಿತ್ತು ಸರಿ.‌ ಆದರೆ ನನ್ನ ಕೊನೆಯ ತುತ್ತು ಇಷ್ಟವಾಗದೆ ಹೋದರೆ?ʼ ಏನೇನೋ ಯೋಚಿಸಿಕೊಂಡು ಸುಮ್ಮನಾದಳು. ಅವನು ಬಿಲ್ ಕೊಟ್ಟ. ಇವಳು ಅವನಿಗೆ ಬಾಯ್‌ ಹೇಳಿ ಕೂತೂಹಲವನ್ನು ಹಾಗೆ ಉಳಿಸಿಕೊಂಡು ಹೊರಟು‌ ಹೋದಳು. 

ಅಂದಿನಿಂದ ಅವಳು ಪ್ರತಿಶನಿವಾರ ಏನಾದರೊಂದು ನೆವ ಹೇಳಿ ಕೊನೆಯ ತುತ್ತು ಉಳಿಸಿ ಎದ್ದು ಹೋಗುತ್ತಿದ್ದಳು. ಹೊರಗೆ ಕಾಯುತ್ತಿದ್ದಳು. ನಂತರ ಅವನು ಬರುತ್ತಿದ್ದ. ಇಬ್ಬರೂ ಬೀಳ್ಕೊಂಡು ತೆರಳುತ್ತಿದ್ದರು. ಅವನು ಕೊನೆಯ ತುತ್ತು ತಿನ್ನವನೋ… ಹಾಗೆ ಬರುವನೋ… ಎಂಬ ಕುತೂಹಲ ಹಾಗೆ ಉಳಿದೇ ಇತ್ತು.

ಆದರೆ ಈ ನಡುವೆ ಸ್ವೀಕೃತಿಗೆ ಸ್ವೀಕಾರನಲ್ಲಿ‌ ಒಂದು ವಿಶೇಷ ಬದಲಾವಣೆ ಕಂಡಿತ್ತು. ಅವನು ತುಂಬಾ ಖುಷಿಯಾಗಿದ್ದ. ಅವನ ಕೋಪ, ಬೇಸರಗಳು ಕಡಿಮೆಯಾಗಿದ್ದವು. ಸದಾ ಚಟುವಟಿಕೆಯಿಂದ ಇರುತ್ತಿದ್ದ. ಅದನ್ನು ನೋಡಿ ಇವಳಿಗೆ ಖುಷಿ ಕೂಡ ಆಗಿತ್ತು. ಯಾವಾಗಲೂ ಏನನ್ನು ಬಚ್ಚಿಡದ ಇವನು ಈಗ ಇಷ್ಟೊಂದು ಖುಷಿಯಾಗಿರುವ ಕಾರಣವನ್ನು ಯಾಕೆ ಹೇಳುತ್ತಿಲ್ಲ ಎಂಬ ಪ್ರಶ್ನೆಯೂ, ಅನುಮಾನವೂ ಮೂಡಿತ್ತು.‌ 

ಬೆಳಗ್ಗೆ ಅಲ್ಲಿ ಆಸ್ಪತ್ರೆಯಿಂದ ಆಚೆ ಬರುತಿದ್ದ ನಿರಾಳ ರೋಗಿಗಳ ಮಾತುಗಳನ್ನು ಕೇಳಿಸಿಕೊಂಡು ಬಂದು ಕಛೇರಿಯಲ್ಲಿ ಕೂತಿದ್ದ ಸ್ವೀಕಾರನಿಗೆ ಇದೆಲ್ಲಾ ನೆನಪಾಯ್ತು. ಎರಡು‌ ದಿನ‌, ಮತ್ತೆ ಸ್ವೀಕೃತಿ ಸಿಕ್ತಾಳೆ. ಒಂದು ವಾರದ ಮಾತು, ಕಥೆ, ನಗು, ಅಳು ಎಲ್ಲವನ್ನು ಹರಡಿಕೊಳ್ಳಬಹುದೆಂದು ಹೊಸ ಖುಷಿಯಲ್ಲಿ‌ ಕಾದು ಕೂತ. 

ಮತ್ತೆ ಶನಿವಾರ ಬಂತು. ಅವಳೂ ಬಂದಳು. ಇವನೂ ಹೋದ.‌ ಅದೇ ಸಂಪೂರ್ಣ ಹೋಟೆಲ್. ಎಂದೂ ಕೂಡ ಅವರು ಕೂರುವ ಅದೇ ಜಾಗ. 

ಹರಟಿದರು. ನಕ್ಕರು. ಮೌನವಾದರು. ಪರಸ್ಪರ ನೋಡಿಕೊಂಡರು. ಒಮ್ಮೆ ಗಂಭೀರವಾದರು. ಮತ್ತೊಮ್ಮೆ ಮಕ್ಕಳಾದರು. ವೇಟರ್ ಊಟ ತಂದಿಟ್ಟು‌ ಹೋದ. ಇಬ್ಬರೂ ಎದ್ದು ಹೋಗಿ ಕೈ ತೊಳೆದುಕೊಂಡು ಬಂದರು. ಬರುವಾಗ ಇಬ್ಬರ ಭುಜಗಳು ಪರಸ್ಪರ ತಾಕಿದವು. ಏನೂ ಆಗಿಯೇ ಇಲ್ಲವಂತೆ ಸುಮ್ಮನಿರಲು ಇಬ್ಬರೂ ಪ್ರಯತ್ನಿಸಿದರು. ಆದರೆ ಅದು ಅವರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.‌ 

ಒಮ್ಮೆ ಇಬ್ಬರೂ ಮುಖ ನೋಡಿಕೊಂಡು ಊಟ ಆರಂಭಿಸಿದರು. ಒಂದಷ್ಟು ಮಾತುಗಳು ಬಂದವು.‌ ತಟ್ಟೆಯಲ್ಲಿ ಬಹುಪಾಲು ಊಟವೂ ಖಾಲಿ ಆಯಿತು. ಅವಳು ಕೊನೆಯ ಎರಡು ತುತ್ತು ಉಳಿಸಿ ಏಳಲು ನೋಡಿದಳು. ಅವನು ಅದನ್ನು ಗಮನಿಸಿದ. ʻಇರು, ಕೂತಿರುʼ ಅಂತ ಸನ್ನೆ ಮಾಡಿದ. ತನ್ನೊಳಗೆ ಇರುವ ಎಲ್ಲಾ ಅಕ್ಷರಗಳನ್ನು ಜೋಡಿಸಿಕೊಂಡು ಹೇಳಲು ಶುರು ಮಾಡಿದ.

“ಸ್ವೀಕೃತಿ, ನನಗೆ ಗೊತ್ತು ಆ ಎರಡು ತುತ್ತುಗಳನ್ನು ನೀನು ನನಗೇ ಉಳಸಿ ಹೋಗುವೆ ಅಂತ. ಆ ತುತ್ತುಗಳನ್ನು ತಿಂದು, ತಿಂದು ನೋಡು ನಾನು ಎಷ್ಟೊಂದು ಚಿಗುರಿದ್ದೀನಿ. ನಿನ್ನ ಎಂಜಲಿನಲ್ಲಿ ನನ್ನನ್ನು ಸುಖವಾಗಿಡುವ ಮದ್ದಿದೆ. ನಿನ್ನ ಬೆರಳಿಂದ ನನ್ನನ್ನು ಪೊರೆವ ರಸ ಉಕ್ಕುತ್ತದೆ.‌ ಕೊನೆಯ ತುತ್ತುಗಳು ನನ್ನೊಳಗಿನ ಎಲ್ಲಾ ದುಗುಡಗಳನ್ನು ವಾಸಿ ಮಾಡಿವೆ. ನನ್ನೊಳಗೆ ಚಿಗುರಿದ ಎಲೆಗೆ ನಿನ್ನ ತುತ್ತುಗಳೇ  ಕಾರಣ.  ಹಾಗೆ ಆ ತುತ್ತುಗಳನ್ನು ತಟ್ಟೆಯಲ್ಲಿ ಅನಾಥವಾಗಿ ಬಿಟ್ಟು ಹೋಗಬೇಡ, ನನ್ನ ಬಾಯಲ್ಲಿ ಇಟ್ಟುಹೋಗು…” ಎಂದ. ಅವನ ಎದೆ ತುಂಬಿತ್ತು, ಕಣ್ಣುಗಳೂ ತುಂಬಿದ್ದವು. ಅವಳ ಕಣ್ಣಲ್ಲಿ ಅವನ ಬಿಂಬ ಮಸುಕು ಮಸುಕು. 

‍ಲೇಖಕರು admin j

July 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: