
ಸದಾಶಿವ್ ಸೊರಟೂರು
ಕವಿಯ ಹಾಡನು
ಮತ್ತೆ ಮತ್ತೆ ಓದಿಕೊಂಡು…!
ಕೋಗಿಲೆಗೆ ಮಾವಿನ ಚಿಗುರಿನ ಒಂದೆಲೆಯನ್ನೂ ಕೋಡದೆ ಉಪವಾಸ ಕೆಡವಿ;
ಇಲ್ಲವೆ ಅದರ ಸಂಗಾತಿಯನ್ನೂ ದೂರವಿಟ್ಟು;
ಇಲ್ಲವೆ ತೀರಾ ಒಂಟಿಯಾಗಿ ಕೂಡಿ ಹಾಕಿ; ಇಲ್ಲವೆ ಯಾವುದೊ ಅಭಾವದಲ್ಲಿ ಬಳಲುವಂತೆ ಮಾಡಿ ಎಂದಾದರೂ ಅದರ ಹಾಡನ್ನು ಕೇಳಬೇಕು ಅನಿಸಿತ್ತೆ..
ಆ ಹಾಡಿನಲ್ಲಿ ಏನಿರಬಹುದು? ಯಾವ ತುಡಿತ ಇರಬಹುದು? ಯಾವ ನೋವು ಅಲೆ ಅಲೆಯಾಗಿ ಒಮ್ಮಬಹುದು ಕೇಳಬೇಕು ಅನಿಸುತ್ತೆ ನನಗೆ. ಕೋಗಿಲೆಯೆಂದರೆ ಬರೀ ಇಂಪು ಕೊಡುವ ಹಾಡು ಅಂದ್ಕೊಂಡ ನಮಗೆ ಅದರ ತಲ್ಲಣಗಳು ಅದರ ಕಂಠದಲ್ಲಿ ಹೇಗೆ ಹಾಡಾಗಬಹುದು ಎಂಬುದನ್ನು ಕೇಳಬೇಕು ಅನಿಸಿತ್ತು..
ಶೆಲ್ಲಿ ‘ಅತ್ಯಂತ ಮಧುರವಾದ ಹಾಡುಗಳು ಅಂತ ಅಂದ್ರೆ ಅವು ನೋವಿನ ಸಾಲುಗಳೇ ಆಗಿರುತ್ತಾವೆ’ ಅಂತಾನೆ..
ಜಗತ್ತು ‘ಪಾಡು’ ಅನ್ನು ಹಾಡುಗಳಲ್ಲಿ ಸುಖಿಸಿದಷ್ಟು ಬದುಕಲ್ಲಿ ಸುಖಿಸುವುದಿಲ್ಲ.. ನಾವೇ ಅನುಭವಿಸಲಾಗದ ಬದುಕು ನಮ್ಮ ನಮ್ಮ ಮುಂದೆಯೇ ಹಾಡಾಗಿ ಬಂದಾಗ ಕಣ್ಣೀರಾಗುತ್ತೇವೆ.. ಅದು ಹಾಡಿನ ಶಕ್ತಿಯೊಂದೆ ಅಲ್ಲ ಅದರ ಹಿಂದೆ ಇರುವ ಪಾಡಿನ ಶಕ್ತಿಯೂ ಹೌದು..

ಈ ಸಾಲುಗಳನ್ನು ಸುಮ್ಮನೆ ಓದಿ ನೋಡಿ
‘ಎಷ್ಟು ದಿನ ಒಳಗೇ ಕೂತಿರಲಿ
ಪಕ್ಕದ ಮನೆಯ ಮಗು ಮಾತಾಡಿಸುತ್ತಿಲ್ಲ;
ಒಂದೇ ಮೆಟ್ಟಿಲು ಬಹಳ ದೂರ..’
ಈ ಸಾಲುಗಳನ್ನು ಓದಿ ಪುಸ್ತಕವನ್ನು ಸುಮ್ಮನೆ ಪಕ್ಕಕ್ಕೆ ಎತ್ತಿಟ್ಟು.. ಒಂದಷ್ಟು ರೆಸ್ಟ್ ಬೇಕು ಅಂತ ನೀವು ಮೊಬೈಲ್ ಕೈಗೆತ್ತಿಕೊಳ್ಳುವುದಿಲ್ಲ..
ಎದೆಯೊಳಗೆ ಮುಳ್ಳೊಂದು ಸಿಕ್ಕಿಕೊಂಡಂತೆ ಕನಲುತ್ತೀರಿ
ನಿಮ್ಮದೆ ಬದುಕಿನಲ್ಲಿ ನೀವೆ ಎಡವಿದ ನೋವೊಂದು
ಕಾಲ ಬೆರಳಿಗೆ ಮಾಡಿದ ಗಾಯ ನೆನಪಾಗುತ್ತದೆ.. ಇನ್ನೂ ಉಳಿದ ಅದರ ಕಲೆ ನೆನಪಾಗುತ್ತದೆ..ಮಾಯಾದ ಗಾಯವೂ ಉಳಿದಿದ್ದರೆ ಅದು ಚುಟುಚುಟು ಅನ್ನುತ್ತದೆ..
ಅದು ಕಾವ್ಯದ ಗೆಲುವು..
ಕೋಗಿಲೆಯೊಂದು ಹಲವು ಸಂಕಟಗಳನ್ನು ನುಂಗಿಕೊಂಡು ಹಾಡಿದಾಗ ಹೊಮ್ಮುತ್ತೆ. ಒಂದು ನಿಟ್ಟುಸಿರಿನ ಹಾಡು. ಅಂತದ್ದೆ ನೂರೆಂಟು ನೋವು ಸಂಕಟವುಂಡು ಜೀವವೊಂದು ಹಾಡಿದ ಸಾಲುಗಳು
ಇಲ್ಲಿ ಕವಿತೆಗಳಾಗಿವೆ…
ಕವಿಗೆ ಇಲ್ಲಿ ಅದೇ ದುಗುಡವನ್ನು, ನೋವನ್ನು, ಸಂಕಟವನ್ನು ಪದೇ ಪದೇ ಹಾಡಿಕೊಳ್ಳದೆ ವಿಧಿಯಲ್ಲಿ
ಯಾಕೆಂದರೆ ಉಂಡುಟ್ಟ ಬದುಕು ಅದೇ..
ನಮ್ಮ ಹಾಡೇ, ನಮ್ಮ ಕವಿತೆಯೇ ನಮಗೊಂದು ಸಮಾಧಾನ ನೀಡುವ ಹೆಗಲು..
ಇದು ‘ಸಂತೇಬೆನ್ನೂರು ಫೈಜ್ನಟ್ರಾಜ್’ ಅವರ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಕವನ ಸಂಕಲನ ಓದಿದಾಗ ನನಗೆ ಗೊತ್ತಿಲ್ಲದೆ ನಾನೇ ಬರೆದುಕೊಂಡ ಸಾಲುಗಳು.
ಈ ಕೃತಿಗೆ 2021 ರ ಕವಿ ಗವಿಸಿದ್ದ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಬಂದಿದೆ. ಅರ್ಹ ಕವಿತೆಗಳಿಗೆ ಸಂದ ಅರ್ಹ ಪ್ರಶಸ್ತಿ ಎಂಬುದು ಮೊದಲ ಗುಕ್ಕಿಗೇ ಎಂತವರಿಗೂ ಅನಿಸಿಬಿಡುತ್ತದೆ.
ಇಲ್ಲಿನ ಕವಿತೆಗಳು ತಮ್ಮ ಪಾಡಿಗೆ ತಾವಿರುವುದಿಲ್ಲ ಅಲ್ಲದೆ ನಿಮ್ಮನ್ನು ಕೂಡ ನಿಮ್ಮ ಪಾಡಿಗೆ ಇರಲು ಬಿಡುವುದಿಲ್ಲ
ನೇರ ಸಂವಾದಕ್ಕಿಳಿಯುತ್ತವೆ. ನಿಮ್ಮ ಕಣ್ಣಿಗೆ ಕಾಣದನ್ನು, ನಿಮ್ಮ ಎದೆ ಟಪಾಲಿಗೆ ಹಾಕುವ ಜಾದು ಅವುಗಳಿಗಿದೆ.
ಮನುಷ್ಯನಾಗದೆ
ಅವನು ಕವಿಯಾಗುವುದಾದರೂ ಹೇಗೆ?
ಇಲ್ಲಿನ ಕವನಗಳಿಗೆ ಹೆಚ್ಚು ಹೊಂದುವ ಮಾತಿದು.
ಗಾಂಧಿಯನ್ನು ತನ್ನ ಬಾಲ್ಯದಿ ನೋಡಿದ ಅಪ್ಪ
ಅಪ್ಪನನ್ನು ನನ್ನ ಬಾಲ್ಯದಿಂದಲೂ
ನೋಡುವ ನಾನು, ಈಗ ಜುಬ್ಬಾದಲ್ಲಿ ಇಬ್ಬರನ್ನೂ ನೋಡುತ್ತೇನೆ.
ಈ ಮಾತು ಕವಿಯೊಳಗಿರಬಹುದಾದ ಮಾನವೀಯತೆಯ ಕುರುಹು..

ಈಗೀಗ ಊರು, ಹಳದಿ ಕಣ್ಣುಗಳ ಮಾರುವ ಜಾತ್ರೆ
ಒಲವ ಹಸಿರು ಕೊಳ್ಳುವ ಜನ ಬಲು ದೂರ
ಸಧ್ಯದ ಸಮಾಜಕ್ಕೆ ಹಿಡಿದ ಒಂದು ನಿಶ್ಚಳ ಕನ್ನಡಿ ಈ ಸಾಲುಗಳು.
ಮನುಷ್ಯರು ನಾವು
ಮನುಷ್ಯರಾಗೋದು
ಮತ್ತು ಮನುಷ್ಯರಂತೆ ಬದುಕೋದು
ಎಷ್ಟೊಂದು ಕಷ್ಟ..
ಮನುಷ್ಯರ ಕಣ್ಣುಗಳಲ್ಲಿ ಸತ್ತು ಹೋದ ಮನುಷ್ಯತ್ವದ ಕಳೇಬರ ಇರುವಾಗ
ಅಪ್ಪಟ ಮನುಷ್ಯತ್ವವನ್ನು ಎಲ್ಲಿ ಹುಡುಕುವುದು?
ತುಂಬಾ ತಾಕುವ ಸಾಲುಗಳಿವು.
ಮೇಷ್ಟ್ರಾಗಿರುವ ಫೈಜ್ನಟ್ರಾಜ್ ಮಕ್ಕಳಿಗೆ ಬದುಕಿನ ಪಾಠ ಹೇಳುತ್ತಾ
ಅವರ ಕಣ್ಣುಗಳನ್ನು ತೆರೆಸಲಿ ಎಂಬ ಆಶಯವೂ ನಮ್ಮದು.
ನೀವು ಪುಸ್ತಕದ ಮೊದಲು ಪುಟದಿಂದ ಕೊನೆಯ ಪುಟ ತಲುಪು ಹೊತ್ತಿಗೆ ನಿಮಗೇ ಗೊತ್ತಿಲ್ಲದೆ ನಿಮ್ಮಲ್ಲೊಂದು ನಿಟ್ಟುಸಿರು ಹುಟ್ಟುತ್ತದೆ. ನಿಮ್ಮೊಳಗೊಂದು ‘ಮಾನವೀಯತೆ’ ಜಾಗೃತವಾಗುತ್ತದೆ.
ಎದುರಿಗಿದ್ದವಂಗ
ಕಣ್ಣೀರ್ ತರಸ್ದಂಗ
ಎಲ್ಡೇ ಎಲ್ಡು ದಿನ
ಚಲೋತ್ನಾಗ ಬಾಳೋಣೇನು..?
ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡಷ್ಟು
ಬದುಕುವ ಹೊಸ ಹುಮ್ಮಸ್ಸು ನೀಡುತ್ತದೆ..
ಅದು ಕವಿಯ ಆಶಯ
ಅದು ಓದಗನದೂ ಆಗಲಿ ಎಂಬುದು ಸದಾಶಯ..
ಪುಸ್ತಕದ ಹೆಸರು : ಮತ್ತೆ ಮತ್ತೆ ಹೇಗೆ ಹಾಡಲಿ (ಕವನ ಸಂಕಲನ)
ಕವಿ : ಸಂತೆಬೆನ್ನೂರು ಫೈಜ್ನಟ್ರಾಜ್
ಪ್ರಕಾಶನ : ಅಕ್ಷರ ಮಂಟಪ ಬೆಂಗಳೂರು.
ಪುಟಗಳು : 112
0 ಪ್ರತಿಕ್ರಿಯೆಗಳು