ಸಂಪು ಕಾಲಂ : ಚಿಕ್ಕಪ್ಪನ ಸಾವೂ, ಫ಼ಲ್ಕನರನ ಎಮಿಲಿಯೂ…


ಖುಷ್ವಂತ್ ಸಿಂಗ್, ಯಶವಂತ ಚಿತ್ತಾಲ, ನಂದಾ, ಇತ್ಯಾದಿ ನಂದಿಹೋದ ನಂದಾ ದೀಪಗಳ ಜೊತೆಗೆ ನನ್ನ ಕಸಿನ್ ಚಿಕ್ಕಪ್ಪ ದಿವಾಕರ್ ಸಹ ಇತ್ತೀಚೆಗೆ ಇನ್ನಿಲ್ಲವಾದರು. ಇದೇನೂ ಹೊಸತಲ್ಲ, ಪ್ರತಿ ಹುಟ್ಟಿಗೂ ಸಾವಿದೆ ಎಂಬುದು ಗೊತ್ತು. ಆದರೂ, ನನ್ನ ತಂದೆಗಿಂತಲೂ ಚಿಕ್ಕವರು ಎಂದು ಅನಿಸಿದ ತಕ್ಷಣ ಮನದಾಳದಲ್ಲಿ ಒಂದು ಬಿಕ್ಕು. ಸ್ವಾರ್ಥಿಯೆನಿಸಬಹುದು, ಆ ಆತಂಕ, ದುಗುಡ ನನ್ನ ಚಿಕ್ಕಪ್ಪನನ್ನು ಮೀರಿ ನನ್ನ ತಂದೆ, ತಾಯಿಯರ ಬಗೆಗೆ ಆವರಿಸಿತ್ತು. ಅದ್ಯಾರೋ ತಾತ, ಊರಿನ ಯಾವುದೋ ಅಜ್ಜಿ ಕಾಲವಾದರಂತೆ ಎಂದು ಕೇಳುತ್ತಿದ್ದ ಕಿವಿಯು ಕಾಲಬದಲಾದಂತೆ ಬಲಿತು ಇತ್ತೀಚೆಗೆ ಚಿಕ್ಕಪ್ಪ, ಮಾವಂದಿರ ಸಾವಿನ ಸುದ್ದಿ ಕೇಳಿಸಿಕೊಳ್ಳುತ್ತಿದೆ. ಸಂಬಂಧಿಕರ ಅಥವಾ ಹತ್ತಿರದವರ ಯಾವುದೇ ಸಾವು, ನೋವುಗಳು ನಮಗೆ ತುಂಬಾ ’ಬೇಕಾದವರ’ ಸಾವನ್ನು ನೆನಪಿಗೆ ತರುತ್ತದೆ ಏಕೆ? ಬೇಕಾದವರ ಎಂಬ ಪದವನ್ನು ಉದ್ಧರಣ ಚಿನ್ಹೆಯಲ್ಲಿ ಹಾಕಿದ ಉದ್ದೇಶವನ್ನು ತಿಳಿಸಲು ನಮ್ಮ ತಂದೆ ಹೇಳುತ್ತಿದ್ದ ಒಂದು ಸಣ್ಣ ಜೋಕ್ ಹೇಳುತ್ತೇನೆ ಕೇಳಿ. ಯಾರಾದರೂ ಸತ್ತರೆ ಅವರ ಮುಂದೆ ಕೂತು ಅಳುತ್ತಿರುವ ಮಂದಿ ಒಮ್ಮೆಯಾದರೂ “ಹೊರಟು ಹೋದೆಯಾ…ಇನ್ನು ನಮಗ್ಯಾರು ದಿಕ್ಕು” ಎಂದಿರುತ್ತಾರೆ. ಅಂದರೆ, ಸತ್ತ ಆ ವ್ಯಕ್ತಿ ನಮ್ಮ ’ಬೇಕು’ಗಳಲ್ಲಿ ಒಬ್ಬ. ಆತನ/ಕೆಯ ಸಾವಿಗಿಂತ ನಮ್ಮನ್ನು ಕಾಡುವ ನೋವು, ಬದುಕಿರುವ ನಾವು ಅವರ ಹೊರತಾದ ಜೀವನ ಕಳೆಯಬೇಕು ಎಂಬ ಸತ್ಯದ ಅಥವಾ ಸ್ವಾರ್ಥದ ಅರಿವಿನದ್ದು. ಮನುಷ್ಯ ಸಹಜ ಸ್ವಭಾವವಿದು.
ನಮ್ಮ ಸಾವಿಗಿಂತಲೂ ಹೆಚ್ಚು ನಮ್ಮನ್ನು ಕಾಡುವುದು ನಮ್ಮ ಆಪ್ತರ ಸಾವು. ಕಾರಣ, ನಾನಾಗಲೇ ಹೇಳಿದಂತೆ ಅವರ ಬಗೆಗಿನ ಪ್ರೀತಿ, ಪ್ರೇಮಗಳ ಜೊತೆಗೆ ಅವರು ’ನಮ್ಮ’ ವಸ್ತು ಎಂದು ನಾವು ಭಾವಿಸಿ, ನಂಬಿರುತ್ತೇವೆ. ಅದನ್ನು ಮರೆತು, ಬದಲಾವಣೆಗೆ ಬೇಗ ಮನಸ್ಸು ಸಿದ್ಧವಾಗಲಾರದು. ಅದಕ್ಕೇ ಕೆಲವೊಮ್ಮೆ ನಮ್ಮ ಸಾವಿಗಿಂತಲೂ ನಮ್ಮ ಆಪ್ತರ ಸಾವಿಗಾಗಿ ನಾವು ಮೊದಲು ಸಿದ್ಧರಾಗಬೇಕಲ್ಲವೇ ಎನಿಸುತ್ತದೆ. ಮನಸ್ಸು ಬಹಳ ಸ್ವಾರ್ಥದ್ದು, ಎಲ್ಲವನ್ನೂ ಮರೆತುಬಿಡುತ್ತದೆ. ನಮ್ಮೆಲ್ಲ ಬದುಕು, ಭಾವನೆ, ತಲ್ಲಣಗಳ ನಡುವೆ ಒಂದು animalistic instinct ಇರುತ್ತದಲ್ಲಾ ಅದು ನಾವು ಯಾವುದೇ ಸಂದರ್ಭದಲ್ಲೂ ಜೀವಂತವಾಗಿರಲು ಏನು ಮಾಡಬೇಕೋ ಅದು ಮಾಡುತ್ತಿರುತ್ತದೆ. ಯಾರೋ ಹೇಳಿದ ಘಟನೆ, ಹೊಟ್ಟೆ ನೋವು ಎಂದು ಮಲಗಿದ ಪ್ರೀತಿಯ ಗಂಡ ಅಚಾನಕ್ ಆಗಿ ಪ್ರಾಣ ತೊರೆದಿದ್ದಾನೆ. ಸಾಯುವಷ್ಟು ದುಃಖ, ನೋವು ಆದರೆ ದೇಹ ಮಾತುಕೇಳಬೇಕಲ್ಲ. ಸಾಯುವಷ್ಟು ಹೊಟ್ಟೆ ಹಸಿವು ಸಹ! ಯಾರ ಬಳಿಯೂ ಹೇಳಲಾಗದು, ಹೇಳಿದರೆ ಗಂಡನ ಕಳೇಬರದ ಮುಂದೆ ಹಸಿವಾಗುತ್ತದೆ ಇವಳಿಗೆ ಎಂತಹ ಹೆಣ್ಣು ಎಂದು ಬಿಟ್ಟರೆ? ಎಂಬ ಆತಂಕ. ಇಂಥವು ನಮ್ಮೆಲ್ಲ ಗುಡ್ಡಿ ಗುಡ್ಡಿ ಜೀವನಗಳ ಹಿಂದಿರುವ ಹಸಿ ಕಟು ಸತ್ಯಗಳು.
ನಾನಿಲ್ಲಿ ಮೇಲೆ ಹೇಳಿದ ಉದಾಹರಣೆಗಳಲ್ಲೆಲ್ಲಾ ಕಾಣುವುದು ಸಾವಿನ ಭಯ, ಹಳತನ್ನು ಕಳೆದುಕೊಂಡು ಬದಲಾವಣೆಯತ್ತ ಸಾಗಲು ನಿರಾಕರಣೆ ಮತ್ತು ಇವೆಲ್ಲವನ್ನೂ ಮೀರಿದ ದೈಹಿಕ-ಮಾನಸಿಕ ಸಹಜ ಪ್ರವೃತ್ತಿಗಳು. ಇವುಗಳ ಜೊತೆಗೆ, ಆ ಮಾನವ ಸಹಜ ಪ್ರವೃತ್ತಿಗಳಿಗೆ ಒತ್ತಡ ತರುವ ಸಮಾಜ. ಆಪ್ತರ ಸಾವಿನ ಭಯಾನಕ ನೋವನ್ನು ನುಂಗುವುದರ ಜೊತೆಗೆ ಮಾನಸಿಕ-ಸಾಮಾಜಿಕ ಒತ್ತಡಕ್ಕೂ ಇಂಬುಕೊಡುತ್ತಾ ಹೋದಾಗ ಕೆಲವೊಮ್ಮೆ ಮನಸ್ಸು ತನ್ನ ಸ್ಥಿಮಿತ ಕಳೆದುಕೊಳ್ಳುತ್ತದೆ. ಎಲ್ಲ ನೋವುಗಳನ್ನೂ, ಒತ್ತಡಗಳನ್ನೂ ಮೀರಿದ ಸಂತುಲನವನ್ನು ಪಡೆದುಕೊಳ್ಳುವುದಕ್ಕೆ ಸ್ವಲ್ಪ ಸಮಯವೇ ಹಿಡಿದರೂ ಮನುಷ್ಯರು ಗಟ್ಟಿಗರು, ಎಲ್ಲವನ್ನೂ ಮರೆತು ಮತ್ತೆ ಮೊದಲಿನಂತೆ ಬದುಕಿಬಿಡಬಹುದು. ಆದರೆ ಕೆಲ ಸೂಕ್ಷ್ಮ ಮನಸುಗಳಿಗೆ ಇದು ಸಾಧ್ಯವಾಗದೇ ಹೋಗಿ, ಆಂತರಿಕವಾಗಿ ನಲುಗಿಹೋಗುತ್ತಾರೆ. ಹೊರಪ್ರಪಂಚಕ್ಕೆ ತಾವು ಬಹಳ ಧೈರ್ಯಸ್ಥರು, ತಮಗೆ ಯಾರ ಸಾಂತ್ವನವೂ ಬೇಕಾಗಿಲ್ಲ ಎಂದು ತೋರಿಸಿಕೊಳ್ಳಲು ಅನುಕಂಪವನ್ನೇ ಮರೆತು ಮೇಲೆ ವಜ್ರದಂತೆ ಕಠೋರವಾಗಿ ತೋರಿಸಿಕೊಂಡರೂ ಆಂತರಿಕವಾಗಿ ಹೂವಿಗಿಂತಲೂ ಮೃದುವಾಗಿ ಮುರುಟಿಹೋಗುತ್ತಾರೆ.
ಈ ಎಲ್ಲ ವಿಷಯಗಳ ಲಹರಿಯಲ್ಲಿ ಮುಳುಗಿ ಹೋಗಿದ್ದ ನನ್ನ ಮನಸ್ಸಿಗೆ ನೆನಪಾದದ್ದು ವಿಲಿಯಂ ಫ಼ಲ್ಕನರ್ ಅವರ ಒಂದು ಮರೆಯಲಾಗದ, ಅತ್ಯಂತ ಮನೋಗ್ನವಾದ ಕಥೆ “ಎ ರೋಸ್ ಫ಼ಾರ್ ಎಮಿಲಿ”. ಬಹಳ ಸರಳವಾದ, ಒಂದಷ್ಟು ಮಂದಿ ಕೂತು ಹರಟುವ (ಅಥವಾ ಗಾಸಿಪ್ ಮಾಡುವ) ಕಥೆಯಂತಿರುವ ನಿರೂಪಣೆಯು ನಮ್ಮನ್ನು ಆಳವಾಗಿ ಆವರಿಸಿ ಬದುಕು, ಸಮಾಜ ಮತ್ತು ಮನೋವಿಜ್ಞಾನದ ಕೆಲ ಕಹಿ ಮುಖಗಳು ಅನುಭವಕ್ಕೆ ಬರುವಂತೆ ಮಾಡುತ್ತದೆ.


ಗಾಥಿಕ್ ಸಾಹಿತ್ಯ ಪ್ರಕಾರಕ್ಕೆ ಸೇರುವ ಈ ನಿಗೂಢ, ಮಾರ್ಮಿಕ ಕಥೆ: ಸಾವು, ಪರಂಪರೆಯ ಬದಲಾವಣೆ, (ಅಂದಿನ ಕಾಲದಲ್ಲಿ ಅಮೇರಿಕದಲ್ಲಿ ಜ್ವಲಂತವಾಗಿದ್ದ) ವರ್ಣಬೇಧ, ವಯಕ್ತಿಕ ಜೀವನದ ಮೇಲಿನ ಸಾಮಾಜಿಕ ಹೊರೆ ಇತ್ಯಾದಿ ಅನೇಕ ಬಿಕ್ಕಟ್ಟುಗಳನ್ನು ಮೈನವಿರೇಳಿಸುವಂತೆ ಕಟ್ಟಿಕೊಡುತ್ತದೆ. ಅಜ್ಜಿ-ಮೊಮ್ಮಕ್ಕಳಿಗೆ ಕೂತು ಕಥೆ ಹೇಳುವಂತೆಯೇ ಚಮತ್ಕಾರವಾಗಿಯೇ ನಿರೂಪಣೆ ಮಾಡುತ್ತಲೇ ಸೂಚ್ಯವಾಗಿ ಅತ್ಯಂತ ಗಂಭೀರ ಸಮಸ್ಯೆಗಳನ್ನು ಬಿಂಬಿಸುತ್ತದೆ.

ಕಥೆ ಹೀಗಿದೆ:
ಎಮಿಲಿ ಎಂಬ ವೃದ್ಧಳ ಸಾವಿನೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ನಂತರ ಆಕೆ ಬದುಕಿದ್ದಾಗಿನ, ಅವಳ ಬದುಕನ್ನು ಕುರಿತ ನಿರೂಪಣೆ. ಎಮಿಲಿಯ ಬದುಕನ್ನು ಸುತ್ತಲ ಜನ ಹೇಗೆ ಗಂಭೀರವಾಗಿ ಗಮನಿಸುತ್ತಿದ್ದರು ಎಂಬುದನ್ನು ತೋರಲು ಪ್ರಥಮ ಪುರುಷದಲ್ಲೇ ನಿರೂಪಣೆಯಾಗಿದೆ. ಬದಲಾಗುತ್ತಿರುವ ತಲೆಮಾರಿನಲ್ಲಿ ಹಿಂದಿನ/ಪರಂಪರೆಯ ಏಕೈಕ ಕೊಂಡಿಯಾಗಿ ಎಮಿಲಿ ಇರುತ್ತಾಳೆ. ಯಾವ ಸಾಮಾಜಿಕ ಬದಲಾವಣೆಗಳಿಗೂ ತನ್ನನ್ನು ತಾನು ತೆರೆದುಕೊಳ್ಳದ ಎಮಿಲಿ, ತನ್ನ ಹಳೆಯ ಜೀವನವನ್ನೇ ನಂಬಿರುತ್ತಾಳೆ. ಅವಳಿಗೆ ಸಾಕಷ್ಟು ಸಾಮಾಜಿಕ ರೀತಿ-ನೀತಿಗಳನ್ನು ಕಲಿಸುತ್ತಿದ್ದ, ಬಹಳ ಕಟ್ಟುನಿಟ್ಟಿನ ತಂದೆ ತೀರಿಹೋದಾಗ ಅದನ್ನು ಆಕೆಗೆ ನಂಬಲು ಸಾಧ್ಯವಾಗುವುದೇ ಇಲ್ಲ. ಅವಳ ಮಾನಸಿಕ ಅಸ್ವಸ್ಥತೆ ಅಂದಿನಿಂದ ಪ್ರಾರಂಭವಾಗುತ್ತದೆ.
ಕಪ್ಪು ಮಹಿಳೆಯಾಗಿರುವ ಆಕೆ, ಪರದೆ ಹಾಕದ ಹೊರತು ಮನೆಯ ಹೊರಗಡೆ ಬರಲು ನಿಷೇಧ ಹೇರಲಾಗಿರುತ್ತದೆ. ಆದ್ದರಿಂದ ಅವಳು ಮನೆಯ ಹೊರಗಡೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿರುತ್ತಾಳೆ. ತನ್ನ ಪಾಲಿನ ತೆರಿಗೆಯನ್ನೂ ಕಟ್ಟುವುದಿಲ್ಲ. ಕೇಳಿದರೆ ತೆರಿಗೆಯನ್ನು ಮನ್ನಾ ಮಾಡಲಾಗಿದೆ ಎಂದು ಕಾಗದ ತೋರುತ್ತಾಳೆ. ಆ ಕಾಗದ ದಶಕಗಳ ಹಿಂದಿನದು. ಅವಳ ತಂದೆಯ ಕಳೇಬರವನ್ನು ತೆಗೆದುಕೊಂಡು ಹೋಗಲು ಬಿಡುವುದೂ ಇಲ್ಲ. ಆತನ ಸಾವಿನ ದಿನ ಎಂದಿನಂತೆ ಸಾಧಾರಣವಾಗಿ ಓಡಾಡಿಕೊಂಡು ಇರುತ್ತಾಳೆ. ಸುತ್ತಲ ಜನ ಹೇಗೋ ಮಾಡಿ, ಹೆಣವನ್ನು ಹೊತ್ತೊಯ್ಯುತ್ತಾರೆ. ಆದರೆ ಎಮಿಲಿ ಪ್ರಕಾರ ಅವಳ ತಂದೆ ಬದುಕಿದ್ದು ಇನ್ನೂ ತನ್ನ ಜೊತೆಗೇ ಇರುತ್ತಾನೆ. ಒಂದು ಹನಿ ಕಣ್ಣೀರ ಮೂಲಕವೂ ಆಕೆ ತನ್ನ ಸಂತಾಪವನ್ನು ಸೂಚಿಸಲಾರಳು ಎಂಬ ಮಾತು ಆಕೆಯ ಮನಸ್ಥಿತಿಯನ್ನು ಅರಿವಾಗಿಸುತ್ತದೆ.
ಅವಳು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಸಮಾಜ ಒಪ್ಪದ ಕಾರಣ ತಂದೆ ಅದಕ್ಕೂ ನಿಷೇಧ ಹಾಕಿರುತ್ತಾನೆ. ಆದರೆ ಆತನ ಸಾವಿನ ನಂತರ ತನ್ನ ಪ್ರಿಯತಮನನ್ನು ಮನೆಗೆ ಕರೆತಂದು ಇರಗೊಡಿಸುತ್ತಾಳೆ. ಆಗ ತನ್ನ ಸಮೂಹದವರು “ಹೋಗಲಿ ಪಾಪ, ಒಂಟಿ ಜೀವಿ” ಎಂದು ಸಂತಾಪಗೈದಿರುತ್ತಾರೆ. ಒಂದಷ್ಟು ದಿನಗಳ ನಂತರ ಆಕೆ ಆತನಿಗಾಗಿ ಕೆಲವು ಉಡುಪುಗಳನ್ನು ತೆಗೆದೊಯ್ಯುತ್ತಾಳೆ, ಆಗ ತನ್ನ ಸುತ್ತ ಮುತ್ತಲ ಜನ ಆಕೆಗೆ ಮದುವೆಯಾಗಿರಬೇಕು ಎಂದು ಭಾವಿಸುತ್ತಾರೆ. ಅವಳ ಮನೆಯಲ್ಲಿ ಒಬ್ಬ ಕಪ್ಪು ಹುಡುಗ ಕೆಲಸಕ್ಕೆ ಇರುತ್ತಾನೆ. ಎಮಿಲಿಯ ದೊಡ್ಡ ಮನೆಯಿಂದ ಒಳಗೂ-ಹೊರಗೂ ಓಡಾಡುವವ ಅವನೊಬ್ಬನೇ. ಯಾರೊಟ್ಟಿಗೂ ಮಾತನಾಡದ ಆ ಹುಡುಗ ತನ್ನ ಕೆಲಸವನ್ನು ತಾನು ಮಾಡಿಕೊಂಡಿರುತ್ತಾನೆ. ಇವನ ಇರವಿಕೆಯೂ ಸಾಂಕೇತಿಕವಾಗಿ ಮೂಡಿಬಂದಿದೆ. ಕೊನೆಗೊಮ್ಮೆ ಅಂಗಡಿಗೆ ಬಂದ ಎಮಿಲಿ ವಿಷವನ್ನು ಕೊಂಡೊಯ್ಯುತ್ತಾಳೆ. ಜನರು, ಅವಳೇ ಸಾಯುತ್ತಾಳೇನೋ ಎಂದು ಕುತೂಹಲವಾಗಿ ಗಮನಿಸುತ್ತಿರುತ್ತಾರೆ. ಫ಼ಲ್ಕನರ್ ಪ್ರತಿವಿಷಯವನ್ನೂ ತನ್ನ ಸುತ್ತಮುತ್ತಲ ಜನರ ಗಮನಿಕೆಯಿಂದ ವ್ಯಕ್ತಪಡಿಸಿರುವುದು ಸಾಮಾಜಿಕ ಹೊರೆಯನ್ನು ಬಿಂಬಿಸುವ ವಿಡಂಬನೆಯಾಗಿದೆ.
ಒಂದಷ್ಟು ದಿನಗಳ ನಂತರ ಆಕೆಯ ಪ್ರಿಯತಮ ಕಾಣುವುದಿಲ್ಲ. ಅವಳ ಹುಚ್ಚುತನಕ್ಕೆ ಆತ ಮನೆಬಿಟ್ಟು ಓಡಿಹೋದ ಎಂದು ಸಮಾಜ ನಂಬುತ್ತದೆ. ಈ ಪ್ರಕರಣದ ನಂತರ ಎಮಿಲಿ ಮನೆಯಿಂದ ಹೊರಕಾಣಿಸುವುದು ಸಂಪೂರ್ಣವಾಗಿ ಬಂದಾಗುತ್ತದೆ. ಅವಳ ಮನೆಯಿಂದ ನಾರುವ ವಾಸನೆ ರಸ್ತೆವರೆವಿಗೂ ಹರಡಿ ಜನರು ನಗರ ಪಾಲಿಕೆಗೆ ದೂರುನೀಡುತ್ತಾರೆ. ಕೆಲವರು ಅವಳ ಮನೆ ಬಳಿ ಬಂದು ನಿಂಬೆ ರಸ ಸಿಂಪಡಿಸಿ ಹೋಗುತ್ತಾರೆ. ದೊಡ್ಡ ಮನೆಯ ಕತ್ತಲು, ಧೂಳು, ಕೊಳೆತು ನಾರುವ ವಾಸನೆಗಳ ನಡುವೆ ನಿಶ್ಶಬ್ದವಾಗಿ ಜೀವನ ಸಾಗಿಸುತ್ತಿರುತ್ತಾಳೆ ಎಮಿಲಿ. ಹೀಗೆಯೇ ವರ್ಷಗಳು ಕಳೆದನಂತರ ಎಮಿಲಿ ಸತ್ತಿದ್ದಾಳೆ ಎಂದು ಆ ಮನೆಕೆಲಸದ ಹುಡುಗನ ಮೂಲಕ ತಿಳಿಯುತ್ತದೆ. ಹೆಚ್ಚು ವಿಚಾರಿಸುವಷ್ಟರಲ್ಲಿ ಆ ಹುಡುಗ ಜನರ ನಡುವೆ ಕಣ್ಮರೆಯಾಗುತ್ತಾನೆ. ಇಡೀ ಊರಜನವೇ ಬಂದು ಎಮಿಲಿಯ ಅಂತಿಮ ಸಂಸ್ಕಾರ ಜರುಗಿಸುತ್ತದೆ.
ಇಲ್ಲಿಯವರೆಗೂ ಒಂದು ಹಂತದಲ್ಲಿ ನಡೆಯುತ್ತಿದ್ದ ಕಥೆಗೆ ಫ಼ಲ್ಕನರ್ ಇನ್ನೂ ಭಯಾನಕ, ಮಾರ್ಮಿಕ ಅಂತ್ಯವನ್ನು ಕೊಡಬಯಸಿದ್ದು ಏಕೆಂದು ವಿಮರ್ಶಕರಲ್ಲಿ ಸಾಕಷ್ಟು ಚರ್ಚೆಯಾಗಿದೆ. ಎಮಿಲಿಯ ಅಂತಿಮ ಸಂಸ್ಕಾರದ ಬಳಿಕ, ನಗರದ ಜನ ಆಕೆಯ ಮುಚ್ಚಿದ ಮನೆಯ ಒಳಗೆ ಏನಿರಬಹುದು ಎಂಬ ಕುತೂಹಲಕ್ಕೆ ಒಳನುಗ್ಗುತ್ತಾರೆ. ವಾಸನೆ, ಕೊಳಕು, ಧೂಳಿನ ನಡುವೆ ಅವರಿಗೆ ಕಾಣುವುದು ಒಂದು ಬೀಗಜಡಿದ ಕೊಠಡಿ. ತೆರೆದು ಸುತ್ತಲೂ ನೋಡಿದಾಗ ಅವರಿಗೆ ಕಾಣುವುದು, ವರ್ಷಗಳ ಹಿಂದೆ ಕಣ್ಮರೆಯಾದ ಎಮಿಲಿಯ ಪ್ರಿಯಕರನ ಕಳೇಬರ. ಅದರ ಪಕ್ಕದ ದಿಂಬಿನ ಮೇಲೆ ಎಮಿಲಿಯ ಕಪ್ಪು-ಬಿಳುಪಾದ ಕೂದಲು. ಈ ಮಾತಿನೊಂದಿಗೆ ಕಥೆ ಮುಗಿಯುತ್ತದೆ.
ಸಾವಿಗೆ, ಬದಲಾವಣೆಗೆ ಹೆದರಿ ಎಮಿಲಿ ತನ್ನ ಪ್ರೀತಿಪಾತ್ರನಾದವನು ತನ್ನಿಂದ ಎಂದೂ ದೂರವಾಗಬಾರದು ಎಂದು ತಾನೇ ಕೊಲೆಮಾಡಿ ಶಾಶ್ವತವಾಗಿ ಅವನ (ಮೃತ) ದೇಹವನ್ನು ತನ್ನ ಮಡಿಲಲ್ಲಿರಿಸಿಕೊಂಡಿರುತ್ತಾಳೆ. ಅವಳ ಒಂಟಿತನ, ಭಯ, ಪ್ರಿಯಕರನನ್ನು ಕಳೆದುಕೊಳ್ಳುವ ಆತಂಕ ಎಲ್ಲವೂ ತೀವ್ರವಾಗಿ ನೆಕ್ರೊಫಿಲಿಯ (ಸತ್ತ ಹೆಣವನ್ನು ಪ್ರೀತಿಸುವುದು) ಎಂಬ ಮಾನಸಿಕ ಖಾಯಿಲೆಗೂ ತುತ್ತಾಗುತ್ತಾಳೆ. ಒಬ್ಬ ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಅವರನ್ನು ಯಾವ ಹಂತಕ್ಕೆ ತೆಗೆದೊಯ್ಯಬಹುದು ಎಂಬ ಒಂದು ಸೈಕಲಾಜಿಕಲ್ ಅಧ್ಯಯನ ಈ ಕಥೆಯಾಗಿದೆ. ಯಾವುದೇ ರೀತಿಯ ಬದಲಾವಣೆಗೆ, ಬದುಕಿನ ವಾಸ್ತವಗಳಿಗೆ ಮನಸ್ಸು ಹೊಂದಿಕೊಂಡು ಹೋಗದೆ ಇದ್ದಲ್ಲಿ ವ್ಯಕ್ತಿ ಜೀವಂತ ಶವವಾಗಿಬಿಡುತ್ತಾನೆ ಎಂಬ ಮನಃಶಾಸ್ತ್ರವನ್ನು ಈ ಕಥೆ ಪರಿಣಾಮಕಾರಿಯಾಗಿ ತೋರಿಸಿಕೊಡುತ್ತದೆ. ಬದುಕು, ಮನುಷ್ಯ, ಮನಸ್ಸು ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳು, ವಿಚಾರಗಳನ್ನು ಒಂದು ಪುಟ್ಟ, ಸರಳ ಕಥೆಯು ಕನ್ನಡಿಯಾಗಿಸಬಲ್ಲದು ಎಂಬ ತಿಳಿವೇ ಸಾಹಿತ್ಯಾಧ್ಯಯನಕ್ಕೆ ಪುಷ್ಟಿಕೊಡುತ್ತದೆ ಅಲ್ಲವೆ!

‍ಲೇಖಕರು G

March 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. Anonymous

  Long back..I saw a similar tamil movie..Pratap Potan was the hero….he kept the dead body of his mother..etc.

  ಪ್ರತಿಕ್ರಿಯೆ
 2. Badarinath Palavalli

  ಮರಣವನ್ನು ತಾವು ನೋಡಿದ ರೀತಿ ಮಾರ್ಮಿಕವಾಗಿದೆ.
  ಎಮಿಲಿ ಸಾವಿನಾನಂತರದ ಕಥನಕ್ಕಾಗಿ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: