ಸತ್ಯಪ್ರಕಾಶ್ ರಾಮಯ್ಯ
ವ್ಯೋಮದ ನಿರ್ವಾತದಲಿ ಜೋತಾಡುವ ಬೆಳ್ಳಿಚುಕ್ಕಿಗಳು
ಸಾವಿರಾರು ವರುಷಗಳ ಹಿಂದೆ ಆಯತಪ್ಪಿ ಬಿದ್ದಿರುವುದನು
ಈಗ ಆಕಾಶದಲಿ ಕಂಡ ನಾವು
ಶುಭಶಕುನವೆಂದು ಭ್ರಮಿಸಿದ ಮಾತ್ರಕೆ
ಒಡೆದ ನಕ್ಷತ್ರಗಳು ಕಪ್ಪು ಸಮುದ್ರದ
ಪ್ರಪಾತ ಸೇರುವುದನು ತಪ್ಪಿಸಲು ಸಾಧ್ಯವೇ?
ಇದು ಬಾನು ಇದು ನೆಲವೆಂದು ವಿಂಗಡಿಸಿ ಬುಡವಿಲ್ಲದ ಭೂಮಿಯ ಮೇಲೆ ನಿಂತು
ಚಂದ್ರನಿಲ್ಲದ ಕಪ್ಪು ಆಕಾಶದ ಡೇರೆಯೊಳಗೆ
ತಾರಾಗಣವನು ಕಂಡು ಪುಳಕಿತರಾಗುವ ನಾವು ಬ್ರಾಹ್ಮೀ ಮುಹೂರ್ತದಲಿ ಧ್ಯಾನಿಸಿದ ಮಾತ್ರಕೆ ಅಂತರಾಳದ ಪ್ರಕ್ಷುಬ್ದತೆಯನು ನಿವಾರಿಸಲು ಸಾಧ್ಯವೇ?
ಮುರಿಯಲಾಗದ ಗೋಡೆಗಳಾಚೆ ಬೆರೆಯಲಾಗದ ದೇಹಗಳು
ಹಂಬಲದ ಹಸಿವು ನೀಗಿಸಿಕೊಳ್ಳಲು
ಬತ್ತಿಹೋದ ಕಣ್ಗಳಿಂದ ವಿಷಾದದ ಹನಿಗಳನು ಜಿನುಗಿಸಿದ ಮಾತ್ರಕೆ
ಋತುಗಳು ಬದಲಾಗಿ ನಿರ್ಜೀವ ಟೊಂಗೆಯಲಿ ಅಕಾಲಿಕವಾಗಿ ಎಲೆಗಳು ಚಿಗುರೊಡೆಯಲು ಸಾಧ್ಯವೆ?
ದಕ್ಷಿಣ ಧ್ರುವದ ಹಿಮಪಾತದ ಥಂಡಿಗೆ ಮುದುಡಿಕೊಂಡ ಮನಸುಗಳು
ಬೇಗುದಿಯ ಹತಾಷೆಯನು ಕಾಣಿಕೆಯಾಗಿ ನೀಡಿದ ಮಾತ್ರಕೆ
ಹಿಮಾಲಯದ ತುತ್ತತುದಿಯ ಕೈಲಾಸ ಪರ್ವತದಲಿ
ಬೀಡು ಬಿಟ್ಟಿರುವ ಪರಮೇಶ್ವರ
ಮುಚ್ಚಿದ ಬಾಗಿಲನು ತೆರೆಯಲು ಸಾಧ್ಯವೇ?
ಕಣ್ಣ ರೆಪ್ಪೆಯ ಆಳದಲಿರುವ ಗತಕಾಲದ ಅಗಣಿತ ಬಯಕೆಗಳು, ದೇಹಕಂಟಿದ ಜೀವಗಳು,
ಬಿಗಿದಪ್ಪಲು ತವಕಿಸಿದ ಮಾತ್ರಕೆ
ಹೆಪ್ಪುಗಟ್ಟಿದ ಆಕಾಶವನು ಸೀಳಿಬಂದ ಬಿಸಿಲ ಕೋಲು
ತುಂತುರು ಮಳೆ ಸುರಿಸಿ ಮಣ್ಣ ಸೊಗಡನು
ದೇಹದ ಘಮಲಿನೊಳಗೆ ಬೆಸೆಯಲು ಸಾಧ್ಯವೇ?
0 ಪ್ರತಿಕ್ರಿಯೆಗಳು