ಸಂಪು ಕಾಲಂ : ಭಾರತದ ಸ್ಟೋರಿಯಾದ ’ಭಾರತ್ ಸ್ಟೋರ್ಸ್’


“ಭಾರತ್ ಸ್ಟೋರ್ಸ್”, ಹೆಸರು ಕೇಳಿದ ದಿನದಿಂದ ಆ ಸಿನೆಮಾ ನೋಡುವ ಕಾತರತೆ. ವಿದೇಶೀ ನೇರ ಬಂಡವಾಳ ಹೂಡಿಕೆಯು ದೇಶದ ಚಿಲ್ಲರೆ ವ್ಯಾಪಾರಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ರೂಪಿಸಲ್ಪಟ್ಟ, ಪ್ರಶಸ್ತಿ ಪುರಸ್ಕೃತ ಚಿತ್ರ. ಚಿತ್ರದ ಬ್ಯಾನರ್ಗಳು, ಪೋಸ್ಟರ್ ಗಳನ್ನು ನೋಡುವಾಗ ಕಥೆಯನ್ನು ಊಹಿಸಿಕೊಂಡು ಮೆಚ್ಚುತ್ತಿದ್ದೆ. ಆದರೆ, ಅದ್ಯಾವ ಘಳಿಗೆಯಲ್ಲಿ ಚಿತ್ರ ಟಾಕೀಸುಗಳಲ್ಲಿ ಮಿಂಚಿ ಮಾಯವಾಯಿತೋ ತಿಳಿಯುವಷ್ಟರಲ್ಲಿ, ಅದು ತನ್ನ ಬೆನ್ನು ತೋರಿಸಿತ್ತು. ಅಂತಹ ಸದುದ್ದೇಶದ ಚಿತ್ರ ನೋಡುವುದನ್ನು ತಪ್ಪಿಸಿದೆನಲ್ಲಾ ಎಂಬ ಬೇಸರ ಒಂದು ಕಡೆಯದ್ದಾದರೆ, ಮಾಲ್ ಸಂಸ್ಕೃತಿಯನ್ನು ವಿರೋಧಿಸುವ ಚಿತ್ರವೇ ಮಾಲ್ಗಳಲ್ಲಿ ಮಾತ್ರ ಬಿಡುಗಡೆಯಾದ ಸಖೇದಾಶ್ಚರ್ಯ ಮತ್ತೊಂದು ಕಡೆ. ಅದಕ್ಕೆ ಹಲವಾರು ಆರ್ಥಿಕ ಕಾರಣಗಳು ಇದ್ದಿವೆ ಎಂಬ ಸ್ಪಷ್ಟನೆಯನ್ನು ಚಿತ್ರದ ನಿರ್ದೇಶಕರು ನೀಡಿದ್ದರಿಂದ ಅದಕ್ಕೆ ಹೊಣೆಗಾರರು, ಕನ್ನಡ ಚಿತ್ರ ಟಾಕೀಸಿನಲ್ಲಿ (ಅಟ್ಲೀಸ್ಟ್ ಉತ್ತಮ ಚಿತ್ರಗಳನ್ನು) ನೋಡದ ನಮ್ಮಂತಹವರೇ ಎಂಬುದರ ಮನವರಿಕೆಯಾಗಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ, ಈ ಸಿನೆಮಾ ನೋಡಿಯೇ ತೀರಬೇಕು ಎಂಬ ಹಠ ಮನದಲ್ಲಿ ಮೂಡಿತ್ತು.
ಕೊನೆಗೂ ಇತ್ತೀಚೆಗೆ ಹನುಮಂತನಗರದ ಗೋಖಲೆ ವಿಚಾರ ಸಂಸ್ಥೆಯಲ್ಲಿ ಆ ಸಿನೆಮಾವನ್ನು ತೋರಿಸಲಾಗುತ್ತಿದೆ ಎಂದು ತಿಳಿದು, ನನ್ನೆಲ್ಲ ಕೆಲಸಗಳಿಗೆ ಪೂರ್ಣ ವಿರಾಮವೊತ್ತಿ ನಮ್ಮತ್ತೆಯೊಡನೆ ಸಿನೆಮಾ ನೋಡಲು ಹೊರಟೆ. ಸ್ಥಳ ತುಂಬಿಹೋಗಬಹುದು ಎಂದು ಊಹಿಸಿ ಬಹಳ ಬೇಗ ತಲುಪಿ, ಮೊದಲ ಸಾಲಿನ ಕುರ್ಚಿಯಲ್ಲೇ ಝಂಡಾ ಊರಿಬಿಟ್ಟೆವು. ವಿಷೇಶವೆಂದರೆ ನಮ್ಮೊಡನೆ ಕೂತು ಸಿನೆಮಾ ನೋಡಿ ನಂತರ ಸಂವಾದಿಸಲು ಪಿ.ಶೇಷಾದ್ರಿ ಹಾಗೂ ದತ್ತಣ್ಣ ಬಂದಿದ್ದರು.
ಮೊದಲಿಗೆ ಶೇಷಾದ್ರಿಯವರು ಮಾತನಾಡುತ್ತಾ, ಕಥೆ ಹುಟ್ಟಿದ ಬಗೆಯನ್ನು ವಿವರಿಸುತ್ತಿದ್ದರು. ಮುಂದಕ್ಕೆ ಹೇಳುವ ಮೊದಲು ಒಂದು ವಿಷಯ. ಚಿತ್ರ ನೋಡಿದವರು ಹನುಮಂತನಗರದ ನಿವಾಸಿಗಳಾಗಿದ್ದರೆ, ಚಿತ್ರದ ಕಥೆಯ ಜೊತೆಗೆ ಕಥೆ, ಅದರ ಉದ್ದೇಶ ಇವೆಲ್ಲವನ್ನೂ ಮೀರಿದ ಭಾವನಾತ್ಮಕ ಸಂಬಂಧವನ್ನು ಬೆಸೆಯಬಲ್ಲರು. ತಾವೂ ಅದರಲ್ಲೊಂದು ಪಾತ್ರವಾಗಿ ಭಾಗಿಯಾಗಬಲ್ಲರು. ಕಾರಣವಿಷ್ಟೇ, ಹನುಮಂತನಗರದ ಒಂದು ಬಸ್ ನಿಲ್ದಾಣದ ಹೆಸರು “ನಿರ್ಮಲಾ ಸ್ಟೋರ್ಸ್”. ಆದರೆ, ಈಗ ಆ ಪ್ರದೇಶದ ಸುತ್ತಲೂ ಎಲ್ಲಿಯೂ ಆ ಅಂಗಡಿಯಾಗಲೀ, ಹೆಸರಾಗಲೀ ಕಂಡುಬರುವುದಿಲ್ಲ. ನಮ್ಮ ಹಿರಿಯರಿಂದ ತಿಳಿದುಬರುವುದು ಏನೆಂದರೆ, ಹಿಂದೆ ಅಲ್ಲಿ ಒಂದು “ನಿರ್ಮಲಾ ಸ್ಟೋರ್ಸ್” ಎಂಬ ದಿನಸಿ ಅಂಗಡಿ ಇತ್ತೆಂದೂ, ಅದು ನಂತರ “ನಿರ್ಮಲಾ ವಸ್ತ್ರಾಲಯ” ಎಂದು ಬದಲಾಗಿ, ಕೊನೆಗೆ ಹೆಸರು ಮಾತ್ರ ಅಚ್ಚಳಿಯದೆ ಇನ್ನೂ ಉಳಿದಿದೆ ಎಂದು. ಇದನ್ನು ಗಮನಿಸಿದ ಶೇಷಾದ್ರಿಯವರು, ನಿರ್ಮಲಾ ಸ್ಟೋರ್ಸ್ ನ ಜಾಡು ಹಿಡಿಯುತ್ತಾ ಹೊರಟರು. ಒಮ್ಮೆ ಅವರ ಮಗನನ್ನು ಶಾಲೆಯಿಂದ ಕರೆತರಲು ಹೊರಟು ಕಾಯುತ್ತಿದ್ದಾಗ ದಾರಿಯಲ್ಲಿ ಕಂಡ ಒಂದು ಬಡ ಶೆಟ್ಟಿ ಅಂಗಡಿ ಮತ್ತು ಅದರ ವಿಶದನೀಯ ಪರಿಸ್ಥಿತಿ ಎಲ್ಲವನ್ನೂ ಗಮನಿಸಿದರು. ಈ ಎರಡೂ ಅಂಶಗಳೂ ಅವರ ಮನದಾಳವನ್ನು ಕಲಕಿ ಎಚ್ಚರಿಕೆಯ ಕರೆಗಂಟೆಯಾಗಿ ಕೂಗಿದ್ದು, ವಿದೇಶೀ ನೇರ ಬಂಡವಾಳ ಹೂಡಿಕೆಗೆ ನಮ್ಮ ಒಪ್ಪಂದದ ಚರ್ಚೆ ನಡೆಯುತ್ತಿದ್ದಾಗ. ಈ ಎಲ್ಲ ವಿಚಾರಗಳ ಮಂಥನವೇ “ಭಾರತ್ ಸ್ಟೋರ್ಸ್”. ಸಿನೆಮಾದ ಚಿತ್ರೀಕರಣವೂ ಹನುಮಂತನಗರದ ನಿರ್ಮಲಾ ಸ್ಟೋರ್ಸ್ ಬಸ್ ನಿಲ್ದಾಣದಲ್ಲೇ ನಡೆದಿದೆ.
ಈ ಸಿನೆಮಾದ ಮೂಲಕ ನಿರ್ದೇಶಕರು ಹಲವಾರು ಪ್ರಸ್ತುತ ಸಂದರ್ಭಗಳನ್ನು, ತೊಂದರೆ-ತಲ್ಲಣಗಳನ್ನು ಸಮರ್ಥವಾಗಿ ಮೂಡಿಸಿದ್ದಾರೆ. ಚಿತ್ರ ತೆರೆದುಕೊಳ್ಳುವುದೇ ನಮ್ಮ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ. ವರ್ಷಗಳ ನಂತರ ಒಂದು ಪ್ರಬಲ ಕಾರಣಕ್ಕಾಗಿ ವಿದೇಶೀ ದೇಶಿ ಹುಡುಗಿಯೊಬ್ಬಳು ಭಾರತಕ್ಕೆ ಹಿಂತಿರುಗಿರುತ್ತಾಳೆ. ದಾರಿಯುದ್ದಕ್ಕೂ ದೊಡ್ಡ ದೊಡ್ಡ ಕಟ್ಟಡಗಳನ್ನು ಕಂಡ ಆಕೆಗೆ ದಿಗ್ಭ್ರಮೆ. ಆಕೆಯ ತಂದೆ ಅವಳ ಮದುವೆಗಾಗಿ ಶೆಟ್ಟಿಯೊಬ್ಬನ ಬಳಿ ಸಾಲ ಪಡೆದಿರುತ್ತಾನೆ. ವಿದೇಶಕ್ಕೆ ಹೊರಟುಹೋಗಿ ಅದನ್ನು ಕೊನೆಗೂ ಆ ಶೆಟ್ಟಿಗೆ ಮರಳಿಸಲಾಗದೆ ತಪ್ಪಿತಸ್ಥ ಮನೋಭಾವ ಕಾಡಿ ಖಿನ್ನನಾಗಿ ಪ್ರಾಣ ಬಿಡುತ್ತಾನೆ. ಸಾಯುವ ಮೊದಲು, ಮಗಳಿಗೆ ಆ ಹಣವನ್ನು ಬಡ್ಡಿ ಸಮೇತ ಶೆಟ್ಟಿಗೆ ಮರಳಿಸಲು ಹೇಳಿ ಪ್ರಾಣಬಿಡುತ್ತಾನೆ. ತಂದೆಯ ಕೊನೆಯಾಸೆಯನ್ನು ತೀರಿಸಲು ಮಗಳು ಪಣ ತೊಟ್ಟು, ಆ ಶೆಟ್ಟಿ ಅಂಗಡಿ ವಿಳಾಸವಿರುವ ಭಾರತ್ ಸ್ಟೋರ್ಸ್ ಗೆ ಹಣವನ್ನು ಅಂಚೆಯ ಮೂಲಕ ಕಳುಹಿದರೆ, ಅಲ್ಲಿ ಆ ಹೆಸರಿನ ಯಾರೂ ಇಲ್ಲವೆಂದು ಮರಳುತ್ತದೆ. ಅದಕ್ಕಾಗಿ ತಾನೇ ಖುದ್ದಾಗಿ ಭಾರತಕ್ಕೆ ಬಂದಿಳಿಯುತ್ತಾಳೆ. ಇದು ಕಥೆಯ ಹಿನ್ನೆಲೆ.

ಆಕೆ ನೇರವಾಗಿ ಭಾರತ್ ಸ್ಟೋರ್ಸ್ ಬಸ್ ನಿಲ್ದಾಣಕ್ಕೆ ಬಂದಿಳಿಯುತ್ತಾಳೆ. ನಿಲ್ದಾಣದ ಹೆಸರು ಭಾರತ್ ಸ್ಟೋರ್ಸ್, ಆದರೆ ಅಲ್ಲಿ ಯಾವುದೇ ಅಂಗಡಿ ಆ ಹೆಸರಿನದ್ದಾಗಿರುವುದಿಲ್ಲ. ಸುತ್ತ ಮುತ್ತ ವಿಚಾರಿಸಿದರೂ ಯಾರಿಗೂ ತಿಳಿಯದು. ಹುಡುಗನೊಬ್ಬ ಹೆಡ್ ಫೋನ್ ಸಿಕ್ಕಿಸಿಕೊಂಡು ಇಂಗ್ಲೀಷಿನಲ್ಲಿ “ದಿಸ್ ಈಸ್ ಭಾರತ್ ಸ್ಟೋರ್ಸ್ ಸ್ಟಾಪ್” ಎಂದು ಹೇಳುವ ಪರಿ ವಿಡಂಬನಾತ್ಮಕವಾಗಿದೆ. ಕೊನೆಗೆ ಒಬ್ಬ ವೃದ್ಧ ದಂಪತಿಗಳಿಂದ ಆ ಶೆಟ್ಟಿ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯ ನೆಲೆಯನ್ನು ಕಂಡುಹಿಡಿದು ಆತನ ಬಳಿ ಬರುತ್ತಾಳೆ. ಅವನಿಂದ ಆ ಶೆಟ್ಟಿಯ ಇರವಿನ ತಿಳುವಳಿಕೆಯ ಬಗೆಗೆ ಹೆಚ್ಚು ಪ್ರಯೋಜನವಾಗದಿದ್ದರೂ ಆ ಶೆಟ್ಟಿಯ ವ್ಯಾಪಾರ ಕ್ರಮ, ಆತನ ನೀತಿ, ಒಳ್ಳೆಯ ಚಿಂತನೆಗಳು, ವ್ಯಾಪಾರೀ ಚತುರತೆ ಎಲ್ಲವುಗಳ ಪರಿಚಯವಾಗಿ, ಆ ಶೆಟ್ಟಿ ಅವಳಿಗೆ ಆಪ್ತವಾಗುತ್ತಾ ಹೋಗುತ್ತಾನೆ. ಆತನ ಬಗ್ಗೆ ತನಗೆ ಎಲ್ಲ ವಿಷಯಗಳೂ ತಿಳಿಯುತ್ತಿದ್ದರೂ ಆತನ ಇರುವಿಕೆಯ ಸುಳಿವು ಸಿಗದೆ ಒದ್ದಾಡುತ್ತಾಳೆ. ನಿದ್ದೆ-ಕನಸಿನಲ್ಲಿ ತಂದೆ ಬಂದು ಶೆಟ್ಟಿಗೆ ಹಣ ತಲುಪಿತೇ ಎಂದು ಕೇಳುವಷ್ಟು ಅವಳು ಈ ವಿಷಯದಲ್ಲಿ ತಲೆಕೆಡಿಸಿಕೊಂಡಿರುತ್ತಾಳೆ. ಒಂದು ಕಡೆ ಶೆಟ್ಟಿ ಸಿಗದ ಆತಂಕ, ಮತ್ತೊಂದು ಕಡೆ ಅವಳ ಮುಂದೆ ಹಂತ ಹಂತವಾಗಿ ಬಿತ್ತರಗೊಳ್ಳುತ್ತಿರುವ ಜಾಗತಿಕ ಬದಲಾವಣೆಗಳ ಪರಿಣಾಮ, ಈ ಎಲ್ಲವುಗಳಿಂದ ಆಕೆಯ ಮನಸ್ಸು ತಲ್ಲಣಗೊಂಡಿರುತ್ತದೆ. ಆಕೆಯ ಮನಸ್ಥಿತಿ ಹೊಸ-ಹೊಸ ಸಾಮಾಜಿಕ ಬೆಳವು-ಬದಲಾವಣೆಗಳಿಗೆ ಸಿಕ್ಕು ತಲ್ಲಣಗೊಳ್ಳುತ್ತಿರುವ ನಮ್ಮ ಸಮಾಜವನ್ನು ಪ್ರತಿನಿಧಿಸುತ್ತದೆ.
ಶೆಟ್ಟಿಯ ಮನೋಧರ್ಮ ನಮ್ಮ ಹಿಂದಿನ ಕಾಲದ ಮೌಲ್ಯಗಳು, ಧರ್ಮ-ನ್ಯಾಯಗಳ ಮೇಲೆ ಅವಲಂಭಿತವಾಗಿರುತ್ತದೆ. ಕಾಲಾಯಗತ ಆತನ ಮುಂದಿನ ಪೀಳಿಗೆ ಬದಲಾಗುತ್ತಿರುವ ಸಮಾಜಕ್ಕೆ ಹೊಂದಿಕೊಳ್ಳುವ ಭರದಲ್ಲಿ ತಮ್ಮ ಬೇರುಗಳನ್ನು ಬಿಟ್ಟು ಓಡುತ್ತಿರುವ ಅಪಾಯದ ಆತಂಕ ಕಂಡುಬರುತ್ತದೆ. ಶಾಪಿಂಗ್ ಮಾಲ್ ಗಳ ಅಬ್ಬರ ಹೆಚ್ಚಾಗಿ, ಅದರ ಥಳುಕು-ಬೆಡಗಿಗೆ ಜನ ಮರುಳಾಗಿ ಕೊಳಕಾದ, ಇಕ್ಕಟ್ಟಾದ ಸಣ್ಣ ದಿನಸಿ ಅಂಗಡಿಗಳಿಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಶೆಟ್ಟಿಯ ದಿನಸಿ ಅಂಗಡಿ (ಮತ್ತು ತನ್ನಂತಹ ಚಿಲ್ಲರೆ ಅಂಗಡಿಗಳನೇಕ) ಬದಲಾಗುತ್ತಿರುವ ಕಾಲದಲ್ಲಿ ಕೊಚ್ಚಿ ಮುಚ್ಚಿ ಹೋಗುತ್ತದೆ. ಅದೇ ದುಃಖದಲ್ಲಿ ಶೆಟ್ಟಿ ವೃದ್ಧಾಶ್ರಮ ಸೇರಿ ಗರಬಡಿದವನಂತೆ ಮೌನಿಯಾಗಿಬಿಡುತ್ತಾನೆ. ಕೊನೆಗೂ ಶೆಟ್ಟಿಯ ಇರವಿಕೆಯನ್ನು ಶಾಪಿಂಗ್ ಮಾಲ್ ನಲ್ಲಿ ಕೆಲಸ ಮಾಡುವ ಹುಡುಗನೊಬ್ಬನಿಂದ ತಿಳಿಯುತ್ತಾಳೆ. ಆ ಹುಡುಗ ಹಿಂದೊಮ್ಮೆ ಶೆಟ್ಟಿಯ ಬಳಿ ಕೆಲಸ ಮಾಡುತ್ತಿರುತ್ತಾನೆ. ಅವನಿಂದಲೂ ಶೆಟ್ಟಿಯ ಬಗ್ಗೆ ಸಾಕಷ್ಟು ತಿಳಿಯುತ್ತಾಳೆ. ಇದರ ನಡುವೆ, ಇವಳು ಶೆಟ್ಟಿಗೆ ಹಣ ಕೊಡಲು ಬಂದವಳು ಎಂಬ ಸತ್ಯವನ್ನು ತಿಳಿದು ಶೆಟ್ಟಿಯ ಕುಟುಂಬ ಹಲವಾರು ರೀತಿಗಳಲ್ಲಿ ಇವಳನ್ನು ಭೇಟಿ ಮಾಡಲು ಪ್ರಯತ್ನಿಸುವುದು, ಅವಳಿಂದ ಹೇಗಾದರೂ ಹಣ ಪಡೆಯಲು ಪ್ರಯತ್ನಿಸುವುದು ಇಂತಹ ವಿವರಗಳು ಮನೋಗ್ನವಾಗಿ ಮೂಡಿಬಂದಿದೆ.
ನಿರ್ದೇಶನದ (ಪಾತ್ರಧಾರಿಯ ಅತ್ಯುತ್ತಮ ಅಭಿನಯ ಸಹ) ಮೆಚ್ಚುಗೆಗೆ ಮತ್ತೊಂದು ಗರಿ ಸೇರುವುದು, ಆ ಹುಡುಗಿಯೊಂದಿಗೆ ಭಾರತಕ್ಕೆ ಬಂದಿದ್ದ ಆಕೆಯ ಗಂಡನ ಪಾತ್ರಕ್ಕಾಗಿ. ಆತ ಇಂದಿನ ಯುವ ಪೀಳಿಗೆಯ ಮನೋಧರ್ಮದ ಪರ್ಫೆಕ್ಟ್ ಉದಾಹರಣೆ. ಭಾವನೆಗಳಿಗೆ ಹೆಚ್ಚು ಮಹತ್ವ ಕೊಡದೆ ತರ್ಕಕ್ಕೆ ಪ್ರಾಮುಖ್ಯತೆ ಕೊಡುವುದು, ವಾಸ್ತವವಾಗಿ ಆಲೋಚಿಸುವುದು, ಹೊಸತನಕ್ಕೆ ಸರಾಗವಾಗಿ ತೆರೆದುಕೊಳ್ಳುವುದು, ಬದಲಾವಣೆಗಳನ್ನು ಸರಿಯಾಗಿ ಕ್ಯಾಪಿಟಲೈಸ್ ಮಾಡಿಕೊಳ್ಳುವ ಜಾಣ್ಮೆ ಇವೆಲ್ಲವೂ ಈ ಪಾತ್ರಧಾರಿಯ ಮೂಲಕ ಹೊರಬಂದಿದೆ. ಜೊತೆಗೆ ಈ ಪಾತ್ರಧಾರಿ ಎಲ್ಲೂ ’ಕೆಟ್ಟವನು’ ಎಂಬ ಯಾವ ಪೂರ್ವಾಗ್ರಹಗಳಿಗೂ ಒಳಗಾಗದೆ ಬಹಳ ಮಹತ್ವವಾಗಿ ಪಾತ್ರರಚನೆಯಾಗಿದೆ.
ಅವಳಿಗೆ ಕೊನೆಗೂ ಶೆಟ್ಟಿ ಸಿಕ್ಕಾಗ ಆಗುವ ಆನಂದ ಹೇಳತೀರದು. ಶೆಟ್ಟಿಗೆ ತನ್ನ ಎಲ್ಲ ವಿವರಗಳನ್ನು ಹೇಳಿ ಆತನ ಕೈಗೆ ಹಣ ರವಾನಿಸಿದ ಕೂಡಲೇ ಶೆಟ್ಟಿಯ ಆರೋಗ್ಯ ಹದಗೆಡುತ್ತದೆ. ಆತ ಗಂಭೀರ ಪರಿಸ್ಥಿತಿಗೆ ಸಿಲುಕಿ, ವೃದ್ಧಾಶ್ರಮಕ್ಕೆ ಆಂಬುಲೆನ್ಸ್ ಅನ್ನು ಕರೆಸುತ್ತಾರೆ. ಎಲ್ಲರೂ ಶೆಟ್ಟಿಯನ್ನು ಆಸ್ಪತ್ರೆಗೆ ಒಯ್ಯುವಾಗ ನಗರದ ದಟ್ಟ ಟ್ರಾಫಿಕ್ಕಿನಲ್ಲಿ ಸಿಲುಕಿ ಒದ್ದಾಡುವುದು ಕಡೆಯ ದೃಶ್ಯ. ಆಂಬುಲೆನ್ಸ್ ಕೂಗುತ್ತಲೇ ಇರುತ್ತದೆ ಆದರೂ ಒಂದಿಚೂ ಮುಂದೆ ಹೋಗಲಾರದ ಪರಿಸ್ಥಿತಿ. ಬಿಕ್ಕಟ್ಟುಗಳಿಗೆ ಸಿಕ್ಕಿ ಕುಯ್ಗುಡುತ್ತಿರುವ ಆ ಆಂಬುಲೆನ್ಸ್ ನಂತೆ ನಮ್ಮ ದೇಶ ನಲುಗುತ್ತಿದೆ ಎಂಬ ವಿಷಯವನ್ನು ಸೂಚ್ಯವಾಗಿ ಬಿಂಬಿಸಿರುವುದು ಗಮನಾರ್ಹ. ಆಕಾಶದಲ್ಲಿ ಹಕ್ಕಿಗಳ ಚಲನ ಸ್ಥಬ್ದವಾಗುವ ಮೂಲಕ ಸಿನೆಮಾ ಕೊನೆಗೊಳ್ಳುತ್ತದೆ. ಶೆಟ್ಟಿ ಅಲ್ಲಿಗೆ ಪ್ರಕೃತಿಲೀನ ಎಂದು ಭಾವಿಸಲೂಬಹುದು.
ಚಿತ್ರದ ಕೊನೆಗೆ ಯಾವುದೇ ನಿರ್ಧರಿದ ಅಂತ್ಯ ಕೊಡದೆ ತೆರವುಗೊಳಿಸಿದ್ದು ಶ್ಲಾಘನೀಯ. ಇದು ನಮ್ಮಲ್ಲಿನ ತಲ್ಲಣವನ್ನು, ಪ್ರಶ್ನೆ, ಚಿಂತನೆಯನ್ನು ಜಾಗೃತಗೊಳಿಸುತ್ತದೆ. ಈಗಾಗಲೇ ಶಾಪಿಂಗ್ ಮಾಲ್ಗಳಂತಹ ದೊಡ್ಡ ಮೀನು ಶೆಟ್ಟಿ ಅಂಗಡಿಯಂತಹ ಸಣ್ಣ ಸಣ್ಣ ಮೀನುಗಳನ್ನು ಕಬಳಿಸಿಯಾಗಿದೆ. ಇನ್ನು ಮುಂದೆ ವಾಲ್ಮಾರ್ಟ್ ನಂತಹ ದೈತ್ಯ ತಿಮಿಂಗಲಗಳ ಲಗ್ಗೆ ಆದಲ್ಲಿ ನಮ್ಮ ದೇಶದ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆಯೊಂದಿಗೆ ಚಿತ್ರ ಮುಗಿದ ನಿಟ್ಟುಸಿರು.
ಪ್ರಸ್ತುತ ಪರಿಸ್ಥಿತಿಯನ್ನು ಬಹಳ ಸಮರ್ಥವಾಗಿ ಬಿಂಬಿಸಿರುವುದು ನಿರ್ದೇಶಕನ ಗೆಲುವು. ಆದರೆ ನನಗೆ ಚಿತ್ರದಲ್ಲಿ ಕಂಡು ಬಂದ ಒಂದು ನೆಗಟಿವ್ ಅನ್ನಬಹುದಾದ ಅಂಶವೆಂದರೆ, ಶೆಟ್ಟಿಯೊಬ್ಬನನ್ನು (ಅಥವಾ ಚಿಲ್ಲರೆ ವ್ಯಾಪಾರಿಯನ್ನು) ಅಗತ್ಯಕ್ಕಿಂತಲೂ ಹೆಚ್ಚಾಗಿ ಕರುಣಾಮಯವಾಗಿ ಚಿತ್ರಿಸಿ, ಮತ್ತು ಯುವ ಪೀಳಿಗೆಯನ್ನು (ವಯಸ್ಕನೊಬ್ಬನ ಸೊಸೆಯ ಪಾತ್ರದ ಮೂಲಕ) ಅತ್ಯಂತ ನಿರ್ದಯಿಯಾಗಿ ಬಿಂಬಿಸಿರುವುದು ಒಂದು ಅನಗತ್ಯ ಪಾಥೋಸ್ ಅನ್ನು ಸೃಷ್ಟಿ ಮಾಡುತ್ತದೆ. ಇಲ್ಲಿ ನಡೆಯುತ್ತಿರುವ ನಿಶ್ಕರುಣ ಬದಲಾವಣೆಗಳು, ನಿರ್ಧಾರಗಳ ಚದುರಂಗದಲ್ಲಿ ಯುವ ಪೀಳಿಗೆಯೂ ಒಂದು ದಾಳ ಎಂಬುದು ಆಲೋಚಿಸಬೇಕಾದ ವಿಷಯ. ಈ ವಿಷಮಯ ವ್ಯವಸ್ಥೆಯ ವೃತ್ತದಲ್ಲಿ ಸಾಮಾನ್ಯ ಮನುಷ್ಯ ಒಬ್ಬ ನೆಪ ಮಾತ್ರ. ಆ ವಯಸ್ಕನ ಸೊಸೆ, “ನಮಗೆ ಆಫೀಸಿನಲ್ಲಿ ಮಾಲ್ ಗಳ ಕೂಪನ್ ಸಿಗುತ್ತದೆ ಆದ್ದರಿಂದ ನಿಮ್ಮ ದಿನಸಿ ಬೇಡ” ಎಂದ ಮಾತು ಈ ವಿಷಯಕ್ಕೆ ಆಧಾರವಾಗುತ್ತದೆ. ಇಲ್ಲಿ ನಡೆಯುತ್ತಿರುವುದೆಲ್ಲವೂ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯ ಇಂದ್ರಜಾಲವೇ ಹೊರತು ಯುವಕರು ಸ್ವಾರ್ಥಿಗಳು, ನಿರ್ದಯಿಗಳು ಆಗಿರುವುದಲ್ಲ. ಈ ಒಂದು ಸಣ್ಣ ಅನುಮಾನಿತ ಅಡಚಣೆಯ ಹೊರತಾಗಿ ಸಿನೆಮಾ ನಾವು ಸಿಕ್ಕಿ ಹಾಕಿಕೊಂಡಿರುವ ಈ ಜಾದೂ ಕೋಟಲೆಯನ್ನು, ವ್ಯವಸ್ಥೆಯನ್ನು ಬಹಳ ಪರಿಣಾಮಕಾರಿಯಾಗಿ ಮೂಡಿಸಿದೆ.
ಹೇಳಲೇಬೇಕಾದ ಇನ್ನೊಂದು ಅಂಶವೆಂದರೆ, ಈ ಸಿನೆಮಾ ನೋಡಿ ಮೆಚ್ಚಿದ ನಂತರ ತಿಳಿದ ಸಂಗತಿ, ಇದನ್ನು ಭಾಜಪ ಪಕ್ಷಕ್ಕಾಗಿ ತಯಾರಿಸಲಾಗಿತ್ತು ಎಂದು. (Though this movie was made for the BJP only, I am personally apolitical. The issue of FDI is something that is still hot. My movie was based on the media reports and portrayed my personal view on FDI. – ಎಂಬ ಈ ಮಾತುಗಳನ್ನು ಶೇಷಾದ್ರಿಯವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ತಿಳಿಸಿದ್ದು). ಆದರೆ, ಶೇಷಾದ್ರಿಯವರು ಹೇಳಿದಂತೆ ನಾನೂ ಸಹ apolitical. ಸಮಾಜದ ಭುಗಿಲೇಳುತ್ತಿರುವ ತಲ್ಲಣಗಳ ಪ್ರಸ್ತುತ ಸಾಕ್ಷಿಯಾಗಿ, ವಿದೇಶಿ ನೇರ ಬಂಡವಾಳ ಹೂಡಿಕೆಯ ಪರಿಣಾಮಗಳನ್ನು ಊಹಿಸಬಲ್ಲವಳಾಗಿ ನನಗೂ ಈ ಸಿನೆಮಾ ಆಪ್ತವೆನಿಸಿತು. ಒಂದು ಉತ್ತಮ ಹಾಗೂ ಸದುದ್ದೇಶದ ಸಿನೆಮಾ ತಯಾರಿಸಿದ್ದಕ್ಕಾಗಿ ಚಿತ್ರತಂಡಕ್ಕೆ ಅಭಿನಂದನೆಗಳು.
 
 
 

‍ಲೇಖಕರು G

March 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

 1. Badarinath Palavalli

  ಉತ್ತಮ ಚಿತ್ರಗಳು ಸಾರ್ವಜನಿಕ ವೀಕ್ಷಣೆಗೆ ದೊರೆಯದೇ ಹೋಗುತ್ತಿರುವುದು ದುಃಖದ ವಿಚಾರ.
  ವಿದೇಶಿ ನೇರ ಬಂಡವಾಳ ಹೂಡಿಕೆಯು ದೇಶದ ಚಿಲ್ಲರೆ ವ್ಯಾಪಾರಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎನ್ನುವ ಪರಿಣಾಮಕಾರಿ ಚಿತ್ರವನ್ನು ನಾನು ಕಂಡಿತ ನೋಡಲೇಬೇಕು.
  ತಮ್ಮ ನಿರೂಪಣೆ ಚೆನ್ನಾಗಿದೆ.

  ಪ್ರತಿಕ್ರಿಯೆ
 2. Anonymous

  ಪ್ರಿಯರೆ,
  ನನ್ನ ಚಿತ್ರದ ಕುರಿತ ನಿಮ್ಮ ಬರಹಕ್ಕೆ ಧನ್ಯವಾದಗಳು.
  ನಿಮ್ಮ ಕೊನೆಯ ಪ್ಯಾರಾದಲ್ಲಿ ‘ಈ ಚಿತ್ರವನ್ನು ಭಾಜಪ ಪಕ್ಷಕ್ಕಾಗಿ ತಯಾರಿಸಲಾಗಿತ್ತು’ ಎಂಬ ಮಾತನ್ನು ಬರೆಯುತ್ತಾ ಪತ್ರಿಕೆಯೊಂದರ ಸುದ್ದಿಯನ್ನು ಉದಾಹರಿಸಿದ್ದೀರಿ. ಇದು ತಪ್ಪು ಮಾಹಿತಿ. ಈ ಚಿತ್ರವನ್ನು ನಾನು ಯಾಕ ರಾಜಕೀಯ ಪಕ್ಷಕ್ಕೂ ತಯಾರಿಸಲಿಲ್ಲ, ಇದನ್ನು ನಿರ್ದೇಶಿಸಿದ್ದು ಬಸಂತ್‌ಕುಮಾರ್ ಪಾಟೀಲರಿಗಾಗಿ.
  ಆದರೆ, ‘ಸ್ವದೇಶಿ ಜಾಗರಣ ವೇದಿಕೆ’ (ರಾಷ್ಟ್ರೋತ್ಥಾನ ಪರಿಷತ್ತಿನ ಅಂಗ ಸಂಸ್ಥೆ) ಈ ಚಿತ್ರದ ನೂರು ಪ್ರದರ್ಶನಗಳನ್ನು ಕರ್ನಾಟಕದಾದ್ಯಂತ ಮಾಡುತ್ತೇವೆ ಎಂದು ನಿರ್ಮಾಪಕರಿಂದ ಹಕ್ಕುಗಳನ್ನು ಖರೀದಿಸಿದ್ದಾರೆ. ಇದನ್ನು ಪತ್ರಿಕೆಯವರು ಬಿಜೆಪಿ ಜೊತೆಗೆ ತಳಕು ಹಾಕಿದರು ಅಷ್ಟೇ…
  ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಈ ಸುದ್ದಿ ಬಂದ ಮಾರನೆಯ ದಿನ ನಾನು ನನ್ನ ಸಮಜಾಯಿಷಿ ನೀಡಿದ್ದೇನೆ, ಅದು ಪ್ರಕಟವಾಗಿದೆ ಕೂಡ. ಪ್ರಾಯಶಃ ನೀವು ಅದನ್ನು ಗಮನಿಸಿಲ್ಲ ಎಂದು ಕಾಣುತ್ತದೆ.
  ಹಾಗೆಯೇ, ನಿಮ್ಮ ಲೇಖನ ಓದಿದೆ ಕೆಲವು ಮಿತ್ರರು ಈ ಚಿತ್ರ ನೋಡಲಾಗಲಿಲ್ಲ ಎಂಬ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಅವರಿಗಾಗಿ ಈ ಮಾಹಿತಿ. ‘ಭಾರತ್ ಸ್ಟೋರ್ಸ್’ ಹಾಗೂ ನನ್ನ ಹಿಂದಿನ ಚಿತ್ರ ‘ಬೆಟ್ಟದ ಜೀವ’ ಎರಡೂ ಡಿವಿಡಿ ರೂಪದಲ್ಲಿ ಈಗ ಟೋಟಲ್ ಕನ್ನಡ ಡಾಟ್ ಕಾಮ್‍ನಲ್ಲಿ ಲಭ್ಯವಿದೆ.
  -ಪಿ. ಶೇಷಾದ್ರಿ

  ಪ್ರತಿಕ್ರಿಯೆ
 3. Pramod

  ಟ್ರೈಲರ್ ನೋಡಿದ ದಿನದಿ೦ದ ನೋಡಲೇಬೇಕೆ೦ಬ ಹಟದಿ೦ದ ಕೂತಿದ್ದೆ. ರಿಲೀಸ್ ಆಗಿ ನಾನು ಎಚ್ಚೆತ್ತುಕೊಳ್ಳುವ ಮು೦ಚೆ, ಥಿಯೇಟರ್ ನಿ೦ದ ಕಾಣೆ. ಟೋಟಲ್ ಕನ್ನಡವೋ ಚ೦ದನದಲ್ಲಿ ನೋಡಬೇಕಷ್ಟೇ. ಕಮರ್ಶಿಯಲ್ ಚಿತ್ರಗಳ ಭರಾಟೆಯಲ್ಲಿ ಮೌಲ್ಯಾಧಾರಿತ ಚಿತ್ರಗಳು, ಮನಸುಗಳು ದುಡ್ಡೆ೦ಬ ಕೊಚ್ಚೆಯಲ್ಲಿ ತೇಲಲು ಭಾರಿ ಕಷ್ಟಪಡುತ್ತಿವೆ.

  ಪ್ರತಿಕ್ರಿಯೆ
 4. Vidyashankar Harapanahalli

  Good Review. I am just wondering, why this issue has to be dealt emotionally?

  ಪ್ರತಿಕ್ರಿಯೆ
 5. ಶಾಂಕರಿ

  ತುಂಬ ಚೆಂದದ ಚಿತ್ರದ ಬಗ್ಗೆ ಅಷ್ಟೇ ಮನ ತಟ್ಟುವ ಬರಹ

  ಪ್ರತಿಕ್ರಿಯೆ
 6. ಕೆ. ಮಹಾಂತೇಶ

  ನಿರೂಪಣೆ ಚೆನ್ನಾಗಿದೆ ಬಹುಶಃ ಬೆಂಗಳೂರಿನ ಮಧ್ಯಭಾಗದಲ್ಲಿರುವ ಶಿವಾನಂದ ಸ್ಟೋರ್ಸ್ ಪರಿಸ್ಥಿತಿ ಕೇಲವೇ ದಿನಗಳಲ್ಲಿ ಆಗಗೊಬಹದೇನೋ ಗೊತ್ತಿಲ್ಲ.ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ,ಶಿಕ್ಷಣ, ಆರೋಗ್ಯ ಅಷ್ಟೇ ಯಾಕೆ ನಮ್ಮ ಊರುಗಳೇ, ನಮ್ಮ ಸಂಬಂಧಗಳೇ ಬದಲಾಗಿ ಹೋಗಿರುವಾಗ ಇನ್ನೂ ಸ್ಟೋರ್ಸ್ಹ ಗಳೆಲ್ಲಾ ಯಾವ ಲೆಕ್ಕ.? ಒಂದು ವಾಲ್ ಮಾರ್ಟ ಅಂಗಡಿ ಸ್ಥಾಪಿಸಿದರೆ ಅದರಿಂದ 260 ಯುವಕರಿಗೆ ಕೆಲಸ ಸಿಗುತ್ತದೆ ಎಂದು ಅದರ ವೆಬ್ಸೈಟ್ ಹೇಳಿದೆ. ಆದರೆ ಭಾರತದಲ್ಲಿ ಒಂದು ವಾಲ್ ಮಾರ್ಟ ಆರಂಭಗೊಂಡರೆ ಅದರ ಸುತ್ತ ಮುತ್ತ ಇರುವ4000 ಜನರು ನಿರುದ್ಯೋಗಿಗಳಾಗುತ್ತಾರೆ. ಆದರೆ ಇದು ನಮ್ಮನ್ನು ಆಳುವವರಿಗೆ ತಿಳಿಯುವುದಿಲ್ಲವೇ ? ಖಂಡಿತ ಕಾಂಗ್ರೆಸ-ಬಿಜೆಪಿಗಳಿಗೆ ತಿಳಿದಿದೆ. ಆದರೆ ದೊಡ್ಡ ದೊಡ್ಡ ಕಾರ್ಪೋರೆಟ್ಗಳು ನೀಡುವ ಕಮಿಷನ್ ಹಣಕ್ಕೆ ಇವರೆಲ್ಲಾ ಬಾಯಿ ಬಿಡುತ್ತಿರುವುದಕ್ಕೆ ಸಾಕ್ಷಿಯೇ ಈ ಚಿಲ್ಲರೆ ಮಾರಾಟದಲ್ಲಿ ವಿದೇಶಿ ಬಂಡವಾಳ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: