ಸದಾನಂದ ಸುವರ್ಣ ಎಂದರೆ..

ಜಿ ಎನ್ ಉಪಾಧ್ಯ, ಮುಂಬೈ 

**

ರಂಗಭೂಮಿ ಹಾಗೂ ಚಲನಚಿತ್ರರಂಗದ ಸೃಜನಶೀಲ ಪ್ರತಿಭೆಗಳಲ್ಲಿ ಸದಾನಂದ ಸುವರ್ಣ ಅವರೂ ಒಬ್ಬರು. ನಾಟಕಕಾರ, ನಟ, ನಿರ್ದೇಶಕ, ರಂಗತಜ್ಞ. ರಂಗಶಿಕ್ಷಕ, ಪ್ರಕಾಶಕ, ಸಂಘಟಕ ಹೀಗೆ ಹತ್ತಾರು ನೆಲೆಗಳಿಂದ ಕನ್ನಡ ರಂಗಭೂಮಿಯೊಡನೆ ಘನಿಷ್ಠ ಸಂಬಂಧವನ್ನು ಅವರು ಬೆಸೆದು ಉಳಿಸಿಕೊಂಡು ಬಂದಿದ್ದರು. ರಂಗಭೂಮಿ ಅವರ ಬದುಕಿನ ಅವಿಭಾಜ್ಯ ಅಂಗ. ಬದುಕಿನ ಯಥಾರ್ಥ ದರ್ಶನ ಸಾಧ್ಯವಾಗುವುದು ರಂಗಭೂಮಿಯಲ್ಲಿ ಎಂಬ ದೃಢ ನಿಲುವು ಅವರದಾಗಿತ್ತು. ಸುವರ್ಣ ಅವರು ರಂಗಭೂಮಿಯಲ್ಲಿಯೇ ಬೆಳೆದವರು. ಅದನ್ನೇ ತಮ್ಮ ಆಸಕ್ತಿಯ ಮಾರ್ಗವನ್ನಾಗಿ ಆಯ್ದುಕೊಂಡವರು. ರಂಗಭೂಮಿಯ ಉತ್ಕಟ ಉಪಾಸಕರಾದ ಅವರ ಅನುಭವ ಬೆಳ್ಳಿತೆರೆಯಲ್ಲೂ ಮಿಂಚಿತು. ಸದಭಿರುಚಿಯ ಚಲನಚಿತ್ರ ಕ್ಷೇತ್ರದಲ್ಲಿಯೂ ಅವರು ಸೈ ಎನಿಸಿಕೊಂಡರು. ಸದಾನಂದ ಸುವರ್ಣ ಅವರಲ್ಲಿ ಎದ್ದುಕಾಣುವ ಗುಣವೆಂದರೆ ಪ್ರಯೋಗಶೀಲತೆ. ಅವರ ಇಡೀ ಬದುಕು ಪ್ರಯೋಗಗಳಿಂದ ಕೂಡಿತ್ತು. ಮುಂಬಯಿಯ ದೈನಂದಿನ ತಾಪತ್ರಯಗಳಲ್ಲಿ ಕಳೆದು ಹೋಗದೆ ಯಶಸ್ಸು ಬಂದಾಗ ಹಿಗ್ಗದೆ ಸಮಚಿತ್ತವನ್ನು ಕಾಯ್ದುಕೊಂಡು ಬಂದ ಸಂವೇದನಶೀಲ ಮನಸ್ಸು ಅವರದು. ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ, ಕನ್ನಡ ಪರಿಚಾರಿಕೆ ಹೀಗೆ ಬದುಕಿನ ಬೇರೆ ಬೇರೆ ಕ್ಷೇತ್ರಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸಿದ ಮಹಾನ್ ಚೇತನ ಅವರು.

ಸದಾನಂದರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯವರು. ೧೯೩೧ರ ಡಿಸೆಂಬ‌ರ್ ೨೪ರಂದು ಜನಿಸಿದರು. ಅವರಿಗೆ ಎಳವೆಯಿಂದಲೇ ನಾಟಕಗಳ ಗೀಳು ಅಂಟಿಕೊಂಡಿತು. ಚಿಕ್ಕಂದಿನಲ್ಲಿಯೇ ಹುಟ್ಟೂರು ತೊರೆದು ಮುಂಬಯಿಗೆ ಬಂದರು. ಮುಂಬಯಿಯ ಮೊಗವೀರ ರಾತ್ರಿ ಶಾಲೆ ಮುಂಬರುವ ಒಬ್ಬ ಸೃಜನಶೀಲ ಪ್ರತಿಭೆಗೆ ಪ್ರೋತ್ಸಾಹ ನೀಡಿತು. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ವಿದ್ಯಾರ್ಥಿ ದೆಸೆಯಲ್ಲಿಯೇ ಕುರುಡನ ಸಂಗೀತ ಎಂಬ ನಾಟಕವನ್ನು ಬರೆದು ನಿರ್ದೇಶಿಸಿ ಬದುಕಿನ ದಾರಿಯನ್ನು ಕಂಡುಕೊಂಡರು. ಹಿಂದಿ, ಗುಜರಾತಿ, ಮರಾಠಿ, ಇಂಗ್ಲಿಷ್ ನಾಟಕಗಳ ಆಳ-ಅಗಲಗಳ ಪರಿಚಯವನ್ನೂ ಮಾಡಿಕೊಂಡರು. ಮುಂಬಯಿಯ ಕನ್ನಡ ರಂಗಭೂಮಿಯನ್ನು ಗಟ್ಟಿಗೊಳಿಸಲು ಮುಂದಾದರು. ಗೆಳೆಯರ ಗುಂಪೊಂದನ್ನು ಸೇರಿಸಿ ‘ಉದಯ ಕಲಾನಿಕೇತನ’ ಎಂಬ ಹವ್ಯಾಸಿ ನಾಟಕ ಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಹತ್ತಾರು ನಾಟಕಗಳನ್ನು ಬರೆದರು. ಹೊಸ ಮುಖಗಳಿಗೆ ಬಣ್ಣ ಹಚ್ಚಿ ಅಭಿನಯ ಕಲಿಸಿ ರಂಗಮಂಚದ ಮೇಲೆ ತಂದರು. ಮುಂದೆ ಮುಂದೆ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಸುವರ್ಣಯುಗ ಸೃಷ್ಟಿಯಾಗಿ ಇತಿಹಾಸ ನಿರ್ಮಾಣ ಮಾಡಿದರು. 

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುರು ನಾರಾಯಣ ಪ್ರಶಸ್ತಿ. ಬಿ. ವಿ. ಕಾರಂತ ಪ್ರಶಸ್ತಿ ಅವರಿಗೆ ಸಂದ ಕೆಲವು ಮಾನ ಸಮ್ಮಾನಗಳು. ಕಾರಂತರ ಬದುಕು ಬರೆಹದ ಹಿನ್ನೆಲೆಯ ಹತ್ತು ಕಂತು ಚಿತ್ರ ನಿರ್ಮಾಣ ಅವರ ಬಹಳ ದೊಡ್ಡ ಸಾಧನೆ. ಕಾರಂತರ ಅಭಿಮಾನಿಯಾಗಿದ್ದ ಸುವರ್ಣ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಶಿವರಾಮ ಕಾರಂತ ದತ್ತಿನಿಧಿಯನ್ನು ಸ್ಥಾಪನೆ ಮಾಡಿ ದ್ದಲ್ಲದೆ ಅನೇಕ ವರ್ಷಗಳ ಕಾಲ ಕಾರಂತ ಉತ್ಸವವನ್ನು ಮುಂಬೈಯಲ್ಲಿ ಆಯೋಜಿಸಿ ಸೈ ಎನಿಸಿಕೊಂಡ ಅಪರೂಪದ ಮಾದರಿ ಸಾಧಕ. ಅವರದು ಸಾರ್ಥಕ ಬದುಕು. ತನು ಶುದ್ಧ ಮನ ಶುದ್ಧ ಭಾವ ಶುದ್ಧವಾಗಿ ಕನ್ನಡ ಕೈಂಕರ್ಯಗೈದ ಸದಾನಂದ ಸುವರ್ಣ ಅವರ ನಿಧನದಿಂದ ದೊಡ್ಡ ಶೂನ್ಯವೊಂದು ಆವರಿಸಿದಂತಾಗಿದೆ. ಅವರ ಒಡನಾಟ, ಮಾತುಕತೆಯ ಮೆಲುಕು, ನೆನಪು ಈ ಲೇಖನದಲ್ಲಿದೆ.

ನಾಟಕದಲ್ಲಿ ನಿಮಗೆ ಆಸಕ್ತಿ ಮೂಡಿದ್ದು ಹೇಗೆ? ನಿಮ್ಮ ಬಾಲ್ಯದ ದಿನಗಳು ಹೇಗಿದ್ದವು? ನಿಮ್ಮ ಮೇಲೆ ಯಾರು ಯಾರು ಪ್ರಭಾವ ಬೀರಿದರು ? ಈ ಕುರಿತು ಸುವರ್ಣ ಅವರ ಅಭಿಪ್ರಾಯ ಹೀಗಿತ್ತು,

ಆಗ ನನಗೆ ಹತ್ತು ವರ್ಷ ಪ್ರಾಯ. ಮುಲ್ಕಿ ಬೋರ್ಡ್ ಹೈಸ್ಕೂಲಿನ ಐದನೇ ಕ್ಲಾಸಿನಲ್ಲಿದ್ದೆ. ಶಾಲೆಯ ವಾರ್ಷಿಕೋತ್ಸವಕ್ಕೆ ಆ ವರ್ಷ ನಮ್ಮ ಕ್ಲಾಸಿನವರು ‘ರಾಜಸೂಯ ಯಾಗೆ’ ನಾಟಕ ಮಾಡುವುದೆಂದು ನಿರ್ಧರಿಸಿದೆವು. ನಾನದರಲ್ಲಿ ನಾರದನ ಪಾತ್ರ ಮಾಡಬೇಕಿತ್ತು. ನಾನು ಸುಮಾರಾಗಿ ಹಾಡುತ್ತಿದ್ದೆನಾದ್ದರಿಂದ ನನಗೆ ಆ ಪಾತ್ರ ಕೊಟ್ಟಿದ್ದರು. ಆದರೆ ನಾಟಕದ ರಿಹರ್ಸಲ್ ಆರಂಭವಾಗುವ ಮೊದಲೇ ನಾನು ನನ್ನ ತಂದೆಯವರ ಆದೇಶದಂತೆ ಮುಂಬಯಿಗೆ ಹೊರಟು ಬರಬೇಕಾಯಿತು. ಹಾಗಾಗಿ ನಾಟಕದಲ್ಲಿ ಪಾತ್ರವಹಿಸುವ ನನ್ನ ಮಹತ್ವಾಕಾಂಕ್ಷೆ ಕನಸಾಗಿಯೇ ಉಳಿಯಿತು. ಅದು ನನಸಾದುದು ನಾನು ಇಲ್ಲಿ ಮೊಗವೀರ ರಾತ್ರಿ ಶಾಲೆ ಸೇರಿ, ಒಂದೆರಡು ವರ್ಷಗಳಲ್ಲಿ ವಾರ್ಷಿಕೋತ್ಸವಕ್ಕೆ ಪ್ರಾಧ್ಯಾಪಕ ಬಿ.ಎಂ.ಕೋಡಿಕಲ್ ನಿರ್ದೇಶನದ ‘ಆತ್ಮ ಸಮರ್ಪಣೆ’ ನಾಟಕದಲ್ಲೊಂದು ಪಾತ್ರವಹಿಸಿದಾಗ. ಮುಂದೆ ಕೋಟೆಯೊಳಗೆ ಕಾಮಾ ಹಾಲ್‌ನಲ್ಲಿ ಹಳೇ ವಿದ್ಯಾರ್ಥಿಗಳ ವಾರ್ಷಿಕೋತ್ಸವಕ್ಕೆ ಮನರಂಜನೆಯ ಕಾರ್ಯಕ್ರಮವಾಗಿ ನಾನೇ “ಕುರುಡನ ಸಂಗೀತ’ ವೆಂಬ ನಾಟಕ ಬರೆದು ನಿರ್ದೇಶಿಸಿ ಮುಂಬಯಿ ರಂಗಭೂಮಿಯಲ್ಲಿ ನನ್ನ ಅಳಿಲು ಸೇವೆ ಆರಂಭಿಸಿದೆ. ಆ ಸಂದರ್ಭದಲ್ಲೆಲ್ಲ ನಾನು ನಾಟಕ ನೋಡುವ ಗೀಳು ಅಂಟಿಸಿಕೊಂಡಿದ್ದೆ. ಮುಂಬಯಿಯಲ್ಲಿ ಪ್ರದರ್ಶಿತವಾಗುತ್ತಿದ್ದ ಹಿಂದಿ, ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್ ನಾಟಕಗಳನ್ನೂ ನೋಡುತ್ತಿದ್ದೆ.

ಪೃಥ್ವಿರಾಜ್ ಕಪೂರ್ ನಿರ್ದೇಶನದ ಹಿಂದಿ ನಾಟಕಗಳು, ಆದಿ ಮರ್ಜಬಾನ್ ನಿರ್ದೇಶಿಸಿದ ಗುಜರಾತಿ ನಾಟಕಗಳು, ಎಲಿಕ್‌ ಪದಮ್ಸಿ ನಿರ್ದೇಶನದ ಇಂಗ್ಲಿಷ್ ನಾಟಕಗಳನ್ನು ತಪ್ಪದೆ ನೋಡುತ್ತಿದ್ದೆ . ನನ್ನ ಮೇಲೆ ಆಗ ತೀವ್ರ ಪ್ರಭಾವ ಬೀರಿದ ನಾಟಕಗಳು ಪೃಥ್ವಿರಾಜ್ ಕಪೂರ್ ನಿರ್ದೇಶನದ ಕಿಸಾನ್, ಗದ್ದಾರ್, ಪಠಾನ್, ದೀವಾರ್, ಪೈಸಾ ಮುಂತಾದ ಹಿಂದಿ ನಾಟಕಗಳು. ಪ್ರತಿ ಆದಿತ್ಯವಾರ ಬೆಳಗ್ಗೆ ರಾಯಲ್ ಒಪೆರಾ ಹೌಸ್‌ನಲ್ಲಿ ಪ್ರದರ್ಶಿತವಾಗುತ್ತಿದ್ದ (ಐವತ್ತರ ದಶಕ) ಈ ನಾಟಕಗಳು ಅತ್ಯಂತ ಪ್ರಭಾವಶಾಲೀ ರಂಗಪ್ರಯೋಗಗಳು. ಪ್ರತಿಯೊಂದು ನಾಟಕವೂ ವಾಸ್ತವವಾದಿ ರಂಗ ಪ್ರಯೋಗದ ಶ್ರೇಷ್ಠ ಮಾದರಿ. ಪ್ರತಿಯೊಂದು ನಾಟಕವನ್ನೂ ಕನಿಷ್ಠವೆಂದರೆ ಆರು ತಿಂಗಳು ರಿಹರ್ಸಲ್ ನಡೆಸಿ ಪ್ರದರ್ಶಿಸಲು ಯೋಗ್ಯವೆಂದು ಕಂಡುಬಂದಾಗ ಪ್ರದರ್ಶನ ಏರ್ಪಡಿಸುತ್ತಿದ್ದರು. ಕೆಲವೊಂದು ನಾಟಕಗಳನ್ನು ವರ್ಷಗಟ್ಟಲೆ ಅಭ್ಯಾಸ ಮಾಡಿದ್ದೂ ಇದೆಯಂತೆ. ಹಾಗಾಗಿ ಅವರ ನಾಟಕಗಳಲ್ಲಿ ಎಲ್ಲ ಅಂಗಗಳೂ ಪರಿಪೂರ್ಣವಾಗಿದ್ದು, ಆ ರಂಗ ಪ್ರಯೋಗಗಳು ಒಂದು ಮರೆಯಲಾಗದ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದ್ದವು. ಇವತ್ತಿಗೂ ಕೆಲವು ಸನ್ನಿವೇಶಗಳನ್ನು ಸ್ಮರಿಸುವಾಗ ರೋಮಾಂಚನವಾಗುತ್ತದೆ. ರಂಗಭೂಮಿಗೆ ಪೃಥ್ವಿರಾಜರ ಕೊಡುಗೆ ಅನುಪಮ. ಪ್ರತಿ ನಾಟಕದಲ್ಲಿ ಅವರದೊಂದು ಭೂಮಿಕೆಯಿರುತ್ತಿತ್ತು. ಅದನ್ನವರು ಎಷ್ಟು ಚೆನ್ನಾಗಿ ನಿರ್ವಹಿಸುತ್ತಿದ್ದರೆಂದರೆ ಇನ್ನೊಬ್ಬನಿಗೆ ಆ ರೀತಿ ಮಾಡಲು ಸಾಧ್ಯವೇ ಇಲ್ಲ. ಅವರ ಅಭಿನಯ, ಮಾತುಗಾರಿಕೆ ಎಲ್ಲ ಅಷ್ಟು ಪರಿಣಾಮಕಾರಿ. ಎಂತಲೇ ಈಗ ಅವರ ನಾಟಕಗಳನ್ನು ಯಾರೂ ಪ್ರದರ್ಶಿಸುವ ಸಾಹಸ ಮಾಡುವುದಿಲ್ಲ.

ಈ ನಾಟಕಗಳನ್ನೆಲ್ಲ ನೋಡುತ್ತ ಒಂದು ರೀತಿಯಲ್ಲಿ ನಾನು ರಂಗ ಶಿಕ್ಷಣವನ್ನು  ಪಡೆದೆ ನೆನ್ನಬಹುದು. ಈ ವಿವಿಧ ಭಾಷೆಯ ನಾಟಕಗಳ ಪ್ರಭಾವ ನನ್ನಲ್ಲಿ ಎಷ್ಟಾಯಿತೆಂದರೆ ನಾನು ಕೆಲವು ಗೆಳೆಯರ ಜತೆಗೂಡಿ ‘ಉದಯ ಕಲಾನಿಕೇತನ’ ಎಂಬ ಹವ್ಯಾಸಿ ನಾಟಕ ಸಂಸ್ಥೆಯನ್ನು ಹುಟ್ಟುಹಾಕಲು ಕಾರಣವಾಯಿತು. ನಾಟಕದಲ್ಲಿ ಆಸಕ್ತಿ ಇರುವ ಆದರೆ ನಾಟಕದ ಬಗ್ಗೆ ಏನೂ ಗೊತ್ತಿರದ ಗೆಳೆಯರ ಜತೆ ನಾನೇ ನಾಟಕಗಳನ್ನು ಬರೆದು ಪ್ರಯೋಗಿಸತೊಡಗಿದೆ. ಕುರುಡನ ಸಂಗೀತ, ಅಭಾಗಿನಿ, ವಿಷಮ ಘಳಿಗೆ ಮುಂತಾದವು ಆಕಾಲದಲ್ಲಿ ಬರೆದ ನಾಟಕಗಳು, ಅದರ ಜತೆ ಶಾಲಾ ವಾರ್ಷಿಕೋತ್ಸವಗಳಿಗೆ ಎ.ಎಸ್.ಮೂರ್ತಿ, ಕೆ.ಗುಂಡಣ್ಣ ಮುಂತಾದವರ ನಗೆ ನಾಟಕಗಳನ್ನು ನಿಕೇತನದ ಕಲಾವಿದರಿಂದ ಚುರುಕಾದ ಪ್ರದರ್ಶನಗಳಿಂದ ಪ್ರಯೋಗಿಸಿದ್ದನ್ನು ಜನ ಮೆಚ್ಚಿದರು. ಆಮೇಲೆ ಸುಮಾರು ಹತ್ತು ವರ್ಷ ವಿವಿಧ ಗಂಭೀರ ನಾಟಕಗಳ ಪ್ರಯೋಗಗಳಿಗೆ ಪ್ರಯತ್ನಿಸಿದೆ. ಅದರಲ್ಲಿ ಎಂ.ಆರ್.ಶ್ರೀ ಅವರ ‘ನಾಗರಿಕೆ (ಸರಳ ರಗಳೆಯ ನಾಟಕ). ‘ರಜಪೂತ ಪವಾಡ’ (ಮೇವಾಡದ ಪತನವನ್ನಾಧರಿಸಿ), ‘ಕುಲಗೌರವ, (ಶರಶ್ಚಂದ್ರರ ‘ಚಂದ್ರನಾಥ’ ಕಾದಂಬರಿ ಆಧರಿಸಿ), ‘ರೂಪದರ್ಶನ’ (ನಾನೇ ಬರೆದ ದುರಂತ ನಾಟಕ), ‘ಭಗ್ನ ಮಂದಿರ’ (ನಾನೇ ವಿರಚಿಸಿದ ಮನೋವಿಶ್ಲೇಷಣೆಯ ನಾಟಕ) ಮುಂತಾದವು ಮುಖ್ಯವಾದವು ಮತ್ತು ಅದರ ಮರು ಪ್ರದರ್ಶನಗಳನ್ನು ಬೇರೆ ಬೇರೆ ಶೈಕ್ಷಣಿಕ ಸಂಸ್ಥೆಗಳ ನಿಧಿ ಸಂಗ್ರಹಕ್ಕಾಗಿ ಪ್ರದರ್ಶಿಸಿದ್ದಿದೆ.

ಹೀಗೆ ಹತ್ತು ವರ್ಷ ಅನೇಕ ಪ್ರಯೋಗಗಳನ್ನು ಮಾಡುತ್ತ ಯುವ ಕಲಾವಿದರನ್ನು ಬೆಳಕಿಗೆ ತರುವ ಕಾರ್ಯದಲ್ಲಿ ಉದಯ ಕಲಾನಿಕೇತನ ಯಶಸ್ವಿಯಾಗಿತ್ತು. ಈ ಮಧ್ಯೆ ನಾಟ್ಯ ಅಕಾಡೆಮಿಯ ಒಂದು ಜಾಹೀರಾತು ನನ್ನನ್ನಾಕರ್ಷಿಸಿತು. ಒಂದು ವರ್ಷದ “Theatre Training Diploma Course‘ಗೆ ಅರ್ಜಿ ಆಹ್ವಾನಿಸಿದ್ದರು. ನನ್ನ ಸಮಕಾಲೀನ ನಿರ್ದೇಶಕರೊಬ್ಬರೊಡನೆ ನಾವಿಬ್ಬರೂ ಅಕಾಡೆಮಿ ಸೇರಿ ಒಂದು ವರ್ಷದ ರಂಗಶಿಕ್ಷಣ ಪಡೆಯೋಣ, ಮುಂದೆ ಕನ್ನಡ ರಂಗಭೂಮಿಗೆ ನಾವು ಹೊಸ ರೀತಿಯ ಪ್ರಯೋಗಗಳನ್ನು ಮಾಡಲು ಶಕ್ತರಾಗುತ್ತೇವೆ ಎಂದಾಗ ಅವರ ಪ್ರತಿಕ್ರಿಯೆ ಕೇಳಿ ತಣ್ಣಗಾದೆ. “ನಾವು ಇಷ್ಟು ವರ್ಷಗಳಿಂದ ನಾಟಕ ಆಡ್ತಾ ಇದ್ದೇವೆ. ಇನ್ನು ಅಲ್ಲಿ ಹೋಗಿ ಆ ಹೊಸಬರೊಡನೆ ಕೂತು ಏನು ಕಲಿಯೋದಿದೆ? ನಾವು ಬೇಕಾದರೆ ಅವರಿಗೆ ಕಲಿಸೋಣ,” ಎಂದರು. ನಾನು ಆ ವರ್ಷ ಸುಮ್ಮನಿದ್ದು ಮುಂದಿನ ವರ್ಷ ಒಬ್ಬನೇ ಹೋಗಿ ಅಕಾಡೆಮಿ ಸೇರಿದೆ. ಅಲ್ಲಿ ಹದಿನೆಂಟು ಮಂದಿ ಆಯ್ಕೆಯಾದ ಬೇರೆ ಬೇರೆ ಭಾಷೆಯ ರಂಗ ಕರ್ಮಿಗಳಲ್ಲಿ ನಾನೊಬ್ಬನೇ ಕನ್ನಡಿಗ.

ಒಂದು ವರ್ಷದ ನಾಟ್ಯ ಅಕಾಡೆಮಿಯ ಶಿಕ್ಷಣ ಮತ್ತು ಅಲ್ಲಿನ ವಾಚನಾಲಯದಿಂದ ಪಡೆದು ಓದಿದ ರಂಗಭೂಮಿಯ ಕುರಿತಾದ ಹಲವು ಗ್ರಂಥಗಳು ನನ್ನಲ್ಲಿ ಅಗಾಧ ಪರಿಣಾಮವನ್ನುಂಟುಮಾಡಿದವು. ನಾನು ಹತ್ತು ವರ್ಷ ನಾಟಕವಾಡಿಸುತ್ತಿದ್ದರೂ ರಂಗಭೂಮಿ ಬಗ್ಗೆ ಏನೇನೂ ತಿಳಿದಿರಲಿಲ್ಲ ಎಂಬ ಮನವರಿಕೆಯ ಜತೆ ನನ್ನಲ್ಲಿದ್ದ ‘ನಾನೊಬ್ಬ ನಿರ್ದೇಶಕ’ ಎನ್ನುವ ಅಮಲು ಇಳಿದು ಹೋಯಿತು. ಆಮೇಲೆ ನಾನು ಕನ್ನಡ ಕಲಾ ಕೇಂದ್ರದ ಆಶ್ರಯದಲ್ಲಿ ಪ್ರಯೋಗಿಸಿದ ನಾಟಕಗಳೆಲ್ಲ ಶಿಸ್ತುಬದ್ಧವಾಗಿ ನಾಟ್ಯ ಶಿಕ್ಷಣದ ಹಿನ್ನೆಲೆಯಲ್ಲಿ ತುಂಬ ಶ್ರಮವಹಿಸಿ ಸಿದ್ದಪಡಿಸಿದ ರಂಗ ಪ್ರಯೋಗಗಳಾದರೂ ಸಂಪೂರ್ಣ ತೃಪ್ತಿ ನೀಡದ ಪ್ರಯೋಗಗಳು. ಒಂದಲ್ಲೊಂದು ಕಾರಣಕ್ಕೆ ತಿಳಿದಿರುವುದನ್ನೆಲ್ಲ ಸಮರ್ಪಕವಾಗಿ ಪ್ರಯೋಗದಲ್ಲಿ ಅಳವಡಿಸಲಾಗದೆ ಉಳಿಯುವ ಅತೃಪ್ತಿ ಅದಕ್ಕೆ ಕಾರಣ. ನಟ-ನಟಿಯರ ಅಭಿನಯದಲ್ಲಿ ಕೊರತೆ ಇರಬಹುದು, ತಾಂತ್ರಿಕತೆ ಅಥವಾ ಅಭ್ಯಾಸದ ಕೊರತೆ ಇರಬಹುದು. ಇನ್ನೂ ಏನೇನೋ ಕಾರಣಗಳಿಂದ ಒಂದು ರಂಗಕೃತಿಯನ್ನು ಮನೋಪಟಲದಲ್ಲಿ ಚಿತ್ರಿಸಿದ್ದರ ೫೦% ಕೂಡಾ ಪ್ರದರ್ಶನದಲ್ಲಿ ಮಾಡಲಾಗಲಿಲ್ಲ ಎಂಬ ಅಸಮಾಧಾನ. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತರೂ ಆತ್ಮಸಂತೋಷ ಇರುವುದಿಲ್ಲ. ದೊರೆ ಈಡಿಪಸ್ (ಪಿ. ಲಂಕೇಶ್), ಕದಡಿದ ನೀರು (ಜಿ. ಬಿ. ಜೋಶಿ), ಧರ್ಮಚಕ್ರ (ಅಶೋಕನ ಕಳಿಂಗ ಯುದ್ಧದ ಪರಿಣಾಮದ ನಾಟಕ – ಸ್ವತಃ ರೂಪಾಂತರಿಸಿದ್ದು), ಪ್ರಜಾಪ್ರಭುತ್ವ, ಲೊಳಲೊಟ್ಟೆ (ಶ್ರೀರಂಗರ ನಾಟಕ) – ಇವು ಕೆಲವು ಉದಾಹರಣೆಗಳು ನಾಟಕ ರಂಗದಲ್ಲಿ ನನಗೆ ಪ್ರಭಾವ ಬೀರಿದವರು ನಿಶ್ಚಯವಾಗಿಯೂ ಪೃಥ್ವಿ ರಾಜ್ ಕಪೂರ್ ಮತ್ತು ನಾಟ್ಯ ಅಕಾಡೆಮಿಯ ಒಂದು ವರ್ಷದ ರಂಗಶಿಕ್ಷಣ.

ಮುಂಬಯಿ ನಿಮ್ಮ ಸೃಜನಶೀಲ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆಯೆ? ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು.

ಖಂಡಿತ. ಮುಂಬಯಿ ಒಂದು ವಿಚಿತ್ರ ನಗರ. ಐದು ದಶಕಗಳಿಂದಲೂ ನಾನೀ ನಗರವಾಸಿಯಾಗಿ ಇಲ್ಲಿನ ಆಗುಹೋಗುಗಳನ್ನು ನೋಡುತ್ತಲಿದ್ದೇನೆ. ಸೃಷ್ಟಿಶೀಲ ಬುದ್ದಿ, ಮನಸ್ಸು ಇರುವವರಿಗೆ ಸೃಜನಶೀಲ ಚಟುವಟಿಕೆಗಳನ್ನು ಮಾಡಲು ಪ್ರೇರಣೆ ಇಲ್ಲಿ ದೊರಕುವಷ್ಟು ಬೇರೆಲ್ಲೂ ಸಿಗಲಾರದು. ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ನಾನು ಸೃಜನಶೀಲ ಕೃತಿಗಳ ನಿರ್ಮಾಣಕ್ಕೆ ಪ್ರಯತ್ನಿಸಲು ಪ್ರೇರಣೆಯೇ ಈ ಮುಂಬಯಿ ನಗರ. ಇಲ್ಲಿ ವಿವಿಧ ಭಾಷೆಗಳ ರಂಗ ಪ್ರಯೋಗಗಳ ವೀಕ್ಷಣೆಯೇ ನನ್ನ ಕನ್ನಡ ಪ್ರಯೋಗಗಳಿಗೆ ಪ್ರೇರಣೆಯಾಯಿತು. ಆರಂಭದಲ್ಲಿ ನಾನು ಬರೆದ ನಾಟಕಗಳಾದ ಕುರುಡನ ಸಂಗೀತ, ಅಭಾಗಿನಿ, ವಿಷಮ ಘಳಿಗೆ, ಕಣ್ಣು ತೆರೆಯಿತು, ಕದ್ದವನೆ ಕಳ್ಳ ಮುಂತಾದವು ಮುಂಬಯಿ ಜೀವನ ನನಗೆ ಒದಗಿಸಿದ ಪ್ರೇರಣೆಯ ಪ್ರತೀಕ. ಇಲ್ಲಿ ಕಂಡ ಸದಭಿರುಚಿಯ ಚಿತ್ರಗಳೇ ಮುಖ್ಯವಾಗಿ ದಾದರ್‌ನಲ್ಲಿ ಚಿತ್ರಾ ಮತ್ತು ವರ್ಲಿಯ ಲೋಟಸ್ ಚಿತ್ರ ಮಂದಿರಗಳಲ್ಲಿ ನಾನು ನೋಡಿದ ಸತ್ಯಜಿತ್‌ ರೇ ಅವರ ಬಂಗಾಲಿ ಚಿತ್ರಗಳೇ ಘಟಶ್ರಾದ್ದದಂತಹ ಚಿತ್ರ ನಿರ್ಮಾಣಕ್ಕೆ ಪ್ರೇರಕವಾಯಿತು.

ಪ್ರಶಸ್ತಿ ವಿಜೇತ ಪ್ರಾದೇಶಿಕ ಚಿತ್ರಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಸದಭಿರುಚಿಯ ಚಿತ್ರಗಳ ಸೆಳೆಯುವ ಪ್ರಯತ್ನವಾಗಿ ದೃಷ್ಟಿ  ಫಿಲ್ಮ್ ಸೊಸೈಟಿಯನ್ನು ಗೆಳೆಯರ ಜೊತೆ ಸ್ಥಾಪಿಸಿ ಆರು ವರ್ಷ ಆ ದಿಶೆಯಲ್ಲಿ ದುಡಿಯಲು ನನಗೆ ಪ್ರೇರಣೆ ದೊರೆತುದು ಈ ಮುಂಬಯಿ ನಗರದಲ್ಲಿ. ಪ್ರಾಯಶಃ ಆ ಪ್ರೇರಣೆಗಳೇ ಇಷ್ಟು ದೀರ್ಘಕಾಲ ನಾನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಲು ಕಾರಣವೆನ್ನಬಹುದು. ದಿನ ಕಳೆದಂತೆ, ವಯಸ್ಸಾದಂತೆ ಈ ಮುಂಬಯಿಯಲ್ಲಿ ಜೀವನ ಬಹಳ ತ್ರಾಸದಾಯಕವಾಗಿ ಕಂಡುಬಂದರೂ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ. ಈ ಮುಂಬಯಿಯನ್ನು ಬಿಟ್ಟು ಹೋಗುವುದರ ಜತೆ ಸೃಜನಶೀಲತೆಯನ್ನೂ ಕಳೆದುಕೊಳ್ಳಬೇಕಾಗಿ ಬರಬಹುದೇನೋ ಎಂಬ ಭಯ. ಮಂಗಳೂರಲ್ಲಿ ಸಹ ನಾನು ಮತ್ತೆ ಮತ್ತೆ ಮುಂಬೈಯನ್ನು ನೆನೆಯುವುದು ನಿತ್ಯ.

ರಂಗಭೂಮಿ ಅಥವಾ ಸಿನೇಮಾ ಇವುಗಳಲ್ಲಿ ಯಾವುದು ನಿಮಗೆ ತೃಪ್ತಿ ನೀಡಿದ ಕ್ಷೇತ್ರ?

ಎರಡೂ ನನಗೆ ಪ್ರಿಯವಾದ ಮಾಧ್ಯಮಗಳು. ಆದರೆ ನನ್ನ ಅಧಿಕ ಒಲವು ‘ರಂಗಭೂಮಿಗೆ, ಕಾರಣ ಸಿನೇಮಾ ನನಗೆ ಪ್ರಶಸ್ತಿಗಳನ್ನು, ಜನಮನ್ನಣೆಯನ್ನು ನೀಡಿದೆ. ಆದರೆ ರಂಗಭೂಮಿ ಅವೆಲ್ಲವುಗಳನ್ನು ಮೀರಿದ ಆನಂದವನ್ನು ನನಗೆ ಒದಗಿಸಿದೆ. ಅದೆಂದರೆ ಸಹೃದಯರಾದ ಪ್ರೇಕ್ಷಕರೆದುರು ರಂಗಭೂಮಿಯಲ್ಲಿ ತಲ್ಲೀನತೆಯಿಂದ ತನ್ಮಯವಾಗಿ ಅಭಿನಯಿಸಿದಾಗ ಸಂವಹನಕ್ರಿಯೆ ಯಶಸ್ವಿಯಾಗಿ ಪ್ರೇಕ್ಷಕರ ಜೀವಂತ ಪ್ರತಿಕ್ರಿಯೆಯಿಂದ ತತ್‌ಕ್ಷಣದಲ್ಲಿ ದೊರಕುವ ಆತ್ಮಾನಂದ. ಆ ಪ್ರತಿಕ್ರಿಯೆ ತಲ್ಲೀನವಾಗಿ ವೀಕ್ಷಿಸುವಾಗಿನ ಗಾಢ ಮೌನವಿರಬಹುದು, ಉದ್ಧಾರವಿರಬಹುದು ಅಥವಾ ಕಿವಿಗಡಚಿಕ್ಕುವ ಸಂತೋಷ ಅಥವಾ ಕರತಾಡನವಿರಬಹುದು. ದುಃಖದ ಅಂತಹ ಅನುಭವವನ್ನು ಕಲಾವಿದ ರಂಗಭೂಮಿಯಲ್ಲಿ ಮಾತ್ರ ಪಡೆಯಲು ಸಾಧ್ಯ. ಅದನ್ನುಮಾತಲ್ಲಿ ವಿವರಿಸುವುದು ಕಷ್ಟ.

ಸದಾನಂದ ಸುವರ್ಣ ಅವರ ಸಿನಿಮಾ ರಂಗದ ಸಿಹಿ ಕಹಿ ಅನುಭವಗಳು.

ಅ) ಸಿನಿಮಾ ರಂಗ ಪ್ರವೇಶಕ್ಕೇ ಆದ ಒಂದು ಕಹಿ ಅನುಭವ. 

‘ಗುಡ್ಡದ ಭೂತ’ ನಾನು ಬರೆದು ನಿರ್ದೇಶಿಸಿದ ಒಂದು ಜನಪ್ರಿಯ ತುಳು ನಾಟಕ. ಮುಂಬಯಿ, ದಕ್ಷಿಣ ಕನ್ನಡ, ಬೆಂಗಳೂರು, ಪುಣೆ ಮುಂತಾದ ಕಡೆ ಒಟ್ಟು 30 ಪ್ರಯೋಗಗಳು ನಡೆದಿವೆ. ಈ ಯಶಸ್ಸಿನಿಂದ ಉತ್ಸಾಹಭರಿತರಾದ ಕಲಾವಿದರು ಇದನ್ನಾಧರಿಸಿ ಒಂದು ಒಳ್ಳೆಯ ಸಸ್ಪೆನ್ಸ್ ಫಿಲ್ಮ್ ಮಾಡೋಣವೆಂದು ಹತ್ತು ಮಂದಿ ಹತ್ತು ಸಾವಿರ ತಲಾ ಬಂಡವಾಳ ಹೂಡಿ ಒಂದು ಲಕ್ಷ ಒಟ್ಟಾಯಿತು. ಉಳಿದ ಹಣ ಬ್ಯಾಂಕಿನಿಂದ ಸಾಲ ಪಡೆಯುವುದೆಂದಾಯಿತು. ಚಲನಚಿತ್ರ ಮಾಧ್ಯಮ ನಮಗೆ ಹೊಸತಾದ್ದರಿಂದ ಅದರ ಮಾಹಿತಿ ಇರುವ ತಜ್ಞರೊಬ್ಬರನ್ನು ತಾಂತ್ರಿಕ ನಿರ್ದೇಶಕರಾಗಿ ನಮ್ಮ ಯೋಜನೆಗೆ ತೆಗೆದುಕೊಳ್ಳುವುದೆಂದು ನಿರ್ಧರಿಸಿ ಹುಡುಕಾಟ ನಡೆಸಿದೆವು. ನಮ್ಮ ದುರದೃಷ್ಟಕ್ಕೆ ದೊರೆತ ತಾಂತ್ರಿಕ ನಿರ್ದೇಶಕ ಶ್ರೀ. ಪ್ರಭು ಎಂಬವರು, ಆರಂಭದಲ್ಲೇ ನಮ್ಮನ್ನು ದಿಕ್ಕು ತಪ್ಪಿಸಿದರು. ಒಂದು ಲಕ್ಷದ ಬಂಡವಾಳವಿದೆ. ಮತ್ತೆ ಮೂವತ್ತು-ನಲ್ವತ್ತು ಸಾವಿರವಾದರೂ ಬೇಕು ಚಿತ್ರ ಮುಗಿಸಲಿಕ್ಕೆ. ಹಾಗಾಗಿ ಸಾಲ ಮಾಡುವ ಬದಲು ಒಂದು ತಮಿಳು ಫಿಲ್ಡ್ ಇಪ್ಪತ್ತು ಮೂವತ್ತು ಸಾವಿರಕ್ಕೆ ಪಡೆದು ಎಪ್ಪತ್ತು ಸಾವಿರ ಡಬ್ಬಿಂಗಿಗೆ ಖರ್ಚು ಮಾಡಿ ಹಿಂದಿಗೆ ಪರಿವರ್ತಿಸಿದರೆ ಎರಡು ಮೂರು ಲಕ್ಷ ಸಂಪಾದಿಸಬಹುದು. ‘ಗುಡ್ಡದ ಭೂತ’ ಚಿತ್ರಕ್ಕೆ ಸಾಲ ಪಡೆಯುವ ಅವಶ್ಯಕತೆಯೇ ಇಲ್ಲ ಎಂದು expert advice ಕೊಟ್ಟು ಬಿಟ್ಟು ನಮ್ಮನ್ನು ಹೊಂಡಕ್ಕೆ ಇಳಿಸಿದರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ಮುಖ್ಯ ಭೂಮಿಕೆಯಲ್ಲಿರುವ ತಮಿಳು ಚಿತ್ರದ ಹಿಂದಿ ಡಬ್ಬಿಂಗ್ ರೈಟ್ ಗೆ ೩೦ ಸಾವಿರ ಕೊಟ್ಟು ಕೊಂಡುಕೊಂಡೆವು. ಡಬ್ಬಿಂಗ್ ಆರಂಭವಾಯಿತು. ತಾಂತ್ರಿಕ ನಿರ್ದೇಶಕ ಪ್ರಭು ಡಬ್ಬಿಂಗ್ ಮಾಡುತ್ತ ೭೦ ಸಾವಿರ ಕರಗಿಸಿದರೂ ಡಬ್ಬಿಂಗ್ ಅರ್ಧದಷ್ಟೂ ಮುಗಿಯಲಿಲ್ಲ. ೪೦ ಸಾವಿರ ಬ್ಯಾಂಕಿನಿಂದ ಸಾಲ ಪಡೆದು ಬಹಳ ಕಷ್ಟದಲ್ಲಿ ಡಬ್ಬಿಂಗ್ ಮುಗಿಸಿ ಬೇಗನೆ ಮಾರಿಬಿಡೋಣವೆಂದು ವಿತರಕರಿಗೆ ತೋರಿಸಿದರೆ ಯಾರೂ ಕೊಂಡುಕೊಳ್ಳಲು ಸಿದ್ದರಿಲ್ಲ. ಕಾರಣ, ಡಬ್ಬಿಂಗ್ ಸರಿಯಾಗಿಲ್ಲ. ಸುಮಾರು ೨೫ ಖಾಸಗಿ ಸ್ಟೀನಿಂಗ್ ಮಾಡಿ ವಿತರಕರಿಗೆ ತೋರಿಸುತ್ತ ಸಿಲ್ವರ್ ಜುಬಿಲಿ ಆದರೂ ಫಿಲ್ಮ್ ಡಬ್ಬೆಯಲ್ಲೇ ಉಳಿಯಿತು ! ಎರಡು ಮೂರು ಲಕ್ಷದ ಕನಸು ಕಾಣುತ್ತಿದ್ದವರಿಗೆ ಒಂದೂವರೆ ಲಕ್ಷವನ್ನು ಮುಳುಗಿಸಿದೆವೆಂದು ತಿಳಿದಾಗಿನ ಅನುಭವ ಮರೆಯಲಾಗದ್ದು, ಆ ಕಹಿ ಅನುಭವದ ನಂತರ ನಾನೊಬ್ಬನೇ ಬ್ಯಾಂಕಿನಿಂದ ಒಂದು ಲಕ್ಷ ಸಾಲಪಡೆದು ಮತ್ತೆ ‘ಗುಡ್ಡದ ಭೂತ’ ನಿರ್ಮಾಣಕ್ಕೆ ತಾಂತ್ರಿಕ ನಿರ್ದೇಶಕನಾಗಿ ಗಿರೀಶ್ ಕಾಸರವಳ್ಳಿಯವರನ್ನು ಸಂಪರ್ಕಿಸಿ ಕೊನೆಗೆ ಆ ಯೋಜನೆಯ ಬದಲು ಅವರು ಚಿತ್ರಕಥೆ ರಚಿಸಿರುವ ‘ಘಟಶ್ರಾದ್ದ’ ಚಿತ್ರವನ್ನು ನಿರ್ಮಿಸಿದೆ. ಅದು ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಜರ್ಮನಿಯ ಅಂತರ್‌ ರಾಷ್ಟ್ರೀಯ ಪ್ರಶಸ್ತಿಯೆಂದು ಸುಮಾರು ೧೮ ಪ್ರಶಸ್ತಿಗಳನ್ನು ಗಳಿಸಿ ದಾಖಲೆ ನಿರ್ಮಿಸಿತು. ಇದು ಮರೆಯಲಾಗದ ಸಿಹಿ ಅನುಭವ.

ಆ) ‘ಘಟಶ್ರಾದ್ದ’ಕ್ಕೆ ರಾಷ್ಟ್ರಪ್ರಶಸ್ತಿ ಪ್ರದಾನ ಸಮಾರಂಭ ದಿಲ್ಲಿಯಲ್ಲಿ, ೧೯೭೮ರಲ್ಲಿ. ಭಾರತದ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಪ್ರಶಸ್ತಿ ನೀಡಿ ವಿಜೇತರನ್ನು ಸನ್ಮಾನಿಸಿದರು. ಪ್ರಶಸ್ತಿ ವಿಜೇತರೆಲ್ಲ ಪ್ರಶಸ್ತಿ ಪಡೆದು ಬಂದು ತಮಗೆ ಕಾದಿರಿಸಿದ ಆಸನದಲ್ಲಿ ಕುಳಿತುಕೊಂಡರು. ನನ್ನ ಎಡಪಕ್ಕದಲ್ಲಿ ಆ ವರ್ಷ ಉತ್ತಮ ನಟಿ ಪ್ರಶಸ್ತಿ ಪಡೆದ ಸ್ಮಿತಾ ಪಾಟೀಲ್ ಕುಳಿತಿದ್ದರು. ಪತ್ರಿಕೆಗಳ ಛಾಯಾಗ್ರಾಹಕರ ಗುಂಪೊಂದು ವೇದಿಕೆಯಿಂದ ಇಳಿದು ಬಂದು ಕುಳಿತಿರುವ ಪ್ರಶಸ್ತಿ ವಿಜೇತರ ಫೋಟೊ ತೆಗೆಯಲು ಆರಂಭಿಸಿತು. ಅಷ್ಟರಲ್ಲಿ ಒಂದಿಬ್ಬರು ಬಂದು ನನ್ನನ್ನೆಬ್ಬಿಸಿ ‘ನೀನು ದೂರ ನಿಲ್ಲು ‘ಎಂದು ದೂಡಿದರು. ನಾನು ‘ಯಾಕೆ, ಏನೆಂದು’ ಗೊತ್ತಾಗದೆ ಗೊಂದಲದಲ್ಲೇ ದೂರ ಸರಿದು ಕುಳಿತುಕೊಳ್ಳಲು ಕುರ್ಚಿ ಹುಡುಕುತ್ತಿದ್ದೆ. ಅಷ್ಟರಲ್ಲಿ ಸ್ಮಿತಾ ಎದ್ದು ಬಂದು ನನ್ನನ್ನಳೆದುಕೊಂಡು ಹೋಗಿ ತನ್ನ ಬದಿಯಲ್ಲಿ ನಿಲ್ಲಿಸಿದರು. “ನೀವಿಲ್ಲಿಂದ ಕದಲಬೇಡಿ”, ಎಂದು ನನಗೆ ಹೇಳಿ, “ಇವರು ಉತ್ತಮ ಚಿತ್ರ ನಿರ್ಮಾಪಕ, ಸ್ವರ್ಣಕಮಲ ಪ್ರಶಸ್ತಿ ಪಡೆದವರು. ಅವರನ್ನು ಏಕೆ ದೂಡಿದಿರಿ? ಬೇಕಿದ್ದರೆ ನಮ್ಮದು ಒಟ್ಟಿಗೇ ಫೋಟೊ ತೆಗೆಯಿರಿ. ಅದು ಬೇಡವಾದರೆ ನಿಮ್ಮ ಫೋಟೊನೇ ಬೇಕಾಗಿಲ್ಲ’ ಎಂದು ಖಾರವಾಗಿ ನುಡಿದರು. ಅಷ್ಟರಲ್ಲಿ ಪಟಪಟನೆ ಕ್ಲಿಕ್ಕಿಂಗ್ ಶುರುವಾಗಿ ಬಿಟ್ಟಿತ್ತು. ನಾನು ತಬ್ಬಿಬ್ಬಾದೆ. ಅವರು ಕ್ಲಿಕ್ಕಿಸುತ್ತಿದ್ದಂತೆ ಸ್ಮಿತಾ ನನ್ನೊಡನೆ ನಗುತ್ತ ಹೇಳಿದರು. “ನೋಡಿದಿರಾ? ನೀವು ಹೆದರಿ ಓಡೋರಿದ್ದಿರಲ್ಲ”, ಹೀಗೆ ಆ ಪ್ರಶಸ್ತಿ ಸಮಾರಂಭವನ್ನು ನಾನು ಮರೆಯದಂತೆ ಮಾಡಿದರು ಸ್ಮಿತಾ ಪಾಟೀಲ್. ಆಕೆ ಉತ್ತಮ ನಟಿಯಿದ್ದಂತೆ ಉತ್ತಮ ಮಾನವೀಯ ಗುಣಗಳನ್ನೂ ಪಡೆದಿದ್ದರು.

‍ಲೇಖಕರು Admin MM

July 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: