ಸಂಪು ಕಾಲಂ : "ಸಂಬಂಜ ಅನ್ನೋದು ದೊಡ್ಡದು ಕನಾ…”

ಹೀಗೇ ಕಾರ್ಯಮಗ್ನಳಾಗಿದ್ದೆ, ಜಗತ್ತನ್ನೆಲ್ಲಾ ಹದಿನಾಲ್ಕು ಇಂಚಿನ ಪರದೆಯ ಮೇಲೆ ತೆರೆದಿಟ್ಟು. ಈ ಮಧ್ಯೆ, ಜಗತ್ತೇ ಹದಿನಾಲ್ಕು ಇಂಚಾಗಿ ಬಿಟ್ಟಿದೆ ಅನ್ನೋದು ಬೇರೆ ಹೇಳಬೇಕಾದ ಮಾತಲ್ಲ ಬಿಡಿ. ಕೆಲವೇ ಸಾಲುಗಳಿಗೆ ಮಿತವಾದ ಟೆಕ್ಸ್ಟ್ ಗಳು, ಅದರ ಹಿಂದೂ ಮುಂದೂ ಸೇರುವ ಸೀಮಿತ ಪ್ರತ್ಯಯವಾದ ಎಮೋಟೈಕಾನ್ಸ್ ಗಳ ಜೊತೆ ಬೆಳೆಯುವ-ಬೆಸೆಯುವ ಸಂಬಂಧಗಳು, ನಡು ನಡುವೆ ಕೈ ಸ್ಪರ್ಶಿಸುವ ಕೀಲಿಮಣೆ ಮತ್ತು ಮೌಸುಗಳು. ಈ ರೀತಿಯಾಗಿ ನಮ್ಮ ಜೀವನವನ್ನೆಲ್ಲಾ ಆವರಿಸಿ ಬಿಟ್ಟಿರುವ ಈ ಹದಿನಾಲ್ಕಿಂಚಿನ ಪೋರನಿಗೆ ಎಷ್ಟು ಪವರ್ ಇದೆ ಎಂಬ ಯೋಚನೆ ಬಂದಾಗ, ಅದು ಅಡ್ಮಿರೇಶನ್ನೋ ಅಥವಾ ಇರಿಟೇಶನ್ನೋ ಅರ್ಥವಾಗದು. ಇಷ್ಟರಲ್ಲೇ ಪರದೆಯ ಮುಂದೆ ಒಂದು ಟಪಾಲು ಬಂದಿತ್ತು. ಅದೊಂದು ಪ್ರೀತಿಯ ನೆನಪು. ನನ್ನ ತಂಗಿ ತನ್ನ ಚಿಕ್ಕಂದಿನ ತಪ್ಪು ಅಕ್ಷರಗಳಲ್ಲಿ ನನಗಾಗಿ ತೋರಿದ ಪ್ರೀತಿ. ಇಂದಿಗೂ ಅದರ ಬೆಚ್ಚಗಿನ ಪರಿಮಳ ಮೈಯೆಲ್ಲಾ ಪಸರಿಸಿ ಕಣ್ಣು ತೇವಗೊಂಡವು. ಆಗಷ್ಟೇ ಬರೆಯಲು ಕಲಿಯುತ್ತಿದ್ದ ತಂಗಿ, ಬಣ್ಣದ ಲೇಖನಿ ಕೇಳಿದ್ದು, ಅಮ್ಮ ಕೊಡಿಸಲು ಹಿಂದು-ಮುಂದು ನೋಡಿದಾಗ ಅವಳು ಪೆಚ್ಚು ಮುಖ ಮಾಡಿದ್ದು. ತನ್ನ ಪುಟ್ಟ ಕೈಲಿ, ನನಗೆ ಅನಿರೀಕ್ಷಿತ ಉಡುಗೊರೆ ಕೊಡಬೇಕೆಂದು, ಇಡಿ ರಾತ್ರಿ ಕೂತು ಬರೆದದ್ದು, ಎಲ್ಲವೂ ನೆನಪಿನಂಗಳ ತಲುಪಿ ತನ್ನ ಶಕ್ತಿಯನ್ನು ವ್ಯಕ್ತಪಡಿಸಿದ್ದವು!
ನಮ್ಮ ಮನೆ ಎದುರು ಪ್ರತಿ ದಿನ ಒಂದು ಸಂಭ್ರಮ ನಡೆಯುತ್ತೆ ಕಣ್ರೀ. ಅದೇನು ಅಂದ್ರೆ, ಕಸ ಗುಡಿಸುವ ಕಾರ್ಪೋರೇಶನ್ ಕೆಲಸಗಾರರ ಹಾಜರಾತಿ ಸಮಯ. ಸರಿಯಾಗಿ ಒಂದು ನಿಗದಿತ ವೇಳೆಗೆ ಎಲ್ಲರೂ ಸೇರಿ, ಕೂತು ಹರಟೆ ಹೊಡೆಯುವುದು ನೋಡಲು ಎಂತ ಚೆನ್ನ! ಅವರಿವರು ಕೊಟ್ಟ ಕೆಟ್ಟ ಉಡುಗೊರೆಗಳನ್ನು ಹಂಚಿಕೊಳ್ಳುವುದು, ಯಾರದೋ ಪುಟ್ಟ ರೇಡಿಯೋದಲ್ಲಿ ಹಳೆ ಹಾಡು ಕೇಳಿ ಒಬ್ಬರನ್ನೊಬ್ಬರು ಛೇಡಿಸುವುದು, ನಕ್ಕು ನೆರಳಲ್ಲಿ ಕೂತು ದಣಿವಾರಿದ ನಂತರ ಯಥಾ ಪ್ರಕಾರ, ಕೆಲಸ. ಹೀಗೆ ಇವರದ್ದೇ ಒಂದು ಪ್ರಪಂಚ. ಯಾರೂ ಗಮನಿಸದೆ ಹೋಗುವ ಇವರಿಗೆ ಒಮ್ಮೆ ನೋಡಿ ನಕ್ಕರೆ ಎಂತಹ ಸಂತೋಷ ಗೊತ್ತಾ! ಒಮ್ಮೆ ನಿಂತು ಮಾತನಾಡಿದರೆ ಸಾಕು, ಮತ್ತೆಲ್ಲಿ ಸಿಕ್ಕರೂ ಅವರ ಮುಖ ಅರಳುತ್ತದೆ. “ಊಟ ಆಯಿತಾ ಅಕ್ಕಾ..” ಎಂದು ಆಪ್ಯಾಯಮಾನವಾಗಿ ಮಾತನಾಡುತ್ತಾರೆ. ಈ ಮಾತುಗಳು ನನ್ನಲ್ಲೂ ಅವರಲ್ಲೂ ಒಂದು ಅನಿರ್ವಚನೀಯ ಸಂಬಂಧವನ್ನು ಹುಟ್ಟಿಸಿರುತ್ತದೆ.
ನಮ್ಮ ಅಜ್ಜಿ ತುಂಬಾ ಸಂಪ್ರದಾಯಸ್ತರು. ಮಡಿ ಸೀರೆ ಒಣಗಿಸಿ, ಒದ್ದೆ ಬಟ್ಟೇಲಿ ಬಂದು ಆ ಒಣಗಿದ ಸೀರೆ ತೆಗೆದುಕೊಂಡು ಉಟ್ಟ ನಂತರವೇ ಮತ್ತೆಲ್ಲ ದಿನಚರಿ. ಕೈಗೆಟುಕದ ಎತ್ತರದ ಹಗ್ಗಕ್ಕೆ ಸೀರೆ ಒಣಗಿಸಬೇಕು, ಇಲ್ಲದಿದ್ದರೆ ದಾರಿಹೋಕರ ಕಾಟ. ಅದಕ್ಕಾಗಿ ತಾನು ಎಷ್ಟು ಸರ್ಕಸ್ ಮಾಡಿದರೂ ಪರವಾಗಿಲ್ಲ ಸೀರೆ ಮೈಲಿಗೆ ಆಗಬಾರದು ಅಷ್ಟೇ! ಹೀಗೆ ಒಂದು ದಿನ, ಅಜ್ಜಿಯ ಆ ಬಾಗಿ ಹೋದ ಶರೀರವನ್ನು ಹೊತ್ತು, ತುಂಬಾ ಶ್ರಮಿಸಿ ಕೈ ಮೇಲಕ್ಕೆತ್ತಿ ಹಗ್ಗದಿಂದ ಸೀರೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದರು. ಸ್ವಲ್ಪ ಸಹಾಯ ಮಾಡಿದ್ದಕ್ಕಾಗಿ, “ನಿನಗೆ ಒಳ್ಳೆ ಗಂಡ ಸಿಗಲಮ್ಮ” ಎಂದು ಹರಸಿದ್ದಕ್ಕಿಂತ, ಅವರ ಮುಖದ ಆ ಸಮಾಧಾನದ ಮಂದಹಾಸ ಆಗಾಗ ಕಾಡುತ್ತದೆ. ನಮಗೆಲ್ಲ ಜಬರ್ದಸ್ತ್ ಸ್ಟೀಲ್ ಲೋಟಗಳು, ನಮ್ಮ ಮನೆಯ ಕೆಲಸಗಾರರಿಗೆ ಅಲ್ಯುಮಿನಿಂ ಲೋಟ (ಆಗ ಅದನ್ನು ಸಿಲ್ವರ್ ಲೋಟ ಅನ್ನುತ್ತಿದ್ದರು) ಇಟ್ಟಿದ್ದ ನಮ್ಮ ಅಜ್ಜಿ ಬಗ್ಗೆ ಅದ್ಯಾಕೋ ತುಂಬಾ ಸಿಟ್ಟು ಬರುತ್ತಿತ್ತು. ಆದರೂ ಅಜ್ಜಿಗೂ ಆ ಕೆಲಸಗಾರರಿಗೂ ಇರುವ ಆತ್ಮೀಯ ಸಂಬಂಧ, ನನಗೂ ಆ ಕೆಲಸಗಾರರಿಗೂ, ಪ್ರಯತ್ನಿಸಿದರೂ ಬರಲಿಲ್ಲ. ಇದೇ ಅಜ್ಜಿ ಪಟ್ಟಣಕ್ಕೆ ಬಂದು ಬಿಟ್ಟ ಮೇಲೆ, “ಆ ಗೂಬೇನ ಒಂದು ಸರಿ ಬರಕ್ಕೆ ಹೇಳು ನೋಡಬೇಕು ಅನ್ಸತ್ತೆ”, ಎಂದು ಆ ಕೆಲಸದವರನ್ನು ನೆನೆದಾಗ, ಅನ್ನಿಸುವುದೇ ಇಷ್ಟು, ಈ ಬಂಧ ಅನ್ನುವುದು ಯಾರಲ್ಲಿ ಹೇಗೆ ಹುಟ್ಟುತ್ತದೋ ಹೇಳಲಿಕ್ಕಾಗದು. ಇದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು.
ಈ ಆತ್ಮೀಯತೆ ಅನ್ನುವುದು ನಮ್ಮ ಸಂಸ್ಕೃತಿಯು ಬಳುವಳಿಯಾಗಿ ನೀಡಿದ ಅಂಶ. ಇದನ್ನು ನಮ್ಮ ಈ ಓಟದ ಬದುಕಿನಲ್ಲಿ ಎಲ್ಲೋ ಮರೆಯಾಗಿಸಿದ್ದೇವೆ. ಈ ವ್ಯಕ್ತಿ ವ್ಯಕ್ತಿ ನಡುವಿನ ಸಂಬಂಧಗಳನ್ನು ಉಳಿಸುವುದು ಬೆಳೆಸುವುದರಿಂದ ನಮಗೆ ತಿಳಿಯದ ಅತೀವ ಆನಂದ ದೊರೆಯುತ್ತದೆ. ಜೀವನ ಅನ್ನೋದು ಇಂತಹ ಸಣ್ಣ ಸಣ್ಣ ಸಂತೋಷಗಳಲ್ಲೇ ಇದೆ ಅಲ್ಲವೇ! ಸಾಕಷ್ಟು ಬಾರಿ ನಾವು ಇದನ್ನು ಗಮನಿಸದೆ ಹೋಗುತ್ತೇವೆ. ನಮ್ಮ ಬಿಡುವಿಲ್ಲದ ಬದುಕಿನಲ್ಲಿ ಮುಳುಗಿ ನಿರ್ಲಕ್ಷಿಸಿರುತ್ತೇವೆ. ರಾಜೇಶ್ ಖನ್ನ ನಟಿಸಿರುವ ‘ಬಾವರ್ಚಿ’ ಸಿನೆಮಾದ ಈ ಸಾಲು ನನ್ನ ಪತಿಗೆ ಬಹಳ ಇಷ್ಟ: “ಜೀವನದಲ್ಲಿ ಅತ್ಯಂತ ಸುಖ ಕೊಡುವ ಘಳಿಗೆಗಳು ಬಹಳ ಕಡಿಮೆ, ಈ ಉತ್ಕೃಷ್ಟ ಘಳಿಗೆಗಳ ಬೆನ್ನೇರಿ ನಾವು ಜೀವನದ ಇತರ ಅನೇಕ ಚಿಕ್ಕ ಚಿಕ್ಕ ಸುಖ ಸಂತೋಷಗಳನ್ನು ಕಳೆದುಕೊಳ್ಳುತ್ತೇವೆ” ಎಂದು.

ಈಗ ಎಲ್ಲ ಸಂಬಂಧಗಳೂ ಸಹ ಹೈ ಟೆಕ್ ಆಗಿಬಿಟ್ಟಿವೆ. ನನಗೊಬ್ಬಳು ಹೇಳಿದ್ದಳು, ತೀರ ಖಾಸಗೀ ವಿಚಾರಗಳೂ ಸಹ ನಾವು ಟೆಕ್ಸ್ಟ್ ಮಾಡಿ ಬಿಡುತ್ತೇವೆ ಎಂದು! ಅಂದು ಅದರ ಪರಿಣಾಮವನ್ನು ಸ್ವಲ್ಪ ತುಂಟತನದಿಂದಲೇ ಯೋಚಿಸಿ ನಕ್ಕಿದ್ದೆ. ಆದರೆ ಇಂದು, “ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತ ಉಂಡು, ದುಃಖ ಹಗುರವೆನುತಿರೆ, ಪ್ರೇಮವೆನಲು ಹಾಸ್ಯವೇ” ಎಂಬ ಮಾತಿಗೆ ಅಮೃತಾಂಜನ ಹಚ್ಚಿ “ನೀವು ಪ್ರೀತಿಸುವುದಾದರೆ ಕೆಂಪು ಬಟನ್ ಒತ್ತಿ, ಇಲ್ಲವಾದರೆ ಕಪ್ಪು ಬಟನ್ ಒತ್ತಿ” ಎಂಬಿತ್ಯಾದಿ ಭಾವನೆಗಳ ತಿದ್ದುವ ಕಾಲವಾದ್ದರಿಂದ, ಅದರ ತೀಕ್ಷ್ಣತೆ ಅರಿವಾಗಹತ್ತಿದೆ. ಇದರ ಪರಿಣಾಮ ನಮ್ಮ ಮುಂದಿನ ಪೀಳಿಗೆಗೆ ತಟ್ಟುತ್ತದೆ ಎಂಬುದಂತೂ ಸತ್ಯ. ಕೆಲವು ಟೆಕ್ಕಿಗಳ ಮನೆಗಳಲ್ಲಿ ಗಂಡ-ಹೆಂಡತಿ ಒಬ್ಬರನ್ನೊಬ್ಬರು ಭೇಟಿಯಾಗುವುದೇ ವಾರಾಂತ್ಯದಲ್ಲಿ ಎಂಬುದನ್ನು ಕೇಳಿ ಚಕಿತಳಾಗಿದ್ದೆ. ಇನ್ನೂ ಆಶ್ಚರ್ಯವನ್ನು ಉಂಟು ಮಾಡಿದ್ದ ಸಂಗತಿ ಎಂದರೆ, ಮಕ್ಕಳನ್ನು ನೋಡಿಕೊಳ್ಳುವ ಕ್ರೆಚ್ ಗಳೂ ಸಹ ರಾತ್ರಿ ಪಾಳಿ ಪ್ರಾರಂಭಿಸಿದೆ ಎಂದು ತಿಳಿದಾಗ!
ಹೀಗೆ ಎಲ್ಲಾ ರೀತಿಯ ತ್ಯಾಗಗಳನ್ನೂ ಮಾಡಿ, ನಮ್ಮ ಓಟದಲ್ಲಿ ಮೊದಲನೇ ಸ್ಥಾನ ಪಡೆಯ ಹೊರಟರೆ, ಅದು ಮುಗಿಯುವಷ್ಟರಲ್ಲಿ ಅಂತ್ಯ ಬೇರೆಯ ರೂಪವೇ ತಾಳಿರುತ್ತದೆ. ನನ್ನ ಸ್ನೇಹಿತ ತಿಳಿಸಿದ್ದ, ಜಾನ್ ಲೆನನ್ ನ ಈ ಮಾತು ಆಗಾಗ ನೆನಪಿಗೆ ಬರುತ್ತದೆ: ” Life is what happens while you are busy making other plans”. ಎಷ್ಟು ಸತ್ಯದ ಮಾತಲ್ಲವೇ! ಆದ್ದರಿಂದ ಒಮ್ಮೆ ನಮ್ಮ ಓಟಕ್ಕೆ ಪಾಸ್ ಕೊಡೋಣ. ಹಿಂತಿರುಗಿ ನೋಡೋಣ ನಾವು ಏನೆಲ್ಲಾ ಕಳೆದುಕೊಂಡೆವು, ಯಾರನ್ನೆಲ್ಲಾ ಕಡೆಗಣಿಸಿದ್ದೆವು, ಹೇಗೆಲ್ಲ ನೋಯಿಸಿದ್ದೆವು ಎಂದು. ಅವನ್ನು ಸರಿಪಡಿಸಲು ಪ್ರಯತ್ನಿಸೋಣ. ಏಕೆಂದರೆ ಸಂಬಂಧ ಅನ್ನೋದು ದೊಡ್ಡದಲ್ಲವೇ!
 

‍ಲೇಖಕರು G

June 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

 1. Gopaal Wajapeyi

  ನಮ್ಮ ಬದುಕೇ ಹದಿನಾಲ್ಕು ಇಂಚಿನ ಪರದೆಯ ಮಿತಿಗೆ ಒಳಗಾಗಿಬಿಟ್ಟಿದೆ… ಎಂಥ ಕಟು ವಾಸ್ತವ ಇದು…! ನಮ್ಮ ಬದುಕೇ ‘ಬಟನ್ನುಗಳ ಮೇಲೆ’ ನಡೆಯುತ್ತಿದೆ…! ಸಂಬಂಧವೆಂಬುದು ಕೇವಲ ವ್ಯವಹಾರದ ಪದವಾಗಿ ಉಳಿದುಬಿಟ್ಟಿದೆ. ಅಲ್ಲಿ ಸಂವೇದನೆಗೆ ಸ್ಥಾನವೇ ಇಲ್ಲ… ‘ಸೂತ್ರ’ವೆ ಹರಿದು ಹೋಗಿದೆ. ಆ ಸೂತ್ರವನ್ನು ಮತ್ತೆ ಜೋಡಿಸಬೇಕು. ಇಲ್ಲದಿದ್ದರೆ ಯಾರಿಗೆ ಯಾರೋ ಪುರಂದರ ವಿಠಲ…
  ಸಂಯುಕ್ತಾ… , ನಿಮ್ಮ ವಿಚಾರಧಾರೆಗೆ, ನಿರೂಪಣೆಗೆ ಮತ್ತೊಮ್ಮೆ ನಮೋ ಎಂಬೆ.

  ಪ್ರತಿಕ್ರಿಯೆ
 2. Badarinath Palavalli

  ಪುರ ಕಾರ್ಮಿಕರನ್ನೂ ಮನುಷ್ಯರಂತೆ ಪಾಲಿಕೆ ಯಾವತ್ತಿಗಾದರೂ ಕಾಣುತ್ತದೆಯೋ ಕಾಣೆ, ನೀವಂತು ಅವರನ್ನು ಉಲ್ಲೇಖಿಸಿದ್ದು ಖುಷಿಯಾಯ್ತು.

  ಪ್ರತಿಕ್ರಿಯೆ
 3. D.RaviVarma

  ” Life is what happens while you are busy making other plans”. ಎಷ್ಟು ಸತ್ಯದ ಮಾತಲ್ಲವೇ! ಆದ್ದರಿಂದ ಒಮ್ಮೆ ನಮ್ಮ ಓಟಕ್ಕೆ ಪಾಸ್ ಕೊಡೋಣ. ಹಿಂತಿರುಗಿ ನೋಡೋಣ ನಾವು ಏನೆಲ್ಲಾ ಕಳೆದುಕೊಂಡೆವು, ಯಾರನ್ನೆಲ್ಲಾ ಕಡೆಗಣಿಸಿದ್ದೆವು, ಹೇಗೆಲ್ಲ ನೋಯಿಸಿದ್ದೆವು ಎಂದು. ಅವನ್ನು ಸರಿಪಡಿಸಲು ಪ್ರಯತ್ನಿಸೋಣ. ಏಕೆಂದರೆ ಸಂಬಂಧ ಅನ್ನೋದು ದೊಡ್ಡದಲ್ಲವೇ!
  ಮೇಡಂ , ನಿಮ್ಮೊಳಗಿನ ಬರಹಗಾರ್ತಿಗೆ ಒಂದು ಪ್ರೀತಿಯ ವಂದನೆ ಮತ್ತು ಅಭಿನಂದನೆ… ಇದು ನಾವು ಇಂದು ನಮ್ಮನ್ನು ಎಲ್ಲೋ ಕಳೆದುಕೊಂಡು ಮತ್ತೆ ನಮ್ಮನ್ನೇ ,ಮನ ಶಾಂತಿಯನ್ನು ಹುಡುಕುತ್ತಿರುವ ಹುಮ್ಬತನವಸ್ತೆ… ನಮ್ಮ ಹಿರಿಯರಿಗೆ ನಮಗಿರುವಸ್ತು ಹಣವಿರಲಿಲ್ಲ,ಸವಲತ್ತುಗಳಿರಲಿಲ್ಲ ಅಲ್ಲಿ ದುರಾಶೆ ಕೂಡ ಇರಲಿಲ್ಲ, ಅಸ್ತೆಲ್ಲಕ್ಕು ಮಿಗಿಲಾಗಿ ಒತ್ತಡವಂತು ಇರಲೇ ಇಲ್ಲವೇನೋ… ಆದರೆ ಇಂದು ನಮ್ಮಬಳಿ,ಹಣವಿದೆ,ಸವಲತ್ತುಗಳಿವೆ, ಆದರೆ ಅದ್ಯಾಕೆ ಅವರಿಗಿದ್ದ ಜೀವನ ಪ್ರೀತಿ, ಆ ಕುಶಿ, ಆ ನಗು, ಆ ತಾಳ್ಮೆ ಎಲ್ಲವು ಇಲ್ಲವಾಗಿದೆ..ನಾವು ಎಲ್ಲಿಗೆ ಓಡುತ್ತಿದ್ದೇವೆ ಎನ್ನುವ ಯೋಚನೆ ಮಾಡದೆ ಓಡುತ್ತಿದ್ದೇವೆ….. ಇದನ್ನು ಒಮ್ಮೆ ಸ್ವಲ್ಪ ನಿಂತು, ಆಲೋಚಿಸಿದದಿದ್ದಲಿ ಮುಂದೆ ಕಂದಕಕ್ಕೆ bilodantu ಸತ್ಯ…… ,
  ನಿಮ್ಮ ಚಿಂತನೆ,ಜೀವನ ಪ್ರೀತಿ ಅದನ್ನು ನಮಗೆ ಉಣ್ಣಿಸುವ ರೀತಿ .. ನನಗೆ ತುಂಬಾ ಇಸ್ತವಾಯ್ತು….
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 4. Sreedhara KT

  ತುಂಬಾ ಚೆನ್ನಾಗಿದೆ. ” Life is what happens while you are busy making other plans”,

  ಪ್ರತಿಕ್ರಿಯೆ
 5. Swarna

  ಇಲ್ಲಿ ಬಟನ್ ಕೊಟ್ಟಿಲ್ವಲ್ಲ ? 🙂
  ಅದೇನೋ ಅಜ್ಜಿಗಳ ಆಚರಣೆಯನ್ನ ನಾವು ವಿರೋಧಿಸಿದರೂ ಅವರಿಗೆ ಸಂಬಧಗಳನ್ನ ಹೇಗೆ ಬೆಳೆಸ್ಕೊಬೇಕು ಅಂತ
  ಗೊತ್ತಿತ್ತು ಅನ್ಸತ್ತೆ.
  ಚೆನ್ನಾಗಿದೆ
  ಸ್ವರ್ಣಾ

  ಪ್ರತಿಕ್ರಿಯೆ
 6. Anonymous

  ಹದಿನಾಲ್ಕು ಇಂಚಿನ ಪರದೆ ಸಂಬಂಜಗಳನ್ನು ಅಲಿಸಿ ಹ಻ಕಿದೆಯೇ ಅಥವಾ ಒಂದು ವಿಶಾಲ ಫರಿದಿಯಲ್ಲಿ ಕೂಡಿಸಿದೆಯೇ ! ಈಗಂತು ಹದಿನಾಲ್ಕು ಇಂಚಿನ ಕಾಲ ಹೋಗಿ ನಾಲ್ಕಾರು ಇಂಚುಗಳಿಗೆ ಇಳಿದು ಯಾವ ಕಾಲವಾಯಿತೋ ? ಒಬ್ಬ ವಕೀಲ ಸ್ನೆಹಿತೆ ಹೇಳುತ್ತಿದ್ದರು : ಈ ಫೇಸ್ ಬುಕ್ ನಿಂದಾಗಿ ನನ್ನ ಬಾಲ್ಯ ಸ್ನೇಹಿತರನೇಕರನ್ನು ಮತ್ತೆ ಪಡೆದುಕೊಂಡೆ ಎಂದು . ಇಂದಿನ ವಲಸೆ ಬದುಕಿನ ದಿನಮಾನದಲ್ಲಿ ಸಂಬಂಜದ ಸೂತ್ರವೇ ಈ ನಾಲ್ಕಿಂಚಿನಲ್ಲಡಗಿದೆ . ಮತ್ತು ಹೊಸ ಹೊಸ ಸಂಬಂಧಗಳು ಏರ್ಪಟ್ಟಿವೆ ತೆಳು ಸಂಬಂಧಗಳು , ಗಟ್ಟಿ ಸಂಬಂಧಗಳು ಎಲ್ಲಾ ಏರ್ಪಟ್ಟಿವೆ . ಮೊನ್ನೆ ಒಬ್ಬರು ಫೇಸ್ ಬುಕ್ ಮಿತ್ರರಿಗೆ ಮಧ್ಯರಾತ್ರಿಯಲ್ಲಿ ಹೆದ್ದಾರಿಯಲ್ಲಿ ಪೋಲೀಸರು ಹಿಡಿದಾಗ ಻ವರ ನೆರವಿಗೆ ಧಾವಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದರು. ನನಗಂತು ಇದು ಜ್ಞಾನದ ಆಗರ ಮಾತ್ರವಲ್ಲ ಸಮಾನ ಮನಸ್ಕರೊಂದಿಗೆ ಆತ್ಮೀಯ ಸಂಬಂಧ ಬೆಳೆಸುವ ಹೊಸ ಸೂತ್ರಧಾರ ಸುಖಾಸುಮ್ಮನೆ ಅದನ್ನು ಬ್ಲೇಮ್ ಮಾಡುವುದು ಒಂದು ಫ್ಯಾಷನ್ ಆಗಿದೆಯೆ ಎಂದೆನಿಸಿದೆ .

  ಪ್ರತಿಕ್ರಿಯೆ
 7. vageesha JM

  ತುಂಬಾ ಹಿಡಿಸಿತು ನಿಮ್ಮ ಬರಹ, ಮನ ಮುಟ್ಟುವಂತೆ ಬರೆದಿದ್ದೀರಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: