ಸದಾಶಿವ್ ಸೊರಟೂರು ಕಥಾ ಅಂಕಣ- ಕತ್ತಲೆಯ ಬೆರಳಿಡಿದ ನಡಿಗೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

16

ಫೇಸ್ಬುಕ್ ಮೆಸೆಂಜರ್

ಅವಳು : ಹಾಯ್.. ನಿಮ್ಮೊಂದಿಗೆ ಮಾತಾಡಬಹುದಾ? If u don’t mind..

ಮತ್ತೆ ಅರ್ಧ ಗಂಟೆಯ ಬಳಿಕ..

ಅವಳು : ಸರ್ ಬ್ಯೂಸಿ ಇದೀರಾ?

ಅವನು : ನೋ ನೋ ಹೇಳಿ. ಆಗ ನೀವು ಮಸೇಜ್ ಮಾಡಿದಾಗ ನಾನು ಸ್ವಲ್ಪ ಬೇರೆ ಕೆಲಸದಲ್ಲಿದ್ದೆ.

ಅವಳು : ಇರಲಿ ಸರ್.. ಸುಮ್ಮನೆ ಹೀಗೆ ಮಿಸ್ ಆಗಿ ಬಂತು ಅಂತ ಸುಳ್ಳು ಹೇಳಲೊ ಅಥವಾ ಉದ್ದೇಶಪೂರ್ವಕ ಇನ್ಬಾಕ್ಸಿಗೆ ಬಂದೆ ಅಂತ ನಿಜ ಹೇಳಲೊ..

ಅವನು : ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪರಿಚಯ ಹೇಳಿ..

ಅವಳು : ಯಾಕೆ ಸರ್.. ನನ್ನ ಮಸೇಜ್ ಬಂದ ತಕ್ಷಣ ನೀವು ಈಗಾಗಲೇ ಎರಡ್ಮೂರು ಬಾರಿ ನನ್ನ ಪ್ರೊಫೈಲ್ ಚೆಕ್ ಮಾಡಿರುತ್ತೀರಿ.

ಅವನು : ನೀವು ಜಾಣರಿದ್ದೀರಿ

ಅವಳು : ಇದರಲ್ಲಿ ಜಾಣತನ ಏನು ಬಂತು.. ಪರಿಚಯ ಅನ್ನೋದು ಮಾಡಿಕೊಳೋದಲ್ಲ. ಬಹುಶಃ ಮುಂದೆ ಮಾತಾಡ್ತಾ ಹೋದ ಹಾಗೆ ನಮ್ಮಗಳ ಪರಿಚಯ ಆಗಬಹುದು. ಅದು ಹಾಗೆ ಆದ್ರೇನೇ ಚೆಂದ.

ಅವನು : ಹೌದು ನೀವು ಹೇಳಿದ್ದು ಸರಿ. ಮತ್ತೆ ಹೇಳಿ.. ಏನದು ಕೇಳಬೇಕು ಅಂದಿದ್ದು?

ಅವಳು : ಏನಿಲ್ಲ ಬಿಡಿ.. ಬೈ ಮತ್ತೆ ಮಾಡ್ತೀನಿ.


ಎರಡ್ಮೂರು ದಿನ ಅವನು ಒದ್ದಾಟದಲ್ಲಿ ಕಳೆದ. ಅವಳು ಆನ್ಲೈನ್ ಗೆ ಬರಲಿಲ್ಲ. ಅಪರಿಚಿತ ಹುಡುಗಿ ತನ್ನ ಬಳಿ ಕೇಳುವುದಾದರೂ ಏನಿತ್ತು ಅಂತ ತುಂಬಾ ಯೋಚಿಸತೊಡಗಿದ.

ಐದು ದಿನದ ನಂತರ.. ಇನ್ಬಾಕ್ಷಿನಲ್ಲಿ ಬೆಳಕು.

ಅವನು : ಕ್ಷಮೆ ಇರಲಿ. ನಿಮ್ಮೊಂದಿಗೆ ಅವತ್ತು ಸುಮ್ಮನೆ ಹರಟುವ ಉದ್ದೇಶವಿರಲಿಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಹೋದೆ. ನಾನು ಪ್ರಶ್ನೆ ಕೇಳುತ್ತಾ ಹೋದೆ, ನೀವು ಉತ್ತರಿಸುತ್ತಾ ಹೋದಿರಿ. ಹರಟೆ ಹುಟ್ಟಿಕೊಂಡಿತು. ಹೊಣೆ ನಾನಂತೂ ಅಲ್ಲ. ಬಹುಶಃ ನೀವೂ ಅಲ್ಲ. ಹಾಳು ಫೇಸ್ಬುಕ್…

ಅವಳು : ನೋ ಸಾರಿ.‌ ನಿಮ್ಮ ಪ್ರೋಫೈಲ್ ಇಷ್ಟ ಆಯ್ತು. ನಿಮ್ಮ ಬರವಣಿಗೆ ತುಂಬಾ ಕುತೂಹಲಕಾರಿ. ಅದಕ್ಕೆ ನಿಮ್ಮನ್ನು ಕೇಳದೆ ಇನ್ಬಾಕ್ಷಿಗೆ ಬಂದೆ. ನಂದು ಸ್ವಲ್ಪ ಮಾತು ಜೋರು. ನಿಮ್ಮ ಬರವಣಿಗೆ ಚೆಂದ ಇದೆ. ನಿಮಗೆ ತೊಂದರೆಯಾ ನನ್ನ ಮಾತು?

ಅವನು : ನೋ ನೋ ಹಾಗೇನಿಲ್ಲ. ಕಾಫಿ?

ಅವಳು : ಕಾಫಿ ಇಷ್ಟ. ಆದರೆ ಹೇಗೆ ಬರಲಿ? ನಾನು ಕಾಫಿಗೆ ಬಂದ್ರೆ ಅದನ್ನು ಇಟ್ಕೊಂಡೆ ಒಂದು ಕಥೆ ಬರೆದು ಬಿಡ್ತೀರಿ ಅಲ್ವಾ? ಹೌದು ನನ್ನ ಮೆಸೇಜ್‍ಗಳಿಗೆ ಅಂಜುತ್ತಾ ಉತ್ತರ ಕೊಡ್ತೀರಿ? ನೋಡಿ ಹಾಯ್, ಹಲೋ, ಹೇಗಿದೀರಿ ಅನ್ನುವ ಮಾತಿಗೆ ಮೂರು ತಿಂಗಳು ತಗೊಂಡ್ರಿ.

ಅವನು : ಹಾಗಲ್ಲ ಅದು. ಅಪರಿಚಿತರು ನೀವು. ಅದೂ ಹುಡುಗಿ. ಹೇಗೆ ಫ್ರೀಯಾಗಿ ಮಾತಾಡೋದು?

ಅವಳು : ಪರಿಚಿತರಾಗುವ ಮೊದಲು ಎಲ್ಲರೂ ಅಪರಿಚಿತರೇ ಅಲ್ವ?

ಅವನು : ಹೌದು.. ಅದೇನು ಅವತ್ತು ಕೇಳಬೇಕು ಅಂದ್ರಿ?

ಅವಳು : ಹೌದು ಕೇಳೋದು ಇದೆ. ಅದು ತುಂಬಾ ಮುಖ್ಯವಾದದ್ದು. ಅದು ಕೇಳೋದು ಅನ್ನುವುದಕ್ಕಿಂತ. ಹೇಳುವುದು ಮತ್ತು ನಾನು ಹೇಳಲೇ ಬೇಕಾದದ್ದು.

ಅವನು : ಹೌದು.. ಕೇಳೋದು ಬೇಡ. ಹೇಳಿ ಸಾಕು. ಯಾವುದೇ ಮುಜುಗರ ಬೇಡ.

ಅವಳು : ನೋ ನೋ ಮುಜುಗರ ಇಲ್ಲ. ನಿಮಗೆ ಗೊತ್ತಾ? ನಾವು ಪರಿಚಿತರ ಬಳಿ ಹೇಳೊಕೆ ಸಣ್ಣ ಭಯ, ಮುಜುಗರ ಪಡ್ತೀವಿ. ಯಾಕೆಂದರೆ ನಾಳೆ ಅದೇ ವಿಚಾರಗಳೇ ಅವರ ಮುಂದೆ ನಮ್ಮ ದೌರ್ಬಲ್ಯಗಳಾಗಬಹುದು. ಆದರೆ ಅಪರಿಚಿತರ ಮುಂದೆ ಅಂತಹ ಭಯಗಳಿರಲಿಲ್ಲ.‌

ಅವನು : ಯೆಸ್.. ಇದೊಂದು ಕಥೆಗೆ ಅದ್ಬುತ ವಸ್ತುವಾಗಬಲ್ಲದು. ಹೇಳಿ ಅದೇನು ಕೇಳಬೇಕು ಅಂದಿರುವುದು ನೀವು..

ಅವಳು : ಎಷ್ಟೊಂದು ಆತುರ ನಿಮಗೆ. ಹೇಳಲೇ ಬೇಕು, ಕೇಳಲೇಬೇಕು ಅಂತ ಬಂದವರು, ನೀವು ಬೇಡ ಅಂದರೂ ಹೇಳಿಯೇ ಹೇಳ್ತಾರೆ. ಆದರೆ ಅದಕ್ಕೊಂದು ಸಂದರ್ಭ ಬರಬೇಕು.‌

ಅವನು : ಸಂದರ್ಭ ನೋಡಿ ಹೇಳೋರು ತೀರಾ ಪರಿಚಿತರು ಮಾತ್ರ. ಅಪರಿಚಿತರಿಗೆ ಅದರ ಗೊಡವೆ ಇರುವುದಿಲ್ಲ.. ನೀವು ಹೇಳಬಹುದು.

ಅವಳು : ಇಷ್ಟು ಮಾತಾಡಿದ ಮೇಲೂ ನೀವು ಅಪರಿಚಿತರೆಂದು ಭಾವಿಸುತ್ತೀರಾ? ನೀವು ಸರಿಯಿಲ್ಲ. ಬೈ

ತಕ್ಷಣ ಆಫ್‍ಲೈನ್. ಅವನು ಮತ್ತೆ ಕಾಯತೊಡಗಿದ. ದಿನಾ ಇನ್ಬಾಕ್ಷಿಗೆ ಇಣುಕಿ ನಿರಾಶೆಯಿಂದ ಆಚೆ ಬರುತ್ತಿದ್ದ.


ಮೂರು ದಿನದ ನಂತರ..‌ ಮತ್ತೆ ಅವಳ ಮಸೇಜ್

ಅವಳು : ನೋಡಿ‌ ಅದು ಇದು ಮಾತು ಬೇಡ. ನೇರವಾಗಿ ಹೇಳ್ತೀನಿ. ನೀವು ಬರೆಯುತ್ತಿರುವ ಸರಣಿ ಕಥೆ ‘ಕತ್ತಲೆಯ ಬೆರಳಿಡಿದ ನಡಿಗೆ’ ಬಗ್ಗೆ ಏನೊ ಹೇಳಬೇಕಿತ್ತು.

ಅವನು : ದಟ್ಸ್ ಗುಡ್. ಹೇಳಿ ಹೇಳಿ

ಅವಳು : ವಿಧವೆಯ ಕಥೆ ತೆಗೆದುಕೊಂಡಿದ್ದೀರಿ. ಅದರಲ್ಲಿ ಅವಳ ಒಂಟಿತನ ಮತ್ತು ಅವಳ ಒಂಟಿತನದ ಸಹಾಯಕ್ಕೆ ನಿಲ್ಲುವ ಒಂದು ಪಾತ್ರವನ್ನು ತಂದಿದ್ದೀರಿ ಅಲ್ವ..

ಅವನು : ಯೆಸ್.. ಇಟ್ಸ್ ನೀಡೆಡ್

ಅವಳು : ಅವಳ ಕಷ್ಟ ಮನ ನೋಯಿಸುತ್ತೆ. ಅವಳ ಬಳಿ ಗಂಡ ಬಿಟ್ಟು ಹೋದ ಸ್ವಲ್ಪ ಆಸ್ತಿ ಇದೆ. ಅವನ ಬಿಟ್ಟು ಹೋದ ಬದುಕೂ ಇದೆ. ಅವನೇ ಕೊಟ್ಟು ಹೋದ ಮಗಳು ಕೂಡ ಇದಾಳೆ. ಇಷ್ಟರಲ್ಲೇ ಒಂದು ಬದುಕು ಮುಗಿಸಲಾಗುವುದಿಲ್ಲ. ಅವಳಿಗೆ ಅವಳದೇ ಆದ ಬದುಕು ಬೇಕೆಂದು ನೀವು ಬರೆಯುತ್ತಾ ಹೋಗುತ್ತೀರಿ.

ಅವನು : ಹೌದು ನೀವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರಿ.

ಅವಳು : ಆದರೆ ನಿಮ್ಮ ಕಥೆಯ ಸರಣಿಯ ಅಂತ್ಯ ಹೇಗೆ ಅಂತ ನನಗೆ ಗೊತ್ತಿಲ್ಲ. ಆದರೆ ನನ್ನೊಂದು ಅಭಿಪ್ರಾಯ ಇದೆ ಹೇಳಲೇ?

ಅವನು : ನೀವು ಅವಶ್ಯವಾಗಿ ಹೇಳಬೇಕು.

ಅವಳು : ನಮ್ಮ ಅಮ್ಮ ನಿಮ್ಮ ಆ ಕಥಾ ಸರಣಿಯನ್ನು ತಪ್ಪದೆ ಓದುತ್ತಾರೆ. ಅದು ಅವರನ್ನು ಪ್ರಭಾವಿಸಿದೆ ಅಂತ ನನ್ನ ಅನಿಸಿಕೆ.

ಅವನು : ಅದು ಕಥೆಗಾರನ ಧನ್ಯತೆ. ಅದಕ್ಕಿಂತ ಇನ್ನೇನು ಬೇಕು?

ಅವಳು : ಇರಲಿ ಅದು ಒಳ್ಳೆಯದು. ಆದರೆ ನನ್ನ ಅಭಿಪ್ರಾಯ ಒಮ್ಮೆ ಕೇಳಿಸಿಕೊಳ್ಳಿ. ಆ ಮಹಿಳೆಗೆ ಅಷ್ಟೊಂದು ಸಪೋರ್ಟ್ ಆಗಿರುವ ಅವನ್ಯಾಕೆ ಕದ್ದು ಮುಚ್ಚಿ ಸಹಾಯ ಮಾಡಬೇಕು? ಇವರೇಕೆ ಭಯದಲ್ಲಿ ಅವರೊಂದಿಗೆ ಮಾತಾಡಬೇಕು? ಯಾಕೆ ಅವರು ಯಾರಿಗೂ ಇದೆಲ್ಲಾ ಗೊತ್ತಾಗಬಾರದು ಎಂಬಂತೆ ನಡೆದುಕೊಳ್ಳಬೇಕು?

ಅವನು: ಇದು ಬರೀ ಕಥೆಯಲ್ಲಿ ಬಂದಿರುವುದಲ್ಲ. ಲೋಕದಲ್ಲಿ ಇರೋದೆ ಹೀಗೆ. ಅದನ್ನು ಕಥೆ ಹೇಳುತ್ತದೆಯಷ್ಟೆ. ಹೌದು ನಿಮ್ಮ ಅಮ್ಮ ಇದರ ಬಗ್ಗೆ ಏನು ಹೇಳ್ತಾರೆ?

ಅವಳು : ಮತ್ತೆ ಮಾತಾಡ್ತೀನಿ.. ಬೈ.

ಅವನು : ಏನು ನೀವು ಏಕಾಏಕಿ ಮಾತು ನಿಲ್ಲಿಸುತ್ತೀರಿ? ಏಕಾಏಕಿ ಮಾತು ಆರಂಭಿಸುತ್ತೀರಿ? ಇದು ಸರಿನಾ?

ಅವಳು : sorry.. ಓಕೆ ನಾ..

ಆಫ್‌ಲೈನ್..


ಆದರೆ ಅಂದು ಸಂಜೆಯೇ ಮತ್ತೆ ಇನ್ಬಾಕ್ಷಿಗೆ ಬಂದಳು.

ಅವಳು : ಹಾಯ್ ಬರಹಗಾರರೇ ಫ್ರೀ ಇದೀರಾ?

ಅವನು : ನೀವು ಬಂದ್ರೆ ಫ್ರೀ ಮಾಡಿಕೊಳ್ಳಲೇಬೇಕು. ನೀವೇ ಒಂದು ಕಥೆ ತರಹ ಒಗಟಾಗಿದ್ದೀರಿ. ಹೇಳಿ ಸಡನ್ ಆಗಿ ಮಾತು ನಿಲ್ಸಿದ್ರಿ. ಮಾತಾಡಿ.. ಹೇಳಿ.

ಅವಳು : ನನಗೆ ಆ ಮಹಿಳೆಯ ಪಾತ್ರ ನೋಡಿ‌ ಪಾಪ ಅನಿಸುತ್ತೆ. ಅವಳು ಮತ್ತು ಅವಳ ಸಪೋರ್ಟ್‌ಗೆ ಇರುವ ಆ ಪುರುಷನನ್ನು ರಾಜಾರೋಷವಾಗಿ ಓಡಾಡಿಕೊಂಡಿರುವಂತೆ ಯಾಕೆ ನೀವು ಬರೆಯಬಾರದು? ಗೆಳೆಯರಂತೆ, ಇಲ್ಲವೇ ಪ್ರೇಮಿಗಳಂತೆ ಇಲ್ಲವೆ ದಂಪತಿಗಳಂತೆ.‌

ಅವನು : ಹೇಗೆ ಸಾಧ್ಯ? ನಾನು ಕಥೆಯಲ್ಲಿ ಬೇಕಾದರೆ ಬರೆಯಬಹುದು. ಆದರೆ ಅಸಲಿ ಜಗತ್ತು ಹಾಗೆ ಇಲ್ಲ. ಒಬ್ಬ ಮಗಳಿರುವ ಒಂಟಿ ಮಹಿಳೆ ಪ್ರತಿ ಹೆಜ್ಜೆಯನ್ನು ಬಹಳ ಎಚ್ಚರವಾಗಿ ಇಡುತ್ತಾಳೆ. ಅವಳು ಊಟ ಮಾಡುತ್ತಾಳೊ ಇಲ್ಲವೊ ಗೊತ್ತಿಲ್ಲ ಅವಳ ಆಸೆಗಳನ್ನಂತೂ ಅವಳು ಖಂಡಿತ ನುಂಗುತ್ತಾಳೆ. ಮಗಳು ಇಲ್ಲದೆ ಇದ್ದರೆ ಅದು ಇನ್ನೊಂದು ಕಥೆ, ಇನ್ನೊಂದು ಬದುಕು..

ಅವಳು : ಒಂದು ಕೆಲಸ ಮಾಡಿ. ಮಗಳು ಇರದಂತೆ ಮಾಡಿ.

ಅವನು : ಅಂದ್ರೆ ಕಥೆಯಲ್ಲಿ ಮಗಳನ್ನು ಸಾಯಿಸಿ.. ಅವರಿಬ್ಬರನ್ನೂ ಒಂದು ಮಾಡಬೇಕಾ? ಕೊಲೆ ಮಾಡಬೇಕಾಗುತ್ತೆ ಅಷ್ಟೇ ನಾನು. ಒಬ್ಬರ ಬದುಕಿಗಾಗಿ ಇನ್ನೊಬ್ಬರನ್ನು ಸಾಯಿಸುವುದು ಬದುಕಲ್ಲಿ ಅಷ್ಟೇ ಅಲ್ಲ.. ಕಥೆಯಲ್ಲೂ ಸಾಧ್ಯವಿಲ್ಲ.

ಅವಳು : ಆ ಅಮ್ಮನ ಭಯಕ್ಕೆ, ಧಾವಂತಕ್ಕೆ, ಅವಳ ಆಸೆಗಳ ಕಡಿವಾಣಕ್ಕೆ ಮಗಳೇ ಕಾರಣವಾ?

ಅವನು : ಅವಳೂ ಕಾರಣ ಇರಬಹುದು..

ಅವಳು : ಹಾಗಾದರೆ ಅವಳನ್ನು ಏನು ಮಾಡುವುದು?

ಅವನು : ಯಾಕೆ ನಿಮಗೆ ಇಷ್ಟೊಂದು ಕುತೂಹಲ ಈ ಕಥೆಯ ಬಗ್ಗೆ?

ಅವಳು : ಏನಿಲ್ಲ.. ಹೀಗೆ. ನಾನೂ ಕೂಡ ಹೆಣ್ಣು ಅಲ್ವ ಸೋ. ನಮ್ಮ ಅಮ್ಮ ಆ ನಿಮ್ಮ ಕಥೆ ಸರಣಿಯನ್ನು ಮೆಚ್ಚಿಕೊಂಡಿದ್ದಾರೆ. ಅದನ್ನು ಓದುವಾಗ ಅವರ ಮುಖದಲ್ಲೊಂದು ಖುಷಿ ಕಾಣಿಸುತ್ತೆ. ಏನೊ ತೃಪ್ತಿ ಕಾಣಿಸುತ್ತೆ..

ಅವನು : ಹೌದಾ.. ನಿಮ್ಮ ಅಮ್ಮ ಏನು ಮಾಡಿಕೊಂಡಿದ್ದಾರೆ? ನಿಮ್ಮ ಅಪ್ಪ ಏನು ಕೆಲಸ ಮಾಡ್ತಾರೆ?

ಅವಳು : ಸ್ವಲ್ಪ ಕೆಲಸ ಇದೆ.. ಅಮೇಲೆ ನಿಮಗೆ ಟೆಕ್ಸ್ಟ್ ಮಾಡ್ಲಾ?

ಅವನು : ನಿಮ್ದು ಯಾವಾಗಲೂ ಇದೇ ಆಯ್ತಲ್ರೀ..
ಏನಾದ್ರೂ ಹೇಳೊ ಟೈಮಿನಲ್ಲಿ ಹೊರಟು ಹೋಗ್ತೀರಿ. ಓಕೆ ಓಕೆ ಬೈ.. ಟೆಕ್ ಕೇರ್

ಅವಳು : ಹ್ಞೂಂ..


ಮರುದಿನ ಬೆಳಗ್ಗೆಯೇ ಅವಳು ಆನ್ಲೈನ್‍ನಲ್ಲಿ ಅವನ ಇನ್ಬಾಕ್ಷಿನ ಬಾಗಿಲು ತಟ್ಟಿದಳು.

ಅವಳು : ಹಾಯ್ ಹೀರೊ

ಅವನು : ಏನ್ರೀ ಇದು ಹೀಗೆಲ್ಲಾ ಕರೀತಾ ಇದೀರಿ. ಏನ್ ಸಮಾಚಾರ?

ಅವಳು : ಅದರಲ್ಲಿ ಏನಿದೆ? ಹೀರೊ ತರಹ ಇದೀರಿ ಸೋ ಹೀರೊ ಅಂದೆ ಅಷ್ಟೇ.. ಸುಮ್ನೆ ಏನೇನೊ ಕಲ್ಪನೆ ಬೇಡ ಆಯ್ತಾ?

ಅವನು : ಓಕೆ ಓಕೆ ಕೂಲ್ ಡೌನ್.. ಹೇಳಿ ಹೇಳಿ ನಿಮ್ಮ ಕಥೆ. ಮುಂದುವರೆಸಿ..

ಅವಳು : ನೀವು ಅವತ್ತು ನಮ್ಮ ಅಮ್ಮ, ಅಪ್ಪನ ಬಗ್ಗೆ ಕೇಳಿದ್ರೆ. ನನಗೆ ಗಂಟಲು ತುಂಬಿ ಬಂತು..

ಅವನು : U mean?

ಅವಳು : ನಾನು ಚಿಕ್ಕವಳಿರುವಾಗ ನಮ್ಮ ಅಪ್ಪ ಅದೇನೊ ಆಗಿ ಸತ್ತು ಹೋದ್ರಂತೆ ಆಗ ಅಮ್ಮನಿಗೆ ಕೇವಲ 23 ವರ್ಷ. ಅಮ್ಮ ಅಂದಿನಿಂದ ಒಂಟಿ. ನನ್ನನ್ನು ಸಾಕಿದ್ದು ಅದೇ ಒಂಟಿತನದಲ್ಲಿ. ಅಪ್ಪ ಇಲ್ಲದ ಕಾರಣಕ್ಕೊ ಏನೊ ಅಮ್ಮ ಯಾವ ಗಂಡಸರೊಂದಿಗೆ ಮಾತೇ ಆಡುತ್ತಿರಲಿಲ್ಲ. ಅದು ಏನೇನೊ ಅರ್ಥ ಪಡೆದುಕೊಂಡು ಇನ್ನೇನೊ ಆಗಿ ಬಿಟ್ಟರೆ ಅಂತ. ನನಗೆ ಬೆಳೆಯುತ್ತಾ ಇದೆಲ್ಲವೂ ಗೊತ್ತಾಗುತ್ತಿತ್ತು. ಅಪ್ಪ ಮತ್ತು ಅಮ್ಮನ ಎರಡೂ ಪಾತ್ರಗಳನ್ನು ಅಮ್ಮ ಒಬ್ಬರೆ ಮಾಡ್ತಾ ಇದ್ರು.

ಅವನು : ಓಹ್..

ಅವಳು : ನಾನು ಈಗ ದೊಡ್ಡೊಳು ಆದೆ. ಅಮ್ಮನ ಪ್ರತಿ ಸಂಕಟಗಳ ಅರಿವು ನನಗೆ ಗೊತ್ತಿದೆ. ಅಮ್ಮನ ಬಾಲ್ಯದ ಗೆಳೆಯ ಒಬ್ಬ ಈಗ ಅಮ್ಮನಿಗೆ ಹತ್ತಿರವಾಗಿದ್ದಾರೆ. ತೆರೆಮರೆಯಲ್ಲಿ ನಿಂತು ಅಮ್ಮನ ಮೌನಕ್ಕೆ ಮಾತಾಗುತ್ತಿದ್ದಾರೆ. ಅಮ್ಮನಲ್ಲಿ ಈಗ ಹೊಸ ಸಂಭ್ರಮ ಕಾಣ್ತಾ ಇದೆ..

ಅವಳು : ವ್ಹಾವ್.. ನಾ ಬರೆದ ಕಥೆಯಂತೆಯೇ ಇದೆ.

ಅವನು : ಹೌದು. ಅಮ್ಮ ನಿಮ್ಮ ಕಥೆ ಸರಣಿಯನ್ನು ಆ ಕಾರಣಕ್ಕೆ ಖುಷಿಯಿಂದ ಓದ್ತಾರೆ. ಬಹುಶಃ ನಾನು ಇಲ್ಲ ಅಂದಿದ್ದರೆ ಅವರ ಬದುಕು ಅವರಿಗೆ ಮತ್ತೊಮ್ಮೆ ಸಿಗುತ್ತಿತ್ತು. ನನಗಾಗಿಯೇ ಅವರು ಎಲ್ಲವನ್ನೂ ತ್ಯಾಗ ಮಾಡ್ತಿದಾರೆ. ಅದನ್ನು ತಾಯಿ ಮಾಡಲೇಬೇಕಾದ ಕರ್ತವ್ಯವೇ ಆದರೂ.. ಅಮ್ಮನನ್ನು‌ ಖುಷಿಯಾಗಿಡೋದು ಮಗಳ ಕರ್ತವ್ಯವೂ ಹೌದು.

ಅವನು : ಹೌದು.. ನಿಮ್ಮ ಯೋಚನೆ ಸರಿ ಇದೆ. ಆದರೆ ನೀವು ಈಗ ಹೇಳಬೇಕು ಅಂತ ಉದ್ದೇಶಿಸಿರುವುದೇನು?

ಅವಳು : ನಿಮ್ಮ ಕಥೆಯಲ್ಲಿ ಬರುವ ಆ ಒಂಟಿ ತಾಯಿಗೆ ಮತ್ತು ಅವರ ಆ ಪರಿಚಯದ ಗೆಳೆಯರಿಗೆ ಮದುವೆ ಮಾಡಿಸಿ ಬಿಡಿ.. ಪ್ಲೀಸ್. ಅದನ್ನು ಅಮ್ಮ ಓದ್ತಾರೆ. ಅವರಲ್ಲಿ ಖಂಡಿತ ಏನಾದ್ರೂ ಬದಲಾವಣೆ ತರಬಹುದು.

ಅವನು : ಹ್ಹಹ್ಹಹ್ಹ.. ಸಾಧ್ಯವೇ? ಕಥೆಯಲ್ಲಿ ಮದುವೆ ಆಗಬಹುದು. ಆದರೆ‌ ನಿಜ ಜೀವನದಲ್ಲಿ ಕಷ್ಟ. ಕಥೆಯಲ್ಲಿ ಬೇಕಾದರೆ ಅವರ ಮಗಳಿಗೆ ಒಂದು ‌ಮದುವೆ ಮಾಡಿಸಿ ಅಮ್ಮನ ದಾರಿ ಸುಗುಮಗೊಳಿಸಬಹುದು ಅಷ್ಟೇ..

ಅವಳು : ಓಹ್ ಹೌದಲ್ವ? ಮಗಳ ಮದುವೆಗೆ ಹೆದರಿಕೊಂಡೆ ಅಮ್ಮ ಹೀಗೆ ಉಳಿದಿರಬಹುದು. ತಾಯಿಯೇ ಇನ್ನೊಂದು ಮದುವೆ ಆದರೆ ಮಗಳನ್ನು ಯಾರು ಮದುವೆ ಆಗ್ತಾರೆ ಅನ್ನುವ ಭಯದಲ್ಲಿ ಅವರು ಉಳಿದು ಹೋಗಿರಬಹುದು.

ಅವನು : ಯೆಸ್ ಅದೇ ಕಾರಣ. ನೀವು ಯಾರನ್ನಾದರೂ ಇಷ್ಟಪಟ್ಟಿದ್ರೆ ಅವರ ಬಳಿ ಈ ವಿಷಯ ಹೇಳಿ. ಅಮ್ಮನ ಮದುವೆ ಮಾಡಿಸಿ ನಂತರ ನೀವು ಮದುವೆ ಆಗಿ. ಅಮ್ಮನಿಗೆ ನೀವು ಮತ್ತು ನಿಮ್ಮ ಹುಡುಗ ಆ ಭರವಸೆ ಕೊಡಿ..

ಅವಳು : ಹೌದು ನಿಮ್ಮ ಮಾತು ಸರಿ.. ಆದರೆ

ಅವನು : ಆದರೆ ಏನು? ಹೇಳಿ ನಿಮ್ಮ ಹುಡುಗನ ಬಳಿ ನಾನು ಮಾತಾಡಲಾ?

ಅವಳು : ಇಲ್ಲ ರೀ ನನಗೆ ಹುಡುಗನೇ ಇಲ್ಲ..

ಅವನು : ಓಹ್ sorry..

ಅವಳು : ಬೇರೆ ದಾರಿ ಇರಬಹುದಾ? ಯೋಚಿಸುವೆ.. ಆದರೆ ನೀವು ಕಥೆಯಲ್ಲಿ ಮಾತ್ರ ನಾನು ಹೇಳಿದ ಬದಲಾವಣೆ ಮಾಡಲೇ ಬೇಕು ಪ್ಲೀಸ್..

ಅವನು : ಒಬ್ಬರಿಗೆ ಸಹಾಯ ಆಗುತ್ತೆ ನನ್ನ ಬರವಣಿಗೆ ಅಂದ್ರೆ ಅದು ನನ್ನ ಅದೃಷ್ಟ.. ಹಾಗೆಯೇ ಬರಿತೀನಿ..

ಅವಳು : ಥ್ಯಾಂಕ್ಯೂ.. ಆದರೆ ನಾನು ಮತ್ತೆ ಇನ್ಬಾಕ್ಷಿಗೆ ಬರುವ ಗ್ಯಾರಂಟಿ ಇಲ್ಲ. ಕಿರಿಕಿರಿಯಾಗಿದ್ರೆ sorry..

ಅವನು : ನೋ‌ ನೋ ಹಾಗೇನು‌ ಇಲ್ಲ. ಆದರೆ ನೀವು ಇಷ್ಟೊಂದು ಮಾತು ಬೆಳೆಸಿ ಏಕಾಏಕಿ ಹೊರಟು‌ ಹೋಗುವುದು ತರವಲ್ಲ.

ಸಡನ್ ಆಫ್‌ಲೈನ್..


ವಾರದ ಬಳಿಕ.. ಏಕಾಏಕಿ ಮೆಸೆಂಜರ್ ಇನ್ಬಾಕ್ಷಿನಲ್ಲಿ ಅವಳ ಹಾಜರಿ

ಅವಳು : ಹಾಯ್ ರೀ

ಅವನು : ನೀವು ಬರುತ್ತೀರಿ ಎಂಬುದು ಖಾತರಿ ಇತ್ತು

ಅವಳು : ಹೇಗೆ ಹೇಳ್ತೀರಿ?

ಅವನು : ಕೆಲವೊಂದನ್ನು ಹೇಳಲು ಆಗುವುದಿಲ್ಲ.‌ ಪದಗಳಿಗೆ ಸಿಗದೇ ಇರುವುದು ಬಹಳನೇ ಇದೆ ಈ ಜಗತ್ತಿನಲ್ಲಿ..

ಅವಳು : ಹೌದು.. ಯಾಕೊ ಗೊತ್ತಿಲ್ಲ ನಿಮ್ಮೊಂದಿಗೆ ಮಾತಾಡಬೇಕು ಅಂತ ಅನಿಸಿತು ಅದಕ್ಕೆ ಬಂದೆ. ತೊಂದರೆ ಇಲ್ಲ ತಾನೆ.

ಅವನು : ನೀವು ತೊಂದರೆ ಕೊಡಲಿ ಎಂದು ಕಾಯ್ತಾ ಇದ್ದೆ. ಅಂದ ಹಾಗೆ ನೀವು ಹೇಳಿದಂತೆ ಕಥೆ ಬರೀತಾ ಇದೀನಿ. ಮುಂದಿನ ಕಂತುಗಳು ನೀವು ಬಯಸಿದಂತೆ ಇರುತ್ತವೆ. ಆ ಹುಡುಗಿಗೆ ಒಬ್ಬ ಹುಡುಗನ ಪರಿಚಯವಾಗಿದೆ.

ಅವಳು : ಓಹ್.. ನೈಸ್ ಥ್ಯಾಂಕ್ಯೂ..

ಅವನು : ಆ ಹುಡುಗ ಆ ಹುಡುಗಿಯನ್ನು ಕರೆದುಕೊಂಡು ಹೋಗಿ ಅವರ ಅಮ್ಮನನ್ನು‌ ಒಪ್ಪಿಸುತ್ತಾನೆ. ಮಗಳ ಕೈ ಹಿಡಿಯುವ ಮಾತು ಕೊಡುತ್ತಾನೆ..

ಅವಳು : ಅವನು ಯಾರು ಆಗಿರಬಹುದು? ನಿಮ್ಮ ಈ ಮಾತುಗಳ ಅರ್ಥ ಏನು? ಏನಿದು? ಹಲೋ

ಅವನು : ಆ ಪರಿಚಯದ ಹುಡುಗ ನಾನೇ.. ಕಥೆಯ ಒಳಗೂ ಮತ್ತು ಕಥೆಯ ಹೊರಗೂ.. ನಿಮ್ಮ ಅನುಮತಿ ಇದ್ದರೆ..

ಅವಳು : ( typing ಅಂತ ತೋರಿಸುತ್ತಲೇ ಇದೆ …)

ಅವನು ಚಡಪಡಿಸುತ್ತಾ ಕಾಯುತ್ತಾ ಇದ್ದಾನೆ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: