ಸದಾಶಿವ್ ಸೊರಟೂರು ಕಥಾ ಅಂಕಣ – ಎದೆ ಬಳ್ಳಿ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

26

ಹಗಲಿಡೀ ಜಗತ್ತಿನ ಸಂಕಟಗಳನ್ನು ನೋಡಿ ನೋಡಿ ಜಿಗುಪ್ಸೆಗೊಂಡ ಸೂರ್ಯ ದೂರ ದಿಗಂತದ ಆಚೆ ಇರುವ ನದಿಯಲ್ಲಿಯೊಂದರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ. ಹಗಲ ಹೆಣ ಹೊತ್ತುಕೊಂಡು ಚಂದ್ರ ಬಂದ. ಅವನ ಮುಖದಲ್ಲಿರುವುದು ಶೋಕವೊ ನಗುವೊ ಸ್ವತಃ ಅವನಿಗೂ ಗೊತ್ತಿಲ್ಲ. ನಕ್ಷತ್ರಗಳು ಏನನ್ನು ಅರಿಯದೆ ಕಣ್ಣು ಪಿಳಿಪಿಳಿ ಬಿಟ್ಟು ನೋಡುತ್ತಿವೆ. ಕಪ್ಪನೆಯ ವಾರ್ನಿಷ್ ಬಳಿದುಕೊಂಡು ಆ ಊರು ಕತ್ತಲಾಯಿತು. ಬಲ್ಬುಗಳು ಉರಿದವು. ಬೀದಿ ತುಂಬಾ ಬೆಳಕೊ ಬೆಳಕು. ಮನೆಗಳೊಳಗಿನಿಂದ ತಪ್ಪಿಸಿಕೊಂಡು ಬರುತ್ತಿದ್ದ ಇಷ್ಟಿಷ್ಟೆ ಬೆಳಕು ಬೀದಿ ಬೆಳಕಿನೊಂದಿಗೆ ಸಖ್ಯ ಬೆಳೆಸುತಿತ್ತು.

ಅಡುಗೆ ಮನೆ ಸೇರಿದ ಶ್ರೀನಿವಾಸು ಬೆಂಕಿ ತಾಗಿಸಿ ಒಲೆ ಹಚ್ಚಿದ. ಜ್ವಾಲೆ ಫಡಫಡ ಕಳಚಿಕೊಂಡಿತು. ಅದರ ಮೇಲೆ ಕುದಿಯಲು ಚಹಾ ಇಟ್ಟ. ತಿರುಗಿಬಂದು ಅಡುಗೆ ಮನೆಗಿದ್ದ ಕಿಟಕಿಯ ಬಾಗಿಲನ್ನು ತೆರೆದ. ಗಾಳಿ ಹಿತವಾಗಿ ಬೀಸತೊಡಗಿತು. ಅಂಗಡಿಯಿಂದ ಬರುವಾಗಲೇ ಜಗುಲಿಯ ಮೇಲೆ ಮಲಗಿದ್ದ ಶಂಕರನನ್ನು ಎತ್ತಿಕೊಂಡು ಬಂದು ಹಜಾರದಲ್ಲಿ ಚಾಪೆ ಮೇಲೆ ಮಲಗಿಸಿ, ಕೈ ಕಾಲು ತೊಳೆದು ಅಡುಗೆ ಮನೆ ಸೇರಿದ್ದ. ಶಂಕರ ಹಾಗೆ ಮಲಗಿದ್ದರೇನೆ ಶ್ರೀನಿವಾಸುಗೆ ಒಂದು ಸಣ್ಣ ಸಮಾಧಾನ. ತನಗಾಗಿ ಕಾಯುತ್ತಾ ಕೂರುವ ಅವನ ಕಣ್ಣುಗಳಲ್ಲಿನ ಸಂಕಟಗಳನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ಶಂಕರ ಜಗುಲಿ ಮೇಲೆ ಮಲಗಿಯೆ ಇರಲಿ ಎಂದು ಬಯಸುತ್ತಿದ್ದ. ಶಾಲೆಯಿಂದ ಬಂದು ಶಂಕರ ಅಪ್ಪನಿಗಾಗಿ ಕಾದು ಕಾದು ಜಗುಲಿಯಲ್ಲೆಯೆ ನಿದ್ದೆ ತಬ್ಬಿ‌ ಮಲಗಿ ಬಿಡುತ್ತಿದ್ದ.

ಶ್ರೀನಿವಾಸುಗೆ ತಲೆ ಸಣ್ಣಗೆ ನೋವತೊಡಗಿತು. ಕಿರಾಣಿ ಅಂಗಡಿಯ ಗಿಜಿಗಿಜಿ ಸದ್ದು ನಿತ್ಯ ಸಂಜೆಗೆ ಅವನಿಗೊಂದು ತಲೆನೋವನ್ನು ದಯಪಾಲಿಸುತ್ತಿತ್ತು. ಐದು ಸಾವಿರಕ್ಕೆ ಕಿರಾಣಿ ಅಂಗಡಿಯೊಂದರಲ್ಲಿ ಸಾಮಾನು ಕಟ್ಟುವ ಕೆಲಸವಿತ್ತು ಅವನಿಗೆ. ‘ದಪ್ಪ ಅವಲಕ್ಕಿ ಹೇಗೆ ಕಿಲೋ?’ ‘ಎರಡು ಕೆಜಿ ಬಟಾಟೆ ಕೊಡಿ’ ‘ಎಣ್ಣೆ ಯಾವುದಿದೆ, ಛಲೋ ಇದೆ ಹೌದೊ ಅಲ್ವೊ?’ ಇಂತಹ ನೂರು ಪ್ರಶ್ನೆಗಳಿಗೆ ಉತ್ತರ ನೀಡಿ. ಸಾಮಾನು ಕಟ್ಟಿ, ಒಳ-ಹೊರಗೆ ಓಡಾಡಿ ಸುಸ್ತು ಧರಿಸಿಯೆ ಮನೆಗೆ ಬರುತ್ತಿದ್ದ.

ಖಾಯಂ ಅತಿಥಿಯಾಗಿದ್ದ ತಲೆನೋವಿಗೆ ಅವನು ಎಂದೂ ಮಾತ್ರೆಯ ಮೊರೆ ಹೋಗಿರಲಿಲ್ಲ. ಒಂದು ಕಪ್ ಚಹಾ ಕುಡಿದು ಹಾಗೆ ಕಣ್ಮುಚ್ಚಿ ಒಂದಷ್ಟು ಹೊತ್ತು ಕೂತರೆ ನೋವು ತಹಬದಿಗೆ ಬರುತ್ತಿತ್ತು.

ಒಂದು ಪುಟ್ಟ ಹಜಾರ, ಅದಕ್ಕೆ ಹೊಂದಿಕೊಂಡ ಒಂದು ಅಡುಗೆ ಮನೆ, ಹೊರಗೆ ಜಗುಲಿ ಇದು ಅವನ ಮನೆ. ಒಂದು ಸಾವಿರದ ಐದು ನೂರು ಬಾಡಿಗೆಯದು. ಬೆಂದ ಚಹಾದ ಘಮಲು ಮನೆಯನ್ನು ಆವರಿಸಿತಿತ್ತು. ತನ್ನ ಪಾಳಿಯ ನೋವನ್ನು ಹೊತ್ತುಕೊಂಡೆ ಬಂದು ಹಜಾರದಲ್ಲಿ ಕೂತ. ಕೈಯಲ್ಲಿ ಗಾಳಿಯೊಂದಿಗೆ ಸಖ್ಯ ಬೆಳೆಸಿ ಹಬೆಯಾಡುತ್ತಿದ್ದ ಚಹಾವಿತ್ತು. ಶಂಕರನನ್ನು ಬಿಟ್ಟು ಕುಡಿಯಲು ಮನಸ್ಸಾಗಲಿಲ್ಲ. ಮಗನನ್ನು ಬಿಟ್ಟು ಕುಡಿದರೆ ಅದು ಗಂಟಲಲ್ಲಿ ಇಳಿಯುವುದಾದರೂ ಹೇಗೆ? ಶಂಕರ ಗಾಢನಿದ್ದೆಯಲ್ಲಿದ್ದ. ಎಬ್ಬಿಸಲು ನೋಡಿದ. ಅದರೆ ಶಂಕರ ಮತ್ತೆ ಮತ್ತೆ ತಿರುಗಿ ಮಲಗಿದ. ಊಟಕ್ಕೆ ಎಬ್ಬಿಸಿದರಾಯ್ತು ಅಂತ ತನ್ನ ಪಾಡಿಗೆ ತಾನು ಚಹಾ ಕುಡಿಯ ತೊಡಗಿದ. ಚಹಾದೊಂದಿಗೆ ಒಂದು ತಲ್ಲೀನತೆಯಲ್ಲಿ ಮುಳುಗಿ ಹೋದ. ಮುಗಿದ ಬಳಿಕ ಚಹಾದ ಕಪ್ ಅಲ್ಲೆ ಬದಿಗಿರಿಸಿ, ತಲೆನೋವನ್ನು ಇಷ್ಟಿಷ್ಟೆ ಎದೆಗೆ ಎಳೆದುಕೊಂಡು ಅನುಭವಿಸತೊಡಗಿದ. ಕಾಲು ಚಾಚಿ, ಹಿಂದಕ್ಕೆ ಒರಗಿ ಕಣ್ಣು ಮುಚ್ಚಿದ. ಅವನ ಆ ದಿವ್ಯ ಮೌನ ಇಡೀ ಮನೆಯನ್ನು ಮುತ್ತಿತ್ತು. ಎಲ್ಲೊ ದೂರದ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳ ಸದ್ದುಗಳು ಕೂಡ ಆ ಮನೆಯೆಡೆಗೆ ನಡೆಯಲು ಭಯಪಡುತ್ತಿದ್ದವು.

ಶ್ರೀನಿವಾಸು ಸಂಜೆಗೊಮ್ಮೆ ತನ್ನನ್ನು ತಾನು ಕೊಂದುಕೊಳ್ಳುವಂತ ಮೌನಕ್ಕೆ ಜಾರುವುದು ತೀರಾ ಅವನಿಗೊಂದು ಚಟವೇ ಆಗಿತ್ತು. ಮೌನದ ಒಂದು ಬಿಡುವಿಗಾಗಿಯೆ ಕಾದು ಕುಳಿತಿದ್ದ ಶಂಕರನ ದತ್ತು ವಿಚಾರ ಮೇಲೆದಿತು. ಆರು ತಿಂಗಳಿನಿಂದ ಮನಸ್ಸಿನೊಳಗೆ ಅದೇ ವಿಚಾರ ಸಾಗಿದೆ. ಶಂಕರನನ್ನು ಯಾರಿಗಾದರೂ ದತ್ತು‌ಕೊಡಬೇಕು. ಅಮ್ಮನಿಲ್ಲದ ಶಂಕರ ಹೇಗೆ ಬೆಳೆದಾನು ಎಂಬುದನ್ನು ನೆನೆದಾಗಲೆಲ್ಲಾ ಶ್ರೀನಿವಾಸು ದಿಗಿಲುಗೊಳ್ಳುತ್ತಿದ್ದ. ಸಲಹೆ ಕೊಡಲಿಕ್ಕೆಂದೆ ಇರುವ ಜಗತ್ತು ಅವನಿಗೆ ಮತ್ತೊಂದು ಮದುವೆಯ ಆಮಿಷವೊಡ್ಡಿತು. ಆತ ಅತ್ತ ಕಡೆ ಕಿವಿಗೊಡದೆ ಉಳಿದಿದ್ದ. ಎರಡನೆ ಮದುವೆ ಅನ್ನುವ ಕಲ್ಪನೆಯೇ ಅವನಿಗೆ ಸೇರುವುದಿಲ್ಲ. ತಾನೇ ಅಪ್ಪನೂ ಅಮ್ಮನೂ ಆಗುವ ವಿಚಾರದಲ್ಲಿ ಅವನಿಗೆ ನಂಬಿಗೆ ಇರಲಿಲ್ಲ. ತಾನೊಬ್ಬ ಟಿಪಿಕಲ್ ಫ್ಯಾಮಿಲಿ ಮನುಷ್ಯ ಅಲ್ಲವೆಂಬುದು ಅವನಿಗೆ ಚೆನ್ನಾಗಿಯೇ ಅರಿವಿತ್ತು.

ಒಂದೆರಡು ಬಾರಿ ಅನಾಥಶ್ರಮದ ಮುಂದಿನವರೆಗೂ ಹೋಗಿ ವಾಪಸು ಬಂದಿದ್ದ. ‘ಮಗು ದತ್ತು ತೆಗೆದುಕೊಳ್ಳುವವರು ಸಂಪರ್ಕಿಸಿ’ ಅಂತ ನಗುವ ಪೋಟೋ ಹಿಡಿದು ಪತ್ರಿಕೆ ಕಛೇರಿಯ ಬಾಗಿಲವರೆಗೂ ಹೋಗಿ ವಾಪಸು ಬಂದಿದ್ದ. ಆರು ವರ್ಷದ ಮಗುವನ್ನು ದತ್ತು ತೆಗೆದುಕೊಳ್ಳಲು ಮನಸ್ಸು ಮಾಡುವವರು ವಿರಳ ಎಂಬ ಸತ್ಯದ ಅರಿವು ಕೂಡ ಅವನಿಗಿತ್ತು. ತನ್ನೊಳಗೆ ಏನು ನಡೆದಿದೆ ಎಂಬುದು ಸ್ವತಃ ಅವನಿಗೆ ಗೊತ್ತಾಗದಷ್ಟು ಅವನಿಗವನೇ ಕಗ್ಗಂಟಾಗಿದ್ದ, ಗೊಂದಲದಲ್ಲಿದ್ದ. ‘ಒಬ್ಬ ಅಪ್ಪ ಮಗನನ್ನು ಸಾಕಲಾಗದಷ್ಟು ಹೇಡಿಯಾಗಿರುತ್ತಾನಾ?’ ಅನ್ನುವ ಅವನದೇ ಪ್ರಶ್ನೆಗೆ ‘ಇದು ಸಾಕುವ ಹೊಣೆಗಾರಿಕೆಯ ಪ್ರಶ್ನೆಯದ್ದಲ್ಲ’ ಎನ್ನುವ ಉತ್ತರ ಕೊಟ್ಟುಕೊಳ್ಳುತ್ತಿದ್ದ.

ಪ್ರತಿ ಸಂಜೆ ತಾನೇ ಸೃಷ್ಟಿಸಿಕೊಳ್ಳುತ್ತಿದ್ದ ಮೌನದೊಳಗೆ ಗಿರೀಜಳನ್ನು ಬರಮಾಡಿಕೊಳ್ಳುತ್ತಿದ್ದ. ಗಿರೀಜಳನ್ನು ಪ್ರೀತಿಸಿದ್ದು, ಆ ಪ್ರೀತಿಗೆ ಎರಡೂ ಮನೆಯಲ್ಲಿ ಒಪ್ಪದೆ ಇದದ್ದು, ಇಬ್ಬರೂ ಪ್ರೀತಿಯನ್ನಷ್ಟೆ ನಂಬಿಕೊಂಡು ಮನೆಬಿಟ್ಟು ಬಂದು ಬೆಂಗಳೂರಿನಲ್ಲಿ‌ ಮದುವೆಯಾದದ್ದು ನೆನಪಾಗುತ್ತಿತ್ತು. ಎಲ್ಲೋ ಇಕ್ಕಟ್ಟಾದ ಓಣಿಯಲ್ಲಿ‌ ಖೋಲಿಯೊಂದನ್ನು ಬಾಡಿಗೆ ಪಡೆದು ಸಂಸಾರ ಹೂಡಿದ್ದರು. ಅವನು ಫ್ಯಾಕ್ಟರಿಯಲ್ಲಿ, ಅವಳು ಗಾರ್ಮೆಂಟನ್ಸ್ ನಲ್ಲಿ ದುಡಿಯತೊಡಗಿದ್ದರು. ಬರೀ ಪ್ರೀತಿಯ ಕಾರಣಕ್ಕೆ ಎರಡೂ ಮನೆಯವರು ಇವರನ್ನು‌ ದೂರಮಾಡಿದ್ದರು.

ಹತ್ತಾರು ವರ್ಷಗಳ ಕಾಲ ಊರಿಗೆ ಹೋಗದೆ ಇದದ್ದು, ಊರಿನಿಂದಲೂ ಯಾರೂ ಬರದೆ ಇದ್ದದ್ದನ್ನು ನೆನಪಿಸಿಕೊಂಡು ತೊಯ್ದು ಹೋಗುತ್ತಿದ್ದ. ಊರಿನ ಕರೆ ಇಲ್ಲದ ಹೊರತಾಗಿಯೂ ಶ್ರೀನಿವಾಸು ಮತ್ತು ಗಿರೀಜ ಸುಖಿಯಾಗಿಯೇ ಇದ್ದರು. ಹತ್ತಾರು ವರ್ಷಗಳಾದರೂ ಒಂದಾದರು ಮಗುವಾಗದೆ ಇದ್ದದ್ದು ಅವರನ್ನು ತುಂಬಾ ಕಾಡಿತ್ತು. ಕಂಡ ಕಂಡ ಆಸ್ಪತ್ರೆ ಸುತ್ತಿ ಮಾತ್ರೆ ನುಂಗಿದ್ದೆ ಬಂತು ಮಡಿಲು ತುಂಬಲಿಲ್ಲ. ‘ಗಿರೀಜ, ನಿನಗೆ ನಾನು ಮಗು ನನಗೆ ನೀನು ಮಗು ಇಷ್ಟೆ ಸಾಕಲ್ಲೇನು?’ ಎಂದು ಮಾತಾಡಿ ಗಿರೀಜಳ ದುಃಖಕ್ಕೆ ಸಾಂತ್ವನ ಹೊಯ್ಯುತ್ತಿದ್ದ. ಸಾಂತ್ವನಕ್ಕಷ್ಟೆ ತಾಯಿತನ ನೀಗುವಂತದ್ದಲ್ಲ. ಆಗ ಮಗುವೊಂದನ್ನು ದತ್ತು ತೆಗೆದುಕೊಳ್ಳುವ ವಿಚಾರವನ್ನು ಗಿರೀಜ ಶ್ರೀನಿವಾಸನ ಮುಂದಿಟ್ಟಿದ್ದಳು. ಶ್ರೀನಿವಾಸು ‘ಯಾರದೊ ಮಗುವಿಗೆ ನಾವು ತಂದೆ ತಾಯಿಯಾಗುವುದು ಹೇಗೆ ಸಾಧ್ಯ? ಅದು ಸುಲಭದ್ದಲ್ಲ ಬಿಡು’ ಅಂದಿದ್ದ. ಹಲವು ಹಟಗಳ ಬಳಿಕ ಶ್ರೀನಿವಾಸು ದತ್ತು ಸ್ವೀಕಾರಕ್ಕೆ ಅಸ್ತು ಎಂದಿದ್ದ. ಆಗ ಮನೆಗೆ ಬಂದವನೆ ಒಂದು ವರ್ಷದ ಶಂಕರ. ಗಿರೀಜ ಗಾರ್ಮೆಂಟನ್ಸ್ ಕೆಲಸ ಬಿಟ್ಟು ಮಗುವಿನ ಆರೈಕೆಗೆ ನಿಂತಳು. ಪೂರ್ಣ ಮನಸ್ಸಿಲ್ಲದಿದ್ದರೂ ಶ್ರೀನಿವಾಸು ಗಿರೀಜಳಿಗಾಗಿ ಬಲವಂತದ ಅಪ್ಪನಾಗಿದ್ದ.

ಕರೋನ ಬೆಂಗಳೂರನ್ನು ನೆಕ್ಕಲು ಆರಂಭಿಸಿದಾಗ ಮನೆ ಖಾಲಿ‌ ಮಾಡಿಕೊಂಡು ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಈ ಊರಿಗೆ ಬಂದು ನೆಲೆಸಿದ್ದರು. ಎಂದೊ ಮುಚ್ಚಿದ್ದ ಊರಿನ ಬಾಗಿಲು ಕರೋನ ಕಾರಣದಿಂದ ಮತ್ತಷ್ಟು ಭದ್ರವಾಗಿತ್ತು. ಪಿಎಫ್ ಹಣದಲ್ಲಿ ಒಂದಷ್ಟು ದಿನ ತಳ್ಳಿದ ಬಳಿಕ ಶ್ರೀನಿವಾಸು‌ ಕಿರಾಣಿ ಅಂಗಡಿಗೆ ಕೆಲಸಕ್ಕೆ ಸೇರಿದ. ಎರಡನೆ ಅಲೆಯಲ್ಲಿ ಶ್ರೀನಿವಾಸು ಮತ್ತು ಗಿರೀಜ ಇಬ್ಬರನ್ನೂ ಕರೋನ ಹುಡುಕಿ ಬಂದಿತ್ತು. ಶಂಕರನನ್ನು ಕಿರಾಣಿ ಅಂಗಡಿ ಹುಡುಗರ ಬಳಿ ಬಿಟ್ಟು ಗಂಡ ಹೆಂಡತಿ ಇಬ್ಬರೂ ಮನೆಯಲ್ಲೇ ಉಳಿದಿದ್ದರು. ಐದನೇ ದಿನಕ್ಕೆ ಕೆಮ್ಮು ವಿಪರೀತವಾಗಿ ಆಸ್ಪತ್ರೆಗೆ ಹೋದ ಗಿರೀಜ ಮತ್ತೆಂದೂ ಮನೆಗೆ ಬರಲಿಲ್ಲ. ಬಂದಿದ್ದು ಮಾತ್ರ ಅವಳ ಸಾವಿನ ಸುದ್ದಿ. ಗಿರೀಜಳ ಸಾವು ಮತ್ತು ಕರೋನ ಎರಡೂ ಸೇರಿ ಶ್ರೀನಿವಾಸನ ದೇಹ, ಮನಸ್ಸು ಎರಡನ್ನೂ ಜಜ್ಜಿ ಹಾಕಿದ್ದವು.

ಶಂಕರನ ಸಂಪೂರ್ಣ ಹೊಣೆ ಈಗ ಶ್ರೀನಿವಾಸನ ಹೆಗಲ ಮೇಲೆ ಬಿತ್ತು.

ಅಪ್ಪನಾಗಿ ಮಗುವಿಗೆ ನ್ಯಾಯ ಒದಗಿಸಲಾರೆನೆಂದು ಅವನಿಗೆ ಮತ್ತೆ ಮತ್ತೆ ಕಾಡ ಹತ್ತಿತು. ಮಗನನ್ನು ಶಾಲೆಗೆ ಸೇರಿಸಿ ತಾನು ಕೂಡ ಮತ್ತೆ ಕೆಲಸದ ಹಾದಿ ಹಿಡಿದಿದ್ದ. ತನಗಾಗಿ, ಶಂಕರನಿಗಾಗಿ ಏನಾದ್ರೂ ಮಾಡಲೇ ಬೇಕಿತ್ತು. ಇನ್ನೊಂದು ಮದುವೆಯ ಯೋಚನೆ ಯಾವತ್ತೂ ಅವನ ಮನಸಿಗೆ ಬರಲೇ ಇಲ್ಲ!

ಧ್ಯಾನದಂತ ದೀರ್ಘ ಮೌನ ಸೀಳಿ ಆಚೆ ಬಂದ ಶ್ರೀನಿವಾಸು. ಅಡುಗೆ ಮಾಡುವುದು ಏನಿರಲಿಲ್ಲ. ನಿನ್ನೆಯ ಸಾರಿತ್ತು. ಅನ್ನ ಬೇಯಿಸಿಕೊಂಡರೆ ಆಗಬಹುದಲ್ಲ ಅಂದುಕೊಂಡು ಒಂದು ಲೋಟ ಅಕ್ಕಿಯನ್ನು ತೊಳೆದು ಕುಕ್ಕರ್ ನಲ್ಲಿ ಹಾಕಿ ಮತ್ತೆ ಹಜಾರಕ್ಕೆ ಬಂದು ನಿಂತ. ಶಂಕರನ ಕಡೆಗೊಮ್ಮೆ ನೋಡಿದ. ನಿದ್ದೆ ಸವಿಯುತ್ತಿದ್ದ ಶಂಕರನ ಮುಖ ಮುದ್ದಾಗಿ ಕಾಣಿಸಿತು.

ಮುಚ್ಚಿಯೇ ಇದ್ದ ಹಜಾರದ ಕಿಟಕಿ ತೆರೆದ. ಹೊರಗೆ ಬರೀ ಕತ್ತಲು. ಅದರೊಳಗಿನಿಂದ ಹುಟ್ಟಬಂದಂತೆ ತಣ್ಣನೆಯ ಗಾಳಿ ಅವನು ಮುಖವನ್ನು ಸಾವರಿಸಿ ಹೋಗುತ್ತಿತ್ತು. ಹಿತವೆನಿಸಿತು ಅವನಿಗೆ. ತಲೆನೋವಿನ ಕೊನೆಯ ಹೆಜ್ಜೆಗಳು ಮಾತ್ರ ಬಾಕಿ ಇದ್ದವು.

ಕತ್ತಲನ್ನೆ ದಿಟ್ಟಿಸಿ ನೋಡತೊಡಗಿದ. ಈ ಊರು, ಈ ಮನೆ, ಆ ಕತ್ತಲು, ಹಿತವಾದ ಗಾಳಿ ಮತ್ತು ನಾನು ಹಾಗೂ ಅಲ್ಲಿ‌ ಮಲಗಿರುವ ಶಂಕರ ಎಲ್ಲವೂ ಸೇರಿ ಒಂದು ಹೊಸ ಪ್ರಪಂಚವೇ ಸೃಷ್ಟಿಯಾಗುತ್ತಿದೆ ಎನಿಸಿತು. ನನಗಾಗಿ ಶಂಕರನಿದ್ದಾನೊ? ಶಂಕರನಿಗಾಗಿ ನಾನು ಇದ್ದೇನೊ? ಎಂಬ ಪ್ರಶ್ನೆ ಮೂಡಿದ್ದೆ, ಇದಕ್ಕೆ ಉತ್ತರವಿಲ್ಲ ಬಿಡು ಎಂದು ಆ ಯೋಚನೆಯನ್ನೆ ಆಚೆ ತಳಿದ.

ತಾನೇಕೆ ಈ ನಡುವೆ ಶಂಕರನ ಬಗ್ಗೆ ತೀರ ಕಾಳಜಿಗೆ ಇಳಿದಿದ್ದೇನೆ. ಅದು ಮರುಕವೊ? ಕರುಣೆಯೊ? ನಿಜ ಅಪ್ಪನ ಕಾಳಜಿಯೊ? ಕೇಳಿಕೊಂಡ. ಬದುಕಿನಲ್ಲಿ ಉತ್ತರ ಹುಡುಕುವುದರಷ್ಟು ಬೋರು ಮತ್ತು ವ್ಯರ್ಥದ್ದು ಮತ್ತೊಂದಿಲ್ಲ. ಪ್ರಶ್ನೆಗಳಲ್ಲೆ ಬದುಕುವುದು ಒಂದು ನೆಮ್ಮದಿ. ಉತ್ತರಗಳು ಕೊಡುವ ಕಿರಕುಳ ಆಗಾಧವಾದದ್ದು.

ಶಂಕರನನ್ನು ಬೆಳ್-ಬೆಳಗ್ಗೆಯೆ ಎಬ್ಬಿಸಿ. ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ಚೆಂದದ ಕ್ರಾಪ್ ತೆಗೆದು, ಪೌಡರ್ ಬಳಿದು, ಅಂಗಿ ತೊಡಸಿ, ಊಟ ತಿನ್ನಿಸುವುದರಲ್ಲಿ ಎಷ್ಟೊಂದು ಮೋಜಿದೆ ಅನಿಸಿತು. ಬದುಕಿನ ಗಣಿಯೊಳಗಿ ಇಂತಹ ಚೆಲುವಾದರೂ ಹುದುಗಿರುವುದು ಹೇಗೆ? ಗಿರೀಜ ಹಂಬಲಿಸಿದ್ದು ಇಂತಹ ಕ್ಷಣಕ್ಕಾಗಿಯೆ ಇರಬೇಕು. ಅವನೊಂದಿಗೆ ತಾನು ಬೇಗ ಬೇಗ ರೆಡಿಯಾಗಿ ಇಬ್ಬರೂ ಒಂದೇ ಸಾರಿಗೆ ಮನೆಯಿಂದ ಹೊರಟು ಬಿಡುವುದು. ಅವನನ್ನು ಶಾಲೆಗೆ ಕಳುಹಿಸಿ ತಾನು ಅಂಗಡಿಗೆ ಹೋಗುವುದು. ಅಂಗಡಿಯ ಅತೀ ಜರೂರು ಕೆಲಸಗಳ ನಡುವೆಯೂ ಶಂಕರ ಈಗೇನು ಮಾಡುತ್ತಿರಬಹುದು ಎಂದು ಯೋಚಿಸುವುದು. ಇವೆಲ್ಲವೂ ಅವನನ್ನು ಹಿತವಾಗಿಸುತ್ತಿದ್ದವು. ಸಂಜೆಯಾಗುತ್ತಲೇ ಲಗುಬಗೆಯಲ್ಲೆ ಕೆಲಸ ಮುಗಿಸಿ ಹೊರಟು ನಿಲ್ಲುತ್ತಿದ್ದ. ಮೊದಲ ಮೊದಲು ಮನೆ ಸೇರುವುದು ಎಂಟಾದರೂ ಆಗುತ್ತಿತ್ತು. ಈಗ ಕತ್ತಲಾಗುವ ಕ್ಷಣಕ್ಕೆಲ್ಲಾ ಮನೆ ಸೇರುತ್ತಿದ್ದ. ಶಂಕರ ಬಂದು ತನಗಾಗಿ‌ ಕಾಯುತ್ತಿರುವ ದೃಶ್ಯ ನೆನಸಿಕೊಂಡಾಗಲೆಲ್ಲಾ ಮನಸ್ಸು ತಲ್ಲಣಿಸುತ್ತಿತ್ತು… ಹೀಗೆ ಕತ್ತಲ ಗರ್ಭದಿಂದ ಹುಟ್ಟಿಬರುತ್ತಿದ್ದ ತಂಗಾಳಿಗೆ ತನ್ನ ಯೋಚನೆಗಳನ್ನು ಹರಡಲು ಬಿಟ್ಟು ನಿಂತಿದ್ದ.

ಶಂಕರ ಎದ್ದ ಸದ್ದಾಯಿತು. ತನ್ನ ಲಹರಿಗಳನ್ನು ಮೊಟಕುಗೊಳಿಸಿ ಮಗನ ಕಡೆ ನೋಡಿದ. ‘ಶಂಕ್ರಾ, ಆಯ್ತಾ ಪುಟ್ಟ ನಿದ್ದೆ? ಏಳು ಏಳು ಚಹಾ ಕುಡಿಯುವ’ ಎಂದು ಅವನನ್ನು ಎಬ್ಬಿಸಿದ. ಮುಖ ತೊಳೆದು, ಕುಡಿಯಲು ಚಹಾವನ್ನು ಬಿಸಿ ಮಾಡಿಕೊಟ್ಟ. ಇನ್ನೂ ಆರಿರದ ನಿದ್ದೆಯ ಮಂಪರಿನಲ್ಲೇ ಚಹಾದ ಗುಟುಕು ಶಂಕರನ ನರನಾಡಿ ಸೇರುತ್ತಿತ್ತು.

ಚಹಾ ಮುಗಿದದ್ದೆ ಶಂಕರ ಶಾಲೆಯ ಪಾಟಿಗಂಟನ್ನು ತಂದು ಅಪ್ಪನ ಮುಂದಿಟ್ಟು ಕೂತ. ‘ಪಪ್ಪ ಹೊಂ ವರ್ಕ್ ಇದೆ ಬರೀ ಬೇಕು..’ ಅಂದ. ಶಾಲೆಯಲ್ಲಿನ ತನ್ನ ಗೆಳೆಯರಾದ ನೀತಾ ಸೂರಿ ಮಮತ ಗಣಿ ಬಗ್ಗೆ ಏನೇನು ಹೇಳಿಕೊಂಡು ಕಿಲಕಿಲ ನಕ್ಕ. ಶ್ರೀನಿವಾಸು ಒಂದೇ ಒಂದು ಮಾತು ಕೂಡ ತಪ್ಪಿ ಹೋಗದಂತೆ ಜತನವಾಗಿ ಕೇಳಿಸಿಕೊಳ್ಳುತ್ತಿದ್ದ. ಅವನ ನಗುವಿಗೆ ತಾನೂ ನಗುವಾದ. ನೋಟ್ ಬುಕ್ಕೊಂದನ್ನು ತೆಗೆದು ಅದರಲ್ಲಿ ‘ಅಪ್ಪನ ಹೆಸರು ಶ್ರೀನಿವಾಸ ಅಮ್ಮನ ಹೆಸರು ಗಿರೀಜ..’ ಎಂದು ಜೋರಾಗಿ ಹೇಳುತ್ತಾ ಬರೆಯತೊಡಗಿದ. ಆ ದನಿ ಮೂರು ಜೀವಗಳನ್ನು ಯಾವುದೊ ಜನ್ಮದ ನಂಟು ಬೆಸೆಯುವ ಬಳ್ಳಿಯಾಗಿ ಸುಳಿ-ಸುಳಿಯಾಗಿ ಎದ್ದು ಕರುಳು, ನರನಾಡಿ, ಎದೆಯೊಳಗೆ ಸೇರ ತೊಡಗಿತು. ಹೊಟ್ಟೆಯ ಹುಟ್ಟಿಗೆ ಕರುಳಿನ ನೆಪವಿದೆ; ಹುಟ್ಟದೆ ನಂಟಾಗುವ ಪರಿಗೆ ಎದೆ ಬಳ್ಳಿಯ ಒಲವಿದೆ. ‘ಅಪ್ಪ ಶ್ರೀನಿವಾಸ.. ಅಮ್ಮ ಗಿರೀಜ…’ಶಂಕರ ಬಾಯಲ್ಲಿ ಹೇಳುತ್ತ ಬರೆಯುತ್ತಲೆ ಇದ್ದ. ಇತ್ತ ಶ್ರೀನಿವಾಸನ ಕಣ್ಣಲ್ಲಿ ಇಷ್ಟಿಷ್ಟೆ ನೀರು ತುಂಬಲು ಆರಂಭಿಸಿತು.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: