ಸಂಪು ಕಾಲಂ : ಹೊಸತೇನಲ್ಲದ ಎಚ್ಚರಿಕೆಯ ಕರೆಘಂಟೆ!


“We worry about what a child will become tomorrow, yet we forget that he/she is someone today”
ಎಂಬ ಈ ಮಾತು ಸರಳವಾಗಿ ಅರ್ಥವಾಗದ ಒಂದು ಭಯಾನಕ ಕ್ರೌರ್ಯ. ಬುದ್ಧಿ ಬಂದಾಗಿನಿಂದ ಅನೇಕ ಕನಸುಗಳ ಬುತ್ತಿಯನ್ನು ಒಂದಕ್ಕೊಂದು ಸೇರಿಸಿ ಗಂಟು ಹಾಕುತ್ತ ಬೆಳೆಬೆಳೆಯುತ್ತಾ ಆ ಗಂಟು ಕಗ್ಗಂಟುಗಳಾಗಿ, ನಮ್ಮ ಕನಸುಗಳೇ ನಮಗೆ ಸಂಕೋಲೆಗಳಾಗಿ, ಅವು ನನಸಾದ, ಆಗದ ಅರೆಬೆಂದ ಜೀವನವನ್ನು ಪಾಕ ಮಾಡುತ್ತಲೇ ಆ ಪಾಕದ ಸಿಹಿಯ ಹೊಣೆಯನ್ನು ನಮ್ಮ ಮಕ್ಕಳ ಮೇಲೆ ಸಲೀಸಾಗಿ ಹೊರಿಸಿಬಿಡುತ್ತೇವೆ. ಉದ್ದೇಶ ಕೆಟ್ಟದ್ದಲ್ಲ. ನನ್ನ ಕೈಲಾಗದ್ದು ನನ್ನ ಮಗುವಾದರೂ ಮಾಡಲಿ ಎಂಬ ತಂದೆತಾಯಿಯರ ಅಂಧಾಸೆಯ ಭರವಸೆ ಅಥವಾ ಜವಾಬ್ದಾರಿಯ ಆಶಾಕಿರಣವಿರಬಹುದು.
ಆದರೆ, ನಮ್ಮ ಆ ಆಸೆ-ಕನಸುಗಳು ಮಕ್ಕಳಿಗೆ, ಅವರ ಎಳೆಯ ಮಾನಸಿಕ ಸ್ಥಿತಿಮಿತಿಯ ಮೇಲೆ ಎಂತಹ ಹೇರಿಕೆಯನ್ನುಂಟುಮಾಡುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ.
ಅಂಬೆಗಾಲಿಡುತ್ತಾ ಕೈಗೆ ಸಿಕ್ಕ ಕಡ್ಡಿಯಂತಹ ಪೆನ್ನನ್ನು ತೆಗೆದು ಮಗುವೊಂದು ಬಾಯಿಗಿಟ್ಟರೆ, ರೈಟರ್ ಆಗ್ತಿಯೇನೋ ಪುಟ್ಟ? ಎಂದು ನಗುವುದರಲ್ಲಿ ಪೋಷಕರಾದ ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೇ ಹೊರತು, ಆ ಮುದ್ದು ಮಗು ಮನೆ ತುಂಬ ನಡೆದಾಡಿ ಒಂದು ಆಟದ ವಸ್ತುವನ್ನು ತೆಗೆದು ಆಟವಾಡುತ್ತಿದ್ದಾನೆ ಎನಿಸುವುದೇ ಇಲ್ಲ. ಅಂದಿನಿಂದಲೇ ಬೆಳೆಯುತ್ತದೆ ಮಕ್ಕಳ ಮೇಲಿನ ನಮ್ಮ ಹೇರಿಕೆ. ಆ ಮಗುವಿನ ಬೆಳವಣಿಗೆ, ಮಾನಸಿಕ ಆರೋಗ್ಯ, ಅದರ ಸಾಮಥ್ರ್ಯ, ಆ ವಯಸ್ಸಿಗೆ ಬೇಕಾದಂತಹ ಆಟೋಟ ಇವ್ಯಾವುವನ್ನೂ ತಲೆಗೆ ಹಚ್ಚಿಕೊಳ್ಳದೆ, ನಮ್ಮ ಮಗು ನಂಬರ್ ಒನ್ ಆಗಿರಬೇಕು ಎಂದು ಬಯಸಿ, ಆದಷ್ಟು ಬೇಗ ಸಕಲಕಲಾಪಾರಂಗತರಾಗಿಯೇ ಬಿಡಬೇಕು ಎಂಬ ಆತುರದಿಂದ ಪೋಷಕರು ಮುಂದುವರೆಯುತ್ತಿರುತ್ತಾರೆ. ನಾಲ್ಕೈದು ವರ್ಷಗಳಿಂದಲೇ ಪ್ರಾರಂಭವಾಗುತ್ತದೆ ಆ ಮಗುವಿಗೆ ವಿವಿಧ ರೀತಿಯ ತರಗತಿಗಳು; ಸ್ವಿಮಿಂಗ್, ಸಿಂಗಿಂಗ್, ಡಾನ್ಸ್, ಡ್ರಾಯಿಂಗ್, ಚೆಸ್, ಕ್ರಿಕೆಟ್, ಸ್ಪೆಲ್ಲಿಂಗ್, ಕಂಪ್ಯೂಟರ್, ಇತ್ಯಾದಿ, ಇತ್ಯಾದಿ.
ಹಿತ್ತಲ ಗಿಡದ ಎಲೆಯ ಮೇಲಿನ ಹುಳವೊಂದನ್ನು ಕುತೂಹಲವಾಗಿ ವೀಕ್ಷಿಸುತ್ತಿರುವ ಹುಡುಗನನ್ನು ಬಾ ಸ್ಪೆಲ್ಲಿಂಗ್ಸ್ ಬರಿ ಎಂದು ಕರೆದರೆ, ಆ ಮಗುವಿನ ಮನೋವಿಕಾಸಕ್ಕೆ ಎಂತಹ ಹಾನಿಯುಂಟಾಗುತ್ತದೆ ಎಂಬ ಆಲೋಚನೆಯ ತಾಳ್ಮೆಯೂ ನಮಗೆ ಇರಲಾರದು.
ಇದು ಯಾವ ಪೋಷಕರ ತಪ್ಪೂ ಅಲ್ಲ. ಇಂದಿನ ಸ್ಪಧರ್ಾತ್ಮಕ ಜಗತ್ತಿನಲ್ಲಿ ತಮ್ಮ ಮಗು ಗೆಲ್ಲಬೇಕು, ಸಂತೋಷವಾಗಿ ಬದುಕಬೇಕು ಎಂಬ ಉದ್ದೇಶ ಎಲ್ಲ ತಂದೆತಾಯಿಯರದು. ಆದರೆ, ಆ ಗೆಲುವಿಗೆ ಬೇಕಾದ ಕಚ್ಚಾ ವಸ್ತುಗಳು, ಗೆಲುವೆಂಬ ಹಣ್ಣಾಗುವಿಕೆಗೆ ಕೊಡುವ ಕಾವು ಸರಿಯಾದ ರೀತಿಯದ್ದಲ್ಲ ಎಂಬುದು ನಾವು ತಿಳಿಯಲೇ ಬೇಕಾದ ಎಚ್ಚರಿಕೆಯ ಕರೆಘಂಟೆ. ಎಂಭತ್ತೆರಡು ಪ್ರತಿಶತ ಅಂಕಗಳನ್ನು ಗಳಿಸಿರುವ ನನ್ನ ಪರಿಚಯದ ಹುಡುಗನೊಬ್ಬ ಫಲಿತಾಂಶದ ನಂತರ ಮೌನವನ್ನು ಪಾಲಿಸುತ್ತಿದ್ದಾನೆ, ಎಂಭತ್ತೇಳು ಗಳಿಸಿರುವ ಸ್ನೇಹಿತೆಯ ತಂಗಿಯೊಬ್ಬಳ ಮನೆಯವರಿಗೆ ದಿಕ್ಕು ತೋಚದಾಗಿದೆ. ಇವೆಲ್ಲಕ್ಕಿಂತ ವೈಪರೀತ್ಯವೆಂದರೆ – ಪರೀಕ್ಷೆಯಲ್ಲಿ ಅರವತ್ತು ಪಸರ್ೆಂಟ್ ಅಂಕಗಳು ಬಂದ ಹುಡುಗಿ, ನೀನು ಫéೇಲ್ ಆಗಿದಿಯಾ ಕಣೇ ಎಂಬ ಒಂದು ತಮಾಷೆಯ ಕರೆಯನ್ನು ನಿಜವೆಂದು ನಂಬಿ ಬಾಲ್ಕನಿ ಹಾರಿ ಪ್ರಾಣ ತ್ಯಜಿಸಿದ ಘಟನೆ!
ಈ ಹೃದಯ ವಿದ್ರಾವಕ ಘಟನೆಯನ್ನು ಕೇಳಿ ನಾನು ಮೌನಿಯಾದೆ. ಒಂದು ಕ್ಷುಲ್ಲಕ ಪರೀಕ್ಷೆಯ ಫಲಿತಾಂಶ, ನನ್ನ ಅಗಾಧ, ಕೌತುಕಮಯ, ನಿಗೂಢ, ಹೆಜ್ಜೆ ಹೆಜ್ಜೆಗೂ ಹೊಸ ಹೊಸ ಸವಾಲುಗಳನ್ನೆಸೆದು ಬೆಳೆಸುವ ಜೀವನವನ್ನು ಮತ್ತು ಅದರ ಅಂತ್ಯವನ್ನು ನಿರ್ಧರಿಸಿ ಬಿಡುತ್ತದೆ ಎಂದರೆ ಎಂತಹ ಅನರ್ಥ. ನಮಗಾಗಿ ಪರೀಕ್ಷೆಯೇ ಹೊರತು ಪರೀಕ್ಷೆಗಾಗಿ ನಾವಲ್ಲ ಎಂಬ ಪುಟ್ಟ ಸತ್ಯವನ್ನು ಮನವರಿಕೆ ಮಾಡಿಕೊಳ್ಳಲಾಗದಷ್ಟು ಒತ್ತಡ ಅವರ ಮೇಲಾಗುತ್ತಿದೆ ಎಂದರೆ ಅದರ ಪರಿಣಾಮವನ್ನು ಒಮ್ಮೆ ಊಹಿಸಿ.
ಮಾಧ್ಯಮಗಳು ಸಹ ಈ ನಿಟ್ಟಿನಲ್ಲಿ ತನ್ನ ಜವಾಬ್ದಾರಿ ಸಂಪೂರ್ಣವಾಗಿ ನಿರ್ವಹಿಸುತ್ತಿಲ್ಲ. “ಎಳೆಯಮನಸಿನ ಎಳೆಗಳು” ಎಂಬ ಹಳೆಯ ಧಾರಾವಾಹಿಯೊಂದು ಟಿವಿ ವಾಹಿನಿಯಲ್ಲಿ ಬರುತ್ತಿತ್ತು. ಹಿರಿಯರ ಗೋಜಲು-ಗೌಜುಗ ಜಗತ್ತಿನ ನಡುವೆ ನಲುಗಿ ಹೋಗುವ ಎಳೆಯ ಮನಸ್ಸುಗಳ ಬಗ್ಗೆ ಒಂದು ಒಳ್ಳೆಯ ನಿರೂಪಣೆಯಾಗಿತ್ತು. ಇಂದು ನಮಗೆ ಅತ್ತೆ-ಸೊಸೆ, ಅತ್ತಿಗೆ-ನಾದಿನಿ, ಗಂಡ-ಹೆಂಡತಿ, ಪ್ರೇಮ-ವಿರಹ ಇಂತಹದ್ದೇ ಫಾರ್ಮುಲಾ ಧಾರಾವಾಹಿಗಳನ್ನು ಬೆಳಗ್ಗೆ-ಸಂಜೆ ಪ್ರಸಾರ-ಮರುಪ್ರಸಾರಗಳನ್ನು ಮಾಡುವ ಬದಲು ಮಾಹಿತಿಪೂರ್ಣ, ಅರ್ಥಪೂರ್ಣ, ಮನೋವಿಕಾಸಕ್ಕೆ ಸಹಾಯವಾಗುವಂತಹ ಧಾರಾವಾಹಿಗಳ ಅವಶ್ಯಕತೆ ಹೆಚ್ಚಿದೆ. ಪರೀಕ್ಷೆಗಳ ಪೂರ್ವಸಿದ್ಧತೆ, ಮನೋಸಂತುಲನ ಇತ್ಯಾದಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗಾಗಿ ಪ್ರಸಾರವಾಗುತ್ತದೆ. ನನ್ನ ಅನಿಸಿಕೆಯ ಪ್ರಕಾರ ಆ ಅಂತಹ ಕಾರ್ಯಕ್ರಮಗಳ ಅಗತ್ಯ ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ಇದೆ!

ಹೇಗೆ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಓದಿಸಬಾರದು, ಹೇಗೆ ಅವರ ಮೇಲೆ ಹೇರಿಕೆ ತರಬಾರದು, ಹೇಗೆ ಮನೆಯ ಎಲ್ಲ ಚಟುವಟಿಕೆಗಳನ್ನು ಬಂದ್ ಮಾಡಿ ಅವರನ್ನು ಪುಸ್ತಕದ ಪುಟಗಳೊಳಗೆ ತುರುಕಬಾರದು ಎಂಬಿತ್ಯಾದಿ ಟ್ರೈನಿಂಗ್ ಇಂದಿನ ದಿನಪಾನಗಳಲ್ಲಿ ಪೋಷಕರಿಗೆ ಹೆಚ್ಚು ಅಗತ್ಯ. ಅಮೀರ್ ಖಾನ್ ನ ನಿರ್ದೇಶನದ ‘ತ್ರೀ ಈಡಿಯಟ್ಸ್’ ಮತ್ತು ‘ತಾರೆ ಜಮೀನ್ ಪರ್’ ಎಂಬ ಸಿನೆಮಾಗಳ ಆಶಯ, ಉದ್ದೇಶ ಹೆಚ್ಚು ಚರ್ಚೆಯಾಗಬೇಕು. ತ್ರೀ ಇಡಿಯಟ್ಸ್ ನಲ್ಲಿ ಅಮೀರ್ ಖಾನ್, ಮಾಧವನ್ ಎಷ್ಟು ಬಾರಿ ಚಡ್ಡಿ ಬಿಚ್ಚಿದರು ಎಂಬ ವಿಷಯ ನಮಗೆ ಮುಖ್ಯವಾಗಿಬಿಡುತ್ತದೆಯೇ ಹೊರತು ಅದರ ಮುಖ್ಯ ಉದ್ದೇಶ ತೇಲಿಸಿಬಿಡುತ್ತದೆ.
ಮಗುವಿಗೆ ಪರೀಕ್ಷೆಗಳು ನಮ್ಮ ಜೀವನದ ದಿಕ್ಕಿನಲ್ಲಿ ಕಾಣಸಿಗುವ ರಸ್ತೆ ನಡುವಿನ ಹಂಪುಗಳಷ್ಟೇ, ರಸ್ತೆಯ ದಿಕ್ಕನ್ನು ಅವು ಬದಲಾಯಿಸಲಾರವು ಎಂಬ ಮನವರಿಕೆಯನ್ನು ಮಾಡಿಸುವ ಜವಾಬ್ದಾರಿ ಪೋಷಕರಾದ ನಮ್ಮ ಮೇಲಿದೆ. “ಪರೀಕ್ಷೆ ಬಂತು” ಎಂಬ ವಿಷಯವನ್ನೇ ನಮ್ಮ ಮುಂದಿನ ಜೀವನದಾಪತ್ತು ಎಂಬಂತೆ ನಮ್ಮ ಸುತ್ತಲಿನ ಪರಿಸರ ಅವರ ಮನದಲ್ಲಿ ಸೃಷ್ಟಿಸುತ್ತದೆ. ಇದು ಅನವಶ್ಯಕ. ಡಾಕ್ಟರ್ ಆಗು, ಇಂಜಿನೀರ್ ಆಗು ಎಂಬ ಎರಡು ದಾಳಗಳನ್ನೆಸೆದು ನಾವು ಇಂದು ಮಕ್ಕಳೊಂದಿಗೆ ಆಡುತ್ತಿದ್ದೇವೆ. ಇದು ಬಹುಪಾಲು ನಗರಗಳ ಇಂದಿನ ಅಪಾಯಕಾರಿ ಬೆಳವಣಿಗೆ.
ಶಿಕ್ಷಣ, ಜೀವನದ ಪರಿಕಲ್ಪನೆಗಳನ್ನು ಮೊದಲು ಪೋಷಕರು ಅರಿತುಕೊಳ್ಳಬೇಕು. ಅದರ ನಂತರವೇ ಅದು ಮಕ್ಕಳಿಗೆ ನಿರಾತಂಕವಾಗಿ ರವಾನೆಯಾಗಬೇಕು. ಈ ಬದುಕಿನ ಸೈಕಾಲಜಿಯನ್ನು ಆದಷ್ಟು ಬೇಗ ಎಲ್ಲ ಪೋಷಕರು ಅರಿತುಕೊಳ್ಳಲಿ ಎಂದು ಬಯಸುತ್ತಾ, ಇತ್ತೀಚೆಗೆ ಬಿಡುಗಡೆಯಾದ ಸುಪ್ರೀಂ ಕೋರ್ಟ್ ನ ತೀರ್ಪಿಗೆ ಬೆರಗಾಗುತ್ತಾ, ಪರೀಕ್ಷೆಯೇ ಜೀವನವೆಂದು ಬಗೆದು ಪ್ರಾಣ ತ್ಯಜಿಸಿದ ಆ ಮಗು ತೇಜಸ್ವಿನಿ ಮತ್ತು ಆ ತೇಜಸ್ವಿನಿಯಂತಹ ಇನ್ನೂ ಅಸಂಖ್ಯಾತ ಮುಗ್ಧ ಮನಸುಗಳನ್ನು ನೀರೆರೆದು ಪೋಷಿಸಿ ಬೆಳೆಸುವ ವಿವಿಧ ಮಾನವೀಯ ಮೌಲ್ಯಗಳನ್ನು ಹುಡುಕುತ್ತಾ, ಈ ಲೇಖನಕ್ಕೆ ಒಂದು “ಅಲ್ಪವಿರಾಮ” ಹಾಕುತ್ತೇನೆ. ಪ್ರತಿವರ್ಷವೂ ಪರೀಕ್ಷೆಯ ಫಲಿತಾಂಶಗಳ ನಂತರ ಕೇಳ್ಪಡುವ ಈ ಮಕ್ಕಳ ಆತ್ಮಹತ್ಯಾ ಪ್ರಕರಣಗಳು ನಮ್ಮಲ್ಲಿ ಒಂದು ಅಲಾರಂ ಹೊಡೆಯಲಿ. ಇದರ ನಿರ್ಮೂಲನೆಯ ಜವಾಬ್ದಾರಿಯನ್ನು ನಾವಿಂದು ಹೊರೋಣ. ನಮ್ಮ ಮನೆಯ ಮಗುವಿಗೆ ಓದಿನ ಬಗೆಗೆ ಒತ್ತಡ ಹೇರದೆ ಈ ನಿರ್ಮೂಲನಾ ಕಾರ್ಯದ ಹಾದಿಯತ್ತ ಮೊದಲ ಹೆಜ್ಜೆ ಹಾಕೋಣ.

‍ಲೇಖಕರು G

May 10, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. ಆನಂದತೀರ್ಥ ಪ್ಯಾಟಿ

  ಚಿಂತನೆಗೆ ಹಚ್ಚುವ ಬರಹ.

  ಪ್ರತಿಕ್ರಿಯೆ
 2. ಪು.ಸೂ.ಲಕ್ಷ್ಮೀನಾರಾಯಣ ರಾವ್

  ಆಡಿ ಬಾ ನನ ಕಂದ ಅಂಗಾಲ ತೊಳೆದೇನು
  ತೆಂಗಿನಕಾಯಿ ತಿಳಿನೀರ ತಕ್ಕೊಂಡು -ಬಂಗಾರ
  ಮಾರಿ ತೊಳೆದೇನು .
  ಇನ್ನೊಂದು ಜನಪದ ತ್ರಿಪದಿಯಲ್ಲಿ ‘ ಮಗುವಿನ ಕುಶಲದ ಗೆಜ್ಜಿ ಕೆಸರಾಗ ‘ ಅಂತ ಅನಕ್ಷರಸ್ಥ ಮಹಿಳೆ ಹೇಳಿರುವುದನ್ನು ನಾವು ನೋಡುತ್ತೇವೆ. ‘ಬಾಲಸ್ತಾವತ್ ಕ್ರೀಡಾಸಕ್ತಃ ‘ ಎಂಬ ಶಂಕರಾಚಾರ್ಯರ ಮಾತು ಸಹ ಇಲ್ಲಿ ಉಲ್ಲೇಖಾರ್ಹ . ಆಡುವ ಈ ಸುವರ್ಣದ ಕಾಲವನ್ನು ಕೊಲೆ ಮಾಡಿ ಎ ಬಿ ಸಿ ಡಿ ಹೇಳಿಸುವ ಹುಚ್ಚು ಇಂದಿನ ಮುಗ್ಧ ತಾಯಂದಿರದು .
  ಧನಾರ್ಜನೆಯೇ ವ್ಯಕ್ತಿಯ ಬಲು ದೊಡ್ಡ ಸಾಧನೆ ಎಂಬ ಭ್ರಮೆ . ಹೀಗಾಗಿ ಮಗುವಿನ ಸುಪ್ತ ಪ್ರತಿಭೆ ಅಥವಾ ಶಕ್ತಿಗಳನ್ನು ಅರಿತುಕೊಂಡು ಅದನ್ನು ಮುನ್ನಡೆಸುವಲ್ಲಿ ಸೊಲುತ್ತಾರೆ. ಭವಿಷ್ಯದ ಭಯದಲ್ಲಿ ಎಳೆಯರ ಬದುಕನ್ನೇ ಬರ್ಬರ ಮಾಡುತ್ತಿದ್ದೇವೆ . ಪೋಷಕರ ಈ ಆತಂಕವನ್ನು ಶಿಕ್ಷಣ ನೀಡುವ ನೆಪದಲ್ಲಿ ನಾನಾ ನಾಟಕಗಳನ್ನು ಮಾಡುತ್ತಾ ದುರ್ಲಾಭ ಮಾಡಿಕೊಳ್ಳುತ್ತಿದ್ದಾರೆ ಅನೇಕ ಸಂಸ್ಥೆಗಳವರು. ಆದ್ದರಿಂದಲೇ ಡಾ . ಕೆ ಶಿವರಾಮ ಕಾರಂತರು ಆಂಗ್ಲ ಮಾಧ್ಯಮ ಶಾಲೆಗಳನ್ನು ‘ಸೆರೆಮನೆಗಳು ‘,’ಕಸಾಯಿಕಾನೆಗಳು ‘ ಎಂದು ಕರೆದಿರುವುದು .

  ಪ್ರತಿಕ್ರಿಯೆ
 3. santosh

  ತುಂಬಾ ಒಳ್ಳೆಯ ಬರಹ..
  ವಿಪರ್ಯಾಸ ಎಂದರೆ ಆಸಕ್ತಿಯಿಂದ ನೋಡಲು ಪಟ್ಟಣದಲ್ಲಿ ಬೇಲಿಯೂ ಇಲ್ಲ ಹುಳಗಳೂ ಇಲ್ಲ..
  ಇಲ್ಲಿರೋದು ಬರೇ ಕಲ್ಲು ಮತ್ತು ಸಿಮೆಂಟು.. ಏನನ್ನಾದರು ನೋಡಬೇಕು ಎಂದರೆ ಟಿವಿಯಲ್ಲೇ ನೋಡಬೇಕು..
  ಶಿಕ್ಷಣದ ಈತರಹದ ಹೇರಿಕೆ ಹಳ್ಳಿಗಳಿಗಿಂತ ಪಟ್ಟಣದಲ್ಲೇ ಹೆಚ್ಚು…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: