ಸಂಪು ಕಾಲಂ : ಯಾವ ಪ್ರಣಾಳಿಕೆಗಳ ಅಗತ್ಯಗಳಿಲ್ಲದೆ ಸ್ತ್ರೀಸಂವೇದನೆ ಗೆಲ್ಲುತ್ತದೆ


ಇಂದು ಒಬ್ಬ ಹೆಣ್ಣು ತನ್ನ ಕಾಲಮೇಲೆ ತಾನು ನಿಲ್ಲಬಹುದು. ಅವಳಿಗೆ ಬೇಕಾದ ವಿದ್ಯಾರ್ಹತೆ ಪಡೆಯುತ್ತಿದ್ದಾಳೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಳೆ. ತನಗೆ ಬೇಕಾದಂತಹ ಗಂಡನನ್ನು ಪಡೆಯುವ ಸವಲತ್ತುಗಳು ಆಕೆಯದಾಗಿವೆ. ಮದುವೆಯ ನಂತರವೂ ತನಗೆ ಬೇಕಾದಂತಹ ಸ್ವತಂತ್ರ ಜೀವನವನ್ನು ತಾನು ಬಾಳಲು ಸಾಧ್ಯವಾಗುತ್ತಿದೆ. ಇಂದು ಆಕೆ ಸಾಮಾಜಿಕ, ರಾಜಕೀಯ, ಆರ್ಥಿಕ ಎಲ್ಲ ಸ್ಥರಗಳಲ್ಲೂ ದನಿ ಎತ್ತಿದ್ದಾಳೆ –– ಎಂಬ ಈ ರೀತಿಯಾದ ಇಮೇಜ್ ನಿಮ್ಮ ಮನಸ್ಸಿನಲ್ಲಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಮುಂದಿನ ಸಾಲುಗಳು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು.
ಬೆಂಗಳೂರಿನಂತಹ ನಗರಗಳಲ್ಲಿ ಅದರಲ್ಲೂ ಮೇಲುವರ್ಗದ ಜನರ ಮೇಲ್ನೋಟದ ಕಥೆ ಇದಾಗಿರಬಹುದು ಅಷ್ಟೆ! ಇಂದಿನ ಕಾಲದ್ದೇ ಆದ ಕೆಲವು ಅತ್ಯಂತ ಸಾಧಾರಣ ಎನಿಸುವ ಕೆಲವು ಉದಾಹರಣೆಗಳನ್ನು ಕೊಡುತ್ತೇನೆ ಗಮನಿಸಿ:
– ಸುಮಾರು ಐದಾರು ವರ್ಷಗಳ ಹಿಂದಿನ ಘಟನೆಯಷ್ಟೇ, ನನ್ನ ನೆರೆಮನೆಯ ರಾಜಸ್ತಾನಿ ’ಹುಡುಗಿ’ಯೊಬ್ಬಳು. ಮದುವೆಯಾಗಿ ಗಂಡನ ಜೊತೆ ಬೆಂಗಳೂರಿಗೆ ಬಂದು ಅವಳಿಗೆ ಮೊದಲೆರಡು ಹೆಣ್ಣು ನಂತರ ಒಂದು ಗಂಡು ಮಕ್ಕಳಾಗಿದ್ದವು. ಮೂರನೆಯದು ಗಂಡಾದಾಗ ಅವಳು ಇನ್ನಾದರೂ ತಾನು ಮನೆಯಲ್ಲಿ ನೆಮ್ಮದಿಯಿಂದಿರಬಹುದೆಂದು ಕಣ್ಣೀರಿಟ್ಟಿದ್ದಳು. ಅವಳ ಹಿರಿಮಗಳು ನಮ್ಮ ಕಣ್ಣ ಮುಂದೆ ಬೆಳೆದ ಕೂಸು. ಏಳನೇ ತರಗತಿಗೆ ಬರುವಷ್ಟರಲ್ಲಿ, ಅವಳ ತಾಯಿ “ಮಗಳು ಹೈಸ್ಕೂಲ್ ಗೆ ಬಂದಾಗ ಅವಳಿಗೆ ಮದುವೆ ಗೊತ್ತು ಮಾಡಿಬಿಡಬೇಕು ಎಂದಿದ್ದಾರೆ ಅವಳ ತಂದೆ”, ಎಂದ ವಿಚಾರ ಕೇಳಿ ನಾವು ದಂಗುಬಡಿದಿದ್ದೆವು.
– ಒಂದೆರಡು ತಿಂಗಳುಗಳ ಹಿಂದೆ ನನ್ನ ಗಂಡನ ಸ್ನೇಹಿತೆಯೊಬ್ಬಳು, ನನ್ನ ಬಳಿ ಮಾತನಾಡಬೇಕೆಂದು ಮನೆಗೆ ಬಂದಿದ್ದಳು. ಅವಳು ಹೇಳಿದ ಕಥೆ ಇದು. ಕಛೇರಿಯಲ್ಲಿ ಅವಳ ಮ್ಯಾನೇಜರ್ ಇನ್ನಿಲ್ಲದಂತೆ ಕಿರುಕುಳ ಕೊಡುತ್ತಿದ್ದನಂತೆ. ಹಿರಿಯ ಅಧಿಕಾರಿಗಳಿಗೆ ಹೇಳಿದರೆ, ಇವಳ ಮಾತು ತೇಲಿಸಿಬಿಟ್ಟು ಅವನನ್ನೇ ಸಮರ್ಥಿಸುತ್ತಿದ್ದರಂತೆ. ಕೊನೆಗೆ ಕೆಟ್ಟ ಹೆಸರು ಬಂದದ್ದು ಇವಳಿಗೆ.
– ನಾನು ಡಿಗ್ರೀ ಸೇರುವ ಹೊತ್ತಿಗೆ, ನನ್ನ ಸ್ನೇಹಿತರನೇಕರು ಓದು ಅರ್ಧಕ್ಕೆ ನಿಲ್ಲಿಸಿ ಮದುವೆ ಸಿದ್ಧತೆ ನಡೆಸಿದ್ದರು.
ಇಂತಹ ಅನೇಕ ಮಹಿಳಾಪರವಲ್ಲದ ಜೀವಂತ ಉದಾಹರಣೆಗಳು ಇಂದಿಗೂ ನಮ್ಮ ಕಣ್ಣ ಮುಂದೆ ಇವೆ. ಇವೆಲ್ಲ ಕಣ್ಣಿಗೆ ರಾಚುವಂತಹ ಶೋಷಣೆಯ ಸ್ಪಷ್ಟ ಫಾರ್ಮ್ ಗಳು. ಇನ್ನು ಇದಲ್ಲದೆ ಬಹುಶಃ ಪ್ರತಿಯೊಬ್ಬ ಮಹಿಳೆಯೂ ಅನುಭವಿಸುವ “ಸಾಫ್ಟ್” ಶೋಷಣೆಗಳು ಲೆಕ್ಕವಿಲ್ಲದಷ್ಟು. ಇವ್ಯಾವುವು ಎಂಬ ಚರ್ವಿತ ಚರ್ವಣಕ್ಕಿಂತ ನಾನು ಅದರ ಕಾರಣಗಳತ್ತ ಆಲೋಚಿಸಬಯಸುತ್ತೇನೆ.
ಕಾಲಾಯಗತ ಹೆಣ್ಣಿನ ಶೋಷಣೆಯ ಪ್ರಮಾಣಗಳು ಖಂಡಿತ ಬದಲಾಗಿವೆ. ನಮ್ಮ ಹಿಂದಿನ ತಲೆಮಾರಿನ ಹೆಂಗಸರು ನಾವು “ದ ಸೆಕಂಡ್ ಸೆಕ್ಸ್” ಹೌದು ಎಂದು ಸಂಪೂರ್ಣ ನಂಬಿದ್ದರು. ಗಂಡಸರು ಹಾಕಿದ ಗೆರೆ ದಾಟುತ್ತಿರಲಿಲ್ಲ. ಇಂದು ಅಷ್ಟು ಕಟ್ಟುನಿಟ್ಟಿಲ್ಲ, ಕಾರಣ ನಮ್ಮೊಳಗೆ ಜಾಗೃತವಾಗುತ್ತಿರುವ ದನಿ. ಆದರೆ, ಆ ಗೆರೆ ಸಂಪೂರ್ಣ ಅಳಿಸಿಹೋಗಿದೆಯೆ? ಅದಿನ್ನೂ ಆರದ ಗಾಯವಾಗಿ ನಮ್ಮೊಳಗೆ ಅಚ್ಚಾಗಿದೆ. ಮುಂದೊಮ್ಮೆ ಅಳಿಸಿಹೋಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಅಲ್ಲಿಗೆ ಈಗಿನ ನಮ್ಮ ಪರಿಸ್ಥಿತಿ ಒಂದು ಗ್ರೇ ಏರಿಯಾ. ನಾವು ಇತ್ತ ಸಂಪೂರ್ಣ ಸ್ವತಂತ್ರರೂ ಆಗದ, ಅತಂತ್ರರೂ ಆಗದ ನಡುವಿನ ಸ್ಥಾನ. ಅಂದರೆ, ಒಂದು ’ಟ್ರಾನ್ಸಿಷನಲ್ ಫೇಸ್’, ಬದಲಾವಣೆಯ ಹಂತದಲ್ಲಿ ನಾವಿದ್ದೇವೆ. ನಮ್ಮ ಮುಂದಿನ ಪೀಳಿಗೆಯವರಿಗಾಗಿ ದಾರಿಯನ್ನು ಕಟ್ಟುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಈ ಹೊತ್ತಿನಲ್ಲಿ ನಮ್ಮ ಆ ಜವಾಬ್ದಾರಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ನಮ್ಮ ಇಂದಿನ ಅಗತ್ಯ.
ಈ ಬದಲಾವಣೆಯ ಹಂತದಲ್ಲಿ, ಮುಖ್ಯವಾಗಿ ನಾವು ಮಹಿಳೆಯರು ನಮ್ಮ ಸಾಮರ್ಥ್ಯಗಳನ್ನು, ಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ಅರ್ಥಮಾಡಿಕೊಳ್ಳಲು ಸೋಲುತ್ತಿರುವಲ್ಲಿ ಹೆಣ್ಣು ಎಂದರ ಹೀಗೆ ಎಂಬ ಒಂದು ಆಯಕಟ್ಟು ವಿಧಿಸಲಾಗುತ್ತಿರುವುದು ಮುಖ್ಯ ಕಾರಣ. ಒಳ್ಳೆಯದಾಗಿಯೋ ಅಥವಾ ಕೆಟ್ಟದಾಗಿಯೋ ಅಂತು ಮಹಿಳೆಯ ಕುರಿತು ಒಂದು ಇಮೇಜ್ ಬಿಲ್ಡಿಂಗ್ ಕೆಲಸ ನಡೆಯುತ್ತಲೇ ಇದೆ. ಇದು ಸಹ ಇಂದಿನ ಬದಲಾವಣೆಯ ಹಂತದ ಬಳುವಳಿ ಎಂದು ಭಾವಿಸುವೆ. ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ ಹೇಳಿದ ಮಾತು: “A Few Women have extra passion for mathematics. They minus their age, multiply the price of their clothes, and add at least a few years to the age of their best friend”. ಇದು ಮಹಿಳೆಯ ಬಗೆಗಿರುವ ಸಾಧಾರಣ ಪ್ರತಿಮೆ. ಹೆಣ್ಣೊಬ್ಬಳು ತನ್ನ ಸೌಂದರ್ಯ, ದೇಹ, ಬಟ್ಟೆ, ಬರೆ ಇತ್ಯಾದಿ ಅಗತ್ಯಗಳು, ಇವುಗಳ ಬಗ್ಗೆಯೇ ಯೋಚಿಸುತ್ತಿರುತ್ತಾಳೆ ಎಂಬ ಹಳಸಲಾಗಿರುವ ಒಂದಷ್ಟು ಕೆಟ್ಟ ಜೋಕುಗಳು ಬಿಟ್ಟರೆ ಇನ್ಯಾವುದೂ ಹೊಸತು ಸಿಗುತ್ತಿಲ್ಲ ಸಮಾಜಕ್ಕೆ. ಇದರ ರೂವಾರಿಯೂ ಮಹಿಳೆಯೇ ಎಂಬುದು ನನ್ನ ಅನಿಸಿಕೆ. ಸಮೀಕ್ಷೆಗಳ ಪ್ರಕಾರ ಶೇಕಡಾ ತೊಂಭತ್ತರಷ್ಟು ಮಹಿಳೆಯರು ತಮ್ಮ ದೇಹ, ಸೌಂದರ್ಯಗಳ ಬಗ್ಗೆ ಚಿಂತಿತರಾಗಿರುತ್ತಾರೆ. ಅದನ್ನು ಮೀರಿ ನಾವಿಂದು ಬೆಳೆಯಬೇಕಾಗಿದೆ.
ನನ್ನ ಮತ್ತೊಬ್ಬ ಸ್ನೇಹಿತ ರಾಜೇಂದ್ರ ಪ್ರಸಾದನ ಈ ಮಾತು ಎಷ್ಟು ಸತ್ಯ ಎನಿಸುತ್ತದೆ. “’ಹೆಣ್ಣು’ ಎನ್ನುವ ಸ್ತ್ರೀವಾಚಕಗಳೇ ಕುಗ್ಗಿಸಿಬಿಟ್ಟವು ಅವಳನ್ನು ಈ ನೆಲದ ಮೇಲೆ.. ಅಸಲಿಗೆ ಮನುಷ್ಯ ಈ ಜೈವಿಕ ಸ್ವರೂಪಕ್ಕೆ ಅತೀತ ಬೆಳೆಯುತ್ತಿರುವ ಈ ಹೊತ್ತಿನಲ್ಲೂ ಈ ಸ್ತ್ರೀವಾಚಕ ಪದಗಳ ಉಚ್ಚಾರದಲ್ಲೆಲ್ಲೋ ಅಡಗಿರುವ ಭಾವದಲ್ಲಿ ಲೋಪವಿದೆ ಅನಿಸುತ್ತೆ”. ಯಾಕೆ ಆ ಪದದ ಉಚ್ಚಾರದಲ್ಲಿ ಲೋಪ ಇದೆ ಎಂದರೆ ಇಮೇಜ್ ಬಿಲ್ಡಿಂಗ್ ನ ಸ್ವರೂಪದ ಕಾರಣಕ್ಕಾಗಿ! ಇವುಗಳನ್ನು ಮೀರಿದ ತನ್ನ ಸ್ವಂತಿಕೆ, ವ್ಯಕ್ತಿತ್ವ, ವೈಚಾರಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿಗಳ ಮಹತ್ವ ಹೆಣ್ಣು ಅರ್ಥ ಮಾಡಿಕೊಳ್ಳಬೇಕಾಗಿರುವುದು ಬಹಳ ಮುಖ್ಯ.

ಹತ್ತೊಂಭತ್ತನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು “Can you better the condition of your women? Then there will be hope for your well-being. Otherwise you will remain as backward as you are now” ಎಂದಿದ್ದರು. 1992 ರಲ್ಲಿ ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ನಾನಿ ಫಾಲ್ಕಿವಾಲ, “It is only through female education at all levels and the private initiative of well-educated women, that this country will ever be transformed into what our Constitution intended it to be” ಎಂದಿದ್ದರು. ಇದೀಗ 2014 ನೇ UNO ನ ಅಂತರ್ರಾಷ್ತ್ರೀಯ ಮಹಿಳಾದಿನದ ಪ್ರಣಾಳಿಕೆ “Equality for Women is Progress for All” ಎಂಬುದಾಗಿದೆ.
ಇಲ್ಲಿ ಗಮನಿಸಬಹುದಾದ್ದು ಎರಡು ವಿಚಾರ. ಒಂದು ಹೆಣ್ಣಿನ ಸಮಾನತೆ, ಹಕ್ಕುಗಳ ಸಾಮಾಜಿಕ ಅಗತ್ಯ ಎಷ್ಟು, ಆಕೆಯ ಸ್ಥಾನಮಾನಗಳು ಎಷ್ಟು ಮಹತ್ವದ್ದು ಎಂದು. ಎರಡನೆಯದು, ಹತ್ತೊಂಭತ್ತನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನವಾದರೂ ನಮ್ಮ ಥಿಯರಿಗಳು, ಪ್ರಣಾಳಿಕೆಗಳು ಬೆಳವಣಿಗೆಯಾಗುತ್ತಿಲ್ಲ. ಅದೇ ಹೇಳಿಕೆಗಳು, ನಿರ್ಧಾರಗಳು, ಎಂದು. ಈ ಸ್ಥಗಿತದ, ನಿಂತನೀರಾದ ನಿರ್ಣಯಗಳ ಹೊಣೆ ಬಹುಪಾಲು ಮಹಿಳೆಯೇ ಆಗಿದ್ದಾಳೆ. ಬಹಳ ಸುಲಭವಾಗಿ ಹೆಣ್ಣೊಬ್ಬಳು ತನ್ನನ್ನು ತಾನು ಬಿಟ್ಟುಕೊಡುತ್ತಾಳೆ. “ತ್ಯಾಗಮಯಿ” ಎಂದು ಹೇಳುವ ಮಾತು ಸುಳ್ಳಲ್ಲ. ಹೇಗೆಂದರೆ, ಗಂಡು ತನ್ನನ್ನು ಶೋಷಣೆಗೆ ಒಳಪಡಿಸುತ್ತಾನೆ ಎಂಬ ಮಾತನ್ನು ಒಪ್ಪಿ ತನ್ನ ಜವಾಬ್ದಾರಿಯನ್ನು ಕಳೆದುಕೊಳ್ಳುವ ಮೂಲಕ ತನ್ನ ಹಕ್ಕುಗಳನ್ನೇ ತ್ಯಾಗ ಮಾಡುತ್ತಿದ್ದಾಳೆ. ಗಂಡು ನಮ್ಮನ್ನು ತುಳಿಯುತ್ತಾನೆ, ಶೋಷಿಸುತ್ತಾನೆ, ಸಮಾನತೆ ಕೊಡುತ್ತಿಲ್ಲ ಎಂಬಿತ್ಯಾದಿ ಎಲ್ಲ ಮಾತುಗಳಲ್ಲೂ ನನಗೆ ಕಾಣಿಸುವುದು ಹೆಣ್ಣು ಒಪ್ಪಿಕೊಂಡಿರುವ ತನ್ನ ಅಸಾಮರ್ಥ್ಯವೇ! ಒಬ್ಬ ಶೋಷಕ ಗಂಡಿನ ಬೆಳವಣಿಗೆಯ ಹಿಂದಿರುವುದೂ ಒಂದು ಹೆಣ್ಣು ಎಂಬ ಮಾತು ಸತ್ಯ. ಒಬ್ಬ ಗಂಡು ಹೆಣ್ಣಿಗಿಂತ ಹೆಚ್ಚು ಪರಾವಲಂಭಿ ಎಂಬುದು ಪ್ರಕೃತಿದತ್ತ ಕೌತುಕಗಳಲ್ಲಿ ಒಂದು. ಹೆಣ್ಣೊಬ್ಬಳು, ತನ್ನ ಗಂಡನಿಂದ ಪ್ರತಿದಿನ ದೂಷಣೆ, ನಿಂದನೆಗೊಳಗಾದರೂ, ತನ್ನ ಮಗನನ್ನು ಸಹ ಆಕೆ ಅದೇ ರೀತಿ ನೋಡ ಬಯಸುತ್ತಾಳೆ. “ನೀನು ಗಂಡು” ಎಂಬ “ಹದಮಾಡಿದ ಮದವನ್ನು” ಅವನಲ್ಲಿ ತುಂಬುತ್ತಾಳೆ. ನಾನು ಪದೇ ಪದೇ ಹೇಳಬಯಸುವ ಮಾತು, ಹುಟ್ಟುತ್ತಾ ಯಾರೂ ಕೆಟ್ಟವರಾಗಿ, ಶೋಷಕರಾಗಿ ಹುಟ್ಟುವುದಿಲ್ಲ. ಅವರ ಬೆಳವಣಿಗೆ, ಪರಿಸರ, ನಂಬಿಕೆಗಳು, ಸಿದ್ಧಾಂತಗಳು ಅವನನ್ನು ಆ ರೀತಿ ಟ್ಯೂನ್ ಮಾಡುತ್ತವೆ. ಕೆಲವರು ತಮ್ಮ ಸಂಸ್ಕಾರ, ಓದುಗಳಿಂದ ಹೆಂಗರುಳನ್ನು (ಇಲ್ಲಿ ಹೆಂಗರುಳು ಎಂಬ ಪದದ ರೂಪಕವನ್ನು ಗಮನಿಸಿ. ಅದು ಸಹ ಲಿಂಗಾಧಾರಿತವಾಗಿ ಹೋಗಿದೆ!) ಪಡೆಯುತ್ತಾರೆ. ಮತ್ತೆ ಕೆಲವರು ಒರಟಾಗಿ, ಹೆಣ್ಣಿನ ಮನಸ್ಸನ್ನು ಅರಿಯದವರಾಗಿ ಹೋಗುತ್ತಾರೆ. ಅಲ್ಲಿಂದಲೇ ಪ್ರಾರಂಭವಾಗುತ್ತದೆ “ಶೋಷಣೆ” ಎಂಬ ಭಾರದ ಪದಗಳು.
ಸಂತೋಷದ ವಿಚಾರವೆಂದರೆ, ಇತ್ತೀಚಿನ ದಿನಗಳಲ್ಲಿ ಈ ಆಂತರಿಕ ಸತ್ಯಗಳು ಹೆಣ್ಣಿಗೆ ಅರ್ಥವಾಗುತ್ತಿವೆ. “ನನ್ನ ಮಗನನ್ನು ನಾನು ಸರಿಯಾಗಿ (ಸಮಾನತೆಯ ವಿಚಾರವಾಗಿ) ಬೆಳೆಸಿದರೆ ಮುಂದೆ ಒಬ್ಬ ಶೋಷಕ ತಯಾರಾಗುವುದಿಲ್ಲ”, ಎಂಬ ಸಾಮಾಜಿಕ, ನೈತಿಕ ಜವಾಬ್ದಾರಿಯನ್ನು ಇಂದಿನ ಪುಟ್ಟ ತಾಯಂದಿರು ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದು ಹೀಗೇ ಮುಂದುವರೆಯಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಅಲ್ಲವೆ. ಮತ್ತೊಂದು ಮಾತು, “ಹೇಳತೇವ ಕೇಳ” ಪುಸ್ತಕ ಹೊರತಂದ ಸಂಪಾದಕಿ ಜಯಲಕ್ಷ್ಮಿ ಪಾಟಿಲ್ ಹೇಳಿದ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. “ಹೆಣ್ಣಿಗೆ ತನ್ನ ಶೋಷಣೆಗಳ ಬಗ್ಗೆ ದನಿ ಎತ್ತುವ ಹಕ್ಕಿದೆ. ಯಾವ ಲಜ್ಜೆಯಿಲ್ಲದೆ, ಆಕೆ ಅದನ್ನು ಪ್ರಕಟಪಡಿಸಬೇಕು. ಇದು ಶೋಷಣೆಯ ವಿರುದ್ಧ ನಾವು ತೆಗೆದುಕೊಳ್ಳುವ ಮೊದಲ ಪ್ರಬಲ ಹೆಜ್ಜೆ” ಎಂದು.
ಸ್ತ್ರೀವಾದಿಗಳ ಬಗೆಗೂ ಹರಡಿರುವ “ಗಂಡು ದ್ವೇಷಿ”ಗಳೆಂಬ ಇಮೇಜ್ ಬಿಲ್ಡಿಂಗ್ ಅನ್ನು ಒಡೆದು, ನಿಜವಾದ ಸ್ತ್ರೀವಾದದ ಹರವು, ಹೊಣೆಗಳನ್ನು ನಾವು ಅರಿಯಬೇಕು. ಗಂಡಸರೆಲ್ಲ ಶೋಷಕರು ಎಂಬ ಮೊಸರಲ್ಲಿ ಕಲ್ಲು ಹುಡುಕುವ ಮಾತಾಡುವ ಮುನ್ನ ಮಹಿಳೆ ಎಚ್ಚೆತ್ತುಕೊಳ್ಳಬೇಕು. ಆಗ ಯಾವ ಪ್ರಣಾಳಿಕೆಗಳ ಅಗತ್ಯಗಳಿಲ್ಲದೆ ಸ್ತ್ರೀಸಂವೇದನೆ ಗೆಲ್ಲುತ್ತದೆ.
ಎಲ್ಲರಿಗೂ ಅಂತರ್ರಾಷ್ರೀಯ ಮಹಿಳಾ ದಿನದ ಶುಭಾಶಯಗಳು.

‍ಲೇಖಕರು G

March 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: