ಮುವತ್ತು, ನಲವತ್ತು ಮಂದಿ ಬೆಲ್ಲು ಹೊಡೆದಾಕ್ಷಣ ಸ್ವಯಂ ಯಂತ್ರಗಳಂತೆ ಎದ್ದು ನಿಂತು ಒಂದೇ ವೇಗ, ಚಲನೆಯಲ್ಲಿ ನಡೆದು, ಒಬ್ಬೊಬ್ಬರು ಒಂದೊಂದು ದೈತ್ಯ ಯಂತ್ರಗಳ ಮುಂದೆ ನಿಂತು ಮತ್ತೊಂದು ಬೆಲ್ಲು ಹೊಡೆಯುವ ತನಕ ಯಾಂತ್ರಿಕವಾಗಿ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗುವುದು. ಈ ರೀತಿ ಅನೇಕ ಘಟನೆಗಳನ್ನುಳ್ಳ ಅತ್ಯಂತ ಯಾಂತ್ರಿಕ ಜೀವನದ ವಿಡಂಬನೆಯಂತೆ ತೋರುವ ಒಂದು ಹಾಸ್ಯ ಚಿತ್ರ ಚಾರ್ಲಿ ಚಾಪ್ಲಿನ್ನಿನ ಮಾಡ್ರನ್ ಟೈಮ್ಸ್. ನೋಡುವಷ್ಟು ಹೊತ್ತೂ ನಮ್ಮನ್ನು ನಗೆಯ ಬುಗ್ಗೆಯಲ್ಲಿ ತೇಲಾಡಿಸುವ ಚಿತ್ರವಾದರೂ ಅದರ ನಗೆಯ ಲೇಪನದ ಹಿಂದಿನ ವಿಷಾದಿತ ಛಾಯೆಯ ಕಹಿ ಗಾಢವಾಗಿಯೇ ತಟ್ಟುತ್ತದೆ.
ಕಾರ್ಮಿಕರ ಯಾಂತ್ರಿಕ ಬದುಕಿನ ಬಗೆಗಿನ ಕನ್ನಡಿಯಾದ ಈ ಚಿತ್ರ ನಮ್ಮನ್ನು ನಗಿಸುತ್ತಲೇ ಒಂದು ಎಚ್ಚರವನ್ನು ಮೂಡಿಸುತ್ತದೆ. ಸಾಮಾಜಿಕ ಏಳಿಗೆಯ ರಥದ ಗಾಲಿಗಳು ಕಾರ್ಮಿಕರು, ಎಂಬ ಮಾತನ್ನು ಮಾರ್ಮಿಕವಾಗಿ ಚಿತ್ರಿಸಿಕೊಡುತ್ತದೆ. ಸಮಾಜದ ಪ್ರತಿಯೊಂದು ವಿಭಿನ್ನ ಸ್ಥರಗಳಲ್ಲೂ ಮೌನವಾಗಿ ದುಡಿಯುವ ಕಾರ್ಮಿಕರುಗಳಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳೂ, ಸೌಕರ್ಯಗಳೂ ಸಿಗದೆ ಹೋಗಿರುವುದು ಸಾಮಾಜಿಕ ಕ್ರೌರ್ಯವೇ ಆಗಿದೆ.
ಹೆಚ್ಚು ದೈಹಿಕ ಶ್ರಮವಿಲ್ಲದಿದ್ದರೂ, ಕೂಲಿಯಾಳುಗಳಂತೆ ಕಷ್ಟ ಪಟ್ಟು ದುಡಿವ ವೈಟ್ ಕಾಲರ್ ಕಾರ್ಮಿಕರಿಗೆ ಅಟ್ಲೀಸ್ಟ್ ಕೈತುಂಬ ಸಂಬಳವಾದರೂ ಸಿಗುತ್ತದೆ. ಆದರೆ ಬಿಸಿಲು, ಮಳೆ, ಗಾಳಿ ಎನ್ನದೆ ಸತತವಾದ ದೈಹಿಕ ಶ್ರಮ ಬೇಡುವ ಅನೇಕ ಕೆಲಸಗಳಿಗೆ ತಮ್ಮ ಹೊಟ್ಟೆ ಹೊರುವಷ್ಟೂ ತೃಪ್ತ ಪಗಾರಗಳು ದೊರೆಯದಿರುವುದು ಮತ್ತು ದುಡಿಯದೇ ತಿನ್ನುವ ಸಾಕಷ್ಟು ಮೇಲ್ವರ್ಗದ ಜನರ ಸಂಖ್ಯೆಯೇ ಹೆಚ್ಚಾಗುತ್ತಿರುವುದು ಸಹ ಇಂದಿನ ಸಾಮಾಜಿಕ ದುರಂತಗಳಲ್ಲೊಂದು.
ಆದರೆ ಇದಕ್ಕಿಂತ ಹೆಚ್ಚಿನ ದುರಂತ ಅಥವಾ ಕ್ರೌರ್ಯವೆಂದರೆ, ಬಾಲಕಾರ್ಮಿಕರ ಜೀವನ! ಆಗಷ್ಟೇ ಚಿಗುರುತ್ತಿರುವ ಮುಗ್ಧ ಮನಸುಗಳು, ವಯಸ್ಕರಂತೆ ಕೆಲಸಗಳಲ್ಲಿ ತೊಡಗಿ ಪ್ರತಿ ಸಣ್ಣ ಬದಲಾವಣೆ, ಬೆಳವಣಿಗೆಗಳಲ್ಲೂ ಅತ್ಯಂತ ಉತ್ಸುಕತೆಯಿಂದ ಅರಳುವ ಆ ಮಕ್ಕಳ ಕೌತುಕ ಕಣ್ಣುಗಳನ್ನು ಕಂಡಾಗ ಎದೆಯಲ್ಲಿ ಭಾರದ ಕಲ್ಲೊಂದು ಜಗ್ಗದಿರದು. ತಾಯಿ, ತಂದೆಯರ ಆರೈಕೆಯಲ್ಲಿ, ಲಾಲನೆ-ಪಾಲನೆಯಲ್ಲಿ ಮುದ್ದಾಗಿ ಬೆಳೆಯುವ ವಯಸ್ಸಿನಲ್ಲಿ, ಪುಸ್ತಕವನ್ನು ಹಿಡಿದು ಜಗತ್ತನ್ನು ಜಾಲಾಡುವ ಹಂತದಲ್ಲಿ ದೈಹಿಕ ಶ್ರಮದಿಂದ ದೇಹದಂಡನೆಗೊಳಗಾಗುವುದಷ್ಟೇ ಅಲ್ಲದೆ ಶ್ರಮಿಕ ಸಂಸ್ಕೃತಿಗೆ ಅತಿ ಸಣ್ಣ ವಯಸ್ಸಿನಲ್ಲೇ ಬಲಿಯಾಗಿ ಮಾನಸಿಕವಾಗಿಯೂ ಕುಗ್ಗಿ ಬಿಡುವ ಈ ಬಾಲಕಾರ್ಮಿಕರ ಜೀವನಗಾಥೆ ಪ್ರತಿಯೊಬ್ಬರ ಬಾಯಲ್ಲೂ ಕೇಳಿರುತ್ತೇವೆ, ಆದರೂ ಯಾವ ಪರಿಣಾಮ, ಬದಲಾವಣೆಗಳಿಲ್ಲ ಎಂಬುದು ಖೇದದ ವಿಷಯ.
“When my mother died I was very young,
And my father sold me while yet my tongue
Could scarcely cry ‘weep! ‘weep! ‘weep! ‘weep!
So your chimneys I sweep, and in soot I sleep.”
ಓದಿದಾಕ್ಷಣ ನಮ್ಮನ್ನು ಕರಗಿಸಿಬಿಡುವ ಈ ಸಾಲುಗಳು ವಿಲಿಯಂ ಬ್ಲೇಕ್ ನದ್ದು. ತಮ್ಮ ನಾಲ್ಕು-ಐದನೇ ವಯಸ್ಸಿನ ಪುಟ್ಟ ದೇಹಾಕೃತಿಯಿಂದ ಚಿಮಣಿಗಳೊಳಗೆ ತೂರಿ ಆ ಕಪ್ಪು, ಗಾಢ ಮಸಿಗಳನ್ನು ತೊಳೆದು ಶುದ್ಧ ಮಾಡಬಹುದೆಂದು ಆ ಕೆಲಸಕ್ಕೆ ಸಣ್ಣ ಮಕ್ಕಳನ್ನು ಮಾರಾಟ ಮಾಡುತ್ತಿದ್ದುದು ಹದಿನೆಂಟು-ಹತ್ತೊಂಭತ್ತನೆಯ ಶತಮಾನದ ಇಂಗ್ಲೇಂಡಿನ ಒಂದು ಸಾಧಾರಣ ಪ್ರಕ್ರಿಯೆಯಾಗಿತ್ತು. ಎಷ್ಟೋ ಜನ ಹಣಕ್ಕಾಗಿ, ಕೂಲಿಗಾಗಿ ತಮ್ಮ ಪುಟ್ಟ ಮಕ್ಕಳನ್ನು ಈ ಕೆಲಸ ಮತ್ತು ಇನ್ನೂ ಇತ್ಯಾದಿ ಕೆಲಸಗಳಲ್ಲಿ ತೊಡಗಿಸುತ್ತಿದ್ದರು. ಈ ಘಟನೆಯನ್ನು ವಿಲಿಯಂ ಬ್ಲೇಕ್ ಎಂಬ ಇಂಗ್ಲಿಷ್ ಕವಿ ತಮ್ಮ Songs of Innocence ನಲ್ಲಿ Chimney Sweeper ಎಂಬ ಪದ್ಯದ ಮೂಲಕ ಮನಮಿಡಿಯುವಂತೆ ಹಿಡಿದಿಟ್ಟಿದ್ದಾರೆ. ಕಪ್ಪು ಮಸಿ ಬಳಿದ ಪುಟ್ಟ ಹುಡುಗನೊಬ್ಬ ಮಲಗಿದ್ದಾಗ ಒಂದು ಕನಸು ಕಾಣುತ್ತಾನೆ. ಆ ಕನಸಿನಲ್ಲಿ ಆ ಹುಡುಗ ತನ್ನ ಸ್ನೇಹಿತರೊಂದಿಗೆ ಒಂದು ಶವಪೆಟ್ಟಿಗೆಯಲ್ಲಿ ಇಕ್ಕಟ್ಟಾಗಿ ಮಲಗಿರುತ್ತಾನೆ. ಆಗ ಆ ಶವಪೆಟ್ಟಿಗೆಯನ್ನು ಕಿನ್ನರಿಯೊಬ್ಬಳು ತೆರೆದು ತನ್ನನ್ನು ಮತ್ತು ಸ್ನೇಹಿತರನ್ನೆಲ್ಲಾ ಸೂರ್ಯನ ಬೆಳಕು, ಬೆಚ್ಚನೆ ಶಾಖ ಇರುವ ಸುಂದರ ತಾಣಕ್ಕೆ ಕರೆದೊಯ್ಯುತ್ತಾಳೆ.
ಆ ಪದ್ಯದಲ್ಲಿನ ಪುಟ್ಟ ಹುಡುಗನ ಕನಸಿನಂತೆಯೇ ಅದೆಷ್ಟೋ ಮಂದಿ ಬಾಲಕರು ತಮ್ಮ ಸುಂದರ ಬದುಕುಗಳನ್ನು ಕನಸಿನಲ್ಲಿ ಕಟ್ಟಿಕೊಂಡಿರುತ್ತಾರೆಯೋ, ಅದೆಷ್ಟು ಪುಟ್ಟ ಮನಸುಗಳು ತಮಗಾಗಿ ಬರುವ ಆ ಕಿನ್ನರಿಗಾಗಿ ಹಾತೊರೆಯುತ್ತಿರುತ್ತಾರೆಯೋ ಎಂದು ಆಲೋಚಿಸಲೂ ಹೆದರುತ್ತದೆ ಪರಿಸ್ಥಿತಿ. ಒಂದು ನಿರುಪಯುಕ್ತ ಶಾಸನದಂತೆ ಬಂದ ಬಾಲಕಾರ್ಮಿಕರ ಸಹಾಯವಾಗಿ ನಿಂತ ಕಾನೂನಿನ ಸಂಹಿತೆ ಬರಿಯ ಕಡತಗಳಿಗಷ್ಟೇ ಮೀಸಲಾಗಿ ನಿಂತಿರುವುದು ಇಂದಿನ ಜ್ವಲಂತ ಉದಾಹರಣೆ. ಅದೆಷ್ಟೋ ಚುರುಕಾದ ಮಕ್ಕಳು ತಮಗಾಗಿ, ತಮ್ಮ ಕುಟುಂಬದವರಿಗಾಗಿ ತಮ್ಮದಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡು ದುಡಿಯುತ್ತಿರುತ್ತಾರೆ.
ಉಳಿದವರು ಕಂಡಂತೆಯ ‘ಡೆಮಾಕ್ರಸಿ’ಯಂತಹ ‘ಡೆಮಾಕ್ರಸಿ’ಗಳು ಹೆಜ್ಜೆ ಹೆಜ್ಜೆಗೂ ನಮಗೆ ಕಾಣಸಿಗುತ್ತಾರೆ. ಹೊಟೆಲ್, ಚಪ್ಪಲಿ ಕಾಯುವುದು, ಬಣ್ಣ ಹೊಡೆಯುವುದು, ಇಸ್ತ್ರಿ ಮಾಡುವುದು, ಚಹಾ ತಲುಪಿಸುವುದು, ಮನೆಕೆಲಸ, ಹೂ ಮಾರುವುದು, ಬುಟ್ಟಿ ತಯಾರಿಸುವುದು, ಬಿಂದಿಗೆ ಮಾಡುವುದು, ಕಾರು ತೊಳೆಯುವುದು, ಪಟಾಕಿ ತಯಾರಿಸುವುದು, ಅಗರಬತ್ತಿ ಒತ್ತುವುದು ಇತ್ಯಾದಿ ಒಂದೇ, ಎರಡೇ! ನಮ್ಮ ಸುತ್ತ ಮುತ್ತಲಿನ ಎಲ್ಲ ಚಿಲ್ಲರೆ ಕೆಲಸಗಳಲ್ಲಿ ದಿನಕ್ಕೆ ಒಂದಾದರೂ ಬಾಲಕಾರ್ಮಿಕ ಕಣ್ಣಿಗೆ ಕಾಣಿಸಿಯೇ ಸಿಗುತ್ತಾನೆ.
ಸ್ನೇಹಿತರೊಂದಿಗೆ ಹೋಟೆಲಿಗೆ ಹೋದರೆ ಅಲ್ಲಿ ಕಂಡು ಬರುವ ಮಾಣಿಗೆ ಸುಮಾರು ಹತ್ತು ವರ್ಷ ಮೀರಿರದು, ಆದರೆ ನಿನ್ನ ವಯಸ್ಸೆಷ್ಟು? ಎಂದು ಕೇಳಿದರೆ ಬರುವ ಉತ್ತರ, ಹದಿನಾರು, ಹದಿನಾಲ್ಕು…..ಇತ್ಯಾದಿ. ಇಲ್ಲಿ ನಮ್ಮ ಕಾನೂನುಗಳ ಉಪಯೋಗ ಇಷ್ಟರ ಮಟ್ಟಿಗೆ ಸಫಲವಾಗಿ ನಡೆಯುತ್ತಿದೆ ಎಂಬುದಷ್ಟೇ ವಿಚಾರ. ಬಸವನಗುಡಿ ದೇವಸ್ಥಾನದ ಬಳಿ ಹುಡುಗನೊಬ್ಬ ಬಹಳ ಚೂಟಿ. ಮಾತನಾಡಿದರೆ ತನ್ನ ವಯಸ್ಸನ್ನು ಬಿಟ್ಟು ಮಿಕ್ಕೆಲ್ಲ ವಿಷಯಗಳನ್ನು ಪಟ ಪಟ ಎಂದು ಒದರುವ ಈ ಹುಡುಗ ದಿನವಿಡೀ ಪಾದರಕ್ಷೆಗಳನ್ನು ಕಾಯುವ ಕೆಲಸ ಮಾಡುತ್ತಾನೆ. ಕಬ್ಬನ್ ಪೇಟೆಯ ನೂಲಿನ ಗಿರಣಿಗಳಲ್ಲಿ ಕನಿಷ್ಟವೆಂದರೆ ಮೂರು, ನಾಲ್ಕು ಮಕ್ಕಳಿದ್ದೇ ಇರುತ್ತಾರೆ. ಕಾಟನ್ ಪೇಟೆಯ ಬಿಂದಿಗೆ ತಯಾರಿಸುವ ಅಂಗಡಿಯ ಭತರ್ಿ ತುಂಬಿರುವುದು ಬಿಂದಿಗೆಯಷ್ಟೇ ಸಣ್ಣ ಮಕ್ಕಳು.
ಓದುವ ಆಸೆಯಿದ್ದರೂ ಕುಟುಂಬದ ಅನಿವಾರ್ಯತೆಗಳಿಗೆ ಹೆಗಲಾಗಿ ಕೆಲಸಕ್ಕೆ ಬೀಳುವ ಮಕ್ಕಳು ಒಂದು ಕಡೆಯಾದರೆ, ಹಣದ ವಾತಾವರಣಕ್ಕೆ ಬಹು ಬೇಗ ತೆರೆದುಕೊಂಡ ಮುಗ್ಧ ಮನಸ್ಸುಗಳು ಓದಿಗೆ ಹಿಮ್ಮುಖವಾಗಿ ಹಣ ಮಾಡುವ ಮಜಲಿಗೆ ಸಿಕ್ಕಿ ಬೀಳುವ ಮಕ್ಕಳು ಮತ್ತೊಂದು ಕಡೆ. ನಮ್ಮ ಆಫೀಸಿನ ಬಳಿ ಒಬ್ಬ ಆಟೋ ಚಾಲಕನಿದ್ದ. ಅತ್ಯಂತ ಒಳ್ಳೆಯ ಹುಡುಗನಾದರೂ ಎಲ್ಲ ರೀತಿಯ ಕೆಟ್ಟ ಚಟಗಳಿಗೆ ದಾಸನಾಗಿದ್ದ. ಒಮ್ಮೆ ವಿಚಾರಿಸಿದಾಗ ತಿಳಿದು ಬಂದ ವಿಚಾರ, ಅವನು ಚಿಕ್ಕವನಿದ್ದಾಗಲೇ ತಂದೆ ಕೆಲಸಕ್ಕೆ ಹಾಕಿದರು, ಸ್ವಲ್ಪ ಪಳಗಿದ ನಂತರ, ಓದಿಗೆ ಮರಳಲು ಮನಸ್ಸಾಗಲಿಲ್ಲ, ಕೈತುಂಬ ಸಂಪಾದಿಸಬೇಕು ಎಂದು ಪಟ್ಟಣಕ್ಕೆ ಬಂದು ಬಿಟ್ಟಿದ್ದ.
ಹೀಗೆ ಒಬ್ಬೊಬ್ಬ ಬಾಲಕಾರ್ಮಿಕನದ್ದೂ ಒಂದೊಂದು ಕಥೆ. ಅದ್ಯಾವುದೋ ದೇಶದಲ್ಲಿ ಬಾಲಕಾರ್ಮಿಕರನ್ನು ಗುರ್ತಿಸಿ ಅನುಕೂಲಸ್ಥ ಕುಟುಂಬಗಳು ಅವರನ್ನು ದತ್ತು ಪಡೆದು ಓದಿಸಿ ಕೆಲಸಕ್ಕೆ ಸೇರುವವರೆಗೂ ಬೆನ್ನೆಲುಬಾಗಿರುತ್ತಾರಂತೆ! ಈ ರೀತಿಯಾದ ಯಾವುದಾದರೂ ಉಪಾಯ, ಯೋಜನೆಗಳು ನಮ್ಮಲ್ಲಿಯೂ ಬೆಳೆದುಬಂದರೆ, ರೆ…ರೆ…! ‘ರೆ’ ಜೊತೆಗೆ ಒಂದು ನಿಟ್ಟುಸಿರಿನೊಂದಿಗೆ ನಿಲ್ಲುವ ನಮ್ಮ ಆಲೋಚನೆ ಅಲ್ಲಿಗೆ ಮುಗಿಯದಂತೆ ಬಾಲಕಾರ್ಮಿಕರ ಕತೆ ನಿಲ್ಲಲು ದೇಶದ ಪ್ರಜೆಗಳಾದ ನಾವು ಎಷ್ಟು ಹೊಣೆಗಾರರು ಎಂಬುದನ್ನು ಸಹ ಇಂಟ್ರಾಸ್ಪೆಕ್ಟ್ ಮಾಡಿಕೊಳ್ಳೋಣ.
ಕಾರ್ಮಿಕರ ಬಗ್ಗೆ ನೆನಪಿಸಿಕೊಂಡಿದ್ದೀರಿ ಅದರಲ್ಲಿಯೂ ಬಾಲ ಕಾರ್ಮಿಕರ ಬಗ್ಗೆ . ಥ್ಯಾಂಕ್ಸ್. ಬಾಲ ಕಾರ್ಮಿಕರನ್ನು ದತ್ತು ತೆಗೆದುಕೊಳ್ಳುವುದು ಕೆಲವೇ ಕೆಲವು ದೇಸಗಳಲ್ಲಿ ಮಾತ್ರ ರೆ ಬರೆ ಯಶಸ್ವಿಯಾಗಿವೆ. ಮುಖ್ಯವಾಗಿ ಅವರ ಅಪ್ಪ , ಅಮ್ಮಂದಿರಿಗೆ ಅವರ ಮಕ್ಕಳನ್ನು ತಮ್ಮ ದುಡಿಮೆಯಿಂದಲೆ ಸಾಕುವುದಕ್ಕೆ , ಶಿಕ್ಷಣ ನೀಡುವುದಕ್ಕೆ ಬೇಕಾದ ಆದಾಯ ಖಾತರಿಗೊಳಿಸುವುದು ಮಾತ್ರ ಪರಿಹಾರ. ಯಾವ ಪ್ರದೇಶ ಮತ್ತು ವರ್ಗಗಳಿಂದ ಬಾಲ ಕಾರ್ಮಿಕರು ಬಂದಿದ್ದಾರೋ ಅವರ ಮನೆಗಳಿಗೆ ಹೋಗಿ ಅಧ್ಯಯನ ಮಾಡಲಿ ಸರ್ಕಾರ , ವಿವಿಗಳು ಅದರಿಂದ ಪರಿಹಾರದ ಕ್ರಮಗಳು ರೂಪುಗೊಳ್ಳುತ್ತವೆ.
ತುಂಬಾ ಕಳಕಳಿಯ ಬರಹ. ಬಾಲ ಕಾರ್ಮಿಕರ ಬವಣೆಯ ಹೊಣೆ ನಮ್ಮೆಲ್ಲರ ಮೇಲೂ ಇದೆ