ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈ ನೆಲದ ಹೆಣ್ಣು

ಸತ್ಯಮಂಗಲ ಮಹಾದೇವ

ಸಖಿ
ನೀನು ಅಭಿವ್ಯಕ್ತನಾಗಬೇಡ, ಅವ್ಯಕ್ತನಾಗು
ವ್ಯಕ್ತಮಾಧ್ಯಮದಲ್ಲೇ ಸೂಕ್ತನಾಗೆಂದು
ಮೌನದಲೆ ಮುದ್ದಿಸು, ರಮಿಸು
ನಿಶ್ಯಬ್ದದಲೆ ಪ್ರೇಮವನು ಪಾನಮಾಡು
ಎಂದೆಲ್ಲಾ ಹೇಳುತ್ತಾಳೆ
ಮೌನವನ್ನು ಕೆಣಕುವ ಅವಳ
ಮುಂಗುರುಳಿಗೆ ಈ ಮಾತನ್ನು ಏಕೆ ಹೇಳುವುದಿಲ್ಲ !

ಸಾಗರನ ಹೃದಯವು ಉಮ್ಮಳಿಸುವಂತೆ
ತನ್ನೊಡಲ ಭಾವಗಳ ಕುಸುಮಿಸಲು
ಅವಳು ಬಿಡುತ್ತಿಲ್ಲ
ತನ್ನ ಸುತ್ತ ತಾನೇ ನಿರ್ಮಿಸಿಕೊಂಡ ಬೇಲಿಯ
ಹೇಗೆ ದಾಟಿಯಾಳು
ಹಾಡು ರಾಗದ ಹಂಗನು ತೊರೆಯಬಹುದು
ನಾದದ ನೆರಳನು ತಪ್ಪಿಸಲಹುದೇ
ಒಪ್ಪಳಿವಳು ಬಿಟ್ಟು ಹೊರಡುವುದನು
ತಪ್ಪಿಸಳು ! ಮುಂಗುರುಳಲಿ ಕೆಣಕುವುದನು

ಎದೆಭಾರವಾದಾಗ ಮಳೆಯಂತೆ
ಹನಿಯುತ್ತಾಳೆ ಭೂಮಿಯ ಹದ ಲೆಕ್ಕಿಸದೆ
ತಣ್ಣಗಿರಲೆಂದು ಕಬ್ಬಿಗನ ಎದೆ
ಏಕಾಂತವನು ಪ್ರಶ್ನಿಸುತ್ತಾಳೆ ಮತ್ತೆ ಮತ್ತೆ
ಎಷ್ಟು ತೊಳೆದರೂ ಮತ್ತೆ ಕಾಡುವ
ಅವರೆಯ ಸೊಗಡಿನ ಹಾಗೆ

ಕೋಪ, ಮುನಿಸು, ತಾಳಲಾಗದ ಸಂಕಟದಲಿ
ಬೇಯುತ್ತಾಳೆ
ಅಕ್ಕಿ ಅನ್ನವಾಗುವ ರೂಪಾಂತರದಂತೆ
ಅರಳುತ್ತಾಳೆ
ಜಗಕೆ ಶಿವನಂತೆ ಪ್ರೇಮದ ಕಾವ್ಯವಾಗಿ
ನಿನ್ನ ಬಿಟ್ಟು ಕೊಡಲಾರೆ ಎನ್ನುತ್ತಾಳೆ
ಆಗಸಕೂ ಭೂಮಿಗೂ ಏನೆ ಅಂತರವಿದ್ದರೂ
ತಪ್ಪಿಸಲು ಯಾರಿಗೆ ಸಾಧ್ಯ
ಈ ಜೀವ ಸಂಬಂಧಗಳ ಆತ್ಮದನುಭವದ
ಅಂತರಂಗದ ಚುಂಬನಗಳ

ಬಟ್ಟಲು ಕಣ್ಣುಗಳಲಿ ನೋಡುವಾಗ
ಅವಳೆದೆಯ ಅಮೃತವು
ಸೆಳೆಯುವುದು ನದಿಯ ಸೆಳವಿನಂತೆ
ಚಂದ್ರನೂ ಸೋಲುವನು ಅವಳ ಅರವಿಂದಕೆ
ಮನದ ಬಾಂದಳದಲ್ಲಿ ತಾವರೆಯು
ಅರಳುವುದು ನೋಡಿದರೆ ಕಣ್ಣ ತೆರೆದು
ಅಂಗೈಲಿ ಹಿಡಿದ ನೀರು ಓಡುವ ಹಾಗೆ
ವಾಸ್ತವದಲಿ ಅವಳು ನೀರ ಚಿಗುರು

ಮಾತಿನಲಿ ಸೋಲಿಸಲಾಗದು
ಮಾತಿಗೆ ಮಾತೆಯಾದವಳು
ಪ್ರೇಮಕೆ ತುಂಟ ನಗೆಯಲಿ ಮುದ್ದಿಸುವ
ಪಾಠ ಕಲಿಸಿದವಳು
ಅಸ್ತಿಮಜ್ಜೆಯೊಳಗೆ ಜೀವದ್ರವ
ರಕುತವಾಗಿ‌ ಮಾಗುವ ಕೌತುಕದಂತೆ
ಈ ನೆಲದ ಹೆಣ್ಣು ಅವಳು

‍ಲೇಖಕರು Admin

September 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದಣಿವು…

ದಣಿವು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಅವರೆ ಸೊಗಡು ತೊಳೆಯುವುದೇ ಬೇಡ, ವ್ಯಕ್ತಕ್ಕೆ ಅದೇ ಸಾಕಲ್ವಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: