’ಬಿಬ್ಲಿಯೋಫಿಲಿ’ ಅಂದ್ರೇನು ಗೊತ್ತಾ? – ವಿಶ್ವ ಪುಸ್ತಕ ದಿನಾಚರಣೆ ವಿಶೇಷ

ಸಂಯುಕ್ತಾ ಪುಲಿಗಳ್

ಬಿಬ್ಲಿಯೋಫಿಲಿ
“Ideally a book would have no order to it, and the reader would have to discover his own”
ನಗರದ ಒಂದಷ್ಟು ಪುಸ್ತಕದಂಗಡಿಗಳಿಗೆ ಸತತವಾಗಿ ಭೇಟಿ ಮಾಡುತ್ತಿದ್ದರೆ, ಮಾರ್ಕ್ ಟ್ವೈನನ ಈ ಮಾತುಗಳಿಗೆ ಒಂದು ಹೊಸ ಆಯಾಮ ದೊರೆಯುವುದಂತೂ ಖಂಡಿತ. ಪುಸ್ತಕ ಓದುವುದು ಒಂದು ಅನಿರ್ವಚನೀಯ ಸುಖ. ಆದರೆ ಅದಕ್ಕಿಂತಲೂ ಹೆಚ್ಚು ಸಂಭ್ರಮ ಅಂದರೆ ಪುಸ್ತಕದಂಗಡಿಯಲ್ಲಿ ಪುಸ್ತಕಗಳ ರಾಶಿಗಳ ನಡುವೆ ಹುದುಗಿಹೋಗಿ ಒಂದೊಂದೇ ಪುಟ ತಿರುವುತ್ತಾ ತರಾವರಿ ಪುಸ್ತಕಗಳನ್ನು ಆಸ್ವಾದಿಸುವುದು. ಇದೊಂದು ಚಟದಂತೆ, ಒಮ್ಮೆ ನಿಶೆ ಹತ್ತಿಬಿಟ್ಟರೆ ಮತ್ತೆ ಬಿಟ್ಟೆನೆಂದರೆ ಸೈ. ಈ ರೀತಿಯ ಚಟದಿಂದ ವಾರಂಪ್ರತಿ ಒಮ್ಮೆ ಯಾವುದಾದರೂ ಪುಸ್ತಕದಂಗಡಿಗೆ ಭೇಟಿ ಕೊಡುವುದು ನಮ್ಮ ಕಟ್ಟುಪಾಡಾದದ್ದು ಎಂದು ಎಂಬುದು ಇನ್ನೂ ಲೆಕ್ಕಾಚಾರದ ಮಾತೇ ಆಗಿದೆ. ಪುಸ್ತಕಗಳ ಪರಿಧಿಯೇ ಹಾಗೆ, ಎಲ್ಲರನ್ನೂ ಸೆಳೆಯುತ್ತದೆ. ಈ ರೀತಿ ಪುಸ್ತಕಗಳ ಹುಚ್ಚಿಗೆ (ಅಥವಾ ಪ್ರೇಮಕ್ಕೆ) ಬಿಬ್ಲಿಯೋಫಿಲಿ ಅನ್ನುತ್ತಾರೆ. ಪುಸ್ತಕದಂಗಡಿಗೆ ಹೋದಾಗಲೆಲ್ಲಾ, ಅಲ್ಲಿನ ರಾಶಿ ರಾಶಿ ಗ್ರಂಥಗಳ ಘಮ ನಮ್ಮನ್ನಾವರಿಸುತ್ತದೆ. ಅದರ ಜೊತೆಗೆ ಕೆಲವು ಅಹಿತವಾದ ಅನುಭವಗಳು ಸಹ ನಮ್ಮ ಕಾಳಜಿಯನ್ನು ಬೇಡುತ್ತವೆ.
ಅಂಕಿಅಂಶಗಳ ಪ್ರಕಾರ ಪ್ರತಿವರ್ಷ ಭಾರತದಲ್ಲಿ ಸುಮಾರು ಎಂಭತ್ತುಸಾವಿರ ಪುಸ್ತಕಗಳು ಮುದ್ರಣಗೊಳ್ಳುತ್ತಿವೆ. ಅಂದರೆ ಒಂದು ದಿನಕ್ಕೆ ಸುಮಾರು ಇನ್ನೂರು ಪುಸ್ತಕಗಳು ದೇಶದಾದ್ಯಂತ ಬಿಡುಗಡೆಗೊಳ್ಳುತ್ತಿದೆ! ಅದರಲ್ಲಿ ಅರ್ಧ ಮುಕ್ಕಾಲು ಭಾಗ ಜಾಳನ್ನು ತೆಗೆದರೂ ಸುಮಾರು ಐವತ್ತು ಒಳ್ಳೆಯ ಪುಸ್ತಕಗಳಾದರೂ ನಮ್ಮ ಓದಿಗಾಗಿ ಹಾತೊರೆಯುತ್ತಿವೆ. ಇತ್ತೀಚೆಗೆ ರೂಪಾಂತರಗೊಳ್ಳುತ್ತಿರುವ ಪರಿಸರಸ್ನೇಹಿ ಇ-ಪುಸ್ತಕಗಳು ಸಹ ಇದರ ಜೊತೆಗೆ ಈಗ ಸೇರಿವೆ. ಇಷ್ಟೆಲ್ಲಾ ಓದು ನಮ್ಮನ್ನು ನಿಜಕ್ಕೂ ತಲುಪುತ್ತಿದೆಯೇ ಎಂಬುದು ಪ್ರಶ್ನೆ. ಕೊಳ್ಳುಬಾಕ ಸಂಸೃತಿಯ ಪ್ರಾಡಕ್ಟುಗಳಾದ ನಾವು ಪುಸ್ತಕ ಖರೀದಿಸಲು ಮಾತ್ರ ಹಿಂದು-ಮುಂದು. ಅಮೆಜಾನ್ ನಂತಹ ಆನ್ಲೈನ್ ಖರೀದಿಗಳ ಅಂಕಿಅಂಶಗಳು ಸಹ ಹೇಳುವುದು ಬಟ್ಟೆ, ಸಮಾನು ಇತ್ಯಾದಿ ಸರಂಜಾಮುಗಳೆಲ್ಲದರ ನಂತರದ ಸ್ಥಾನ ಪುಸ್ತಕಗಳದ್ದು ಎಂದು.
ಜಯನಗರ ನಾಲ್ಕನೇ ಬ್ಲಾಕಿನ ಕಾಂಪ್ಲೆಕ್ಸ್ ಒಳಗೆ ಒಂದು ಪುಟ್ಟ ಪುಸ್ತಕದಂಗಡಿ ಇದೆ. ಇರುವ ಚಿಕ್ಕ ಸ್ಥಳದಲ್ಲಿ ಅವರು ಬಹಳಷ್ಟು ಅಮೂಲ್ಯ, ಸಂಗ್ರಹಯೋಗ್ಯವಾದ ಪುಸ್ತಕಗಳನ್ನು ಸಂಪಾದಿಸಿಟ್ಟಿದ್ದಾರೆ. ಅವರ ಸಂಗ್ರಹವನ್ನು ಮೆಚ್ಚುತ್ತಾ ಅಭಿನಂದಿಸಿದೆ. ಅದಕ್ಕೆ ಅವರು ವಿಷಾದದ ನಗೆ ನಕ್ಕು ಧನ್ಯವಾದ ಅರ್ಪಿಸಿದರು. ಕುತೂಹಲಕ್ಕೆ ಪ್ರಶ್ನೆ ಮಾಡಿದಾಗ ತಿಳಿದದ್ದು, ಪುಸ್ತಕಗಳನ್ನು ಯಾರೂ ಕೊಳ್ಳಲು ಬರುವುದಿಲ್ಲ ಎಂದು. ಅವರ ಪ್ರಕಾರ, ಅವರಂಗಡಿಯಲ್ಲಿ ಹೆಚ್ಚು ಖರೀದಿಯಾಗುವ ಪುಸ್ತಕಗಳೆಂದರೆ, ’ಮಿಲ್ಸ್ ಅಂಡ್ ಬೂನ್ಸ್’ (ಮತ್ತು ಅದರ ರೀತಿಯ ಟೀನೇಜ್ ಫಾಂಟಸಿಗಳು) ಅದೂ ಅಲ್ಲದಿದ್ದರೆ ಶಾಲಾ/ಕಾಲೇಜು ಗೈಡುಗಳು. ನಾವು ಮಾತನಾಡುತ್ತಿದ್ದಂತೆಯೇ ಅಂಗಡಿ ಒಳ ಹೊಕ್ಕ ನಡುವಯಸ್ಸಿನ ಹೆಂಗಸೊಬ್ಬಳು, “ನಿಮ್ಮಲ್ಲಿ ಬರೆಯುವ ನೋಟ್ ಪುಸ್ತಕವಿದೆಯೇ?” ಎಂದು ಇಂಗ್ಲೀಷಿನಲ್ಲಿ ಕೇಳಿದಳು. ಇಲ್ಲವೆಂದು ಹೇಳಿ ನನ್ನತ್ತ ತಿರುಗಿ, ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ ಎಂಬಂತೆ ನಕ್ಕ ಆ ಅಂಗಡಿ ಮಾಲಿಕ.

ಗಾಂಧೀಬಜಾರು ನನ್ನ ಮೆಚ್ಚಿನ ಅಡ್ಡಾಗಳಲ್ಲಿ ಒಂದು. ಏನೂ ಕೆಲಸವಿಲ್ಲದೆ ಸುಖಾಸುಮ್ಮನೆ, ಜನಜಂಗುಳಿಯ ನಡುವೆ ಕಳೆದುಹೋಗಿ ಅಲ್ಲೊಂದು ಬೀಟ್ ಹಾಕಿ ಬರುವುದು ಸಂಪ್ರದಾಯವಾಗಿಹೋಗಿದೆ. ಅಲ್ಲಿರುವ ಕೆಲವು ಪುಸ್ತಕದಮಳಿಗೆಗಳ ವಿಸಿಟ್ ಸಹ. ಒಂದು ದಿನ, ಒಬ್ಬ ತಂದೆ ತನ್ನ ಮಗಳನ್ನು ಅಲ್ಲಿನ ಒಂದು ಪುಸ್ತಕದಂಗಡಿಗೆ ಕರೆತಂದಿದ್ದ. ನಿಶ್ಶಬ್ದ ಸ್ಥಳದಲ್ಲಿ ಅವರಿಬ್ಬರ ಗಂಟಲು ಜೋರಾಗಿದ್ದುದರಿಂದ ಗಮನ ಅತ್ತಕಡೆ ಹೋಗಿತ್ತು. “ಕನ್ನಡ ಪುಸ್ತಕ” ಎಂದು ಆ ಹುಡುಗಿ ಹೇಳಿದಾಗ ನನ್ನ ಕಿವಿ ನೆಟ್ಟಗಾಯಿತು. ಅವರ ಮುಂದಿನ ಮಾತುಗಳಿಂದ ತಿಳಿದದ್ದು, ಆಕೆಯ ತಂದೆ ಒಬ್ಬ ವ್ಯಾಪಾರಿಯೇ ಇರಬಹುದು ಎಂದು. “ಅದ್ಯಾರೋ ಗೊತ್ತೇ ಇಲ್ಲ ಅವನ ಪುಸ್ತಕ ಏನ್ ಓದುತ್ತೀಯ?, ಇಷ್ಟು ದೊಡ್ಡ ಪುಸ್ತಕ ನೀನೆಲ್ಲಿ ಓದ್ತೀಯ, ಚಿಕ್ಕದು ತೊಗೊ, ಇಂಗ್ಲೀಷ್ ಪುಸ್ತಕ ತೊಗೊಂಡ್ರೆ ನಿಂಗೆ ಹೆಲ್ಪ್ ಆಗತ್ತೆ. ಹೋಗ್ಲಿ ಈ ಮೈಂಡ್ ಪವರ್ ಪುಸ್ತಕ ತೊಗೊ, ಉಪಯೋಗವಾಗತ್ತೆ” ಈ ರೀತಿ ಸಾಗಿತ್ತು ಆ ತಂದೆಯ ಉಪದೇಶಾಮೃತ. ಕಪಾಟಿನಿಂದ ಒಂದೊಂದೇ ಪುಸ್ತಕ ಆ ಹುಡುಗಿಯ ಕೈಗೆ ಬರುತ್ತಲೇ ಅದನ್ನು ಏನೋ ಸಬೂಬು ಹೇಳಿ ತಪ್ಪಿಸಿ, ಕೊನೆಗೆ ಅದ್ಯಾವುದೋ ಸಣ್ಣಾತಿಸಣ್ಣ (ಪುಟಗಳಲ್ಲೂ, ಬೆಲೆಯಲ್ಲೂ) ಪುಸ್ತಕ ಖರೀದಿಸಿ ಮರಳಿದರು.
ಮತ್ತೆ ಕೆಲವರು, ಚೀಟಿ ಬರೆದುಕೊಂಡು ಬಂದು ಮತ್ಯಾವ ಪುಸ್ತಕದ ಕಡೆ ತಲೆಯೂ ತಿರುಗಿಸದೆ, ನೆಟ್ಟಗೆ ಮಾಹಿತಿ ಕೇಂದ್ರಕ್ಕೆ ಬಂದು, “ಕರ್ವಾಲೊ – ಪೂರ್ಣ ಚಂದ್ರ….ತೇಜಸ್ವಿ ಟೆಕ್ಸ್ಟ್ ಬುಕ್ ಇದೆಯೇ” ಎಂದು ಕೇಳುತ್ತಾರೆ (ಸಪ್ನಾ ಪುಸ್ತಕ ಮಳಿಗೆಯಲ್ಲಿ ನಾನು ಕಿವಿಯಾರೆ ಕೇಳಿದ ಮಾತು ಇದು!). ಇನ್ನು ಕೆಲವರು ಪುಸ್ತಕದ ಅಂಗಡಿಯ “ವಯಸ್ಕರ ವಿಭಾಗ”ದಲ್ಲಿ ತಮ್ಮ ಮುಖ ಕಾಣದಂತೆ ಅವಿತುಕೊಂಡಿರುತ್ತಾರೆ. ಇನ್ನು ಕೆಲವು ಪುಸ್ತಕದಂಗಡಿಗಳಲ್ಲಿ, ಕನ್ನಡ ಪುಸ್ತಕಗಳನ್ನು ಹುಡುಕಬೇಕು. ಕೇಳಿದರೆ, ನಮಗೆ ಗಿರಾಕಿ ಯಾರೂ ಇಲ್ಲ ಎಂಬ ಉತ್ತರ. ಕೆಲ ಪುಸ್ತಕದಂಗಡಿಯೊಳಗೆ ಒಂದು ಕೆಫೆನೋ, ಸ್ಟೇಷನರಿ ಅಂಗಡಿಗಳನ್ನೋ ಬಹಳ ಆಕರ್ಷಕವಾಗಿ ಇಟ್ಟು, ಅದಕ್ಕಾಗಿ ಜನ ಬರುವಂತೆ ಮಾಡುತ್ತಾರೆ. ’ಬೆಳಗೆರೆ ಬುಕ್ಸ್ ಅಂಡ್ ಕಾಫೀಸ್’ ಅಂಗಡಿ ಪ್ರಾರಂಭವಾದಾಗ ನಡೆದ ಘಟನೆ: ಆಗಿನ್ನೂ ಹೊಸತಾದ್ದರಿಂದ ಬಿಸಿ ಕಾಫೀ ತಪಲೆ ಇಟ್ಟಿರುತ್ತಿದ್ದರು. ಅಂಗಡಿಯೊಳಕ್ಕೆ ಹೋದಕೂಡಲೇ ಕಾಫೀ ಕೊಡುತ್ತಿದ್ದರು. ವ್ಯಕ್ತಿಯೊಬ್ಬ, ಅದಕ್ಕೆ ಚೆನ್ನಾಗಿ ಪಳಗಿದವನು. ಸ್ವಲ್ಪ ದಿನಗಳ ನಂತರ ಪುಸ್ತಕ ಕೊಂಡರೆ ಮಾತ್ರ ಕಾಫೀ ಎಂಬ ತಾಕೀತು ಮಾಡಿದರು. ಆಗ ಆ ವ್ಯಕ್ತಿಯ ಪಾಡು ನೋಡಬೇಕು. ಒಮ್ಮೆ ಬಂದವನೇ, ಬಾಗಿಲಬಳಿಯೇ ನಿಂತು “ಕಾಫೀ ಇಲ್ಲವಾ” ಎಂದು ಕೇಳಿದ. ಇಲ್ಲವೆಂದು ತಲೆಯಾಡಿಸಿದ್ದಕ್ಕೆ ಹೊರಟೇಹೋಗಬೇಕೆ!
ಮೇಲೆ ಹೇಳಿದ ಮಾರ್ಕ್ ಟ್ವೈನನ ಮಾತು ದ್ವಂದ್ವಾರ್ಥವಾಗುವುದು ಈ ರೀತಿಯ ಉದಾಹರಣೆಗಳಿಂದ. ಇನ್ನು ಅಲ್ಪ ಸಲ್ಪ ಮಂದಿ ಪುಸ್ತಕ ಕೊಳ್ಳುತ್ತಾರೆ ಎಂದರೆ ಅದು ಭರ್ಜರಿ ಅಟ್ಟಿನ ಇಂಗ್ಲಿಷ್ ಪುಸ್ತಕವಾಗಿರುತ್ತದೆ ಅಥವಾ ಮಕ್ಕಳ ಚೆಂದದ ಇಂಗ್ಲಿಷ್ ಪುಸ್ತಕಗಳಾಗಿರುತ್ತವೆ. ಕೊಳ್ಳುವವರು ಬೆಲೆ ಮತ್ತು ಪುಟಗಳ ಮೇಳೆ ತಮ್ಮ ಕೊಳ್ಳುವಿಕೆಯನ್ನು ನಿರ್ಧರಿಸುತ್ತಾರೆಯೇ ಹೊರತು, ಕಂಟೆಂಟಿನ ಪ್ರಾಮುಖ್ಯತೆ ಕಂಡುಬರುವುದಿಲ್ಲ. ಪ್ರಖ್ಯಾತ ಪುಸ್ತಕದಂಗಡಿಗಳಲ್ಲಿ ಪರಿಸ್ಥಿತಿ ಇಷ್ಟು ಮಿತಿಮೀರಿರಲಾರದು, ಆದರೆ ಉಳಿದೆಲ್ಲ ಪುಸ್ತಕದಂಗಡಿಗಳದು ಇದೇ ಕಾರುಬಾರು. ಪುಸ್ತಕ ಕೊಳ್ಳುವುದೆಂದರೆ ಕೆಲವರಿಗೆ ದುಬಾರಿ, ಕೆಲವರಿಗೆ ಸಮಯ ಪೋಲು ಮಾಡುವಿಕೆ, ಕೆಲವರಿಗೆ ಅನಗತ್ಯ ಆಡಂಬರ, ಇನ್ನು ಕೆಲವರಿಗೆ ಶೋಕಿ. ಒಟ್ಟಿನಲ್ಲಿ ಪುಸ್ತಕ ಕೊಳ್ಳುವುದರ ಬಗ್ಗೆ ಒಬ್ಬೊಬ್ಬರ ಡಿಕ್ಷನರಿಯಲ್ಲಿ ಒಂದೊಂದು ವ್ಯಾಖ್ಯಾನ.
ಮತ್ತೊಂದು ಸಮಸ್ಯೆಯೆಂದರೆ, ಓದುಗರ ಮೇಲೆ ಹೇರಲಾಗುತ್ತಿರುವ ಪೂರ್ವಾಗ್ರಹಗಳು. ಉದಾಹರಣೆಗೆ: ಚಾಮರಾಜಪೇಟೆಯ ಪುಸ್ತಕಮಳಿಗೆಯೊಂದರಲ್ಲಿ ಹೋಗಿ ಹೊರಬಂದರೆ, ನಾವು ’ಹಿಂದುತ್ವ’ ಮತ್ತು ಅದರ ಇರುವ-ಇಲ್ಲದ ಇಸಮ್ಮುಗಳ ನದಿಯಲ್ಲಿ ಮುಳುಗಿ ಹೊರಬಂದ ಭಾವನೆ. ಜಯನಗರದ ಪುಸ್ತಕದಂಗಡಿಯೊಂದರಲ್ಲಿ ವ್ಯಕ್ತಿ ತನ್ನ ಜೊತೆಬಂದವರಿಗೆ ಹೇಳುತ್ತಿದ್ದ ಮಾತುಗಳು ಹೀಗಿವೆ: “ಅವನ ಪುಸ್ತಕಗಳನ್ನು ಓದಬೇಡ. ಅವನು ಸರಿಯಾಗಿ ಬರಿಯಲ್ಲ. ಬೇರೆ ಪುಸ್ತಕ ನೋಡು”. ಯಾರದು ಸರಿಯಾಗಿ ಬರೆಯಲಾರದ ಬರಹಗಾರರು ಎಂದು ಇಣುಕಿದರೆ ಅದು ಯು ಆರ್ ಅನಂತಮೂರ್ತಿ! ಪುಸ್ತಕ ಪ್ರದರ್ಶನ ಮಳಿಗೆಗೆ ಹೋದರೆ ಅರ್ಧಕ್ಕೂ ಮಿಗಿಲಾಗಿ ಫೆಮಿನಾ, ಪ್ಲೇಬಾಯ್ ಮುಂತಾದ ಮ್ಯಾಗಜಿನ್ ಗಳ ಭರಾಟೆ. ಕೆಲವು ಪುಸ್ತಕದಂಗಡಿಗಳಲ್ಲಿ ಎಲ್ಲ ಬಗೆಯ ಪಠ್ಯಪುಸ್ತಕಗಳು-ಗೈಡುಗಳು ಬಿಟ್ಟರೆ ಇತರ ಪುಸ್ತಕಗಳನ್ನು ಹುಡುಕಬೇಕು. ಇನ್ನು ದೊಡ್ಡ ಪುಸ್ತಕದಂಗಡಿಗೆ ಹೋದರೆ, ಭರ್ಜರಿಯಾದ ತಲೆಬರಹದಡಿ ಸಾಲುಗಟ್ಟಲೆ ಪುಸ್ತಕಗಳ ನಡುವೆ ಎಲ್ಲೋ ಖಾಲಿ ಹೊಡೆಯುವ ಕಪಾಟುಗಳು ಕನ್ನಡದ್ದಾಗಿರುತ್ತದೆ. ಕೋರಮಂಗಲದ ಮಾಲೊಂದರಲ್ಲಿನ ಪುಸ್ತಕದಂಗಡಿಯಲ್ಲಿ ತಮಿಳು, ತೆಲುಗು ಮತ್ತು ಹಿಂದಿ ಪುಸ್ತಕಗಳಿರುವಷ್ಟು ಸಂಖ್ಯೆಯ ಕನ್ನಡ ಪುಸ್ತಕಗಳಿರಲಿಲ್ಲ. ಆದರೆ “ಕನ್ನಡ” ಎಂಬ ದೊಡ್ಡ ಬೋರ್ಡಂತೂ ಇತ್ತು.
ಒಂದು ಕಡೆ ಓದುಗರಿಗೆ ಪುಸ್ತಕ ಕೊಳ್ಳುವುದರ ಪಾಪಪ್ರಜ್ಞೆ, ಮತ್ತೊಂದು ಕಡೆ ಪುಸ್ತಕದಾಯ್ಕೆಯ ಸಮಸ್ಯೆ ಮತ್ತು ವ್ಯವಸ್ಥೆಯ ಮಿತಿಗಳು ಇವೆಲ್ಲವುದರ ನಡುವೆ ಪುಸ್ತಕದಂಗಡಿ, ಪುಸ್ತಕ ಸಂಸ್ಕೃತಿ ಎಲ್ಲವೂ ಬದಲಾಗಿಹೋಗುತ್ತಿದೆ. ಪುಸ್ತಕ ಕೊಂಡು ಓದುವುದು ಅಷ್ಟೇನೂ ಬುದ್ಧಿವಂತ ಕೆಲಸವಲ್ಲ ಎಂಬ ಅಂಬೋಣ ಸಾಕಷ್ಟು ಜನರಲ್ಲಿ. ಹೀಗಾದಲ್ಲಿ, ಯುವ ಓದುಗರ ಮನಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು, ದಿನಕ್ಕೆ ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರ ಪರಿಸ್ಥಿತಿ ಏನಾಗಬಹುದ ಎಂಬ ಪ್ರಶ್ನೆಗಳ ಜೊತೆಗೆ ಇದರ ಅವಶ್ಯಕತೆಯೇ ಒಂದು ಪ್ರಶ್ನೆಯಾಗಿಬಿಡಬಹುದು. ಇವಕ್ಕೆಲ್ಲ ಸಧ್ಯದ ಉತ್ತರ ಎಂದೆನಿಸುವುದು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು, ಪುಸ್ತಕ ಪ್ರೀತಿಯನ್ನು ಹರಡುವುದು.
ಜಗತ್ತಿನ ಅತ್ಯಂತ ಪ್ರಭಾವಶಾಲೀ ಲೇಖಕ, ನಾಟಕಕಾರ, ಕವಿ ವಿಲಿಯಂ ಷೇಕ್ಸ್ಪಿಯರ್, ಮಿಗೆಲ್ ಡಿ ಸೆರ್ವಾಂಟಿಸ್, ಇಂಕಾ ಗಾರ್ಸಿಲಾಸೋ ಮುಂತಾದ ದಾರ್ಶನಿಕರ ಮರಣಸ್ಮಾರಕವಾಗಿ ಪ್ರತಿ ವರ್ಷ ಏಪ್ರಿಲ್ 23ನೇ ತಾರೀಕು ಅಂತರ್ರಾಷ್ಟ್ರೀಯ ಪುಸ್ತಕ ದಿನವೆಂದೇ ಘೋಷಿಸಲಾಗಿದೆ. ಅವರೆಲ್ಲರ ಸಾಹಿತ್ಯಕೃಷಿಗೆ, ಪುಸ್ತಕ ಪ್ರೇಮಕ್ಕೆ ನಮ್ಮದೂ ಕೈಕೂಡಿಸೋಣ. ಮುಂದೊಮ್ಮೆ ಮತ್ತೆ ನಾವು ಷೇಕ್ಸ್ಪಿಯರ್, ಇಂಕಾ ಗಾರ್ಸಿಲಾಸೊ, ಕುವೆಂಪು, ಬೇಂದ್ರೆಗಳನ್ನು ನೋಡಬೇಕಾದರೆ ಇಂದು ನಮ್ಮ ಪುಸ್ತಕ ಪ್ರೀತಿ, ಓದಿನ ಓಘ ಹಂಚಿ ಹರಡೋಣ.

‍ಲೇಖಕರು G

April 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ...

ಅನಂತಮೂರ್ತಿಯವರ "ಭಾರತೀಯ ಸಂಸ್ಕೃತಿ ಮತ್ತು ಲೇಖಕ" – ಸಂಯುಕ್ತಾ ಪುಲಿಗಲ್

- ಸಂಯುಕ್ತಾ ಪುಲಿಗಲ್ ಕಳೆದ ವಾರ ನಾನು ತೇಜಸ್ವಿ ಮತ್ತು ಅನಂತಮೂರ್ತಿಯವರ ಎರಡು ಲೇಖನಗಳನ್ನು ಉಲ್ಲೇಖಿಸುತ್ತಾ ವಿಮರ್ಶೆಯ ಇತಿ-ಮಿತಿ ಮತ್ತು...

11 ಪ್ರತಿಕ್ರಿಯೆಗಳು

  1. Lokesh Raj Mayya

    ಪುಸ್ತಕದ ಸಹವಾಸವೇ ಹಾಗೆ….
    ನಶೆ ಇದ್ದಂತೆ

    ಪ್ರತಿಕ್ರಿಯೆ
  2. ಅ೦ಗಡಿ ಇಂದುಶೇಖರ

    ಇಂಟರ್ನೆಟ್, ಫೇಸ್ಬುಕ್, ಸ್ಕೈಪ್ ಹಾಗೂ ಮಾಲ್ ಗಳ ಜಂಜಾಟಗಳ ನಡುವೆ ಪುಸ್ತಕ ಓದುವ ಗೀಳು ಕಡಿಮೆಯಾಗತೊಡಗಿದೆ. ಇವೇನಿದ್ದರೂ ಈಗ ಬರೀ ರೈಲು-ವಿಮಾನ ಪ್ರಯಾಣ ಸಮಯದಲ್ಲಿ ಟೈಮ್-ಪಾಸ್ ಸಾಧನಗಳು ಮಾತ್ರ ಆಗುತ್ತಿವೆ.
    ಆದರೂ, ಧಾರವಾಡದ ಜಿಲ್ಲಾ ಮುಖ್ಯ ಗ್ರಂಥಾಲಯ,ಯುನಿವರ್ಸಿಟಿ ಗ್ರಂಥಾಲಯ, ಕೆಸಿಡಿ ಗ್ರಂಥಾಲಯ,ಉಳವಿ ಬಸಪ್ಪನ ಗುಡಿಯ ಪ್ರಾಂಗಣ ಮುಂತಾದವುಗಳಲ್ಲಿ ಹುಡುಗ-ಹುಡುಗಿಯರು ಕುಳಿತು ಪುಸ್ತಕಗಳನ್ನು ರೆಫರ್ ಮಾಡುತ್ತಾ ಕುಳಿತು ಓದುತ್ತಿರುವದನ್ನು ನೋಡಿದರೆ ಸಂತೋಷವಾಗುತ್ತದೆ.

    ಪ್ರತಿಕ್ರಿಯೆ
  3. Badarinath Palavalli

    ಪುಸ್ತಕದ ಹುಚ್ಚಿನ ಬಗೆಗೆ ಒಳ್ಳೆಯ ಬರಹ.
    ಇಲ್ಲಿ ನೀವು ಉಲ್ಲೇಖಿಸಿರುವ ಪುಸ್ತಕ ಮಳಿಗೆ ಸಂಬಂಧಿ ಘಟನೆಗಳು ತುಸು ನನ್ನ ಗಮನಕ್ಕೂ ಬಂದಿವೆ.
    ನಿಮ್ಮ ಸಾಲುಗಳು ಸರ್ವತ್ರ ಸತ್ಯ:
    “ಪುಸ್ತಕ ಕೊಳ್ಳುವುದೆಂದರೆ ಕೆಲವರಿಗೆ ದುಬಾರಿ, ಕೆಲವರಿಗೆ ಸಮಯ ಪೋಲು ಮಾಡುವಿಕೆ, ಕೆಲವರಿಗೆ ಅನಗತ್ಯ ಆಡಂಬರ, ಇನ್ನು ಕೆಲವರಿಗೆ ಶೋಕಿ. ಒಟ್ಟಿನಲ್ಲಿ ಪುಸ್ತಕ ಕೊಳ್ಳುವುದರ ಬಗ್ಗೆ ಒಬ್ಬೊಬ್ಬರ ಡಿಕ್ಷನರಿಯಲ್ಲಿ ಒಂದೊಂದು ವ್ಯಾಖ್ಯಾನ”

    ಪ್ರತಿಕ್ರಿಯೆ
  4. ಚಿನ್ಮಯ ಭಟ್ಟ

    ಅಬ್ಬಾ..ಪುಸ್ತಕದ ಬಗ್ಗೆ ಇಷ್ಟೆಲ್ಲಾ ಗೊತ್ತಿರಲಿಲ್ಲ…ವಂದನೆಗಳು 🙂

    ಪ್ರತಿಕ್ರಿಯೆ
  5. Sarala

    kannada irali english pustakagalannu oduva havyasa bahala kadime aagide anta nanna anisike. ottinalli pustakagala oduvikeye nidhanagavagi mareyagtideyeno 🙁
    Nice article Sampu

    ಪ್ರತಿಕ್ರಿಯೆ
  6. Dr.D.T.Krishnamurthy.

    ಪುಸ್ತಕಗಳನ್ನು ಕೊಳ್ಳುವುದೂ ಒಂದು ರೀತಿಯ ADDICTION.ಎಲ್ಲಾದರೂ ಒಳ್ಳೆಯ ಪುಸ್ತಕವನ್ನು ನೋಡಿದರೆ ಹಾಗೆಯೇ ಬಿಟ್ಟು ಬರಲಾಗುವುದಿಲ್ಲ.ಆದರೇ ಈ ಧಾವಂತದ ಬದುಕಿನಲ್ಲಿ ಬಹಳಷ್ಟು ಪುಸ್ತಕಗಳನ್ನು ತೆಗೆದೂ ನೋಡಿರುವುದಿಲ್ಲ. ಅದೇ ಬೇಸರ.ಹಾಗೇ ಅಂತ ಒಳ್ಳೆಯ ಹೊಸ ಪುಸ್ತಕಗಳನ್ನು ನೋಡಿದಾಗ ಕೊಳ್ಳದೇ ಇರಲಾಗದು.ಇದು ನನ್ನಂಥ ಪುಸ್ತಕ ಪ್ರೇಮಿಗಳ ಇಕ್ಕಟ್ಟಿನ ಪರಿಸ್ಥಿತಿ!!!!

    ಪ್ರತಿಕ್ರಿಯೆ
  7. ಪ್ರಮೋದ್

    “ನೀವು ಈಗ್ಲೂ ಪುಸ್ತಕ ಓದ್ತೀರಾ.. ನ೦ಗ೦ತೂ ಟೈಮೇ ಇಲ್ಲ” ಅ೦ತಾ ಕ್ಷಣ ಕ್ಷಣಕ್ಕೂ ಬರದ ಮೆಸೇಜ್ ಗಳಿಗೋಸ್ಕರ ಮೊಬೈಲ್ ಗೆ ಕಣ್ಣು ಹಾಯಿಸುವವರು ಜನ ಸಾವಿರ.
    ಓದಿನ ಸುಖವೇ ಬೇರೆ

    ಪ್ರತಿಕ್ರಿಯೆ
  8. sangeetha raviraj

    Tumba chennagide. Naanu pusthakada bagge janarigiruva sannatanavannu gananisiruve

    ಪ್ರತಿಕ್ರಿಯೆ
  9. ಅಶೋಕವರ್ಧನ ಜಿ.ಎನ್

    ನನ್ನ ಮೂವತ್ತಾರು ವರ್ಶಗಳ ಪುಸ್ತಕ ವ್ಯಾಪಾರಿ ಮತ್ತು ಜತೆಗೆ ಸುಮಾರು ಇಪ್ಪತ್ತು ವರ್ಷಗಳ ಪ್ರಕಾಶನ ಅನುಭವದಲ್ಲಿ ಇಂಥಾ ಲೇಖನ ಮಾಲೆಯೇ ಬರೆಯಬೇಕೆಂದು ಯೋಚಿಸಿದ್ದನ್ನು ಸುಂದರವಾಗಿ ಒಂದು ಲೇಖನದಲ್ಲಿ ಸಾಧಿಸಿದ್ದೀರಿ (ಅದೂ ಒಂದು ಲೆಕ್ಕದಲ್ಲಿ ಹೊರಗಿನವರಾಗಿ!) – ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This