ಸಂಪು ಕಾಲಂ : ನಮ್ಮ ಟೂರಿಂಗ್ ಟೈಮ್


ಬೆಳಗ್ಗೆ ಆಫೀಸಿಗೆ ಓಡು, ತಡವಾಗಿ ಮನೆಗೆ ಬಂದು ಏನೋ ತಿಂದು ಮಲಗು ಎಂಬಂತಹ ಇಂದಿನ ಯುವಜನತೆಯ ದೈನಂದಿನ ಜೀವನವನ್ನು ಚಾಚೂ ತಪ್ಪದೆ ಪ್ರತಿನಿಧಿಸುತ್ತಿರುವವರು ನಾವು ದಂಪತಿಗಳು. ಇಂತಹ ಸಂದರ್ಭದಲ್ಲಿ ನಮಗೆ ಒಂದು ಬ್ರೇಕ್ ಸಿಗಲಿ ಎಂದೋ ಏನೋ ನನ್ನ ಅತ್ತೆ ಒಂದು ಪ್ರಪೋಸಲ್ ನಮ್ಮ ಮುಂದಿಟ್ಟರು. ಅದೇನೆಂದರೆ, ಹತ್ತು ದಿನಗಳ ಕಾಲ ನಮ್ಮೆಲ್ಲಾ ಸ್ವ-ಮೇಕ್ ತಲೆ ನೋವುಗಳನ್ನು ತೊರೆದು, ಕೈ ತೊಳೆದು ಇಡೀ ದಕ್ಷಿಣ ಭಾರತವನ್ನು ಒಂದು ಪ್ರದಕ್ಷಿಣೆ ಹಾಕಿ ಬರುವುದು, ಅರ್ಥಾರ್ತ್ ದಕ್ಷಿಣದ ಬಹುಭಾಗವಾದ ತಮಿಳುನಾಡು ಮತ್ತು ಕೇರಳದ ಪ್ರಮುಖ ಪ್ರದೇಶಗಳಿಗೆ ಪ್ರವಾಸ ಹೂಡುವುದು.
ಮೊದಲಿಗೆ ನೆನಪಾದದ್ದು ಹತ್ತು ದಿನ ರಜೆ ಚೀಟಿ ಕಂಡ ಕೂಡಲೇ ನನ್ನ ಬಾಸ್ ಅವರ ಕಿವುಚಿಹೋಗುವ ಮುಖ. ಇರಲಿ ಎಂದು ಅರ್ಜಿ ಹಾಕೇ ಬಿಟ್ಟೆ, ಹಾಗೂ ಹೀಗೂ ರಜೆ ಸಿಕ್ಕೇ ಬಿಟ್ಟಿತು. ಸಾಕಷ್ಟು ಕಾಲ ಮರೆತಿದ್ದ ಚಾರಣದ ಸಮಯ ಬಂದೇ ಬಂತು.
ಅದು ಹಂಸ ಟ್ರಾವೆಲ್ಸ್ ನವರ ಮಾರ್ಗದರ್ಶಿ ಪ್ರವಾಸವಾಗಿತ್ತು. ಶೇಕಡಾ ತೊಂಭತ್ತೊಂಭತ್ತು ದೇವಸ್ಥಾನಗಳಿಂದ ಕೂಡಿದ ಈ ಪ್ರವಾಸವನ್ನು ಒಂದು ತೀರ್ಥಯಾತ್ರೆ ಎಂದೂ ಕರೆಯಬಹುದೇನೋ. ಈ ವಿಷಯ ನನಗೆ ತಡವಾಗಿ ತಿಳಿದರೂ, ನಮ್ಮ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ. ಏಕೆಂದರೆ, ದೇಶ ಸುತ್ತು-ಕೋಶ ಓದು ಅನ್ನೋ ಮಾತನ್ನು ನಂಬಿದ ಜೀವಕ್ಕೆ, ಬೆಂಗಳೂರು ಬಿಟ್ಟು ಹೊರಹೋಗುವುದು ಕಷ್ಟವಾದಾಗ ಇಂತಹ ಅವಕಾಶಗಳು, ಸುವರ್ಣಾವಕಾಶಗಳಾಗಿಬಿಡುತ್ತವೆ. ಸುಮಾರು ಮೂವತ್ತು ಮಂದಿ ತುಂಬಿದ್ದ ಪ್ರಯಾಣದ ಸಿದ್ಧ ಬಸ್ ನಲ್ಲಿ ಐವತ್ತರ ಪ್ರಾಯದ ಗಡಿ ದಾಟದ ದಂಪತಿಗಳು ನಾವಿಬ್ಬರೇ!
ತಮಾಷೆಯೆಂದರೆ, ಬಸ್ಸಿನಲ್ಲಿದ್ದ ನಮ್ಮ ಸಹ ಪ್ರಯಾಣಿಕರಿಗೆ ನಾವು ಈ “ತೀರ್ಥಯಾತ್ರೆ”ಗೆ ಹೋಗುತ್ತಿರುವುದೇ ಒಂದು ಸೋಜಿಗ. “ನೀವ್ಯಾಕೆ ಬರ್ತಿದೀರಿ ಇದಕ್ಕೆ” ಎಂದು ನಸುನಗುತ್ತಲೇ ಐವತ್ತರ ಆಂಟಿಯೊಬ್ಬರು ಕೇಳಿದಾಗ, ಏನು ಉತ್ತರಿಸಬೇಕೋ ತಿಳಿಯದೆ ನಕ್ಕು ಸುಮ್ಮನಾಗಿದ್ದೆ. ಮೂವತ್ತು ತಲೆಗಳೂ ಮುನ್ನೂರು ಭಾವಗಳು ಕೂಡಿ ಪ್ರಾರಂಭಿಸಿದ ನಮ್ಮ ಸಹಪ್ರಯಾಣ ಮೊದಲಿಗೆ ನೆನಪಿಸಿದ್ದು ಪ್ರಾಚೀನ ಆಂಗ್ಲ ಕವಿ ಜೆಫ್ರಿ ಚಾಸರ್ ನ “ಕ್ಯಾಂಟಬರಿ ಟೇಲ್ಸ್”.
“A journey is a person in itself….” ಎಂಬ ಮಾತಿನಂತೆ ಪ್ರಯಾಣ ಒಂದು ಸೊಗಸಾದ, ತುಂಬಿದ ಅನುಭೂತಿ. ಒಂದು multi-dimensional ಅಧ್ಯಯನ ಎಂದೇ ಹೇಳಬಹುದು. ಸಾಕಷ್ಟು ಬಗೆಯ ಸ್ಥಳಗಳು, ಘಟನೆಗಳು, ನೆರೆಹೊರೆಯವರ ಪ್ರತಿಕ್ರಿಯೆಗಳು, ಪ್ರತಿ ಪ್ರದೇಶಗಳಲ್ಲಿ ಕಂಡು ಬರುವ ಸ್ಥಳಪುರಾಣಗಳು ಇವೆಲ್ಲಾ ತಿಳಿಯಲು ಬಹಳ ಇಂಟೆರೆಸ್ಟಿಂಗ್.
ಈ ಹತ್ತು ದಿನಗಳ ಪ್ರಯಾಣದಲ್ಲಿ ನನ್ನ ಅನುಭವಕ್ಕೆ ಬಂದದ್ದು ವಿವಿಧ ಜನರ ನಡೆ-ನುಡಿಗಳು, ನಂಬಿಕೆಗಳ ಗಾಢತೆ (ಕೆಲವೊಮ್ಮೆ ವೈಪರೀತ್ಯ) ಮತ್ತು ಅವುಗಳ ಮೇಲೆ ಸವರುವ ಭಕ್ತಿ ಭಾವ, ಪುರೋಹಿತಶಾಹಿಯ ಜಗಜ್ಜಟ್ಟಿ ಗಟ್ಟಿ ಬೇರೂರಿಕೆಗಳು, ನಂಬಿಕೆಗೂ-ಮನೋವಿಜ್ಞಾನಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸ, ಸಾಮ್ಯಗಳು, ಮುಗ್ಧ ಮನಸುಗಳು, ನಯವಂಚನೆಗಳು, ಇವೆಲ್ಲದರ ನಡುವೆ ಆಶ್ಚರ್ಯಕರವಾಗಿ ‘ಫೆವಿಕಾಲ್ ಕಿ ಜೋಡ್’ ಎಂಬಂತೆ ಇವುಗಳೆಲ್ಲವೂ ಸೂಕ್ಷ್ಮವಾಗಿ ಹೊಂದಿಕೊಂಡು ಒಂದಾಗಿ, ಒಂದಕ್ಕೊಂದಾಗಿ ಜೊತೆಯಾಗಿರುವುದು.
ಎಲ್ಲಕ್ಕಿಂತಲೂ ಹೆಚ್ಚು ನನ್ನ ಗಮನ ಸೆಳೆದದ್ದು, ಪ್ರತಿ ಊರಿಗೂ, ಪ್ರತಿ ದೇವಸ್ಥಾನಕ್ಕೂ ಇದ್ದ ಸ್ಥಳಪುರಾಣಗಳು. ‘ಸಾಕ್ಷಿ’, ‘ಪುರಾವೆ’ಗಳ ಸಮೇತ ರೂಪುಗೊಂಡ ಅದ್ಭುತವಾದ ಕಥೆಗಳು, ಅದಕ್ಕೆ ಊಹಿಸಬಹುದಾದ ಕಾರಣಗಳು ಇವೆಲ್ಲವೂ ತುಂಬಾ ರೋಚಕವಾದ ತಿಳಿವು. ಎಲ್ಲವನ್ನೂ ಪ್ರಶ್ನಿಸುವ, ತಾರ್ಕಿಕ ವ್ಯಕ್ತಿತ್ವದ ನನ್ನಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಈ ಪುರಾಣಗಳ ವರ್ಣಾತ್ಮಕತೆಗೆ, ನಂಬಿಕೆಗಳ ಉದ್ದೀಪನದಲ್ಲಿ ತೇಲಿಹೋದವರು ಮಾರುಹೋಗದೆ ಇರುತ್ತಾರೆಯೇ! ಪುರಾಣಗಳು ಅಥವಾ ಲೆಜೆಂಡ್ ಗಳು ಐತಿಹಾಸಿಕ ಅಥವಾ ಅಲೌಕಿಕ ಹಿನ್ನೆಲೆಯುಳ್ಳ ಜನಪದೀಯ ಕಥೆಗಳು ಎಂದು ಹದಿನಾರನೇ ಶತಮಾನದಲ್ಲಿ ಗ್ರಿಮ್ ಸಹೋದರರು ವ್ಯಾಖ್ಯಾನಿಸಿದ್ದರು. ಕಥೆಗಳು ನಮ್ಮ ಕಲ್ಪನಾಶಕ್ತಿ, ಗ್ರಹಿಕೆಗಳನ್ನು ಹಿಗ್ಗಿಸುವುದಷ್ಟೇ ಅಲ್ಲದೆ ನಮ್ಮ ಮನೋವೈಜ್ಞಾನಿಕ ವಿಕಾಸಕ್ಕೂ ತಕ್ಕ ಕಾಣ್ಕೆಯಾಗಿದೆ. “ದಿ ಪವರ್ ಆಫ್ ಸ್ಟೋರಿ ಟೆಲ್ಲಿಂಗ್” ಎಂಬ ಒಂದು ಸುದೀರ್ಘ ಲೇಖನದ ನೆನಪು ಪ್ರತಿ ಕಥೆಯ ಬಳಿಯೂ ಒತ್ತರಿಸಿ ಬರುತ್ತಿತ್ತು. ಮತ್ತಷ್ಟು ಪುರಾಣಗಳನ್ನು ಓದಿ ತಿಳಿಯಬೇಕು ಎಂಬ ಹಸಿವು ಸಹ ಹುಟ್ಟಿದ್ದು ಈ ಪ್ರವಾಸದಿಂದಲೇ ಹೌದು.
ಮತ್ತೊಂದು ಅತ್ಯಂತ ಗಮನ ಸೆಳೆವ ಅಂಶ ಎಂದರೆ ದೇವಾಲಯಗಳ ವಾಸ್ತುಶಿಲ್ಪ. ಎಕರೆಗಟ್ಟಲೆ ಆಕ್ರಮಿಸಿರುವ ಪ್ರತಿ ದೇವಸ್ಥಾನದ ಪ್ರತಿ ಕಲ್ಗಂಬವೂ ಒಂದೊಂದು ಕಾವ್ಯ, ಒಂದೊಂದು ಭಾವ! ಕಣ್ತುಂಬಿಸಿಕೊಂಡಷ್ಟೂ ನೋಡಬೇಕೆನಿಸುವ ಶಿಲ್ಪಕಲೆ, ಕೆತ್ತನೆಗಳು, “ಕಲ್ಲು ಕಲ್ಲೂ ಸ್ಮೈಲಿಂಗ್ ಸ್ಮೈಲಿಂಗ್….” ಎಂಬ ಹಾಡು ನೆನಪಾಗಿ ನನ್ನ ಮನಸ್ಸೂ ಒಂದು ಸ್ಮೈಲ್ ಹಾಕಿಬಿಟ್ಟಿತು. ಯಾವ ತಂತ್ರಜ್ಞಾನದ ಗಂಧವೂ ಇಲ್ಲದೆ, ಮ್ಯಾನುಯಲ್ ಆಗಿ ಆ ವೈಭವೋಪೇತ ದೇವಾಲಯಗಳನ್ನು ನಿರ್ಮಿಸಿದ ಸಕಲ ಶಿಲ್ಪಿಗಳಿಗೂ ಹೃದ್ಪೂರ್ವಕ ಗೌರವ ನಮ್ಮಲ್ಲಿ ತಾನಾಗೆ ಮೈಗೂಡಿಬಿಡುತ್ತದೆ. ದೇವಾಲಯಗಳ ವಿಸಿಟ್ ಮತ್ತು ಅದರ ಪುರಾಣಗಳ ಅರಿಯುವಿಕೆ ಒಂದು ಕಡೆಯಾದರೆ, ನಮ್ಮ ಪ್ರಯಾಣ, ತಂಗುವಿಕೆ, ಅದರ ಕಷ್ಟ-ಸುಖಗಳು, ಅಪರಿಚಿತರು ಪರಿಚಿತರಾಗಿ, ಸ್ನೇಹಿತರಾಗಿಬಿಡುವ ಪ್ರಕ್ರಿಯೆ ಇವೆಲ್ಲವೂ ಮತ್ತೊಂದು ಮನೋಜ್ಞ ಅನುಭೂತಿ.
ಬಾರದ ಬಟ್ಲರ್ ಭಾಷೆಯ ಭರಾಟೆ, ಭಕ್ತಿಯ ಹೆಸರಿನಲ್ಲಿ ಅಸಹಾಯಕತೆಯ ಪರಾಕಾಷ್ಠೆ, ಜನರ ಭಯ, ಆಸೆ, ದುಃಖ, ನಿರಾಸೆ, ಭರವಸೆ ಇವೆಲ್ಲವುಗಳ ಕಲಸುಮೇಲೋಗರವಾದ ‘ದರ್ಶನ ಭಾಗ್ಯ’ದ ತುಡಿತ, ಹೀಗೆ ಒಂದಷ್ಟು ಹಿತ, ಒಂದಷ್ಟು ಅಹಿತ. ಒಂದಷ್ಟು ಸಹಿಷ್ಣುತೆ ಮತ್ತೊಂದಷ್ಟು ಸಂತೋಷದ ಜೊತೆ ಸಾಗಿತ್ತು ಪಯಣ. ಬೆಳೆ ಬೆಳೆಯುತ್ತಾ, ಯಾವುದೇ ರೀತಿಯ ಕಲಿಕೆಯ ಬೆರಗು ನಮ್ಮನ್ನು ಭೀತಿಗೊಳಿಸುವಂತೆ, ಧೃತಿಗೆಡಿಸುವಂತೆ ಸಂತಸವನ್ನೂ, ಜ್ಞಾನವನ್ನೂ ತರುತ್ತದೆ. ಅದೇ ಕಲಿಕೆಯ ಒಂದು ತುಣುಕಿನ ಪರಿಚಯ ನನ್ನ ಈ ದಕ್ಷಿಣ ಭಾರತ ಪ್ರವಾಸ ಕಥನ. ಪ್ರವಾಸದಲ್ಲಿ ಭೇಟಿಯಾದ ಸ್ಥಳಗಳನ್ನು, ಅವುಗಳಿಗೆ ಮೀಸಲಾದ ಪುರಾಣ ಕಥೆಗಳನ್ನು, ಮತ್ತಿತರ ಅನುಭವಗಳನ್ನು ನನ್ನ ಮುಂದಿನ ಲೇಖನಗಳಲ್ಲಿ ವಿವರವಾಗಿ ಹಂಚಿಕೊಳ್ಳುತ್ತೇನೆ.

‍ಲೇಖಕರು avadhi

September 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. g.n.nagaraj

    ದೇವಸ್ಥಾನಗಳಿಗೆ ಭೇಟಿ ಮಾಡುವುದರಲ್ಲಿ ಒಂದು ವೈಚಾರಿಕ ಬಹು ಶಿಸ್ತೀಯ ಅನ್ವೇಷಣೆಯ ಆನಂದವಿದೆ ಎಂದು ಕಂಡುಕೊಂಡ ನಿಮ್ಮ ದೃಷ್ಠಿ ಶ್ಲಾಘನೀಯ.ಪ್ರತಿಯೊಂದು ದೇವಸ್ಥಾನ, ದೇವರ ಬಗ್ಗೆ ಕೂಡ ಸರಿಸುಮಾರು ಎರಡೆರಡು ಸ್ಥಳ ಪುರಾಣಗಳಿರುತ್ತವೆ. ಒಂದು ಜಾನಪದ ಸ್ಥಳ ಪುರಾಣ, ಮತ್ತೊಂದು ವೈದಿಕ ಸ್ಥಳ ಪುರಾಣ. ಹಾಗೆಯೇ ಆಚರಣೆಗಳೂ ಅಷ್ಟೆ.ತಿಮ್ಮಪ್ಪ-ವೆಂಕಟೇಶ,ಮುರುಗನ್- ಷಣ್ಮುಗ,ಹರಿಹರಪುತ್ರ-ಐಯ್ಯಪ್ಪ ಹೀಗೆ.ಅವುಗಳ ಮರ್ಮವನ್ನು ಬಿಡಿಸುವುದು ಒಂದು ಪತ್ತೇದಾರಿ ಬೆರೆತ ಸಂಶೋಧನೆ. ಆ ರೀತಿಯ ಸಂತೋಷ, ರೋಮಾಂಚನವನ್ನು ತರುತ್ತವೆ.ಸಾವಿರಾರು ದೇವಸ್ಥಾನಗಳನ್ನು ನೋಡಿರುವ ನನ್ನ ಬಳಿ ಹಲವಾರು ದೇವಸ್ಥಾನಗಳ ಸ್ಥಳ ಪುರಾಣಗಳ ಸಂಗ್ರಹವೇ ಇದೆ.ಕೆಲವು ಅಧ್ಯಯನಗಳ ಬಗ್ಗೆ ಬರೆಯಲಾರಂಭಿಸಿದ್ದೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: