ಸಂಪು ಕಾಲಂ : ನಾವು ಗಮನಿಸದ ರೈಮ್ ಜಗತ್ತು!

ರೈಮ್ ರೈಮ್ ಗೋ ಅವೇ?!

ಹೀಗೇ ಒಂದು ಸಂಜೆ, ಒಂದು ಸಮಾರಂಭ. ಇನ್ನು ಕೇಳೋಷ್ಟೇ ಇಲ್ಲ, ಬೇಕಾದಷ್ಟು ನಗೆ, ಹರಟೆ ಒಂದಷ್ಟು ಮಾಸಿದ-ಮಾಸದ ನೆನಪುಗಳು, ಬೇಕಾದ-ಬೇಡಾದ ಚಹರೆಗಳು, ಸಲಹೆ-ಸಾಂತ್ವನಗಳು, ಆಮೋದ ಆಡಂಬರಗಳು! ಇವೆಲ್ಲದರ ನಡುವೆ ಸದಾ ನನ್ನ ಗಮನ ಸೆಳೆವ, ಮುಗ್ಧ ಮಾನಸ ಮಕ್ಕಳು. ಈ ಸೆಳೆಯುವಿಕೆಯ ಆಯಸ್ಕಾಂತಕ್ಕೆ ಎಂಬಂತೆ ಗುಂಪಲ್ಲಿ ನನ್ನೊಡನೆ ಮಕ್ಕಳು ಹೆಚ್ಚಿರುತ್ತಾರೆ. ಈ ರೀತಿ ಗುಂಪಿನಲ್ಲೇ ಒಮ್ಮೆ, “ಎಲ್ಲಿ ಒಂದು ಪದ್ಯ ಹೇಳು ನೋಡೋಣ” ಎಂದು ಬಿಟ್ಟೆ! ಅಂದು ಆ ಒಂದು ಸಣ್ಣ ಪದ್ಯ ಹೇಳಿದ್ದ ಆ ಪುಟ್ಟ ಹುಡುಗ ನನ್ನಲ್ಲಿ ಒಂದು ಹೊಸ ಬೆಳಕು ಚೆಲ್ಲಿಬಿಟ್ಟಿದ್ದ. ಈ ಬೆಳಕಿನ ಮೂಲ ಹಿಡಿಯಲು ಹೊರಟಾಗ ತಿಳಿದದ್ದು ಇದು ಈಗಾಗಲೇ ಎಲ್ಲೆಡೆ ಪಸರಿಸಿಬಿಟ್ಟಿದೆ, ನನ್ನೆಡೆಗೆ ಮಾತ್ರ ತನ್ನ ಕಿರಣಗಳನ್ನು ಇದುವರೆಗೂ ಚಾಚಿರಲಿಲ್ಲ ಎಂದು! ಬಂದೆ, ಅದೇನೆಂದು ಹೇಳಿಬಿಡುತ್ತೇನೆ.
ಆ ಮುದ್ದು ಹುಡುಗ, ಅಷ್ಟೇ ಮುದ್ದಾಗಿ ಕನವರಿಸಿದ್ದ ಆ ಪದ್ಯ:
Three blind mice. Three blind mice.
See how they run. See how they run.
They all ran after the farmer’s wife,
Who cut off their tails with a carving knife,
Did you ever see such a sight in your life
As three blind mice?
ಇದೆಂತಹ ಪದ್ಯ! ಇಷ್ಟು ಕ್ರೂರವಾಗಿ, ಕಹಿಯಾಗಿ ಉಲಿಯುವ ಈ ಪದ್ಯ, ಪುಟ್ಟ ಹುಡುಗನ ಬಾಯಲ್ಲಿ ಅತ್ಯಂತ ಪ್ರೀತಿಯಾಗಿ, ಜೇನಿನಂತೆ ಕೇಳಲು ಹಿತವಾಗಿತ್ತು. ಕಂಪ್ಲೀಟ್ ಜಕ್ಸ್ಟಪೊಸಿಶನ್!
ಚೇತರಿಸಿಕೊಂಡು, ಚಪ್ಪಾಳೆ ತಟ್ಟಿ, “ಇನ್ನೊಂದು…” ಎಂದು, ಆದರೆ ಈ ಬಾರಿ ಕುತೂಹಲವಾಗಿಯೇ ಕೇಳಿದೆ. ಅದಕ್ಕೆ ಅವನು ಹೇಳಿದ್ದು:
Jack and Jill went up the hill
To fetch a pail of water.
Jack fell down and broke his crown,
And Jill came tumbling after
ಇದು ಎಷ್ಟು ಬಾರಿ ಕೇಳಿಲ್ಲ!! ಆದರೂ, ಈಗ ಹೊಸದಾಗಿ ಕೇಳಿಸಿತು. ಆ ಮಗುವನ್ನು ಮತ್ತೊಂದಷ್ಟು ಹೊಗಳಿ, ಕೆನ್ನೆ ಚಿವುಟಿ ಕಳಿಸಿಬಿಟ್ಟೆ. ಆದರೂ ನನ್ನ ತಲೆಯ ಪೂರ ಒಂದರ ನಂತರ ಒಂದರಂತೆ ಶಿಶುಗೀತೆಗಳು ಕೇಳಲಾರಂಭಿಸಿದವು. “ರಿಂಗಾ ರಿಂಗಾ ರೋಸಸ್”, “ಲಂಡನ್ ಬ್ರಿಜ್ ಇಸ್ ಫಾಲಿಂಗ್ ಡೌನ್”, “ಪೀಟರ್ ಪೀಟರ್, ಪಂಪ್ಕಿನ್ ಈಟರ್”, ಹೀಗೇ ಸಾಕಷ್ಟು ಹಾಡುಗಳು, ಎಲ್ಲದರಲ್ಲೂ ಇರುವ ಕಾಮನ್ ಫ್ಯಾಕ್ಟರ್ ಗಮನಿಸಿ; ಬರೀ ನೋವು, ದುಃಖ, ದುರಂತಗಳೇ ಅಡಗಿವೆ! ಅರೆ! ಇದು ಮಕ್ಕಳಿಗೆ ಯಾಕೆ ಎಂಬ ಪ್ರಶ್ನೆ ಕಾಡಲಾರಂಭಿಸಿತು. ಮನೆಗೆ ಮರಳಿದ ಮೇಲೆ ಈ ಶಿಶುಗೀತೆಗಳ ಬಗ್ಗೆ ಒಂದಷ್ಟು ಅಧ್ಯಯನ ಮಾಡಿದೆ. ಅಚ್ಚರಿಗಳ ಆಗರ ಆಗಷ್ಟೇ ತೆರೆದಿತ್ತು!
ಸಾಕಷ್ಟು ರೈಮ್ ಗಳು ಜಗತ್ತಿನ ಕಹಿ ಚಾರಿತ್ರಿಕ ಘಟನೆಗಳ ಆಧಾರದ ಮೇಲೆ ರಚಿಸಿ ದಾಖಲಿಸಲಾಗಿದೆ. ಉದಾಹರಣೆಗೆ ಕೆಲವೊಂದನ್ನು ಗಮನಿಸೋಣ:
Ring-a-round a rosie,
A pocket full of posies,
Ashes! Ashes!
We all fall down
ರಿಂಗಾ ರಿಂಗಾ ರೋಸಸ್ ಎಂಬುದು ಯಾರಿಗೆ ಗೊತ್ತಿಲ್ಲ! ಎಲ್ಲರ ಬಾಯಲ್ಲೂ ಕುಣಿದಾಡುವ ಹಾಡು. ಇದು ಒಂದಾನೊಂದು ಕಾಲದಲ್ಲಿ ಪ್ಲೇಗ್ ಎಂಬ ಮಾರಣಾಂತಿಕ ರೋಗ ಹರಡಿ ಜನ ಸರತಿ ಸರತಿಯಲ್ಲಿ ಸಾಯುತ್ತಾ ಬಂದುದರ ಒಂದು ಶೋಕ ಗಾಥೆ! ನಾವು ಕೊನೆಯಲ್ಲಿ “ಹಶ್ಶ ಬುಷ್ಷ” ಎನ್ನುವುದು, ಮೂಲತಹ “ಆಶೆಸ್” (ashes ashes) ಆಗಿದೆ. ಎಲ್ಲಿ ನೋಡಿದರೂ ಸುತ್ತ ಹೆಣಗಳ ಭಸ್ಮವನ್ನು ತಿಳಿಸುವ ಈ ಹಾಡು, ಮಕ್ಕಳ ಪ್ರೀತಿ ಪಾತ್ರ!
Peter, Peter pumpkin eater,
Had a wife but couldn’t keep her;
He put her in a pumpkin shell
And there he kept her very well.
ಇದನ್ನು ಎಲ್ಲರೂ ಕೇಳಿರುತ್ತೇವೆ. ಆದರೆ ಇದರ ಒಳಾರ್ಥ ಅಥವಾ ಮಹತ್ವ ಏನು ಎಂದರೆ, ಬ್ರಿಟಿಷ್ ದೇಶದಲ್ಲಿ ಬಹಳ ಹಿಂದೆ, ಅತ್ಯಾಚಾರ, ದಾಂಪತ್ಯ ದ್ರೋಹ, ಇತ್ಯಾದಿ ನಡೆಯದಂತೆ ಜಾಗರೂಕತೆ ವಹಿಸಲು ಪಾವಿತ್ರ್ಯದ ಪಟ್ಟಿ (ಚೇಸ್ಟಿಟಿ ಬೆಲ್ಟ್) ಗಳನ್ನು ಬೀಗ ಕೀಲಿ ಕೈಗಳ ಸಮೇತ ತಯಾರಿಸುತ್ತಿದ್ದರಂತೆ! ಈ ಕೃತ್ರಿಮ ಕೃತ್ಯವನ್ನು ಸಾರುವ ಈ ಮೇಲಿನ ಸಾಲುಗಳು. ಪೀಟರ್ ಎಂಬಾತ ತನ್ನ ಮಡದಿಯ ದಾಂಪತ್ಯ ದ್ರೋಹ ಸಹಿಸದೆ, ಆಕೆಯನ್ನು ಆ ಚೇಸ್ಟಿಟಿ ಬೆಲ್ಟ್ ನಲ್ಲಿ ಬಿಗಿದ ನಂತರ ಆಕೆಯನ್ನು ಚೆನ್ನಾಗಿ ನೋಡಿಕೊಂಡ ಎಂದು!
Hush-a-by baby
On the tree top,
When the wind blows
The cradle will rock.
When the bough breaks,
The cradle will fall,
And down will fall baby
Cradle and all.
ಇದೂ ಸಹ ಬ್ರಿಟಿಷ್ ರಾಜ ಕಿಂಗ್ ಜೇಮ್ಸ್ ಏಳರ ಕಾಲದ ಕ್ಯಾಥೊಲಿಕ್ ಹಾಗೂ ಪ್ರಾಟೆಸ್ಟೆಂಟ್ ರ ನಡುವೆ ನಡೆದ ಜಗಳ ಕದನಗಳ ಕುರುಹು.
Humpty Dumpty sat on a wall,
Humpty Dumpty had a great fall.
ರೈಮ್ ಅಂದ ತಕ್ಷಣ ಬಾಯಿಗೆ ಬರುವ ಈ ಹಾಡು, 1485 ರ ಇಂಗ್ಲೆಂಡ್ ನ ರಾಜ ರಿಚರ್ಡ್ III ಕಥೆ. ಜಗ್ಗು ಬೆನ್ನಿನ ಈ ರಾಜನ ಹೀನಾಯ ಸೋಲಿನ ಕಥೆ!
Three blind mice. Three blind mice.
See how they run. See how they run.
ಇಂಗ್ಲೆಂಡ್ ನ ರಾಣಿ ಮೇರಿ I ಮೂವರು ಪ್ರಾಟೆಸ್ಟೆಂಟ್ ಪಾದ್ರಿಗಳ ಕಣ್ಣು ಕೀಳಿಸಿ, ಕೊನೆಗೆ ಗಲ್ಲಿಗೇರಿಸುವ ರೌದ್ರ ಕಥಾನಕ!
ಈ ರೀತಿ ಇನ್ನೂ ಹಲವಾರು ಮೈ ನವಿರೇಳಿಸುವ ಐತಿಹಾಸಿಕ ಘಟನೆಗಳ ಸಂಕಲಿತ ಖಾತೆಗಳು, ತಿಳಿಯಾದ ಪ್ರತಿಭಟನೆಗಳು ಈ ರೈಮ್ ಗಳು! ಇತಿಹಾಸಕ್ಕಷ್ಟೇ ಮೀಸಲಾಗಿಲ್ಲದೆ, ದಾರ್ಶನಿಕ, ಆಧ್ಯಾತ್ಮಿಕ ನೆಲೆಗಳನ್ನೂ ಈ ಶಿಶುಸಾಹಿತ್ಯಗಳ ಪ್ರಾಕಾರ ಮುಟ್ಟಿವೆ. ಬರೀ ಇಂಗ್ಲಿಷ್ ಅಷ್ಟೇ ಅಲ್ಲ, ಕನ್ನಡದಲ್ಲೂ ಈ ರುಚಿ, ಅನುಭೂತಿ ಇರುವ ಒಂದು ತುಣುಕು:
ಕಣ್ಣಾ ಮುಚ್ಚೆ, ಕಾಡೇ ಗೂಡೇ
ಉದ್ದಿನ ಮೂಟೆ, ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಕಾಯ್ದಿರಿಸಿಕೊಳ್ಳಿ
ಬಾಲ್ಯವೆಲ್ಲಾ ಈ ಹಾಡಿನ ಮೂಲಕ ಕಳೆದು ನಕ್ಕು ಸುಖಿಸಿದ್ದ ನನಗೆ ಥಟ್ ಅಂತ ಇದರ ಒಳಾರ್ಥ ಓದಿ ತಿಳಿದು, ಇದರ ಗಾಂಭೀರ್ಯ, ವ್ಯಾಪ್ತಿ ಪರಿಚಯವಾಗಿ ಒಮ್ಮೆ ಮೈ ಬೆಚ್ಚಗಾಗಿತ್ತು. ಮನುಷ್ಯ ಕಾಲವಾದನಂತರ (ಕಣ್ಣಾ ಮುಚ್ಚೆ), ಆತ ಊರ ಹೊರಗಾಗುವ ಕೇವಲ ಒಂದು ‘ಜಡ’ (ಕಾಡೇ ಗೂಡೇ), ಒಳ್ಳೆಯ ಸ್ಥೂಲ, ಅಹಂ ನಿಂದ ಕೊಬ್ಬಿದ ಕಾಯ (ಉದ್ದಿನ ಮೂಟೆ) ಈಗ ನಶ್ವರ, ಇಲ್ಲವಾಯ್ತು (ಉರುಳೇ ಹೋಯ್ತು), ದೇಹದಿಂದ ಆತ್ಮ ಹೊರಟು ಹೋಯ್ತು (ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ), ಮತ್ತಿದು ಪ್ರತಿಯೊಬ್ಬರಿಗೂ ಅನುಭವವಾಗುವ ಕಡೇ ಹಂತ (ನಿಮ್ಮಯ ಹಕ್ಕಿ ಕಾಯ್ದಿರಿಸಿಕೊಳ್ಳಿ).
ಎಂತಹ ಅದ್ಭುತ ಪರಿಕಲ್ಪನೆ!! ಈ ಹಾಡುಗಳು ಅನೇಕ ವರ್ಶನ್ ಗಳಲ್ಲಿ, ಮತ್ತಷ್ಟು ಬಣ್ಣಗಳಲ್ಲಿ ಹೇಳಿ ಕೇಳಿ ನಲಿದದ್ದುಂಟು. ಆದರೆ ಇದರ ಅರ್ಥಗಳನ್ನು ತಿಳಿದರೆ, ಒಂದು ಪುಳಕದ ಅಲೆ ಬೀಸುವುದಂತೂ ಖಂಡಿತ. ನನಗೆ ಇನ್ನೂ ಅರ್ಥವಾಗದ ಒಂದು ಸಂಗತಿ ಎಂದರೆ, ಈ ಚಾರಿತ್ರಿಕ, ಅನುಭಾವೀ ಹಾಡುಗಳು ಅಥವಾ ಸಾಹಿತ್ಯ, ‘ಶಿಶುಸಾಹಿತ್ಯ’ ಅಥವಾ ರೈಮ್ ಗಳಾದದ್ದು ಹೇಗೆ ಎಂದು!!
 

‍ಲೇಖಕರು G

January 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

 1. prakash hegde

  ಬಾಲ್ಯವೆಲ್ಲಾ ಈ ಹಾಡಿನ ಮೂಲಕ ಕಳೆದು ನಕ್ಕು ಸುಖಿಸಿದ್ದ ನನಗೆ ಥಟ್ ಅಂತ ಇದರ ಒಳಾರ್ಥ ಓದಿ ತಿಳಿದು, ಇದರ ಗಾಂಭೀರ್ಯ, ವ್ಯಾಪ್ತಿ ಪರಿಚಯವಾಗಿ ಒಮ್ಮೆ ಮೈ ಬೆಚ್ಚಗಾಗಿತ್ತು. ಮನುಷ್ಯ ಕಾಲವಾದನಂತರ (ಕಣ್ಣಾ ಮುಚ್ಚೆ), ಆತ ಊರ ಹೊರಗಾಗುವ ಕೇವಲ ಒಂದು ‘ಜಡ’ (ಕಾಡೇ ಗೂಡೇ), ಒಳ್ಳೆಯ ಸ್ಥೂಲ, ಅಹಂ ನಿಂದ ಕೊಬ್ಬಿದ ಕಾಯ (ಉದ್ದಿನ ಮೂಟೆ) ಈಗ ನಶ್ವರ, ಇಲ್ಲವಾಯ್ತು (ಉರುಳೇ ಹೋಯ್ತು), ದೇಹದಿಂದ ಆತ್ಮ ಹೊರಟು ಹೋಯ್ತು (ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ), ಮತ್ತಿದು ಪ್ರತಿಯೊಬ್ಬರಿಗೂ ಅನುಭವವಾಗುವ ಕಡೇ ಹಂತ (ನಿಮ್ಮಯ ಹಕ್ಕಿ ಕಾಯ್ದಿರಿಸಿಕೊಳ್ಳಿ).
  ಬಹಳ ಇಷ್ಟವಾಯ್ತು…
  ಅಜ್ಜನ ಕೋಲಿದು ನನ್ನೆಯ ಕುದುರೆ…. ನೆನಪಾಯ್ತು….
  Thank u…

  ಪ್ರತಿಕ್ರಿಯೆ
 2. ಆಸು ಹೆಗ್ಡೆ

  ತಡವಾಗಿಯಾದರೂ ಅರಿವಾಯಿತಲ್ಲಾ ತಮಗೆ ಈ ಆಂಗ್ಲ ಪದ್ಯಗಳಲ್ಲಡಗಿರುವ “ರೈಮು”ಗಳು
  ದಿನಕರ ದೇಸಾಯಿಯಂಥವರ ಚುಟುಕಗಳಲ್ಲಿ ಹಿಂದಿನಿಂದಲೂ ಇವೆ ಮುದ ನೀಡುವ ಪ್ರಾಸಗಳು!

  ಪ್ರತಿಕ್ರಿಯೆ
 3. ಪು .ಸೂ.ಲಕ್ಷ್ಮೀನಾರಾಯಣ ರಾವ್

  ಒಳ್ಳೆಯ ಶೋಧನೆ, ರೋಚಕವಾಗಿದೆ ಕೂಡ. ಬಹುಶಃ ಆಯಾ ಕಾಲದ ಹಿರಿಯರು (ನಿವೃತ್ತರು) ಮಕ್ಕಳೊಂದಿಗೆ ಜಗಲಿ ಮೇಲೆ ಕೂತು ಕತೆ ಹೇಳುವಂತಹ ಪರಿಸ್ಥಿತಿಯಲ್ಲೋ ಏನೋ ತಮ್ಮ ಸಂದರ್ಭದ ವಿಕೃತಿಗಳನ್ನು ಹೀಗೆ ಸೂಚ್ಯವಾಗಿ ವಿಡಂಬಿಸಿರಬಹುದು. ‘ಉದ್ದಿನ ಮೂಟೆ’ ಉರುಳೆಹೋಯ್ತು ಎಂತಹ ರೂಪಕ ಅಲ್ವಾ! ಪಂಜೆ ಮಂಗೇಶರಾಯರ ‘ನಾಗರಹಾವೆ ಹಾವೊಳು ಹೂವೆ ‘- ಇದೇ ಥರ ಬ್ರಿಟಿಷರನ್ನು (ಅಂದಿನ ವೈರಿಗಳನ್ನು) ಕುರಿತು ಟೀಕಿಸಿದ್ದು ಎಂದು ಕೇಳಿದ್ದೇನೆ. ನಮಗೆ ಗೊತ್ತಿಲ್ಲದ ಹಲವಾರು ಶಿಶು ಪ್ರಾಸಗಳ ಹಿನ್ನೆಲೆಯ ಸ್ವಾರಸ್ಯವನ್ನು ತಿಳಿಸಿದ್ದಕ್ಕೆ ವಂದನೆ.

  ಪ್ರತಿಕ್ರಿಯೆ
 4. ಮಾನವಿ ಪುಲಿಗಲ್

  ತುಂಬಾ ಚೆನ್ನಾಗಿದೆ ಅಕ್ಕ. ನಾವು ಲಯಬದ್ಧವಾಗಿ ಹಾಡುತ್ತಿದ್ದ ಈ ರೈಮ್ ಜ್ಞಾಪಕ ಇದೆಯಾ?
  It’s raining; it’s pouring.
  The old man is snoring.
  He went to bed and bumped his head,
  And he couldn’t get up in the morning.
  ಈ ಮುಗ್ಧ ಶಿಶುಗೀತೆಗಳಿಗೆ ಇಂತಹ dark side ಇದೆ ಅಂತ ಗೊತ್ತೇ ಇರ್ಲಿಲ್ಲ..

  ಪ್ರತಿಕ್ರಿಯೆ
 5. vinaya

  ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಕ್ಕ. ನಾ ಚಿಕ್ಕವನಿದ್ದಾಗ ಆಂಗ್ಲ ಹಾಡುಗಳನ್ನ ಕೇಳಿ ಬೆಳೆದಿದ್ದೆ ಕಡಿಮೆ; ನಮ್ಮದೇನಿದ್ದರೂ ಕನ್ನಡ ಮಕ್ಕಳ ಗೀತೆಗಳು , “ರೊಟ್ಟಿ ಅಂಗಡಿ ಕಿಟ್ಟಪ್”, “ಡೊಂಕು ಬಾಲದ ನಾಯಕರೇ”, “ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತು”, “ಬಣ್ಣದ ಬುಗರಿ”…..

  ಪ್ರತಿಕ್ರಿಯೆ
 6. Sunil Rao

  you said it!!
  when ever i switch on to cartoons with my nephew, feels the same…that are baap re!!!
  this children enjoy the violence!!!
  but if just a matter of entertainment i would not bother, but my smaller nephew acts the same on the elder one….this feels quite wired…

  ಪ್ರತಿಕ್ರಿಯೆ
 7. Nataraju S M

  ಪುಟ್ಟ ಪುಟ್ಟ ವಿಷಯಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ನಿಮ್ಮ ಬರವಣಿಗೆಯ ಶೈಲಿಗೆ ಹ್ಯಾಟ್ಸ್ ಆಫ್..

  ಪ್ರತಿಕ್ರಿಯೆ
 8. ಮಂಜುನಾಥ ಕೊಳ್ಳೇಗಾಲ

  ನಾನು ಓದಿದ ಬ್ಲಾಗ್ ಬರಹಗಳಲ್ಲೆಲ್ಲಾ ಅತ್ಯುತ್ತಮವಾದ ಬರಹ ಇದು. ಮುಗ್ದ ಶಿಶುತನದ ಹೊದಿಕೆಯಡಿ ಬೆರಗುಗೊಳಿಸುವ ಬೇರೊಂದು ಅದ್ಭುತಲೋಕವಿರುವುದನ್ನು ಪತ್ತೆ ಹಚ್ಚಿ ಕೊಟ್ಟಿರಿ. ದಶಕಗಟ್ಟಲೇ ಈ ಹಾಡುಗಳನ್ನು ಹಾಡುತ್ತಾ, ಹಾಡಿಸುತ್ತಾ ಕಳೆದಿದ್ದರೂ ಒಮ್ಮೆ ಕೂಡ ಇದರೊಳಗೆ ಇಣುಕಿರಲಿಲ್ಲ. ಮಕ್ಕಳಿಗಾಗಿ ಈ ಪದ್ಯಗಳನ್ನು ಕಟ್ಟಿಕೊಟ್ಟ, ಅದರೊಳಗೆ ಹಿರಿದು ಅರ್ಥವನ್ನು ಬಚ್ಚಿಟ್ಟು ಶತಮಾನದಾಚೆಗೆ ತೇಲಿಬಿಟ್ಟ ಆ ಹಿರಿ ಜೀವಗಳ ಸಂವಹನ ಸಾಮರ್ಥ್ಯ ಅನ್ಯಾದೃಶ.
  ನಿಮ್ಮ ಒಳನೋಟ ತುಂಬಿದ ಈ ಬರಹಕ್ಕೆ ಧನ್ಯವಾದ

  ಪ್ರತಿಕ್ರಿಯೆ
 9. gayatri

  super!!kanne muchche kaade goode ya olaartha nodi achchari aaytu!!tumba chennagi vivarisiddeeri!!thnk u..

  ಪ್ರತಿಕ್ರಿಯೆ
 10. Swarna

  ಚಂದದ ಬರಹ. ಕೆಲ ಕಡೆ “ಕಣ್ಣಾ ಮುಚ್ಚೆ ” ಯನ್ನ ರಾಮ ವನವಾಸಕ್ಕೆ ಹೋರಟ
  ಸಂದರ್ಭವೆಂದು ವಿವರಿಸುವುದನ್ನ ಕೇಳಿದ್ದೇನೆ

  ಪ್ರತಿಕ್ರಿಯೆ
 11. chalam

  ಸುಖವನ್ನು ಅನುಭವಿಸುವ ಮಕ್ಕಳ ಮುಂದೆ ನೋವನ್ನು ಹೇಳಿಕೊಳ್ಲುತ್ತೇವೆ.ನಮ್ಮ ಸಮಾದಾನಕ್ಕೆ…ಅವುಗಳ ಬಾಯಲ್ಲಿ ನೋವು ಸಿಹಿಯಾಗುವುದನ್ನು ನೋಡಿ ಸಂಬ್ರಮಿಸುತ್ತೇವೆ.ಎಲ್ಲಾ ನಮ್ಮ ಸಮಾದಾಕ್ಕೇ ಹೊರತು ಮಕ್ಕಳಿಗಾಗಿ ಎಂಬುದು ಒಂದು ನೆಪ ಅಷ್ಟೇ…

  ಪ್ರತಿಕ್ರಿಯೆ
 12. Sathish Naik

  ನೀತಿ ಅನ್ನೋದನ್ನ ಈ ಶಿಶು ಗೀತೆಗಳೂ ಹೇಳಬಲ್ಲವಾ.??
  ಖಂಡಿತ ಈ ಒಂದು ಪ್ರಶ್ನೆಗೆ ಉತ್ತರ ನಿಮ್ಮೀ ಲೇಖನ ಓದುವ ಮೊದಲು ಯಾರಲ್ಲೂ ಸುಳಿದ ಸುಳಿವು ಸಿಗುವುದು ಕಷ್ಟ.
  ನಿಜ ನೀವು ಹೇಳಿದ ಪ್ರತಿ ಪದ್ಯದಲ್ಲೂ ಗಮನಿಸಿದಾಗ ನೋವು, ಚರಿತ್ರೆ, ಕೊನೆಗೆ ಜಡ ಬೇಸತ್ತ ಬದುಕಿನ ಉದಾಹರಣೆಗಳೇ ನಮ್ಮ ಮಕ್ಕಳ ಬಾಯಲ್ಲಿ ನಲಿವಿನ ಪದ್ಯಗಳಾಗಿರೋದು..!!
  ಆದರು ಅದನ್ನ ಮಕ್ಕಳು ಅಷ್ಟು ಮುಗ್ದತೆ ಇಂದ, ಅಷ್ಟು ತನ್ಮಯತೆಯಿಂದ, ಅಷ್ಟು ಸ್ವಚ್ಚಂದವಾಗಿ ಹಾಡುವಾಗ ನಮ್ಮ ಮನಸ್ಸು ಮಗುವಿನ ಬಾಯೊಳಗಿಂದ ಉದಿಸಿ ಬರುವ ಅದ್ಭುತ ಶಬ್ದ & ನಾದ ಸಿರಿಗಳಿಗೆ ಕಣ್ಣರಳಿಸಿ ಕಾದಿರಿಸುತ್ತೇವೆಯೇ ಹೊರತು.. ಈ ರೌದ್ರಗಳು ನಮ್ಮಂದಾಜಿನ ಆಸುಪಾಸಿಗೂ ಸುಳಿಯುವುದಿಲ್ಲ.
  ನೋವು ಅಥವಾ ಸಂತಾಪಗಳ ಪರಿಚಯ ಮಾಡಿಕೊಡಲು ನಮಗೆ, ಅಣ್ಣಾವ್ರು, ಎಸ್, ಪೀ ಬೀ, ಯೇಸುದಾಸರೇ ಹಾಡಬೇಕು..!!
  ಈ ಮೇಲಿನ ಎಲ್ಲಾ ರೈಮ್ ಗಳನ್ನ ನೋಡುವಾಗ ನಮ್ಮ ಕನ್ನಡ ಪದ್ಯಗಳ ಮೇಲಿನ ಅಭಿಮಾನ ಇನ್ನು ವಿಸ್ತಾರವಾಗುತ್ತಾ ಹೋಗುತ್ತದೆ.
  ಬಣ್ಣದ ತಗಡಿನ ತುತ್ತೂರಿ, ಮನೆ ಮನೆ ನಮ್ಮ ಮನೆ, ಅಣ್ಣನು ಮಾಡಿದ ಗಾಳಿಪಟ, ತಟ್ಟಿ ಪುಟ್ಟಿ ತಾಲಂಗಾರ.. ಹೀಗೆ ಬಾಯಲ್ಲಿ ನಲಿದ ಪದ್ಯ ಕೋಶಗಳು ಒಂದು ನೂರಕ್ಕಿಂತಲೂ ಸಿಗುತ್ತವೆ ಪಟ್ಟಿಗೆ.
  ಶಿಶು ಗೀತೆಗಳಲ್ಲಿನ ಒಳ ಪದರವನ್ನು ಪರಿಚಯಿಸಿ ಕೊಟ್ಟಿದ್ದೀರಿ.. ನಿಜಕ್ಕೂ ಓದಿ ತುಂಬಾ ಖುಷಿ ಆಯಿತು. ತುಂಬಾ ಇಷ್ಟವಾಯಿತು. 🙂 🙂
  ಹಾಗೆ ಇದನ್ನು ಓದಿ ಮುಗಿಸಿದ ಕೂಡಲೇ ಎಲ್ಲೊ ಒಂದೆರಡು ಹಳೆಯ & ಈಗಲೂ ಪ್ರಚಲಿತದಲ್ಲಿಹ ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್, ಜಾಕ್ ಅಂಡ್ ಜಿಲ್.. ಜಾನಿ ಜಾನಿ ಎಸ್ ಪಾಪ, ಇವೂ ಸೇರಿ ಒಂದು ನಾಲ್ಕೈದು ಇಂಗ್ಲೀಶ್ ಪದ್ಯಗಳಿಗಷ್ಟೇ ಪರಿಚಯವಾಗಿಹ ನನ್ನತನದ ಮೇಲೆ ಇದಕ್ಕಿದ್ದಂತೆ ನಂಗೆ ಹೊಸದೊಂದು ಅಭಿಮಾನ ಮೂಡಿದ್ದು ಸುಳ್ಳಲ್ಲ. 🙂

  ಪ್ರತಿಕ್ರಿಯೆ
 13. puneetha

  ಇದರಲ್ಲಿ ಹೊಸತೇನಿದೆ ? ಹಳೆಯ ವಿಷಯಗಳ recycling ಅಷ್ಟೇ.ಭಾಷೆಯ ಮೇಲೆ ಹದವಾದ ಸುಂದರ ಹಿಡಿತವಿರುವ ನೀವು ಹೊಸ ವಿಷಯಗಳ ಬಗ್ಗೆ ಚಿಂತನೆ ನಡೆಸಿ ಬರೆದರೆ ಇನ್ನೂ ಚೆನ್ನ.

  ಪ್ರತಿಕ್ರಿಯೆ
 14. Gopaal Wajapeyi

  ಎಂದಿನಂತೆ ಲೇಖನ ಚೆನ್ನಾಗಿದೆ. ಆದರೆ ಎಲ್ಲ ಇಂಗ್ಲಿಷ್ ಮಯ. ಕನ್ನಡವೇ ಮಾಯ…?! ಸಂಯುಕ್ತಾ, ಹೇಗಾದರೂ ಮಾಡಿ ಕನ್ನಡದ ‘ಶಿಶುಗೀತೆ’ಗಳ ಬಗ್ಗೆ ಬರೆಯಿರಿ…

  ಪ್ರತಿಕ್ರಿಯೆ
 15. Asha Rao

  Idhu sathya,naanu baalyadhali,idhanella haadidhu ,kunidhidhu nenaapaaguthadhe.
  Aadhare indhu nanna kuusu idhe rhymes haadidhaaga,kivi churendhidhu nijja,hagaage avanige ee so called rhymes haadalu encourage madallila.
  eshto parents ,idhenidhu nimma maganige ee rhyme gothilva endu kellidhu untuu.
  Yaaru ene kellalli,hellali,ee rhymes bedavendu nirdharisidhe.
  I share your thoughts and tried to avoid my son singing these rhymes to some extent.
  Thanks

  ಪ್ರತಿಕ್ರಿಯೆ
 16. Anagha

  ಸಂಯುಕ್ತಾ ,
  ಪ್ರತಿಯೊಂದು ರೈಮ್ ನ ಹಿಂದಿನ ಕ್ರೂರ ಇತಿಹಾಸ ಓದಿ ಕೆಲ ಕ್ಷಣ ಮೈ ನಡುಗಿದ್ದು ನಿಜ. ಆದರೆ ಇಂತಹ ಹೊಸ ವಿಚಾರ / ಜ್ಞಾನ ಉಣಬಡಿಸಿದ್ದಕ್ಕೆ ಧನ್ಯವಾದ. ಕುತೂಹಲವನ್ನು ಕೇವಲ ಕ್ಷಣಮಾತ್ರದ ವಿಚಾರನ್ನಾಗಿಸದೇ, ಮುಂದೆ ಶೋಧನೆ ಮಾಡಿ, ಎಲ್ಲರೊಡನೆ ಹಂಚಿಕೊಂಡಿದ್ದಕ್ಕೆ ಹ್ಯಾಟ್ಸ್ ಆಫ್ !
  ಅನಘಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: