ಸಂಪು ಕಾಲಂ : ಸಿಗ್ಮಂಡ್ ಫ್ರಾಯ್ಡ್ ಮತ್ತು ನಮ್ಮ ಪುರಾಣ ಕಥೆಗಳು


ಸುಮಾರು ಆರೇಳು ವರ್ಷವಿರಬಹುದು ನನಗೆ, ಆಗ ಅರಬ್ಬೀ ಸಮುದ್ರದ ತೀರದಲ್ಲಿ ಮರಳಗೂಡು ಮಾಡಿದ್ದು, ಅಲೆಗಳನ್ನು ಅಟ್ಟಿಸಿಕೊಂಡು ಹೋದದ್ದು, ತಾತ ಕೊಡಿಸಿದ ತಾಟೀನುಂಗು ತಿಂದದ್ದು, ಇವೆಲ್ಲಾ ಮಸುಕು ನೆನಪು. ಅಂದು ಅಚ್ಚಳಿಯದೆ ನಿಂತು ಬಿಟ್ಟ ಸಮುದ್ರದ ಸ್ನೇಹ, ಪ್ರೀತಿ ಇಂದಿಗೂ ನನ್ನನ್ನು ಸೆಳೆಯುತ್ತದೆ. ದಶಕಗಳ ನಂತರ ಮತ್ತೆ ಅರಬ್ಬೀ ಸಮುದ್ರದ ಒಂದು ಭಾಗವನ್ನು ನೋಡಹತ್ತಿದ್ದೆ. ನಮ್ಮ ಹಳೆಯ ಸ್ನೇಹ ಇಮ್ಮಡಿಯಾಯಿತು. ವಿವೇಕಾನಂದ ರಾಕ್ ನಿಂದ ಅರಬ್ಬೀ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳ ತ್ರಿವೇಣಿ ಸಂಗಮ ಕಾಣಸಿಗುತ್ತದೆ. ಅದೊಂದು ಮನಮೋಹಕ ನೋಟ! ಅರಬ್ಬೀ ಸಮುದ್ರ ಕೊಂಚ ಹಳದಿ ಮಿಶ್ರಿತ ನೀಲಿಯಾಗಿದ್ದೂ ಬಂಗಾಳ ಕೊಲ್ಲಿ ಕೆಂಪು ಮಿಶ್ರಿತ ನೀಲಿಯಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ನಡುವೆ ಒಂದು ಗೆರೆಯಂತೆ ಕಾಣುತ್ತದೆ.
ದೂರದಲ್ಲಿ ನಿಂತು ಆ ಸಮುದ್ರದ ಚೆಂದವನ್ನು ನೋಡುವುದೇ ಒಂದು ಆನಂದ. ಒಂದೊಮ್ಮೆ ಕೇಕೆ ಹಾಕಿ ನಗುವ ಮಗುವಂತೆ ಮತ್ತೊಮ್ಮೆ ಗಾಂಭೀರ್ಯದ ಮಡುವಿನಂತೆ! ಆ ಸಮುದ್ರದ ವಿಸ್ತಾರ, ಘನತೆ, ಗಾಂಭೀರ್ಯಗಳು ನಾನು ಗೌರವಿಸುವ ಹಿರಿಯರನ್ನೆಲ್ಲ ಕಣ್ಣ ಮುಂದೆ ತಂದು ನಿಲ್ಲಿಸಿತ್ತು. ಸಾಕಷ್ಟು ಜೀವನಾನುಭವವುಳ್ಳ ಹಿರಿಯ ತನ್ನ ಮೈಯೆಲ್ಲಾ ಮೌನದ ಘನವಾಗಿಸುವಂತೆ, ಏನೋ ತಿಳಿಯಲಾರದಷ್ಟು ಗುಟ್ಟುಗಳು ಒಳಗವುಚಿಟ್ಟುಕೊಂಡಂತೆ ಭಾಸವಾದದ್ದು ಈ ಸಮುದ್ರದ ನಿಲ್ಲದ ಅಲೆಗಳು ಮತ್ತು ಅದರ ಅಗಾಧತೆಯನ್ನು ಕಂಡಾಗ. ತಿಳಿಯದ ಆಪ್ಯಾಯತೆ, ಗೌರವಗಳನ್ನು ಆ ಸಮುದ್ರ ಬರಸೆಳೆದಿತ್ತು. “ಸುನೀಲ, ವಿಸ್ತರ, ತರಂಗ ಶೋಭಿತ…” ಸಾಲುಗಳ ರಿಂಗಣ ಮನದಲ್ಲಿ. ಒಂದೆಡೆ ನೀರಿನ ನಡುವಿನ ಒಂದು ಪುಟ್ಟ ಬಂಡೆಗೆ ಸಣ್ಣ ಬಾವುಟ ನೆಟ್ಟಿದ್ದರು. ಅಲ್ಲಿಗೆ ಕರೆದೊಯ್ದ ನಮ್ಮ ಟೂರ್ ಮ್ಯಾನೇಜರ್, “ಈ ಕ್ಷಣ ನಾವು ಭಾರತದ ದಕ್ಷಿಣದ ತುತ್ತ ತುದಿಯಲ್ಲಿದ್ದೇವೆ” ಎಂದಾಗ ಆದ ಪುಳಕ ಹೇಳತೀರದು.
ಅಲ್ಲೇ ಒಂದು ಮಂಟಪದ ಒಳಗಿದ್ದ ವಿವೇಕಾನಂದ ವಿಗ್ರಹ ಮೌನ ತಪಸ್ವಿಯ ಮರುಸೃಷ್ಟಿಯಂತೆ ಕಂಡಿತ್ತು. ಆದರೂ ಹೊರಗಿರುವ ಸೆಳೆತ ಆ ವಿಗ್ರಹದ ಆವರಣವಾಗಲೀ, ಅಲ್ಲೇ ಇದ್ದ ಧ್ಯಾನ ಮಂದಿರವಾಗಲೀ ತೋರಲಿಲ್ಲ. ಆ ಮಂದಿರಗಳು, ಕಟ್ಟಡಗಳು ತಪಸ್ವಿಯಂತೆ ನಿಂತ ಆ ವಿವೇಕಾನಂದ ಮೂರ್ತಿಗೆ ಸಿಗುವ ಅಡೆತಡೆಗಳು ಎನಿಸಿದ್ದವು. ಎಷ್ಟೇ ಆದರೂ ಮಾನವ ನಿರ್ಮಿತ! “ಪ್ರಕೃತಿಯ ಹಿರಿತನಕೆ ನೀ ಸಾಟಿಯೇನು?”
ವಿವೇಕಾನಂದ ಮಂಟಪದ ಎದುರು ಬಂಡೆಯೊಂದರ ಮೇಲೆ ಕನ್ಯಾಕುಮಾರಿಯ ಪಾದದ ಗುರುತಿರುವ ಮಂಟಪವೊಂದಿದೆ. ಇದಕ್ಕೊಂದು ಕಥೆ:
ಭರತನೆಂಬ ರಾಜನಿಗೆ ಎಂಟು ಜನ ಗಂಡು ಮಕ್ಕಳು ಮತ್ತು ಒಬ್ಬ ಮಗಳು. ಆಕೆಯ ಹೆಸರು ಕುಮಾರಿ. ಆ ರಾಜ ತನ್ನ ಆಸ್ತಿಯನ್ನು ತನ್ನೆಲ್ಲ ಮಕ್ಕಳಿಗೆ ಸಮಪಾಲಾಗಿ ಹಂಚಿದಾಗ ಇಂದಿನ ಕನ್ಯಾಕುಮಾರಿ ಭೂಭಾಗ ಕುಮಾರಿಯ ಪಾಲಿಗೆ ಬಂತು. ಆದ್ದರಿಂದಲೇ ಈ ಪ್ರದೇಶಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂತೆಂಬ ಪ್ರತೀತಿ. ದೇವಿ ಪರಾಶಕ್ತಿ ಈ ಪ್ರದೇಶದಲ್ಲಿ ಬಂದು ತಪಸ್ಸು ಮಾಡುತ್ತಿದ್ದಳಂತೆ, ಆಗ ಪರಶುರಾಮನು ಆ ದೇವಿಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದ.
ರಾಕ್ಷಸರ ಅಟ್ಟಹಾಸ ಮೂಲೋಕದಲ್ಲೂ ಹಾವಳಿ ಮಾಡಿತ್ತು. ಅಸುರರಾಜನಾದ ಬಾಣಾಸುರನ ಕಾಟ ತಾಳಲಾರದೆ ಭೂಮಾತೆಯು ಶ್ರೀ ಮಹಾವಿಷ್ಣುವಿನ ಮೊರೆ ಹೊಕ್ಕಳು. ದೇವಿ ಪರಾಶಕ್ತಿಯೇ ಆ ರಾಕ್ಷಸನನ್ನು ಹತಗೊಳಿಸುವುದಾಗಿ ಹೇಳುತ್ತಾನೆ. ಆಗ ದೇವಿಯು ಕನ್ಯಾ ವೇಷದಲ್ಲಿ ಭೂಲೋಕವನ್ನು (ಕನ್ಯಾಕುಮಾರಿ) ತಲುಪಿದಳು. ಶುಚೀಂದ್ರಂನಲ್ಲಿ ನೆಲೆಸಿರುವ ಪರಶಿವನು ಈ ಕನ್ಯೆಯ ರೂಪ-ಸೌಂದರ್ಯಕ್ಕೆ ಮಾರು ಹೋಗಿ ಮದುವೆಯಾಗೆಂದು ಕೋರುತ್ತಾನೆ. ಅದಕ್ಕೆ ಆಕೆ ಒಪ್ಪುತ್ತಾಳೆ. ಈ ಮದುವೆಯಿಂದ ಕನ್ಯೆಯಿಂದಲೇ ಹತನಾಗಬಲ್ಲ ಬಾಣಾಸುರನ ವಧೆ ತಪ್ಪಿ ಹೋಗುತ್ತದೆ ಎಂದು ಅರಿತ ನಾರದ ಕಳವಳಗೊಳ್ಳುತ್ತಾನೆ. ಮದುವೆಯ ದಿನ ಶಿವನು ಕನ್ಯಾಕುಮಾರಿಯತ್ತ ಹೊರಟಿದ್ದ, ಅದರ ಹತ್ತಿರವೇ ಇದ್ದ ವಶುಕ್ಕಂಪಾರೆಯನ್ನು ತಲುಪಿದ. ಸಿಕ್ಕ ಸಮಯವನ್ನು ಬಿಡದೆ ನಾರದನು ಕೊಳಿಯಾಗಿ ಬೆಳಗಾಯಿತೆಂಬಂತೆ ಕೂಗಿದನು. ಇದನ್ನು ಕೇಳಿದ ಪರಶಿವ ಮುಹೂರ್ತ ಮೀರಿಹೋಗಿದೆ ಎಂದು ಬಗೆದು ಶುಚೀಂದ್ರಂಗೆ ಮರಳುತ್ತಾನೆ. ಈ ಘಟನೆಯಿಂದ ಮನನೊಂದ ದೇವಿಯು, ತಾನು ಅದೇ ಸ್ಥಳದಲ್ಲೇ ಎಂದೆಂದಿಗೂ ಕನ್ಯೆಯಾಗಿಯೇ ಉಳಿಯುವುದಾಗಿ ನಿರ್ಧಾರ ಮಾಡಿಬಿಡುತ್ತಾಳೆ. ಮದುವೆಗಾಗಿ ಮಾಡಿದ ವಿವಿಧ ಭಕ್ಷಗಳು ಮರಳಾಗಿ ಬದಲಾಯಿತು. ಮರಳ ಹರಳು ಚಿಕ್ಕ ಚಿಕ್ಕ ಅಕ್ಕಿ ಕಾಳಂತೆ ಇಂದಿಗೂ ಇದೆ ಎಂಬುದು ಪ್ರತೀತಿ. ಬಾಣಾಸುರ ಆ ದೇವಿಯ ಸೌಂದರ್ಯಕ್ಕೆ ಮಾರುಹೋಗಿ, ಆಕೆಯನ್ನು ಮದುವೆಯಾಗು ಎಂದು ಬೇಡುತ್ತಾನೆ. ಅದಕ್ಕೆ ಒಪ್ಪದ ದೇವಿಯ ಮೇಲೆ ಅತ್ಯಾಚಾರವೆಸಗಲು ಹೊರಟ ಬಾಣಾಸುರನನ್ನು ಆಕೆ ವಧಿಸುತ್ತಾಳೆ. ನಂತರ ತನ್ನ ತಪಸ್ಸನ್ನು ಮುಂದುವರೆಸುತ್ತಾಳೆ. ಆಕೆ ತಪಸ್ಸು ಮಾಡುವಾಗ ಆಕೆಯ ಕುರುಹಾಗಿ ಆಕೆಯ ಕಾಲ್ಗುರುತು ಆ ಬಂಡೆಯ ಮೇಲೆ ನೆಲೆಸಿಬಿಡುತ್ತದೆ. “ಅದೇ ಗುರುತನ್ನೇ ನಾವು ನೋಡುತ್ತಿರುವುದು” ಎಂದು ಕೇಳಲ್ಪಟ್ಟಾಗ ಕಥೆಯೂ, ಚರಿತ್ರೆಯೂ ಒಂದಾಗಿಬಿಡುವ ಇಂತಹ ಪುರಾಣಗಳ ರೂಟ್ ತಿಳಿಯಬೇಕು ಎಂಬ ತುಡಿತ ಹೆಚ್ಚಾಯಿತು.
ಸುಮಾರು ಹೊತ್ತು ಆ ಪುಟ್ಟ ದ್ವೀಪದಲ್ಲೇ ಕೂತು ಕಾಲಕಳೆದೆವು. ನಂತರ ಫೆರ್ರಿನಲ್ಲಿ ಮರಳಿ ದೇವೀ ದೇವಸ್ಥಾನಕ್ಕೆ ನಮ್ಮ ದಾರಿ ಸಾಗಿತು. ಈ ದೇವಸ್ಥಾನ ಬಹಳ ಪುರಾತನವಾದದ್ದು. ಬಲರಾಮ, ಅರ್ಜುನರೂ ಯಾತ್ರಾರ್ತಿಗಳಾಗಿ ಇಲ್ಲಿಗೆ ಬಂದಿದ್ದರು ಎಂಬ ಮಹಾಭಾರತದ ಕಥೆ ಇದೆ. ದಕ್ಷಿಣ ಭಾರತದ ಇಡೀ ಪ್ರವಾಸದಲ್ಲಿ ಬಹುಶಃ ಈ ದೇವಿಯ ವಿಗ್ರಹವೇ ನನ್ನ ಕಣ್ಣಿಗೆ ಸುಂದರವಾಗಿ ಕಂಡದ್ದು. ವಿಗ್ರಹಕ್ಕಿಂತಲೂ ಸುಂದರವಾಗಿದ್ದದ್ದು ಆಕೆಯ ಹೊಳೆಯುವ ಮೂಗುತಿ.
ದೇವಾಲಯದಿಂದ ಹೊರಟ ನಾವು ಸೂರ್ಯಾಸ್ತಮಾನವನ್ನು ನೋಡಲು ಕಾತುರದಿಂದ ಕಾದಿದ್ದೆವು. ಆದರೆ ವರುಣ ರಾಯನು ನಮ್ಮ ಆಸೆಯನ್ನು ನೀರು ಪಾಲಾಗಿಸಿದ. ಧೋ ಎಂಬ ಮಳೆಯಲ್ಲೇ ಗಾಂಧೀ ಸ್ಮಾರಕಕ್ಕೆ (ಮಹಾತ್ಮಾ ಗಾಂಧೀಜಿಯವರ ಆಸ್ತಿಗಳನ್ನು ವಿಸರ್ಜನಕ್ಕೆ ಮುಂಚೆ ಈ ಸ್ಥಳದಲ್ಲಿ ಇಟ್ಟಿದ್ದರಂತೆ) ಹೋಗಿ, ಅದರ ಎತ್ತರದ ಕಟ್ಟಡದ ತುದಿಗೆ ತಲುಪಿದೆವು. ಮಳೆ, ಗಾಳಿಗೆ ಆನಂದಗೊಂಡ ಆ ಸಮುದ್ರ ಸಂತೋಷವಾಗಿ ನರ್ತಿಸುತ್ತಿತ್ತು. ಕಣ್ಣಿಗೆ ಹಬ್ಬ. ಜನಜಂಗುಳಿಯಿಂದ ತುಸು ದೂರ ನಡೆದು ಒಂದು ಏಕಾಂತ ಸ್ಥಳದಲ್ಲಿ ನಿಂತು ಮನತನಿವಷ್ಟು ಹೊತ್ತು ಆ ದೃಶ್ಯವನ್ನು ರಮಿಸಿದೆ, ಕಣ್ತುಂಬಿಸಿಕೊಂಡೆ! ಒಟ್ಟಿನಲ್ಲಿ ಕನ್ಯಾಕುಮಾರಿ ಒಂದು ಮರೆಯಲಾರದ ಅನುಭೂತಿಯನ್ನು ಪ್ರಸಾದಿಸಿತು, ಪ್ರವಾಸದ ಮೂಲ ಉದ್ದಿಶ್ಯ ಸಾರ್ಥಕವಾಗಿತ್ತು. ಕನ್ಯಾಕುಮಾರಿಯಲ್ಲೇ ರಾತ್ರಿ ತಂಗಿದ್ದೆವು ಆದರೂ ಸೂರ್ಯೋದಯವೂ ನಮಗೆ ಪ್ರಾಪ್ತವಾಗಲಿಲ್ಲ. ನಂತರ ನಮ್ಮ ಬಸ್ ಸುಚೀಂದ್ರಂನತ್ತ ಸಾಗಿತ್ತು.

ಸುಚೀಂದ್ರಂ ದೇವಸ್ಥಾನ ಅದರದ್ದೇ ಆದ ಒಂದು ಸೊಬಗನ್ನೂ, ವೈಚಿತ್ರ್ಯವನ್ನೂ ಹೊಂದಿದೆ. ಎಳೆಯೆಳೆಯಾಗಿ ಹರಡಿಕೊಂಡಿರುವ ಈ ದೇವಸ್ಥಾನ ಪ್ರತಿ ಹೆಜ್ಜೆಗೂ ಒಂದೊಂದು ರೋಮಾಂಚಕಾರೀ ಪುರಾಣ ಕಥೆ, ಇವು ಸುಚೀಂದ್ರಂನ ವೈಶಿಷ್ಟ್ಯ. ಈ ದೇವಸ್ಥಾನ ಸಹ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದು. ಸುವಿಸ್ತಾರವಾಗಿ ಹರಡಿಕೊಂಡಿರುವ ಈ ದೇವಾಲಯದ ಶಿಲ್ಪಕಲೆ ಬಣ್ಣಿಸಲಸದಳ! ಇತರ ದೇವಾಲಯಗಳಿಗೆ ಹೊರತಾಗಿ ಈ ದೇವಾಲಯದಲ್ಲಿ ಅನೇಕ ವಿಶಿಷ್ಟ ಕಲಾಕೃತಿಗಳಿವೆ. ಹೆಣ್ಣು ಗಣಪತಿಯಾದ “ವಿನಾಯಕಿ” ವಿಗ್ರಹ, ಸಂಗೀತ ಕಂಬಗಳು (ಸಪ್ತಸ್ವರ ಕಂಬಗಳು ಮತ್ತು ತಬಲಾ, ಘಟ, ಜಲತರಂಗ್ ಗಳನ್ನು ಉಲಿವ ಕಂಬಗಳು), ಸತಿ ಅನುಸೂಯಾ ಮರ ಮತ್ತು ಸತ್ಯ ದೇವತೆ. ಈ ಸತ್ಯ ದೇವತೆಯ ವಿಗ್ರಹದ ಒಂದು ಕಿವಿಯಿಂದ ಕಡ್ಡಿಯೊಂದನ್ನು ತೂರಿದರೆ ಅದು ಮತ್ತೊಂದು ಕಿವಿಯಿಂದ ಹೊರಬರುತ್ತದೆ. ಪಾರದರ್ಶಕತೆಯ ನೀತಿಯನ್ನು ಬೋಧಿಸುವ ಈ ವಿಗ್ರಹವನ್ನು ಯಾವ ಶಿಲ್ಪಿ ತಯಾರಿಸಿದ್ದನೋ!
ಈ ದೇವಾಲಯದ ಕಂಬ ಕಂಬವೂ ಒಂದೊಂದು ಪುರಾಣ ಕಥೆ ಹೇಳುತ್ತದೆ.
ಒಂದಾನೊಂದು ಕಾಲದಲ್ಲಿ ಮಳೆ ಬೆಳೆ ಎಲ್ಲಾ ಸಮೃದ್ಧವಾಗಿದ್ದ ಸ್ಥಳದಲ್ಲಿ ಎಷ್ಟೋ ದಿನಗಳು ಮಳೆರಾಯ ಬರದೆ ಮುನಿಸುಕೊಂಡಿದ್ದನಂತೆ. ಆ ಊರಿನ ಜನ ಹತ್ತಿರವಿದ್ದ ಕಾಡಿನಲ್ಲಿ ಅತ್ರಿ ಮಹಾಮುನಿ ಮತ್ತು ಅನುಸೂಯಾ ಇದ್ದದ್ದನ್ನು ತಿಳಿದು, ತಮ್ಮ ಕ್ಷಾಮದ ಪರಿಹಾರಕ್ಕೆ ಅವರ ಸಹಾಯ ಕೋರಿದರಂತೆ. ಆಗ ಅತ್ರಿ ಮುನಿ ತಪಸ್ಸು ಮಾಡಿ ದೇವರನ್ನೊಲಿಸಲು ಹೊರಟ. ಆತ ಹೋಗುವ ಮುನ್ನ ಅನುಸೂಯೆಯು ಆತನ ಪಾದ ತೊಳೆದು, ಆ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳುತ್ತಾಳೆ (!). ಆ ನೀರು ಅತ್ರಿ ಆಕೆಗೆ ಮಾಡಿದ ಆಶೀರ್ವಾದ ಎಂಬುದು ಅವಳ ನಂಬಿಕೆ. ಸಾಕಷ್ಟು ಸಮಯದ ಘೋರ ತಪಸ್ಸಿನ ನಂತರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರತ್ಯಕ್ಷರಾಗಿ “ಇದು ಇಂದ್ರನಿಗೆ ಗೌತಮನಿಂದ ದೊರೆತ ಶಾಪ” ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಬಿಡುತ್ತಾರೆ. ಆದರೂ ಪಟ್ಟು ಬಿಡದೆ ಅತ್ರಿ ತಪಸ್ಸನ್ನು ಮುಂದುವರೆಸುತ್ತಾನೆ.
ಇತ್ತ ಅತ್ರಿಯ ಕರೆಗೆ ಓಗೊಡಲಾಗದೆ ತ್ರಿಮೂರ್ತಿಗಳು ಮಂಕಾಗಿ ಕೂರುತ್ತಾರೆ. ಆಗ ನಾರದನು ಹೇಗಾದರೂ ಮಾಡಿ ಅತ್ರಿಯ ತಪಸ್ಸನ್ನು ಭಂಗಗೊಳಿಸಬೇಕು ಎಂದು ಬಗೆದು ಒಂದು ದೊಡ್ಡ ಷಡ್ಯಂತ್ರ ರಚಿಸುತ್ತಾನೆ. (ಬಹುಶಃ ಇಂದಿನ ಎಲ್ಲಾ ರಾಜಕಾರಣಿಗಳೂ ಈ ನಾರದ ವಂಶದವರೇ ಇರಬೇಕು. ಆದರೆ ಇಂದಿನ “ನಾರದ”ರ ಡಿ.ಎನ್.ಎ ಲಿ ಒಂದೇ ಒಂದು ವ್ಯತ್ಯಾಸ ಏನಪ್ಪಾ ಅಂದರೆ, ಇವರು ಲೋಕ ಕಲ್ಯಾಣದ ಬದಲಾಗಿ ತಮ್ಮ ಸ್ವ-ಕಲ್ಯಾಣಕ್ಕಾಗಿ ಕುತಂತ್ರಗಳನ್ನು ಮಾಡುವವರು!). ಕೆಲವು ಕಬ್ಬಿಣದ ಕಡಲೆಗಳನ್ನು ತೆಗೆದುಕೊಂಡು ಅನುಸೂಯೆಯ ಬಳಿ ಬಂದು “ಇವನ್ನು ಬೇಯಿಸಿಕೊಡು” ಎಂದು ಕೇಳಿದಾಗ, ಆತ ನಾರದನೆಂದು ಅರಿತ ಅನುಸೂಯೆ, ಅತ್ರಿ ಮುನಿಯ ಪಾದಸ್ಪರ್ಶೀ ನೀರನ್ನು ಪ್ರೋಕ್ಷಿಸಿ, ಆ ಕಬ್ಬಿಣದ ಕಡಲೆಗಳನ್ನು ಬೇಯಿಸಿಕೊಡುತ್ತಾಳೆ. ಆಶ್ಚರ್ಯಾನಂದಗಳಿಂದ ನಾರದ ಹೊರಟು, ನೇರ ತ್ರಿಮೂರ್ತಿಗಳ ಧರ್ಮಪತ್ನಿಯರ ಬಳಿಗೆ ತೆರಳುತ್ತಾನೆ. ಅದೇ ಕಬ್ಬಿಣದ ಕಡಲೆಗಳನ್ನು ಅವರಲ್ಲಿ ಕೊಟ್ಟು, “ಇವನ್ನು ಬೇಯಿಸಿಕೊಡಿ” ಎಂದು ಕೇಳಿದಾಗ, ಅವರೆಲ್ಲಾ ನಕ್ಕು ಬಿಡುತ್ತಾರೆ. ನಂತರ ನಾರದ ಅವರನ್ನೇ ನೋಡಿ ನಕ್ಕು, “ಪಾತಿವ್ರತ್ಯದ ಮಹಿಮೆ ನಿಮಗೇನು ಗೊತ್ತು, ಭೂಲೋಕದ ಅನುಸೂಯಾಳನ್ನು ನೋಡಿ, ಆಕೆ ಈ ಕೆಲಸ ಮಾಡಬಲ್ಲಳು” ಎಂದು ತುಪ್ಪ ಸುರಿಯುತ್ತಾನೆ. ತನ್ನ ಅಭಿಮಾನ, ಪಾತಿವ್ರತ್ಯಕ್ಕೆ ಧಕ್ಕೆ ತಂದ ಆ ಅನುಸೂಯಳ ಮೇಲಿನ ಅಸೂಯೆಯಿಂದ, ತಮ್ಮ ಗಂಡಂದಿರಾದ ತ್ರಿಮೂರ್ತಿಗಳ ಬಳಿಗೆ ಹೋಗಿ, ಆಕೆಯ ಪಾತಿವ್ರತ್ಯವನ್ನು ಭಂಗಗೊಳಿಸಿ ಎಂದು ಬೊಬ್ಬೆ ಹಾಕುತ್ತಾರೆ.
ಸಾಧುಗಳ ವೇಷ ಹೊತ್ತು ತ್ರಿಮೂರ್ತಿಗಳು ಅನುಸೂಯಳ ಬಳಿ ಭಿಕ್ಷೆಗಾಗಿ ಬರುತ್ತಾರೆ. ಸಾಧುಗಳು ಅಥಿತಿಯಾಗಿ ಬಂದರು ಎಂದು ಸಂತೋಷಗೊಂಡು ಅನುಸೂಯೆ ಅವರಿಗಾಗಿ ಭೋಜನವನ್ನು ತಯಾರಿಸುತ್ತಾಳೆ. ಇತ್ತ ಅತ್ರಿ ತನ್ನ ತಪಸ್ಸಿನಲ್ಲಿ ಮಗ್ನ! ಭೋಜನ ತಯಾರಾದ ಮೇಲೆ, ಆ (ತ್ರಿಮೂರ್ತಿ) ಸಾಧುಗಳಿಗೆ ಊಟ ಬಡಿಸಬೇಕು ಎಂಬಷ್ಟರಲ್ಲಿ, ಅವರು, “ಹೆಣ್ಣೇ, ನೀನು ದಿಗಂಬರಳಾಗಿ ಊಟ ಬಡಿಸಬೇಕು” ಎಂದು ಕೋರುತ್ತಾರೆ. ಆಗ ಇದು ತನ್ನ ಪಾತಿವ್ರತ್ಯದ ಪರೀಕ್ಷೆ ಎಂದು ಬಗೆದ ಅನುಸೂಯೆ, ಅತ್ರಿಯ ಪಾದ ತೊಳೆದ ನೀರನ್ನು ಅವರ ಮೇಲೆ ಪ್ರೋಕ್ಷಿಸಿ ಅವರನ್ನು ಮಕ್ಕಳಾಗಿ ಮಾಡಿ, ತಾನು ದಿಗಂಬರಳಾಗಿ ಅವರಿಗೆ ಹೊಟ್ಟೆ ತುಂಬಾ ಹಾಲೂಡಿಸುತ್ತಾಳೆ. ನಂತರ ಮಕ್ಕಳ ಭಾಗ್ಯ ಕಾಣದ ಆಕೆ, ಆ ಮಕ್ಕಳನ್ನು ಒಂದು ಮರದ ಕೊಂಬೆಗೆ ಮೂರು ತೊಟ್ಟಿಲುಗಳನ್ನು ಕಟ್ಟಿ ಅವರನ್ನು ಮುದ್ದಾಗಿ ಲಾಲಿಸುತ್ತಾಳೆ. ಇದೇ ಸರಿಯಾದ ಸಮಯವೆಂದು ಬಗೆದ ನಾರದ, ಅತ್ರಿ ಮುನಿಯ ಬಳಿಬಂದು, “ಇನ್ನೂ ಎಷ್ಟು ದಿನ ತಪಸ್ಸು ಮಾಡುತ್ತೀಯೆ? ನಿನ್ನ ಹೆಂಡತಿ ನೀನು ಹೊರಡುವುದನ್ನೇ ಕಾದಿದ್ದಳು. ಈಗ ಆಕೆ ಮೂರು ಮಕ್ಕಳ ತಾಯಿಯಾಗಿದ್ದಾಳೆ” ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಅತ್ರಿ, ದುಃಖಿಸಿ, ತನ್ನ ತಪಸ್ಸು ನಿಲ್ಲಿಸಿ ತನ್ನ ಪತ್ನಿಯನ್ನು ಕಾಣಲು ಹೊರಟು ಬಿಡುತ್ತಾನೆ. ಇಲ್ಲಿಗೆ ನಾರದನ ಕಾರ್ಯ ಸಫಲ!
ಅತ್ರಿಯ ಮರಳುವಿಕೆಗೆ ಸಂತಸಗೊಂಡ ಅನುಸೂಯೆ ನಡೆದ ವಿಷಯವನ್ನೆಲ್ಲಾ ವಿವರವಾಗಿ ತಿಳಿಸಿದಾಗ, ತನ್ನ ತಪ್ಪನ್ನು ಅರಿತ ಅತ್ರಿ ಸಂತೋಷದಿಂದ ಆಕೆಯನ್ನು ಹರಸುತ್ತಾನೆ. ನಾರದನಿಂದಲೇ ಇವೆಲ್ಲ ವಿಷಯವರಿತ ತ್ರಿಮೂರ್ತಿಗಳ ಪತ್ನಿಯರು, ಪತಿಭಿಕ್ಷೆಗಾಗಿ ಅನುಸೂಯೆಯ ಮೊರೆಹೋಗುತ್ತಾರೆ. ಆಗ ತ್ರಿಮೂರ್ತಿಗಳು ಅತ್ರಿ, ಅನುಸೂಯರಿಗೆ ಹರಸಿ ತಮ್ಮ ಸ್ವಸ್ಥಾನಕ್ಕೆ ಮರಳುತ್ತಾರೆ.
ಇಷ್ಟಕ್ಕೂ ಇಂದ್ರನ ಶಾಪವಾದರೂ ಏನು? ಗೌತಮನ ಪತ್ನಿ ಅಹಲ್ಯೆಯ ಸೌಂದರ್ಯಕ್ಕೆ ಮರುಳಾದ ಇಂದ್ರನು, ಕೋಳಿಯಂತೆ ಕೂಗಿ ಗೌತಮನನ್ನು ಸ್ನಾನಾದಿಗಳಿಗೆ ಕಳುಹಿಸಿ, ಅಹಲ್ಯೆಯನನ್ನು ಕಾಮಿಸುತ್ತಾನೆ. ಇದನ್ನರಿತ ಗೌತಮನು ಅಹಲ್ಯೆಯನ್ನು ಕಲ್ಲಾಗಿಸಿ, ಇಂದ್ರನಿಗೆ ಆತನ ಮೈಯೆಲ್ಲಾ ಹೆಣ್ಣಿನ ಜನನಾಂಗ ಬೆಳೆಯುವಂತೆ ಶಾಪ ಕೊಡುತ್ತಾನೆ. ಈ ಪರಿಸ್ಥಿತಿಯಿಂದ ಅವಮಾನಿತಗೊಂಡ ಇಂದ್ರನು ಯಾವ ಕೆಲಸ ಕಾರ್ಯಗಳಲ್ಲೂ ತೊಡಗದೆ ಮೈಹೊದ್ದು ಕೂರುತ್ತಾನೆ. ಈತನ ದುಸ್ಥಿತಿಗೆ ಮರುಗಿದ ನಾರದನು ತ್ರಿಮೂರ್ತಿಗಳಿಗೆ ಈ ವಿಷಯವನ್ನು ತಿಳಿಸುತ್ತಾನೆ. ಆಗ ಅತ್ರಿಯ ಆಶ್ರಮದಲ್ಲಿದ್ದ ತ್ರಿಮೂರ್ತಿಗಳು, ಒಂದು ಅಶ್ವತ್ಥ ಮರದ ಕೆಳಗೆ ಕುಳಿತು ಇಂದ್ರನಿಗೆ ಸಹಾಯ ಮಾಡಬೇಕೆಂದು ಆಲೋಚಿಸುತ್ತಾರೆ. ಆ ಸಂದರ್ಭದಲ್ಲಿ ಬ್ರಹ್ಮ ಪಾದವಾಗಿ, ವಿಷ್ಣು ಮಧ್ಯ ಭಾಗವಾಗಿ ಮತ್ತು ಶಿವ ಶಿರಭಾಗವಾಗಿ ಕಂಡದ್ದರ ಉಲ್ಲೇಖ ಅನೇಕ ಶ್ಲೋಕಗಳಲ್ಲಿವೆ. ಮತ್ತು ಆ ಅಶ್ವತ್ಥ ಮರವು, ಮೂರು ಯುಗಗಳಲ್ಲಿ ತುಳಸಿ, ಬಿಲ್ವ ಮತ್ತು ಕೊನ್ನೆ ಮರವಾಗಿ ಉಳಿಯುವುದೆಂದೂ, ಈ ಕಲಿಯುಗದಲ್ಲಿ ಸುಚೀಂದ್ರಂ ದೇವಸ್ಥಾನದಲ್ಲಿ ಕೊನ್ನೆ ಮರವಾಗಿ ಇಂದಿಗೂ ಇದೆ ಎಂಬ ಕಥೆ.
ನಾರದನ ಸಲಹೆಯಂತೆ ಇಂದ್ರನು ತ್ರಿಮೂರ್ತಿಗಳ ದರ್ಶನ ಮಾಡಲು ಹೊರಟಾಗ, ದಾರಿಯಲ್ಲಿ ತಡೆಹಿಡಿದ ನಂದಿಯು ಮೊದಲು ಇಂದ್ರನ ಕುಲಗುರು ಬೃಹಸ್ಪತಿಯನ್ನು ಕಾಣುವಂತೆ ತಿಳಿಸುತ್ತಾನೆ. ಬೃಹಸ್ಪತಿಯು ಇಂದ್ರನಿಗೆ ಶಾಪವಿಮೋಚನೆ ಆಗಲು ಮೊದಲು ನಂದಿ ಹಾಗೂ ವಿನಾಯಕನಿಗೆ ನಮಿಸಿ ನಂತರ ಅರಳೀ ಮರದ ಎದುರು ಒಂದು ಕುದಿಯುವ ತುಪ್ಪದ ಹೊಂಡವನ್ನು ನಿರ್ಮಿಸಿ ಅದರಲ್ಲಿ ಸಾವಿರದ ಒಂದು ಬಾರಿ ಮುಳುಗಿ ನಂತರ ಪಂಚಾಕ್ಷ ಮಂತ್ರವನ್ನು ಜಪಿಸುವುದಾಗಿ ತಿಳಿಸುತ್ತಾನೆ. ಅಂತೆಯೇ ಮಾಡಿದ ಇಂದ್ರನ ಶಾಪ ಇನ್ನೂ ಹಾಗೆಯೇ ಇರುತ್ತದೆ. ಆಗ ಬೇಸರಗೊಂಡ ಇಂದ್ರನು ಅಗ್ನಿ ಪ್ರವೇಶ ಮಾಡುವುದಾಗಿ ನಿರ್ಧರಿಸುತ್ತಾನೆ. ಆಗ ತ್ರಿಮೂರ್ತಿಗಳು ಪ್ರತ್ಯಕ್ಷರಾಗಿ, ಇಂದ್ರನಿಗೆ ಶಾಪವಿಮೋಚನೆಯಾಗುವುದಾಗಿಯೂ ನಂತರ ಇಂದ್ರ ಒಂದು ಜ್ಯೋತಿ ಲಿಂಗ ನಿರ್ಮಿಸಿ ಅದಕ್ಕೆ ಪ್ರತಿ ದಿನ ಪೂಜೆ ಮಾಡಬೇಕೆಂದು ಹೇಳುತ್ತಾರೆ. ಆಗ ಇಂದ್ರನು ಸಂತೋಷದಿಂದ ಒಪ್ಪಿ ಬ್ರಹ್ಮ, ವಿಷ್ಣು ಮತ್ತು ಶಿವ ಈ ಮೂವರ ರೂಪದ ಒಂದು ಲಿಂಗವನ್ನು ನಿರ್ಮಿಸಿ ಅದಕ್ಕೆ ನಿತ್ಯವೂ ಪೂಜಿಸುತ್ತಾನೆ. ಈ ಲಿಂಗವೇ ಸುಚೀಂದ್ರಂ ನಲ್ಲಿರುವ ಲಿಂಗ ಮತ್ತು ಇಂದ್ರನಿಗೆ ಆದ ಈ ಶುದ್ಧೀಕರಣಕ್ಕೆ ಶುಚಿ+ಇಂದ್ರ=ಶುಚೀಂದ್ರ ಪಳಗಿ ಸುಚೀಂದ್ರಂ ಆಗಿದೆ.
ಇಂದ್ರನು ಜ್ಯೋತಿ ಲಿಂಗ ಸ್ಥಾಪಿಸಿದ ಈ ಸ್ಥಳಕ್ಕೆ “ಮೂಲಸ್ಥಾನ” ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಇಂದ್ರ ಪೂಜಿಸಿದ ನಂದಿ ಮತ್ತು ವಿನಾಯಕನ ವಿಗ್ರಹಗಳೂ ಇವೆ. ಈ ಊರಿನ ಪ್ರಜೆಗಳು ತಪ್ಪು ಮಾಡಿದಲ್ಲಿ ಅವರ ಕೈಯನ್ನು ಕುದಿಯುವ ತುಪ್ಪದಲ್ಲಿ ಮುಳುಗಿಸುವುದು ವಾಡಿಕೆಯಾಗಿದ್ದು. ಈ ಪದ್ಧತಿಯನ್ನು ಸ್ವಾತಿ ತಿರುನಾಳ್ ರಾಮವರ್ಮೆ ಎಂಬ ರಾಜನು ತನ್ನ ಆಳ್ವಿಕೆಯಲ್ಲಿ ನಿಲ್ಲಿಸಿದನು.
ಸತಿ ಅನುಸೂಯ, ಅಹಲ್ಯಾ, ಮತ್ತಿತರ ಕಥೆಗಳು ಓದುಗರನೇಕರಿಗೆ ಗೊತ್ತಿರಬಹುದು ಆದರೂ ನಾನು ಅದನ್ನು ಇಲ್ಲಿ ವಿವರಿಸಿದ್ದುದರ ಉದ್ದೇಶ, ಅದರ ಬಗ್ಗೆ ಪುನರ್ಮನನ ಮಾಡಲು ಮತ್ತು ಅದರಲ್ಲಿ ಅಡಗಿರುವ ಕೆಲವು ಸೂಕ್ಷ್ಮಗಳನ್ನು ತಿಳಿಯಲು. ಈ ಕಥೆಗಳನ್ನೆಲ್ಲಾ ನೋಡಿ ಅದರಲ್ಲಿ ಶಿವ, ಬ್ರಹ್ಮ, ವಿಷ್ಣು, ಇಂದ್ರ ಈ ಹೆಸರುಗಳನ್ನು ತೆಗೆದು ರಂಗ, ಸಿಂಗ, ಸಿದ್ದ, ರಾಜ ಎಂದು ಬದಲಾಯಿಸಿಕೊಂಡು ಕಥೆ ಓದಿದಲ್ಲಿ ಯಾರಿಗೂ ಈ ಕಥೆಗಳು ಇಷ್ಟವಾಗುವುದಿಲ್ಲ. ನಮ್ಮ ಮನೆಗೆ ಬಂದ ಅಥಿತಿಗಳು ಯಾರೂ ನಗ್ನ ಭೋಜನ ಮಾಡಲು ಕೋರಿಲ್ಲ. ಮೈ ತುಂಬಾ ಹೆಂಗಸಿನ ಜನನಾಂಗ ಬೆಳೆಯುವಂತೆ ಶಾಪ ಕೊಡುವುದು ಎಂದರೇನು? ಜಗತ್ತನ್ನೇ ಆಳುವ ಶಿವನು ಕೋಳಿ ಕೂಗಿಗೆ ಮುಹೂರ್ತ ಮೀರಿತು ಎಂದು ಮರಳುವುದು ಎಂದರೆ? ಹೀಗಿದ್ದಾಗ, ದೇವಮೂಲ , ಸರ್ವಶ್ರೇಷ್ಠರೆಂದೇ ಅರಿಯಲ್ಪಟ್ಟ ತ್ರಿಮೂರ್ತಿಗಳೇ ಹೀಗೆ (ಕೆಲವೊಮ್ಮೆ ಬಾಲಿಶವಾಗಿ, ಕೆಲವೊಮ್ಮೆ ಪಶುಗಳಾಗಿ, ಕ್ರೂರವಾಗಿ) ವರ್ತಿಸಿದ್ದು ಸರಿಯೇ? ದೇವರಿಗಿಂತಲೂ ನಾವೇ ನೀತಿವಂತರಾಗಿಬಿಟ್ಟೆವಲ್ಲವೇ!? ಸಿಗ್ಮಂಡ್ ಫ್ರಾಯ್ದನ ಸಿದ್ಧಾಂತದ ಮೂಲಕ ಇವನ್ನು ಗಮನಿಸಿದರೆ ನಮಗೆ ತಿಳಿಯಬರುವುದು, ನಮ್ಮಲ್ಲಿನ ಅಸಹನೆಗಳು, ತೀವ್ರತೆಗಳು, ವಿಕಾರಗಳಿಗೆ ದೇವರ ರೂಪಕೊಟ್ಟು ಅದನ್ನು ದೈವೀಕ ಅಂಶಗಳಾಗಿಸಿದ್ದೇವೆ. ಯಾವಾಗ ಅದು “ದೈವೀ” ಎಂಬ ಹೆಸರು ಪಡೆಯುತ್ತದೆ ಆಗ ಅದರ ಕೊಳಕುಗಳೆಲ್ಲಾ ಶುದ್ಧಿಯಾಗಿ “ಪಾಪ, ಪುಣ್ಯ, ಕರ್ಮಗಳಾಗಿ” ಮರುರೂಪ ಪಡೆಯುತ್ತದೆ.
ಈ ಪ್ರವಾಸ ನನ್ನಲ್ಲಿ ಬೆಳೆಸಿದ ಬಲವಾದ ಆಸಕ್ತಿ, ಪುರಾಣಗಳ ಜಾಡು ಪತ್ತೆ ಮಾಡುವಿಕೆ ಮತ್ತು ತನ್ಮೂಲಕ “ದೇವರು” ಎಂಬ ಅಂಶವನ್ನು (ಅದು ಕಲ್ಪನೆಯಾಗಲೀ, ಕ್ಲೀಷೆಯಾಗಲೀ, ತಮಾಷೆಯಾಗಲೀ ಅಥವಾ ನಿಜವೇ ಆದರೂ) ನಮ್ಮ ತಲೆತಲಾಂತರಗಳು ಹೇಗೆ ಅರ್ಥೈಸಿಕೊಂಡು ಬಂದಿವೆ, ಬೆಳೆಸಿಕೊಂಡು ರೂಪಿಸಿವೆ ಮತ್ತು ಏಕೆ ಹೀಗೆ ಎಂಬುದರ ಬಗ್ಗೆ ಅಧ್ಯಯನ ಮಾಡುವಿಕೆ.
ಸುಚೀಂದ್ರಂನೊಂದಿಗೆ ನಮ್ಮ ಇಷ್ಟು ದಿನಗಳ ತಮಿಳುನಾಡಿನ ನಂಟು ಮುಗಿದಿತ್ತು. ಮುಂದಿನ ಪಯಣ ಕೇರಳದತ್ತ. ತಮಿಳುನಾಡಿನ ಕೊಳಕು, ಒಣ ಪ್ರದೇಶಗಳಿಂದ ರೋಸಿ ಹೋಗಿದ್ದ ಮನಸ್ಸು ಕೇರಳದ ಹಸಿರ ಸಿರಿಗಾಗಿ ಹಾತೊರೆದಿತ್ತು ಮತ್ತು ಅದರ ಪರಿಚಯ ನಮಗೆ ದಾರಿಯಲ್ಲೇ ಆಗಿತ್ತು.

‍ಲೇಖಕರು G

November 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

 1. Pramod

  ಓದುತ್ತಾ ಓದುತ್ತಾ ಮೂರ್ತಿ ರಾವ್ ಅವರ “ದೇವರು” ಪುಸ್ತಕ ರಪ್ಪನೆ ಮನಸೊಳಗೆ ಹಾದು ಹೋಯಿತು 🙂

  ಪ್ರತಿಕ್ರಿಯೆ
 2. Nagshetty Shetkar

  “ಸಿಗ್ಮಂಡ್ ಫ್ರಾಯ್ದನ ಸಿದ್ಧಾಂತದ ಮೂಲಕ ಇವನ್ನು ಗಮನಿಸಿದರೆ ನಮಗೆ ತಿಳಿಯಬರುವುದು, ನಮ್ಮಲ್ಲಿನ ಅಸಹನೆಗಳು, ತೀವ್ರತೆಗಳು, ವಿಕಾರಗಳಿಗೆ ದೇವರ ರೂಪಕೊಟ್ಟು ಅದನ್ನು ದೈವೀಕ ಅಂಶಗಳಾಗಿಸಿದ್ದೇವೆ.” Which is why we have 16 crore gods in India!!!

  ಪ್ರತಿಕ್ರಿಯೆ
 3. Mahesh

  ನಿಜ, ವಿಸ್ತಾರವಾದಂತಹ ಶುಚೀಂದ್ರಂ ದೇವಸ್ಥಾನದ ಸೌಂದರ್ಯ ಅನುಪಮವಾದದ್ದು. ಕನ್ಯಾಕುಮಾರಿ ಮತ್ತು ಶುಚೀಂದ್ರಂ ತಮಿಳುನಾಡಿನ ಭಾಗವಾಗಿದ್ದರೂ ಕೇರಳ ಸಂಸ್ಕೃತಿಯ ಪ್ರಭಾವ ದಟ್ಟವಾಗಿ ಎದ್ದು ಕಾಣುತ್ತದೆ.

  ಪ್ರತಿಕ್ರಿಯೆ
 4. Swarna

  ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ಹೇಳುವ ಪ್ರಕಾರ ಪೌರಾಣಿಕವಾದ
  ಎಲ್ಲ ಕಥೆಗಳನ್ನೂಎರಡು ರೀತಿಯಲ್ಲಿ ಅರ್ಥೈಸಬಹುದು. ಒಂದು ನೇರ ಅರ್ಥವಾದರೆ ಇನ್ನೊಂದು
  ವಿಶ್ಲೇಷಣೆಯ ಅಥವಾ ಹೆಚ್ಚು ಅಭ್ಯಾಸಿಸಿದ ನಂತರ ತಿಳಿಯುವುದು. ಅಸಹನೆಗಳು ತೀವ್ರತೆಗಳ ಪರಿಣಾಮವನ್ನು ಕಟ್ಟಿಕೊಡಲು ಪೂರ್ವಜರು ಇಂತಾ ಕಥೆಗಳನ್ನು ಸೃಷ್ಟಿಸಿರಬಹುದಲ್ಲವೇ ?

  ಪ್ರತಿಕ್ರಿಯೆ
 5. Anil Talikoti

  wow -you took the word right out of my mouth and made it a great article. enjoyed reading it. ನನ್ನ ಜೊತೆ ದೇವರ ಬಗ್ಗೆ ಮೂರು ಪುಸ್ತಿಕೆಗಳನ್ನು ಈ ಪ್ರಯಾಣದಲ್ಲಿ ತೆಗೆದುಕೊಂಡು ಹೋಗಿದ್ದೆ. ಪೂರ್ತಿ ಓದುವದಾಗಲಿಲ್ಲ- I am going to wait for your ‘ದೇವರು’ ಅಧ್ಯಯನ.
  -Anil

  ಪ್ರತಿಕ್ರಿಯೆ
 6. g.n.nagaraj

  ನಮ್ಮ ಪುರಾಣಗಳ ವಿವಿಧ ಕಥೆಗಳು ಬುಡಕಟ್ಟುಗಳ ಕಾಲದ ಕಲ್ಪನೆಗಳಿಂದ, ಆಗಿನ ಜೀವನಾನುಭವಗಳಿಂದ ರೂಪಿತವಾಗಿವೆ.ಅಲ್ಲಿಂದ ಆರಂಭವಾಗಿ ಮುಂದೆ ಈ ಜೀವನ ಪದ್ಧತಿ ಮಾರ್ಪಾಟಾದಂತೆಲ್ಲಾ ಆಯಾ ಕಾಲಘಟ್ಟದ ಬದುಕಿಗೆ ತಕ್ಕಂತೆ ಹೊಸ ಹೆಣಿಗೆಗಳು, ಹೊಸ ಸೇರ್ಪಡೆಗಳು ಆಗಿವೆ. ಮಾತ್ರವಲ್ಲ ಸಮಾಜವನ್ನು ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ರೂಪಿಸಬಯಸುವ ಪಟ್ಟಭದ್ರರು ತಮ್ಮ ಇಚ್ಚೆಗೆ ಜನರು ತಲೆಬಾಗುವಂತೆ ಮಾಡಲು ಬುಡಕಟ್ಟು ಕಾಲದ ಕಥೆಗಳ ಮೇಲೆ ಹೊಸ ಕಥೆಗಳನ್ನು ಹೇರಿದ್ದಾರೆ. ದೇವನೂರು ಮಹಾದೇವರು ಎದೆಗೆ ಬಿದ್ದ ಅಕ್ಷರದಲ್ಲಿ ಹೇಳಿದಂತೆ “ಅವು ಇಂದಿನ ಅನಕ್ಷರಸ್ಥರ ಬದುಕನ್ನು ಆಳುತ್ತಿರುತ್ತವೆ.ನಮಗೆ ಅರಿವಿಲ್ಲದೆ ನಮ್ಮ ಉಸಿರಾಟದಂತೆ ಇಂಥವು ನಮ್ಮನ್ನು ರೂಪಿಸಿಬಿಟ್ಟರುತ್ತವೆ.” ಹಾಗೆಯೇ ಅಹಲ್ಯೆ, ಅನಸೂಯೆಯ ಕಥೆಗಳು ಪತಿವ್ರತಾ ಧರ್ಮವನ್ನು ಹೇರಲು ಬಳಕೆಯಾಗಿವೆ. ಒಂದೇ ಹೆಣಿಗೆಯಲ್ಲಿ ಪಾತಿವ್ರತ್ಯವನ್ನು ಕಳೆದುಕೊಂಡರೆ ಆಗುವ ಪರಿಣಾಮ, ಪತಿವ್ರತೆಯಾಗಿದ್ದರೆ ತ್ರಿಮೂರ್ತಿಗಳನ್ನೇ ಮಕ್ಕಳನ್ನಾಗಿ ಮಾಡಿಕೊಳ್ಳುವ ” ಶಕ್ತಿ ” ಯನ್ನು ಬಿಂಬಿಸುವ ಈ ಕಥಾಗುಚ್ಚ ಹೆಣ್ಣಿನ ಮನಸ್ಸನ್ನು ಪತಿಯ ಅಧೀನವಾಗಿಸುವ ಕರ್ತವ್ಯವನ್ನು ಸಾವಿರಾರು ವರ್ಷಗಳಿಂದ ಮಾಡುತ್ತಾ ಬಂದಿವೆ. ಅನಸೂಯೆಯ ಎಲ್ಲ ಪವಾಡಗಳೂ ಅವಳದಲ್ಲ. ಅವಳ ಪತಿಯ ಪಾದೋದಕದ ಪರಿಣಾಮ ಎಂಬುದನ್ನು ಗಮನಿಸಿ. ಇಂತಲ್ಲಿ ಫ್ರಾಯಿಡ್ ನನ್ನು ಕಲ್ಪಿಸಿಕೊಳ್ಳುವುದು ಅಸಂಗತ ಆಮದು ಎಂದಾಗುತ್ತದೆಯೇ ಹೊರತು ಭಾರತೀಯ ಸಾಮಾಜಿಕ ವಾಸ್ತವಿಕತೆಯ ಆಧಾರದಲ್ಲಿ ನಡೆಸುವ ಅನ್ವೇಷಣೆಯಾಗುವುದಿಲ್ಲ.

  ಪ್ರತಿಕ್ರಿಯೆ
  • Nagshetty Shetkar

   All these stories are tools in the hands of Manuvadis to enforce shreneekruta system on Indians. Karnataka government under the progressive leadership of CM Sidramaiah should ban these stories along with superstitions and irrational practices.

   ಪ್ರತಿಕ್ರಿಯೆ
   • g.n.nagaraj

    ಈ ಪುರಾಣಗಳನ್ನು ಸಂಶೋಧನೆಗೊಳಪಡಿಸಬೇಕು,ವಿವಿಧ ಕಾಲಘಟ್ಟದ ಸಮಾಜದ ಚಿಂತನೆ ಸ್ಥಿತಿಗತಿಗಳನ್ನು ಅರಿಯಲು ಬಳಸಬೇಕು, ಆನಂತರ ಜನರು ತಾವೇ ತೀರ್ಮಾನಕ್ಕೆ ಬರುತ್ತಾರೆ ಎಂಬುದೇ ನನ್ನ ಆಶಯವೇ ಹೊರತು ಕಥೆಗಳನ್ನು ಬ್ಯಾನ್ ಮಾಡ ಹೋಗುವುದು ಮೂರ್ಖತನದ ಕೆಲಸ.

    ಪ್ರತಿಕ್ರಿಯೆ
    • Nagshetty Shetkar

     Why is it ಮೂರ್ಖತನದ ಕೆಲಸ? It may be more effective than your suggested method which is damn slow. Research might take another 100 years to throw light.

     ಪ್ರತಿಕ್ರಿಯೆ
 7. badarinath Palavalli

  ಮುಖ್ಯವಾಗಿ ನನಗೆ ಒಪ್ಪಿಗೆಯಾಗಿದ್ದು ಇಲ್ಲಿನ ಹೋಲಿಕೆಯ ವಿಧಾನ.
  ಪುರಾಣಗಳ ಅಂತರಾಳವನ್ನು ಸರಳವಾಗಿ ತೆರೆದಿಟ್ಟ ರೀತಿಯಲ್ಲೇ ನಮ್ಮ ಮನಸ್ಸಿನಲ್ಲಿ ಉಳಿದು ಬಿಡುತ್ತದೆ.
  ಅಂದಹಾಗೆ ಒಂದು ತಮಾಷೆ = ಯಾರು ಇಂದ್ರಿಯಗಳನ್ನು ನಿಗ್ರಹಿಸಲು ಅಸಮರ್ಥನೋ ಅವನೇ ನಿಜ ಇಂದ್ರ!

  ಪ್ರತಿಕ್ರಿಯೆ
 8. ಸತೀಶ್ ನಾಯ್ಕ್

  ನಿಮ್ಮದು ಬರೀ ಪ್ರವಾಸ ಕಥನವಷ್ಟೇ ಅಲ್ಲ.. ನೀವು ಮೆಟ್ಟಿ ಬಂದ ಪ್ರತೀ ಸ್ಥಳದ ಕ್ಷೇತ್ರ ಪರಿಚಯ ಕೂಡಾ. ಅದರ ಮೂಲ ಬೇರು ಇತಿಹಾಸಗಳನ್ನ ಸಂಕ್ಷಿಪ್ತವಾಗಿ, ಸಂಪೂರ್ಣವಾಗಿ ತಿಳಿಸಿಕೊಡುವ ನಿಮ್ಮ ಕಲೆಗೊಂದು ಮೆಚ್ಚುಗೆಯ ಸೂಚಿಸದೆ ಇರಲಾಗದು. ದೇವರುಗಳ ಆ ಸೋಲುವಿಕೆ, ಆ ಅಸಹಾಯಕತೆ, ಆ ಅನಿವಾರ್ಯತೆಗಳ ಕುರಿತಾಗಿ ನನಗೂ ಸ್ಪಷ್ಟ ನಿಲುವಿಲ್ಲ. ಆದರೆ ಆಶ್ಚರ್ಯವಂತೂ ಇದೆ. ಯಾಕೆಂದರೆ ದೇವರನ್ನೂ ಬಲಹೀನನನ್ನಾಗಿ ಮಾಡಿಬಿಡುವ ಕಥೆ ಕಟ್ಟಿಹ ಕಲಾವಿದನ ಕಲ್ಪನೆಗೆ. ಮತ್ತು ಅದನ್ನೇ ನಾವುಗಳೆಲ್ಲಾ ಬಹುಪಾಲು ನಂಬಿಬಿಡುವಂತೆ ಮಾಡಿಬಿಡಬಲ್ಲ ಅದರ ಮಾಂತ್ರಿಕ ಮತ್ತು ತಾಂತ್ರಿಕ ಸೆಳೆತಗಳ ಆಕರ್ಷಣೆಗೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: