ಸಂಪು ಕಾಲಂ : ಒಬ್ಬ ಸಾಫ್ಟ್ವೇರ್ ಹುಡುಗಿ, ಮಕ್ಕಳಾಗಲಿಲ್ಲ ಎಂದು ಕಟ್ಟೆ ಸುತ್ತುತ್ತಿದ್ದಳು!

ಬ್ರಾಹ್ಮಣನ ಬೆಕ್ಕು ಮತ್ತು ವೈಚಾರಿಕತೆ

ಒಬ್ಬ ಬ್ರಾಹ್ಮಣ ಬೆಕ್ಕು ಸಾಕಿದ್ದನಂತೆ. ಆತ ತನ್ನ ತಂದೆಯ ಶ್ರಾದ್ಧ ಮಾಡುವ ಸಮಯದಲ್ಲಿ, ಆ ಬೆಕ್ಕನ್ನು ಒಂದು ಕಿಟಕಿ ಕಂಬಿಗೆ ಕಟ್ಟಿ ಹಾಕಿ ಮುಂದಿನ ಕಾರ್ಯಗಳನ್ನು ಮಾಡುತ್ತಿದ್ದನಂತೆ. ಇದೇ ಪ್ರಕಾರ ಪ್ರತಿ ವರ್ಷವೂ ಚಾಲ್ತಿಯಲ್ಲಿ. ಕೊನೆಗೊಮ್ಮೆ ಆ ಬ್ರಾಹ್ಮಣ ಸತ್ತ. ಬೆಕ್ಕು ಮನೆ ಬಿಟ್ಟು ಹೊರಟು ಹೋಯಿತು. ಇನ್ನು ಆ ಬ್ರಾಹ್ಮಣನ ಮಕ್ಕಳು ಆತನ ಶ್ರಾದ್ಧ ಮಾಡಬೇಕು. ತನ್ನ ತಂದೆಯು ನೆರವೆರಿಸುತ್ತಿದ್ದ ಎಲ್ಲಾ ಕಾರ್ಯಗಳನ್ನು ಸೂಕ್ಮವಾಗಿ ಗಮನಿಸಿದ್ದ ಜಾಣ ಮಗ, ಹೋಗಿ ಒಂದು ಬೆಕ್ಕು ಮಾರುಕಟ್ಟೆಯಿಂದ ತಂದು ಅದನ್ನು ಕಿಟಕಿಗೆ ಕಟ್ಟಿ ಹಾಕಿ ಕಾರ್ಯ ಮುಂದುವರೆಸಿದ!

ಇದು ಸತ್ಯ ಘಟನೆಯೋ ಅಥವಾ ಒಂದು ಘಟನೆಯ ಅತಿಶಯೋಕ್ತಿಯೋ ತಿಳಿಯೆ. ಆದರೆ, ಇಷ್ಟಂತೂ ನಿಜ; ನಮ್ಮಲ್ಲಿ ಸಾಕಷ್ಟು ಮಂದಿ ಹೀಗೆಯೇ! ಕೆಲವೊಂದು ಆಚಾರ, ಪದ್ಧತಿಗಳನ್ನು ‘ಏಕೆ’, ‘ಹೇಗೆ’ ಏನೂ ಪ್ರಶ್ನಿಸದೆ ತಮ್ಮ ಹಿರಿಯರು ಆಚರಿಸಿದ್ದನ್ನು ತಾವೂ ತದಾತ್ತು ಮಾಡುತ್ತಾ ಮುಂದುವರೆಯುತ್ತಾರೆ. ಆ ಬ್ರಾಹ್ಮಣ ಬೆಕ್ಕು ತನ್ನ ಕಾರ್ಯಕ್ಕೆ ಅಡ್ಡಿ ಮಾಡಬಹುದು ಎಂದು ಅದನ್ನು ಕಟ್ಟಿ ಹಾಕಿದ. ಆತ ಸತ್ತ. ಆತ ಯಾಕೆ ಹಾಗೆ ಮಾಡುತ್ತಿದ್ದಾನೆ ಎಂದು ಒಮ್ಮೆಯೂ ಯೋಚಿಸದ ಮನೆಯವರು, ಹಾಗೆ ಮಾಡಬೇಕೇನೋ, ಅದು ಆಚಾರಗಳಲ್ಲೊಂದು ಭಾಗವೇನೋ ಎಂದು ತಾವೂ ಮುಂದುವರೆಸಿದರು. ಇಲ್ಲಿ ಗಮನಿಸಬೇಕಾದದ್ದು, ಪ್ರಶ್ನಾ ಮನೋಭಾವನೆಯ ಕೊರತೆ.

ನನ್ನ ಸೋದರ ಬಾಂಧವ್ಯದ (ಅಂದರೆ ಮೆಚ್ಚುಗೆಯ ಇಂಗ್ಲಿಷ್ ಪದವಾದ ‘ಕಸಿನ್’) ಒಬ್ಬಾತ, ತಾನು ಒಮ್ಮೆ ಇಂಜಿನಿಯರಿಂಗ್ ಓದುತ್ತಿದ್ದಾಗ ಪರೀಕ್ಷೆಯ ದಿನ. ಅದು ಮೊದಲನೇ ಪರೀಕ್ಷೆ. ಓದಿಯೋ ಓದದೆಯೋ ಅಂತೂ ಪರೀಕ್ಷೆ ಬರೆಯಲು ಎಲ್ಲಾ ಸಿದ್ಧನಾಗಿ ಹೊರಟ. ತನ್ನ ಅದೃಷ್ಟವೋ ಎಂಬಂತೆ ಪತ್ರಿಕೆ ತುಂಬಾ ಸುಲಭವಾಗಿತ್ತು. ಅದಕ್ಕೆ ಆತ ಸಂತುಷ್ಟನಾಗಿ, ಹೇಳಿದ್ದೇನು ಗೊತ್ತೇ? “ಇದು ನನ್ನ ಲಕ್ಕಿ ಶರ್ಟ್, ನಾನಿನ್ನೂ ಎಲ್ಲಾ ಪರೀಕ್ಷೆಗಳಿಗೂ ಇದನ್ನೇ ಹಾಕಿಕೊಂಡು ಹೋಗುತ್ತೇನೆ!”. ಅದರಲ್ಲಿ ಇನ್ನೂ ಶರತ್ತುಗಳೆಂದರೆ, ಅದನ್ನು ಯತಾಸ್ಥಿತಿಯಲ್ಲಿ (ಅಂದರೆ ಒಗೆಯದೆ, ಇಸ್ತ್ರೀ ಮಾಡದೆ) ಹಾಕಿಕೊಳ್ಳಬೇಕಂತೆ (ಒಮ್ಮೆ ಪಕ್ಕದ ಸೀಟಿನ ಮಂದಿ ನನ್ನ ಗಮನಕ್ಕೆ ಬಂದರು!). “ಅಲ್ಲಪ್ಪಾ, ಓದಿದ್ದು ನೀನು, ಬರೆದದ್ದು ನೀನು ಇದರಲ್ಲಿ ನಿನ್ನ ಅಂಗಿ ಮಾಡಿದ್ದೇನು?” ಎಂದು ಕೇಳಿದಾಗ, ಆತ ಸಾರಾ ಸಗಟಾಗಿ, “ಹೋಗೆ, ನಿನಗೆ ಗೊತ್ತಿಲ್ಲ, ಅದೃಷ್ಟ ಯಾವಾಗ ಹೇಗೆ ಬರುತ್ತದೆ ಎಂದು ಹೇಳಕ್ಕೆ ಬರಲ್ಲ” ಅಂದೇ ಬಿಟ್ಟ! ಇನ್ನು ಹೆಚ್ಚು ಮಾತಿಗೆ ಆಸ್ಪದವಿಲ್ಲ. ಈ ಕಥೆಯನ್ನು ನನ್ನಮ್ಮನಿಗೆ ಹೇಳಿದಾಗ, ಆಕೆ ಮತ್ತೊಂದು ನಡೆದ ಘಟನೆ ಹೇಳಿದಳು. ಆಕೆಯ ಅಕ್ಕನ ಊರು ಆಂಧ್ರದ ಒಳಗೆಲ್ಲೂ ಒಂದು ಹಳ್ಳಿ. ಅಲ್ಲಿ ಚೆಂದದೊಂದು ಮನೆ. ಊರೆಂದ ಮೇಲೆ ಗೊತ್ತಲ್ಲ, ತೋಟ, ಭಾವಿ, ಕೈತೋಟ ಇತ್ಯಾದಿಯ ಮುದ ಮನೆಯ ಆವರಣದಲ್ಲೇ. ಅಡುಗೆಮನೆಯ ಹಿತ್ತಲಲ್ಲೇ ಭಾವಿಯಿದ್ದು, ಬೇಕಾದಾಗ ಸರಾಗವಾಗಿ ಅದರಿಂದ ನೀರು ತುಂಬಿ ಉಪಯೋಗಿಸುವುದು ವಾಡಿಕೆ. ಯಥಾವತ್ತಾಗಿ ನಡೆಯುತ್ತಿದ್ದ ಜೀವನದಲ್ಲಿ ವಾಸ್ತು ಎಂಬ ಮಾಯೆ ತಲೆದೋರಿತು. ಯಾರೋ ಬಂದು “ಇಲ್ಲಿ ನಿಮ್ಮ ಭಾವಿಯಿರುವುದು ಸರಿಯಲ್ಲ, ನೀವು ಕಷ್ಟಕೋಟಲೆಗಳಿಗೆ ಸಿಕ್ಕುವಿರಿ, ತತ್ತಕ್ಷಣ ಇದನ್ನು ಮುಚ್ಚಿ ಹಾಕಿ” ಎಂದು ಉಚಿತ ಸಲಹೆ ಕೊಟ್ಟು ಹೊರಟೇ ಹೋದ! ಮುಂದಾದ ಪರಿಣಾಮ, ಎಡವಿದರೆ ಸಿಗುವ ಭಾವಿ ಮುಚ್ಚಿ, ದೂರದ ಯಾವುದೋ ನಲ್ಲಿಯಲ್ಲಿ ಬಂದೂ ಬರದಂತೆ ಇರುವ ನೀರು ಹೊತ್ತು ತರುವುದು. ಬಹುಷಃ ಆ ಭಾವಿಯಿಂದಾಗಬಹುದಾದಂತಹ ‘ಕಷ್ಟಕೋಟಲೆ’ ಇದೇ ಇರಬಹುದಾ ಎಂಬ ಆಲೋಚನೆ!

