ಸತ್ಯಪ್ರಕಾಶ್ ರಾಮಯ್ಯ
—
ಭೂತಃಕಾಲದ ರಸಗಳಿಗೆಯ ಭಾರವನು
ವರ್ತಮಾನಕೆ ಹೊರಿಸಬೇಡ
ಮುಮ್ಮುಖವಾಗಿ ಚಲಿಸುವ ಬದುಕನು
ಹೆಪ್ಪುಗಟ್ಟಿಸಬೇಡ
ಸ್ವೀಕರಿಸು ನೀ ನನ್ನಂತೆ ನನ್ನ
ಪಾಪ ಪುಣ್ಯದ ಲೆಕ್ಕ ನನಗೀಗ ಬೇಡ
ಕೆಂಪಾದ ಆಕಾಶ ಬಿಗುಮಾನಗೆ ಕಪ್ಪಾದರೆ
ಕವಿದ ಕತ್ತಲಲಿ ನಾನಿರುವುದಿಲ್ಲ
ಎಂದೂ ನಡೆಯದ ದಾರಿಯಲಿ ಪಯಣಿಸುವ ಮುನ್ನ ಗತಕಾಲದ ಕನಸು ಯಾಕೆ ಬೀಳುವುದಿಲ್ಲ
ಸಮಯಕೆ ಆದಿ ಅಂತ್ಯವೇ ಇಲ್ಲ
ಅದರ ಬುನಾದಿಯ ಮೇಲೆ ಪ್ರೀತಿ ನಿಂತಿರುವುದಿಲ್ಲ
ನಿಂದಿಸಿದ ಮರುಕ್ಷಣವೆ ಒಡೆದುಹೋಯಿತು ಹೃದಯ
ಬೇರುಬಿಟ್ಟ ಮರದ ಟೊಂಗೆಯಲಿ ಚಿಗುರೊಡೆವ
ಹಸಿರೆಲೆಗಳು ಉದುರುವುದು ಸಹಜವೇ ಆದರೂ
ಪಳೆಯುಳಿಕೆಗಳ ಬುಡದ ಒಳಗಿನಿಂದಲೇ ಕವಿತೆ ಮೂಡುವುದು ಮರೆಯದಿರು
ಜೀವಕೆ ಬೆಲೆಕಟ್ಟುವ ಹಾಗಿಲ್ಲ, ಹೋದರೆ ಹೋದಹಾಗೆಯೇ…
ಸರಿತಪ್ಪುಗಳ ದುರ್ಗಮ ದಾರಿಯ ಏರಿಳಿತವ ದಾಟಿದ ಮಾತ್ರಕೆ ಗುರಿ ಮುಟ್ಟಲಾಗುವುದಿಲ್ಲ
ಪ್ರೀತಿಯ ದಾರಿಯಲಿ ಸಾಗುವುದಷ್ಟೆ ನಮ್ಮ ಕೆಲಸ
ಎಲ್ಲವನೂ ತರ್ಕಕೆ ಓರೆ ಹಚ್ಚುವ ಬದಲು ಚುಕ್ಕಿಗಳನು ಎಣಿಸುವ ಬಾ
ಆಧಾರವಿಲ್ಲದ ಊಹೆಗಳನು ಪೋಣಿಸುವ ಬದಲು
ಹೂವ ಪರಿಮಳವನು ಆಘ್ರಾಣಿಸುವ ಬಾ…
ಅಸಂಖ್ಯ ತಾರಾಗಣಗಳ ಸಾವಿರ ವರುಷಗಳ ಬೆಳಕಿನಿಂದ ಭೂಮಿ ಬೆಳಗುತಿದೆಯೆಂದರೆ
ನಿನ್ನ ಆತ್ಮದ ಜ್ಯೋತಿಗೆ ಈ ಹೃದಯವನು ಬೆಳಗಲು ಸಾಧ್ಯವಿಲ್ಲವೇ?
ಕತ್ತಲ ದಾರಿಯ ಅಂತರವನು ತಿಳಿದವರಾರು
ಕೈ ಹಿಡಿದು ನಡೆಯುವುದಾದರೆ
ಅಲೆಗಳ ಮೊರೆತವೂ ಸಂಗೀತವೇ ಅಲ್ಲವೇ?
0 ಪ್ರತಿಕ್ರಿಯೆಗಳು