ಹಿರಿಯ ರಂಗ ತಪಸ್ವಿ ಸದಾನಂದ ಸುವರ್ಣ ಇನ್ನಿಲ್ಲ..
**
ಗಿರಿಧರ ಕಾರ್ಕಳ
ಹಿರಿಯ ನಾಟಕಕಾರ, ಚಲನಚಿತ್ರ ರಂಗ ನಿರ್ದೇಶಕ, ಸದಾನಂದ ಸುವರ್ಣ ಅವರು ವಯೋಸಹಜ ಅನಾರೋಗ್ಯದಿಂದ ಇಂದು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು.
ಕನ್ನಡ ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವೀ ನಾಟಕಗಳನ್ನು ರಚಿಸಿ ನಿರ್ದೇಶಿಸಿದ, ಘಟಶ್ರಾದ್ಧ,ಕುಬಿ ಮತ್ತು ಇಯಾಲದಂತಹ ಸದಭಿರುಚಿಯ ಸಿನೆಮಾಗಳನ್ನು, ಗುಡ್ಡೆದ ಭೂತದಂತಹ ಧಾರಾವಾಹಿ,ಶಿವರಾಮ ಕಾರಂತರ ಕುರಿತು ಆಪ್ತ ನೋಟವನ್ನು ನೀಡುವ ಸಾಕ್ಷ್ಯಚಿತ್ರ, ಧಾರಾವಾಹಿಗಳನ್ನು ಕೊಟ್ಟ ರಂಗಭೂಮಿಯ ಹಿರಿಯಜ್ಜ – ಸದಾನಂದ ಸುವರ್ಣ.
ಸ್ವತಃ ನಟ ನಾಟಕಕಾರನಾಗಿ, ಪ್ರಯೋಗಶೀಲ ನಿರ್ದೇಶಕನಾಗಿ ಮುಂಬಯಿ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸುವರ್ಣರು ತಮ್ಮ ಇಳಿವಯಸ್ಸಿನಲ್ಲಿ ಮಂಗಳೂರಿನ ರಂಗಭೂಮಿಗೆ ಲಗ್ಗೆಯಿಟ್ಟು ಅಲ್ಲಿಯೂ ತನ್ನ ಸೃಜನಶೀಲ ಪ್ರತಿಭೆಯ ಸುವರ್ಣ ಛಾಪನ್ನು ಒತ್ತಿದವರು..!!ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ
ಉರುಳು ,ಕೋರ್ಟ್ ಮಾರ್ಷಲ್, ಮಳೆ ನಿಲ್ಲುವ ವರೆಗೆ, ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸದಭಿರುಚಿಯ ರಂಗ ಕಾಯಕ ಹೇಗಿರಬೇಕು ಎಂದು ನಿರೂಪಿಸಿದವರು.
ತಾನೂ ಬೆಳೆಯುತ್ತ ನೂರಾರು ಹಿರಿಯ ಕಿರಿಯ ಕಲಾವಿದರನ್ನೂ ಬೆಳೆಸಿದ ಅನನ್ಯ ರಂಗ ತಪಸ್ವಿ ನಮ್ಮ ಸದಾನಂದ ಸುವರ್ಣ.
ಮುಂಬಯಿ ಮತ್ತು ಮಂಗಳೂರಿನ ಹವ್ಯಾಸಿರಂಗಭೂಮಿಗೆ ಸುವರ್ಣರ ಕೊಡುಗೆ ಅನನ್ಯವಾದುದು.
ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಸಂಪಾದಕರಾಗಿದ್ದ ಲೇಖಕಿ ದಿ.ಸೀತಾಲಕ್ಷ್ಮಿ ಕರ್ಕಿಕೋಡಿಯವರು ಸದಾನಂದ ಸುವರ್ಣರ ರಂಗ ಸಾಧನೆಯ ಕುರಿತೇ “ರಂಗ ಜಂಗಮ ಸದಾನಂದ ಸುವರ್ಣ” ಅನ್ನುವ ಸಂಶೋಧನಾ ಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಅಗಲಿದ ರಂಗಭೂಮಿಯ ಹಿರಿಯಜ್ಜನವರಿಗೆ ಗೌರವಪೂರ್ವಕ ನಮನಗಳು.
0 Comments