ಸಂಪು ಕಾಲಂ : ಮೂರು ಮೊಲೆಗಳ ಮೀನಾಕ್ಷಿ ಮತ್ತು ಮೋಸದಾಟದ ಶಿವ!


“When you travel, you find yourself
Alone in a different way,
More attentive now
To the self you bring along”
ಜಾನ್ ಓಡೊನೊ ಅವರ ಈ ಸಾಲುಗಳು ತುಂಬಾ ಹತ್ತಿರವೆನಿಸಿದ್ದು ಈ ದಕ್ಷಿಣ ಭಾರತ ಪ್ರವಾಸದ ಸಮಯದಲ್ಲೇ. ಪ್ರವಾಸ ಒಬ್ಬ ವ್ಯಕ್ತಿಗೆ ತನ್ನನ್ನು ತಾನು ಹೊಸ ರೂಪಿನಲ್ಲಿ ಕಂಡುಕೊಳ್ಳುವ ಶಕ್ತಿ ತಂದುಕೊಡುತ್ತದೆ. ತನ್ನ ಬಗ್ಗೆ ತನಗೇ ತಿಳಿಯದ ಕೆಲ ಹೊಸ ಆಯಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಹೊಸಬರೊಡನೆ ಹೆಗಲು ಮಿಲಾಯಿಸಿ ಒಂದಾಗಿಬಿಟ್ಟಿದ್ದು, ನಾನು ನಂಬದ ಕೆಲ ತೀರಾ ವ್ಯತಿರಿಕ್ತ ವಿಚಾರಗಳಿಗಾಗಿಯೇ ಬಿಸಿಲು, ಸಮಯ ನೋಡದೆ ಗಂಟೆ ಗಟ್ಟಲೆ ಸಾಲುದ್ದ ನಿಂತು ನೀರಾದದ್ದು, ನನಗರಿವಿಲ್ಲದಂತೆಯೇ ಆ ಸ್ಥಳದ ಕಲಾ ವಿಸ್ಮಯಗಳಿಗೆ ಮನಸೋತಿದ್ದು, ಇರಲಸಾಧ್ಯವಾದ ಸ್ಥಳಗಳಲ್ಲೂ ಸಂತೃಪ್ತಿಯಿಂದ ಉಂಡು, ಕಣ್ತುಂಬ ನಿದ್ದೆ ಮಾಡಿದ್ದು, ಹತ್ತು ದಿನಗಳ ಕಾಲ ನಮ್ಮ ಜೀವನವನ್ನೇ ಒಂದು ಬಸ್ ನಲ್ಲಿ ಕಟ್ಟಿಟ್ಟದ್ದು, ಹೀಗೆ ಇನ್ನೂ ಅನೇಕ ನಾನಲ್ಲದ ನನ್ನತನಗಳನ್ನು ಕಲಿಸಿದ್ದು ಈ ಪ್ರವಾಸ.
ಪ್ರವಾಸದ ಕೊನೆಯ ಕೆಲ ದಿನಗಳಷ್ಟೇ ಉಳಿದಿತ್ತು. ಈಗ ನಮ್ಮ ಗುಂಪಿನಲ್ಲಿ ಹಿಂದಿನ ಕೆಲದಿನಗಳು ಕಾಣದಂತಹ ಒಂದು ಅಪ್ಯಾಯತೆ ಕಾಣತೊಡಗಿತ್ತು. ಇದು ಪ್ರವಾಸದ ಮತ್ತೊಂದು ಹೀಲಿಂಗ್ ಟಚ್ ಇರಬಹುದು ಅನಿಸಿತ್ತು. ಮೊದಲೆರಡು ದಿನ ಮುಖ ಉಬ್ಬರಿಸಿ, ತಾನಾಯ್ತು ತನ್ನ ತೀರ್ಥಯಾತ್ರೆಯಾಯಿತು ಎಂದು ಸೀಟಿನಡಿ ಮುಖ ಮುಚ್ಚಿದ್ದ ಕೆಲವರು ನಮ್ಮೊಡನೆ ಸರಾಗವಾಗಿ ಬೆರೆಯಲು ಪ್ರಾರಂಭಿಸಿದ್ದರು. ಒಂದು ಕೌಟುಂಬಿಕ ವಾತಾವರಣದ ಕಂಫರ್ಟ್ ಕಾಣಹತ್ತಿತ್ತು.
ತಮಿಳುನಾಡಿನ ಎಲ್ಲೆಡೆ ಕಂಡು ಬರುವ ಒಂದು ದೊಡ್ಡ ಕಾಮನ್ ಫ್ಯಾಕ್ಟರ್ ಅಂದರೆ ಗಲೀಜು! ಎಲ್ಲಿಂದೆಲ್ಲಿಗೆ ಹೋದರೂ ಒಂದು ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಧೂಳು, ಬಿಸಿಲ ಧಗೆ, ಸೊಳ್ಳೆ-ನೊಣಗಳು ಇವು ತುಂಬಿದ ಚರಂಡಿಗಳ ಜೊತೆ ಉಚಿತವಾಗಿ ಕಂಡುಬರುವ ವಿಶೇಷಗಳು. ಎಲ್ಲ ವಿಷಯಗಳಲ್ಲೂ ಒಗ್ಗಟ್ಟಾಗಿರುವ, ಮುನ್ನುಗ್ಗುವ ತಮಿಳು ನಾಡಿನ ಜನರು ಈ ಅಜಾಗರೂಕತೆಯನ್ನು ಹೇಗೆ ಸಹಿಸಿದ್ದಾರೆ ಅನಿಸಿತ್ತು. ಮದುರೈನತ್ತ ದಾರಿ ಸವೆಸಿದ್ದ ನಮ್ಮ ಬಸ್ ಮಂದಿಯ ಭಕ್ತಿ ಪರವಶತೆ, ಪ್ರಾರ್ಥನೆ ಏನಿತ್ತೋ ಗೊತ್ತಿಲ್ಲ ನಾನಂತೂ ಅಲ್ಲಾದರೂ ಉಳಿದುಕೊಳ್ಳುವ ರೂಮುಗಳು ಶುಚಿಯಾಗಿರಲಿ ಎಂದು ಪ್ರಾರ್ಥಿಸುತ್ತಾ ಜೊತೆಗೆ ಶೀಘ್ರದಲ್ಲೇ ನೋಡ ಹೊರಟ ಮದುರೈ ಮೀನಾಕ್ಷಿಯ ದೇವಸ್ಥಾನದ ಕಲಾಸೌಂದರ್ಯ ಮತ್ತು ಪುರಾಣ ಕಥೆಗಳ ಸೊಬಗನ್ನು ಮನದಲ್ಲೇ ನೆನೆಯುತ್ತಾ ಕೂತಿದ್ದೆ.
ಡಾ॥ ರಾಜ್ ಕಂಠದಲ್ಲಿ “ಕದಂಬವನವಾಸಿನೀ…” ಅಂತ ಕೇಳಿದ್ದಷ್ಟೇ ಗೊತ್ತಿತ್ತು ಮತ್ತೆ ಅದನ್ನು ಕೇಳಿದ್ದು ಮದುರೈ ಮೀನಾಕ್ಷಿ ದೇವಸ್ಥಾನದಲ್ಲಿ. ಮದುರೈ ಮೊದಲು “ಕದಂಬವನಂ” ಆಗಿತ್ತಂತೆ. ಒಂದಾನೊಮ್ಮೆ ಧನಂಜಯನ್ ಎಂಬ ಒಬ್ಬ ವ್ಯಾಪಾರಿ ಈ ಊರಿನಲ್ಲಿ ಇಂದ್ರನು ಒಂದು ಸ್ವಯಂಭೂಲಿಂಗವನ್ನು ಪೂಜಿಸುತ್ತಿದ್ದುದ ಕಂಡ. ಆಗ ಆ ಊರಿನ ರಾಜ ಕುಲಶೇಕರ ಪಾಂಡ್ಯನ್ ಗೆ ಈ ವಿಷಯವನ್ನು ತಿಳಿಸುತ್ತಾನೆ. ತಕ್ಷಣ ಆ ರಾಜನು ಆ ಲಿಂಗಕ್ಕೆ ಒಂದು ದೇವಾಲಯವನ್ನು ಕಟ್ಟಿಸುತ್ತಾನೆ. ಇದರಿಂದ ಪ್ರಸನ್ನನಾದ ಪರಮೇಶ್ವರನು ಪ್ರತ್ಯಕ್ಷವಾಗುತ್ತಾನೆ. ಅವನ ಕೂದಲೆಳೆಯಿಂದ ಮಧುರವಾದ ಅಮೃತದ ಹನಿಗಳು ಆ ಊರಲ್ಲಿ ತುಂತುರಿಸುತ್ತದೆ. ಆ ಮಾಧುರ್ಯದಿಂದ ಪುಳಕಗೊಂಡ ಜನರು ಆ ಸ್ಥಳವನ್ನು “ಮಧುರೈ” ಎಂದು ಕರೆಯುತ್ತಾರೆ. ಈ ಕಥೆಯ ಮುಂದೆ ನಮ್ಮ ಯಾವ ‘ಶಿವಾ ಟ್ರಿಲಜಿ’ಗಳು ಸಮ ಹೇಳಿ!
ಭಾರತದಲ್ಲೇ ಅತಿ ಪ್ರಾಚೀನ ಸ್ಥಳಗಳಲ್ಲಿ ಒಂದಾದ ಮದುರೈ ಅನೇಕ ಪುರಾತನ ಶಾಸನಗಳಲ್ಲಿ ತನ್ನ ಸ್ಥಾನ ಕಂಡಿದೆ. ಹದಿನಾಲ್ಕನೇ ಶತಮಾನದವರೆಗೆ ಈ ಪ್ರದೇಶ ಪಾಂಡ್ಯರ ಆಳ್ವಿಕೆಯಲ್ಲಿತ್ತು. ತಮಿಳು ನಾಡಿನಲ್ಲಿ ಇದು ಎರಡನೇ ಅತಿ ದೊಡ್ಡ ಸ್ಥಳ. ಮದುರೈ ಮೀನಾಕ್ಷಿ ದೇವಸ್ಥಾನವದ ಜನಪ್ರಿಯತೆಯ ಮಾಪನವನ್ನು ಅಲ್ಲಿಗೆ ಒಂದು ದಿನಕ್ಕೆ ಬರುವ ಸುಮಾರು ಹತ್ತು ಸಾವಿರ ಭಕ್ತಾದಿಗಳಿಂದ ಅಳೆಯಬಹುದು. ಈ ದೇವಸ್ಥಾನವನ್ನು ಶಿವಕ್ಷೇತ್ರ ಎಂದೂ ಕರೆಯುವುದುಂಟು. ತಿರುಮಲ ನಾಯಕ ಈ ದೇವಸ್ಥಾನವನ್ನು ಹದಿನೇಳನೇ ಶತಮಾನದಲ್ಲಿ ನವೀಕರಿಸಿ ಕಟ್ಟಿಸಿದ್ದಾನೆ. ಆದರೆ ಮೂಲ ದೇವಾಲಯದ ಇತಿಹಾಸ ಸುಮಾರು ಎರಡುಸಾವಿರ ವರ್ಷದಷ್ಟು ಪುರಾತನವಾದದ್ದು. ಇಲ್ಲಿ ಸುಂದರೇಶ್ವರ ಮತ್ತು ಮೀನಾಕ್ಷಿ ಮೂರ್ತಿಗಳಿವೆ.

ಈ ಮೀನಾಕ್ಷಿಯ ಹುಟ್ಟು ಹೇಗಾಯಿತಪ್ಪಾ ಅಂದರೆ, ಮಲಯಧ್ವಜನೆಂಬ ಪಾಂಡ್ಯ ರಾಜನು ಪುತ್ರನನ್ನು ಪಡೆಯಲು ಯಜ್ಞ ಮಾಡುತ್ತಾನೆ. ಆಗ ಆ ರಾಜನಿಗೆ ಮೂರು ಮೊಲೆಯುಳ್ಳ ಪುತ್ರಿಯ ಜನನವಾಗುತ್ತದೆ. ಇದರಿಂದ ಕಳವಳಗೊಂಡ ರಾಜನು ಮತ್ತೆ ದೇವರಲ್ಲಿ ಮೊರೆ ಹೋಗುತ್ತಾನೆ. ಆಗ ಒಂದು ಅಶರೀರವಾಣಿಯು “ಈ ಮಗು ಪ್ರಾಯಕ್ಕೆ ಬಂದಾಗ ತನ್ನನ್ನು ವರಿಸುವ ವರನು ಎದುರುಗೊಂಡಾಗ ಒಂದು ಮೊಲೆ ಕರಗಿ ಹೋಗುತ್ತದೆ” ಎಂದು ಉಲಿಯುತ್ತದೆ. ಇದರಿಂದ ರಾಜನು ಸಮಾಧಾನಗೊಳ್ಳುತ್ತಾನೆ. ಈ ಅಶರೀರವಾಣಿ ಮೀನಾಕ್ಷಿ ಕೈಲಾಸದಲ್ಲಿ ಶಿವನನ್ನು ಕಂಡಾಗ ನಿಜವಾಗುತ್ತದೆ. ನಂತರ ಶಿವನು ಸುಂದರೇಶ್ವರನಾಗಿ ಮದುರೈಗೆ ಬಂದು ಮೀನಾಕ್ಷಿಯನ್ನು ವರಿಸುತ್ತಾನೆ.
ಮೀನಾಕ್ಷಿ ಹೆಸರಿಗೂ ಒಂದು ಇಂಟೆರೆಸ್ಟಿಂಗ್ ಕಥೆ ಇದೆ! ಒಂದು ಮೀನು ತನ್ನ ಮಕ್ಕಳಿಗೆ ಪ್ರಾಣ ಬರಲು (ಅಥವಾ ಶಕ್ತಿ ಬರಲು) ತನ್ನ ಕಣ್ಣುಗಳನ್ನು ದೊಡ್ಡದಾಗಿ ಬಿಟ್ಟು ಅವುಗಳತ್ತ ನೋಡುತ್ತದಂತೆ, ಇದರಿಂದ ಆ ಮರಿಗಳಿಗೆ ಶಕ್ತಿ ಪ್ರಾಪ್ತವಾಗುತ್ತದಂತೆ. ಹೀಗೆಯೇ ಮೀನಾಕ್ಷಿ ದೇವಿಯು ತನ್ನ ಭಕ್ತರತ್ತ ಕಣ್ಣು ಬಿಟ್ಟು ನೋಡಿದರೆ ಅವರಿಗೆ ಶ್ರೇಯಸ್ಸು, ಶಕ್ತಿ ವೃದ್ಧಿಯಾಗಿ ಮರುಜೀವ ಪಡೆಯುತ್ತಾರಂತೆ. ಹೀಗಾಗಿ ಆಕೆಯ ಹೆಸರು ಮೀನಾಕ್ಷಿ ಎಂದು.
ಮೀನಾಕ್ಷಿ ದೇವಸ್ಥಾನವೂ ಸುವಿಸ್ತಾರವಾದದ್ದು ಮತ್ತು ಕಲೋಪಾಸಕರ ಕಣ್ಣಿಗೆ ಹಬ್ಬವೇ ಸರಿ. ಮಾಹಿತಿಯ ಪ್ರಕಾರ ಈ ದೇವಸ್ಥಾನದಲ್ಲಿ ಸುಮಾರು ಮೂವತ್ತಮೂರು ಮಿಲಿಯನ್ ಶಿಲ್ಪಗಳು, ಕೆತ್ತನೆಗಳಿದ್ದು ಭಾರತದ ವಾಸ್ತುಶಿಲ್ಪದ ಒಂದು ದೊಡ್ಡ ದ್ಯೋತಕವಾಗಿದೆ. ಇಡೀ ದೇವಾಲಯ ಸುತ್ತುವರೆದರೆ ಹನ್ನೆರಡು ಗೋಪುರಗಳು ಸಿಗುತ್ತವೆ. ಇವುಗಳಲ್ಲಿ ನಾಲ್ಕು ಗೋಪುರಗಳು ಬಹು ಮುಖ್ಯವಾಗಿದ್ದು, ಒಂದೊಂದೂ ಒಂದೊಂದು ದಿಕ್ಕುಗಳನ್ನು ನೇಮಿಸಿದೆ. ದಕ್ಷಿಣ ದಿಕ್ಕಿನ ಗೋಪುರವು ಬಣ್ಣದ ಶಿಲ್ಪಕಲೆ ಹೊತ್ತಿದ್ದು ಇದರಲ್ಲಿ ಸುಮಾರು 1500 ಕೆತ್ತನೆಗಳಿವೆ. ಆದರೆ ನನಗ್ಯಾಕೋ ಬಣ್ಣಬಣ್ಣದ ಶಿಲ್ಪ, ಕೆತ್ತನೆಗಳು ಅಷ್ಟು ಮನಸೇರಲಿಲ್ಲ. ಬರಿಯ ಕಲ್ಲಿನ ಶಿಲ್ಪದಲ್ಲಿದ್ದ ನಗ್ನ ಸೌಂದರ್ಯ ಈ ಬಣ್ಣದ ಬೊಂಬೆಗಳಲ್ಲಿ ಮಾಯವಾದಂತೆ ಕಂಡಿತ್ತು. ದೇವಸ್ಥಾನದ ಪ್ರಾಕಾರದ ಒಳಗೆ ಮತ್ತಷ್ಟು, ಇನ್ನಷ್ಟು ಕಳೆದು ಹೋಗಬೇಕೆಂಬಂತಹ ಅಪರೂಪದ ಕಲಾಗರ. ಎಲ್ಲಿ ತಿರುಗಿ ನೋಡಿದರೂ ಮನಸೆಳೆಯುವ ಶಿಲ್ಪಕಲೆ. ಪ್ರತಿ ಕಲ್ಲಿನಲ್ಲೂ ಜೀವಂತಿಕೆ ಮೆರೆಯುವಂತೆ, ಕಂಬ ಕಂಬವೂ ಒಂದೊಂದು ಕಥೆ ಹೇಳುವಂತೆ ಅನುಭವ. ಈ ಕಣ್ತಣಿಸುವ ವಾತಾವರಣ ಕ್ಯೂನಲ್ಲಿ ಗಂಟೆಗಟ್ಟಲೆ ನಿಂತರೂ ನಮ್ಮನ್ನು ಅಷ್ಟು ಕಂಗೆಡಿಸಲಿಲ್ಲ. ಭಾರತದ ಎಲ್ಲ ಪ್ರದೇಶಗಳಿಂದಲೂ ಜನಸ್ತೋಮ ತುಂಬಿ ಅಲ್ಲಿದ್ದ ಕ್ಯೂನಲ್ಲೇ ತುಳುಕಿತ್ತು. ಎಲ್ಲ ಭಾಷೆಯ, ಎಲ್ಲ ಭಾವಗಳ, ಜೊತೆಗಿದ್ದ ಕೊಳಕು, ವಾಸನೆಗಳ ಕಲಸುಮೇಲೋಗರವಾಗಿ ಆದರೂ ಒಂದು ವ್ಯವಸ್ಥಿತ, ಸೆಳೆಯುವ ವಾತಾವರಣವಾಗಿದ್ದ ಈ ಸ್ಥಳ ಮತ್ತಿದರ ಶಿಲ್ಪಗಳು ಅವೆಷ್ಟು ತಲೆಮಾರುಗಳನ್ನು ಸಂತೈಸಿವೆಯೋ ಕಾಣೆ!
ಗರ್ಭಗುಡಿಯ ದರ್ಶನವಾದ ಮೇಲೆ ನಾವು ಸುತ್ತಾಡಿದ್ದು ಅಲ್ಲಿ ಕಂಡ ಏಕ ಶಿಲಾ ಮಂಟಪ, ಸುವರ್ಣ ರಥ, ಅರ್ಧ ನಾರೀಶ್ವರನ ವಿಗ್ರಹ ಇತ್ಯಾದಿ ಉಪಾದಿಗಳನ್ನು. ಈ ದೇವಾಲಯದ ಮತ್ತೊಂದು ವಿಚಿತ್ರವಾದ ವರ್ಣಚಿತ್ರ ನನ್ನ ಗಮನಕ್ಕೆ ಬಿದ್ದಿತ್ತು. ಶಿವ ಒಂದು ಕಾಲು ಮೇಲೆತ್ತಿ ನೃತ್ಯ ಮಾಡುತ್ತಿರುವುದು. ಪಕ್ಕದಲ್ಲಿ ಬ್ರಹ್ಮ, ವಿಷ್ಣು ಸೇರಿ ಇಡೀ ಸ್ವರ್ಗವಾಸಿಗರ ಜೊತೆಗಾರಿಕೆ ಮತ್ತು ಪಕ್ಕದಲ್ಲಿ ತಲೆಬಾಗಿ ನಾಚಿ ನಿಂತ ಪಾರ್ವತಿ. ಒಮ್ಮೆ ಶಿವ-ಪಾರ್ವತಿಯರಿಗೆ ಒಂದು ಪೈಪೋಟಿ ಜರುಗಿ, ನೃತ್ಯ ಸ್ಪರ್ಧೆ ನಡೆಯುತ್ತದೆ. ಇಬ್ಬರೂ ಸಮಯ ಮೀರುವಷ್ಟು ಹೊತ್ತಾದರೂ ನೃತ್ಯ ಮಾಡುತ್ತಲೇ ಇರುತ್ತಾರೆ. ಆಗ ಶಿವನು ತನ್ನ ಕಾಲನ್ನು ಲಂಬವಾಗಿ ಆಕಾಶದೆಡೆಗೆ ಚಾಚಿ ನಿಲ್ಲುತ್ತಾನೆ. ಪಾರ್ವತಿ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ. ಆಗ ಶಿವ ಗೆಲ್ಲುತ್ತಾನೆ. ಶಿವನ ಗೆಲುವಿಗೆ ದೇವಾದಿದೇವತೆಗಳೆಲ್ಲರೂ ಬಂದು ಹರಸುತ್ತಾರೆ. ಈ ಕಥೆಯ ಸಾರಾಂಶವೇ ಆ ಚಿತ್ರದಲ್ಲಿ ಬಿಂಬಿತವಾಗಿತ್ತು! ಇದೊಂದು ರೀತಿ ಮಹಿಳೆಯ ಮೇಲಿನ ದೌರ್ಜನ್ಯದ ಸರಳ ಮುಖ ಎನಿಸಿತ್ತು. ಜಗತ್ತು ಗೆಲ್ಲಲು ತನ್ನ ಅಂಗಾಂಗಗಳೇ ತನಗೆ ಭಾರ ಎಂದು ಸೊರಗುವ ಹೆಣ್ಣಿನಂತೆ ಈ ಕಥೆ ಕೂಡ ಹೇಳುವುದು ಮತ್ತೊಂದು ಕಥೆ ಎನಿಸಿಬಿಟ್ಟಿತು. ಇದು ಶಿವನು ಮಾಡಿದ ವಂಚನೆಯಲ್ಲವೇ? ಪಾರ್ವತಿ ಹೆಣ್ಣು, ಆಕೆ ಲಂಬವಾಗಿ ಕಾಲೆತ್ತಿ ಕುಣಿಯಲಾರಳು ಎಂಬ ಒಂದು ಅಂಶವನ್ನು ಉಪಯೋಗಿಸಿಕೊಂಡು, ಪಂದ್ಯ ಗೆಲ್ಲಲು ಶಿವನು ಹೂಡಿದ ನೀಚ ತಂತ್ರವಲ್ಲವೇ ಇದು? ಒಬ್ಬ ಹೆಣ್ಣಿನಿಂದ ಸೋಲು ಒಪ್ಪಲು ಅವಮಾನಿತನಾಗಿ ಇಂತಹ ಕುಚೋದ್ಯೋಪಾಯವನ್ನು ಮಾಡಿದಂತಹ ಶಿವನು ನಮ್ಮೆಲ್ಲರ ಆರಾಧ್ಯ ದೈವವೇ? ಇಲ್ಲಿ ಸ್ಪಷ್ಟವಾಗುವುದು ಎರಡು ಅಂಶ; ಒಂದು, ದೇವರುಗಳು ಇದ್ದಾರೆ ಎಂದಾದಲ್ಲಿ ಅವರೂ ಪುರುಷ ಪ್ರದಾನ ವಾತಾವರಣವನ್ನೇ ಒಪ್ಪುವುದು, ಎರಡು, ನಮ್ಮಲ್ಲಿ ನಾವು ಕಾಣದ ಹಲಕೆಲವು ದೈವೀ ಶಕ್ತಿಗಳನ್ನು “ದೇವರು” ಎಂಬ ಅಂಶಕ್ಕೆ ನಾವು ಹೇಗೆ ಟ್ಯಾಗ್ ಮಾಡಿಬಿಡುತ್ತೆವೋ ಹಾಗೇ ನಮ್ಮಲ್ಲಿನ ಕೆಟ್ಟದ್ದನ್ನೂ, ಮಿತಿಗಳನ್ನೂ ಸಹ ಆ “ದೇವರ” ಮೇಲೆ ಹೇರಿಬಿಡುತ್ತೇವೆ. ಸುಗುಣಸಂಪನ್ನ ಎಂದು ಕರೆಯುತ್ತಲೇ ನಾವೇ ರೂಪಸಿಕೊಟ್ಟ ಆತನ ಇಂತಹ ಕ್ಷುಲ್ಲಕ ಗುಣಗಳನ್ನೂ ಹಾಡಿಕೊಂಡಾಡುತ್ತೇವೆ. “ದೇವರು” ಎಂಬ ಒಂದೇ ಒಂದು ಕೊಂಡಿ ಇಲ್ಲದೆ ನಮ್ಮ ಪುರಾಣಗಳ ಎಷ್ಟೋ ಘಟನೆಗಳನ್ನು ನೋಡಿದರೆ, ಅತಿ ಹೀನಾಯ ಎನಿಸುವುದು ಖಂಡಿತ. ನನ್ನ ಮುಂದಿನ ಲೇಖನದಲ್ಲಿ “ಸುಚೀಂದ್ರಂ” ದೇವಸ್ಥಾನವನ್ನು ವಿವರಿಸುವಾಗ, ಈ ವಿಚಾರವಾಗಿ ಮತ್ತಷ್ಟು ಹೇಳಬಯಸುತ್ತೇನೆ.
ಮದುರೈನಿಂದ ನಮ್ಮ ಪಯಣ ಕನ್ಯಾಕುಮಾರಿಯತ್ತ. ನನಗೋ “ಬಹುಜನ್ಮದಾ ಪೂಜಾಫಲ….” ಎಂಬಷ್ಟು ಸಂತೋಷವಾಗಿತ್ತು. ನಾನು ಈ ಟೂರ್ ಗೆ ಬರಲು ಒಪ್ಪಲು ಇದ್ದ ಪ್ರಮುಖ ಕಾರಣವೇ ಕನ್ಯಾಕುಮಾರಿ. ನನ್ನಷ್ಟೇ ಲವಲವಿಕೆಯಿಂದ ಬಸ್ಸಿನವರು, ಎಲ್ಲರೂ ಕನ್ಯಾಕುಮಾರಿಯತ್ತ ಮುಖ ಮಾಡಿದ್ದೆವು. ದಾರಿಯಲ್ಲಿ ತಿರುನಲ್ವೇಲಿ ಎಂಬ ಸ್ಥಳ ದೊರೆತು, ನಮ್ಮ ಬಸ್ ನಿಂದ ಒಬ್ಬರು ಆ ಪ್ರದೇಶದಲ್ಲಿ ತಯಾರಾಗುವ ಗಾಳಿಗಿರಣಿ (ವಿಂಡ್ಮಿಲ್)ಗಳನ್ನು ಜೊತೆಗೆ ಅಲ್ಲೇ ಇದ್ದ ಮಹೇಂದ್ರ ಗಿರಿಯನ್ನೂ ತೋರಿದರು. ಮಹೇಂದ್ರ ಗಿರಿಯ ಸ್ಪೆಷಲ್ ಏನಪ್ಪಾ ಅಂದರೆ, ಅಲ್ಲಿಂದಲೇ ಹನುಮಂತ ಲಂಕೆಗೆ ಹಾರಿದ್ದು ಎಂಬ ಪ್ರತೀತಿ! ತಮಿಳು ನಾಡಿನ ಸುತ್ತಲೂ ಎಷ್ಟೋ ಸಣ್ಣ-ದೊಡ್ಡ ಪ್ರದೇಶಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದಂತೆ ಈ ರೀತಿಯಾದ ಅನೇಕ ಕಥೆಗಳಿವೆ. ಇದು ಕಥೆಯಿಂದ ಹೊರಬಿದ್ದ ಪರ್ಸೋನಿಫಿಕೇಶನ್ನೋ ಅಥವಾ ಈ ನಿಶಾನುಗಳನ್ನೇ ಕಂಡು, ಕಲ್ಪಿಸಿಕೊಂಡು ಕಥೆ ರಚನೆಯಾಯಿತೋ ಅಥವಾ ಮ್ಯಾಜಿಕ್ ರಿಯಲಿಸಂ ಥರ, ಸತ್ಯಕ್ಕೆ ಹತ್ತಿರವಾಗಿದ್ದೂ ಉತ್ಪ್ರೇಕ್ಷಿಸಲ್ಪಟ್ಟ ರಮ್ಯ ಕಲ್ಪನೆಯೋ ಗೊತ್ತಿಲ್ಲ! ಮಧ್ಯಾಹ್ನದ ವೇಳೆಗೆ ಕನ್ಯಾಕುಮಾರಿಗೆ ತಲುಪಿದೆವು.
ಕನ್ಯಾಕುಮಾರಿಯ ಮೊದಲ ಶುಭ ಸೂಚಕ, ನಮಗೆ ದೊರೆತ ತಂಗುದಾಣವಾಗಿತ್ತು. ಸುಂದರವಾದ, ಚಿಕ್ಕ-ಚೊಕ್ಕ ರೂಮಿನ ಬಾಲ್ಕನಿ ಬಾಗಿಲು ತೆರೆದರೆ ಅಲ್ಲಿ ಕಂಡ ನೋಟ ನಮ್ಮನ್ನು ರೋಮಾಂಚನಗೊಳಿಸಿತ್ತು. ಭಾರತದ ತುತ್ತ ತುದಿಯಲ್ಲಿರುವ ಸಮುದ್ರ ನಮ್ಮ ಹಿತ್ತಲ ಆವರಣದಲ್ಲಿ ವಿಸ್ತಾರವಾಗಿ ಹರಡಿಕೊಂಡಿತ್ತು. ಸಮುದ್ರದಲೆಗಳ ಸಣ್ಣ ಅಬ್ಬರ ಮತ್ತು ಗಾಳಿಯ ನಗು ಬಿಟ್ಟರೆ ಮತ್ತೇನೂ ಕೇಳದ, ಕಾಣದ ಸೌಭಾಗ್ಯ ನಮ್ಮದಾಗಿತ್ತು. ಅಲ್ಲೇ ನಿಂತು ಬಿಡುವ ಮತ್ತೇನೂ ಬೇಡ ಎಂಬಂತಹ ಸೆಳೆತ. ಕಷ್ಟ ಪಟ್ಟೆ ಕಾಲೆಳೆದುಕೊಂಡು ಹೊರಬಂದು ಊಟ ಮುಗಿಸಿ ವಿವೇಕಾನಂದ ರಾಕ್ ಗೆ ಹೊರಡಲು ಅಣಿಯಾದೆವು. ವಿವೇಕಾನಂದ ರಾಕ್ ಗೆ ತಲುಪಲು ಒಂದು ಸಣ್ಣ ಸಮುದ್ರಯಾನ ಮಾಡಬೇಕಾಗಿತ್ತು. ಮೈಮೇಲೆ ಗಾಳಿತುಂಬಿದ ರಬ್ಬರ್ ಟ್ಯೂಬ್ ಗಳನ್ನು ಧರಿಸಿ, ಫೆರ್ರಿಯಲ್ಲಿ ಕುಳಿತು ಕಡಲ ಮಡುವಿನಲ್ಲಿ ತೇಲಿಹೋದದ್ದು ಒಂದು ಸೊಗಸಾದ ಅನುಭವ.
ಫೆರ್ರಿ ಹತ್ತುವ ಮೊದಲೇ ದೂರದಿಂದಲೇ ವಿವೇಕಾನಂದ ರಾಕ್ ನ ಉದಾತ್ತ ನೋಟಕ್ಕೆ ಮೂಕರಾಗಿದ್ದೆವು. ಕಡಲ ನಡುವೆ ಧೀಮಂತವಾಗಿ ನಿಂತ ಆ ಹೆಬ್ಬಂಡೆ ಮತ್ತು ಅದರ ಮೇಲೆ ಕಾಣುವ ಗೋಪುರ ಒಂದು ಗಾಂಭೀರ್ಯತೆಯನ್ನು, ದೈವತ್ವವನ್ನು ಬಿಂಬಿಸಿತ್ತು. ವಿವೇಕಾನಂದ ಬಂಡೆಯ ಪಕ್ಕದಲ್ಲೇ ಇತ್ತೀಚಿಗೆ ತಿರುವಳ್ಳುವರ್ ನ ಒಂದು ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅದು ನೋಡಲು ಚೆಂದವೇ ಇದ್ದರೂ, ಅದರಿಂದ ವಿವೇಕಾನಂದ ಬಂಡೆಯ ಏಕಾಂತತೆಗೆ, ಅದರ ನೀರವ ಸೌಂದರ್ಯಕ್ಕೆ ಭಂಗ ಬರುವಂತೆ ಕಂಡು ಕೊಂಚ ಡಿಸ್ಟರ್ಬ್ ಆಯಿತು. ಆದರೂ ದ್ವಿವಳಿ ಕಟ್ಟಡಗಳು ಸುಂದರವಾಗಿ ಕಂಡಿತ್ತು. ನಮ್ಮ ದುರದೃಷ್ಟವೋ ಎಂಬಂತೆ, ಸಮುದ್ರದಲೆಗಳು ಹೆಚ್ಚೇ ಇದ್ದುದರಿಂದ ಅಪಾಯವೆಂದು, ತಿರುವಳ್ಳುವರ್ ಕಟ್ಟಡಕ್ಕೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಫೆರ್ರಿಯ ಪ್ರಯಾಣದುದ್ದಕ್ಕೂ, “ಭಾರತ ಭೂಶಿರ ಮಂದಿರ ಸುಂದರಿ……” ಎಂದು ನಟಿ ಆರತಿ ಆ ವಿವೇಕಾನಂದ ರಾಕ್ ಮೆಟ್ಟಿಲೇರಿದಾಗ ಕಂಡಿದ್ದ ಕನ್ಯಾಕುಮಾರಿಯ ಸೊಬಗನ್ನು ಇಂದು ನಾನು ಜೀವಂತವಾಗಿ ಅನುಭವಿಸಲಿದ್ದೇನೆ ಎಂಬ ಪುಳಕ ಮೈನವಿರೇಳಿಸಿತ್ತು. ಸಮುದ್ರದೊಡಲೊಳಗೆ ನಿಶ್ಶಬ್ದವಾಗಿ ನಿಂತ ತಪಸ್ವಿಯಂತೆ ಕಂಡ ಆ ವಿವೇಕಾನಂದ ಬಂಡೆಗೆ ಕೊನೆಗೂ ತಲುಪಿದೆವು. ಆ ಕ್ಷಣದ ಅನುಭವ, ರೋಮಾಂಚನ ವರ್ಣನಾತೀತ! ಬರವಣಿಗೆಯು ಹಿಡಿಯಲಾರದಷ್ಟು ಅಗಾಧ ಅನುಭವದ ತುಣುಕುಗಳನ್ನು ಮತ್ತು ಆ ಪ್ರದೇಶದ ಪುರಾಣಕಥೆಗಳನ್ನೂ ಮುಂದಿನ ಲೇಖನದಲ್ಲಿ ಹೇಳುತ್ತೇನೆ.

‍ಲೇಖಕರು G

November 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. ಅರುಣ್ ಜೋಳದಕೂಡ್ಲಿಗಿ

  ಮೀನಾಕ್ಷಿಯನ್ನು ಗೆಳತಿಯಂತೆ ಪರಿಚಯಿಸಿದ್ದು ಇಷ್ಟವಾಯಿತು.

  ಪ್ರತಿಕ್ರಿಯೆ
 2. Anil Talikoti

  ನೀವೂ ನೂರು ಪೇಜಿನ ನೋಟಬುಕ್ಕೆ ತೊಗೊಂಡುಹೋದಂತಿದೆ ದ.ಭಾರತಕ್ಕೆ. ಒಂದೆರಡು ತಿಂಗಳು ಮೊದಲೆ ಬರೆದಿದ್ದರೆ(ನಾವು ಓದಿದ್ದರೆ) ನಾವು ಹೋದಾಗ ಅದಕ್ಕೊಂದು ಅಧಿಕ ಮಜಾ ಬಂದಿರುತ್ತಿತ್ತು -ನಿಮ್ಮ ಈ ಬರಹಗಳನ್ನು ಗೈಡ ಆಗಿಸಿದರೆ ಭಾರಿ ಉಪಯುಕ್ತ. very well written -informative with a great perspective.
  -ಅನಿಲ ತಾಳಿಕೋಟಿ

  ಪ್ರತಿಕ್ರಿಯೆ
 3. Kavya Nagarakatte

  ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ. ಎಲ್ಲವನ್ನೂ ಕಣ್ಣಾರೆ ಕಂಡಂತಾಯಿತು.

  ಪ್ರತಿಕ್ರಿಯೆ
 4. ಸತೀಶ್ ನಾಯ್ಕ್

  ಮೀನಾಕ್ಷಿ ಅಥವಾ ಇತರೆ ದೇವಸ್ಥಾನಗಳ ಕುರಿತಾಗಿ ನಾನು ಈವರೆಗೆ ಕೇಳಿರುವ ಕಥೆಗಳಲ್ಲಿ ಹಲವು ಸಾಮ್ಯತೆಗಳು ನಿಮ್ಮ ಬರಹದಲ್ಲಿ ಇದ್ದರೂ ಆ ದೇವಾಲಯ ಮತ್ತದರ ಇತಿಹಾಸಗಳ ಕುರಿತಾಗಿ ಈ ಬರಹದಿಂದ ತಿಳಿದು ಕೊಂಡದ್ದೇ ಹೆಚ್ಚು. ಬರಹ ಬಹಳ ಆಪ್ತವಾಗಿ ಓದಿಸಿಕೊಂಡು ಹೋಯ್ತು. ಮದುರೈ ತಿರುನೆಲ್ವೇಲಿ ಕನ್ಯಾಕುಮಾರಿಗಳನ್ನ ನಾಲ್ಕೈದು ಬಾರಿಗಿಂತಲೂ ಹೆಚ್ಚು ನೋಡಿರೋ ನನಗೆ ಅಲ್ಲೇ ಸುತ್ತಾಡಿಕೊಂಡು ಬಂದ ಹಾಗಾಯ್ತು.

  ಪ್ರತಿಕ್ರಿಯೆ
 5. Raj

  Read the book “DEVARU” by A.N.Murthyrao, some of the views expressed here about creating Gods in our own reflection are elaborated more articulately there. Its a must read for anyone looking for some serious read.

  ಪ್ರತಿಕ್ರಿಯೆ
 6. ಪು. ಸೂ . ಲಕ್ಷ್ಮೀನಾರಾಯಣ ರಾವ್

  ಒಳ್ಳೆಯ ಲೇಖನ!

  ಪ್ರತಿಕ್ರಿಯೆ
 7. Anonymous

  ನಿಮ್ಮ ಲೇಖನ ನನ್ನ ಟಿ.ಸಿ. ಹೆಚ್. ಅವಧಿಯ ಶೈಕ್ಷಣಿಕ ಪ್ರವಾಸವನ್ನು ಮತ್ತೊಮ್ಮೆ ನೆನಪಿಸಿತು. ತುಂಬಾ ಧನ್ಯವಾದಗಳು,

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: