ಟೋಸ್ಟ್ ಟು ಮಾಡೆರ್ನಿಟಿ
ಹೇಳಿಕೇಳಿ ನಾವು ದಂಪತಿಗಳಿಬ್ಬರೂ ಸಂಗೀತ ಪ್ರೇಮಿಗಳು. ಮನೇಲಿದ್ದಾಗ ಏನೇ ಕೆಲಸ ಮಾಡುತ್ತಿದ್ದರೂ ಒಂದು ಹಿನ್ನೆಲೆ ಸಂಗೀತ ನಿನಾದವಿರದ ಹೊರತು ಕೆಲಸ ಪೂರ್ಣ ಅನಿಸುವುದಿಲ್ಲ. “ಮೈಸೂರು ಮಲ್ಲಿಗೆ”ಯ ಭಾವಪೂರ್ಣ ಹಾಡುಗಳ ರಸದೌತಣವನ್ನು ಸವಿಯುತ್ತಲೇ ನನ್ನ ಪತಿರಾಯ ಲ್ಯಾಪ್ ಟಾಪ್ ಹಿಡಿದು ತನ್ನ ಕಛೇರಿಯ ಈಮೇಲ್ ಗಳನ್ನು ಪರಿಶೀಲಿಸುತ್ತಿರುವುದ ಕಂಡು ಕೊಂಚ ಮುನಿಸಿನೊಂದಿಗೆ ನಗು ಬಂತು.
ಇಂದು ನಮ್ಮೆಲ್ಲರ ಪರಿಸ್ಥಿತಿಯೂ ಹೀಗೆಯೇ ಆಗಿದೆ. ಸ್ವಲ್ಪ ಸಮಯ ಸಿಕ್ಕರೇ ಸಾಕು “ಓಹ್ ಆಫ಼ೀಸ್ ಮೇಲ್ ಚೆಕ್ ಮಾಡಿಲ್ಲ” ಅನ್ನೋದು ನೆನಪಾಗತ್ತೆ. ಕೈ ಸ್ವಯಂ ಲ್ಯಾಪ್ ಟಾಪ್ ಅನ್ನು ಅರಸುತ್ತೆ. ಇಷ್ಟೆಲ್ಲ ಮಾಡಿ ನಾವು ಉದ್ಧಾರ ಮಾಡ ಹೊರಟಿರುವುದು ಹೊರದೇಶದ ಜನತೆಯನ್ನು ಎಂಬುದನ್ನು ಈಗ ಸಧ್ಯಕ್ಕೆ ಚಿಂತಿಸುವುದಕ್ಕಿಂತ ಒಂದು ಪುಸ್ತಕ ಓದೋಣ ಎಂದು ಕಪಾಟಿನತ್ತ ಹೊರಟೆ.
(ಮುಂದುವರೆಯುವ ಮುನ್ನ ಒಂದು ತಮಾಷೆ ಕಣ್ರೀ. ನಂಗೆ ಪುಸ್ತಕದಂಗಡಿಗೆ ಹೋದರೆ, ಕೆಲವೊಮ್ಮೆ ಬರೀ ಮುಖಪುಟವನ್ನು ನೋಡಿ ಪುಸ್ತಕ ಹೊತ್ತು ತರುವ ಹುಚ್ಚು. ಹಾಗೆ ಮಾರುಹೋಗಿರುವುದರಲ್ಲಿ ಇತ್ತೀಚೆಗೆ ರಘು ಅಪಾರ ರವರ ಪುಸ್ತಕಗಳು ಹೆಚ್ಚು. ಆದರೆ ಎಂದೂ ನನ್ನ ಆಯ್ಕೆ ತಪ್ಪಾಗಿಲ್ಲ ಎಂಬುದಕ್ಕೆ ಇನ್ನು ಮುಂದೆ ಹೇಳಹೊರಟಿರುವ ಪುಸ್ತಕವೂ ನಿದರ್ಶನ.)
ಅಪಾರರ ಮುಖಪುಟವನ್ನು ಹೊಂದಿದ ಗುರುಪ್ರಸಾದ್ ಕಾಗಿನೆಲೆಯವರ “ಗುಣ” ಕಾದಂಬರಿ ಕಣ್ಣಿಗೆ ಬಿತ್ತು. ಕಾದಂಬರಿಯ ಓದು, ಮೈಸೂರು ಮಲ್ಲಿಗೆಯ ಸವಿಯ ಜೊತೆ ಭರದಿಂದ ಸಾಗಿತ್ತು.
ಓದುತ್ತಾ ಓದುತ್ತಾ ನನಗೆ ಆ ಹಾಡಿನ ಭಾವಕ್ಕೂ ಈ ಪುಸ್ತಕದ ಮನೋಧರ್ಮಕ್ಕೂ ಸಾಕಷ್ಟು ಅಂತರ ಉಂಟಾದಂತಾಗಿ ಆ ಒಂದು ಬ್ಲೆಂಡ್ ಹೊರಟು ಹೋಯಿತು. ಮರುಕ್ಷಣವೇ ಮನವರಿಕೆಯಾದದ್ದು, ಈ “ಗುಣ” ಇಂದಿನ ಪೀಳಿಗೆಯ ಕನ್ನಡಿ ಎಂದು. ತೀರ ವಾಚ್ಯ, ಶುಷ್ಕ ಅನ್ನಿಸುವ ಕಥಾ ಹಂದರದಲ್ಲಿ ಹುದುಗಿರುವುದು ಇಂದಿನ ಜಗತ್ತು ಅಧೋಗತಿಯತ್ತ ಮುಖಮಾಡಿರುವ ಪಯಣದ ಒಂದು ಮೈಮ್, ಒಂದು ಪರಿಹಾಸ.
ಹೌದಲ್ಲವೇ, ನಾವು ನಮ್ಮನ್ನು ಕೆಲವು ಸಣ್ಣ ಸಣ್ಣ ಜೀವರಸಗಳ ಸವಿಯನ್ನು ಅನುಭವಿಸುವ ಮೈಂಡ್ ಸೆಟ್ ನಿಂದ ಬಹುದೂರ ಕೊಂಡು ಬಂದಿದ್ದೇವೆ. ಯಾಂತ್ರಿಕ ಬದುಕಿಗೆ ಸಾಕಷ್ಟು ಒಗ್ಗಿ ಹೋಗಿದ್ದೇವೆ. ನಮ್ಮ ಭಾವನೆಗಳ ಹೊರಸೂಸುವಿಕೆಗೂ ತಾಂತ್ರಿಕತೆಯ ಮೊರೆಹೋಗುತ್ತಿದ್ದೇವೆ, ಅದೂ ಆದಷ್ಟೂ ಸಂಕ್ಷಿಪ್ತವಾಗಿ. ಹೀಗೇ ಸುಮ್ಮನೆ ಮತ್ತೊಬ್ಬರ ನಗು ಕಂಡು ಸುಖಿಸುವುದು, ತಣ್ಣನೆ ಗಾಳಿಗೆ, ನಿಶ್ಯಬ್ದಕ್ಕೆ ಮೈ ಮನ ಒಡ್ಡಿ ನಿಂತು, ಅದರ ರೋಮಾಂಚನವನ್ನು ಅನುಭವಿದುವುದು ಇವೆಲ್ಲ ಆಗಲೇ ಹಳೇ ಕಥೆ ಎಂಬ ಮಾತಾಗಿಬಿಟ್ಟಿವೆ.
ಈ ಆಲೋಚನಾ ಲಹರಿಯಲ್ಲಿ ಮುಳುಗಿದ್ದ ನನಗೆ ಥಟ್ಟನೆ ಹೊಳೆದದ್ದು ಜಾನ್ ಕೀಟ್ಸ್ ಹೇಳಿದ ಮಾತು. ಇದು ಮೂಲತಃ ಒಂದು ಲಘು ಲೇವಡಿ, ಆದರೂ ಇದರಲ್ಲಿರುವ ಘಾಡತೆ, ಮುಂದಾಲೋಚನೆ, ಮುಂದೆ ನಡೆಯಬಹುದಾದ ಅನಾಹುತದ ಸೂಚನೆ ಎಲ್ಲವೂ ನಿಗೂಢವಾಗಿ ಅಡಗಿವೆ. ಅದೇನೆಂದಿರಾ?
ಒಮ್ಮೆ, ಜಾನ್ ಕೀಟ್ಸ್ ಒಂದು ಸಮಾರಂಭದಲ್ಲಿ ಹೀಗೆಂದರಂತೆ:
“Toast to Isaac Newton who destroyed the poetry of the rainbow. Ah, my dear old friend, you and I shall never see such days again!”
ಇದನ್ನು ಸೂಕ್ಷ್ಮವಾಗಿ ಗಮನಿಸಿ ಗೆಳೆಯರೇ. ಇಲ್ಲಿ ಕಾಣಸಿಗುವುದು, ಕಳೆದು ಹೋದ (ಅಥವಾ ಕಳೆಯ ಹೊರಟ) ಒಂದು ರಸ, ಕೌತುಕ, ರಹಸ್ಯಗಳ ಬಗೆಗಿನ ತುಡಿತ. “ಅರೆ!” ಅನ್ನುವ ಬದಲು “ಹಾ ಇಷ್ಟೇ” ಎಂಬ ಅನಿಸಿಕೆ.
ಆ ರಮ್ಯ, ವಿಸ್ಮಯ ಮಾನಸಿಕ ಜಗತ್ತಿನ ಕಳವು! ಇಗ್ನೋರೆನ್ಸ್ ಈಸ್ ಬ್ಲಿಸ್ ಎಂದು ಹೇಳುವುದು ಇದಕ್ಕೇ ಇರಬಹುದಲ್ಲವೇ! ತಾಂತ್ರಿಕತೆ ಬೆಳೆದಷ್ಟೂ, ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡಷ್ಟೂ ನಮ್ಮಲ್ಲಿನ ನೇವಿಟಿ ಅಥವಾ ಮುಗ್ಧತೆಯನ್ನು ನಾವೇ ದೂರಾಗಿಸುತ್ತಿದ್ದೇವೆ. ಇದರ ಬೆಳವಣಿಗೆ ಇಂದು ಎಷ್ಟರ ಮಟ್ಟಿಗೆ ಆಗಿಹೋಗಿದೆ ಎಂದರೆ, ಇದರಿಂದ ನಮ್ಮನ್ನು ನಾವು ಬೇರ್ಪಡಿಸಲಾರೆವು ಎನ್ನುವಷ್ಟು.
ಇದಕ್ಕೆ ಸರಿದೂಕಬೇಕಲ್ಲ ಎಂಬಂತೆ, ನಮ್ಮ ಮಾಧ್ಯಮಗಳೂ, “ಇನ್ಫ಼ೋಟೈನ್ ಮೆಂಟ್” ಪರಿಕಲ್ಪನೆಯನ್ನು ಬಿಂಬಿಸಬೇಕಾದಂತಹ ಜವಾಬ್ದಾರಿಯನ್ನು ಕಳೆದುಕೊಂಡು ಬಿಟ್ಟಿವೆ. ಟೀವಿ ನೋಡಹತ್ತಿದರೆ ಸಿಗುವುದು ಅದ್ಯಾವುದೋ ರಿಯಾಲಿಟಿ ಷೋಗಳು. ಆ ಹುಡುಗ ಎಷ್ಟು ಬೇಗ ತನ್ನ ಮುಖವನ್ನು ಮಾಡ್ರನ್ ಲೇಡಿಯ ಹಾಗೆ ಮೇಕಪ್ ಮಾಡಿಕೊಳ್ಳುತ್ತಾನೆ, ಆಕೆ ಹಳ್ಳಿಗೆ ಹೋಗಿ ತನ್ನ ಜೀನ್ಸ್ ಪ್ಯಾಂಟ್ನಲ್ಲಿ ಎಷ್ಟು ಬೇಗ ನೀರು ಹೊತ್ತು ತರುತ್ತಾಳೆ ಎಂಬತಹ ಕಳಪೆ ಕಾರ್ಯಕ್ರಮಗಳು, ಅಥವಾ ಯಾವ ಹಳೇ ಬಂಗಲೆಯಲ್ಲಿ ಯಾವ ಹಳೇ ಭೂತದ ಕಾಟ ಇದೆ, ಯಾರಿಗೆ ತಮ್ಮ ಆಜನ್ಮ ಪ್ರೇತದ ಕಾಟ ಕಾಡುತ್ತಿದೆ ಎಂಬ “ಮಹೋನ್ನತ” ವೇದಿಕೆಗಳ ಪ್ರದರ್ಶನಗಳು!
ಅಂತೂ ನಾವು ಇರಬರುವ ’ಮಾಡ್ರನ್’ ಅಭಿವೃದ್ಧಿಗಳಲ್ಲಿ (!) ಸ್ವಲ್ಪವಾದರೂ ಜೀವಂತಿಕೆ ಉಳಿಸಿಕೊಳ್ಳಬೇಕಾದರೆ ನಮ್ಮ ರೊಟೀನ್ ಕೆಲಸಗಳ ನಡುವೆ ಸಾಹಿತ್ಯ, ಸಂಗೀತಗಳು ಸಾಕಷ್ಟು ಬೇಕಾದವು ಎಂದು ಅನಿಸಿತು. ಹೊಸದನ್ನು ಬೇಡ ಅನ್ನಬಾರದು, ಹಳೆಯ ಬುಡದಿಂದ ದೂರಾಗಬಾರದು ಎಂದು ಹಿರಿಯರೊಬ್ಬರು ಹೇಳುತ್ತಿದ್ದ ಮಾತು ಮರುಕಳಿಸಿತು. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು” ಅಲ್ಲವೇ?
Chennagide akka 🙂
ನನ್ನ ಕ್ರೋಮ್ ಬ್ರೌಸರ್ ನಲ್ಲಿ ಸಾಹಿತ್ಯ(ಅವಧಿ, ಕೆ೦ಡಸ೦ಪಿಗೆ, ಚುಕ್ಕುಬುಕ್ಕು ಇತ್ಯಾದಿ), ಸ೦ಗೀತ(ಮ್ಯೂಸಿಕ್ ಇ೦ಡಿಯ, ಸಾವನ್ – ಭಾವಗೀತೆ, ಯಕ್ಷಗಾನ, ಹಳೆಯ ಚಿತ್ರಗೀತೆಗಳ ಸ೦ಕಲನ) ಓಡುತ್ತಿರುತ್ತವೆ. ಜತೆಗೆ ಜಾವ ಪ್ರೋಗ್ರಾಮ್ಸ್, ಈಮೇಲ್ಸ್ ಗಳು.
ಬಹುದೂರ ನಡೆದಾಗಿದೆ, ಹಿ೦ತಿರುಗಿ ಬರಲಾರದಷ್ಟು.. ಜತೆಗೆ ಸಾಹಿತ್ಯ, ಸ೦ಗೀತ ಒಯ್ಯಬೇಕು ಅಷ್ಟೇ 🙂
You nailed it!
ಚೆನ್ನಾಗಿದೆ, ನೀವು ಬರೆದಿದ್ದು ಎಲ್ಲರ ಅನುಭವವೂ ಹೌದು, ನಿರಾಳತೆಯಿಂದ ಒಂದಷ್ಟು ಹೊತ್ತು ಕೂತು ಮಾತಾಡುವ ಭಾಗ್ಯವೂ ನಮಗಿರುವುದಿಲ್ಲ, ಮಧ್ಯೆ ಮಧ್ಯೆ ಮೊಬೈಲ್ನಲ್ಲಿ ಇಣುಕಿಹಾಕದಿದ್ದರೆ ಸಮಾಧಾನವೇ ಇರುವುದಿಲ್ಲ 🙂
ಬಾಲ್ಯ ಚೆನ್ನಾಗಿತ್ತು
ಚುಕ್ಕಿ ತಾರೆ ಕೈಗೆ ಸಿಗುತಿತ್ತು
ಆಕಾಶಕ್ಕೆ ಮೆಟ್ಟಿಲು ಕಟ್ಟಬಹುದಿತ್ತು
ಈಗ ಚುಕ್ಕಿ ತಾರೆ ಎಂದರೆ ವಿಜ್ಞಾನ
ಆಕಾಶದ ತುಂಬೆಲ್ಲಾ ನಮ್ಮದೇ ಉಪಗ್ರಹಗಳು !
so realistic madamji but we say we “LIVE” such life but are we ALIVE