ಈ ರೀತಿ ನಾವು ಭಯದಿಂದಲೋ, ಆಸೆಯಿಂದಲೋ ನಮ್ಮ ವೈಚಾರಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಅಯ್ಯೋ ಪಾಪವೇ ಎಂದು ತನ್ನ ಪಾಡಿಗೆ ತಾನಿರುವ ಆ ಭಾವಿಗಾಗಲೀ, ಆ ಶರ್ಟಿಗಾಗಲೀ ನಾವು ಜೀವನದಲ್ಲಿ ಇಷ್ಟೊಂದು ಮಹತ್ವ ಕೊಡುತ್ತೇವೆ ಎಂದು ಅವಕ್ಕೆ ಗೊತ್ತಾದರೆ ಅದರ ಪ್ರತಿಕ್ರಿಯೆ ಹೇಗಿರಬಹುದಪ್ಪಾ ಎಂದು ಸಾಕಷ್ಟು ಬಾರಿ ಯೋಚಿಸಿದ್ದುಂಟು. ನಮ್ಮಲ್ಲಿ, ತಾಂತ್ರಿಕತೆ, ಅದರ ಪರಿಣಾಮವಾದ ಯಾಂತ್ರಿಕತೆ ಹೆಚ್ಚಾಗುತ್ತಾ ನಾವು, ಮತ್ತಷ್ಟು ನಂಬಿಕೆ, ಮೂಢ ಆಚಾರಗಳಿಗೆ ಶರಣಾಗುತ್ತಿದ್ದೇವೆ. ಎಲ್ಲಿ ನೋಡಿದರೂ ಹೋಮ, ಶಾಂತಿಗಳ ಬೋರ್ಡುಗಳು ಹಿಂದೆಗಿಂತಲೂ ಹೆಚ್ಚಾಗಿವೆ ಎಂಬುದು ಕೆಲ ಹಿರಿಯರ ಅನುಭವ. ಇನ್ನು ಟಿವಿ ಹಾಕಿ ನೋಡಿದರೆ, ಅದರಲ್ಲೂ ಅದೇ! “ನೀವು ಈ ಅದೃಷ್ಟ ಹರಳನ್ನು ಧರಿಸಿ ನೋಡಿ ಇನ್ನು ಒಂದು ತಿಂಗಳೊಳಗೆ ನಿಮಗೆ ಶುಭಾವಾಗದಿದ್ದಲ್ಲಿ, ನಿಮ್ಮ ಹಣ ವಾಪಸ್” ಎಂಬ ಮಾತು ಕೇಳಿ ಸುಸ್ತಾದೆ. ಅದಕ್ಕೆ ಸಾಕ್ಷಿಯೆಂಬಂತೆ ಯಾರೋ ತುಂಬಾ ಕಷ್ಟಗಳಲ್ಲಿ ಸಿಕ್ಕಿ ನಲುಗುವ ಚಿತ್ರ, ಹರಳು ಧರಿಸಿದ ನಂತರ ಜೀವನವನ್ನೇ ಮೆಟ್ಟಿ ನಿಂತಂತಾ ಗೆಲುವಿನ ನಗು, ಸಂಭ್ರಮ. ಇದು ಇವರು ತೋರಿಸುವ ಬಿಫೋರ್-ಆಫ್ಟರ್ ಚಿತ್ರಗಳು. ವ್ಯಾವಹಾರಿಕತೆ ಎಂಬುದು ನಮ್ಮ ಪೂರ್ವಿಕರು ನಂಬಿದ ಭಕ್ತಿ, ಮಾಯೆಗಳನ್ನೂ ಬಿಡದೆ ಅದನ್ನೂ ಒಂದು ಉದ್ಯಮವನ್ನಾಗಿಸಿರುವುದು ಒಂದು ಹಂತವಾದರೆ, ಇದನ್ನು ನಂಬುವ ಜನ ಮತ್ತೊಂದು!

ಮೂಡ ನಂಬಿಕೆಗಳ ಸುಳಿಗಳಲ್ಲಿ ಸಿಲುಕಿ ಅದರ ಭಾರವನ್ನು ಹೊತ್ತು, ಭಯ ಆತಂಕಗಳಲ್ಲಿ ಜೀವನ ಸಾಗಿಸುತ್ತಿರುವವರು ಇಂದು ಹೆಚ್ಚಾಗುತ್ತಿದ್ದಾರೆ ಎಂಬುದು ಎಷ್ಟು ಸತ್ಯವೋ, ಬೆಕ್ಕು ಅಡ್ಡ ಬಂದಾಗ ಖಂಡಿತವಾಗಿ ತಕ್ಷಣವೇ ಕೆಲಸಕ್ಕೆ ಹೊರಡುವುದು, ಗ್ರಹಣದ ದಿನ ಹೊರಗಡೆ ನಿಂತು ತಿನ್ನುವುದು ಹೀಗೆಲ್ಲಾ ಚೇಷ್ಟೆ ಮಾಡಿದ ನಮ್ಮಂತಹ ಕೆಲವರಿಗೆ ಏನೂ ಆಗಿಲ್ಲ ಎಂಬುದೂ ಅಷ್ಟೇ ಸತ್ಯ. ಇದಕ್ಕೆ ಕಾರಣಗಳು ಹಲವಿರಬಹುದು; ಹಿರಿಯರ ಬಗೆಗಿನ ಅಪಾರ ಪ್ರೇಮ, ನಂಬಿಕೆ, ಇಂತಹ ಕೆಲವು ನಂಬಿಕೆಗಳ ಗಡಿ ದಾಟಿದರೆ ಏನಾಗುತ್ತದೋ ಎಂಬ ಭಯ ಆತಂಕ, ಸುಮ್ನೆ ಯಾಕೆ ರಿಸ್ಕು, ಮಾಡಿಬಿಡೋಣ, ನಿಜವಾದಲ್ಲಿ ಉಪಯೋಗವಾಗುತ್ತದೆ, ಇಲ್ಲದಿದ್ದರೆ ನಷ್ಟವಿಲ್ಲ ಅನ್ನುವ ಜಾಣ್ಮೆ , ಹೀಗೆ. ಆದರೆ, ನಮ್ಮ ನೈತಿಕ ಶಿಕ್ಷಣದ ಪಾಲು ಇಲ್ಲಿ ಮುಖ್ಯವಾಗುತ್ತದಲ್ಲವೇ! ಹಾಗಿದ್ದಲ್ಲಿ ನಾವು ಕಲಿತದ್ದು ಏನು? ಹೇಗೆ ಇಂಗ್ಲಿಷ್ ಮಾತನಾಡಿ, ವ್ಯಾವಹಾರಿಕ ತರ್ಕದಿಂದ ಒಂದು ಸಮಸ್ಯೆಯನ್ನು ಬಗೆಹರಿಸಿ, ಬೇರೆಯವರ ಕೆಲಸ ಸುಲಭಿಸಿ, ತಿಂಗಳ ಕೊನೆಗೆ ಜೇಬು ತುಂಬಿಸಿ, ಭಾನುವಾರ ಸಿನೆಮಾ ನೋಡುವುದಕ್ಕಾಗಿ ನಾವು ಸುಶಿಕ್ಷಿತರಾದದ್ದೇ?

ನಮ್ಮೆಲ್ಲರಿಗೂ ಗೊತ್ತಿರುವ ಹಾಗೂ ಗಮನಿಸಬೇಕಾದ ಅಂಶವೆಂದರೆ, ‘ಇತ್ತೀಚಿಗೆ’ ಎಂಬ ಪದಕ್ಕೆ ನಾನು ಮತ್ತೆ ಮತ್ತೆ ಒಟ್ಟು ಕೊಡುತ್ತಿದ್ದೇನೆ. ಇದರ ಜೊತೆಗೆ ಮತ್ತೊಂದು ಸೇರಿಸಬೇಕಾದ್ದು ಎಂದರೆ, ನಮ್ಮ ಮೇಲ್ವರ್ಗದ ಸುಶಿಕ್ಷಿತರಿಂದಲೇ ಇದು ಇನ್ನೂ ಹೆಚ್ಚುತ್ತಿದೆ ಎಂಬ ನಿಜಾಂಶ. ಇದು ಹಾವೂ ಸಾಯಬೇಕು, ಕೋಲೂ ಮುರೀಬಾರದು ಎಂಬಂತಹ ಜಾಣ್ಮೆಯಿಂದ ಬೆಳೆಯುತ್ತಿರುವ ಹೆಡೆಗಳು. “ಅದೇನೋ ಪೂಜೆ ಮಾಡಿದರೆ ನನ್ನ ಕೆಲಸ ಗಟ್ಟಿಯಂತೆ, ಅದಕ್ಕೆ ಮಾಡುತ್ತಿದ್ದೇನೆ” ಎಂಬ ಮಾತಿನಲ್ಲಿ ನಾವು ಕಾಣುತ್ತಿರುವುದು ಜಾಗತಿಕ ಮಟ್ಟದ ಆತಂಕವಾಗಿರುವ ಇಂದಿನ ಕೆಲವು ಬೇಸಿಕ್ ಸಮಸ್ಯೆಗಳ ಕೊಡುಗೆ. ಇಲ್ಲಿ ಆತನಿಗೆ ಮುಖ್ಯವಾಗುವುದು ತನ್ನ ಕೆಲಸ ಗಟ್ಟಿಯಾಗುವುದು, ಅದಕ್ಕಾಗಿ ಹೇಗೋ ಏನೋ ಮಾಡಿದರೂ ಸಾಕು “ಡೋಂಟ್ ಕೇರ್” ಎಂಬ ಮನೋಭಾವ. ‘ಅರೆ, ಇದು ಯಾತಕ್ಕಾಗಿ? ಒಂದು ಪೂಜೆಗೂ, ಅಮೇರಿಕಾ ದೇಶದವನು ನನಗೆ ಕೊಟ್ಟ ಈ ಕೆಲಸಕ್ಕೂ ಏನು ಸಂಬಂಧ?’ ಎಂದು ಒಂದು ಕ್ಷಣ ಯೋಚಿಸದೆ, ಕಣ್ಣು ಮುಚ್ಚಿಕೊಂಡು ಹೇಳಿದ್ದು ಮಾಡುವುದು.

ಮತ್ತೊಂದು ಮುಖ್ಯ ಅಂಶ ನಾನಿಲ್ಲಿ ಹೇಳಲು ಬಯಸುತ್ತೇನೆ. ಮೇಲೆ ಹೇಳಿದ ವಿಚಾರ ಏನಿದೆ, ಅದು ಮಾನಸಿಕ ದೃಷ್ಟಿಕೋನದಿಂದ ಖಂಡಿತ ಸರಿ! ಮನುಷ್ಯ, ತನ್ನ ಅಸಹಾಯಕತೆಯಲ್ಲಿ, ಭಯದಲ್ಲಿ ಯಾವುದೋ ಒಂದು ಶಕ್ತಿಯನ್ನು ನಂಬಿ, ಅದಕ್ಕಾಗಿ ಏನಾದರೂ ಮಾಡುವುದು ಆತನಿಗೆ ಮಾನಸಿಕವಾಗಿ ಒಂದು ಧೈರ್ಯವನ್ನು ಕೊಡುತ್ತದೆ. ಆತನ ನಂಬಿಕೆ ಒಂದು ನೆಮ್ಮದಿಯನ್ನು ಕಾಯ್ದಿರಿಸುತ್ತದೆ. ಆದರೆ, ಇಲ್ಲಿ ನಾವು ನಂಬಿಕೆಗೂ ಮೂಢನಂಬಿಕೆಗೂ ಒಂದು ಗೆರೆ ಎಳೆಯಬೇಕಾಗಿದೆ. ದೇವರಲ್ಲಿ ನಂಬಿಕೆಯು ನಿನ್ನಲ್ಲಿ ಧೈರ್ಯವನ್ನು ಬಿತ್ತುತ್ತದೆ ಎಂದರೆ, ಖಂಡಿತ ನಂಬಬಹುದು. ಆದರೆ, ಮೇಲೆ ಕೊಟ್ಟ ಉದಾಹರಣೆಯನ್ನೇ ಗಮನಿಸಿದರೆ, ಆ ಒಂದು ವಿರಾಟ್ ಶಕ್ತಿಗೂ, ಮಾರುಕಟ್ಟೆಯಲ್ಲಿ ದೊರಕುವ ಒಂದು ಹರಳಿಗೂ ಸಂಬಂಧ ಕಟ್ಟಿ, ದೈವೀಕ ವ್ಯಾಪಾರ ನಡೆಸುತ್ತಾರಲ್ಲ ಅದನ್ನು ನಂಬಿದರೆ ಆಗುವ ಲಾಭ ಆ ವ್ಯಾಪಾರಿಗೆ ಹೊರತು ನಮಗಲ್ಲ.

ಇದಕ್ಕೆಲ್ಲ ಪರಿಹಾರವೆಂದರೆ, ನಮ್ಮಲ್ಲಿ ವೈಚಾರಿಕ ಪ್ರಜ್ಞೆ ಜಾಗೃತಗೊಳಿಸುವುದು. ಇದು ಹೇಗೆ ಸಾಧ್ಯ ಎಂದರೆ, ಮಕ್ಕಳು “ಅಮ್ಮಾ ಅದೇನು?” ಎಂದು ಪ್ರಶ್ನೆ ಕೇಳಿದರೆ, “ಶ್! ಸುಮ್ಮನಿರು, ಹಾಗೆಲ್ಲ ಕೇಳಬಾರದು!” ಎಂದು ನಾವು ಬಾಯಿ ಮುಚ್ಚಿಸುತ್ತೀವಲ್ಲಾ, ಹಾಗೆ ಮಾಡದೆ ಇದ್ದಾಗ. ವೈಚಾರಿಕತೆ ಬೆಳೆಯುವುದು ಪ್ರಶ್ನಾ ಮನೋಭಾವದಿಂದ ಮಾತ್ರ ಸಾಧ್ಯ. ಕೆಲವೊಮ್ಮೆ (ಹಲವೊಮ್ಮೆ) ಇದು ಉದ್ಧಟತನವಾಗುವುದು, ಅತಿರೇಕವಾಗುವುದು, ಅಹಂಕಾರ ಎಂಬ ಪಟ್ಟ ಬರುವುದು. ಆದರೆ, ಕೊನೆಗೆ ಭೌದ್ಧಿಕ ಬೆಳವಣಿಗೆಗೆ ಬುನಾದಿಯಾಗುವುದು. ಇಷ್ಟಕ್ಕೂ ನನಗೆ ಈ ವಿಚಾರ ಬರೆಯಬೇಕು ಎನಿಸಿದ್ದು ಯಾಕೆ ಅಂದ್ರೆ, ನನಗೆ ಗೊತ್ತಿರುವ ಒಬ್ಬ ಸಾಫ್ಟ್ವೇರ್ ಹುಡುಗಿ, ತನಗೆ ಮಕ್ಕಳಾಗಲಿಲ್ಲ ಎಂದು ಕಟ್ಟೆ ಸುತ್ತುತ್ತಿದ್ದಳು!

 

‍ಲೇಖಕರು G

November 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

31 ಪ್ರತಿಕ್ರಿಯೆಗಳು

 1. Badarinath Palavalli

  ಮೂಢ ನಂಬಿಕೆಗಳ ಬಗೆಗೆ ಮತ್ತು ಕಂದಾಚಾರಗಲ ಅನುಪಯಕ್ತತೆಯ ಬಗೆಗೆ ಉತ್ತಮ ಲೇಖನ.

  ಪ್ರತಿಕ್ರಿಯೆ
 2. Pramod

  ಯಾಕೆ ಎನ್ನುವ ಪ್ರಶ್ನೆ ಹಾಕುವ ಹಾಗಿಲ್ಲ. “ಅದು ಹಾಗೇನೆ” ಅನ್ನುವ ಉತ್ತರ.

  ಲೇಖನ ನೂರು ಬಾರಿ ಓದಿದರೂ ಜನರು ಅಷ್ಟು ಬೇಗ ತಿದ್ದಿಕೊಳ್ಳುವುದು ಕಷ್ಟ ಸಾಧ್ಯ. 🙁

  ಪ್ರತಿಕ್ರಿಯೆ
 3. Radhika

  Why do people assume IT people are bestowed with scientific temper? They (we) are very much human and tend to follow the society. If our eminent scientists look for raahukaala, guLikaala (not that I support it!) to launch satellites what’s wrong if an IT employee goes around araLi kaTTE. For that matter, araLi mara exhales good amount of oxygen and helps in improving general health of any person leave alone an overtly exhausted IT employee . It’s a fact that most IT employees are having issues to have children and no wonder that lady wanted to try just about any option that would help her have a child. Let’s be sensitive to problems people are undergoing than laugh at it.

  ಪ್ರತಿಕ್ರಿಯೆ
  • samyuktha

   Radhika, thanks for the comment. And good that you raised this concern. No one is laughing at any sensitive issues. It is not that I am attaching the techies. I myself work for the software company. It is a generalized statement that the educated class are tending to behave in superstitious way and these are the recent developments due to various global problems that we are facing.

   I have also mentioned that the ‘faith’ or the ‘belief’ gives people moral support or psychological satisfaction which is good. However, I feel that there should be a border lined between the belief and the blind believes, the second one of which are a hinder to our intellectual growth. We need to get more rational is what all my point is. I am sorry if my article didn’t convey this point clearly!

   ಪ್ರತಿಕ್ರಿಯೆ
 4. Raghunath

  Lekhana bahaLa chennagide. Vishaya gambheeravadaru , sahajavaagi ullekhisalaagide. Nambike haagu “mooDa” nambike gu ondu saNNa daarada yeLeya vyathyaasavaShte yendu nanna bhaavane. Nambike yennuvudu manushyana bennelabu. Adu yavude vicharavaadru sariye. MooDa nambike yennuvudu , nambikegaLa paramaavadhiyannu meeri huttikoLLouva , prathi manushyana beLavaNigeya haagu aatha /aaake rooDisikonDa guNagaLa mele avalambithavaagiruthadde.
  IvugaLalli sari athava thappu tharka thappaguthade. Sandharbhakke anuGuNavaagi avu noDugara kaNNIge , bhaavakke gocharisuthave.

  ಪ್ರತಿಕ್ರಿಯೆ
 5. Shankarappa N. S

  ಸಂಯುಕ್ತಾ ಮೇಡಂ ಅವರೇ ,

  ಈಗಾಗಲೇ ಬಹುತೇಕ ಚಿಂತಕರು ಭಾರತೀಯ ಸಂಪ್ರದಾಯಗಳನ್ನು ಮುಡನಂಬಿಕೆಗಳು ಎಂದು ವಾದಿಸುತ್ತಾರೆ. ಇಂತಹ ಸಾಮಾನ್ಯ ವಾದವನ್ನೇ ನೀವು ಇಲ್ಲಿ ಪುನರ್ ಉತ್ಪಾದಿಸುತ್ತಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಇದರಿಂದ ಯಾವುದೇ ಪ್ರಯೋಜನ ಆಗುವುದರ ಬದಲು ಭಾರತೀಯ ಸಮಾಜದ ಮೇಲೆ ಅಪಾಯಗಳೇ ಹೆಚ್ಚು. ಇಂತಹ ಒಳನೋಟವನ್ನು ಎಸ್. ಏನ್. ಬಾಲಗಂಗಾಧರ ಅವರು ತಿಳಿಸುವುದರ ಜೊತೆಗೆ ಭಾರತದಲ್ಲಿ ಇರುವ ಸಂಪ್ರದಾಯಗಳನ್ನು ಯಾವ ರೀತಿ ನೋಡಿರೆ ಸರಿಯಾಗಿ ಅರ್ಥವಾಗುತ್ತವೆ ಎಂಬುದನ್ನು ತಿಳಿಸುತ್ತಾರೆ. ಹಾಗಾಗಿ ಸಂಪ್ರದಯಗಳ ಕುರಿತ ವಿಟ್ಗೆನ್ ಸ್ಟೀನ್ ಅವರು ಫ್ರೇಜರ್ ಅವರ ‘ಗೋಲ್ಡನ್ ಬೌ ಕುರಿತ ಟೀಕೆ’ ಯನ್ನು ಮತ್ತು ಎಸ್. ಏನ್. ಬಾಲಗಂಗಾಧರ ಅವರ ಕೆಲವು ಲೇಖನಗಳನ್ನು ಓದಿ ನಂತರ ಭಾರತೀಯ ಸಂಪ್ರದಾಯಗಳ ಬಗ್ಗೆ ಬರೆದರೆ ಉತ್ತಮ ಎಂದು ನನ್ನ ಭಾವನೆ.

  ಬಾಲಗಂಗಾಧರ ಅವರ ಲೇಖನಗಳು:
  1. http://xyz4000.wordpress.com/2011/04/02/to-follow-our-forefathers-the-nature-of-tradition-%E2%80%93s-n-balagangadhara/
  2. http://www.academia.edu/1587154/The_Dark_Hour_of_Secularism_Hindu_Fundamentalism_and_Colonial_Liberalism_in_India (ವಿಥ್ ಜೇಕಬ್)
  3. http://xyz4000.wordpress.com/2011/02/28/india-and-her-traditions-a-reply-to-jeffrey-kripal-%E2%80%93-s-n-balagangadhara/

  ಇಲ್ಲಿ ಇನ್ನೊಂದು ವಿಷಯವನ್ನು ತಿಳಿದುಕೊಂಡರೆ ಉತ್ತಮ ಎನಿಸುತ್ತದೆ: ಬದಲಾವಣೆ, ತರ್ಕ ಮತ್ತು ವಿವೇಚನೆಯುಕ್ತ ಚರ್ಚೆಯು ಭಾರತೀಯ ಸಂಪ್ರದಾಯಗಳ ಭಾಗ. ಆ ಸ್ವತಂತ್ರದಿಂದಲೇ ಸಂಪ್ರದಾಯಗಳ ಬಗ್ಗೆ ನೀವು ಹೀಗೆ ಬರೆಯಲು ಸಾಧ್ಯವಾಗಿದೆ ಎಂಬುದು ನನ್ನ ಭಾವನೆ.

  ಒಂದು ಕೋರಿಕೆ ಸಂಪ್ರದಯಳಿಗೆ ವೈಚಾರಿಕ ಕಾರಣಗಳನ್ನು ಹುಡುಕುವುದನ್ನು ಬಿಡುವುದು. ಏಕೆಂದರೆ, ಯಾವುದೇ ಸಂಪ್ರದಯಕಳಿಗೆ ವೈಚಾರಿಕ ಕಾರಣಗಳು ಇರುವುದಿಲ್ಲ.

  ನಿಮ್ಮ ಪ್ರತಿಕ್ರಿಯೆಗಾಗಿ ಕಾಯುವವ…

  ಶಂಕರಪ್ಪ
  ಸಿ. ಎಸ್. ಎಲ್. ಸಿ.
  ಕುವೆಂಪು ವಿಶ್ವವಿದ್ಯಾಲಯ.

  ಪ್ರತಿಕ್ರಿಯೆ
  • samyuktha

   ಶಂಕರಪ್ಪನವರೆ, ಮೊದಲನೇ ಬಾರಿ ನಿಮ್ಮ ಪ್ರತಿಕ್ರಿಯೆ ನೋಡುತ್ತಿದ್ದೇನೆ. ಸ್ವಾಗತ.
   ಎಸ್ ಎನ್ ಬಾಲಗಂಗಾಧರ್ ಅವರ ಲೇಖನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಬಾಲಗಂಗಾಧರರು ಅತ್ಯಂತ ಉನ್ನತ ಮಟ್ಟದ ಲೇಖನಗಳನ್ನು ಬರೆದಿದ್ದಾರೆ, ಇದನ್ನು ಬರೆಯಲು ಸಾಕಷ್ಟು ಅಧ್ಯಯನ ಸಂಶೋಧನೆಗಳನ್ನು ಮಾಡಿದ್ದಾರೆ ಎಂಬುದು ಇಲ್ಲಿ ಗೋಚರವಾಗುತ್ತದೆ. ಅವರ ಬ್ಲಾಗಿನ “ಟು ಫಾಲೋ ಅವರ ಫೋರ್ ಫಾದರ್ಸ್” ಎಂಬ ಲೇಖನ ವಿಚಾರ ಪೂರ್ಣವಾಗಿದೆ. ಇಲ್ಲಿ ಒಂದು ಅಂಶವನ್ನು ಗಮನಿಸಿ, ಅವರು ‘ಟ್ರೆಡಿಶನ್’ ಎಂದು ಉಲ್ಲೇಖಿಸುವುದು ನಮ್ಮ ಪುರಾಣಗಳು, ವೇದಗಳು, ಪತಂಜಲಿ, ಅಧ್ವೈತ ಇತ್ಯಾದಿ ಮಹತ್ತರ ಬೋಧನೆಗಳ ಬಗೆಗೆ. ಇವು ನಮ್ಮ ಜಗತ್ತಿನಲ್ಲೇ ಅತ್ಯಂತ ಉತ್ಕೃಷ್ಟ ವಿಚಾರಗಳು ಎಂಬುದರಲ್ಲಿ ಎರಡು ಮಾತಿಲ್ಲ. ನಾನು ಖಂಡಿತ ಅವುಗಳ ಬಗ್ಗೆ ಟೀಕಿಸುತ್ತಿಲ್ಲ. ನೀವೊಮ್ಮೆ ವೇದಾಧ್ಯಾಯೀ ಸುಧಾಕರ ಶರ್ಮ ಅವರ ಮಾತುಗಳನ್ನು ಕೇಳಿದರೆ ತಿಳಿಯುತ್ತದೆ, ನಮ್ಮಲ್ಲಿ ವೇದಗಳು, ಪುರಾಣಗಳನ್ನು ಎಷ್ಟು ತಪ್ಪಾಗಿ ತಿಳಿದಿದ್ದೇವೆ ಮತ್ತು ಆಚರಿಸುತ್ತಿದ್ದೇವೆ ಎಂದು. ಅದಿರಲಿ. ಇನ್ನು ನನ್ನ ಲೇಖನದಲ್ಲಿ ನಾನು ಕೆಲವು ಕುರುಡು ಮೂಢ ನಂಬಿಕೆಗಳನ್ನು ಪ್ರಶ್ನಿಸುತ್ತಾ ಬರೆದಿದ್ದೇನೆಯೇ ಹೊರತು, ನಮ್ಮ ಹಿಂದೂ ಪರಂಪರೆ ಅಥವಾ ಸಂಸ್ಕೃತಿಯನ್ನು ಅವಹೇಳನ ಮಾಡಿ ಅಲ್ಲ. ನಮ್ಮ ವೇದ ಪುರಾಣಗಳನ್ನು ನಾನು ಹೆಚ್ಚಿಗೆ ಇನ್ನೂ ಓದಿ ತಿಳಿಯದವಳಾದರೂ, ಕೆಲ ಗುರು ಹಿರಿಯರಿಂದ ತಿಳಿದಿರುವ ಪ್ರಕಾರ ನಮ್ಮ ಯಾವ ವೇದ ಪುರಾಣಗಳಲ್ಲೂ , ನಾವು ಬೆಕ್ಕು ಅಡ್ಡ ಬಂದಲ್ಲಿ ಹೋದ ಕೆಲಸವಾಗದು, ಕುಂಕುಮ ಚೆಲ್ಲಿದರೆ ಕೇಡು, ಅಶ್ವತ್ಥ ಕಟ್ಟೆ ಸುತ್ತಿದರೆ ಮಕ್ಕಳಾಗುವುದು, ಕುಜದೋಷಕ್ಕಾಗಿ ಹರಕೆ ಹೊತ್ತು ಉರುಳು ಸೇವೆ ಮಾಡುವುದು, ಇತ್ಯಾದಿ ‘ಸಂಪ್ರದಾಯ’ (ಇವುಗಳನ್ನು ನೀವು ಸಂಪ್ರದಾಯ ಎಂದು ಕರೆದಲ್ಲಿ) ಗಳನ್ನು ಖಂಡಿತ ನಮೂದಿಸಿಲ್ಲ ಎಂಬುದು ನನ್ನ ಅಂಬೋಣ. ಚರ್ಚೆಗೆ ಈ ವೇದಿಕೆ ಮುಕ್ತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

   ಸಂಯುಕ್ತ

   ಪ್ರತಿಕ್ರಿಯೆ
 6. Raghav

  ಉತ್ತಮ ಅಂಶಗಳನ್ನು ಪ್ರತಿಬಿಂಬಿಸಿದ್ದಿರಿ ಧನ್ಯವಾದಗಳು

  ಪ್ರತಿಕ್ರಿಯೆ
 7. puneetha

  ಮೇಲೆ ಪ್ರತಿಕ್ರಿಯಿಸಿರುವ ರಾಧಿಕಾ ಮತ್ತು ಶಂಕರಪ್ಪ ಎನ್ ಎಸ್ ಅವರ ಅಭಿಪ್ರಾಯಗಳನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ.
  ಇಲ್ಲಿ ಲೇಖಕಿ ”ಮೂಢನಂಬಿಕೆ” ಎಂದು ಸಾರಾ ಸಗಟಾಗಿ ಗುರುತಿಸಿರುವ ”ಅರಳಿಮರ ಸುತ್ತುವುದು” ಅದೂ ಸಾಫ್ಟ್ ವೇರ್ ಹುಡುಗಿ ಎಂಬ ಅದ್ಭುತ..!!!
  ರಾಧಿಕಾ ಹೇಳಿರುವಂತೆ ಈ ಸಾಫ್ಟ್ ವೇರ್ ನವರೂ ನಮ್ಮಂತೆ ಎಲ್ಲಾ ರೀತಿಯ insecurity ಗಳನ್ನೂ , ಭಯಗಳನ್ನೂ, ಬಾಲ್ಯದಿಂದ ಬೆಳೆದು ಬಂದ ನಂಬಿಕೆಗಳನ್ನೂ ಇಟ್ಟುಕೊಂಡ ಸಾಮಾನ್ಯ ಮನುಷ್ಯರು ಹೊರತು ಮೇಲಿನಿಂದ ಇಳಿದು ಬಂದವರಲ್ಲ…
  ಯಾವ ಮತ್ತು ಯಾರ ನಂಬಿಕೆಗಳು ಸುತ್ತ ಮುತ್ತಲಿನ ಜನಕ್ಕೆ ಅಥವಾ ಪರಿಸರಕ್ಕೆ ಅಪಾಯವಾಗಲೀ, ಹಾನಿಯಾಗಲೀ ಮಾಡುವುದಿಲ್ಲವೋ ಅಂತಹ ನಂಬಿಕೆಗಳನ್ನು ಇಟ್ಟುಕೊಂಡು ಅವರು ಬದುಕಲಿ ಬಿಡಿ. ನಿಮಗೆ ಇಷ್ಟವಿಲ್ಲದಿದ್ದಲ್ಲಿ ನಂಬಬೇಡಿ. ಅಂತಹ ನಿರಪಾಯಕಾರಿ ಆಚರಣೆಯನ್ನು ಆಚರಿಸಲು ಅವರು ನಿರ್ಧರಿಸಿದುದರ ಹಿಂದಿರುವ ಆತಂಕಗಳನ್ನು, ಸಾಮಾಜಿಕ ಒತ್ತಡಗಳನ್ನು ಗಮನಿಸುವಷ್ಟೂ ಸೆನ್ಸಿಟಿವಿಟಿ ಇಲ್ಲದೆ ಗೇಲಿ ಮಾಡುವುದು ಬಹುಶಃ ಅರಳಿಮರ ಸುತ್ತುವುದಕ್ಕಿಂತ ಅಪಾಯಕಾರಿ..ಅತೀ ವಿಚಾರವಾದಿ ಅಂತ ಅನ್ನಿಸಿಕೊಂಡವರೂ ಮನೆಯಲ್ಲೋಬ್ಬರಿಗೆ ಮಾರಣಾಂತಿಕ ಕಾಯಿಲೆ ಅಂತ ಗೊತ್ತಾದಾಗ ಈ ಥರದ ಎಲ್ಲಾ ಪ್ರಯತ್ನಗಳನ್ನು ಮಾಡಿ ಚಡಪಡಿಸಿದ್ದನ್ನು ನಾನು ನೋಡಿದ್ದೇನೆ. ನನಗೆ ಅದು ತಮಾಷೆ ಅನ್ನಿಸಿರಲಿಲ್ಲ. ಅರಳಿ ಮರ ಸುತ್ತುವುದರಿಂದ ಅರಳಿ ಮರಕ್ಕೆ ಯಾವ ತೊಂದರೆಯೂ ಇಲ್ಲ ಬಿಡಿ. ಪ್ರಯೋಜನ ಆದರೆ ಅದನ್ನು ಸುತ್ತುವ ಮನುಷ್ಯರಿಗೆ..ವೈಜ್ಞಾನಿಕವಾಗಿ..

  ಪ್ರತಿಕ್ರಿಯೆ
 8. Sunaath

  (೧)ಸಂಪ್ರದಾಯವನ್ನು ತುಳಿಯುವುದೇ ಪ್ರಗತಿಯಲ್ಲ.
  ————-ಮಾಸ್ತಿ ವೆಂಕಟೇಶ ಅಯ್ಯಂಗಾರರು
  (೨)ನೀಲ್ ಬೋರ್ ಎನ್ನುವ ನೋಬೆಲ್ ಬಹುಮಾನ ವಿಜೇತ ಭೌತಶಾಸ್ತ್ರಜ್ಞರು ತಮ್ಮ ಮನೆಯ ಹೊರಬಾಗಿಲಿಗೆ ಕುದುರೆ ನಾಳವನ್ನು ಬಡೆದಿದ್ದರು. ‘ಇದನ್ನು ನೀವು ನಂಬುತ್ತೀರಾ?’ ಎನ್ನುವ ಪ್ರಶ್ನೆಗೆ ಅವರ ಉತ್ತರ: ‘ನಾನು ನಂಬಲಿ,ಬಿಡಲಿ; ಕುದುರೆ ನಾಳವನ್ನು ಬಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ, ಆದುದರಿಂದ ಬಡೆದಿದ್ದೇನೆ!’
  (೩)ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯನೊಬ್ಬನಿಗೆ ಅಸೌಖ್ಯವಾದಾಗ, ನಗರದ ದೇವಿಯೊಬ್ಬಳಿಗೆ ಸಕ್ಕರೆ ಊದಿಸುವುದಾಗಿ ಹರಕೆ ಹೊತ್ತಿದ್ದರು. ಇದೂ ಸಹ ಮೂಢ ನಂಬಿಕೆಯೇ ಅಲ್ಲವೆ?
  (೪)ಎಲ್ಲ ಪರಿಹಾರಗಳೂ ವಿಫಲವಾದಾಗ ಮೂಢನಂಬಿಕೆಗೇ ಶರಣಾಗಬೇಕಾಗುತ್ತದೆ. ಸಂಕಟ ಬಂದಾಗ ವೆಂಕಟರಮಣ!

  ಪ್ರತಿಕ್ರಿಯೆ
 9. ravikiran

  @Shankarappa N. S:
  ನಿಮ್ಮ ವಿಚಾರವನ್ನು(ಮೇಲಿನ ಕಾಮೆಂಟ್ ಆಧರಿಸಿ) ನಾನು ಒಪ್ಪುತ್ತೇನೆ.
  ಆದರೆ
  ಈ ಹೇಳಿಕೆಯನ್ನು ಹೊರತುಪಡಿಸಿ:
  “ಒಂದು ಕೋರಿಕೆ ಸಂಪ್ರದಯಳಿಗೆ ವೈಚಾರಿಕ ಕಾರಣಗಳನ್ನು ಹುಡುಕುವುದನ್ನು ಬಿಡುವುದು. ಏಕೆಂದರೆ, ಯಾವುದೇ ಸಂಪ್ರದಯಕಳಿಗೆ ವೈಚಾರಿಕ ಕಾರಣಗಳು ಇರುವುದಿಲ್ಲ.”
  ಸಂಪ್ರದಾಯಕ್ಕೆ ಕಾರಣ ಇಲ್ಲ ಎನ್ನುವುದಕ್ಕಿಂತ ನಮಗೆ ಕಾರಣ ಗೊತ್ತಿಲ್ಲ ಎನ್ನುವುದು ಬಹುತೇಕ ವಿಚಾರಗಳಲ್ಲಿ ಸತ್ಯವಾಗಿರುತ್ತದೆ.

  ಲೇಖಕರು ಹೇಳುವಂತೆ ಅರ್ಥ ತಿಳಿದು ಆಚರಿಸಿದರೆ ಸೂಕ್ತ ಎನಿಸುತ್ತದೆ.

  ಮಕ್ಕಳಾಗಿಲ್ಲ ಎಂದು ಕಟ್ಟೆ ಸುತ್ತುವುದು!! Funny !! ಆದರೆ ಅವಳ ದೇಹಕ್ಕೆ ವ್ಯಾಯಾಮ ಆಗಿದ್ದಂತೂ ಸತ್ಯ!! ಅದರಲ್ಲೂ ಸಾಫ್ಟ್ವೇರ್ ಜಗತ್ತಿನ ಜನ ತಂಪನೆಯ ವಾತಾವರಣಕ್ಕೆ ತೆರೆದುಕೊಂಡರೆ ಅವರ ಆರೋಗ್ಯಕ್ಕೆ ತಾನೇ ಒಳ್ಳೆಯದು!! ಹಿರಿಯರು ದೇಹಕ್ಕೆ ವ್ಯಾಯಾಮ ಅಗಲಿ ಎಂದು ದೇವಾಲಯ/ಕಟ್ಟೆ ಗಳನ್ನೂ ಸುತ್ತುವ ಪದ್ಧತಿ ಭೋಧಿಸಿದರ? (ಗೊತ್ತಿಲ್ಲ ತರ್ಕಿಸುತ್ತಿದ್ದೇನೆ..) 🙂

  ಪ್ರತಿಕ್ರಿಯೆ
 10. samyuktha

  ನನ್ನ ಮಾತುಗಳನ್ನು ವಿರೋಧಿಸುತ್ತಿರುವ ಸ್ನೇಹಿತರಲ್ಲಿ ಒಂದು ಬಿನ್ನಹ! ನಾನು ಖಂಡಿತ ಯಾರನ್ನೂ ಗೇಲಿ ಮಾಡುತ್ತಿಲ್ಲ…..ಮತ್ತು ‘ಸಾಫ್ಟ್ವೇರ್’ ನನ್ನ ಟಾರ್ಗೆಟ್ ಅಲ್ಲ…. ಸುಶಿಕ್ಷಿತ ವರ್ಗವೂ ಸಹ ಅನುಪಯುಕ್ತ ಮೂಢ ಆಚಾರಗಳನ್ನು ಬೆಳೆಸುತ್ತಿರುವುದನ್ನು ಹಾಗೂ ಇದಕ್ಕೆ ಅನೇಕ ಜಾಗತಿಕ ಕಾರಣಗಳ ಇರುವಿಕೆಯನ್ನೂ ಬೆಳಕಿಗೆ ತಂದಿದ್ದೇನೆ ಅಷ್ಟೇ! ಇದು, ‘ಗೇಲಿಯಾಗಿ’, ‘ಅಪಹಾಸ್ಯ’ವಾಗಿ ಕೆಲವರಿಗೆ ಪ್ರಿಕ್ ಆದ್ದಲ್ಲಿ ದಯವಿಟ್ಟು ಕ್ಷಮಿಸಿ!

  ಪ್ರತಿಕ್ರಿಯೆ
 11. sudheendra

  ಯಾವಾಗ ನಮಲ್ಲಿ ರಿಸರ್ಚ್ ಮನೋಭಾವನೆ ಇರೋದಿಲ್ಲವೋ, ಅವಾಗ ನಾವು ಅದನ್ನು ಮೂಡನಂಬಿಕೆ ಎಂದು ಕರೆದು ಬಿಡುತ್ತೇವೆ. ಎಲ್ಲದನ್ನು ರಿಸರ್ಚ್ ಮಾಡಿ ಫಸ್ಟ್, ಆಮೇಲೆ ಅದನ್ನು ಮೂಡನಂಬಿಕೆಯೋ ಅಥವಾ ವಿಗ್ಯನವೋ ಅಂದು ಅರಿತು ಜೀವನ ಸಾಗಿಸಿ

  ಪ್ರತಿಕ್ರಿಯೆ
 12. Nagesh.KM

  Today’s society is more self centered, confused, insecure hence people r behind all these.

  ಪ್ರತಿಕ್ರಿಯೆ
 13. K.V. Tirumalesh

  ಪ್ರಿಯ ಸಂಯುಕ್ತ
  ನಿಮ್ಮ ಲೇಖನ ಸೊಗಸಾಗಿದೆ. ಇದರಲ್ಲಿ ಆಕ್ಷೇಪಾರ್ಹವಾದ್ದು ಏನೂ ಕಾಣಿಸುವುದಿಲ್ಲ. ಪಾಪ, ಆ ಸಾಫ್ಟ್‍ವೇರ್ ಹುಡುಗಿ ಮಕ್ಕಳಾಗದೆ ಹತಾಶಳಾಗಿರಬಹುದು. ಅವಳು ಕಟ್ಟೆ ಸುತ್ತಲಿ, ಅದು ಅವಳಿಗೆ ಮನಸ್ಸಮಾಧಾನ ನೀಡುವುದಾದರೆ; ಮುಖ್ಯ ವಿಷಯ ಅವಳು ಮತ್ತು ಅವಳ ಗಂಡ ತಜ್ಞರನ್ನು ಹೋಗಿ ಸಲಹೆ ಕೇಳಬೇಕಾದ್ದು. ಆಯಾ ಕಾಲದ ಮಂದಿ ತಮ್ಮ ಕಾಲದ ಜ್ಞಾನಕ್ಕೆ ಅನುಸಾರ ಬಾಳ್ವೆ ಮಾಡಿದವರು. ಆದ ಕಾರಣ ಇಂದಿನ ನಾವು ನಮ್ಮ ಕಾಲದ ಜ್ಞಾನಕ್ಕೆ ಸರಿಯಾಗಿ ಬದುಕಬೇಕು. ಇಂದು ನಮಗೆ ಹಲವಾರು ಅನುಕೂಲತೆಗಳಿವೆ. ಇವುಗಳನ್ನು ಬಳಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಹಾವು ಕಡಿತಕ್ಕೆ ಸರಿಯಾದ ಚಿಕಿತ್ಸೆ ಇರಲಿಲ್ಲ. ಅದೇನೋ ತಮಗೆ ಗೊತ್ತಿದ್ದುದನ್ನು ಮಾಡುತ್ತಿದ್ದರು. ಇಂದಿನ ನಾವು ನಮಗೆ ಗೊತ್ತಿರುವುದನ್ನು ಮಾಡಬೇಕಾಗುತ್ತದೆ. ವೇದ, ಉಪನಿಷತ್ತು, ಪುರಾಣಗಳನ್ನು ಓದೋಣ; ಆದರೆ ಇಂದಿನವರಾಗಿ ಬದುಕೋಣ. ಅಲ್ಲವೇ? ನಿಮಗೆ ಅಚ್ಚರಿಯಾಗಬಹುದು: ಇಲ್ಲಿ ವೀಸಾ ಟೆಂಪ್ಲ್ ಅಂತ ಒಂದು ದೇವಾಲಯವಿದೆ! ಅಮೇರಿಕನ್ ವೀಸಾಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ದೇವರನ್ನು ಪ್ರಾರ್ಥಿಸುತ್ತಾರೆ! ಅವರದನ್ನು ಖಂಡಿತಾ ನಂಬುತ್ತಾರೆ ಎಂದಲ್ಲ; ಏನು ನಷ್ಟ ಎಂದು! ಇದು ಹಿಂದಿನಿಂದಲೂ ಇರುವಂಥ ಮನೋಭಾವ: ಏನು ನಷ್ಟ ಎನ್ನುವುದು. ಪಾಸ್ಕ್ಲಲ್ಸ್ ವೇಜರ್ ಎಂಬ ಸುಪ್ರಸಿದ್ಧ ಮಾತೇ ಇದೆ: ದೇವರನ್ನು ನಂಬಿ, ಒಂದು ವೇಳೆ ಇಲ್ಲವೆಂದಾದರೆ ನಷ್ಟವಿಲ್ಲ, ಇದ್ದಾನೆ ಎಂದಾದರೆ (ನೀವು ನಂಬದ ಪಕ್ಷ) ನಿಮಗೇ ನಷ್ಟ ಎನ್ನುವುದು ಪಾಸ್ಕಲ್‍ನ ವಾದ. ಈ ಆಚಾರ ವಿಚಾರಗಳು ಪಾಸ್ಕಲ್ಸ್‍ ವೇಜರಿನ ಇನ್ನೊಂದು ರೂಪ. ಒಬ್ಬರು ಹೇಳಿದಂತೆ, ಇಂಥ ನಂಬಿಕೆಗಳು ಜೀವವಿರೋಧಿಯಾಗಿರದ ತನಕ ಏನೂ ತೊಂದರೆಯಿಲ್ಲ. ಆದರೆ ನಮಗೆ ಕಾಣಿಸದೆ ಇರುವ ವಿ‍ಷಯವೆಂದರೆ, ಆಲದ ಮರ ಸುತ್ತುವುದಕ್ಕೆ ಈ ಹುಡುಗಿಯ ಗಂಡ ಬಂದಿದ್ದನೇ ಎನ್ನುವುದು. ಮಕ್ಕಳಾಗದೆ ಇರುವುದಕ್ಕೆ ಇಂದೂ ಹಲವು ಕಡೆ ಕೇವಲ ಹೆಣ್ಣನ್ನೇ ದೂರುವವರಿದ್ದಾರೆ. ಬೇರೆ ಹೆಣ್ಣನ್ನು ಮದುವೆಯಾಗುವವರಿದ್ದಾರೆ. ಪುರಾಣದ ದಶರಥನೇ ಮೂರು ಮದುವೆ ಮಾಡಿಕೊಂಡ. ನಾವವನನ್ನು ದೂರುವ ಅಗತ್ಯವಿಲ್ಲ. ಅದು ಆಗಿನ ನಂಬಿಕೆಯಾಗಿತ್ತು. ಇಂದಿನ ನಾವು ಹೀಗೆ ಮಾಡಬೇಕೇ ಎನ್ನುವುದು ಪ್ರಶ್ನೆ. ಉತ್ತರ ಎಲ್ಲರಿಗೂ ಗೊತ್ತಿದೆ: ಹೀಗೆ ಮಾಡಬಾರದು. ಅದಕ್ಕೆ ಏನು ಕ್ರಮ ತೆಗೆದುಕೊಳ್ಳುವುದು ಸಾಧ್ಯ? ಅಥವಾ ಇದು ಅವರವರ ನಂಬಿಕೆಗೆ ಬಿಟ್ಟ ವಿ‍ಷಯ ಎನ್ನಬೇಕೇ? ಅಲ್ಲ, ಇದರಿಂದ ಸಮಾಜಕ್ಕೆ ಹಾನಿಯಿದೆ ಎಂದುಕೊಂಡು ನಿಮ್ಮಂಥವರು ಪುಟ್ಟ ಲೇಖನವೊಂದನ್ನು ಬರೆಯುತ್ತೀರಿ. ಅದು ನಮ್ಮ ಸಂಸ್ಕೃತಿಗೆ ಅಪಾಯ ಎಂದುಕೊಂಡು ಕೂಡಲೇ ನಿಮ್ಮನ್ನು ತಿದ್ದಲು ಧಾವಿಸುತ್ತಾರೆ! ಇದು ದುರದೃಷ್ಟಕರ. ಯಾವ ಅಪಾಯವೂ ಇಲ್ಲ, ನಮ್ಮ ಸಂಸ್ಕೃತಿಯಲ್ಲಿ ನಿಮ್ಮಂಥವರು ಇಲ್ಲದಿದ್ದರೆ ಅದು ಬಡವಾಗುತ್ತದೆ.
  ಕೆ.ವಿ. ತಿರುಮಲೇಶ್

  ಪ್ರತಿಕ್ರಿಯೆ
  • samyuktha

   ನಿಮ್ಮ ಪ್ರತಿಕ್ರಿಯೆ ಕಂಡು ತುಂಬಾ ಸಂತೋಷವಾಯಿತು ತಿರುಮಲೇಶ್ ಸರ್. ಧನ್ಯವಾದಗಳು.

   ಪ್ರತಿಕ್ರಿಯೆ
 14. Shankarappa N. S.

  ಸಂಯುಕ್ತ ಮೇಡಂ ಅವರೇ,

  ನಾನು ಹೀಗೆ ಹೇಳುತ್ತೇನೆಂದು ತಪ್ಪು ತಿಳಿಯಬೇಡಿ, ಆದರೆ ಹೀಗೆ ಹೇಳದೆ ನನಗೆ ಬೇರೆ ದಾರಿ ಇಲ್ಲ ಹಾಗೂ ಒಳ್ಳೆಯದು ಎಂದು ತಿಳಿದುಕೊಂಡಿದ್ದೇನೆ. ಅದು: ಪ್ರೊ. ಬಾಲಗಂಗಾಧರ ಅವರ ಲೇಖನಗಳ ಬಗ್ಗೆ ನೀವು ಹೇಳಿದ್ದನ್ನು ಗಮನಿಸಿದರೆ, ನಿಮಗೆ ಆ ಲೇಖನಗಳಲ್ಲಿ ಇರುವ ವಾದವು ಸರಿಯಾಗಿ ಅರ್ಥವಾಗಿಲ್ಲ ಎಂಬ ಸಂಗತಿ ತಿಳಿಯುತದೆ. ಏಕೆಂದರೆ, ಅವರು ತಮ್ಮ ಲೇಖನಗಳಲ್ಲಿ ಉಲ್ಲೇಖಿಕಿಸಿದ ಉದಾಹರಣೆಗಳನ್ನೇ ಇಟ್ಟುಕೊಂಡು ಅವರು ಹೇಳಿದ್ದು ಇಷ್ಟೇ ಎಂದು ಹೇಳುತಿರುದು. ಇದರಿಂದ ಅವರ ವಾದವೇನು ಎಂಬುದು ನಿಮಗೆ ಅರ್ಥವಾಗಿಲ್ಲ ಎಂಬುದು ಸ್ಪಷ್ಟ.

  ಒಂದು ವೇಳೆ, ಎಲ್ಲ ಕ್ರಿಯೆಗಳನ್ನು ‘ಮೂಡಾಚರಣೆಗಳು’ ಎಂದು ಹೇಳುವುದಿಲ್ಲ, ಬದಲಿಗೆ ಕೆಲವನ್ನು ‘ಮೂಡಾಚರಣೆಗಳು’ ಎಂಬುದು ನಿಮ್ಮ ವಾದವಾದರೆ, ನೀವೇ ಉಲ್ಲೇಖಿಸಿದ ಘಟನೆಗಳ ಕ್ರಿಯೆಗಳಲ್ಲಿ ಇರುವ ಮೌಡ್ಯತೆಯಾದರು ಏನು ಎಂಬುದನ್ನು ತಿಳಿದುಕೊಳ್ಳುವ:

  ಬ್ರಾಹ್ಮಣ ತಂದೆಯು ಬೆಕ್ಕನ್ನು ಕಟ್ಟಿಹಾಕಿರುವುದಕ್ಕೆ ನೀವು ಕೊಡುವ ಕಾರಣವು ಎಷ್ಟು ಸಮಂಜಸವಾದುದು? ಅಂದರೆ, “ಆ ಬ್ರಾಹ್ಮಣ ಬೆಕ್ಕು ತನ್ನ ಕಾರ್ಯಕ್ಕೆ ಅಡ್ಡಿ ಮಾಡಬಹುದು ಎಂದು ಅದನ್ನು ಕಟ್ಟಿ ಹಾಕಿದ” ಎಂದು ಅಷ್ಟು ಸ್ಪಷ್ಟವಾಗಿ ಹೇಗೆ ಹೇಳಲು ಸಾಧ್ಯ? ಇದಕ್ಕೆ ಬೇರೆ ಕಾರಣಗಳನ್ನು ಕೊಡಬಹುದಲ್ಲ? ತಂದೆಯು ಮಾಡಿದ ಆಚರಣೆಯಲ್ಲಿ ಕಾಣದ ಮೌಡ್ಯತೆಯನ್ನು ಮಕ್ಕಳಲ್ಲಿ ಕಾಣಲು ಹೇಗೆ ಸಾಧ್ಯವಾಯಿತು ನಿಮಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊದಬೇಕಾಗುತದೆ. ಇದಕ್ಕೂ ಮುಖ್ಯವಾದ ವಿಷಯವೆಂದರೆ, ‘ಒಂದೇ ಆಚರಣೆಯು’ ಒಂದು ಕಾಲಘಟ್ಟದಲ್ಲಿ ಮೌಡ್ಯವಲ್ಲದ್ದು ಇನ್ನೊಂದು ಕಾಲಘಟ್ಟದಲ್ಲಿ ಮೌಡ್ಯ ಎಂಬ ನಿಮ್ಮ ವಿವರಣೆಯು ಸಮಂಜಸವಾದುದಲ್ಲ.

  ಇನ್ನೊಂದು ವಿಷವೆಂದರೆ, ನಾವು ಮಾಡುವ ಎಷ್ಟೋ ಕ್ರಿಯೆಗಳಿಗೆ ಕಾರಣಗಳೇ ಗೊತ್ತಿರುವುದಿಲ್ಲ ಮತ್ತು ಇರುವುದಿಲ್ಲ ಹಾಗೂ ಇರಬೇಕಾದ ಅವಶ್ಯಕತೆಯೂ ಇಲ್ಲ. ಅಂತಹದರಲ್ಲಿ ನಿಮ್ಮ ಕಸಿನ್ ಅವರು ಪರೀಕ್ಷೆಯಲ್ಲಿ ಆ ನಿರ್ದಿಷ್ಟವವಾದ ಅಂಗಿ ತೊಡುವ ಕ್ರಿಯೆಗೆ ಕಾರಣವನ್ನು ಕೊಡು ಎಂದು ಕೇಳುವುದು ಎಷ್ಟು ಸರಿ ಎಂಬುದು ನನಗೆ ಅರ್ಥವಾಗುದಿಲ್ಲ. ಮಾನವನ ಪ್ರತಿಯೊಂದು ಕ್ರಿಯೆಗೂ ಕಾರಣಗಳು ಇರಲೇಬೇಕು ಎಂದು ಕೇಳುವ ಪ್ರವೃತ್ತಿ ಭಾರತೀಯರಲ್ಲಿ ಯಾವಗಲಿಂದ ಪ್ರಾರಂಭವಾಯಿತು ಎಂಬುದನ್ನು ಸ್ವಲ್ಪ ಅವಲೋಕಿಸಬೇಕಾದ ಅವಶ್ಯಕತೆ ಇದೆ.

  ಇನ್ನೂ ನಿಮ್ಮ ತಾಯಿಯು ಹೇಳಿದ ಘಟನೆಯ ವಿಷಯಕ್ಕೆ ಬರೋಣ: ವಾಸ್ತುಶಿಲ್ಪಿಯ ಮಾತಿನಂತೆ ಮನೆಯ ಹತ್ತಿರವಿದ್ದ ಬಾವಿಯನ್ನು ಮುಚ್ಚಿ ದೂರದಲ್ಲಿ ಮತ್ತೊಂದು ಬಾವಿಯನ್ನು ತೆಗೆದಿರುವುದು; ಈ ಘಟನೆಯಲ್ಲಿ ಮೇಲ್ನೋಟಕ್ಕೆ ನಿಮ್ಮ ಸಂಬಂಧಿ ವಾಸ್ತುಶಿಲ್ಪಿಯ ಮಾತು ಕೇಳಿದ್ದಾರೆ ಎಂಬುದು ತಿಳಿಯುತದೆ. ಆದರೂ, ಆ ಸಂಬಂಧಿಯ ಕಾಳಜಿ ಕೇವಲ ಮನೆಯ ಮತ್ತು ತಮ್ಮವರ ಒಳಿತಿಗಾಗಿ ಮಾಡಿರುತ್ತರೆಯೇ ವಿನಃ ವಾಸ್ತವವಾಗಿ ವಾಸ್ತುಶಿಲ್ಪಿಯ ಮಾತಿಗಲ್ಲ ಎಂದು ಊಹಿಸಬಹುದು. ಏಕೆಂದರೆ, ಹಿರಿಯರ ಮತ್ತು ಗೌರವ ಇಟ್ಟುಕೊಂಡವರ ಮಾತನ್ನು ಕೇಳುವುದು ಭಾರತೀಯರ ವಾಡಿಕೆ ಎಂದು ಹೇಳಬಹುದಾದರೂ, ಇಂತಹ ಕ್ರಿಯೆಗೆ ಇಂತಹದ್ದೇ ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಕಷ್ಟವಾಗುತದೆ.

  ಹೀಗೆ ಕೆಲವು ಕ್ರಿಯೆಗಳಿಗೆ ಕಾರಣಗಳು ಇಲ್ಲ ಎಂದ ಮಾತ್ರಕ್ಕೆ ಅಂತಹವನ್ನು ಮೂಡನಂಬಿಕೆಗಳು ಎಂದು ಹಣೆಪಟ್ಟಿ ಹಾಕುವುದ ಸಮಂಜಸವಲ್ಲ. ಏಕೆಂದರೆ, ಮೂಡನಂಬಿಕೆ ಎಂಬ ಪರಿಕಲ್ಪನೆಯು ಪಶ್ಚಿಮದ ಕ್ರಿಶ್ಚಿಯನ್ ಸಂಸ್ಕೃತಿಯಲ್ಲಿ ಒಂದು ರೀತಿಯಲ್ಲಿ ಅರ್ಥವಾದರೆ, ಭಾರತೀಯ ಸಂಸ್ಕೃತಿಯಲ್ಲಿ ಇನ್ನೊಂದು ರೀತಿಯಾಗಿ ಅರ್ಥವಗುತದೆ: ೧. ಕ್ರಿಶ್ಚಿಯನ್ ರಿಲಿಜನ್ ಪ್ರಕಾರ ಮೂಡ ಆಚರಣೆಗಳು ಎಂದರೆ ಬೈಬಲ್ಲಿನಲ್ಲಿ ಉಲ್ಲೇಖಿಸದೆ ಇರುವ ಆಚರಣೆಗಳು. ಅಂದರೆ ಬೈಬಲ್ ಹೇಳಿಲ್ಲದ ಆಚರಣೆಗಳು ಮೂಡ ಆಚರಣೆಗಳಾಗುತ್ತವೆ. ೨. ಭಾರತೀಯ ಸಂಸ್ಕೃತಿಯಲ್ಲಿ ಮೂಡ ಎಂದರೆ ಅಜ್ಞಾನ. ಈ ‘ಅಜ್ಞಾನ’ ಎಂಬ ಪರಿಕಲ್ಪನೆಯು ವಿವರಣೆಗೆ, ಚರ್ಚೆಗೆ, ಸಿದ್ಧಾಂತಕ್ಕೆ ಸಂಬಂಧಿಸಿದ್ದೇ ಹೊರತು ಆಚರೆಣೆಯನ್ನು ಮಾಡುವುದಕ್ಕೆ ಅಲ್ಲ. ಸಂಬಂಧಪಟ್ಟ ಆಚರಣೆಯ ಬಗ್ಗೆ ಚರ್ಚೆ ಮಾಡಬಹುದೇ ಹೊರತು, ಅಂತಹ ಚರ್ಚೆಯಿಂದಲೇ ಆಚರಣೆಗಳನ್ನು ಮಾಡಲು ಪ್ರಾರಂಭಿಸಿದರು ಅಥವಾ ನಿಲ್ಲಿಸಿಬಿಟ್ಟರು ಎಂದು ಹೇಳಲು ಅಸಾಧ್ಯ.

  ಆದರೆ ಪಾಶ್ಚ್ಯಾತ್ಯ ಮಾದರಿಯ ಶಿಕ್ಷಣವನ್ನು ಪಡೆದ ಇಂದಿನ ಬಹುತೇಕ ಭಾರತೀಯರು ಕ್ರಿಶ್ಚಿಯನ್ನರು ಅರ್ಥೈಸಿಕೊಂಡ ‘ಮೂಡಾಚರಣೆಗಳು’ ಎಂಬ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ತಮಗೆ ಸರಿಎನಿಸದ ಆಚರನೆಗಳೇಲ್ಲವು, ‘ಮೂಡಾಚರಣೆಗಳು’ ಎಂಬ ಹಣೆಪಟ್ಟಿಯನ್ನು ನೀಡಿದರು. ಅದನ್ನೇ ನೀವು ಮಾಡುತಿರುವುದು. ಇದರಿಂದ ಭಾರತೀಯರು ಮಾಡುವ ಕೆಲವು ವಿಶಿಷ್ಟ ಆಚರಣೆಗಳ ಬಗ್ಗೆ ತಪ್ಪಾಗಿ ಅರ್ಥಿಸಿದಂತಾಗುತ್ತದೆ.

  ನಿಮ್ಮ ಪ್ರತಿಕ್ರಿಯೆಗಾಗಿ ಕಾಯುವವ…

  ಶಂಕರಪ್ಪ
  ಸಿ.ಎಸ್.ಎಲ್. ಸಿ.
  ಕುವೆಂಪು ವಿಶ್ವವಿದ್ಯಾಲಯ.

  ಪ್ರತಿಕ್ರಿಯೆ
 15. sandhya

  ಸಂಯುಕ್ತಾ,

  ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟಿ ವಿ ಜ್ಯೋತಿಷ್ಯದ ಕಾರ್ಯಕ್ರಮಗಳು, ವಾಸ್ತು ಹೆಸರಿನಲ್ಲಿ ನೂರೊಂದು ಸಲಹಾ ಕೇಂದ್ರಗಳು, ಎಲ್ಲಾ ನೋಡಿದರೆ ಹೆದರಿಕೆ ಆಗುತ್ತೆ. ನಾವು ಬೆಳೆಯುತ್ತಿದ್ದ ದಿನಗಳಲ್ಲಿ ಇವುಗಳೆಡೆಗೆ ದಿಟ್ಟತನದ ಪ್ರಶ್ನೆಗಳು ಸಾಧ್ಯವಿದ್ದವು, ಈಗ ಈ ಎಲ್ಲಾ ಆಚರಣೆಗಳಿಗೂ ಬಲವಂತವಾಗಿ ಒಂದು ವೈಜ್ಞಾನಿಕ ಹಿನ್ನಲೆ ಕೊಡುವುದು ಮತ್ತು ಅದೇ ಸರಿ ಎಂದು ವಾದಿಸುವುದು… ಈ ಮನೋಭಾವ ಹೆದರಿಕೆ ಹುಟ್ಟಿಸುತ್ತದೆ. ಒಂದು ಆರೋಗ್ಯಕರವಾದ ಚರ್ಚೆ ಸಹ ಸಾಧ್ಯವಾಗದಿರುವುದು ದುರಂತ ಅಲ್ಲವೇ? ಹೀಗೆ ಜ್ಯೋತಿಷಿಗಳ ಮೊರೆ ಹೊಕ್ಕು, ಮಾಡುತ್ತಿದ್ದ ವ್ಯಾಪಾರದಲ್ಲಿ ತನ್ನ ಬುದ್ಧಿಶಕ್ತಿ, ಶ್ರಮ ತೊಡಗಿಸುವ ಬದಲು, ಅವರ ಸಲಹೆಗಳನ್ನು ಕುರುಡಾಗಿ ಅನುಕರಿಸಿ ಇಂದು ಎಲ್ಲವನ್ನೂ ಕಳೆದುಕೊಂಡಿರುವ ನನ್ನ ಹತ್ತಿರದ ಸಂಬಂಧಿಯ ಉದಾಹರಣೆ ನನ್ನ ಕಣ್ಣೆದುರಿಗೇ ಇದೆ… ಒಳ್ಳೆ ಲೇಖನ ಸಂಯುಕ್ತಾ, ಹೀಗೆ ಬರೆಯುತ್ತಿರಿ

  ಪ್ರತಿಕ್ರಿಯೆ
   • G

    ಇಲ್ಲಿಗೆ ಈ ಲೇಖನದ ಮೇಲಿನ ಚರ್ಚೆಯನ್ನು ಮುಗಿಸುತ್ತಿದ್ದೇವೆ, ಮತ್ತೆ ಮುಂದಿನವಾರ ಅಂಕಣದಲ್ಲಿ ಮತ್ತೊಂದು ಲೇಖನ

    ಪ್ರತಿಕ್ರಿಯೆ
 16. ಅಶೋಕ ಶೆಟ್ಟರ್

  ಕೆಲವು ತಿಂಗಳುಗಳ ಹಿಂದೆ ಯಾವುದೋ ಕನ್ನಡ ಸುದ್ದಿವಾಹಿನಿಯಲ್ಲಿ ತಲೆಗೆ ಬಿಳಿಬಟ್ಟೆ ಕಟ್ಟಿಕೊಂಡು ಬಂದ ನ್ಯೂಮರಾಲಜಿಸ್ಟ್ ಎಂಬ ಖ್ಯಾತಿಯ ಕ್ಯಾರಕ್ಟರ್ ಒಂದು ಹೇಳುತ್ತಿತ್ತು:” ಯಾವ ಮನೆಯ ಆವರಣದಲ್ಲಿ ಕರಿಬೇವಿನ ಗಿಡ ಇರುತ್ತೋ ಆ ಮನೆಯ ಹೆಣ್ಣು ಮಕ್ಕಳು ದಾರಿ ತಪ್ಪುತ್ತಾರೆ, ಬೇಕಿದ್ದರೆ ದಾರಿ ತಪ್ಪಿದ ಹೆಣ್ಣು ಮಕ್ಕಳಿರುವ ಮನೆಗಳನ್ನು ಗಮನಿಸಿ, ಆ ಮನೆಯ ಆವರಣದಲ್ಲಿ ಕರಿಬೇವಿನ ಗಿಡ ಇರುತ್ತದೆ” ಅಂತ. ಇದಕ್ಕೂ ’ವೈಜ್ಞಾನಿಕ’ ವಿವರಣೆ ಕೊಡಬಲ್ಲ ಜನ ಇದ್ದಾರೆ ಇಲ್ಲಿ..!

  ಪ್ರತಿಕ್ರಿಯೆ
 17. sunil rao

  ಲೇಖನ ಓದಿಕೊಳ್ಳುತ್ತ ಬಂದೆ, ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಕ್ಕುದಾದ ಬರಹ. ಸದಾ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ವಾದ ವಿವಾದ ಹಾಗು ಅವರವರದೇ ಆದ ಅಭಿಪ್ರಾಯಗಳು ಇದ್ದೆ ಇರುತ್ತದೆ.
  ನಾನು ತತ್ವಜ್ಞಾನಿ ಯುಜಿ ಕ್ರಿಷ್ಣ ಮೂರ್ತಿ ಯವರ ಒಂದು ಪುಸ್ತಕ ಓದುತ್ತಿದ್ದಾಗ ಒಂದು ಸಾಲು ನೋಟ್ ಮಾಡಿಕೊಂಡೆ…”ಮನುಷ್ಯ ನಂಬಿಕೆಗಳನ್ನ ಮೀರಿ ಜೀವಿಸಬೇಕು, ಅಥವಾ ನಂಬಿಕೆಯನೂ ಅವನು ನಂಬದೆ ಇರಲು ನ್ಸಾಧ್ಯವಾದರೆ ಇನ್ನೂ ಒಳ್ಳೆಯದೇ”ಎಂದು
  ಇಂತಹ ವಿಚಾರಗಳು ಚರ್ಚೆಗೆ ಸೂಕ್ತ ಆದ್ರೆ ಡಿಫೆಂಡ್ ಮಾಡಿಕೊಳ್ಳಲು ಅಲ್ಲ ಬರಹ ಚನ್ನಾಗಿದೆ

  ಪ್ರತಿಕ್ರಿಯೆ
 18. Ajeet Joshi (AJ)

  ನಮಗೂ ಇಂಥಹ ಅನುಭವಗಳು ಬಹಳ ಆಗಿವೆ.. ಕೆಲವು ಸಂಗತಿಗಳು ಎಂಥವರನ್ನೂ ಸಹ ,, ಮೂಢ ನಂಬಿಕೆಗಳಿಗೆ ಒಳಪಡಿಸಿಬಿಡುತ್ತವೆ….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: