ಸಂಪು ಕಾಲಂ : ಸಾಹಿತ್ಯದ ಘನತೆ, ಮಾಧ್ಯಮಗಳ ಅಜಾಗರೂಕತೆ ಮತ್ತು ಓದಿನ ವೈಯಕ್ತಿಕತೆ


“ಒಂದು ವಿಷಯದ ಪರ-ವಿರೋಧ ಚರ್ಚೆಗಳು ಆರೋಗ್ಯಕರ ಸಮಾಜದ ಲಕ್ಷಣ” ಎಂಬ ಜಿ.ಎನ್ ನಾಗರಾಜ್ ಸರ್ ಅವರ ಮಾತನ್ನು ಸಂಪೂರ್ಣ ಒಪ್ಪುತ್ತಲೇ ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಕೆಲವಿಚಾರಗಳನ್ನು ನಿಮ್ಮ ಮುಂದಿಡಬಯಸುತ್ತೇನೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮಾರ್ಮಿಕ ಸೆಳೆತಗಳು ಚಟವಾಗುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಾದ ತುರ್ತೊಂದು ಬಹಳ ಗಂಭೀರವಾಗಿ ಸೈರನ್ ಬಾರಿಸುತ್ತಿದೆ.
ನಾನು ಮುಂದಕ್ಕೆ ಮಾತನಾಡುವ ಮುನ್ನ ಒಂದು ಪುಟ್ಟ ಘಟನೆ ಹೇಳ ಬಯಸುತ್ತೇನೆ. ನಮ್ಮ ತರಗತಿಯಲ್ಲೊಮ್ಮೆ ಸಂವಹನ ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಧ್ಯಾಪಕರು ಒಬ್ಬ ಹುಡುಗನನ್ನು ಕರೆಸಿ ಕಿವಿಯಲ್ಲಿ ಏನೋ ಹೇಳಿದರು, ಮತ್ತೆ ಅದನ್ನು ಒಬ್ಬರಿಂದೊಬ್ಬರಿಗೆ ಕಿವಿಯಲ್ಲಿ ಹೇಳುತ್ತಾ ಹೋಗಿ ಎಂದು ಆಣತಿಸಿದರು. ತರಗತಿಯ ಕೊನೆಯ ವಿದ್ಯಾರ್ಥಿ ಅದನ್ನು ಜೋರಾಗಿ ಹೇಳಬೇಕಾಗಿತ್ತು. ಆದರೆ ಅಧ್ಯಾಪಕರು ಹೇಳಿದ್ದೇ ಏನೋ ಮತ್ತು ಆ ಹುಡುಗ ಹೇಳಿದ್ದೇ ಏನೋ ಆಗಿತ್ತು. ಹೀಗೆ ಬೆಲ್ಲ ಕಲ್ಲಾಗುವುದು ಮತ್ತು ವೈಸ್ ವೆರ್ಸಾ ನಮ್ಮ ಸಂವಹನದ ಹುಟ್ಟು ಗುಣ ಹೌದು. ಆದರೆ, ಅದನ್ನು ಇನ್ನೂ ಹೆಚ್ಚು ಹುಚ್ಚಾಗಿಸಿ, ವಿಕಾರವಾಗಿಸುತ್ತಾ (ದೃಶ್ಯ) ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಮೆರೆಯುತ್ತಿವೆ.
ಯಾವುದೇ ಒಂದು ವಿಚಾರ, ಯಾವ ಸಂದರ್ಭದಲ್ಲಿ, ಯಾವ ಚರ್ಚೆಗೆ ಒಳಪಟ್ಟು ಏನು ಮಾತಾಗಿರುತ್ತದೋ ಅದು ಸಂಪೂರ್ಣ ಕೊಚ್ಚಿ ಹೋಗಿ ಅದಕ್ಕೆ ಒಂದೆರಡು ಎಕ್ಸ್ಟ್ರಾ ಕೈ-ಕಾಲುಗಳು ಬಂದು ನಿರ್ಲಜ್ಜೆಯಿಂದ ಇಡೀ ಸಮಾಜದ ಮುಂದೆ ಬೇರೆಬೇರೆ ಭಾವಗಳನ್ನು ಭಂಗಿಸುತ್ತಾ ಎಲ್ಲರನ್ನೂ ಕೆರಳಿಸುತ್ತಾ ಹೋಗುವುದು ಅದರ ಗುಣವಾಗಿಹೋಗುತ್ತದೆ. ನಮ್ಮ ದೃಶ್ಯ ಮಾಧ್ಯಮಗಳಂತೂ ಬೇಕಾದಷ್ಟು ಬಿಕರಿಗೊಂಡು ಈ ಚಾಳಿ-ವಾಚಾಳಿತನಕ್ಕೆ ತನ್ನನ್ನು ಹಾಸುಕೊಂಡಿದೆ ಬಿಡಿ. ರಾಮದಾಸನ ಆತ್ಮಹತ್ಯೆಯಾದರೆ ನಾವು ಕೂಡ ಆತ್ಮಹತ್ಯಾ ಪ್ರಯತ್ನ ಮಾಡಿಕೊಳ್ಳುವಷ್ಟು ಬೇಸರಿಕೆ ಮೂಡಿಸುವಷ್ಟು ದಿನವಿಡೀ ಸೆನ್ಸೇಷನಲಿಸಮ್! ಮತ್ತು ಇದು ಬರಿ ಒಂದು ಸಣ್ಣ ಉದಾಹರಣೆ. ಬೇಕೋ ಬೇಡವೋ ನಮ್ಮ ಇಂದಿನ ಹಣೆಬರಹ.
ಆದರೆ ಈ ವೈಕಲ್ಯವನ್ನು ನಮ್ಮ ಸಾಹಿತ್ಯ ಲೋಕವೂ ಆವಾಹಿಸಿಕೊಳ್ಳುತ್ತಿರುವುದು ದುಃಖಕರ ಸಂಗತಿ. ಒಂದು ಸದುದ್ದೇಶದ ಸಾಹಿತ್ಯಿಕ ಕಮ್ಮಟದಲ್ಲಿ ಏನೋ ಚರ್ಚೆಯಾದರೆ, ಅದು ಒಂದು ಹೋಗಿ ನೂರಾಗುವುದು, ಒಂದು ಮೌಲ್ಯಯುತ ವೇದಿಕೆಯ ಮೇಲಿನ ಚರ್ಚೆಗೆ ರೆಕ್ಕೆ-ಪುಕ್ಕ ಬಲಿತು ಊರಭರ್ತಿ ಇನ್ನಿಲ್ಲದಂತೆ ಹಾರಾಡುವುದು. ಇವೆಲ್ಲವೂ ನಮ್ಮೊಳಗಿನ ವಿಕಾರಗಳ ಕೈಗನ್ನಡಿಯೋ ಎಂಬಂತೆ ನಮ್ಮ ಜಾಲತಾಣಗಳು ಬಿತ್ತರಿಸಿಕೊಳ್ಳುತ್ತಿರುವ ವೈಖರಿ, ಇವೆಲ್ಲವೂ ಪಾಸಿಟಿವ್ ಬೆಳವಣಿಗೆಯನ್ನು ಬೆಳೆಸುತ್ತದೆ ಎಂಬುದರ ಬಗ್ಗೆ ನನ್ನದೇ ಅನುಮಾನಗಳಿವೆ!
ಗಮನಿಸುತ್ತಾ ಹೋದರೆ, ಇವೆಲ್ಲ ಬರಿಯ ಕಡ್ಡಿಯನ್ನು ಗುಡ್ಡಮಾಡುವ ಸಾಹಸ ಎಂದು ಅರ್ಥವಾಗುತ್ತದೆ. ವಾರಗಳಿಂದ ವಿವಾದಿತ “ಪರಂಪರೆ (ಅಥವಾ ಹಳೆಗನ್ನಡದ ಓದು) ಬೇಕೇ ಬೇಡವೇ” ಎಂಬ ಚರ್ಚೆ (ಕಾದಾಟ?) ಒಂದು ಉದಾಹರಣೆ. ನಮ್ಮಲ್ಲಿ “ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು” ಎಂಬ ಸುಂದರ ಸತ್ಯವೂ ನಂಬಿಕೆಯಲ್ಲಿದೆ ಮತ್ತು “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್” ಎಂಬ ಹೆಮ್ಮೆಯ ನಿಜವೂ ವಾಡಿಕೆಯಲ್ಲಿದೆ. ಸೋಜಿಗವೆಂದರೆ ಇವೆರಡೂ ಬೇರೆಬೇರೆಯಾದರೂ ಒಂದೇ ಸಾಲಿನ ಮುಂದುವರಿಕೆಯಾಗಿ ಎರಡೂ ಕೊ-ಎಕ್ಸಿಸ್ಟ್ ಆಗುತ್ತಿವೆ. ಹಾಗಾಗಿ ಪರಂಪರೆ (ಕಾವ್ಯ ಪರಂಪರೆ ಟು ಬಿ ಮೋರ್ ಪ್ರಿಸೈಸ್) ಬೇಕು ಬೇಡ ಅನ್ನೋ ಚರ್ಚೆಯೇ ಅನಗತ್ಯ, ಮತ್ತದು ತೀರಾ ವಯಕ್ತಿಕ.
ಎಲ್ಲೋ ಓದಿದ್ದು, “ಭಾಷೆ ಬದುಕಿದೆ ಎಂಬ ಜೀವಂತಿಕೆಯನ್ನು ಅರಿಯಲು ಅದರ ಬದಲಾಗುತ್ತಿರುವ ಅಂಶವೇ ಸಾಕು” ಎಂದು. ಹಳೆಗನ್ನಡದಿಂದ ಈಗಿನ ಫೇಸ್ಬುಕ್ ಕನ್ನಡದವರೆಗೂ ನಮ್ಮ ಭಾಷೆ ಸಾಕಷ್ಟು ಬದಲಾವಣೆ, ಬೆಳವಣಿಗೆಗಳನ್ನು ಕಂಡಿದೆ. ಈ ಬದಲಾವಣೆಗಳ ನೆನ್ನೆಗಳನ್ನು ತಿಳಿಯುವ ಕೌತುಕ, ಬೆರಗುಗಳನ್ನು ಯಾರೂ ನಿಷೇಧಿಸಲೂಬಾರದು ಮತ್ತು ತಿಳಿಯಲೇ ಬೇಕೆಂಬ ಹೇರಿಕೆಯೂ ಆಗಬಾರದು. ಅದೊಂದು ವೈಯಕ್ತಿಕ ಸಂತೋಷ/ತುರ್ತು (’ತುರ್ತು’ ಎಂಬ ಪದಬಳಕೆಯು ಈ ವಿಷಯದ ಬಗೆಗಿನ ಚರ್ಚೆಯಲ್ಲಿ ಹೆಚ್ಚಾಗಿ ಕಂಡು ಬಂದದ್ದರಿಂದ ನಾನೂ ಬಳಸಲು ಪ್ರಲೋಭಗೊಂಡಿದ್ದೇನೆ!).

ಪಂಪ, ಕುಮಾರವ್ಯಾಸನ ಓದೇ ಕಾವ್ಯಕಲಿಕೆಗ ದಾರಿ ಎಂಬ ಮಾತು ಎಷ್ಟು ಸುಳ್ಳೋ, ಪಂಪ, ಕುಮಾರವ್ಯಾಸ ನಮ್ಮ ತುರ್ತು ಅಲ್ಲ, ಆದ್ದರಿಂದ ಅವರ ಬಗ್ಗೆ ಓದು ಬೇಡ ಎನ್ನುವುದೂ ಅಷ್ಟೇ ಪೊಳ್ಳು. ಇನ್ನು “ಪಂಪ, ಕುಮಾರವ್ಯಾಸ ಯಾಕೆ ಹೋಗಲೀ ಅಡಿಗ, ರಾಮಾನುಜಂನಾದರೂ ಸೂಚಿಸಿ” ಎಂಬ ಮಾತಿಗೆ ಏನು ಹೇಳಬೇಕು ಖಂಡಿತ ತಿಳಿಯದು! “ಕಾವ್ಯ ಒಂದು ಪುಳಕ” ಎಂಬ ವಸ್ತಾರೆಯವರ ಮಾತು ಸತ್ಯ. ಪ್ರತಿ ಓದು ಒಂದು ಅಪೀಮು. ಓದಿನ ಚಟ ಅಂತದು. ಅದರಲ್ಲೂ ಕಾವ್ಯ ತೀರಾ ವಯಕ್ತಿಕ ಸಂತೋಷ. ಪ್ರತಿ ಸಾಲುಗಳೂ ಅವರವರ ಭಾವಕ್ಕೆ ಒಳಗೊಂಡು ತಮ್ಮದೇ ಆದ ಒಂದು ಹೊಸ ಲೋಕ, ಹೊಸ ಅನುಭವ ಸೃಷ್ಟಿಸುವ ಮಾಯೆ. ಆ ಅನುಭವ ಕೇವಲ ಒಂದು ’ವಾಹ್’ ಗೆ ನಿಂತುಮಾಯವಾಗಬಹುದು, ನಮ್ಮೊಳಗಿನ ಕಿಚ್ಚು ಹೆಚ್ಚಿ ರೋಮಾಂಚನವಾಗಬಹುದು ಅಥವಾ ನಮ್ಮೊಳಪ್ರಜ್ಞೆಗೆ ಚುಚ್ಚಿ ನಮ್ಮನ್ನು ಸಾಮಾಜಿಕವಾಗಿ ಎಚ್ಚರಿಸಬಹುದು. ಇದರ ಡೆಫಿನಿಷನ್ ಇಷ್ಟು ಮತ್ತಿನ್ನಷ್ಟು ವಿಸ್ತಾರವಾಗಿದ್ದಾಗ, ಯಾವ ಕವಿ-ಕಾವ್ಯವನ್ನು ಬೇಕು ಬೇಡ ಎಂದು ನಿರ್ಧರಿಸುವುದಾದರೂ ಹೇಗೆ? ನನಗೆ ಬೇಡದ್ದು, ಅವಳಿಗೆ/ನಿಗೆ ಬೇಕಿರಬಹುದು ಮತ್ತು ಅವನಿಗೆ ಬೇಡದ್ದು ನನಗೆ. ಇದಕ್ಕೆ ಯಾವುದೇ ನಿರ್ಧರಿತ ಹೆಡ್ ಲೈನ್ಸ್ ಎಂಬುದಿಲ್ಲ ಎನ್ನುವುದು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. “ಪದವಿಟ್ಟಳುಪದೊಂದಗ್ಗಳಿಕೆ” ಎಂದು ಕುಮಾರವ್ಯಾಸ ಹೇಳಿದ್ದು ಓದಿದಾಗ ಮೈನವಿರೇಳುತ್ತದೆ. “ವೇದಪುರುಷನ ಸುತನ ಸುತನ ಸಹೋದರನ…….” ಪದ್ಯದ ಒಗಟನ್ನು ಬಿಡಿಸಿದಾಗ “ಅಬ್ಬಾ” ಎಂಬ ಒಂದು ತುಂಟ ಸಂತೋಷದ, ಗೆಲುವಿನ ನಗೆ ಮುಖದಲ್ಲಿ ಮೂಡುತ್ತದಲ್ಲಾ ಅದೊಂದು ಅದ್ವಿತೀಯ ಅನುಭವ. ಅದೇ ರೀತಿ ನಮ್ಮ ಫೇಸ್ಬುಕ್ ಸ್ನೇಹಿತರನೇಕರು ಬರೆಯುವ ನಾಲ್ಕು ಸಾಲುಗಳು ಓದಿದಾಗ ಆಗುವ ಸಂತೋಷದ ಅನುಭವವೇ ಮತ್ತೊಂದು ಮೇರು. ಶೇಕ್ಸ್ ಪಿಯರ್ ನಮಗೆ ಇಂದಿಗೂ ಖುಷಿ ಕೊಡ್ತಾನೆ ಓದುವಾಗ ಯಾಕೆ? ಅದನ್ನು ನಾವು ಓದಿ ನಮ್ಮ “ತುರ್ತು”ಗಳಿಗೆ ಅಳವಡಿಸಿಕೊಂಡು ನಾವೂ ಅವನಂತೆ ಕಾವ್ಯ ಬರೀಬೇಕು ಅಂತ ಅಲ್ಲ. ಅದೊಂದು ಬರಿ ರೋಮಾಂಚನವಾಗಬಹುದು ಅಥವಾ ಒಂದು ಸಮಾಜಶಾಸ್ತ್ರ, ಮನಃಶ್ಶಾಸ್ತ್ರದ ಅಧ್ಯಯನವೂ ಆಗಬಹುದು.
ಹೀಗೆ ಒಬ್ಬೊಬ್ಬರ ಗದ್ಯ-ಪದ್ಯದ ಓದಿನ ಅನುಭವ ಒಂದೊಂದು ರೀತಿಯದು. ಇಂಥದ್ದು ಓದು ಇಂಥದ್ದು ಬೇಡ, ಅಥವಾ ಇಂಥದ್ದು ಬೇಕಾ ಬೇಡವಾ ಎಂಬ ಚರ್ಚೆಯೇ ಅನಗತ್ಯ. ಪಂಪ, ಕುಮಾರವ್ಯಾಸನನ್ನೂ ಇಷ್ಟ ಪಡುವ ನಾನು, ಜೊತೆಗೆ ಇಂದಿನ ಸಮಕಾಲೀನ ಅನೇಕ ಕವಿ-ಬರಹಗಾರರ ಸಾಹಿತ್ಯವನ್ನೂ ತುಂಬ ಇಷ್ಟಪಡುತ್ತೇನೆ ಮತ್ತು ಗೌರವಿಸುತ್ತೇನೆ. ಹಳೆಗನ್ನಡವಾಗಲೀ, ಹೊಸಗನ್ನಡವಾಗಲೀ, ಮಿಶ್ರ ಭಾಷೆಯಾಗಲೀ ನಮಗೆ ಒಂದು ಹೊಸ ಅನುಭವ, ಕಲಿಕೆಯನ್ನಂತೂ ಖಂಡಿತವಾಗಿ ನೀಡುತ್ತದೆ. ಈ ರೀತಿಯಾದ “ಭಾವ-ಅನುಭಾವ ಕಾಶಿ”ಯಾಗಿರುವ ಸಾಹಿತ್ಯ, ಕಾವ್ಯದ ಮಟ್ಟವನ್ನು ಮನಬಂದಂತೆ ಚರ್ಚೆಗಳ, ವಾಚಾಳಿತನಗಳ ಮೂಲಕ ಕೆಳಗಿಳಿಸುವುದು ಬೇಡ ಅಲ್ಲವೇ?

‍ಲೇಖಕರು G

February 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ...

10 ಪ್ರತಿಕ್ರಿಯೆಗಳು

  1. Santhoshkumar LM

    ನನ್ನ ಮಾತುಗಳನ್ನೇ ನೀವು ಬರೆದಿದ್ದೀರ!

    ಪ್ರತಿಕ್ರಿಯೆ
  2. anonymous

    ಬೇಂದ್ರೆ , ಅಡಿಗರ ಕಾಲದ ಚರ್ಚೆಯ ಮುಂದೆ ಇದು ಏನೇನು ಅಲ್ಲ. ನೀವು ಎಲ್ಲವನ್ನು ಸರ್ವತ್ರಿಕರಣ ಮಾಡುತ್ತಿದ್ದಿರಿ . ಚರ್ಚೆಗೆ ಆಸ್ಪದವೇ ಬೇಡ ಎನ್ನುತ್ತಿದ್ದಿರಿ. ನಿಮ್ಮ ಮಾತಿನ ಅರ್ಥ ಹೇಗಿದೆಯೆಂದರೆ ಲಂಚ ತೆಗೆದುಕೊಳ್ಳುವವ ತೆಗೆದುಕೊಳ್ಳಲಿ, ಕೊಲೆ ಮಾಡುವವ ಮಾಡಲಿ ,ನಮ್ಮ ನಮ್ಮ ಇಷ್ಟದಹಾಗೆ ನಾವಿರುವ ಅವರು ಅವರ ಇಷ್ಟದಹಾಗೆ ಅವರಿರಲಿ ಎನ್ನುವಂತಿದೆ. ಚರ್ಚೆಗಳು ಆಗಬೇಕು ಆಗಲೇ ಜೊಳ್ಳು ಹಾರಿ ಗಟ್ಟಿಯಾದದ್ದು ಕೈಗೆ ಸಿಗುವುದು.

    ಪ್ರತಿಕ್ರಿಯೆ
  3. Roopa Satish

    So gud, ishtavaaytu article! especially these lines 🙂
    “ಕಾವ್ಯ ಒಂದು ಪುಳಕ” ಎಂಬ ವಸ್ತಾರೆಯವರ ಮಾತು ಸತ್ಯ. ಪ್ರತಿ ಓದು ಒಂದು ಅಪೀಮು. ಓದಿನ ಚಟ ಅಂತದು. ಅದರಲ್ಲೂ ಕಾವ್ಯ ತೀರಾ ವಯಕ್ತಿಕ ಸಂತೋಷ. ಪ್ರತಿ ಸಾಲುಗಳೂ ಅವರವರ ಭಾವಕ್ಕೆ ಒಳಗೊಂಡು ತಮ್ಮದೇ ಆದ ಒಂದು ಹೊಸ ಲೋಕ, ಹೊಸ ಅನುಭವ ಸೃಷ್ಟಿಸುವ ಮಾಯೆ. ಆ ಅನುಭವ ಕೇವಲ ಒಂದು ’ವಾಹ್’ ಗೆ ನಿಂತುಮಾಯವಾಗಬಹುದು, ನಮ್ಮೊಳಗಿನ ಕಿಚ್ಚು ಹೆಚ್ಚಿ ರೋಮಾಂಚನವಾಗಬಹುದು ಅಥವಾ ನಮ್ಮೊಳಪ್ರಜ್ಞೆಗೆ ಚುಚ್ಚಿ ನಮ್ಮನ್ನು ಸಾಮಾಜಿಕವಾಗಿ ಎಚ್ಚರಿಸಬಹುದು.”

    ಪ್ರತಿಕ್ರಿಯೆ
  4. sindhu

    ಪ್ರಿಯ ಸಂಯುಕ್ತಾ,
    …..ಭಾವವಂ ಕ್ಷುಲ್ಲ ಜಗದಿಂ ಮೇಲೊಯ್ವ ಆವುದಾದೊಡಮೊಳಿತು..
    ಇದು ಡಿವಿಜಿಯವರ ಕಗ್ಗದ ಸಾಲು.
    ನಿಮ್ಮ ಬರಹ ಇದರ ಪ್ರತಿಫಲನದಂತಿದೆ. ಯಾವುದನ್ನೂ ನಿರಾಕರಿಸದ ಓದು ಒಂದು ನೈಪುಣ್ಯ.
    ಎಂದೋ ಯಾವುದೋ ದೇಶದಲ್ಲಿ, ಯಾವುದೋ ಕಾಲದಲ್ಲಿ ಭವಿಸಿದ ಒಂದು ಭಾವ ಇವತ್ತು ನನ್ನ ಎದೆಯನ್ನು ಆರ್ದ್ರಗೊಳಿಸಿದರೆ, ಪುಲಕಿಸಿದರೆ ಅದು ಆ ಸಾಲಿನ ಸಾರ್ಥಕತೆ.
    ನಿನ್ನೆ ರಾತ್ರಿ ಗೆಳತಿ ಅಪ್ಡೇಟಿಸಿದ ಸ್ಟೇಟಸ್ ಆಗಿರಬಹುದು ಅಥವಾ ಭರತೇಶ ವೈಭವವಿರಬಹುದು, ಅಥವಾ ಗುತ್ತಿ ತಿಮ್ಮಿಯರು ಬೆಟ್ಟದ ನೆತ್ತಿಯಲಿ ಕಂಡ ಸೂರ್ಯಾಸ್ತವಿರಬಹುದು.. ತುಂಟು ಸಾಲಿನ ನಿಂಬೆಗಿಡದ ಚೆಂದವಿರಬಹುದು,
    ಮತ್ತು ಈವತ್ತಿನ ಅನೇಕ ಬರಹಗಾರರ ಗದ್ಯ ಪದ್ಯಗಳು, ಎಲ್ಲ ಎಷ್ಟು ನವಿರಾದ ಭಾವಹುಟ್ಟಿಸುತ್ತವೆಯೋ ಅಷ್ಟೇ ಮಾಸ್ತಿ, ಕೃಷ್ಣಶಾಸ್ತ್ರಿ, ಬೀಚಿಯವರೂ.. ಎಲ್ಲರೂ ಒಂದೆಯೇ? ಆದರೆ ಅವರು ಉದ್ದೀಪಿಸುವ ಭಾವವೊಂದೇ.
    ಉದ್ದೀಪನಗೊಳ್ಳಲು ನಾವು ಬಿಟ್ಟರೆ.. ಎಲ್ಲರೂ ಒಳಹೋಗುತ್ತಾರೆ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
    ನಿಮ್ಮ ಲೇಖನ ತುಂಬ ಹಿಡಿಸಿ ಈ ಸ್ಪಂದನ ಬರೆದೆ.
    ಪ್ರೀತಿಯಿಂದ,
    ಸಿಂಧು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This