ಸಂಪು ಕಾಲಂ : ಡಾರ್ಕ್ ಅಂಡ್ ಲವ್ಲೀ ಟೂ…


ನಾನಾಗಿನ್ನೂ ಸಣ್ಣವಳು. ಮನೆಗೆ ಟಿವಿ ಬಂದ ಹೊಸತು. ಅದರಲ್ಲಿ ಬರುತ್ತಿದ್ದ ಕೆಲವೇ ಜಾಹೀರಾತುಗಳಲ್ಲಿ ಫೇರ್ ಅಂಡ್ ಲವ್ಲೀದು ಒಂದು. ವಯಸ್ಕ ತಂದೆ “ಕಾಶ್ ಮೇರ ಬೇಟಾ ಹೋ” ಎಂದು ಅಲವತ್ತುಕೊಳ್ಳುತ್ತಾನೆ. ಅದಕ್ಕೆ ಸೆಟೆದುನಿಂತ ಮಗಳು ಒಂದು ಫೇರ್ ಅಂಡ್ ಲವ್ಲೀ ಟ್ಯೂಬ್ ತಂದು ಹಚ್ಚುತ್ತಾಳೆ. ಅದರಿಂದ ಪವಾಡದಂತೆ ಪಡೆದ ಆಕೆಯ ಗೌರವರ್ಣ ಆಕೆಯ ಔದ್ಯೋಗಿಕ ಜೀವನಕ್ಕೆ ಒಂದು ‘ಗೌರವವರ್ಣ’ವಾಗಿ ಬಿಡುತ್ತದೆ! ಆಕೆಯ ತಂದೆ ಅವಳ ಯಶಸ್ಸಿಗೆ ಕಣ್ತುಂಬಿ ಹನಿಸುತ್ತಾನೆ. ಅಂದು ನನಗನ್ನಿಸಿದ್ದೇ ಇಷ್ಟು…. ಅರೆ ಎಷ್ಟು ಸುಲಭ. ಎಲ್ಲ ಕಡೆ ಚರ್ಚೆಯಾಗುತ್ತಿರುವ ಗಂಡು ಹೆಣ್ಣಿನ ಅಸಮಾನತೆಗೆ ಒಂದು ಚಿಕ್ಕ ಚೊಕ್ಕ ಉತ್ತರ ಒಂದು ಫೇರ್ ಅಂಡ್ ಲವ್ಲೀ ಟ್ಯೂಬ್!
ಅಷ್ಟು ಸಾಲದೆಂಬಂತೆ ಆ ಫೇರ್ ಅಂಡ್ ಲವ್ಲೀಯ ಜಾಹೀರಾತಿನಲ್ಲಿ ತೋರುವ ಏಳುವಾರದ ವಿವಿಧ ಹಂತಗಳ ಗೌರವರ್ಣ ಎಳೆಎಳೆಯಾಗಿ ನನ್ನನಾವರಿಸಿ ಅದ್ಯಾವುದೋ ಒಂದು ಘಳಿಗೆ ನಾನೂ ಕೂಡ ಆ ಬಿಳಿ ತ್ವಚೆಯ ದಾಸ್ಯದಲ್ಲಿ ಸಿಕ್ಕಿಹೋದೆ! ನಾನೂ ಅದೇ ರೀತಿ ಬೆಳ್ಳಗಾಗಬೇಕು ಎಂದು ಬಯಸಿದ್ದಾದರೂ ಯಾತಕ್ಕೆ ಎಂಬುದು ನನಗೆ ಇಂದಿಗೂ ಪ್ರಶ್ನೆ. ಆದರೆ ಆ ಚಿಕ್ಕ ವಯಸ್ಸಿನಲ್ಲಿ ಫೇರ್ ಅಂಡ್ ಲವ್ಲೀ ಜಾಹೀರಾತಿನಲ್ಲಿ ನನ್ನನ್ನು ಕಾಡಿದ್ದು ಒಂದು ಪ್ರಶ್ನೆ! ಆಕೆ ಏಳು ವಾರ ಆ ಕ್ರೀಮ್ ಬಳಸಿದ್ದು ಮುಖಕ್ಕೆ, ಅದು ಹೇಗೆ ಅವಳ ದೇಹ ಪೂರ ಮುಖದಂತೆಯೇ ಬಿಳಿ ಬಣ್ಣ ಪಡೆದೀತು ಎಂದು! ಇರಲಿ. ಈ ರೀತಿ ಸಣ್ಣ ಮಕ್ಕಳಿಂದ ವಯಸ್ಕರವರೆಗೆ ಗೌರ ಇಸ್ ಈಕ್ವಲ್ ಟು ಗೌರವ ಎಂದು ಅದು ಹೇಗೆ ಯುಗಗಳಿಂದ ತುಂಬಿಬಿಟ್ಟಿದೆಯೋ!
ಬಿಳಿ ತೊಗಲ ತೆವಲು ನಮ್ಮಲ್ಲೊಂದು ಮಾಸ್ ಹಿಸ್ಟೀರಿಯಾ ಆಗಿ ಬೆಳೆದುಬಿಟ್ಟಿದೆ ಎಂಬ ವಿಷಯ ಅಲ್ಲಲ್ಲಿ ಆಗಾಗ ಸ್ವ-ಅನುಭವದಿಂದಲೇ ಗಮನಿಸುತ್ತ ಬೆಳೆದ ನನಗೆ ಇದರ ಅತಿರೇಕದ ಮಟ್ಟ ಅರಿವಾಗಿದ್ದು, ಅದರಿಂದ ನಾನೊಬ್ಬ ಮನುಷ್ಯ ಜಾತಿಗೆ ಸೇರಿದವಳು ಎಂಬ ವಿಷಯವೇ ಅವಮಾನವೆಂಬಂತೆ ನಾಚಿದ್ದು, ಬಿಳಿ-ಕಪ್ಪು ಎಂಬುದು ನಮ್ಮ ದೇಹದ ಮೆಲನಿನ್ ಅಂಶ ಕೂಡಿಸುವ ಬರಿಯ ಬಣ್ಣ ಅಷ್ಟೇ ಮತ್ತೇನೂ ಅಲ್ಲ ಎಂಬ ಸತ್ಯದ ಅರಿವಾದಾಗ! ಇತ್ತೀಚಿಗೆ ನಾನೊಂದು ಅತ್ಯಂತ ಕೆಳ ದರ್ಜೆಯ ಫೇರ್ನೆಸ್ ಜಾಹೀರಾತನ್ನು ಕಂಡು ಹೇಸಿಗೆ ಪಟ್ಟುಕೊಂಡು ನನ್ನ ನಿಟ್ಟುಸಿರನ್ನೂ ಅಸಮಾಧಾನವನ್ನು ಸ್ಥೂಲವಾಗಿ ಒಂದು ಬರಹದಲ್ಲಿ ಟೈಪಿಸಿದ್ದೆ. ಈ ವಿಷಯದಿಂದ ಪ್ರಾರಂಭಗೊಂಡ ಬರಹ ನಡುವೆ ವಿಷಯಾಂತರಗೊಂಡದ್ದನ್ನು ಓದುಗರೊಬ್ಬರು (ಪ್ರಮೋದ್) ಗಮನಿಸಿ, ಈ ವಿಷಯದ ಕುರಿತಾದ ಲಿಂಕೊಂದನ್ನು ಹಂಚಿಕೊಂಡಿದ್ದರು. ಖ್ಯಾತ ನಟಿ ನಂದಿತಾ ದಾಸ್ ಅವರ ಮಾತುಗಳನ್ನುಳ್ಳ ಆ ಐದಾರು ನಿಮಿಷಗಳ ವೀಡಿಯೊ ಫೇರ್ನೆಸ್ ಸಿಂಡ್ರೋಮ್ ನ ಕುರಿತಾದ ನನ್ನ ಎಲ್ಲ ಹಳೆಯ ಅನುಭವಗಳನ್ನು, ನೆನಪುಗಳನ್ನು ಕೆದಕಿದವು. ಇದರ ಬಗ್ಗೆ ಚರ್ಚೆ ಅವಶ್ಯಕ ಅನಿಸಿತು.
ನನ್ನ ಕಂದು ಬಣ್ಣದ ಕೀಳರಿಮೆ (ಈಗ ಅದು ಕೀಳರಿಮೆ ಇರಲಿ ಬರಿಯ ಅರಿಮೆಯಾಗಿಯೂ ಉಳಿದಿಲ್ಲ ಎಂಬುದು ಬೇರೆಯ ಮಾತು) ಮೊಟ್ಟ ಮೊದಲಿಗೆ ನನ್ನ ಅನುಭವಕ್ಕೆ ಬಂದದ್ದು, ಒಬ್ಬ ಹಾಲ್ಗೆನ್ನೆಯ ಮೊಮ್ಮಗಳನ್ನು ಪಡೆದ ಮನೆಯ ಓನರ್ ಅಜ್ಜಿ, ನನಗೆ ಬರೀ ಬೆಳ್ಳಗಿರುವವರನ್ನು ಕಂಡರೆ ಇಷ್ಟ ಎಂದು ಹೇಳಿದಾಗ. ನನಗೆ ಕಸಿವಿಸಿಯಾಗಿ ಹೋಗಿತ್ತು. ಆ ಅಜ್ಜಿಯನ್ನು ಕಂಡರೆ ನನಗೆ ಇಷ್ಟ ನನ್ನನ್ನೂ ಆಕೆ ಇಷ್ಟ ಪಡುತ್ತಿದ್ದರು, ಮಿಠಾಯಿ ಕೊಡುತ್ತಿದ್ದರು. ಆದರೂ ಹೀಗೆ ಹೇಳಿದ ಕಾರಣವಾದರೂ ಏನು ಎಂದು ಯೋಚಿಸುತ್ತಿದ್ದೆ.
ಯಾವುದಾದರೂ ಮಗುವನ್ನು ಜನ ಮುದ್ದುಗರೆಯುತ್ತಿದ್ದ ಬಗೆಯೂ ನನಗೆ ಆಶ್ಚರ್ಯ ಮೂಡಿಸುತ್ತಿತ್ತು. “ಎಷ್ಟು ಚೆನಾಗಿದೆ ನೋಡು ಆ ಮಗು ಬೆಳ್ಳಗೆ” ಎಂದೂ, ಕಪ್ಪಾಗಿದ್ದರೆ “ಚೆನಾಗಿದೆ, ಆದ್ರೆ ಕರುಪು ಕುಟ್ಟಿ” ಎಂದೂ ಛೇಡಿಸುತ್ತಿದ್ದರು. ಆ “ಆದರೆ” ಅನ್ನುವ ಪಾಸ್ ಗಳು, ಕಾಮಾಗಳು ನನ್ನನ್ನು ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದವು. ನನ್ನಜ್ಜಿ ನನಗೆ ಸ್ನಾನ ಮಾಡಿಸುವಾಗ, ಎರಡು ಬಾರಿ ಸೋಪ್ ಹಚ್ಚಿ, “ಬೆಳ್ಳಗಾಗೋಗ್ತಿಯಾ ನೋಡು” ಎನ್ನುತ್ತಿದ್ದರು. ಪ್ರತಿ ದಿನಾ ಅದೇ ಮಾತು, ಆದರೆ ಸ್ನಾನದ ನಂತರ ಕನ್ನಡಿಯಲ್ಲಿ ಅದೇ ಬಣ್ಣದ ಮುಖ. ಎರಡು ಪ್ರಶ್ನೆಗಳು: ಅಜ್ಜಿ ಹೇಳಿದಂತೆ ಯಾಕೆ ಬೆಳ್ಳಗೆ ಆಗ್ತಿಲ್ಲ ಮತ್ತು ಯಾಕೆ ಬೆಳ್ಳಗೆ ಆಗಬೇಕು?!
ನೋಡನೋಡುತ್ತಾ ಅದು ನನ್ನಲ್ಲಿ ಇರುವ ಒಂದು ಕೊರತೆಯಂತೆ ಕಾಣಹತ್ತಿತ್ತು. ಕಂದು ಬಣ್ಣದ ನನ್ನ ತ್ವಚೆ ಯಾಕೆ ಬೆಳ್ಳಗಿಲ್ಲ ಎಂದು ಅನಿಸುತ್ತಿತ್ತು. ಶಾಲಾ ಕಾಲೇಜುಗಳಲ್ಲಿ ಕೆಲ ಹುಡುಗಿಯರನ್ನು ಕಂಡು “ಶೀ ಇಸ್ ಸೊ ಫೇರ್” ಎಂದು ಕಪ್ಪು ಹುಡುಗಿಯರು ಕರುಬುವುದನ್ನು ಕಂಡು ನಾನೂ ಹಾಗೆ ಬಿಳಿ ಬಣ್ಣಕ್ಕೆ ಹಂಬಲಿಸಬೇಕು, ಅದಿಲ್ಲದಿದ್ದರೆ ಏನೋ ತಪ್ಪು ಎಂಬಂತಹ ಭಾವನೆಯ ಹೇರಿಕೆ ಅನ್ಕಾನ್ಸ್ಹಿಯಸ್ಲೀ ಆಗೇ ಹೋಗಿತ್ತು! ಪೇಪರ್ ನಲ್ಲಿ ಕಾಣುವ ಮ್ಯಾಟ್ರಿಮೋನಿ ನೋಡಲು ಮಜಾ ಇರತ್ತೆ ಎಂದು ಓದಲು ಪ್ರಾರಂಭಿಸಿದರೆ, ಎಲ್ಲದರಲ್ಲೂ ಫೇರ್ ಎಂಬ ಪದ ಒಂದು ಕಾಮನ್ ಫ್ಯಾಕ್ಟರ್. ಅದು ಹುಡುಗನ ಹುಡುಕಾಟವೇ ಆಗಿರಲಿ, ಹುಡುಗಿಯ ಅರಸುವಿಕೆಯೇ ಆಗಿರಲಿ ‘ಫೇರ್’ ಎಂಬ ಪದವಿಲ್ಲದೆ ಆ ಪ್ರಕಟಣೆ ಅಪೂರ್ಣ!
ಬೆಳೆಯುತ್ತಾ ಬೆಳೆಯುತ್ತಾ ಅರಿತ ಒಂದು ದೊಡ್ಡ ಸತ್ಯ ಎಂದರೆ, ಇದು ಸಾಮಾಜಿಕವಾಗಿ ಬೆಳೆದು ಪಸರಿಕೊಂಡಿರುವ, ಬಿಡಿಸಲಾರದಷ್ಟು ರೂಟೆಡ್ ಆಗಿಹೋಗಿರುವ ವರ್ಣಬೇಧ, ದಿ ರೇಷಿಯಲ್ ಡಿಸ್ಕ್ರಿಮಿನೇಶನ್. ಇದನ್ನು ಅರ್ಥ ಮಾಡಿಕೊಳ್ಳಲು ಈ ಫೇರ್ನೆಸ್ ಸಿಂಡ್ರೋಮ್ ವಿರುದ್ಧ ಒಂದು ಅಭಿಯಾನ ಪ್ರಾರಂಭಿಸಿರುವ ನಂದಿತಾ ದಾಸ್ ಅವರ ಈ ಒಂದು ಸಣ್ಣ ಉದಾಹರಣೆ ಗಮನಿಸಿದರೆ ಸಾಕು: ಎಲ್ಲರೂ ನಂದಿತಾ ದಾಸ್ ರನ್ನು ನೋಡಿಯೇ ಇರುತ್ತೀರಿ. ತೀಕ್ಷ ಕಂಗಳ, ನೀಳ ಮೂಗಿನ, ಚುರುಕು ನೋಟದ ಬೆಡಗಿ ಈ ನಂದಿತಾ ದಾಸ್. ಈಕೆಯನ್ನು ಹೊಗಳಿ ಯಾವುದಾದರೂ ಒಂದು ರಿಪೋರ್ಟ್ ಪ್ರಕಟವಾದರೆ, ಅದರಲ್ಲಿ ಡಾರ್ಕ್ ಬ್ಯೂಟಿ ಅಂತಲೋ, ಡಸ್ಕೀ ಚಾರ್ಮ್ ಅಂತಲೋ ಉಲ್ಲೇಖವಿದ್ದೇ ಇರುತ್ತದೆ. ಆಕೆಯ ಸರಳ ಪ್ರಶ್ನೆ, ಅದೇ ಇತರ ಯಾವುದೇ ಬಿಳಿ ತ್ವಚೆಯ ನಟಿಯ ಬಗ್ಗೆ ಯಾರೂ ಫೇರ್ ಬ್ಯೂಟಿ ಅಂತಲೋ, ವೈಟ್ ಚಾರ್ಮ್ ಅಂತಲೋ ಪ್ರಿಫಿಕ್ಸ್ ಹಾಕಿ ಉದಾಹರಿಸುವುದಿಲ್ಲ ಯಾಕೆ? ಎಂದು. ಇನ್ನೂ ಗಂಭೀರ ಉದಾಹರಣೆ ಎಂದರೆ, ಆಕೆ ನಟಿಸುವ ಯಾವುದಾದರೂ ಪಾತ್ರ ಕೊಂಚ ಹೈ ಪ್ರೊಫೈಲ್ ಆಗಿದ್ದು, ಪ್ರತಿಷ್ಠಿತವಾದುದಾಗಿದ್ದರೆ, ನಿರ್ದೇಶಕನಿಂದ ಮೊದಲುಗೊಂಡು ಮೇಕಪ್ ಮ್ಯಾನ್ ವರೆಗೂ ಹೇಳುವ ಒಂದೇ ಮಾತು “ಡೋಂಟ್ ವರಿ, ವೀ ವಿಲ್ ಬ್ರೈಟನ್ ಯು ಅಪ್” ಎಂದು! ಇಲ್ಲಿ ಆಕೆಯ ಬಣ್ಣವೇ ಆಕೆಯ ಒಂದು ಕೊರತೆಯಾಗಿ ನಿಂತುಬಿಡುತ್ತದೆ ಎಂಬ ಮಾತಿಗಿಂತ ನಾವು ಗಮನಿಸಬೇಕಾದ್ದು ಹೈ ಪ್ರೊಫೈಲ್ ಅಂದರೆ ಬಿಳಿ ತ್ವಚೆಯುಳ್ಳವರು ಎಂಬಂತಹ ಒಂದು ಸಾಮಾಜಿಕ ಅಭಿಮತ.
ನನ್ನ ಸಂಬಂಧಿಕರೊಬ್ಬರಿದ್ದಾರೆ. ಅವರ ಮನೆಯಲ್ಲಿ ಎಲ್ಲರೂ ಬಿಳುಪು ಬಣ್ಣದವರು. ಈ ವಿಷಯದಿಂದ ಅವರಿಗೆ ಅತ್ಯಂತ ಗರಿಮೆ. ಅವರ ಮಗನ ಮದುವೆಗಾಗಿ ಸಾಕಷ್ಟು ಹುಡುಕಿ, ಕಾರಣಾಂತರಗಳಿಂದ ಹುಡುಗಿ ಸಿಗದೆ ಕೊನೆಗೂ ಸಿಕ್ಕ ಹುಡುಗಿ ಕೊಂಚ ಕಪ್ಪು. ಅವರಿಗೆ ಅದು ಜೀವನದಲ್ಲಾದ ಭಾರೀ ನಿರಾಶೆ! ನನ್ನ ಸ್ನೇಹಿತೆಯೊಬ್ಬಳ ತಮ್ಮ ಕೃಷ್ಣ ಸುಂದರ. ಆದರೆ ಅವನ ಪ್ರಕಾರ ಅದು ಅವನ ಜೀವನದ ಮೋಸ್ಟ್ ನೆಗೆಟಿವ್ ಪಾಯಿಂಟ್! ನನಗೆ ತಿಳಿದ ವ್ಯಕ್ತಿಯೊಬ್ಬರು ತಾವು ಬೆಳ್ಳಗಿದ್ದು, ಕಪ್ಪಗಿದ್ದವರು ಸೋಕಿದರೆ ಅವರ ಬಣ್ಣ ಅಂಟಿಕೊಂಡುಬಿಡುತ್ತದೇನೋ ಎಂಬ ಭಾವ. ಅವರ ಲೆಕ್ಕದಲ್ಲಿ ಬಿಳಿ ಜನರು ಮಾತ್ರ ಶುಭ್ರವಾಗಿರುತ್ತಾರೆ!
ಹೀಗೆ ಚೆಲುವು, ಆತ್ಮವಿಶ್ವಾಸ, ಒಳ್ಳೆತನ, ಶುಭ್ರತೆ ಎಲ್ಲಕ್ಕೂ ನಾವು ಸಮೀಕರಿಸುವ ಒಂದೇ ಉತ್ತರ ಬಿಳುಪು. ಜೀವನದಲ್ಲಿ ಗಮನಿಸಲೇಬೇಕಾದ, ಮಹತ್ವ ಕೊಡಬೇಕಾದ ವಿಷಯ ಎಂದು ಪಟ್ಟಿ ಮಾಡುತ್ತಾ ಹೋದರೆ, ಕೊನೆಯಾತಿ ಕೊನೆ ಸಾಲಿನಲ್ಲೂ ಬಾರದ ಈ ಬಣ್ಣದ ಸೋಗು, ನಮ್ಮನ್ನೆಲ್ಲಾ ಯಾತಕ್ಕಾದರೂ ಇಷ್ಟು ಕಾಡುತ್ತಿದೆ? ಎಂದು ಯೋಚಿಸಬೇಕಾದ್ದು ಬಹಳ ಮುಖ್ಯ.
ಭಾರತದ ಮಟ್ಟಿಗೆ, ನನಗನ್ನಿಸುವ ಪ್ರಕಾರ ಇದಕ್ಕೆ ಎರಡೇ ಕಾರಣಗಳು. ಒಂದು ಬ್ರಿಟಿಷರ ವಸಾಹತು ಎರಡನೆಯದು ಮಾಧ್ಯಮ.
ಬ್ರಿಟಿಷರಿಗೆ ಹೋಲಿಸಿದರೆ, ಭಾರತದಲ್ಲಿ ಹೆಚ್ಚು ಕಡಿಮೆ ಯಾರೂ ಬಿಳಿಯರಲ್ಲ. ಬ್ರಿಟಿಷರನ್ನು ಆಗ ಎಲ್ಲರೂ ನಮ್ಮನ್ನುದ್ಧರಿಸುವ ದೈವ ಎಂದು ಬಗೆದಿದ್ದರು (ಅವರ ವಿರುದ್ಧ ಎದ್ದ ದಂಗೆಗಳೆಲ್ಲಾ ಇತ್ತೀಚಿನ ಮಾತಷ್ಟೇ!). ಧನಿಕರೂ, ಆಧುನಿಕರೂ, ಅಧಿಕಾರಿಗಳೂ ಆಗಿದ್ದ ಬ್ರಿಟಿಷರು ನಮ್ಮ ಮಟ್ಟಿಗೆ ಒಂದು ಬೆರಗೇ ಆಗಿಹೋಗಿದ್ದರು. ಅಮೀರ್ ಖಾನ್ ಸಿನೆಮಾದಲ್ಲಿ ತೋರಿಸುವ “ಗೋರೀಮೇಮ್” ಗಳು ಅವರ ಉಡುಗೆ-ತೊಡುಗೆ, ಹಾವ-ಭಾವಗಳಿಂದ ಭಾರತೀಯರ ಮನಸೂರೆಗೈದಿದ್ದರು. ಹೀಗಾಗಿ, ಅಧಿಕಾರ, ಹಣ, ರೀತಿ, ನಡತೆ ಏನೇ ನೋಡಿದರೂ ಬಿಳಿಯರು/ಬ್ರಿಟಿಷರು ಮೇಲುಗೈ ಹೊಂದಿದ್ದರು. ಎಷ್ಟೆಲ್ಲಾ ಗುಣಾವಗುಣಗಳನ್ನು ಹೊಂದಿದ್ದ ಬ್ರಿಟಿಷರು ಬಿಳಿಯರು. ಹೀಗಾಗಿ, ಬಿಳಿಯರೆಲ್ಲಾ ಧನಿಕರು, ಆಧುನಿಕರು, ನಡತೆಯುಳ್ಳವರೂ, ಪ್ರತಿಷ್ಠಿತರೂ ಎಂಬ ಭಾವನೆ ನಮ್ಮಲ್ಲಿ ಬೇರೂರಿಬಿಟ್ಟಿತು. ಇದರ ಜೊತೆಗೆ ಮೇಲ್ಜಾತಿಯವರೆಲ್ಲಾ ಈ ಬ್ರಿಟಿಷರ ಜೊತೆಗೂಡಿ ಶ್ರಮಿಕ ಸಂಸ್ಕೃತಿಯಿಂದ ದೂರಾದರು, ದೈಹಿಕವಾಗಿ ನುಣುಪಾದರು. ಕಷ್ಟ ಪಟ್ಟು ದುಡಿವ ಜನರ ದೇಹ ಒರಟಾಯಿತು. ಈ ಎಲ್ಲಾ ಅಂಶಗಳೂ ಸೇರಿ ಬಿಳುಪು ತನ್ನ ಗೆಲುವಿನ ಝಾಂಡಾವನ್ನು ನಿಲ್ಲಿಸಿಯೇ ಬಿಟ್ಟಿತು. ಇದೇ ಥಾಟ್ ಪ್ರಾಸಸ್ ನಮ್ಮಲ್ಲಿ ಮೌಲ್ಡ್ ಆಗಿ ಇಂದಿಗೂ ವರ್ಣಬೇಧ ಉಳಿದುಬಿಟ್ಟಿದೆ.
ಇದಕ್ಕೆ ತುಪ್ಪ ಸುರಿವಂತೆ ಇಂದಿನ ಮಾಧ್ಯಮಗಳು, ವಾಹಿನಿಗಳು ಸಾಥ್ ನೀಡುತ್ತಿವೆ. ಹೆಸರೇ ಸೂಚಿಸುವಂತೆ “ಫೇರ್ ಅಂಡ್ ಲವ್ಲೀ” ಅಂದರೆ ಫೇರ್ ಆದ್ದರಿಂದ ಲವ್ಲೀ ಎಂಬಂತೆ, ಇತ್ತೀಚಿಗೆ ಫೇರ್ ಅಂಡ್ ಹ್ಯಾಂಡ್ಸಮ್ ಸಹ! ಮೊದಲು ಡಾರ್ಕ್ ಅಂಡ್ ಹ್ಯಾಂಡ್ಸಮ್ ಎಂದಿದ್ದ ನಾಣ್ನುಡಿ ಅದ್ಯಾವ ಮಾಯೆಯಲ್ಲಿ ಫೇರ್ ಅಂಡ್ ಹ್ಯಾಂಡ್ಸಮ್ ಅಂತ ಬದಲಾಯಿತೋ, 2005 ರಲ್ಲಿ ಇಮಾಮಿ ಎಂಬ ಉದ್ದಿಮೆದಾರರು ತಯಾರಿಸಿದ ಪುರುಷ ಗೌರವರ್ಣದ ಫೇರ್ ಅಂಡ್ ಹ್ಯಾಂಡ್ಸಮ್ ಎಂಬ ಕ್ರೀಮ್ ಇಂದು ಮಾರುಕಟ್ಟೆಯಲ್ಲಿ, ಹದಿನೈದು ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ವ್ಯಾಪಾರದೊಂದಿಗೆ ನಂಬರ್ ಒನ್ ಉತ್ಪನ್ನವಾಗಿಬಿಟ್ಟಿದೆ ಎಂದರೆ ನಂಬಲಾದೀತೇ! ಜನಸಾಮಾನ್ಯರು ಸ್ಟಾರ್ ಗಳೆಂದು ಪ್ರೀತಿಸುವ, ಆರಾಧಿಸುವ ಶಾರುಕ್ ಖಾನ್, ಜಾನ್ ಅಬ್ರಹಾಂ, ಶಾಹೀದ್ ಕಪೂರ್, ಕತ್ರೀನಾ ಕೈಫ್, ಪ್ರೀತಿ ಜಿಂಟಾ ಇತ್ಯಾದಿ ಖ್ಯಾತರು, ಬಿಕರಿಗೊಂಡು ತಮ್ಮ ಯಶಸ್ಸಿಗೆ ಈ ಫೇರ್ನೆಸ್ ಕ್ರೀಮ್ ಗಳೇ ಕಾರಣ ಎಂಬ ಬೇಜವಾಬ್ದಾರೀ ಪ್ರಕಟಣೆಗಳನ್ನು ನೀಡುವುದು, ಇತ್ಯಾದಿ ಮಾಧ್ಯಮಗಳ ಘೋರಾಪರಾಧಗಳು ನಮ್ಮನ್ನು “ಬಿಳಿ ತ್ವಚೆಯೇ ದೈವ” ಎಂದು ಸೈಕಲಾಜಿಕಲೀ ಟ್ಯೂನ್ ಮಾಡುತ್ತಿವೆ.
ಇದು ಸತ್ಯವಲ್ಲ, ವ್ಯಕ್ತಿಗಳ ಚರ್ಮದ ಬಣ್ಣ ಒಂದು ಬಣ್ಣವಷ್ಟೇ ಹೊರತು ಬೇರಾವ ಕ್ಲೀಷೆಗಳೂ ಅದಕ್ಕಿಲ್ಲ ಎಂದು ನಮಗೆ ನಿಜಕ್ಕೂ ಅರಿವಾಗುವುದಾದರೂ ಯಾವಾಗ? ಹೇಗೆ? ಎಂಬುದು ಇನ್ನೂ ಪ್ರಶ್ನೆಗಳಾಗಿಯೇ ಕಾಡುತ್ತಿವೆ.
 
 

‍ಲೇಖಕರು avadhi

August 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

 1. bharathi

  Lovely and thought provoking … kappage huttiddakkene anubhavisida avamanagalu ivattigoo hasiraagide … ninna baraha ishtavaythu sampu … keep it up

  ಪ್ರತಿಕ್ರಿಯೆ
 2. ಪು. ಸೂ . ಲಕ್ಷ್ಮೀನಾರಾಯಣ ರಾವ್

  ಮುಕ್ತವಾಗಿ ಬರೆದಿದ್ದೀರಿ, ಲೇಖನ ಚೆನ್ನಾಗಿದೆ. ‘ ಬ್ಲ್ಯಾಕ್ ಈಸ್ ಬ್ಯೂಟಿ ‘ ಎಂಬ ಮಾತೂ ಇದೆ. ಸೌಂದರ್ಯಪ್ರಜ್ಞೆಯುಳ್ಳ ವ್ಯಾಸ ಕೃಷ್ಣನನ್ನು ಶ್ಯಾಮಲ ವರ್ಣನನ್ನಾಗಿಸಿದ. ಕೃಷ್ಣ ವರ್ಣದ ಕೃಷ್ಣೆಯನ್ನು ಕಡು ಚೆಲುವೆ ಎಂದ. ವಾಲ್ಮೀಕಿ ತನ್ನ ನಾಯಕನನ್ನು ಶ್ಯಾಮಾಂಗನನ್ನಾಗಿಯೆ ಚಿತ್ರಿಸಿದ್ದು. ಕಪ್ಪು ಬಣ್ಣದ ಚೆಲುವ – ಚೆಲುವೆಯರ ಮುಖವು ಚೆಲುವಷ್ಟೇ ಅಲ್ಲ ಏನೋ ಒಂಥರಾ ಸಮ್ಮೋಹಕತೆಯನ್ನು ಪಡೆದಿರುತ್ತದೆ. ಬಹುಷಃ ಈ ಮುಖಗಳೇ ಬಿಳುಪಾಗಿಬಿಟ್ಟರೆ
  ಚೆಲುವು ಉಳ್ಕೋಬಹುದು ಆದರೆ ಸಮ್ಮೋಹಕತೆ ಕಳಕೊಳ್ಳುತ್ತೇನೋ ಅಂತ ಅನ್ನಿಸುತ್ತೆ. ನಂಬಿದರೆ ನಂಬಿ ಬಿಟ್ರೆ ಬಿಡಿ ಕಪ್ಪು ಬಣ್ಣದ ಕೆಲವು ಚೆಲುವರಲ್ಲಿ
  ನಾನು ಕಂಡ ಮೋಡಿ ಮಾಡುವ ಆ ಸಮ್ಮೋಹಕತೆಯು ಇದುವರೆಗೆ ಯಾವ ಬಿಳಿಯ ಬಣ್ಣದ ಚೆಲುವ ವದನಗಳಲ್ಲೂ ಕಂಡು ಬರಲಿಲ್ಲ.
  ಆದರೆ ಅಂತರಂಗದ ಚೆಲುವು ಎಲ್ಲಕ್ಕಿಂತಲೂ ಮಿಗಿಲು. ಪ್ರೀತಿಯ ಮುಂದೆ ಇವೆಲ್ಲ ಕ್ಷಣಿಕ, ಕ್ಷುಲ್ಲಕ. ಸುಮಾರು ನಲವತ್ತು ವರ್ಷಗಳ ಹಿಂದೋ ಏನೋ ನಾನು ಓದಿದ ಕೆ. ವಿ. ಅಯ್ಯರ್ ರವರ ಕಥೆಯೊಂದರಲ್ಲಿ ಬರುವ ಕುರೂಪದ (?) ಪ್ರೇಮಿಗಳ ಬದುಕು ನನ್ನನ್ನು ಮೂಖನನ್ನಾಗಿಸಿತ್ತು ; ನಿರ್ಮಲವಾದ ಪ್ರೇಮಪರಿಮಳದ ಅನುಭವ ಮನಮ್ಬುಗುವಂತೆ ಮಾಡಿತ್ತು .

  ಪ್ರತಿಕ್ರಿಯೆ
 3. ಪ್ರಮೋದ್

  ಮೊದಲಿಗೆ ಧನ್ಯವಾದಗಳು 🙂
  “ಗೌರವ ವರ್ಣ ಕ್ರೀಮ್” ನೋಡಿ ಮೈ ತು೦ಬಾ ಉರಿದಿದೆ. ರೀಸಿಸ್ಟ್ ಜಾಹಿರಾತಿದು. ಇ೦ತಹ ಕ೦ಪನಿಗಳಿಗೆ ನಮ್ಮ ಸೋ ಕಾಲ್ಡ್ ಸಮಸ್ಯೆಗಳೇ ಖನಿಯ ಆಗರ. ಸಮಸ್ಯೆ ಅಲ್ಲದಿದ್ದರೂ ಸಮಸ್ಯೆ ಅ೦ತಾ ಲೇಬಲ್ ಹಚ್ಚಿ ಅವರ ಪ್ರೋಡಕ್ಟ್ ಮಾರುವ ಮಾರ್ಕೆಟಿ೦ಗ್ ಟೆಕ್ನಿಕ್ ಅದು.
  ಬಹಳವಾಗಿ ಸೌತ್ ಇ೦ಡಿಯನ್ ಸ೦ಬ೦ಧಿತ ಸಮಸ್ಯೆ. ನೋರ್ತ್ ಇ೦ಡಿಯನ್ ನ ಬಿಳಿ ತೊಗಲಿಗೆ ಬೀಳುವ ಹುಡುಗರ/ಹುಡುಗಿಯರ ಸಮಸ್ಯೆಯ ಮೂಲವೂ ಇದೆ.
  ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು. ಅದು ಮೀಡಿಯಾದವರಿ೦ದ ಸಾಧ್ಯ. ಆದರೆ ಮೀಡಿಯದವರು ಮಾರ್ಕೆಟಿ೦ಗ್ ಕ೦ಪನಿಗಳ ಗುಲಾಮರಾದ್ದರಿ೦ದ ಇದು ಕಷ್ಟ.

  ಪ್ರತಿಕ್ರಿಯೆ
 4. ಪ್ರಮೋದ್

  ಕಮೆ೦ಟಿಸಲು ಮರೆತಿದ್ದೆ. ಚೇ೦ಜ್.ಆರ್ಗ್ ನವರು ಫೇರ್ ನೆಸ್ ಆಡ್ ಬಗ್ಗೆ ಆನ್ ಲೈನ್ ಪಿಟಿಷನ್ ಹಾಕಿದ್ದಾರೆ. 13,300+ ಜನರು ಸಹಿ ಹಾಕಿದ್ದಾರೆ. ನಾವು ಒ೦ದು ಕೈ ನೋಡಿ ಬಿಡೋಣ. ಏನ೦ತೀರಿ?
  https://www.change.org/en-IN/petitions/fair-and-handsome-and-shah-rukh-khan-take-down-discriminatory-ad-lead-the-change-disbcampaign

  ಪ್ರತಿಕ್ರಿಯೆ
 5. Kiran

  Excellent, as usual! I would like to draw your attention on an article by Dr Rammanohar Lohia, titled “BEAUTY AND SKIN COLOUR” (Chapter 15, vol 9 collective works of Dr RML, page 285 to 291). Our insights may get deeper and stronger as we read Dr Lohia powerfully voicing one of the deepest discomfort of our times. It would be very welcoming if you can write an extension to this article in the light of what Dr Lohia has discussed.

  ಪ್ರತಿಕ್ರಿಯೆ
 6. M.S.Prasad

  As long as we radiate and send positive vibes, Color should not matter. An awesome article Samyuktha Puligal….

  ಪ್ರತಿಕ್ರಿಯೆ
 7. Vidyashankar Harapanahalli

  ಡಾರ್ಕ್ ಅಂಡ್ ಲವ್ಲೀ ಟೂ… Thanks for compliement Samyukta 🙂
  One of the reason I would love to be in Chennai is nobody critisises and looks ills at you because you have dark skin

  ಪ್ರತಿಕ್ರಿಯೆ
 8. ಅಜ್ಜಿಮನೆಗಣೇಶ್

  ಇದೆ ವರ್ಣಬೇದ ನೀತಿಯೆ ಇಡಿ ಪ್ರಪಂಚದೆಲ್ಲೆಲ್ಲ ಕಾಣಬಹುದು , ಅದಕ್ಕಾಗಿ ನಡೆದ ಹೋರಾಟಗಳು ನಮ್ಮಲ್ಲಿ ಅಷ್ಟಾಗಿ ಕಾಣದಿದ್ದರು ದಕ್ಷಿಣ ಆಪ್ರೀಕಾದಂತಹ ದೇಷಗಳಲ್ಲಿ ರಾಷ್ಟ್ರೀಯ ಸಮಸ್ಯೆಯಾಗಿ ಕಾಡುತ್ತಿದೆ.ಅಂತಕಡೆ ಜಾಹಿರಾತುಗಳು ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ತಮ್ಮ ಮಾಲನ್ನ ಮಾರಾಟ ಮಾಡುತ್ತವೆ. ಆದರೆ ಆ ಮಟ್ಟಿಗೆ ಈ ನೆಲದಲ್ಲಿ ಯೋಚಿಸುತ್ತಿಲ್ಲ .ನಿಜಾ ಮಾತು ಅಭಿಪ್ರಾಯ . ಲೇಖನ ಚೆನ್ನಾಗಿದೆ ,
  ಇಂತಿ
  ಕರಿ ಹೈದ

  ಪ್ರತಿಕ್ರಿಯೆ
 9. ಶಮ, ನಂದಿಬೆಟ್ಟ

  ನಾ ಹುಟ್ಟಿದಾಗ ಮೊದಲ ಬಾರಿಗೆ ಕಂಡ ತಕ್ಷಣ ಅಜ್ಜಿ “ಕೂಸು ಚೆಂದ ಇದೆ; ಆದ್ರೆ ಸ್ವಲ್ಪ ಕಪ್ಪು. ಅಪ್ಪ ಅಮ್ಮನಷ್ಟು ಬೆಳ್ಳಗಿಲ್ಲ” ಅಂದಿದ್ದರಂತೆ. ನಂತರ ಹುಟ್ಟಿದ ತಮ್ಮ ನನಗಿಂತ ಬೆಳ್ಳಗಿದ್ದ ಅನ್ನೋ ಕಾರಣಕ್ಕೆ ಅಂವ ಅವರಿಗೆ ಹೆಚ್ಚು ಮುದ್ದಾಗಿ ಕಂಡಿದ್ದ.. ಮತ್ತು ನನ್ ಥರ ಬಿಸಿಲಿಗೆ ಹೋಗಿ ಆಡುವ ಸ್ವಾತಂತ್ರ್ಯವನ್ನೂ ಕಳಕೊಂಡಿದ್ದ (ಕಪ್ಪಾದರೆ ಅಂತ):)
  ಻ವತ್ತು ಕಾಡಿದ್ದ ಬಣ್ಣ ಇವತ್ತು ನೀ ಹೇಳಿದಂತೆ ನೆನಪೇ ಆಗದು…
  ಚೆಂದದ ಬರಹ.. ಇಷ್ಟವಾಯ್ತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: